ಪಾರ್ಥೇನಿಯಂ ಅತಿ ಶೀಘ್ರವಾಗಿ ಹಬ್ಬುವ ಕಳೆ. ಇದು ಸಸ್ಯ ಒಂದಕ್ಕೆ ೮೦೦೦-೧೫೦೦೦ ಬೀಜಗಳನ್ನು ಉತ್ಪಾದಿಸಿ ಗಾಳಿ, ನೀರು ಮತ್ತು ಪ್ರಾಣಿಗಳ ಮೂಲಕ ಬೀಜ ಪ್ರಸಾರ ಮಾಡಬಲ್ಲದಾದ್ದರಿಂದ ಪರಿಸರದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದೆ. ಅಲ್ಲದೆ ಈ ಸಸಿ ಹೊರ ಸೂಸುವ ರಾಸಾಯನಿಕ ದ್ರವಗಳಿಂದ ಹಾನಿಗೊಳಗಾದ ಇತರೇ ಸಸ್ಯಗಳು ಇದರೊಡನೆ ಸೆಣಸದೇ ಹಿಮ್ಮೆಟ್ಟುತ್ತವೆ.

07_262_ML-KUH

ಪಾರ್ಥೇನಿಯಂನಿಂದಾಗುವ ಹಾನಿ:

ಹಲವಾರು ಸಸ್ಯಗಳಂತೆಯೇ ಪಾರ್ಥೇನಿಯಂ ಸಹ ನಿರುಪದ್ರವಿಯಾಗಿದ್ದರೆ ಬಹುಶಃ ಯಾರೂ ಇದರ ಹತೋಟಿಯ ಬಗ್ಗೆ ಯೋಚಿಸುತ್ತಿರಲಿಲ್ಲ. ಈ ಸಸ್ಯದಿಂದಾಗುವ ಹಾನಿಗಳ ಬಗ್ಗೆ ತಿಳಿಯದವರು ವಿರಳ. ಇದರ ಹಸಿ ಅಥವಾ ಒಣಗಿದ ಭಾಗಗಳ ಸೋಂಕು ಎಷ್ಟೋ ಜನರಿಗೆ ಚರ್ಮ ರೋಗವನ್ನು ತರುತ್ತದೆ. ಪಾರ್ಥೇನಿಯಂ ಸಸ್ಯದ ಅಸಂಖ್ಯಾತ ಪರಾಗ ಕಣಗಳು ಉಸಿರಾಡುವ ಗಾಳಿಯ ಮೂಲಕ ಸೇವಿಸಲ್ಪಟ್ಟಾಗ ಮೂಗು ಮತ್ತು ಶ್ವಾಸನಾಳಕ್ಕೆ ಸಂಬಂಧಿಸಿದ ರೈನೆಟಿಸ್ ಎಂಬ ರೋಗಕ್ಕೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ. ಇದನ್ನು ಜಾನುವಾರುಗಳು ತಿಂದರೂ ಅವುಗಳ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.

08_262_ML-KUH

ಅತ್ಯಂತ ವೇಗದಲ್ಲಿ ಎಲ್ಲಾ ಬೀಳು ಜಮೀನುಗಳನ್ನು ಖಾಲಿ ನಿವೇಶನಗಳನ್ನೂ ತೋಟಗಳನ್ನೂ ಹಾಗೂ ರೈಲು, ರಸ್ತೆ ಬದಿಗಳನ್ನೂ ಆಕ್ರಮಿಸುವ ಈ ಸಸ್ಯದ ಬೆಳವಣಿಗೆಯಿಂದ ಮೇವಿನ ಉತ್ಪಾದನೆ ಕಡಿಮೆಯಾಗುತ್ತದೆ. ಅಲ್ಲದೆ ಇತರ ಅನೇಕ ಸಸ್ಯ ಜಾತಿಗಳ ಕಣ್ಮರೆಯಾಗುತ್ತವೆ. ಅಜಾಗರೂಕತೆಯಿಂದ ಇದನ್ನು ಕೃಷಿ ಜಮೀನಿನಲ್ಲಿ ಬೆಳೆಯಲು ಬಿಟ್ಟರೆ ಬೆಳೆಗಳ ಇಳುವರಿ ಬಹಳವಾಗಿ ಕುಗ್ಗುತ್ತದೆ. ಅದೇ ರೀತಿ ಈ ಸಸ್ಯ ಕಾಡಿನಲ್ಲಿ ಹಬ್ಬುತ್ತಾ ಹೋದರೆ ಗಿಡಮರಗಳ ಬೆಳವಣಿಗೆಯೂ ಕುಗ್ಗುವುದೆಂದು ವರದಿಯಾಗಿದೆ ಆದುದರಿಂದ ಪಾರ್ಥೇನಿಯಂ ನಿಯಂತ್ರಣ ಅನಿವಾರ್ಯ.

ಪ್ರಚಲಿತವಿರುವ ಹತೋಟಿ ವಿಧಾನಗಳು:

ರೈತನಿಗೆ ಭಯಂಕರ ಪಿಡುಗಾದ ಈ ಕಳೆಯ ನಿಯಂತ್ರಣಕ್ಕೆ ಹಲವಾರು ವಿಧಾನಗಳನ್ನು ಕಂಡು ಹಿಡಿಯಲಾಗಿದೆ. ಭೌತಿಕ, ರಾಸಾಯನಿಕ ಹಾಗೂ ಜೈವಿಕ ನಿಯಂತ್ರಣ ವಿಧಾನಗಳು ಈವರೆಗೆ ಸೂಚಿಸಲ್ಪಟ್ಟಿವೆ. ಭೌತಿಕ ವಿಧಾನದಲ್ಲಿ ಈ ಕಳೆಯನ್ನು ಹೂ ಬಿಡುವುದಕ್ಕಿಂತ ಮುಂಚೆಯೇ ಕಿತ್ತು ಪೆಟ್ರೋಲ್ ಅಥವಾ ಸೀಮೆಎಣ್ಣೆಯನ್ನು ಸುರಿದು ಸುಡುವುದು ರೂಢಿಯಲ್ಲಿದೆ. ರಾಸಾಯನಿಕ ವಿಧಾನದಲ್ಲಿ ವಿವಿಧ ಕಳೆನಾಶಕಗಳನ್ನು ಸಿಂಪಡಿಸುವುದರಿಂದ ಹತೋಟಿ ಮಾಡಲಾಗುತ್ತದೆ. ಈ ಎರಡೂ ವಿಧಾನಗಳೂ ಸೀಮಿತ ಸ್ಥಳದಲ್ಲಿ ನಿರ್ದಿಷ್ಟ ಸಮಯದವರೆಗೆ ಮಾತ್ರ ಕಳೆಯನ್ನು ಹತೋಟಿ ಮಾಡಬಲ್ಲವು.

ಜೈವಿಕ ನಿಯಂತ್ರಣ ಈ ಕಳೆಯ ಹತೋಟಿಗೆ ವೈರಸ್ ಶಿಲೀಂದ್ರ, ಮೈಕೋಪ್ಲಾಸ್ಮಾದಂತಹ ಜೀವಿಗಳ ಬಳಕೆಯ ಬಗ್ಗೆ ಪರಿಶೀಲನೆ ನಡೆದಿದೆ. ಅಲ್ಲದೆ ಪಾರ್ಥೇನಿಯಂನನ್ನು ಕಬಳಿಸುವ ಕೀಟಗಳನ್ನು ಕಂಡು ಹಿಡಿಯುವಲ್ಲಿ ನಡೆಸಲಾಗುತ್ತಿದೆ. ಜೈವಿಕ ನಿಯಂತ್ರಣದ ಇನ್ನೊಂದು ಮುಖ್ಯವಾದ ಅಡೆತಡೆ ತತ್ವವನ್ನು ಆಧರಿಸಿ ಪಾರ್ಥೇನಿಯಂ ಅನ್ನು ಪದಚ್ಯುತಿಗೊಳಿಸಬಲ್ಲ ಉಪಯುಕ್ತ ಸಸ್ಯಗಳನ್ನು ಬೆಳೆಸುವುದರ ಬಗ್ಗೆ ನಡೆದ ಸಂಶೋಧನೆಗಳ ಆಧಾರದ ಮೇಲೆ ಪಾರ್ಥೇನಿಯಂ ಹತೋಟಿಯ ಈ ಹೊಸ ವಿಧಾನವನ್ನು ರೂಪಿಸಲಾಗಿದೆ.

ಹೊಸ ವಿಧಾನ:

ಈ ಜೈವಿಕ ವಿಧಾನದಲ್ಲಿ ಪಾರ್ಥೇನಿಯಂ ಈಗಾಗಲೇ ಅಧಿಕವಾಗಿ ಹಬ್ಬಿರುವ ಕಡೆ ಬೇರೊಂದು ಸಸ್ಯವನ್ನು ಬೆಳೆದ ಪಾರ್ಥೇನಿಯಂ ಕಳೆಯನ್ನು ಹತೋಟಿಗೆ ತರಲಾಗುತ್ತದೆ. ಪಾರ್ಥೇನಿಯಂ ಹತೋಟಿಯಲ್ಲಿಡಲು ಬಳಸುವ ಸಸ್ಯ ಕೆಲವು ವಿಶೇಷ ಗುಣಗಳನ್ನು ಹೊಂದಿರಬೇಕು. ಮೊದಲನೆಯದಾಗಿ ಈ ಸಸ್ಯ ನಿರುಪದ್ರವಿಯಾಗಿರಬೇಕು. ಜೊತೆಗೆ ಪಾರ್ಥೇನಿಯಂ ನಂತಹ ಕಳೆಯನ್ನು ಯಶಸ್ವಿಯಾಗಿ ನಿಯಂತ್ರಿಸುವಂತಿರಬೇಕು. ದನಕರುಗಳು ಇದನ್ನು ತಿನ್ನುವಂತಿರಬಾರದು. ಇಷ್ಟೇ ಅಲ್ಲದೆ ಅವಶ್ಯ ಬಿದ್ದರೆ ಇದನ್ನು ಸುಲಭವಾಗಿ ನಿಯಂತ್ರಿಸುವಂತಿರಬೇಕು. ಪರಿಸರ ಮಾಲಿನ್ಯಕ್ಕೆ ಎಡೆಕೊಡಬಾರದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಪ್ರದೇಶಗಳಲ್ಲಿ ಸಸ್ಯ ಹೊಂದಾಣಿಕೆ ಸಮೀಕ್ಷೆ ನಡೆಸಿದಾಗ ಹಲವು ಸಸ್ಯಗಳು ಉಪಯುಕ್ತವೆಂದು ಕಂಡುಬಂದಿತು. ಅವುಗಳಲ್ಲಿ ಪ್ರಮುಖವಾದ ಸಸ್ಯಗಳೆಂದರೆ ಟೆಪ್ರೋಸಿಯಾ ಪರ್ಪುರಿಯಾ (Tephrosia purpurea) ಕ್ಯಾಸಿಯಾ ಟೋರಾ (Cassia tora) ಮತ್ತು ಕ್ಯಾಸಿಯಾ ಸೆರಿಸಿಯಾ (Cassia sericia) ಅಥವಾ ಹೆಸರು ತಗಸೆ ಈ ಮೂರು ಸಸ್ಯಗಳಲ್ಲಿ ಮೇಲೆ ಬಯಸಿದ ಗುಣವಿಶೇಷಗಳಿದ್ದರೂ ಹೆಸರು ತಗಸೆಯು ಇನ್ನುಳಿದ ಸಸ್ಯಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ಕಂಡು ಬಂದಿದೆ.

ಹೆಸರು ತಗಸೆಯ ಲಕ್ಷಣಗಳು:

ದಕ್ಷಿಣ ಅಮೇರಿಕಾದ ಮೂಲ ನಿವಾಸಿಯಾದ ಹೆಸರು ತಗಸೆ (ಕ್ಯಾಸಿಯಾ ಸೆರಿಸಿಯಾ)ಯು ಕಳೆದ ದಶಕದಲ್ಲಿ ಮಹಾರಾಷ್ಟ್ರದ ಮೂಲಕ ನಮ್ಮ ರಾಜ್ಯಕ್ಕೆ ಬಂದಿರಬಹುದು. ಸುಮಾರು ೧೫-೧೮ ಸೆ.ಮೀ. ಎತ್ತರ ಬೆಳೆಯಬಲ್ಲ ಲೆಗ್ಯುಮಿನೋಸಿ ಕುಟುಂಬದ ಸೀಸಾಲ್ಪಿನಿಯಾ ಉಪಕುಟುಂಬದ ಈ ಕಡೆಯ ಸಂಯುಕ್ತ ಪತ್ರಗಳಲ್ಲಿ ಸಾಮಾನ್ಯವಾಗಿ ೮.೧೦ ಉಪ ಪತ್ರಗಳಿವೆ. ಮೂಲಿಕೆಯ ನಂತರ ಸುಮಾರು ೪೫ ದಿನಗಳಲ್ಲಿ ಈ ಸಸ್ಯ ಹೂ ಬಿಡಲಾರಂಭಿಸುತ್ತದೆ. ಇದರ ಒಣಗಿದ ಕಾಯಿಗಳನ್ನು ೧೨೦ ರಿಂದ ೨೧೦ ದಿನಗಳವರೆಗೆ ಬಿಡಿಸಬಹುದು. ನೀರಿನ ಕೊರತೆಯಿಲ್ಲದಿದ್ದರೆ ಸುಮಾರು ೨೭೦ ದಿನಗಳವರೆಗೆ ಸತತವಾಗಿ ಕಾಯಿ ಬಿಡುವುದನ್ನು ಮುಂದುವರಿಸುತ್ತದೆ.

ರೆಂಬೆಯಲ್ಲಿ ೩-೪ ಸೆ.ಮೀ. ಉದ್ದದ ೪-೬ ಕಾಯಿಗಳಿರುತ್ತದೆ. ಪ್ರತಿ ಕಾಯಿಯಲ್ಲಿನ ಬೀಜಗಳ ಸಂಖ್ಯೆಯು ೮ ರಿಂದ ೧೧ ಇದ್ದು, ಗಟ್ಟಿಯಾದ ಕವಚವನ್ನು ಹೊಂದಿರುವುದರಿಂದ ಬೀಜವು ಸುಪ್ತಾವಸ್ಥೆಯಲ್ಲಿರುತ್ತದೆ. ಬೇಕೆನಿಸಿದಾಗ ಈ ಸುಪ್ತಾವಸ್ಥೆಯನ್ನು ಸೂಕ್ತ ಬೀಜೋಪಚಾರದ ಮೂಲಕ ಹೋಗಲಾಡಿಸಿ ಮೊಳಕೆ ಬರುವಂತೆ ಮಾಡಬಹುದು.

ಹೆಸರು ತಗಸೆಯ ಪ್ರಭಾವ:

ಈ ಬೆಳೆಯು ಮೊದಲ ವರ್ಷದ ಅವಧಿಯಲ್ಲಿ ಭೌತಿಕ ಪೈಪೋಟಿಯಿಂದ ಪಾರ್ಥೇನಿಯಂ ಅನ್ನು ತಕ್ಕಮಟ್ಟಿಗೆ ನಿಯಂತ್ರಿಸಿದರೂ ಮುಂಬರುವ ವರ್ಷಗಳಲ್ಲಿ ಇದರ ಎಲೆಗಳು ಉತ್ಪಾದಿಸುವ ರಾಸಾಯನಿಕ ದ್ರವಗಳ ಹೊರಸೂಸುವಿಕೆಯಿಂದ ಪಾರ್ಥೇನಿಯಂ ಬೀಜದ ಮೊಳಕೆಯ ಮೇಲೆ ಹಾಗೂ ಕಳೆಯ ಬೆಳವಣಿಗೆಯ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಸುಮಾರು ೪-೫ ವರ್ಷಗಳಲ್ಲಿ ಇದು ಪಾರ್ಥೇನಿಯಂ ಹತೋಟಿಯನ್ನು ಶೇ. ೯೫ರಷ್ಟು ಸಾಧಿಸಬಲ್ಲದು. ಜನಗಳು ತಿನ್ನಲಾರದ ಈ ಸಸ್ಯ ಪಾರ್ಥೇನಿಯಂ ಪೈಪೋಟಿಯನ್ನು ಯಶಸ್ವಿಯಾಗಿ ತಾಳುತ್ತದೆ.

ಹೆಸರು ತಗಸೆಯನ್ನು ಬೆಳೆಯುವ ವಿಧಾನ:

ಅ) ಬೀಜೋತ್ಪಾದನೆಯ ಸಲುವಾಗಿ: ಈ ಸಸ್ಯವನ್ನು ಬೆಳೆಸುವುದು ಸುಲಭದ ಕೆಲಸ. ಬೀಜೋತ್ಪಾದನೆಯ ಸಲುವಾಗಿ ಬೇರೆ ಬೆಳೆಗಳಿಗೆ ತಯಾರಿಸುವಂತೆಯೇ ಭೂಮಿಯನ್ನು ತಯಾರಿಸಬೇಕು. ಸುಮಾರು ೨೦ ಸೆ.ಮೀ. ಅಂತರ ೨-೪ ಸೆ.ಮೀ. ಆಳದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ೮-೧೦ ಸೆ.ಮೀ. ದೂರದಲ್ಲಿ ಉಪಚರಿಸಿದ ಬೀಜಗಳನ್ನು ಕೂರಿಗೆಯಿಂದ ಬಿತ್ತಬೇಕು. ಇದಕ್ಕೆ ಬೇಕಾಗುವ ಆಳು ಮತ್ತು ಉಪಕರಣಗಳಿಲ್ಲದಿದ್ದಲ್ಲಿ ರಾಗಿ ಅಥವಾ ಎಳ್ಳುಗಳಂತೆ ಎರಚಿ ಬಿತ್ತನೆ ಮಾಡಬಹುದು. ಎಕರೆಗೆ ಸುಮಾರು ೫ ರಿಂದ ೮ ಕಿ.ಗ್ರಾಂ ಬೀಜ ಬೇಕಾಗುತ್ತದೆ. ಮಳೆಗಾಲದ ಆರಂಭಕ್ಕೆ ಅಂದರೆ ಜೂನ್ ತಿಂಗಳ ಮೊದಲ ಭಾಗದಲ್ಲಿ ಬಿತ್ತಿದರೆ ನೀರಾವರಿ ಅವಶ್ಯಕತೆ ಇಲ್ಲ. ಬೇರೆ ಸಮಯದಲ್ಲಿ ಅವಶ್ಯವೆನಿಸಿದರೆ ನೀರು ಕೊಡಬಹುದು. ಬಿತ್ತನೆ ಮಾಡಿದ ೧೨೦ ದಿನಗಳ ನಂತರ ಪ್ರತಿ ೧೫ ದಿನಗಳಿಗೊಂದಾವರ್ತಿ ಕಾಯಿ ಸಂಗ್ರಹಿಸಬಹುದು. ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದರೆ ೧೫೦-೧೬೦ ದಿನಗಳ ಅವಧಿಯ ಬೆಳೆಯನ್ನು ಬುಡದ ಹತ್ತಿರ ಕತ್ತಿರಿಸಿ, ಒಣಗಿಸಿ ಇಡೀ ಗಿಡದಿಂದ ಕಾಯಿಗಳನ್ನು ಬಡಿದು ಬೇರ್ಪಡಿಸಿ ಬೀಜ ಸಂಗ್ರಹಿಸಬಹುದು.

ಆ) ಪಾರ್ಥೇನಿಯಂ ಹತೋಟಿಯ ಸಲುವಾಗಿ: ಮಳೆಗಾಲದ ಮೊದಲನೆಯ ಮಳೆಗಿಂತ ಮುಂಚೆ ಅಥವಾ ಮಳೆಯಾದ ಒಂದು ದಿನದ ನಂತರ ಪಾರ್ಥೇನಿಯಂ ಆವರಿತ ಸ್ಥಳದಲ್ಲಿ ೧೦ ರಿಂದ ೧೫ ಸೆ.ಮೀ. ಅಂತರದ ೨-೪ ಸೆ.ಮೀ. ಆಳದ ಸಾಲುಗಳಲ್ಲಿ ಸಸಿಯಿಂದ ಸಸಿಗೆ ಸುಮಾರು ಸೆ.ಮೀ. ಅಂತರವಿರುವಂತೆ ಉಪಚರಿಸಿದ ಬೀಜಗಳನ್ನು ಬಿತ್ತಬೇಕು. ಈ ಮೊದಲೇ ಹುಟ್ಟಿಕೊಂಡಿರುವ ಪಾರ್ಥೇನಿಯಂ ಅನ್ನು ತೆಗೆಯಬೇಕು. ಹೆಸರು ತಗಸೆ ಸಸ್ಯವು ಮೊದಲು ಪಾರ್ಥೇನಿಯಂ ಜೊತೆಗೆ ಬೆಳೆದು ನಿಲ್ಲುತ್ತದೆ. ಈ ತಗಸೆಯಿಂದ ಬೀಜಗಳನ್ನು ಸಂಗ್ರಹಿಸದೆ ಹಾಗೆ ಬಿಡುವುದು ಉತ್ತಮ. ಮೊದಲ ವರ್ಷದ ಸಸ್ಯಗಳಿಂದ ಉತ್ಪಾದಿತ ಕಾಯಿಗಳು ತಾವಾಗಿಯೇ ಉದುರಿ, ಆ ಜಾಗದಲ್ಲಿ ಮಣ್ಣಿನಲ್ಲಿ ಸೇರಿಕೊಂಡಿರುತ್ತವೆ. ಕ್ರಮೇಣ ಬೀಜದ ಸುಪ್ತಾವಸ್ಥೆ ನೈಸರ್ಗಿಕವಾಗಿ ಮುರಿದು, ಮುಂದಿನ ಮಳೆಗಾಲದಲ್ಲಿ ಬೀಜಗಳು ಮೊಳೆತು ಬೆಳೆಯುತ್ತವೆ. ಪ್ರತಿವರ್ಷವೂ ಈ ಕ್ರಿಯೆ ನಡೆಯುತ್ತಲೇ ಇರುತ್ತದೆ. ಎರಡನೆಯ ವರ್ಷ ಬರಬಹುದಾದ ಕೆಲವು ಪಾರ್ಥೇನಿಯಂ ಸಸ್ಯಗಳನ್ನು ಕಿತ್ತು ಹಾಕಿ ಹೆಸರು ತಗಸೆ ಸಸ್ಯ ಬೆಳೆಯಲು ಅವಕಾಶ ಕಲ್ಪಿಸಿದಲ್ಲಿ ಪಾರ್ಥೇನಿಯಂ ನಿಯಂತ್ರಣವನ್ನು ತ್ವರಿತಗೊಳಿಸಬಹುದು.

ಜೈವಿಕ ವಿಧಾನದ ಅನುಕೂಲಗಳು:

ಪಾರ್ಥೇನಿಯಂಗೆ ಹೋಲಿಸಿದರೆ ಹೆಸರು ತಗಸೆ ಅತ್ಯಲ್ಪ ಪ್ರಮಾಣದಲ್ಲಿ ಹಾಗೂ ವರ್ಷದ ಕೆಲವೇ ತಿಂಗಳುಗಳಲ್ಲಿ ಹೂ ಬಿಡುತ್ತದೆ. ಇದರ ಎಲೆಗಳಿಂದ ಹಸಿರು ಗೊಬ್ಬರ ತಯಾರಿಸಬಹುದು. ಒಣಗಿದ ಕಾಂಡ ಉಪಯುಕ್ತವಾದ ಉರುವಲಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಿನ ಲಾಭವೆಂದರೆ ಬೇರೆ ವಿಧಾನಗಳಿಂದ ಸಾಧಿಸಲಾರದಂತಹ ಪಾರ್ಥೇನಿಯಂ ಹತೋಟಿಯನ್ನು ಈ ಕ್ರಮದಿಂದ ಸುಲಭವಾಗಿ ಸಾಧಿಸಬಹುದು.

ಈ ಸಸ್ಯವು ಮುಂದೆ ಪಾರ್ಥೇನಿಯಂನಂತೆ ಒಂದು ದೊಡ್ಡ ಪಿಡುಗಾಗಬಹುದೇನೋ ಎಂದು ಭಯಪಡುವ ಕಾರಣವಿಲ್ಲ. ಹೆಚ್ಚು ತೂಕವಿರುವ ಈ ಸಸ್ಯದ ಬೀಜಗಳು ಪಾರ್ಥೇನಿಯಂ ಬೀಜಗಳಂತೆ ಗಾಳಿಯಿಂದ ಪ್ರಸಾರವಾಗುವುದಿಲ್ಲ. ಮಳೆಯ ನೀರಿನ ಜೊತೆಗೆ ಹಾಗೂ ವಾಹನಗಳ ಚಕ್ರಗಳಿಗೆ ಅಂಟಿಕೊಂಡು ಪ್ರಸಾರವಾಗುವ ಈ ಸಸ್ಯವನ್ನು ಬೆಳವಣಿಗೆಯ ಯಾವ ಹಂತದಲ್ಲಾದರೂ ಬರೀ ಕೈಯಿಂದಲೇ ಕಿತ್ತು ನಿಯಂತ್ರಿಸಬಹುದು.

ವ್ಯವಸಾಯ ಯೋಗ್ಯ ಜಮೀನುಗಳಲ್ಲಿ ರೈತರು ಸ್ವಲ್ಪ ಮಟ್ಟಿಗಾದರೂ ಪಾರ್ಥೇನಿಯಂ ಅನ್ನು ನಿಯಂತ್ರಿಸುತ್ತಾರೆ. ಆದರೆ ಪಾಳುಬಿದ್ದ ಜಮೀನು, ರಸ್ತೆಯ ಬದಿಗಳು, ಗೋಮಾಳ ಮುಂತಾದ ಪ್ರದೇಶಗಳಲ್ಲಿ ಪಾರ್ಥೇನಿಯಂ ನಿಯಂತ್ರಣ ಅಷ್ಟಾಗಿ ಆಗುವುದಿಲ್ಲ. ಇದಕ್ಕೆ ಸುಲಭ ಉಪಾಯವೆಂದರೆ ಕ್ಯಾಸಿಯಾ ಬೆಳೆಯವುದು.

ಕ್ಯಾಸಿಯಾ ಗಿಡವು ರಾಜ್ಯದ ಬಿಜಾಪುರ, ಬೆಳಗಾವಿ, ಧಾರವಾಡ, ಬಳ್ಳಾರಿ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಬೆಳೆಯುತ್ತಿರುವುದರಿಂದ ಈ ಸಸ್ಯ ಮಳೆ ಹೆಚ್ಚಿರುವ ಪ್ರದೇಶಗಳಲ್ಲೂ ಹಾಗೂ ಒಣಹವೆಯ ಪ್ರದೇಶಗಳಲ್ಲಿಯೂ ದೃಡವಾಗಿ ಬೆಳೆಯಬಲ್ಲದೆಂಬುದು ಬಹುಮುಖ್ಯ ಅಂಶ. ಈ ಸಸ್ಯದ ಪ್ರಸರಣ ಕಾರ್ಯ ನಿಸರ್ಗದಲ್ಲಿ ಬಹಳ ನಿಧಾನವಾಗೇ ಇರುವುದರಿಂದ ಕೃತಕವಾಗಿ ಇದರ ಪ್ರಸರಣವನ್ನು ಹೆಚ್ಚಿಸಿ, ಆದಷ್ಟು ಬೇಗನೆ ಪಾರ್ಥೇನಿಯಂ ಅನ್ನು ಸುಲಭವಾಗಿ ನಿಯಂತ್ರಿಸಬಹುದು.