ಮುಂಗಾರು ಬತ್ತದ ಬೆಳೆಗೆ ಸಿದ್ಧತೆ ನಡೆಸಿಕೊಳ್ಳಬೇಕಾದ ಸಮಯವಿದು. ರಾಜ್ಯದಲ್ಲಿ ಸುಮಾರು ಎಲ್ಲೆಡೆಯಲ್ಲೂ ಬತ್ತ ಒಂದು ಮುಖ್ಯವಾದ ಬೆಳೆ. ಅದರಲ್ಲೂ ಕರಾವಳಿ (ದಕ್ಷಿಣ ಕನ್ನಡ, ಉತ್ತರ ಕನ್ನಡ) ಮಲೆನಾಡು (ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳು) ಪ್ರದೇಶಗಳಲ್ಲಿ ನೀರಾವರಿ ಬತ್ತದ ಬಿತ್ತನೆ ಇನ್ನೂ ತಡವಾಗುತ್ತದೆ. ಮೈದಾನ ಪ್ರದೇಶಗಳಲ್ಲಿ ಅಣೆಕಟ್ಟುಗಳಿಗೆ ಮತ್ತು ಕೆರೆಗಳಿಗೆ ನೀರು ತುಂಬಿ ಬರುವ ತನಕ ಕಾಯಬೇಕು. ಆದರೆ ಕರಾವಳಿ, ಮಲೆನಾಡು ಮತ್ತು ಗಡಿನಾಡು ಮತ್ತು ಪ್ರದೇಶಗಳಲ್ಲಿ ಮಳೆ ಬಂದ ಕೂಡಲೇ ಬಿತ್ತನೆ ಆರಂಭವಾಗುತ್ತದೆ. ಆದ್ದರಿಂದ ಸೂಕ್ತ ತಳಿಯ ಬೀಜವನ್ನು ಸಿದ್ಧಪಡಿಸಿಕೊಳ್ಳುವುದು ಸೂಕ್ತ.

ತಳಿಗಳ ಆಯ್ಕೆ:

೧. ಕರಾವಳಿ ಪ್ರದೇಶದ ಪ್ರಥಮ ಬೆಳೆಗೆ ಅದರಲ್ಲೂ ಆಕಸ್ಮಾತ್ ಸ್ವಲ್ಪ ಹಿಂಗಾಲವಾಗಿ ಬಿತ್ತನೆ ಮಾಡಿದರೆ ಕಣೆ ನೊಣಗಳ ಹಾವಳಿ ತಪ್ಪಿದ್ದಲ್ಲ ಆದ್ದರಿಂದ ಕೆಳಕಂಡಂತೆ ತಳಿಗಳನ್ನು ಆಯ್ಕೆ ಮಾಡಿ ಬೀಜವನ್ನು ಸಿದ್ಧಪಡಿಸಬೇಕು.

ಬೆಟ್ಟ ಭೂಮಿಗಳಿಗೆ: ಜಿಎಂಆರ್ ೧೭

ಮಜಲು ಭೂಮಿಗಳಿಗೆ: ಶಕ್ತಿ, ಫಲ್ಗುಣ, ವಿಕ್ರಮ

ಬಯಲು ಭೂಮಿಗಳಿಗೆ: ಫಲ್ಗುಣ

ಈ ತಳಿಗಳನ್ನಲ್ಲದೇ ಬೇರೆ ಯಾವುದೇ ತಳಿಯನ್ನು ಬೆಳೆಯ ಬೇಕಾದ ಸಂದರ್ಭ ಒದಗಿದಲ್ಲಿ ಕ್ರಿಮಿನಾಶಕಗಳ ಬಳಕೆ ಅನಿವಾರ್ಯವೆಂದು ತಿಳಿಯಬೇಕು.

೨. ಮಲೆನಾಡು ಪ್ರದೇಶದಲ್ಲಿ ಬೆಳೆಯಲು ಸೂಕ್ತವಾದುದು ಇಂಟಾನ್ ಬತ್ತ. ೧೯೮೨ ರಲ್ಲಿ ಕೆಲವು ಕಡೆ ಬೆಂಕಿ ರೋಗ ಕಾಣಿಸಿಕೊಂಡಿತ್ತು. ಅಂತಹ ಕಡೆ ನಾಲ್ಕು ಅಂಶಗಳನ್ನು ಗಮನಿಸುವುದರಿಂದ ಇಂಟಾನ್ ಬೆಳೆ ಲಾಭದಾಯಕವಾದೀತು.

ಅ) ಕಳೆದ ವರ್ಷ ಬೆಂಕಿ ರೋಗ ಬಂದಿದ್ದಲ್ಲಿ ಸಂರಕ್ಷಣೆಗೊಳ್ಳಲು ಸಿದ್ದರಾಗಿರಬೇಕು.

ಆ) ಗೌರಿ ಸಣ್ಣ, ಜೀರಿಗೆ ಸಣ್ಣ ಮುಂತಾದ ರೋಗಕ್ಕೆ ಹೆಚ್ಚು ತುತ್ತಾಗುವ ತಳಿಗಳನ್ನು ಆಸುಪಾಸಿನಲ್ಲಿ ಬೆಳೆಯಬಾರದು.

ಇ) ಬೆಂಕಿ ರೋಗ ಬಿದ್ದ ತಾಕಿನಿಂದ ಬೀಜವನ್ನು ಉಪಯೋಗಿಸಬಾರದು.

ಈ) ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ (ರಂಜಕ, ಸುಣ್ಣ) ಅಥವಾ ತೀಕ್ಷ್ಣತೆ (ಕಬ್ಬಿನ ಅಲ್ಯೂಮಿನಿಯಂ)ಗಳಿದ್ದರೆ ಸರಿಪಡಿಸಬೇಕು. ಇಲ್ಲದಿದ್ದರೆ ಇಂಟಾನ್ ಬೆಳೆಯಬಾರದು.

ಕಾರಣಾಂತರ ಜುಲೈನಲ್ಲಿ ನಾಟಿ ಮುಗಿಯದಿದ್ದರೆ ಇಂಟಾನ್ ಬಿಟ್ಟು ಇತ್ತೀಚಿನ ಹೊಸ ಮ್ಯುಟೆಂಟ್ ಮುಂತಾದ ತಳಿಗಳನ್ನು ಪ್ರಯೋಗಿಕವಾಗಿ ಬೆಳೆಯಬಹುದು.

೩. ಅರೆ ಮೆಲನಾಡು ಪ್ರದೇಶಗಳಲ್ಲಿ ತಗ್ಗು ಭೂಮಿಗಳಲ್ಲಿ ಮತ್ತು ಮಲೆನಾಡಿನ ಕಡೆಗೆ ಬರುವ ತಾಕುಗಳಲ್ಲಿ ಇಂಟಾನ್ ಬತ್ತ ಬೆಳೆಯಲು ಯೋಜನೆ ಹಾಕಬೇಕು. ಮೈದಾನದ ಅಂಚಿನಲ್ಲಿ ಬರುವ ಪ್ರದೇಶಗಳಲ್ಲಿ ವಾಣಿ, ಪ್ರಕಾಶ್, ಜಯ ಬತ್ತ ಬೆಳೆಯಲು ಸಿದ್ಧತೆ ನಡೆಸಬೇಕು. ಸಾಕಷ್ಟು ಮಳೆ ಬರುವುದು ನಿಧಾನವಾದಲ್ಲಿ ಪುಷ್ಪ ತಳಿಯನ್ನೂ ಮತ್ತಷ್ಟು ಮಳೆ ಬರುವುದು ನಿಧಾನದಲ್ಲಿ ಮಂಗಳ ತಳಿಯನ್ನು ಬೆಳೆಯಲು ಸಿದ್ಧಪಡಿಸಿಕೊಳ್ಳಬೇಕು. ಗಡಿನಾಡಿನ ಮಕ್ಕಿ ಭೂಮಿಗಳಲ್ಲಿ ನೀರಿನ ಅಭಾವ ಮತ್ತು ಕಬ್ಬಿಣದ ಕೊರತೆ ಕಾಣಿಸಿಕೊಳ್ಳುವುದುಂಟು. ಅಂತಹ ಭೂಮಿಗಳಲ್ಲಿ ರಾಸಿ ತಳಿಯನ್ನು ಬೆಳೆಯುವುದರಿಂದ ಬೆಳೆಯು ಸಂಪೂರ್ಣ ನಾಶವಾಗುವುದನ್ನು ತಪ್ಪಿಸಬಹುದು. ರಾಸಿ ತಳಿಯಲ್ಲಿ ಇವೆರಡು ಕೊರತೆಗಳನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳಬಲ್ಲ ಶಕ್ತಿ ಇರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಗಡಿನಾಡಿನ ಅರೆ ಮಕ್ಕಿ (ಮಧ್ಯಮ mid lands) ಭೂಮಿಗಳಲ್ಲಿ ಜಯ, ಪ್ರಕಾಶ್ ಮತ್ತು ವಾಣಿ ತಳಿಗಳನ್ನು ಬೆಳೆಯುವುದು ಸೂಕ್ತ.

೪. ಮೈದಾನ ಪ್ರದೇಶದಲ್ಲಿ ಜೂನ್ ತಿಂಗಳಲ್ಲೇ ಬಿತ್ತನೆ ಮುಗಿಸುವ ಅನನುಕೂಲ ಉಳ್ಳವರು, ಜಯ, ಪ್ರಕಾಶ್, ವಾಣಿ, ಐ.ಆರ್. ೨೦ ತಳಿಗಳ ಬೀಜವನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಕಾರಣಾಂತರದಿಂದ (ಬಹು ಬೆಳೆ ಯೋಜನೆ ಮುಂತಾದವು) ಬೇಗ ಬೆಳೆ ಕೊಯ್ಲು ಮಾಡಬೇಕಾಗಿದ್ದಲ್ಲಿ ಅಂತಹವರು, ಪುಷ್ಪ, ಮಧು ಮಂಗಳ, ಬತ್ತಗಳನ್ನು ಬೆಳೆಯಲು ಅನುವಾಗಬೇಕು. ತುಂಬ ಸಣ್ಣ ಕಾಳನ್ನು ಇಷ್ಟ ಪಡುವವರು ಪುಷ್ಪ ಮತ್ತು ಮಂಡ್ಯಾ ವಾಣಿ ತಳಿಗಳನ್ನು ಬೆಳೆಯಬಹುದು. ಹೆಚ್ಚು ಗೊಬ್ಬರ ಹಾಕಲು ಸಾಧ್ಯವಿಲ್ಲದವರು ದೀರ್ಘಾವಧಿಯಾದರೆ ಇಂಟಾನ್ ತಳಿಯನ್ನು, ಬೆಂಕಿ ರೋಗದ ಭಯವಿಲ್ಲದಿದ್ದರೆ ಗೌರಿ ಸಣ್ಣ (mahsuri) ತಳಿಯನ್ನೂ, ಅಲ್ಪಾವಧಿಯಾದರೆ ಪುಷ್ಪಾ ಅಥವಾ ಮಂಗಳ ತಳಿಯನ್ನು ಆಯ್ಕೆ ಮಾಡಬೇಕು. ಪಂಪ್ ಸೆಟ್ ಗಳ ಆಶ್ರಯದಲ್ಲಿ ಬತ್ತ ಬೆಳೆಯುವವರು, ಮಂಗಳ ಮತ್ತು ರಾಶಿ ತಳಿಗಳಲ್ಲಿ ಒಂದನ್ನು ಆರಿಸಬೇಕು.

ಬೀಜೋಪಚಾರ:

ತಳಿಯ ಆಯ್ಕೆಯಾದ ನಂತರ ಅದರ ಮಾರುಕಟ್ಟೆಯಲ್ಲಿ ಪರೀಕ್ಷಿತ ಬೀಜ ಅಥವಾ ಸ್ವತಃ ಉತ್ಪಾದಿಸಲಾದ ಶುದ್ಧವಾದ ಬೀಜವನ್ನು ನಾಟಿ ಮಾಡುವುದಾದರೆ ಎಕರೆಗೆ ೨೫ ಕೆ.ಜಿ. ಯಂತೆಯೂ ತೆಗೆದಿಟ್ಟು ಮೊಳೆಯುವಿಕೆ ಶೇ. ೮೦ಕ್ಕಿಂತಲೂ ಮೇಲ್ಪಟ್ಟಿದೆಯೆಂದು ಖಚಿತ ಮಾಡಿಕೊಳ್ಳಬೇಕು. ಉಪ್ಪು ನೀರಿನಲ್ಲಿ ತೇಲಿಸಿ ಹಗುರವಾದ ಬೀಜಗಳಿಂದ ಹೊರತಾಗಿರುವಂತೆ ಮಾಡಿ, ನೆರಳಲ್ಲಿ ಒಣಗಿಸಿ ಔಷಧಿಯಿಂದ ಉಪಚರಿಸಿಟ್ಟುಕೊಂಡಿದ್ದರೆ ಸಕಾಲ ನಾಟಿ ಸಾಧ್ಯವಾದೀತು ಹಾಗೂ ಕಾಲ ಮೀರಿದರೆ ಕಾಲ ಎಂಬ ಅನುಭವದ ನುಡಿಯ ಫಲವನ್ನು ಪಡೆದಂತಾಯಿತು.