ಜಗತ್ತಿನ ಒಟ್ಟು ಬತ್ತ ಬೆಳೆಯುವ ೧೨೦ ಮಿಲಿಯ ಹೆಕ್ಟೇರ್‌ಗಳಲ್ಲಿ ಚೀನಾ ಮತ್ತು ಭಾರತ ದೇಶಗಳು ಪ್ರತಿಯೊಂದು ಮೂರನೇ ಒಂದು ಭಾಗವನ್ನು ಆಕ್ರಮಿಸಿವೆ. ವಿಶ್ವದ ಇತರ ಬತ್ತ ಬೆಳೆಯುವ ರಾಷ್ಟ್ರಗಳಲ್ಲಿ ಉಳಿದ ಮೂರನೆ ಒಂದು ಭಾಗ ಹಂಚಿಹೋಗಿದೆ. ಉತ್ಪಾದನೆಯಲ್ಲಿ ಚೀನಾಕ್ಕೆ ಪ್ರಥಮ ಸ್ಥಾನ ಲಭಿಸುತ್ತದೆ. ತನ್ನ ಸುಮಾರು ೩೦ ಮಿಲಿಯ ಹೆಕ್ಟೇರ್ ಬತ್ತ ಬೆಳೆಯುವ ಭೂಮಿಯಲ್ಲಿ ಅದು ೧೫೦ ಮಿಲಿಯ ಟನ್ನುಗಳಷ್ಟು ಬತ್ತವನ್ನು ಉತ್ಪಾದಿಸುತ್ತದೆ. ಹೆಚ್ಚು ಕಡಿಮೆ ಇಷ್ಟೆ ವಿಸ್ತಾರದ ಬತ್ತ ಬೆಳೆಯುವ ಭೂಮಿಯಲ್ಲಿ (೩೮ ಮಿಲಿಯ ಹೆಕ್ಟೇರ್) ಭಾರತವು ಉತ್ಪಾದಿಸುವ ಬತ್ತ ಕೇವಲ ೭೫ ಮಿಲಿಯ ಟನ್‌ಗಳಷ್ಟು. ಚೀನಾದ ಉತ್ಪಾದನೆ ಅರ್ಧದಷ್ಟು ಎಕರೆವಾರು ಉತ್ಪನ್ನದಲ್ಲಿ ಚೀನಾವು ಜಪಾನ್, ಕೊರಿಯಾ ದೇಶಗಳಿಗಿಂತ ಹಿಂದಿದೆ. ಜಪಾನ್, ಕೊರಿಯಾಗಳು ಎಕರೆಗೆ ೫-೬ ಟನ್ ಬತ್ತ ಉತ್ಪಾದಿಸಿದರೆ, ಚೀನಾ ಉತ್ಪಾದಿಸುವುದು ಎಕರೆಗೆ ೪ ಟನ್ ಬತ್ತ. ಭಾರತದ ಎಕರೆವಾರು ಉತ್ಪನ್ನ ಚೀನಾದ ಅರ್ಧದಷ್ಟು. ಅಂದರೆ ಎಕರೆಗೆ ಸುಮಾರು ೨ ಟನ್ ಬತ್ತ ಮಾತ್ರ. ಬತ್ತ ಬೆಳೆಯುವ ಪ್ರದೇಶಗಳ ವಿಸ್ತಾರ ಹಾಗೂ ವಿಭಿನ್ನ ಪರಿಸರಗಳನ್ನು ಪರಿಗಣಿಸುವಾಗ ಭಾರತ ಮತ್ತು ಚೀನಾದ ಪರಿಸ್ಥಿತಿಗಳು ಒಂದನ್ನೊಂದು ಹೋಲುತ್ತಿದೆ. ಈ ದೃಷ್ಟಿಯಲ್ಲಿ ಚೀನಾದ ಸಾಧನೆ ನಿಜಕ್ಕೂ ಪ್ರಶಂಸನೀಯ. ಭಾರತ ಮತ್ತು ಇತರ ಬತ್ತ ಬೆಳೆಯುವ ರಾಷ್ಟ್ರಗಳ ವಿಜ್ಞಾನಿಗಳು, ಆಡಳಿತಗಾರರು ಮತ್ತು ಆರ್ಥಿಕ ತಜ್ಞರು ಚೀನಾದ ಈ ಸಾಧನೆಗೆ ಕಾರಣವಾದ ಮುಖ್ಯ ಅಂಶಗಳೇನೆಂದು ಪತ್ತೆ ಹಚ್ಚಿ, ಅಂತಹ ಅಂಶಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ.

ಮಣ್ಣು ಮತ್ತು ಬೆಳೆಯ ನಿರ್ವಹಣಾ ಕ್ರಮಗಳಿಗೆ ಮಹತ್ವ ಕೊಟ್ಟು ಯುಕ್ತವಾದ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿ, ಅದನ್ನು ಸಾಮಾನ್ಯ ಜನರ ಉಪಯೋಗಕ್ಕೆ ಆದಷ್ಟು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆಗೆ ಬರುವಂತೆ ಮಾಡಿದುದೆ ಚೀನಾದ ಬತ್ತದ ಕೃಷಿಯ ಯಶಸ್ಸಿಗೆ ಕಾರಣವಾಗಿರುವಂತೆ ತೋರುತ್ತದೆ. ಇಲ್ಲಿ ಕೆಲವು ಮುಖ್ಯ ಅಂಶಗಳನ್ನು ಗಮನಿಸಲಾಗಿದೆ.

ಕೃಷಿ ಕ್ಷೇತ್ರದ ವಿಂಗಡಣೆ:

ಚೀನಾದಲ್ಲಿ ಎಲ್ಲಾ ಕೃಷಿಯೋಗ್ಯ ಭೂಮಿಗಳನ್ನು ನಿರ್ದಿಷ್ಟ ಆಕಾರಕ್ಕೆ ತರಲಾಗಿದೆ. ಬತ್ತದ ಜಮೀನನ್ನು ಸಮತಟ್ಟು ಮಾಡುವುದಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಹೊಲಗಳನ್ನು ಆದಷ್ಟೂ ವಿಶಾಲವಾಗಿಟ್ಟು ಹೆಚ್ಚು ಕಡಿಮೆ ಒಂದೇ ಅಳತೆಯಲ್ಲಿರುವಂತೆ ರಚಿಸಲಾಗಿರುವುದರಿಂದ ಅನುಪಯುಕ್ತ ಭೂಪ್ರದೇಶವನ್ನು ಕಡಿಮೆ ಮಾಡುವುದು ಸಾಧ್ಯವಾಗಿದೆ. ಬಿತ್ತನೆಗೆ ಸಿದ್ದತೆ, ಅಂತರ ಬೇಸಾಯ, ನೀರಾವರಿ, ಸಸ್ಯ ಸಂರಕ್ಷಣಾ ಕ್ರಮಗಳು, ಕೊಯ್ಲು ಮುಂತಾದ ಎಲ್ಲ ರೀತಿಯ ಹೊಲಗೆಲಸಗಳಿಗೆ ಅನುಕೂಲವಾಗುವಂತೆ ಭೂವಿಂಗಡಣೆಯನ್ನು ಯೋಜಿಸಲಾಗುತ್ತದೆ. ಹೊಲದಲ್ಲಿರುವ ಬೆಳೆಯ ಹಂತಗಳು ಒಂದೇ ರೀತಿಯಲ್ಲಿ ಮುಂದುವರಿಯುವುದರಿಂದ ಕೊಯ್ಲು ನಡೆಸುವಾಗ ಮತ್ತು ಕೊಯ್ಲಿನ ನಂತರದಲ್ಲಿನ ಆಗುವ ಅನೇಕ ರೀತಿಯ ನಷ್ಟಗಳನ್ನು ಕಡಿಮೆ ಮಾಡಬಹುದು.

ಮಿಶ್ರತಳಿಗಳ ಉಪಯೋಗ:

ವಿಶ್ವದ ಬೇರೆ ಕಡೆಗಳಲ್ಲಿ ಗೋವಿನ ಜೋಳ, ಜೋಳ ಇತ್ಯಾದಿ ಬೆಳೆಗಳಲ್ಲಿ ಮಾತ್ರ ಮಿಶ್ರ ತಳಿಯ ಉಪಯೋಗ ಪ್ರಚಾರದಲ್ಲಿದೆ. ಬತ್ತದಲ್ಲಿ ಮಿಶ್ರತಳಿ ಸಾಧ್ಯವಿದೆ ಎಂಬುದು ಅನೇಕ ಮಂದಿಗೆ ಇನ್ನೂ ಗೊತ್ತೇ ಇಲ್ಲ. ಭಾರತದಲ್ಲಿ ಈಗ ಪ್ರಾರಂಭಿಕ ಪ್ರಯತ್ನಗಳಷ್ಟೆ ನಡೆದಿವೆ. (ಉದಾ:- ಪ್ರಾದೇಶಿಕ ಸಂಶೋಧನಾ ಕೇಂದ್ರ, ಮಂಡ್ಯ) ಚೀನಾದಲ್ಲಿ ಮಾತ್ರ ಬಹಳ ಹಿಂದೆಯೇ ಮಿಶ್ರ ತಳಿಗಳನ್ನು ಕಂಡು ಹಿಡಿದು, ಇಷ್ಟರಲ್ಲಿ ಅದನ್ನು ಆರ್ಥಿಕ ಮಟ್ಟದಲ್ಲಿ ಬಳಕೆಗೆ ತಂದೂ ಆಗಿದೆ. ೧೯೮೦ರಲ್ಲಿದ್ದಂತೆ ಸುಮಾರು ೫ ಮಿಲಿಯ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಕರ್ನಾಟಕದ ಒಟ್ಟು ಬತ್ತ ಬೆಳೆಯುವ ಪ್ರದೇಶದ ನಾಲ್ಕು ಪಟ್ಟು ಅಥವಾ ತಮಿಳುನಾಡಿನ ಒಟ್ಟು ಬತ್ತದ ಜಮೀನಿನ ಎರಡು ಪಟ್ಟು ವಿಸ್ತಾರದ ಭೂಪ್ರದೇಶದಲ್ಲಿ ಚೀನಾವು ಮಿಶ್ರತಳಿ ಬತ್ತವನ್ನು ಬೆಳೆಸುತ್ತಿದೆ. ಸಾಂಪ್ರದಾಯಿಕ ತಳಿಗಳ ಬದಲು ಮಿಶ್ರತಳಿಗಳನ್ನು ಬೆಳಸುವುದರ ಮೂಲಕವೇ ಶೇ. ೨೦ ರಷ್ಟು ಹೆಚ್ಚುವರಿ ಉತ್ಪಾದನೆ ಸಾಧ್ಯವಾಗಿದೆ. ಸಾಮುದಾಯಿಕವಾಗಿ ಮಿಶ್ರತಳಿ ಬೀಜೋತ್ಪಾದನೆ ಕೈಗೊಳ್ಳುವಷ್ಟರ ಮಟ್ಟಿಗೆ ಆ ಉದ್ದಿಮೆ ಲಾಭದಾಯಕವಾಗಿದೆ. ಬೀಜೋತ್ಪಾದನೆಯಲ್ಲಿ ತೊಡಗಿರುವ ಸಮುದಾಯಗಳನ್ನು ಸಂಘಟಿಸಿ, ದೇಶದಾದ್ಯಂತ ವಾರ್ಷಿಕ ಬೀಜಗಳ ಬೇಡಿಕೆಯನ್ನು ಸಂಬಂಧಪಟ್ಟ ಸಾಮುದಾಯಿಕ ಮುಖಂಡನ ವಶದಲ್ಲಿ ಬಿತ್ತನೆಗೆ ಒಂದು ವರ್ಷ ಮುಂಚಿತವಾಗಿಯೆ ಸಂಗ್ರಹಿಸಿಡಲಾಗುವುದು.

ಗೊಬ್ಬರಗಳ ಬಳಕೆ:

ಸಾಮಾನ್ಯವಾಗಿ ಭಾರತದಲ್ಲಿ ಬತ್ತ ಬೆಳೆಯುವ ರೈತನಿಗೆ ಶಿಫಾರಸ್ಸು ಮಾಡಿದಷ್ಟೇ ಅಥವಾ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಚೀನಾದಲ್ಲಿ ಬಳಸಲಾಗುತ್ತಿದೆ. (೧೫೦-೬೫-೧೫೦ ಕಿ.ಗ್ರಾಂ. ಸಾ.ರಂ. ಪೊ/ಹೆಕ್ಟೇರಿಗೆ) ಪೊಟ್ಯಾಷ್ ಯಾವಾಗಲೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತದೆ. ಎಲ್ಲಾ ಬತ್ತದ ಗದ್ದೆಗಳಿಗೂ ಶಿಫಾರಸ್ಸು ಮಾಡಲಾದಷ್ಟು ರಸಗೊಬ್ಬರಗಳನ್ನು ಗೊಬ್ಬರ ಪೋಲಾಗದ ರೀತಿಯಲ್ಲಿ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಕೊಡಲಾಗುತ್ತದೆ. ಸಾವಯವ ಗೊಬ್ಬರಗಳ ಬದಲಾಗಿ ಅಲ್ಲ. ಜಪಾನ್ ಇನ್ನು ಕೆಲವು ದೇಶಗಳ ಅಭಿಪ್ರಾಯದ ಪ್ರಕಾರ ಬತ್ತಕ್ಕೆ ಸಾವಯವ ಗೊಬ್ಬರಗಳ ಅಗತ್ಯವಿಲ್ಲ. ಆದರೆ ಚೀನಾದ ಕೃಷಿ ವಿಜ್ಞಾನಿಗಳು ಈ ಮಾತನ್ನು ಒಪ್ಪುತ್ತಿಲ್ಲ. ಪ್ರತಿಯಾಗಿ ಮಣ್ಣಿನ ಗುಣಧರ್ಮವನ್ನು ಕಾಪಾಡಿಕೊಂಡು ಬರಲು ಸಾವಯವ ಗೊಬ್ಬರಗಳನ್ನು ಬಳಕೆ ತೀರಾ ಅವಶ್ಯ ಎಂದು ಪ್ರತಿಪಾದಿಸುತ್ತಾರೆ. ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಷ್ಟು ಸಾವಯವ ಗೊಬ್ಬರವನ್ನು ತಯಾರಿಸಲಾಗುವುದು ಮುಖ್ಯ. ಬೆಳೆಗೆ ಮೊದಲು, ಮುಖ್ಯ ಬೆಳೆಯ ಜೊತೆಗೆ ಅಥವಾ ಬೆಳೆಯಿಂದ ಬೆಳೆಗೆ ಇರುವ ನಡುವಣ ಕಾಲದಲ್ಲಿ ಸಾಧ್ಯವಾದ ಕಡೆಯೆಲ್ಲ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆಸಲು ಪ್ರಯತ್ನಿಸಲಾಗುವುದು. ಕಳೆ, ಕಸ, ಕಡ್ಡಿಗಳು, ಮಲ, ಮೂತ್ರ, ಗಂಜಲ ಇತ್ಯಾದಿ ಸಾವಯವ ಪದಾರ್ಥಗಳು ಯಾವ ಮೂಲದ್ದೇ ಆಗಿರಲಿ ಅವೆಲ್ಲವನ್ನೂ ಗೊಬ್ಬರದ ತಯಾರಿಕೆಯಲ್ಲಿ ಬಳಸಲಾಗುವುದು. ಚೆನ್ನಾಗಿ ಪಚನಗೊಂಡ ಗೊಬ್ಬರವನ್ನು ಹೆಕ್ಟೇರಿಗೆ ೧೫-೨೦ ಟನ್ನುಗಳ ಪ್ರಮಾಣದಲ್ಲಿ ಬತ್ತದ ಗದ್ದೆಗೆ ಸೇರಿಸಲಾಗುತ್ತದೆ. ಹೀಗೆ ಮಣ್ಣಿನ ಸತ್ವವನ್ನು ಉಳಿಸಿಕೊಳ್ಳಲು ಸೇಂದ್ರಿಯ ಚಕ್ರವನ್ನು ಬಹಳ ಪರಿಣಾಮಕಾರಿಯಾಗಿ ಚೀನಾದಲ್ಲಿ ಬಳಸಲಾಗಿದೆ.

ಸಾಂದ್ರ ಬೇಸಾಯ:

ಚೀನಾದಲ್ಲಿ ಸಾಂದ್ರ ಬೇಸಾಯ ಪದ್ಧತಿಯಲ್ಲಿ ಬೆಳೆಸಲಾಗುತ್ತಿದೆ. ಉತ್ತರ ಚೀನಾದಲ್ಲಿ ಬೇಸಿಗೆ ಬತ್ತದ ಒಂದು ಬೆಳೆಯನ್ನೂ, ಯಾಂಗ್ಸೆ ನದಿಮುಖಜ ಭೂಮಿಯಲ್ಲಿ ಬತ್ತದ ಎರಡು ಬೆಳೆಗಳನ್ನೂ ಮತ್ತು ದಕ್ಷಿಣ ಚೀನಾದಲ್ಲಿ ಮೂರು ಬೆಳೆಗಳನ್ನೂ ಬೆಳೆಯುತ್ತಾರೆ. ಗೋಧಿ ಹಾಗೂ ಇನ್ನಿತರ ಬೆಳೆಗಳನ್ನು ಚಳಿಗಾಲದಲ್ಲಿ ಪರ್ಯಾಯ ಬೆಳೆಯಾಗಿ ಬೆಳೆಸುತ್ತಾರೆ. ಜಪಾನಿಕಾ ಬತ್ತವನ್ನು ಶೀತ ಹೆಚ್ಚಿರುವ ಕಾಲದಲ್ಲೂ ಚೀನಾದ ಮಧ್ಯೆ ಹಾಗೂ ಉತ್ತರದ ಕೆಲವು ಭಾಗಗಳಲ್ಲಿ ಬೆಳೆಸಲಾಗುತ್ತಿದೆ. ಹ್ಯೂನಾನ್ ಪ್ರಾಂತ್ಯದಲ್ಲಿ ಬತ್ತ ಹಾಗೂ ಬತ್ತದ ಕೂಳೆ ಬೆಳೆಯ ಬೆಳೆ ಪರ್ಯಾಯ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಹಸಿರೆಲೆ ಗೊಬ್ಬರದ ಬೆಳೆಯ ಬೀಜವನ್ನು ಬತ್ತದ ಕೊಯ್ಲಿಗೆ ಮೊದಲಾಗಿಯೆ ಬಿತ್ತಲಾಗುವುದು ಹೀಗೆ ಚೀನಾ ದೇಶದಲ್ಲೆಲ್ಲಾ ಅಡ್ಡಾಡಿ ಬರುವಾಗ ವರ್ಷವಿಡೀ ಎಲ್ಲೂ ಖಾಲಿ ಬಿದ್ದ ಭೂಮಿಯು ಕಾಣಬರುವುದಿಲ್ಲ.

ಕಡಿಮೆ ಬಾಧೆ:

ಲವಣಬಾಧೆ ಮತ್ತು ವಿಷಬಾಧೆಯಗಳಂತಹ ರಾಸಾಯನಿಕ ಬಾಧೆಗಳು, ಅತಿ ಕಡಿಮೆ ಮತ್ತು ಅತಿ ಹೆಚ್ಚು ಉಷ್ಣಾಂಶಗಳಂತಹ ಭೌತಿಕ ಬಾಧೆಗಳು ಹಾಗೂ ಕೀಟ ರೋಗಗಳಂತಹ ಜೈವಿಕ ಬಾಧೆಗಳು ಬತ್ತ ಬೆಳೆಯುವ ಪ್ರದೇಶಗಳಲ್ಲಿ ಒಂದಿಲ್ಲೊಂದು ರೂಪದಲ್ಲಿ ಕಾಣಸಿಗುವುದು ತೀರಾ ಸಾಮಾನ್ಯ. ಆದರೆ ಈ ವಿಷಯದಲ್ಲಿ ಚೀನಾದ ಬತ್ತದ ಬೆಳೆಗಾರರು ಅದೃಷ್ಟ ಶಾಲಿಗಳು. ಅಲ್ಲಿ ಈ ರೀತಿ ಬಾಧೆಗಳು ಕಾಣಸಿಗುವುದು ಅಪರೂಪ. ಹೆಚ್ಚು ಸಾವಯಮ ಗೊಬ್ಬರಗಳನ್ನು ಬಳಸಿ ಮಣ್ಣಿನ ಗುಣಲಕ್ಷಣಗಳು ಹಾಳಾಗದಂತೆ ಕಾಪಾಡಿಕೊಂಡು ಬರುತ್ತಿರುವುದೇ ಈ ರೀತಿ ಕಡಿಮೆ ಬಾಧೆಗಳಿರುವುದಕ್ಕೆ ಮುಖ್ಯ ಕಾರಣ. ಚೀನಾದ ಭೌಗೋಳಿಕ ಸ್ಥಾನದಿಂದಾಗಿ ಅಲ್ಲಿ ಅತಿ ಉಷ್ಣತೆಯ ಸಮಸ್ಯೆ ಉದ್ಭವಿಸುವುದು ಸಾಧ್ಯವೇ ಇಲ್ಲ. ಇನ್ನು ಕಡಿಮೆ ಉಷ್ಣತೆಯು ಉತ್ತರ ಭಾಗಗಳಲ್ಲಿ ತೀವ್ರತರ ಸಮಸ್ಯೆಯಾಗಿದ್ದರೂ ಕೂಡ ಶೀತ ನಿರೋಧಕ ಜಪಾನಿಕಾ ಬತ್ತಗಳನ್ನು ಬೆಳೆಯುವ ಮೂಲಕ ತಕ್ಕ ಪರಿಹಾರ ದೊರೆತಿದೆ. ಬತ್ತ ಬೆಳೆಯುವ ರಾಷ್ಟ್ರಗಳಲ್ಲಿ ಕಾಣುವ ಎಲ್ಲಾ ರೋಗಗಳೂ ಇಲ್ಲಿದ್ದರೂ, ಹತೋಟಿಯಲ್ಲಿರುವುದರಿಂದ ನಷ್ಟ ಸಂಭವಿಸುವುದು ಕಡಿಮೆ. ಕೀಟಗಳಲ್ಲಿ ಎಲೆ ಸುರುಳಿಯ ಹಾವಳಿ ತೀವ್ರತರವಾಗಿದೆ. ತಾಂತ್ರಿಕ ಮಾಹಿತಿಯುಳ್ಳ ತಜ್ಞರು ಇರುವುದು ಮಾತ್ರವಲ್ಲದೆ ಸಾಮಾನ್ಯ ರೈತರು ಸಹಾ ಕೀಟ ಹಾವಳಿಯ ಲಕ್ಷಣಗಳು ಹಾಗೂ ಅವುಗಳ ಹತೋಟಿಯ ಕುರಿತು ತರಬೇತಿ ಪಡೆದಿರುವುದರಿಂದ ಕಾಲ ಕಾಲದಲ್ಲಿ ಬೆಳೆಗಳ ನಿರೀಕ್ಷಣೆ ನಡೆಸಿ, ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡು ಕೀಟ ಹಾವಳಿಯನ್ನು ನಿಯಂತ್ರಣದಲ್ಲಿಡಲಾಗಿದೆ. ಹೊಲದ ಬದುಗಳಲ್ಲಿ, ನೀರು ಹರಿಯುವ ಮತ್ತು ಬಸಿ ನೀರಿನ ಕಾಲುವೆಗಳಲ್ಲಿ ಬೆಳೆಯುವ ಕಳೆಗಳನ್ನು ನಾಶ ಮಾಡಿ, ದ್ವಿದಳ ಧಾನ್ಯ ತರಕಾರಿಗಳಂತಹ ಉಪಯೋಗಿ ಸಸ್ಯಗಳನ್ನು ಬೆಳೆಸುವುದರೊಂದಿಗೆ ಮುಖ್ಯ ಜಮೀನಿನಲ್ಲಿ ಕಳೆ ಕಸ ತೆಗೆದು ಸದಾ ಚೊಕ್ಕಟವಾಗಿ ಇಟ್ಟುಕೊಳ್ಳುವುದರಿಂದ ಕಳೆ ಹಾನಿಯು ಕನಿಷ್ಠ ಮಟ್ಟದಲ್ಲಿದೆ.

ಬತ್ತದ ಉತ್ಪಾದನೆ ಚೀನಾದಲ್ಲಿ ಹೆಚ್ಚಾಗಿರಲು ಇನ್ನೂ ಕೆಲವು ಕಾರಣಗಳಿವೆ. ಶೇ. ೯೦ ರಷ್ಟು ಬತ್ತದ ಪ್ರದೇಶ ನಿಶ್ಚಿತ ನೀರಾವರಿಯನ್ನು ಹೊಂದಿದೆ. ಹೀಗಾಗಿ ಮಳೆಯ ಮೇಲೆ ಅವಲಂಭಿಸಬೇಕಾಗಿಲ್ಲ. ಬೀಜದ ಶುದ್ಧತೆ ಮತ್ತು ಕ್ರಮಬದ್ಧ ಬೇಸಾಯ ಪದ್ಧತಿಗೆ ಆದ್ಯತೆ ನೀಡಾಗಿದೆ. ರೈತ ತಾನು ಕಾಲಾನುಕ್ರಮಗಳಿಂದ ಬೆಳೆಸುವ ಬೆಳೆಗಳ ವಿವಿಧ ಹೊಲಗೆಲಸಗಳನ್ನು ಪಟ್ಟಿಮಾಡಿ, ಬೇಕಾಗುವ ಬೀಜಗೊಬ್ಬರ ಇತ್ಯಾದಿ ಅವಶ್ಯಕತೆಗಳನ್ನು ಬಹಳ ಮುಂದಾಗಿಯೇ (೧೦-೧೫ ತಿಂಗಳು) ಸಂಬಂಧಪಟ್ಟವರಿಗೆ ತಿಳಿಸಿ, ಇವನ್ನು ಪೂರೈಸುವಂತೆ ಮನವಿ ಸಲ್ಲಿಸುತ್ತಾನೆ. ಆದ್ದರಿಂದ ಕಾಲಕ್ಕೆ ಸರಿಯಾಗಿ ಅವಶ್ಯಕ ವಸ್ತುಗಳು ಒದಗಿಬರುತ್ತವೆ. ಮಳೆಯ ಮೇಲೆ ಅವಲಂಬನೆ ಇಲ್ಲದ ಕಾರಣ, ಕಾಲಕಾಲದಲ್ಲಿ ಹೊಲಗೆಲಸಗಳನ್ನು ಕೈಗೊಳ್ಳಲು ಯಾವ ಅಡ್ಡಿಯೂ ಇರುವುದಿಲ್ಲ. ಹೆಚ್ಚುವರಿ ಉತ್ಪಾದನೆಯನ್ನು ಹಂಚುವ ರೀತಿಯನ್ನೂ ಕೊಯ್ಲಿಗೆ ಮೊದಲೇ ಯೋಜಿಸಿರಲಾಗುತ್ತದೆ.

ತಾಂತ್ರಿಕ ಜ್ಞಾನ ಪ್ರವಹನ:

ಕೃಷಿಯಲ್ಲಿ ಜ್ಞಾನವಿಕಾಸ ಹಾಗೂ ಅದರ ಬಳಕೆ ಇವುಗಳ ನಡುವಣ ಅಗಾಧ ಅಂತರವನ್ನು ಕಿರಿದುಗೊಳಿಸುವ ಪ್ರಯತ್ನದಲ್ಲಿ ಚೀನಾ ತುಂಬ ಪ್ರಗತಿ ಸಾಧಿಸಿದೆ.

ಸಂಶೋಧನಾ ಕೇಂದ್ರಗಳಲ್ಲಿ ನಡೆಯುವ ಹೊಸ ಸಂಶೋಧನೆಗಳ ತಿರುಳ ತಡವಿಲ್ಲದೆ ರೈತರ ಉಪಯೋಗಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಉದಾ:- ಹೇಳುವುದಾದರೆ ೧೯೭೬ರಲ್ಲಿ ಆವಿಷ್ಕಾರವಾದ ಬತ್ತದ ಮಿಶ್ರ ತಳಿಯು ೧೯೮೦ರಲ್ಲಿ ಸುಮಾರು ೫ ಮಿಲಿಯ ಹೆಕ್ಟೇರ್‌ಗಳಲ್ಲಿ ಅಳವಡಿಕೆಯಾಗಿತ್ತು. ಮಿಶ್ರತಳಿ ಬೀಜೋತ್ಪಾದನೆಯಲ್ಲಿ ಅನುಸರಿಸಬೇಕಾದ ಯೋಜನಾಬದ್ಧ ಕಾರ್ಯಕ್ರಮ, ಬಹುಸಂಖ್ಯೆಯಲ್ಲಿ ಬೇಕಾಗುವ ತಜ್ಞರು ಹಾಗೂ ನುರಿತ ಹೊಲದ ಸಿಬ್ಬಂದಿಗಳು ಇತ್ಯಾದಿಗಳನ್ನು ತ್ವರಿತವಾಗಿ ಹೊಂದಿಸಿಕೊಳ್ಳಲು ಅನನುಕೂಲವಿರುವ ಪರಿಸ್ಥಿತಿಯಲ್ಲೂ ಇವೆಲ್ಲವನ್ನೂ ಶೀಘ್ರವಾಗಿ ಅನುವು ಮಾಡಿಕೊಂಡದ್ದು ವಿಕ್ರಮವೇ ಸರಿ. ಹೊಸ ತಾಂತ್ರೀಕತೆಯ ತ್ವರಿತ ಹಾಗೂ ದೊಡ್ಡ ಮಟ್ಟದ ಅಳವಡಿಕೆಗೆ ಪೂರಕವಾದ ಕೆಲವೊಂದು ನಿಸ್ಸಂದೇಹ ಕಾರಣಗಳೆಂದರೆ: –

೧. ಪ್ರತಿ ಹಂತದಲ್ಲೂ ನಿರ್ಣಯ ತೆಗೆದುಕೊಳ್ಳಲು ಕಾಲ ವಿಳಂಬ ಮಾಡದಿರುವುದು.

೨. ಕಠಿಣ ಶ್ರಮ ಹಾಗೂ ಹೆಚ್ಚಿನ ಉತ್ಪಾದನೆಗೆ ಹೆಚ್ಚು ಸಂಬಳದ ಪ್ರೇರೇಪಣೆ.

೩. ಉತ್ಪಾದನೆಯ ಮೂಲ ಹಂತದಲ್ಲೇ ವಿಜ್ಞಾನಿಗಳ, ಬೋಧಕರ ಹಾಗೂ ಕೃಷಿ ಕೆಲಸಗಾರರ ಸಮಾಗಮ.

೪. ನಿರ್ಣಯ ಮಾಡಲ್ಪಟ್ಟ ಬೇಸಾಯ ಕ್ರಮಗಳನ್ನು ತಪ್ಪದೇ ಪಾಲಿಸುವಲ್ಲಿ ಕೃಷಿಕರು ತೋರಿಸುವ ಕಠಿಣ ಶಿಸ್ತು.

ಇಲ್ಲಿ ಒತ್ತಿ ಹೇಳಬೇಕಾದ ಒಂದು ಅಂಶವೆಂದರೆ ಚೀನಾ ದೇಶದಲ್ಲಿ ರೈತನ ಜಮೀನಿನಲ್ಲಿ ಪ್ರಯೋಗ ಸಿದ್ಧವಾದ ಅನುಭವಗಳಷ್ಟೇ ಕೃಷಿ ಇಲಾಖೆಯ ಹಾಗೂ ಕೃಷಿ ಕಾಲೇಜಿನ ಮಂದಿಯಿಂದ ಗಮನಾರ್ಹ ವಿಚಾರಗಳೆಂದು ಪರಿಗಣಿಸಲ್ಪಡುತ್ತವೆ.

ಬತ್ತದ ಕೃಷಿಯಲ್ಲಿ ಚೀನಿಯರ ಯಶಸ್ಸಿಗೆ ಕಾರಣವಾದ ಎಲ್ಲಾ ಅಂಶಗಳನ್ನು ಅಲ್ಲದೆ ಹೋದರೂ ಕೆಲವನ್ನಾದರೂ ಭಾರತದಲ್ಲಿ ಪ್ರಯತ್ನಿಸಿ ನೋಡಬಹುದೇನೋ. ನಮ್ಮ ದೇಶದ ಬತ್ತದ ಉತ್ಪಾದನೆಯನ್ನು ಶೀಘ್ರದಲ್ಲೇ ಹೆಚ್ಚಿಸುವ ಅಗತ್ಯವಿರುವುದರಿಂದ ಈ ರೀತಿಯ ಪ್ರಯತ್ನ ನಡೆಸಲೇಬೇಕಾಗಿದೆ. ನೀರಾವರಿ ಸೌಕರ್ಯವನ್ನು ಹೆಚ್ಚಿಸುವುದು, ಶುದ್ಧ ಬೀಜ ಮತ್ತು ಇತರ ಕೃಷಿ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡುವುದು ಈ ಎಲ್ಲ ವಿಚಾರಗಳಲ್ಲೂ ಸಂಬಂಧಪಟ್ಟ ಆಡಳಿತಗಾರರು ಜವಾಬ್ದಾರಿ ವಹಿಸಿಕೊಂಡು ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನು ಸಾಧಿಸಲು ರೈತರಿಗೆ ನೆರವಾಗಬೇಕು.