ಪ್ರಪಂಚದ ಕೃಷಿ ಬೆಳೆಗಳ ಪೈಕಿ ಅತ್ಯಂತ ಪ್ರಮುಖವಾದದೆಂದರೆ ಬತ್ತ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಬತ್ತದ ಸಂಶೋಧನೆಯ ಫಲವಾಗಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗಿದೆ. ದಿನೇ ದಿನೇ ಏರುತ್ತಿರುವ ಜನಸಂಖ್ಯೆಯ ಆಹಾರ ಪೂರೈಕೆಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆದು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯ ಮತ್ತು ಅಂತರ ರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರ, ಮನಿಲಾ, ಫಿಲಿಪೈನ್ಸ್ ಇಲ್ಲಿ ಬತ್ತದ ಉತ್ಪಾದನೆಯನ್ನು ಹೆಚ್ಚಿಸಲು ಹೊಸ ಹೊಸ ಮಾರ್ಗಗಳನ್ನು ಹುಡುಕುವಲ್ಲಿ, ಇತ್ತೀಚೆಗೆ ಹಾಕಿಕೊಂಡ ಯೋಜನೆಗಳ ಫಲಿತಾಂಶವು ಆಶಾದಾಯಕವಾಗಿದೆ. ಇಂತಹ ಕೆಲವು ಇತ್ತೀಚಿನ ಸಂಶೋಧನೆಗಳ ಮಾಹಿತಿ ನೀಡುವುದೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ.

ದೋಷಪೂರಿತ ಮಣ್ಣು:

ಬತ್ತ ಬೆಳೆಯುವ ಅನೇಕ ರಾಷ್ಟ್ರಗಳಲ್ಲಿ ಲಕ್ಷಾಂತರ ಹೆಕ್ಟೇರುಗಳಲ್ಲಿ ಒಂದಲ್ಲ ಒಂದು ರೀತಿ ಮಣ್ಣಿನ ದೋಷದಿಂದ ಕೂಡಿರುವುದರಿಂದ ಈವರೆಗೆ ಬಿಡುಗಡೆ ಮಾಡಿರುವ ಯಾವ ಅಧಿಕ ಇಳುವರಿ ತಳಿಯನ್ನೂ ಬೆಳೆಯಲಾಗುತ್ತಿಲ್ಲ. ಅಂದರೆ ಸದ್ಯದಲ್ಲಿ ಬಳಕೆಯಲ್ಲಿರುವ ಅಧಿಕ ಇಳುವರಿ ತಳಿಗಳು ಮಣ್ಣಿನ ದೋಷಗಳನ್ನು ಸಹಿಸಿಕೊಂಡು ಬೆಳೆಯಬಲ್ಲ ಶಕ್ತಿ ಹೊಂದಿಲ್ಲವೆಂದಾಯ್ತು. ಹೆಚ್ಚು ಪ್ರಮಾಣದಲ್ಲಿ ಸಾಂಧ್ರ ಬೇಸಾಯ ಮತ್ತು ಬಹು ಬೆಳೆ ಪ್ರಚಾರಕ್ಕೆ ಬರುತ್ತಿರುವ ಕಾರಣ ಇನ್ನೂ ಲಕ್ಷಾಂತರ ಹೆಕ್ಟೇರುಗಳು ಸದ್ಯಕ್ಕೆ ಸರಿಯಾಗಿದ್ದರೂ ಇನ್ನು ಮುಂದು ಮಣ್ಣಿನ ದೋಷಕ್ಕೆ ತುತ್ತಾಗುವ ವಿಪರೀತವಾಗಿರುವುದರಿಂದ ಉಳಿದ ಹವಾಗುಣವೆಲ್ಲಾ ಬತ್ತದ ಕೃಷಿಗೆ ಹಿತವಾಗಿದ್ದರೂ ಸಹ ಈವರೆಗೂ ಬೇಸಾಯಕ್ಕೆ ಅಳವಡಿಸಲಾಗಿಲ್ಲ. ಸೂಕ್ತ ರಾಸಾಯನಿಕ ಉಪಚಾರ ಮತ್ತು ನಿರೋಧಕ ಶಕ್ತಿ ಹೊಂದಿರುವ ತಳಿಗಳ ಅಭಿವೃದ್ಧಿಯಿಂದ ಮೇಲ್ಕಂಡ ಮೂರು ವರ್ಷದ ಗದ್ದೆಗಳಲ್ಲೂ ಬತ್ತದ ಉತ್ಪಾದನೆಯನ್ನು ಹೆಚ್ಚು ಪಡೆಯಲು ಸಾಧ್ಯ ಎಂಬುದು ಇದೀಗ ಗೊತ್ತಾಗಿರುವ ಸಂಶೋಧನಾ ಫಲಿತಾಂಶಗಳಲ್ಲಿ ಅಡಗಿರುವ ಸಂದೇಶ.

ಬತ್ತ ಬೆಳೆಯುವ ಮಣ್ಣಿನಲ್ಲಿ ಕಂಡು ಬರುವ ದೋಷಗಳನ್ನು “ಕೊರತೆ” ಮತ್ತು ತೀಕ್ಷ್ಣತೆ ಎಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಸತು, ರಂಜಕ, ಗಂಧಕ ಮತ್ತು ಕಬ್ಬಿಣ ಇವುಗಳ ಕೊರತೆ ಹಾಗೂ ಕಬ್ಬಿಣ, ಅಲ್ಯುಮಿನಿಯಂ, ಚೌಳು ಕ್ಷಾರ ಬೋರಾನ ಮುಂತಾದವುಗಳ ತೀಕ್ಷ್ಣತೆ ಇವುಗಳಲ್ಲಿ ಮುಖ್ಯವಾದವು.

ಯಾವುದೇ ಅಂಶಗಳ ಕೊರತೆ ಅಥವಾ ತೀಕ್ಷ್ಣತೆ ಅತಿಯಾದಾಗ ರಾಸಾಯನಿಕ ಉಪಚಾರ (Chemical Amendment) ಹಾಗೂ ನಿರೋಧಕ ತಳಿಗಳ ಬಳಕೆ ಈ ಎರಡೂ ವಿಧಾನಗಳಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು. ಈ ದೋಷಗಳು ಅಲ್ಪ ಅಥವಾ ಸಾಧಾರಣ ಪ್ರಮಾಣದಲ್ಲಿ ಕಾಣಿಸಿಕೊಂಡಾಗ ಕೇವಲ ನಿರೋಧಕ ತಳಿಗಳ ಬಳಕೆಯಿಂದಲೇ ಉತ್ಪಾದನೆಯನ್ನು ಹೆಚ್ಚಿಸಬಹುದು. ತಳಿ ಬದಲಾವಣೆ ಬಿಟ್ಟರೆ ಬೇರೆ ಯಾವ ಖರ್ಚು ತಗಲುವುದಿಲ್ಲವಾದ್ದರಿಂದ ಸಣ್ಣ ಹಿಡುವಳಿದಾರನಿಗೆ ಈ ಮಾಹಿತಿ ಹೆಚ್ಚು ಪ್ರಯೋಜನಕಾರಿ.

ಸತುವಿನ ಕೊರತೆಯಲ್ಲಿ ಚೆನ್ನಾಗಿ ಬೆಳೆಯಬಲ್ಲ ತಳಿಗಳೆಂದರೆ ಐ.ಆರ್. ೩೪ ಮತ್ತು ಐ.ಆರ್. ೪೬೮೩-೫೪-೨ ಕಬ್ಬಿಣದ ಕೊರತೆಗೆ ನಿರೋಧಕ ಗುಣ ಹೊಂದಿರುವ ತಳಿಗಳೆಂದರೆ ಐ.ಆರ್. ೩೫, ಐ.ಆರ್. ೭೭೬೦-೪-೮-೨ ಮತ್ತು ಐ.ಆರ್. ೨೪ ರಂಜಕದ ಕೊರತೆಯಲ್ಲೂ ಕಡ್ಡಾಯವಾಗಿ ಬೆಳೆಯಬಲ್ಲ ಬತ್ತಗಳೆಂದರೆ ಯ.ಆರ್. ೩೪, ಬಿ.ಆರ್. ೫೧-೯೧-೬ (ಬಿರ್ರಿಸಾಲಿ) ಮತ್ತು ರಾಶಿ (ಐಇಟಿ ೧೪೪೪) ಗಂಧಕದ ಕೊರತೆಯನ್ನು ಸಹಿಸಬಲ್ಲ ತಳಿಗಳನ್ನು ಇನ್ನೂ ಹುಡುಕಿ ತೆಗೆಯಬೇಕಾದರೆ.

ಚೌಳು ಹಾಗೂ ಕ್ಷಾರಗಳಿಗೆ ನಿರೋಧಕ ಶಕ್ತಿಯಿರುವ ತಳಿಗಳೆಂದರೆ ಸದ್ಯಕ್ಕೆ ಐ.ಆರ್. ೩೬, ಪ್ರಗತಿ, ಮಂಗಳ. ಇನ್ನೂ ಉತ್ತಮ ತಳಿಗಳು ಇದೀಗ ಪರೀಕ್ಷೆಯ ಕೊನೆಯ ಹಂತಗಳಲ್ಲಿ ಐ.ಎಂ.ಆರ್. ೩೬೩, ಎಂ.ಆರ್. ೩೫೮ ಇವು ಅವುಗಳಲ್ಲಿ ಕೆಲವು ಕಬ್ಬಿಣದ ಖಾರ ಅಥವಾ ತೀಕ್ಷ್ಣತೆಗೆ ಸರಿಹೋಗುವ ತಳಿಗಳೆಂದರೆ ಮಷೂರಿ (ಗೌರಿ) ಮತ್ತು ಐ.ಆರ್. ೪೨.

ಕೂಳೆ ಬೆಳೆಯಿಂದ ಬತ್ತದ ಉತ್ಪಾದನೆ:

ಇನ್ನು ಮೇಲೆ ಕ್ಷೇತ್ರ ಬಡಾವಣೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವ ಸಾಧ್ಯತೆ ಬಹಳ ಕಡಿಮೆ. ಉತ್ಪಾದನೆಯ ಹೆಚ್ಚಳ ಹೊಸ ಮಾರ್ಗಗಳ ಅನ್ವೇಷಣೆಯಲ್ಲಿ ಕೂಳೆ ಬೆಳೆ ಪದ್ಧತಿ ಆಶಾದಾಯಕವೆನಿಸಿದೆ. ಏಷ್ಯಾದಲ್ಲಿ ಬತ್ತ ಬೆಳೆಯಲ್ಪಡುತ್ತಿರುವ ಶೇ. ೧೪ರಷ್ಟು ಭೂಮಿಯಲ್ಲಿ ಮಾತ್ರ ಎರಡನೇ ಬೆಳೆಗೆ ನೀರಿನ ಸೌಲಭ್ಯವಿದೆ. ಉಳಿದೆಡೆಗಳಲ್ಲಿ ನೀರಿನ ಕೊರತೆಯಿಂದ ಅಲ್ಪಾವಧಿ ತಳಿಗಳನ್ನೂ ಸಹ ಬೆಳೆಯಲಾಗುವುದಿಲ್ಲ. ಅಲ್ಲದೆ ಕೆಲವು ಗದ್ದೆಗಳಲ್ಲಿ ಇತರೇ ಖುಷ್ಕಿ ಫಸಲು ಬೆಳೆಯಲ್ಲಿ ಬತ್ತದ ಗದ್ದೆಯ ಅಹಿತವೆನಿಸುತ್ತದೆ. ಮತ್ತೆ ಕೆಲವು ಕಡೆ ಎರಡನೇ ಬತ್ತದ ಬೆಳೆಗೆ ಸಾಕಾಗುವಷ್ಟು ನೀರಿದ್ದರೂ ಸಹ, ಕಾಲಾವಧಿ ಕಡಿಮೆಯಿದ್ದು, ಮಳೆ ಶುರುವಾಗುವ ಅಥವಾ ಮುಂದಿನ ಬೆಳೆ ಬಿತ್ತುವ ಮುನ್ನ ಎರಡನೇ ಬೆಳೆ ತೆಗೆಯಲು ಸಾಧ್ಯವಾಗುವುದಿಲ್ಲ. ಇಂತಹ ಪ್ರದೇಶಗಳಲ್ಲಿ ಬತ್ತದ ಕೂಳೆಯಿಂದ ಬಹಳ ಕಡಿಮೆ ಖರ್ಚಿನಲ್ಲಿ ಒಂದು ಬೆಳೆಯನ್ನು ತೆಗೆಯಬಹುದೆಂದು ಕರ್ನಾಟಕದ ಮಡಿಕೇರಿ ಮತ್ತು ಮೂಡಿಗೆರೆ (ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ) ಸಂಶೋಧನಾ ಕೇಂದ್ರಗಳಲ್ಲಿ ಹಾಗೂ ಫಿಲಿಪೈನ್ಸ್ ಅಂತರ ರಾಷ್ಟ್ರೀಯ ಸಂಶೋಧನಾ ಕೇಂದ್ರ ಇಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇಂಟಾನ್, ಕೊಲೆಂಬಿಯಾ, ಡೊಮಿನಿರ್ಕ ರಿಪಬ್ಲಿಕ್‌ನಲ್ಲಿ ಬೆಳೆಯಲ್ಪಡುತ್ತಿರುವ ಮಿಂಗೋಲೊ, ಟೆಕ್ಸಾಸ್‌ನಲ್ಲಿ ಬೆಳೆಯಲ್ಪಡುತ್ತಿರುವ ಬೆಲ್ಲೆ ಪಾಟ್ನಾ ಹಾಗೂ ಗಲ್ಪಿರೋಸ್ ತಳಿಗಳು ಕೂಳೆ ಬೆಳೆಗೆ ಸೂಕ್ತವಾದ ತಳಿಗಳು ಅಭಿವೃದ್ಧಿ ಕೈಗೊಳ್ಳಲಾಗಿದೆ.

ಕೂಳೆ ಬೆಳೆಯು ಚೆನ್ನಾಗಿ ಬರಬೇಕಾದರೆ ಪ್ರಥಮ ಬೆಳೆಯು ಚೆನ್ನಾಗಿದ್ದಿರಬೇಕು. ಬೆಲೆಯನ್ನು ಒಣಗುವ ಮುನ್ನ ಸಕಾಲಕ್ಕೆ ಕೊಯ್ಲು ಮಾಡಬೇಕು. ಸುಮಾರು ೧೦-೧೨ ಸೆ.ಮೀ. ಕೂಳೆ ಉಳಿಸಿ ಕಟಾವು ಮಾಡಬೇಕು. ಕಟಾವು ಮಾಡುವ ೧೦-೧೨ ದಿನಗಳ ಮುನ್ನ ನೀರನ್ನು ಬಸಿದು ಕೂಳೆಯ ಮುಳುಗುವಷ್ಟು ಪ್ರಥಮ ಎತ್ತರಕ್ಕೆ ಬೆಳೆದ ನಂತರ ನೀರು ನೀಡಬೇಕು. ಪ್ರಥಮ ಬೆಳೆಗೆ ಸಾಕಷ್ಟು ರಂಜಕ ಮತ್ತು ಪೊಟ್ಯಾಷ್ ಕೊಟ್ಟಿದ್ದರೆ ಕೂಳೆಬೆಳೆಗೆ ಅವುಗಳ ಅವಶ್ಯಕತೆ ಇಲ್ಲ. ಆದರೆ ಸಾರಜನಕವನ್ನು ಮೇಲ್ಗೊಬ್ಬರವಾಗಿ ಕಟಾವಾದ ಸುಮಾರು ಒಂದು ತಿಂಗಳ ನಂತರ ಕೊಟ್ಟು, ಇತರೇ ಬೇಸಾಯ ಕ್ರಮಗಳನ್ನು ಮೊದಲನೇ ಬೆಳೆಯಂತೆಯೇ ಮಾಡಬೇಕು. ಕೂಳೆ ಬೆಳೆಯನ್ನು ಹೊಸದಾಗಿ ಹಾಕಿದ ನಂತರ ಎರಡನೇ ಬೆಳೆಗಿಂತ ಮುಂಚೆ ಬರುವುದಲ್ಲದೆ ಗದ್ದೆಯ ತಯಾರಿ ಮತ್ತು ನಾಟಿಗೆ ತಗಲುವ ಖರ್ಚು ಇರುವುದಿಲ್ಲ. ಹೀಗೆ ಪ್ರಥಮ ಮತ್ತು ಕೂಳೆ ಬೆಳೆಗಳ ಎರಡು ಖರ್ಚನ್ನು ಕೂಡಿಸಿ, ಎರಡರ ಉತ್ಪಾದನೆಯನ್ನು ಗಣನೆಗೆ ತೆಗೆದುಕೊಂಡರೆ ಆಗ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆಂದು ತಿಳಿದು ಬಂದಿದೆ. ಈ ಕೂಳೆ ಬೆಳೆ ಪದ್ಧತಿಯ ಉಷ್ಣಾಂಶವು ಕಡಿಮೆ ಇರುವ ಪ್ರದೇಶಗಳಲ್ಲಿ ಮಾತ್ರ ಸಾಧ್ಯವಾದೀತು ಎಂದು ತಿಳಿದು ಬಂದಿದೆ.

ಮುಸುಕಿನ ಜೋಳ, ಜೋಳ ಕಂಬು (ಸಜ್ಜೆ) ತರಕಾರಿ ಬೆಳೆಗಳು, ಹೂ ಸಸ್ಯಗಳಲ್ಲಿ ಹೈಬ್ರಿಡ್ ತಳಿಗಳ ಬಳಕೆ ಸರ್ವೇಸಾಮಾನ್ಯವಾಗಿದೆ. ಸ್ವಪರಾಗ ಕ್ರಿಯೆಗೆ ಒಳಪಟ್ಟ ಬತ್ತದಲ್ಲಿಯೂ ಸಹ ಇಂತಹ ತಳಿಗಳ ಅಭಿವೃದ್ಧಿ ಸಾಧ್ಯವೆಂದು ೧೯೭೨ರಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ಬತ್ತದ ಸಂಶೋಧಕರು ನಡೆಸಿದ ಪರೀಕ್ಷೆಗಳಿಂದ ತಿಳಿದುಬಂದಿತ್ತು. ಇದೀಗ ಪರಾಗಕ್ರಿಯೆ ನೈಸರ್ಗಿಕವಾಗಿ ನಡೆಯುವಂತೆ ನಪುಂಸಕ ಬತ್ತಗಳನ್ನು ಕರ್ನಾಟಕದಲ್ಲಿಯೇ ಸೃಷ್ಟಿಸಲಾಗಿದೆ.

ಈ ಆವಿಷ್ಕಾರದಿಂದ ಭಾರತದಲ್ಲಿ ಬತ್ತದ ಮಿಶ್ರ ತಳಿಗಳನ್ನು ಸೃಷ್ಟಿಸುವ ಕೆಲಸಕ್ಕೆ ತುಂಬಾ ವೇಗ ಲಭ್ಯವಾಗುವುದೆಂದು ನಿರೀಕ್ಷಿಸಲಾಗಿದೆ. ಬತ್ತದ ಸಸಿಯ ಪುರುಷ ಭಾಗ ನಿರ್ವೀಯವಾಗಿರುವುದರಿಂದ ಅದರ ಹೆಣ್ಣು ಭಾಗ ಪರಕೀಯ ಪರಾಗ ಸ್ಪರ್ಶದಿಂದಲೇ ಫಲಿಸಬೇಕಾಗುತ್ತದೆ. ಸಂಕರಣಕ್ಕಾಗಿ ಪುರುಷ ಭಾಗಗಳನ್ನು ಕಿತ್ತೊಗೆಯುವ ನಾಜೂಕಾದ ಕೆಲಸದ ಅಗತ್ಯವೇ ಉಳಿಯುವುದಿಲ್ಲ. ಆದರೆ ಈ ಜಾತಿಯ ಪುನರುತ್ಪತ್ತಿ, ಬೀಜ ಮೂಲಕ ಆಗಬಾರದು. ಇನ್ನೊಂದು ಈ ಜಾತಿಯಿಂದ ಇದರ ಹೆಣ್ಣು ಭಾಗ ಫಲಿತವಾದರೆ ಹುಟ್ಟಿದ ಕಾಳುಗಳಲ್ಲಿ ಪುನಃ ಸ್ತ್ರೀ ಎರಡೂ ಭಾಗಗಳು ಸಚೇತನವಾಗುತ್ತದೆ.

ಈ ಸಮಸ್ಯೆಯನ್ನು ಬೀಜದ ಬದಲು ಸಸಿಯ ಕೊಳೆಯಿಂದ ಸಸಿಗಳ ಪುನರುತ್ಪತ್ತಿ ಮಾಡಿ ಪರಿಹರಿಸಲಾಯಿತು. ಹೀಗೆ ಹೆಚ್ಚಿಸಿದ ಸಸಿಗಳಲ್ಲಿ ಪೂರ್ತಿ ಪುರುಷ ಭಾಗ ನಿರ್ವಿಯವಾಗಿರುವುದರಿಂದ ಅವು ಕೂಡ ನೈಸರ್ಗಿಕ ವಾಸೆಕ್ಟಮಿ ಹೊಂದಿದೆ ಜಾತಿಯವೇ ಆಗುತ್ತವೆ.

ಈ ಪುರುಷ ಸತ್ವಹೀನ ಸಸಿಯ ಆವಿಷ್ಕಾರ ಬರೇ ಅನ್ವಿತ ಕೃಷಿ ಸಂಶೋಧನೆ ಎನ್ನುವುದಕ್ಕಿಂತಲೂ ಮೂಲಭೂತ ಸ್ವರೂಪದ್ದಾಗಿದೆ ಎನ್ನಬಹುದು. ಆದರೆ ತತ್‌ಕ್ಷಣ ಪ್ರಯೋಜನಗಳನ್ನು ಪಡೆಯಲಿಕ್ಕೂ ಇದು ಸಹಾಯವಾಗಬಲ್ಲುದು, ಏಕೆಂದರೆ ಹಳೇ ಪದ್ಧತಿಯ ಸುತ್ತು ಬಳಸಿನ ನಪುಂಸಕತ್ವವನ್ನು ಕಾಪಾಡುವ ಅನುವಂಶಿಕ ಗುಣ ಏತರಿಂದ ಬರುತ್ತದೆ ಮತ್ತು ಯಾವ ರೀತಿಯಲ್ಲಿ ನಪುಂಸಕತ್ವ ಕಾಪಾಡುವ ಅನುವಂಶಿಕ ಗುಣ ಏತರಿಂದ ಬರುತ್ತದೆ ಮತ್ತು ಯಾವ ರೀತಿಯಲ್ಲಿ ನಪುಂಸಕತ್ವ ಕಳೆದು ಪುನಃ ಪುರುಷತ್ವ ಅದಕ್ಕೆ ಲಭಿಸುತ್ತದೆ ಎಂಬ ಅಂಶಗಳನ್ನು ಕಂಡುಹಿಡಿದು ಬಿಟ್ಟರೆ ಹೈಬ್ರಿಡ್ ಅಕ್ಕಿ ಜಾತಿಯನ್ನು ವ್ಯಾಪಾರಿ ಪ್ರಮಾಣದಲ್ಲಿ ಕೃಷಿ ಮಾಡುವುದು ಪ್ರಾರಂಭವಾಗಲು ಏನೂ ತಡವಾಗದು.