ಇದಕ್ಕೆ ನೀವು ಅಲ್ಪಾವಧಿಯ ಕಲ್ಪವೃಕ್ಷ ಎನ್ನಬಹುದು. ನೋಡಲು ಇದು ಥೇಟ್ ಬತ್ತದ ಸಸಿಯ ಹಾಗೆ ಕಾಣುತ್ತದೆ. ಕೆಸರು ತುಂಬಿದ ಚೌಗು ನೆಲದಲ್ಲಿ ಬೆಳೆಸಿದರೆ ಇದು ಜೊಂಡು ಹುಲ್ಲಿನಲ್ಲಿಯೇ ದರ್ಭೆಯ ಕಂತೆಯಂತೆಯೇ ಕಾಣುತ್ತದೆ. ಸೊಂಪಾಗಿ ಬೆಳೆದರೆ ಒಂದಾಳೆತ್ತರ ನಿಲ್ಲುತ್ತದೆ. ಬತ್ತದ ಅಥವಾ ಜೋಳದ ಗಿಡದ ಹಾಗೆ ವರ್ಷಕ್ಕೆ ಒಮ್ಮೆ ಹೂಗೊಂಚಲ ತೆನೆ ಬಿಡುತ್ತದೆ. ಆದರೆ ಕಾಳು ಕಟ್ಟುವುದಿಲ್ಲ.

ಇಲ್ಲಿದೆ ಸೃಷ್ಟಿ ವೈಚಿತ್ರ‍್ಯ ಕೀಟಗಳ ಮೂಲಕ ತೆನೆಗೆ ಪರಾಗ ಸ್ಪರ್ಶ ಆಗುವ ಬದಲು, ಈ ಸಸ್ಯದ ಮೇಲೆ ಒಂದು ಬಗೆಯ ಶಿಲೀಂದ್ರ ಬೂಷುಂ ಗಾಳಿಯ ಮೂಲಕ ಬಂದು ದಾಳಿ ಮಾಡುತ್ತದೆ. ತೆನೆ ಕಟ್ಟುವ ಬದಲು ಈ ಸಸ್ಯದ ಆಗಾರಾಂಶವೆಲ್ಲ ಒಂದೆಡೆ ಸೇರಿ ಕಾಂಡದ ಕೆಲವು ಗಿಣ್ಣುಗಳು ಊದಿಕೊಳ್ಳುತ್ತವೆ. ಅಷ್ಟು ಭಾಗ ಮಾತ್ರ ಕಬ್ಬಿನ ಹಾಗೆ ಅಥವಾ ಮುಸುಕಿನ ಜೋಳದ ಹಾಗೆ ಅಥವಾ ಕೇದಗೆ ಮೊಗ್ಗಿನ ಹಾಗೆ ಉಬ್ಬಿಕೊಳ್ಳುತ್ತದೆ.

09_262_ML-KUH

ಉಬ್ಬಿದ ಕಾಂಡವನ್ನು ಕತ್ತರಿಸಿ ತಂದು, ಎಲೆಗಳನ್ನು ಬೇರ್ಪಡಿಸಿ ಹೆಚ್ಚಿ ತರಕಾರಿಯ ಹಾಗೆ ಕುದಿ ನೀರಿನಲ್ಲೋ ಆವಿಯಲ್ಲೋ ಬೇಯಿಸಿ, ಉಪ್ಪು, ಖಾರ, ಇತರ ಸಾಂಬಾರ್ ಸಾಮಗ್ರಿ ಬೆರೆಸಿ, ಹುಳಿ, ಪಲ್ಯ ಏನಾದರೂ ಮಾಡಿ ಅಥವಾ ಸಣ್ಣಗೆ ಹಾಲು ಸಕ್ಕರೆ ಎಲಕ್ಕಿ ಲವಂಗ ಸೇರಿಸಿ ಸಿಹಿ ತಿಂಡಿ ಮಾಡಿ ರುಚಿಕರ ಹಾಗೂ ಪೌಷ್ಠಿಕ ಹೊಸ ಆಹಾರ ಇದು.

ಏಳು ವರ್ಷಗಳ ಹಿಂದೆ ಥಾಯ್‌ಲ್ಯಾಂಡ್‌ನ ಗದ್ದೆ ಬದುವಿನಲ್ಲಿ ಓಡಾಡುತ್ತಿದ್ದಾಗ ಈ ವಿಚಿತ್ರ ಸಸ್ಯ ನನ್ನ ಗಮನಕ್ಕೆ ಬಂತು. ಕೆಲಸಕ್ಕೆ ಬಾರದ ಗೊಡ್ಡು ಹುಲ್ಲಿನ ಸಸ್ಯ ಎಂದುಕೊಂಡೆ. ೧೯೮೧ರಲ್ಲಿ ಚೀನಾಕ್ಕೆ ಹೋದಾಗ, ಅಲ್ಲಿನ ಜನ ಇದೇ ಹುಲ್ಲಿನ ಕಾಂಡ ಭಾಗವನ್ನು ತರಕಾರಿಯಂತೆ ಬಳಸುವುದನ್ನು ಗಮನಿಸಿದೆ. ಇದನ್ನು ನಮ್ಮಲ್ಲೂ ಯಾಕೆ ಬೆಳೆಯಬಾರದು ಎಂದು ಅವರಿವರನ್ನು ಕೇಳಿದೆ. ತಳಿಯನ್ನು ತರಿಸಿಕೊಳ್ಳಲು ಯತ್ನಿಸಿದೆ. ನಮ್ಮಲ್ಲಿಲ್ಲದ ಸಹಸ್ರಾರು ಇತರ ಬಗೆಯ ಸಸ್ಯಗಳ ಕಡೆಗೂ ನಮ್ಮೆಲ್ಲರ ಗಮನ ಹಂಚಿಹೋಗಿದ್ದರಿಂದ ಹೇಗೋ ನನ್ನ ಆಸೆ ಕೈಗೂಡಿರಲಿಲ್ಲ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮತ್ತೆ ಚೀನಾಕ್ಕೆ ಹೋದಾಗ ನನ್ನ ಜೊತೆ ಕೃಷಿ ಇಲಾಖೆಯ ಕಮೀಷನರ್ ಡಾ. ಟಿ.ವಿ. ಸಂಪತ್ ಇದ್ದರು. ಜತೆಗೇ ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲ ಮಂಡಳಿಯ ನಿರ್ದೇಶನ ಡಾ. ಆರ್.ಎಸ್. ಪರೋಡ ಕೂಡ ಇದ್ದರು. ಮತ್ತೊಮ್ಮೆ ಈ ತರಕಾರಿ ಬತ್ತದಿಂದ ಮಾಡಿದ ತಿಂಡಿ ತಿನಿಸು ತಿನ್ನುವ ಯೋಗ ಬಂತು. ಈ ಅವಕಾಶ ನಾನು ಬಿಡಲಿಲ್ಲ. ತಿಂಡಿ ತಿಂದ ಇತರ ಅಧಿಕಾರಿಗಳೂ ಪ್ರಸನ್ನರಾಗಿ, ಹೇಗಾದರೂ ಈ ತಳಿಯನ್ನು ನನಗೆ ಖಂಡಿತ ರವಾನೆ ಮಾಡುವ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ಇತ್ತರು.

ಅಷ್ಟರೊಳಗಾಗಲೇ ನನಗೆ ಮಣಿಪುರದ ಸಂಶೋಧಕ ವಿದ್ಯಾರ್ಥಿಯೊಬ್ಬರ ಮೂಲಕ ಈ ಸಸ್ಯದ ಒಂದು ಪ್ರಭೇಧವನ್ನು ತರಿಸಿಕೊಳ್ಳಲು ಸಾಧ್ಯವಾಯಿತು. ಬೆಂಗಳೂರಿನ ನಮ್ಮ ಕೃಷಿ ವಿ.ವಿ. ಯಲ್ಲಿ ಇದು ಸೊಂಪಾಗಿ ಬೆಳೆದಿದೆ. ರಾಜ್ಯದ ಇತರ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ವಿಶೇಷವಾಗಿ ಬ್ರಹ್ಮಾವರ ಮಡಿಕೇರಿ, ಮೂಡಿಗೆರೆ ಹಾಗೂ ಮಂಡ್ಯದಲ್ಲಿ ಇದನ್ನು ಅಲ್ಲೆಲ್ಲ ಇದು ಯಶಸ್ವಿಯಾಗಿ ಬೆಳೆಯುವ ಬಗ್ಗೆ ಖಾತ್ರಿಯಿದೆ. ಅರಣ್ಯ ಇಲಾಖೆಯ ವಶದಲ್ಲಿರುವ ಅಡ್ಲು ಭೂಮಿಗಳಲ್ಲಿ ಇದನ್ನು ಕೆಸುವಿಗೆ ಹಾಗೆ ಬೆಳೆಯಲು ಬಿಡಬಹುದು.

ಬತ್ತ ಎಂದು ಹೇಳಿದರೂ ಇದು ಬತ್ತದ ಗುಂಪಿಗೆ ಸೇರಿದ ಸಸ್ಯವಲ್ಲ. ಬತ್ತಕ್ಕೆ ವೈಜ್ಞಾನಿಕ ಹೆಸರು “ಒರೈಸಾ ಸಟಯವಾ ಎಲ್” ಎಂದು ಇದ್ದರೆ, ಈ ತರಕಾರಿ ಬತ್ತಕ್ಕೆ “ಜೈಜೇನಿಯಾ ಸ್ಪೀಷಿಸ್”(Zizania spp) ಎನ್ನುತ್ತಾರೆ. ಇದರಲ್ಲೂ ನಾಲ್ಕು ಪ್ರಭೇದಗಳಿವೆ. ಅಮೆರಿಕಾದಲ್ಲಿ ಬೆಳೆಯುವ ಇದರ ಒಂದು ಪ್ರಭೇದ ತನ್ನ ತೆನೆಯಲ್ಲಿ ಕಾಳುಗಳನ್ನು ಬೆಳೆಸಿಕೊಳ್ಳುತ್ತದೆ. ಅಲ್ಲಿನ ರೈತರು ಇದನ್ನು ಬೀಜದ ಮೂಲಕವೇ ಪ್ರಸಾರ ಮಾಡುತ್ತಾರೆ. ರೆಡ್ ಇಂಡಿಯನ್ ಜನಾಂಗದವರು ಅನಾದಿ ಕಾಲದಿಂದಲೂ ಇದನ್ನು ಅಕ್ಕಿ ಕಾಳಿನ ಹಾಗೆ ಆಹಾರದಲ್ಲಿ ಬಳಸುತ್ತಿದ್ದಾರೆ.

ನಮ್ಮಲ್ಲಿಗೆ ಬಂದ ಪ್ರಭೇದಕ್ಕೆ ಕಾಳಿನ ತೆನೆ ಬಿಡುವ ಸಾಮರ್ಥ್ಯ ಇಲ್ಲ ಏಕೆಂದರೆ ತೆನೆಯಲ್ಲಿ ಗಂಡು ಹಾಗೂ ಹೆಣ್ಣು ಹೂಗಳು ಏಕಕಾಲದಲ್ಲಿ ಅರಳುವುದಿಲ್ಲ. ಹಾಗಾಗಿ ಪರಾಗ ಸ್ಪರ್ಶ ಆಗುವುದಿಲ್ಲ. ಅದು ತೆನೆಯ ದುರಾದೃಷ್ಟ ಇರಬಹುದು. ಆದರೆ ನಮಗೆ ಅದೇ ವರದಾನವಾಗಿದೆ. ಕಾಳಿನಲ್ಲಿ ಆಹಾರ ಶೇಖರಣೆ ಆಗುವ ಬದಲು ಗೆಣ್ಣಿನಲ್ಲೇ ಅದು ತಡೆಗಟ್ಟುತ್ತವೆ. ಅನ್ನಕ್ಕೆ ಆಗಬೇಕಾದುದು ಪಲ್ಯಕ್ಕೆ ಆಗುತ್ತದೆ.

ಸ್ವಾದದಲ್ಲಿ ಇದು ಸುಮಾರಾಗಿ ನವಿಲಕೋಸನ್ನು ಹೋಲುತ್ತದೆ. (ನವಿಲಕೋಸಿಗೆ ಮಲೆನಾಡಿನ ಕೆಲವು ಕಡೆ ನವಿಲಕೋಲು ಎನ್ನುತ್ತಾರೆ. ಮೂಲತಃ ಇದು ನೋಲ್ ಖೋಲ್ Knol khol ಎಂಬ ಪದದ ತದ್ಭವ) ಬೇಯಿಸಿದಾಗ ಈ ತರಕಾರಿ ಬತ್ತ ನವಿಲಕೋಸಿನಷ್ಟು ಮಿದುವಾಗುವುದಿಲ್ಲ ಆದರೆ ಇನಷ್ಟು ಸ್ವಾದಿಷ್ಟವಾಗುತ್ತದೆ.

ಈ ಸಸ್ಯದ ಸಂತನಾಭಿವೃದ್ಧಿ ಕೂಡ ಕಷ್ಟದ್ದೇನಲ್ಲ. ಇದರ ತೆಂಡೆಗಳನ್ನು ಅಂದರೆ ಬೇರಿನ ಬಳಿ ಮೂಡಿ ಬರುವ ಅಂಕುರಗಳನ್ನು ಚೌಗು ಪ್ರದೇಶದಲ್ಲಿ ಅಥವಾ ಕೆಸರು ಗುಂಡಿಯ ಅಂಚಿಗೆ ನೆಟ್ಟರೆ ಸಾಕು. ತಂತಾನೇ ಹಿಂಡಾಗಿ ಬೆಳೆಯುತ್ತದೆ. ಆದರೆ ಸುಧಾರಿತ ಕೃಷಿ ವಿಧಾನಗಳಿಂದ ಉತ್ತಮ ಮಟ್ಟದ ತರಕಾರಿ ಫಸಲಿಗೆಂದೇ ವ್ಯವಸ್ಥಿತವಾಗಿ ಇದನ್ನು ಬೇಸಾಯ ಮಾಡಲು ಸಾಧ್ಯವಿದೆ (ಅಂಕುರ ಸಿಗುವ ಸ್ಥಳ: ಬೀಜ ತಾಂತ್ರಿಕತೆ ವಿಭಾಗ, ಕೃಷಿ ವಿ.ವಿ. ಜಿ.ಕೆ.ವಿ.ಕೆ ಬೆಂಗಳೂರು) ಡಿಸೆಂಬರ್‌ನಿಂದ ಹಿಡಿದು ಜೂನ್‌ವರೆಗಿನ ಯಾವ ತಿಂಗಳಲ್ಲಿ ನೆಟ್ಟರೂ ಸುಲಭವಾಗಿ ಸಂಖ್ಯಾಭಿವೃದ್ಧಿ ಹೊಂದಬಲ್ಲ ಗುಣ ಈ ಸಸ್ಯಕ್ಕಿದೆ. ಇದರ ಮೇಲೆ ದಾಳಿ ಎಸಗಿ ಗಿಣ್ಣುವಿನಲ್ಲಿ ಆಹಾರ ಶೇಖರಣೆ ಆಗಲು ಕಾರಣವಾದ ಶಿಲೀಂಧ್ರವೂ ನಮ್ಮಲ್ಲಿ ಎಲ್ಲ ಕಡೆ ವ್ಯಾಪಕವಾಗಿದೆ.

ಮನೆಯ ಆಚೀಚಿನ ಕೊಚ್ಚೆ ಗುಂಡಿಯನ್ನು ಮುಚ್ಚಿ ಹಾಕಿ ಹಸಿರು ಶೋಭಿಸುವಂತೆ ಮಾಡಿ, ಪರಿಸರದ ಶುದ್ಧೀಕರಣಕ್ಕೆ ಸಹಾಯಕವಾಗುವ ಈ ಸಸ್ಯ ಎಲೆ ಕಾಂಡಗಳನ್ನು ಎಮ್ಮೆಗಳಂತೂ ಖುಷಿಯಿಂದ ತಿನ್ನುತ್ತವೆ. ಎಲೆ ಕಾಂಡಗಳನ್ನು ಕತ್ತರಿಸಿ ಒಣಗಿಸಿ ದನಗಳ ಮೇವಾಗಿ ಪರಿವರ್ತಿಸಲು ಸಾಧ್ಯವೋ ಎಂಬುದರ ಬಗ್ಗೆ ಪಶುವೈದ್ಯಕೀಯ ಕಾಲೇಜಿನಲ್ಲಿ ಪ್ರಯೋಗ ನಡೆಯಲಿಕ್ಕಿದೆ. ದನಗಳು ಇದನ್ನು ಮೆಚ್ಚಿಕೊಳ್ಳದಿದ್ದರೆ ನಷ್ಟವೇನೂ ಇಲ್ಲ ಬತ್ತ ಇನ್ನಷ್ಟು ಸೊಂಪಾಗಿ ಬೆಳೆದುಕೊಂಡಿರುತ್ತದೆ.

ಎಲ್ಲಕ್ಕಿಂತ ಮುಖ್ಯವೆಂದರೆ ನಮ್ಮ ರಾಜ್ಯವೆಂದರೆ ನಮ್ಮ ರಾಜ್ಯದಲ್ಲಿ ೬೪ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಈಗ ಚೌಗು ತುಂಬಿಕೊಂಡು ಯಾರಿಗೂ ಬಳಕೆಗೆ ಬಾರದ ಒದ್ದೆ ಮರುಭೂಮಿಯಾಗಿದೆ. (ರಾಷ್ಟ್ರಮಟ್ಟದಲ್ಲಿ ಚೌಗು ಪ್ರದೇಶದ ಒಟ್ಟು ವಿಸ್ತೀರ್ಣ ೮೮೧ ಸಾವಿರ ಹೆಕ್ಟೇರು) ಈ ಸಸ್ಯವನ್ನು ಅಲ್ಲೆಲ್ಲ ಬೆಳೆಯಲು ಬಿಟ್ಟರೆ ಅದೇ ಒಂದು ಅತ್ಯತ್ತಮ ಸಂಪನ್ಮೂಲ ಆದೀತಲ್ಲವೆ?

ಅಂದ ಹಾಗೆ ಸಸ್ಯಕ್ಕೊಂದು ನಾಮಕರಣ ಆಗಬೇಕಲ್ಲ. ನೋಲ್ ಖೋಲ್ ಎಂಬುದು ನವಿಲುಕೋಸು ಆದ ಹಾಗೆ. ಈ ಜೈಜೇನಿಯಾವನ್ನು ಜೈ ಜೈ ಬತ್ತ ಎನ್ನೋಣವೆ?