ಭಾರತದಲ್ಲಿ ಹಸಿರು ಕ್ರಾಂತಿಗಾಗಿ ಶ್ರಮಿಸಿದ ಸರ್ವರೂ ಕಳೆದು ಒಂದೆರಡು ದಶಕಗಳಲ್ಲಿ ಉಂಟಾಗಿರುವ ಕೃಷಿ ಉತ್ಪಾದನಾ ಪ್ರಗತಿಯತ್ತ ನೋಡಿ ಸಂತೋಷ ಸಮಾಧಾನದ ನಿಟ್ಟುಸಿರು ಬಿಡುವರು ಎನ್ನವುದು ನಿಸ್ಸಂದೇಹ. ೧೯೬೦-೬೧ನೇ ಸಾಲಿನಲ್ಲಿ ಅಂದರೆ ಹಸಿರು ಕ್ರಾಂತಿಗೆ ಮುನ್ನ ಉತ್ಪಾದನೆಯಾಗುತ್ತಿದ್ದ ೭೩ ದಶಲಕ್ಷ ಟನ್ ಆಹಾರ ಧಾನ್ಯಗಳು ೧೯೮೦ರಲ್ಲಿ ೧೬೦ ದಶಲಕ್ಷ ಟನ್ ಏರಿರುವುದು ನಿಜಕ್ಕೂ ಪ್ರಶಂಸನೀಯ. ಈ ಜಯವು ಸ್ವಲ್ಪ ಮಟ್ಟಿಗೆ ಉಸಿರಾಡಲು ಅವಕಾಶ ಕೊಟ್ಟಿದೆಯಾದರೂ ಇಂತಹ ಪ್ರಗತಿಯನ್ನು ಸಾಧಿಸಿದೆವೆಂಬ ಆನಂದದಿಂದ ನಾವು ಹೆಚ್ಚು ಕಾಲ ಕೈ ಕಟ್ಟಿ ಕುಳಿತುಕೊಳ್ಳುವಂತಿಲ್ಲ. ಏಕೆಂದರೆ ಜನಸಂಖ್ಯೆಯು ಹತೋಟಿ ಮೀರಿ ಏರುತ್ತಿರುವುದು ಒಂದು ಕಾರಣವಾದರೆ ಕೃಷಿ ಉತ್ಪಾದನೆಯಲ್ಲಿ ವಿವಿಧ ಹಂತಗಳ ಹಿಂದೆ ಅರಿಯದ ಹೊಸ ಹೊಸ ಸಮಸ್ಯೆಗಳು ಉದ್ಭವಿಸುತ್ತಿರುವುದು ಮತ್ತು ಅಂತಹ ಸಮಸ್ಯೆಗಳು ಇದೀಗ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಇನ್ನೊಂದು ಕಾರಣ. ಈ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಹುಡುಕದಿದ್ದಲ್ಲಿ ಆಹಾರೋತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವುದಿರಲಿ, ಈಗ ಇರುವ ಉತ್ಪಾದನಾ ಮಟ್ಟವನ್ನು ಇನ್ನು ಮುಂದೆಯೂ ಕಾಪಾಡಲು ಸಾಧ್ಯವೆ ಎನ್ನುವ ಶಂಕೆ ಮೂಡಿ ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಸಾಧಿಸಲ್ಪಟ್ಟಿರುವ ಹಸಿರು ಕ್ರಾಂತಿಗೆ ಸ್ಥಿರವಾದ ಅಂಶಗಳು ಯಾವುವು? ಈವರೆಗೆ ಕಂಡು ಬಂದಿರುವ ಹೊಸ ಸಮಸ್ಯೆಗಳು ಯಾವುವು? ಇನ್ನು ಮುಂದೆ ಉದ್ಭವಿಸಬಹುದಾದ ಸಮಸ್ಯೆಗಳಾಗಿರಬಹುದು? ಇವುಗಳು ಹಿಮ್ಮೆಟ್ಟುವಂತೆ ಮಾಡಲು ಪರಿಹಾರ ಮಾರ್ಗಗಳೇನು? ಈ ಬಗ್ಗೆ ಸೂಕ್ತ ವಿಶ್ಲೇಷಣೆ, ಚರ್ಚೆ ಮತ್ತು ಆಧುನಿಕ ಸಂಶೋಧನಾ ಹಾಗೂ ಅಭಿವೃದ್ಧಿ ವಿಸ್ತರಣಾ ಯೋಜನೆಗಳ ಬಗ್ಗೆ ಹೆಚ್ಚು ಲಕ್ಷ್ಯ ಅನಿವಾರ್ಯ ಎಂಬುದು ವಿವಾದತೀತ. ಇದಕ್ಕಾಗಿ ಕರ್ನಾಟಕ ರಾಜ್ಯವನ್ನು ಹಾಗೂ ಇಲ್ಲಿನ ಪ್ರಮುಖ ಬೆಳೆಗಳಲ್ಲಿ ಒಂದಾದ ಬತ್ತದ ಉತ್ಪಾದನೆಯನ್ನು ಪ್ರಧಾನ ಉದಾಹರಣೆಗಾಗಿ ತೆಗೆದುಕೊಂಡು ಮೇಲ್ಕಂಡ ವಿಷಯವನ್ನು ಚರ್ಚಿಸುವುದೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕದಲ್ಲಿ:

೧೯೬೫ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಬತ್ತದ ಒಟ್ಟು ಉತ್ಪಾದನೆಯು ೧೪ ಲಕ್ಷ ಟನ್‌ಗಳಾಗಿದ್ದು, ೧೯೮೦ರಲ್ಲಿ ಇದು ೨೩ ಲಕ್ಷ ಟನ್‌ಗಳಿಗೆ ಟನ್‌ಗಳಿಗೆ ಏರಿದೆ. ಅಂದರೆ ಒಂದೂವರೆ ದಶಕದಲ್ಲಿ ಶೇ. ೬೫ರಷ್ಟು ಉತ್ಪಾದನೆ ಹೆಚ್ಚಿದೆ ಎಂದಾಯ್ತು. ಇದರಲ್ಲಿ ಶೇ. ೫ರಷ್ಟು ಮಾತ್ರ ವಿಸ್ತೀರ್ಣ ಬಡಾವಣೆಯಿಂದ ಸಾಧ್ಯವಾಯಿತು ಎನ್ನಲು ಅಂಕಿ ಅಂಶಗಳ ಆಧಾರವಿದೆ. ಉಳಿದ ಶೇ. ೬೦ರಷ್ಟು ಇಳುವರಿ ಸಂಭವಿಸಿದ ಬಗೆ ಹೇಗೆ? ಇದು ಸ್ವಾರಸ್ಯಮಯ. ಇದಕ್ಕೆ ಇಳುವರಿ ತಳಿಗಳ ಬಳಕೆ, ಅವುಗಳಿಗೆ ಬೇಕಾದ ಬೇಸಾಯ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಸಂಪಾದಿಸಲ್ಪಟ್ಟು ಹೊಸ ಹೊಸ ಜ್ಞಾನದ ಅನುಕರಣೆ ಹೆಚ್ಚು ಮಹತ್ವದ್ದೂ ಸಾಕಷ್ಟು ಆಧಾರವಿರುವುದನ್ನು ಇನ್ನು ಮುಂದೆ ಕಾಣಬಹುದು.

ವೈಶಿಷ್ಟ್ಯ:

ಕರ್ನಾಟಕ ಪ್ರಮುಖ ಆಹಾರ ಬೆಳೆಗಳಲ್ಲೆಲ್ಲಾ (ಬತ್ತ, ರಾಗಿ, ಜೋಳ, ಮುಸುಕಿ ಜೋಳ, ಸಜ್ಜೆ, ಸೂರ್ಯಕಾಂತಿ, ಅವರೆ ಇತ್ಯಾದಿ) ಅಧಿಕ ಇಳುವರಿ ತಳಿಗಳು ಪ್ರಚಾರ‍ಕ್ಕೆ ಬಂದಿವೆ. ಇವುಗಳನ್ನೆಲ್ಲಾ ಸಾಧಾರಣ ಅಧಿಕ ಇಳುವರಿ ತಳಿಗಳು ಮತ್ತು ಶಕ್ತಿಮಾನ್ ಅಧಿಕ ಇಳುವರಿ ತಳಿಗಳು ಎಂದು ವಿಂಗಡಿಸಬಹುದು. ಶಕ್ತಮಾನ್ ಇಳುವರಿ ತಳಿಗಳು ಜೋಳ, ಮುಸುಕಿನ ಜೋಳ, ಸಜ್ಜೆ ಮತ್ತು ಸೂರ್ಯಕಾಂತಿ ಹೀಗೆ ಕೆಲವು ಬೆಳೆಗಳಲ್ಲಿ ಮಾತ್ರ ಕಂಡು ಹಿಡಿಯಲ್ಪಟ್ಟು ಹೆಚ್ಚು ಪ್ರದೇಶಗಳಲ್ಲಿ ಬೆಳೆಯಲ್ಪಡುತ್ತಿವೆ. ಅಧಿಕ ಇಳುವರಿ ತಳಿಗಳು ಯಾವ ಗುಂಪಿಗೆ ಸೇರಿರಲಿ. ಅವುಗಳಲ್ಲಿ ಕೆಲವು ವಿಶಿಷ್ಟ ಗುಣಗಳಿವೆ. ಬತ್ತದ ಉದಾಹರಣೆಯನ್ನು ತೆಗೆದುಕೊಂಡು ಹೇಳುವುದಾದರೆ ಇವು ದಪ್ಪ ಹಾಗೂ ಗಟ್ಟಿಯಾದ ಕಾಂಡವನ್ನು ಹೊಂದಿದ್ದು, ಕಡಿಮೆ ಎತ್ತರ (ಗಿಡ್ಡ) ಬೆಳೆಯುವುದರಿಂದ ಕೆಲವು ಅಹಿತ ಸನ್ನಿವೇಶ (ಹೆಚ್ಚು ಫಲವತ್ತತೆ, ಗಾಳಿ, ಮಳೆ) ಸಂಭವಿಸಿದರೂ ಬೆಳೆ ಬಿದ್ದು, ನಷ್ಟ ಉಂಟಾಗುವುದಿಲ್ಲ. ತಂಡೆ (ಹಿಳ್ಳೆ)ಗಳು ಹೆಚ್ಚು ಸಂಖ್ಯೆಯಲ್ಲಿ ಕುದುರಿ ಅಗಲವಾದ ಹೆಚ್ಚು ಹಸಿರು ಮತ್ತು ನೆಟ್ಟಗೆ ನಿಲ್ಲುವ ಎಲೆಗಳನ್ನು ಹೊಂದಿದ್ದು, ಸೂರ್ಯ ರಶ್ಮಿಯನ್ನು ಚೆನ್ನಾಗಿ ಉಪಯೋಗಿಸಿಕೊಂಡು ಹೆಚ್ಚು ದ್ಯುತಿಸಂಶ್ಲೇಷಣೆಗೆ ಸ್ಥಿರವಾಗಿ, ಅಧಿಕ ಸಂಖ್ಯೆಯಲ್ಲಿ ಚೆನ್ನಾಗಿ ತುಂಬಿದ ಕಾಳು ಉತ್ಪಾದನೆಯಾಗಿ ಹೆಚ್ಚು ಇಳುವರಿಗೆ ಕಾರಣವಾಗುತ್ತದೆ. ಬೇಗ ಕೊಯ್ಲಿಗೆ ಬುರುವುದು, ಹಗಲಿನ ಅವಧಿ ಹೆಚ್ಚು ಕಡಿಮೆ ಇದ್ದರೂ ಎಲ್ಲಾ ಕಾಲಾವಧಿಯಲ್ಲೂ ಸಮನಾಗಿ ಹೂ ಬಿಟ್ಟು ಕಾಳು ಕಟ್ಟುವುದು (Photoperiod insensitive) ಸಸ್ಯ ಗೊಬ್ಬರದ ಪ್ರಮಾಣ ಹಾಗೂ ನಿರ್ವಹಣೆ ಹೆಚ್ಚುದಂತೆಲ್ಲಾ ಇಳುವರಿಯೂ ಹೆಚ್ಚುವುದು. (Fertilizer and Management retposive) ಅಹಿತ ವಾತಾವರಣ (Environmentalatress) ಇವುಗಳನ್ನು ಎದುರಿಸಿ (resostance) ಫಸಲು ಬೆಳವಣಿಗೆ ಮತ್ತು ಕಾಳಿನ ಇಳುವರಿ ಇವುಗಳಲ್ಲಿ ಅಷ್ಟಾಗಿ ಏರಿಳಿತ ಕಂಡು ಬರದಿರುವುದು. (Stabilitiy of performance) ಆಧುನಿಕ ತಳಿಗಳ ಗುಣಲಕ್ಷಣಗಳೆನ್ನಬಹುದು. ಇದಕ್ಕೆ ವೈಪರಿಕ್ತವಾಗಿ ನಾಡ ತಳಿಗಳು ಗೊಬ್ಬರ ಅಥವಾ ಪೋಷಣೆ ಸಿಕ್ಕಾಗ ಸಸ್ಯವು ಜೊಂಡಾಗಿ ಬೆಳೆದು, ಬಿದ್ದು ಹೋಗುವುದು ಅಥವಾ ರೋಗಕ್ಕೆ ಬಲಿಯಾಗುವುದೇ ಹೊರತು ಗೊಬ್ಬರ ಅಥವಾ ಪೋಷಣೆ ಇವುಗಳ ಪರಿಣಾಮ ತೆನೆಯ ಗಾತ್ರದ ಅಥವಾ ಕಾಳುಗಳ ಸಂಖ್ಯೆಯ ಮೇಲೆ ಉಂಟಾಗುವುದಿಲ್ಲ. ಈ ಗುಣಗಳಿಂದಲೇ ಆಧುನಿಕ ತಳಿಗಳು ಭೂಮಿಯ ಮೇಲೆ ನಿಂತ ಪ್ರತಿ ಒಂದು ದಿನಕ್ಕೆ ಒಂದು ಎಕರೆಗೆ ೨೦ ರಿಂದ ೩೦ ಕಿ.ಗ್ರಾಂ. ಕಾಳನ್ನು ನೀಡುವ ಶಕ್ತಿ ಹೊಂದಿದೆ. ನಾಡ ತಳಿಗಳು ಇದರಲ್ಲಿ ಅರ್ಧ ಅಥವಾ ಇನ್ನೂ ಕಡಿಮೆ ದಿನದ ಇಳುವರಿ ಮಾತ್ರ ಕೊಡಬಲ್ಲವು ಎಂಬುದನ್ನು ಇಲ್ಲಿ ತಿಳಿಸಬಹುದು.

ಹೊಸ ತಳಿಗಳು:

ತಳಿ ಸುಧಾರಣೆಯಲ್ಲಿ ಮೊದಲು ಕೇವಲ ಇಳುವರಿ ಹೆಚ್ಚಿಸುವುದು ಮಾತ್ರ ಪ್ರಧಾನ ಧ್ಯೇಯವಾಗಿತ್ತು. ಅಂತೆಯೇ ೧೯೬೫ರಲ್ಲಿ ಟಿ.ಎನ್.ಐ.ಆರ್.೮ ಟಿ. ೬೫ ಮತ್ತು ೧೯೬೫ರಲ್ಲಿ ಜಯ ತಳಿಗಳು ಪ್ರಚಾರಕ್ಕೆ ಬಂದವು. ಇಷ್ಟರಲ್ಲಿ ಹೊಸ ತಳಿಗಳು ಅನ್ನಕ್ಕೆ ಯೋಗ್ಯವಲ್ಲ ಎಂಬ ಕೂಗು ಕೇಳಿಬಂತು. ಆದ್ದರಿಂದ ೧೯೬೯ ರಿಂದ ಈಚೆಗೆ ಕಾಳಿನ ಗುಣ (ಕಾಳಿನ ಗಾತ್ರ, ಅನ್ನ) ಕ್ಕೆ ಗಮನವಿಟ್ಟು ಐ.ಆರ್. ೨೦ ಮಧು, ಪುಷ್ಪ, ಸೋನಾ, ಪ್ರಕಾಶ, ವಾಣಿ ತಳಿಗಳನ್ನೂ ಕಂಡು ಹಿಡಿದೂ ಬಿಡುಗಡೆ ಮಾಡಲಾಯಿತು. ಹೀಗೆ ಪ್ರತಿ ವರ್ಷವೂ ಅಧಿಕ ಇಳುವರಿ, ತಳಿಗಳ ಬಳಕೆ ಹೆಚ್ಚುತ್ತಾ ಬಂತು. ೧೯೬೮ನೇ ಸಾಲಿನಲ್ಲಿ ಕೇವಲ ಶೇ. ೭ರಷ್ಟು ಪ್ರದೇಶದಲ್ಲಿ ಮಾತ್ರ ಹೊಸ ತಳಿಗಳು ಬೆಳೆಯಲ್ಪಡುತ್ತಿದ್ದು, ೧೯೭೫ರಲ್ಲಿ ಶೇ. ೩೦ಕ್ಕೆ ಏರಿತು. ಇಷ್ಟರಲ್ಲಿ ಸಾಂಧ್ರ ಬೇಸಾಯ ಪದ್ಧತಿ, ಅಂದರೆ ಅಧಿಕ ಇಳುವರಿ ತಳಿಗಳ ಬಳಕೆ, ಬಹುಬೆಳೆ, ಮಿಶ್ರಬೆಳೆ, ತುರ್ತು ಬೆಳೆ ಇಂತಹ ಹೊಸ ಪದ್ಧತಿಗಳ ಅನುಕರಣೆ ಇವುಗಳಿಂದ ರಸಗೊಬ್ಬರಗಳ ಬಳಕೆ ಹೆಚ್ಚಾಗಿ ತಾಕುಗಳಿಗೆ ವಿಶ್ರಾಂತಿ ಕಡಿಮೆಯಾಗಿ ರೋಗ ಕೀಟಗಳ ಹಾವಳಿಯೂ ಹೆಚ್ಚಾಯಿತು. ಅಷ್ಟರಲ್ಲೇ ಮುನ್ನೆಚ್ಚರಿಕೆ ವಹಿಸಿ ರೋಗ ಮತ್ತು ಕೀಟ ನಿರೋಧಕ ತಳಿಗಳನ್ನು (ಕೀಟ ನಿರೋಧಕ: ವಿಕ್ರಮ ಫಲ್ಗುಣ ಶಕ್ತಿ, ಜೆ.ಎಂ.ಆರ್ ೧೭. ರೋಗ ನಿರೋಧಕ: ಇಂಟಾನ್) ಕಂಡು ಹಿಡಿದು ಬಿಡುಗಡೆ ಮಾಡಲಾಯಿತು. ಇವುಗಳಿಂದ ೧೯೭೯ ಹೊತ್ತಿಗೆ ಹೊಸ ತಳಿಗಳು ಸುಮಾರು ಶೇ.೪೦ರಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡವು. ಈ ಮಟ್ಟವು ಸ್ಥಗಿತಕೊಳ್ಳುವ ಮುನ್ನ ಚಳಿ ನಿರೋಧಕ ಮಂಗಳ ಲವಣ ನಿರೋಧಕ ಪ್ರಗತಿ ತಳಿಗಳನ್ನೂ ಸೂಕ್ತ ಸಲಕರಣೆಗಳಿಂದ ಹುಡುಕಿ ತೆಗೆದು ಬಿಡುಗಡೆ ಮಾಡಲಾಗಿ ಇನ್ನಷ್ಟು ಪ್ರದೇಶಗಳಲ್ಲಿ ಹೊಸ ತಳಿಗಳು ಶೋಭಿಸಲು ಸಾಧ್ಯವಾಯಿತು. ಹೀಗೆ ೧೯೮೧ನೇ ಸಾಲಿನಲ್ಲಿ ಸುಮಾರು ಶೇ. ೫೫ರಷ್ಟು ಪ್ರದೇಶದಲ್ಲಿ ಹೊಸ ತಳಿಗಳು ಉತ್ತಮ ಬೇಸಾಯ ಕ್ರಮಗಳೊಡನೆ ಬೆಳೆಯಲ್ಪಟ್ಟು ರಾಜ್ಯದಲ್ಲಿ ೨೩ ಲಕ್ಷ ಟನ್ ಬತ್ತ ಉತ್ಪಾದನೆಗೆ ಕಾರಣವಾಗಿರುವುದನ್ನು ಒಪ್ಪಬೇಕು. ಅಧಿಕ ಇಳುವರಿ ತಳಿಗಳು ಇನ್ನಷ್ಟು ಪ್ರದೇಶವನ್ನು ಪ್ರವೇಶಿಸಬಹುದೆ? ಎನ್ನುವ ಪ್ರಶ್ನೆಗಳು ಈ ಸಂದರ್ಭವನ್ನು ಉದ್ಭವಿಸಬಹುದಾದಂತಹವು. ಕಳೆದ ಐದು ವರ್ಷಗಳಲ್ಲಿ ನಮ್ಮ ನೆರೆಯ ಕೇರಳ ರಾಜ್ಯದಲ್ಲಿ ಅಧಿಕ ಇಳುವರಿ ತಳಿಗಳ ಬಳಕೆ ಕಡಿಮೆಯಾಗಿರುವುದು ಮತ್ತು ಉತ್ಪಾದನಾ ಮಟ್ಟ ಸ್ಥಗಿತಗೊಂಡಿರುವುದು ಇಲ್ಲಿ ಉದಾಹರಿಸುವುದು ಸೂಕ್ತ. ಈಗ ಗೋಚರಕ್ಕೆ ಬರುತ್ತಿರುವ ಬೇಸಾಯದಲ್ಲಿ ಕಂಡು ಬರುತ್ತಿರುವ ಹೊಸ ಹೊಸ ತಾಂತ್ರಿಕ ಹಾಗೂ ಸಾಮಾಜಿಕ ಆರ್ಥಿಕ ಸಮಸ್ಯೆಗಳನ್ನು ಗಮನಿಸಿದರೆ ಇಂದಿನ ಉತ್ಪಾದನಾ ಮಟ್ಟವನ್ನೂ ಕಾಪಾಡುವುದೂ ಸಹ ಕಷ್ಟವಾಗಬಹುದೆನ್ನಿಸುತ್ತದೆ.

ಹೊಸ ಸಮಸ್ಯೆಗಳು:

ಇದೀಗ ಅಂದರೆ ಅಧಿಕ ಇಳುವರಿ ತಳಿಗಳ ಹಾಗೂ ಸಾಂಧ್ರ ಬೇಸಾಯ ಪದ್ಧತಿಯ ಸತತ ಬಳಕೆ ಸುಮಾರು ವರ್ಷಗಳಿಂದ ಸಾವಯವ ಗೊಬ್ಬರಗಳ ಕೊರತೆ ಇರುವುದು. ಕಳಪೆ ಬೀಜದ ಬಳಕೆಯಿಂದ ತಳಿಗಳು ಬೇಗ ಕ್ಷೀಣಿಸುತ್ತಿರುವುದು. ಮಣ್ಣಿನ ಫಲವತ್ತತೆ ಕಾಪಾಡಲು ಬೇಕಾದ ಬಸಿಕಾಲುವೆ, ಲಘು ಪೋಷಕಾಂಶ ಮುಂತಾದವುಗಳಿಂದ ಪೋಷಿಸದಿರುವುದು ಇತ್ಯಾದಿ ಕಾರಣಗಳಿಂದ ಹೊಸ ಹೊಸ ಮಣ್ಣಿನ ದೋಷಗಳು (ಸತು, ಕಬ್ಬಿಣ, ರಂಜಕ, ಇವುಗಳ ಕೊರತೆ, ಲವಣ, ಕಬ್ಬಿಣ, ಅಲ್ಯೂಮಿನಿಯಂ, ಬೋರಾನ) ಇವುಗಳ ತೀಕ್ಷ್ಣತೆ (Deficiencies and Toxicity of Nutroents) ನಂಜು ರೋಗಗಳು (Virus diseases) ಕೆಲವು ಸಾಧಾರಣ ಕೀಟಗಳು ಇದ್ದಕ್ಕಿದ್ದಂತೆ ಹೆಚ್ಚು ಹಾನಿಕಾರಕವಾಗಿ ಪರಿವರ್ತನೆ ಹೊಂದುತ್ತಿರುವುದು ನಿರಾಶಾದಾಯಕವೆನ್ನಬಹುದು. ಈ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಹಿಡಿಯದಿದ್ದಲ್ಲಿ ಉತ್ಪಾದನೆ ಕುಗ್ಗಿದರೆ ಆಶ್ಚರ್ಯವೇನಿಲ್ಲ.

ಹೊಸ ಗುರಿ:

ನಾಳಿನ ಆಹಾರ ಧಾನ್ಯಗಳ ಬೇಡಿಕೆಯನ್ನು ಪೂರೈಸಬೇಕಾದರೆ ನಾವು ಹಿಂದೆ ಸಾಧಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಗತಿಯನ್ನು ಇನ್ನು ಮುಂದೆ ಸಾಧಿಸಬೇಕಾಗುತ್ತದೆ ಎಂಬುದು ಈವರೆಗಿನ ಚರ್ಚೆಯಿಂದ ಮನದಟ್ಟಾಗಿದೆ. ನಾಳಿನ ತಳೀಕರಣದ ಬಗ್ಗೆ ಯೋಚಿಸಿದಾಗ ಮುಖ್ಯವಾಗಿ ನಾಲ್ಕು ಹಂತಗಳಿಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಮೊದಲನೆಯದು ಇನ್ನು ಬಗೆ ಹರೆಯದಿರುವ ಸಂಶೋಧನಾ ಸಮಸ್ಯೆಗಳು (research gaps) ಉದಾಹರಣೆಗೆ ಬತ್ತದ ಬರ ತಡೆದುಕೊಳ್ಳುವ (Drought tolerant) ತಳಿಗಳ ಬಹಳ ದಿನಗಳ ಕೋರಿಕೆ ಇದೆ. ಲಕ್ಷಾಂತರ ಹೆಕ್ಟೇರುಗಳಲ್ಲಿ ನೀರಿನ ಕೊರತೆಯಿಂದ ಫಸಲು ಕೈಗೆ ಬಾರದಿರುವುದು ಇಂದಿಗೂ ಒಂದು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಎರಡನೆಯದು ಅಧಿಕ ಇಳುವರಿ ತಳಿಗಳ ಬಳಕೆ ಇರುವಲ್ಲಿ ಇಳುವರಿಯ ಮಟ್ಟ ಕುಗ್ಗದಂತೆ ಇತ್ತೀಚೆಗೆ ಕಂಡು ಬರುತ್ತಿರುವ ಹೊಸ ಸಮಸ್ಯೆಗಳಿಗೆ ನಿರೋಧಕ ಬೆಳೆ ತಳಿಗಳನ್ನು (Resistant Crops/verieties) ಹುಡುಕಿ ತೆಗೆದು ಬಳಕೆಗೆ ತರುವುದು. ರಾಜ್ಯದ ಕೃಷಿ ವಿಶ್ವವಿದ್ಯಾನಿಲಯ ಮತ್ತು ಅಂತರರಾಷ್ಟ್ರೀಯ ವಿವಿಧ ಬೆಳೆ ಸಂಶೋಧನಾ ಕೇಂದ್ರಗಳ ಜಂಟಿ ಸಂಶೋಧನೆಯಿಂದ ಇಂತಹ ಅಭಿವೃದ್ಧಿ ಸಾಧ್ಯವೆಂದು ತಿಳಿದು ಬಂದಿದೆ. ಮೂರನೆಯದು ವರ್ಷಗಳಿಂದಲೂ ಎಲ್ಲಾ ತಾಂತ್ರಿಕ ಜ್ಞಾನವನ್ನು ಉಪಯೋಗಿಸಿಕೊಂಡು ಹೆಚ್ಚು ಇಳುವರಿ ತೆಗೆಯುತ್ತಿದ್ದು, ತಟಸ್ಥವಾಗಿರುವ ಇಳುವರಿ ಮಟ್ಟವನ್ನು ಮತ್ತು ಏರಿಸುವುದು (Breaking the yield barrier) ಇಂತಹ ಸಾಧನೆ ಚೈನಾದ ಬತ್ತದ ಉತ್ಪಾದನೆಯಲ್ಲಿ ಉಂಟಾಗಿರುವುದು ಶ್ಲಾಘನೀಯ. ಸ್ವಪರಾಗ ಕ್ರಿಯೆಗೆ ಒಳಪಟ್ಟು ಬೆಳೆಗಳಲ್ಲಿ (Self pollinated crops) ಶಕ್ತಿಮಾನ್ ತಳಿಗಳ ಉತ್ಪಾದನೆ ಸಾಧ್ಯವಾಗಲಾರದು ಎಂದು ಬೇರೂರಿದ್ದ ಕೆಲವರ ಅಭಿಪ್ರಾಯ ತಪ್ಪೆಂದು ಇಂದು ಚೈನಾದಲ್ಲಿ ೬೦ ಲಕ್ಷ ಹೆಕ್ಟೇರುಗಳಲ್ಲಿ ಬೆಳೆಯಲ್ಪಡುತ್ತಿರುವ ಶಕ್ತಿಮಾನ್ ಬತ್ತದ ತಳಿಗಳಿಂದ ಖಚಿತವಾಗಿದೆ. ಅಂತೆಯೇ ಶಕ್ತಿಮಾನ್ ಅಧಿಕ ಇಳುವರಿ ತಳಿಗಳು ಸಾಧಾರಣ ಅಧಿಕ ಇಳುವರಿ ತಳಿಗಳಿಗಿಂತ ಶೇ. ೨೫ರಷ್ಟು ಹೆಚ್ಚು ಇಳುವರಿ ನೀಡಬಲ್ಲವು ಎಂಬುದೂ ಖಚಿತವಾಗಿದೆ. ಇಂತಹ ಶಕ್ತಿಮಾನ್ ತಳಿಗಳ ಅಭಿವೃದ್ಧಿಗೆ ಬೇಕಾದ ನಪುಂಸಕ (Mole Sterile) ಬತ್ತಗಳನ್ನು ಕರ್ನಾಟಕದಲ್ಲಿ ಕಂಡು ಹಿಡಿಯಲ್ಪಟ್ಟಿರುವುದು ಆಶಾದಾಯಕವಾಗಿದೆ. ಚೈನಾ ಮತ್ತು ಪಿಲಿಫೈನ್ಸ್‌ನಿಂದ ತರಿಸಿಕೊಂಡ ನಪುಂಸಕ ಬತ್ತಗಳು ಸಹ ಇಲ್ಲಿ ಪ್ರಯೋಗದಲ್ಲಿದೆ. ಇದೇ ರೀತಿ ಅನೇಕ ಸ್ವಪರಾಗ ಕ್ರಿಯೆಗೆ ಒಳಪಟ್ಟ ಇತರ ಫಸಲುಗಳಲ್ಲಿಯೂ ರಾಗಿ, ಗೋಧಿ, ನವಣೆ, ಮುಂತಾದ ಬೆಳೆಗಳಲ್ಲಿ ಸಹ ಶಕ್ತಿಮಾನ್ ತಳಿಗಳ ಅಭಿವೃದ್ಧಿಗೆ ಪ್ರಯತ್ನಿಸಿದರೆ ಸಫಲವಾದೀತು. ನಾಲ್ಕನೆಯದು ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಸೇರಿದ್ದು. ಕಳೆದ ವರ್ಷಗಳಿಂದ ಸಾಮಾಗ್ರಿಗಳ ಬೆಲೆ ಏರುತ್ತಲೇ ಬಂದು ಇಂದು ಅವು ದುಬಾರಿ ಎನಿಸಿವೆ. ಆದರೆ ಕೃಷಿ ಉತ್ಪಾದಿತ ಧಾನ್ಯಗಳಿಗೆ ಸರಿಯಾದ ಬೆಲೆ ಸಿಕ್ಕುತ್ತಿಲ್ಲ. ಆದ್ದರಿಂದ ರೈತರಿಗೆ ನಿರುತ್ಸಾಹ ಉಂಟಾಗಿದೆ. ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೇಸಾಯವೆಂದರೆ ಕಣ್ಣು ಬಿಡುವಂತಾಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಮಧ್ಯಮ ಅಥವಾ ಕಡಿಮೆ ಫಲವತ್ತತೆಯಲ್ಲಿ (low to moderate input conditions) ಉತ್ತಮ ಇಳುವರಿ ಕೊಡಬಲ್ಲ ತಳಿಗಳ ಅಭಿವೃದ್ಧಿ ಹಾಗೂ ಅವುಗಳ ಬೇಸಾಯ ಕ್ರಮದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ಬೀಜ ಕ್ರಾಂತಿ:

ಆಧುನಿಕ ಬೇಸಾಯದಲ್ಲಿ ತಳಿಗಳ ಪಾತ್ರ ಇತರ ಯಾವುದೇ ಅಂಶಕ್ಕಿಂತ ಹೆಚ್ಚು ಮಹತ್ವದ್ದು ಎಂದು ಒಪ್ಪಲೇಬೇಕಾಗಿದೆ. ಹಸಿರು ಕ್ರಾಂತಿಯನ್ನು ಕೆಲವರು ಬೀಜದ ಕ್ರಾಂತಿಯೆಂದು ಕರೆದದ್ದೂ ಉಂಟು. ಆದರೆ ನಿಜವಾದ ಬೀಜ ಕ್ರಾಂತಿ ಆಗಬೇಕಾದರೆ ಇನ್ನು ಬಹಳ ಶ್ರಮವಹಿಸಬೇಕಾಗಿದೆ. ಉತ್ತಮ ಬೀಜ ದೊರೆಯದೆ ಲಕ್ಷಾಂತರ ಎಕರೆಗಳಲ್ಲಿ ಫಸಲು ಕೊಟ್ಟಿರುವುದು, ಬೀಜದ ಅಭಾವದಿಂದ ನಾಡ ತಳಿಗಳನ್ನೇ ನೆಡುವ ಪರಿಸ್ಥಿತಿ ಬಂದಿರುವುದು ಎಲ್ಲೆಲ್ಲಿಯೂ ಕೇಳಬರುತ್ತಿರುವ ಕೂಗಾಗಿದೆ. ಅಧಿಕ ಇಳವರಿ ತಳಿಗಳ ಸಂಖ್ಯೆ ಏರಿದಂತೆಲ್ಲಾ ಉತ್ತಮ ಬೀಜದ ಕೊರತೆಯು ಹೆಚ್ಚುತ್ತಾ ಬಂದಿದೆ. ಇಂತಹ ಬೀಜ ಅಭಾವ ಪರಿಸ್ಥಿತಿಯಿಂದ ಎಲ್ಲೆಲ್ಲಿಯೂ ಕಳಪೆ ಬೀಜಗಳ ಬಳಕೆ ಹೆಚ್ಚಾಗಿ ತಳಿಗಳು ಅವುಗಳ ನಿಜವಾದ ಉತ್ಪಾದನಾ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಹೆಚ್ಚು ಇಳುವರಿ, ಪ್ರತಿಕೂಲ ಸನ್ನಿವೇಶಕ್ಕೆ ನಿರೋಧಕ ಶಕ್ತಿ, ಇವುಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ವಂಶವಾಹಿಗಳು ಕಳೆದು ಹೋಗಿ ತಳಿಗಳು ದುರ್ಬಲಗೊಳ್ಳುತ್ತವೆ. ಸದ್ಯದಲ್ಲಿ ರಾಜ್ಯದ ಬೇಸಾಯಕ್ಕೆ ಒಳಪಟ್ಟ ಶೇ. ೧೦ರಷ್ಟು ಪ್ರದೇಶಕ್ಕೆ ಸಾಕಾಗುವಷ್ಟು ಬೀಜ ದೊರೆಯದಿರುವುದು ಶೋಚನೀಯ. ಇದೀಗ ರಾಷ್ಟ್ರೀಯ ಬೀಜ ಯೋಜನೆ ಕೃಷಿ ವಿ.ವಿ. ಮತ್ತು ರಾಜ್ಯದ ನಿಗಮಗಳ ಮೂಲಕ ಈ ದಿಶೆಯಲ್ಲಿ ಪರಿಸ್ಥಿತಿ ಸುಧಾರಿಸುವ ಸಲುವಾಗಿ ರೂಪಿಸಲ್ಪಟ್ಟಿವೆ. ಆದರೂ ಈ ಯೋಜನೆಗಳು ತಜ್ಞರಿಗೆ ಹೆಚ್ಚಿನ ಮಟ್ಟದಲ್ಲಿ ವ್ಯವಸ್ಥಿತಗೊಂಡು ಬೀಜೋತ್ಪಾದನೆಯಲ್ಲಿ ಬೇಕಾದ ತರಬೇತಿ ಕೊಟ್ಟು, ಖಾಸಗಿ ಮತ್ತು ಸಾರ್ವಜನಿಕ ಬೀಜೋತ್ಪಾದನೆಗೆ ತುರ್ತು ಕ್ರಮವಹಿಸಿ ಅವು ನ್ಯಾಯದ ಬೆಲೆಯಲ್ಲಿ ಮತ್ತು ಸಕಾಲದಲ್ಲಿ ರೈತರಿಗೆ ಸಿಗುವಂತೆ ಮಾಡಲು ಉತ್ತೇಜನ ನೀಡಿದ್ದೆ ಆದರೆ ಇದುವರೆಗೆ ಸಾಧಿಸಿರುವ ಮತ್ತು ಇನ್ನು ಮುಂದೆ ಸಾಧಿಸಲ್ಪಡುವ ತಳೀಕರಣ ಮತ್ತು ಇತರ ಕೃಷಿ ಶ್ರಮ ಸಾರ್ಥಕವಾದೀತು.