ಬೀಜವೆಂದರೆ ತಕ್ಷಣ ಜ್ಞಾಪಕಕ್ಕೆ ಬರುವುದು ಯಾವುದಾದರೊಂದು ಕಾಳು. ಆದರೆ ನಿಜವಾದ ಅರ್ಥದಲ್ಲಿ ಕಾಳು, ಕಾಂಡ, ಎಲೆ ಹೂವಿನ ಒಂದು ಭಾಗ, ಅಂದರೆ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಕಾರಣವಾಗುವ ಒಂದು ಮಾಧ್ಯಮ ಮುಂತಾದವುಗಳನ್ನು ಬೀಜವೆನ್ನಬಹುದು.

ಅಂಡಾಣು, ಪರಾಗರೋಣು ಇವುಗಳು (ಸಂಯೋಜನೆಯಿಂದ) ಕರಾಡಿ ತಾಯಿ ಸಸ್ಯದ ಮೇಲೆ ಬೆಳೆದು ಬರುವ ಕಾಳು ಯೋಗ್ಯ ಸ್ಥಿತಿಗಳು (ನೀರು, ಗಾಳಿ, ಶಾಖ) ದೊರಕಿದಾಗ ಮೊಳೆಯುವ ಗುಣ ಹೊಂದಿದ್ದರೆ, ಅದಕ್ಕೆ ಬೀಜವೆಂಬುದು ಸಾಮಾನ್ಯವಾಗಿ ಬಳಕೆಯಲ್ಲಿದೆ. ಬೀಜವೆಲ್ಲಾ ಧಾನ್ಯವಾಗಬಹುದು. ಆದರೆ ಕಾಳೆಲ್ಲಾ ಬೀಜವಾಗಲಾರದು.

ಕೃಷಿ ಫಸಲಿಗೆ ಅನೇಕ ಸಾಮಾಗ್ರಿಗಳು ಬೇಕು. ಅದರಲ್ಲಿ ಅತ್ಯಂತ ಮುಖ್ಯವಾದುದು ಬೀಜ. ಅತ್ಯಂತ ಅಗ್ಗವಾದ ಮುಖ್ಯವಾದುದು ಬೀಜ. ಬೀಜ ಕೆಟ್ಟರೆ ಬೇರೆ ಯಾವ ರೀತಿಯಿಂದಲೂ ಬೆಳೆಯು ಸುಧಾರಿಸುವಂತೆ ಮಾಡಲು ಸಾಧ್ಯವಾಗುವುದಿಲ್ಲ. ಬೇರೆ ಎಲ್ಲಾ ರೀತಿಯ ಖರ್ಚು ವ್ಯರ್ಥವೆನ್ನಬಹುದು. ಬೀಜ ಚೆನ್ನಾಗಿದ್ದರೂ ಸಹ ತಳಿಯ ಆಯ್ಕೆಯಲ್ಲಿ ಎಡವಿದರೆ ಮತ್ತೇ ಸುಧಾರಿಸಿಕೊಳ್ಳುವ ಮಾರ್ಗವಿಲ್ಲ.

ಶುದ್ಧವಾದ ಬೀಜ ಉಪಯೋಗಿಸದಿದ್ದಲ್ಲಿ, ತಳೀಕರಣ ಮತ್ತು ಇತರ ಜ್ಞಾನ ಸಂಪಾದನೆಯೆಲ್ಲಾ ವ್ಯರ್ಥವಾಗುತ್ತದೆ. ಎಲ್ಲರಿಗೂ ಪರಿಷ್ಕೃತ ಬೀಜ ದೊರಕಿಸಬೇಕೆಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ವಿಶ್ವ ಆಹಾರ ಯೋಜನೆಗಳೆಲ್ಲಾ ಪ್ರಯತ್ನಿಸುತ್ತಾ ಇವೆ. ಆದರೆ ಅಂತಹ ಒಂದು ಸುದಿನ ಬರಲು ಇನ್ನು ಅನೇಕ ದಶಕಗಳೇ ಬೇಕಾಗುತ್ತದೆ. ಅಲ್ಲಿಯ ತನಕ ರೈತರು ತಮಗೆ ಬೇಕಾದ ಬೀಜವನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಅವರವರೇ ಬೆಳೆದುಕೊಂಡರೆ ಕಡಿಮೆ ಖರ್ಚಿನಿಂದ ಹೆಚ್ಚು ಉತ್ಪಾದನೆ ಸಾಧಿಸಬಹುದು.

ಉತ್ತಮ ಬೀಜದ ಗುಣಗಳು:

೧. ಬೀಜವು ಸೂಕ್ತ ತಳಿಗೆ ಸೇರಿದ್ದಾಗಿರಬೇಕು.

೨. ತಳಿಯಲ್ಲಿರುವ ಉತ್ತಮ ಗುಣಗಳಿಗೆ ಕಾರಣವಾದ ವಂಶವಾರುಗಳು ಸುರಕ್ಷಿತವಾಗಿರಬೇಕು. (Genetic Purity Maintained).

೩. ಬೀಜವು ಚೆನ್ನಾಗಿ ತುಂಬಿ ದೃಢಕಾಯವಾಗಿರಬೇಕು.

೪. ಬೀಜವು ಬೆರಕೆಯಿಂದ ಹೊರತಾಗಿರಬೇಕು.

೫. ರೋಗ, ನಂಜು, ಕೀಟಗಳು ಸೋಂಕಿನಿಂದ ಹೊರತಾಗಿರಬೇಕು.

೬. ಮೊಳಕೆ ಬರುವ ಪ್ರಮಾಣ ತೃಪ್ತಿಕರವಾಗಿರಬೇಕು.

೭. ಬೀಜೋಪಚಾರವಾಗಿರಬೇಕು. (ಔಷಧಿ, ಕಾವು ಇತ್ಯಾದಿ).

೮. ಕಾಳಿನ ಸುಪ್ತಾವಸ್ಥೆ ಅಂತ್ಯಗೊಂಡಿರಬೇಕು. ಪರಿಷ್ಕೃತ ತಾಯಿ ಹಾಗೂ ಮೂಲ ಬೀಜಗಳಲ್ಲಿ ಮೇಲ್ಕಂಡ ಗುಣಗಳು ಅಡಕವಾಗಿರುತ್ತದೆ ಎನ್ನಬಹುದು.

ಉತ್ತಮ ಬೀಜದಿಂದ ಪ್ರಯೋಜನಗಳು

೧. ಬೆಳೆಯುವ ಪೈರಿಗೆ ಬೀಜದಿಂದ ಹೆಚ್ಚು ಆಹಾರ ಲಭಿಸುತ್ತದೆ.

೨. ಸಸಿಗಳು ಹೆಚ್ಚು ತೂಕ ಮತ್ತು ಬೇರು ಹೊಂದಿ ದೃಢಕಾಯವಾಗಿರುತ್ತದೆ.

೩. ಅಹಿತ ವಾತಾವರಣಗಳನ್ನು (ನೆರೆ, ಬರ ಉಷ್ಣ, ಚಳಿ) ಸಹಿಸಬಲ್ಲವು.

೪. ರೋಗ, ನಂಜು, ಕೀಟ ತಗಲುವ ಸಾಧ್ಯತೆ ಕಡಿಮೆ.

೫. ಫಸಲು ಒಮ್ಮಟ್ಟಕ್ಕೆ ಬೆಳೆದು ಒಮದೇ ಸಲ ಕೊಯ್ಲಿಗೆ ಬರುತ್ತದೆ. ಕೊಯ್ಲು ನಂತರದ ನಷ್ಟ ಕಡಿಮೆಯಾಗುತ್ತದೆ.

೬. ಹೆಚ್ಚು ಇಳುವರಿ ಸಿಗುತ್ತದೆ.

೭. ಧಾನ್ಯ/ಬೀಜಕ್ಕೆ ಹೆಚ್ಚು ಬೆಲೆ ಸಿಗುತ್ತದೆ.

೮. ನಿವ್ವಳ ಆದಾಯ ಹೆಚ್ಚಾಗಿರುತ್ತದೆ.

ಕಳಪೆ ದರ್ಜೆ ಬೀಜದಿಂದಾಗುವ ಪರಿಣಾಮ

. ಕಡಿಮೆ ಮೊಳಕೆಯಿಂದ: ಬೆಳೆಯು ವಿರಳವಾಗಿದ್ದು, ಕಡಿಮೆ ಇಳುವರಿಗೆ ಕಾರಣವಾಗಿ, ಕಳೆಗಳಿಗೆ ಹೆಚ್ಚು ಆಸ್ಪದ ಕೊಟ್ಟಂತಾಗುತ್ತದೆ. ಸಸಿ ಹೂವು ಬಿಡುವುದು ಮತ್ತು ಕೊಯ್ಲಿಗೆ ಬರುವುದರಲ್ಲಿ ಹಿಂದೆ ಮುಂದೆ ಆಗಿ ನಷ್ಟ ಸಂಭವಿಸುತ್ತದೆ.

. ಬೆರಕೆಯಿಂದ: ಬೆರಕೆಯನ್ನು ತಾಕಿನಿಂದ ತೆಗೆದಾಗ ಸಸ್ಯಗಳ ಸಂಖ್ಯೆ ಕಡಿಮೆಯಾಗಿ ಇಳುವರಿ ಕುಗ್ಗುತ್ತದೆ. ತೆಗೆಯದಿದ್ದ ಕಾಳು ಬೆರಕೆಯಾಗುತ್ತದೆ. ಫಸಲು ಒಮ್ಮಟ್ಟಕ್ಕೆ ಬರುವುದಿಲ್ಲ. ರೋಗ ರುಜಿನಗಳಿಗೆ ಹೆಚ್ಚು ಅವಕಾಶ ಕಲ್ಪಿಸಿದಂತಾಗುತ್ತದೆ. ಇಳುವರಿ ಕುಗ್ಗುತ್ತದೆ. ಮುಂದಿನ ಬೆಳಗು ತೊಂದರೆಯಾಗುತ್ತದೆ.

. ಬೀಜೋಪಚಾರವಿಲ್ಲದಾಗ: ರೋಗ, ನಂಜು, ಕೀಟಗಳು ಜಾಸ್ತಿಯಾಗಿ ಬೆಳೆಯು ಕೈಗೂಡದಿರಬಹುದು ಅಥವಾ ಸಸ್ಯ ಸಂರಕ್ಷಣೆಗೆ ಮಿತಿ ಮೀರಿ ಖರ್ಚು ಮಾಡಬೇಕಾಗಿ ಬರುತ್ತದೆ. ಕೆಲವು ಸಂದರ್ಭಗಳಲ್ಲಿ ಸಸ್ಯ ಸಂರಕ್ಷಣಾ ಸಾಮಾಗ್ರಿಗಳು ಅಥವಾ ಅವುಗಳನ್ನು ಬಳಸುವ ಸಾಧನಗಳು ದೊರೆಯದೆ ಫಸಲು ನಾಶವಾಗಬಹುದು. ಕಾವು (incubation) ಸಾಲದೆ ಹೋದಾಗ ಎಲೆ ಕವಚ ಉದ್ದವಾಗಿ ಸಸ್ಯವು ದುರ್ಬಲಗೊಳ್ಳುತ್ತ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

. ತಳಿಯ ಆಯ್ಕೆ ತಪ್ಪಾದಾಗ: ಫಸಲು ಸಂಪೂರ್ಣ ನಾಶವಾಗಬಹುದು. ಅಥವಾ ಬೆಳೆಯು ಹೂ ಬಿಡದೆ ನಾಶವಾಗಬಹುದು. ಅಥವಾ ಬೆಳೆಯು ಹೂ ಬಿಡದೆ ಹೋಗಬಹುದು. ಮಣ್ಣು ಅಥವಾ ಹವಾಗುಣಕ್ಕೆ ಹೊಂದದ ತಳಿಯಾಗಿರಬಹುದು. ಅವಧಿಯಲ್ಲಿ ಹೆಚ್ಚು ಕಡಿಮೆಯಾಗಿ ಫಸಲು ಯೋಜನೆ ನಿರ್ವಹಿಸಲು ಅಡ್ಡಿಯಾಗಬಹುದು.

ಬೀಜದ ವರ್ಗಗಳು ಮತ್ತು ಉತ್ಪಾದನೆ:

೧. ದೈಹಿಕ ಸಂತಾನೋತ್ಪತ್ತ(sexual)ಯಾಗಿ ಉತ್ಪಾದಿಸಿದ ಬೀಜಗಳಲ್ಲಿ ಅನುವಂಶಿಕ ಗುಣಗಳು ದುರ್ಬಲಗೊಳ್ಳಬಹುದು. ಇದಕ್ಕೆ ಮುಂಜಾಗ್ರತೆ ವಹಿಸಬೇಕು.

೨. ವಾರ್ದಿಕ ಸಂತಾನೋತ್ಪತ್ತಿ: ವಾರ್ದಿಕ ಸಂತಾನೋತ್ಪತ್ತಿಯಲ್ಲಿ ಅನುವಂಶಿಕ ಗುಣಗಳು ಬದಲಾವಣೆ ಹೊಂದುವುದಿಲ್ಲ. ಆದರೆ ರೋಗ, ಕೀಟ, ನಂಜು ಇವುಗಳ ಸೋಂಕು ಸುಲಭವಾಗಿ ಮುಂದಿನ ಸಂತತಿಗೆ ಹೋಗಬಹುದು. ಆದ್ದರಿಂದ ಅದಕ್ಕೆ ತಕ್ಕ ಮುನ್ನೆಚ್ಚರಿಕೆ ವಹಿಸಬೇಕು. ದೈಹಿಕ ಸಂತಾನೋತ್ಪತ್ತಿಯಲ್ಲಿ ಎರಡು ವಿಧಗಳಿವೆ.

ಅ) ಶಕ್ತಿಮಾನ್ ಬೀಜೋತ್ಪಾದನೆ: ತಾಂತ್ರಿಕ ಸಲಹೆ ದೊರೆಯದಿದ್ದಲ್ಲಿ ರೈತರಿಗೆ ಕಷ್ಟ.

ಆ) ಸಾಧಾರಣ ಬೀಜೋತ್ಪಾದನೆ: ಇದು ರೈತರಿಗೆ ಸುಲಭ.

ರೈತರಿಗೆ ಬೇಕಾಗುವ ಬೀಜವನ್ನು ರೈತರೇ ಉತ್ಪಾದಿಸಿಕೊಳ್ಳಲು ಸಾಧ್ಯವೇ?

ಬತ್ತ, ರಾಗಿ ಮುಂತಾದ ಸ್ವಪರಾಗಕ್ರಿಯೆಗೊಳಪಟ್ಟ ಫಸಲುಗಳಲ್ಲಿ ಸಾಧಾರಣ ತಳಿಗಳ ಬೀಜವನ್ನು ರೈತರೇ ಉತ್ಪಾದಿಸಿಕೊಳ್ಳಲು ಸಾಧ್ಯ. ಇದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಬೀಜವನ್ನು ಸಂಪಾದಿಸಿದಂತಾಗುತ್ತದೆ. ರೈತರು ಇಂತಹ ಒಂದು ಯೋಜನೆಯನ್ನು ಹಾಕಿಕೊಂಡರೆ ಕೆಳಕಂಡ ಕ್ರಮಗಳು ಸಹಕಾರಿಯಾಗಬಹುದು.

೧. ಮೂಲ ತಾಯಿ ಬೀಜವನ್ನು ಸಂಶೋಧನಾ ಕೇಂದ್ರಗಳಿಂದ ಪಡೆಯಬೇಕು.

೨. ಬಿತ್ತನೆಯನ್ನು ಸಕಾಲದಲ್ಲಿ ಮಾಡಬೇಕು.

೩. ಉತ್ಪಾದನಾ ತಾಕಿನಲ್ಲಿ ಅದೇ ಫಸಲನ್ನು ಹಿಂದೆ ಬೆಳೆದಿರಬಾರದು. ಆಕಸ್ಮಾತ್ ಬೆಳೆದಿದ್ದು, ಬೇರೆ ತಾಕು ಸಿಗದಿದ್ದಲ್ಲಿ, ಆ ತಾಕನ್ನು ನೀರು ಹಾಯಿಸಿ ಅಲ್ಲಿರಬಹುದಾದ ಬೀಜಗಳನ್ನು ಮೊಳಕೆ ಬರುವಂತೆ ಮಾಡಿ, ಉತ್ತು, ಸಸಿಗಳನ್ನು ನಾಶಪಡಿಸಬೇಕು.

೪. ಬೇರೆ ತಳಿಯಿಂದ ಪರ ಪರಾಗಸ್ಪರ್ಶವಾಗದಷ್ಟು ಅಂತರದಲ್ಲಿ ಬೀಜೋತ್ಪಾದನಾ ತಾಕನ್ನು ನಿರ್ಧರಿಸಬೇಕು.

04_262_ML-KUH

೫. ನೀರು, ಗೊಬ್ಬರ, ಸಸ್ಯ ಸಂರಕ್ಷಣೆ ಶಿಫಾರಸ್ಸಿನಲ್ಲಿರುವಂತೆ ಕೊಡಬೇಕು.

೬. ಬೆರಕೆ ಸಸ್ಯ/ತಳಿಗಳನ್ನು ಆದಿಯಿಂದ ಕೊಯ್ಲಿನವರೆಗೂ ತೆಗೆದು ನಾಶಪಡಿಸುತ್ತಿರಬೇಕು.

೭. ಕಳೆಗಳಿಗೆ ಅವಕಾಶ ಕೊಡಬಾರದು.

೮. ಸಕಾಲದಲ್ಲಿ ಕೊಯ್ಲು ಮಾಡಿ, ಕಾಳು ಒಡೆಯದಂತೆ ಒಕ್ಕಣೆ ಮಾಡಿ, ಚೆನ್ನಾಗಿ ಒಣಗಿಸಿ, ಬಿಡಿಸಿದ ಕಾಳನ್ನು ನಿರ್ದಿಷ್ಟ ತೇವಾಂಶಕ್ಕೆ ಬರುವವರೆಗೆ ಒಣಗಿಸಬೇಕು. (ಬತ್ತ, ರಾಗಿ, ಗೋಧಿ, ಸಜ್ಜೆ, ಜೋಳ ಇತ್ಯಾದ ೧೨% ದ್ವಿದಳ ಧಾನ್ಯಗಳು ೯%, ಎಣ್ಣೆ ಕಾಳುಗಳು ೯%, ತರಕಾರಿ ಬೀಜಗಳು ೭%).

೯. ಈ ರೀತಿ ಒಣಗಿದ ಬೀಜವನ್ನು ಸೂಕ್ತ ಕ್ರಿಮಿ/ಶಿಲೀಂದ್ರ ನಾಶಕಗಳಿಂದ ಉಪಚರಿಸಿ ದಾಸ್ತಾನು ಮಾಡಬೇಕು.

೧೦. ದಾಸ್ತಾನುವಿನಲ್ಲಿ ಹೆಚ್ಚು ಶಾಖ, ಶೀತವಿಲ್ಲದೆ ಸಮತೋಲನ ವಾತಾವರಣವನ್ನು ಕಲ್ಪಿಸಬೇಕು ಮತ್ತು ಇಲಿ, ಹೆಗ್ಗಣ ಮತ್ತು ಇತರೇ ಕೀಟಗಳ ಹಾವಳಿಯಿಂದ ಕಾಪಾಡಬೇಕು.

೧೧. ಒಂದಕ್ಕಿಂತ ಹೆಚ್ಚಿನ ತಳಿಗಳ ಬೀಜಗಳನ್ನು ಒಂದೇ ಕಡೆ ದಾಸ್ತಾನು ಮಾಡಿದ್ದಲ್ಲಿ, ಗುರುತಿನ ಚೀಟಿಗಳನ್ನು ಅಂಟಿಸಿ, ಇವುಗಳನ್ನು ಕಳೆದು ಹೋಗದಂತೆ ನೋಡಿಕೊಳ್ಳಬೇಕು.

೧೨. ಮೇಲ್ಕಂಡ ಯಾವುದೇ ಹಂತದಲ್ಲಿ ಬೆರಕೆ ಸೇರದಂತೆ ಎಚ್ಚರಿಕೆ ವಹಿಸಬೇಕು.

ಒಮ್ಮೆ ತಂದ ಪರಿಷ್ಕೃತ/ಮೂಲ/ತಾಯಿ ಬೀಜವನ್ನು ಎಷ್ಟು ಸಾರಿ ಬಿತ್ತನೆ ಮಾಡಬಹುದು?

ಇದು ಬೀಜದ ಶುದ್ಧತೆಯನ್ನು ಕಾಪಾಡಿಕೊಳ್ಳುವುದರ ಮೇಲೆ ಹೋಗುತ್ತದೆ. ಸಂಶೋಧನಾ ಕೇಂದ್ರದಿಂದ ತಂದ ಮೂಲ/ತಾಯಿ ಬೀಜವನ್ನು ಬೀಜೋತ್ಪಾದನಾ ಕ್ರಮಗಳನ್ನು ಅನುಸರಿಸದಿದ್ದಲ್ಲಿ ೨-೩ ಬೆಳೆಗಳು ತೆಗೆಯುವುದರೊಳಗಾಗಿ ಬೀಜವು ತಳಿಯ ಗುಣಗಳನ್ನು ಕಳೆದುಕೊಳ್ಳುತ್ತದೆ.

ಶಕ್ತಿಮಾನ್ ಬೀಜ, ಸಾಧಾರಣ ಬೀಜ ಇವೆರಡಕ್ಕೂ ಇರುವ ವ್ಯತ್ಯಾಸವೇನು?

ಶಕ್ತಿಮಾನ್ ಬೀಜೋತ್ಪಾದನೆಯಲ್ಲಿ ಹೆಣ್ಣು ಮತ್ತು ಗಂಡು ತಳಿಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಅಕ್ಕ ಪಕ್ಕದಲ್ಲಿ ಬೆಳೆದು ಹೆಣ್ಣು ಸಸ್ಯಗಳ ಮೇಲೆ ಅಭಿವೃದ್ಧಿಗೊಳಿಸಿ ಉತ್ಪಾದಿಸಲಾಗುತ್ತದೆ. ಇದು ಶಕ್ತಿಮಾನ್ ತಳಿ/ತಳಿಗಳಿಗೆ ಮಾತ್ರ ಅವಶ್ಯಕ. ಇಂತಹ ಬೀಜವನ್ನು ಒಮ್ಮೆ ಮಾತ್ರ ಉಪಯೋಗಿಸಲು ಸಾಧ್ಯ. ಆದರೆ ಸಾಧಾರಣ ತಳಿಗಳ ಬೀಜವನ್ನು ಒಮ್ಮೆ ಉತ್ಪಾದಿಸಿ, ಶುದ್ಧತೆ ಕಾಪಾಡಿಕೊಂಡರೆ ೩-೬ ಬೆಳೆಗಳವರೆಗೂ ಉಪಯೋಗಿಸಬಹುದು. ಇದರ ಬಗ್ಗೆ ಆಗಲೇ ಮಾಹಿತಿ ನೀಡಲಾಗಿದೆ.