ಬತ್ತವೆಂದ ಕೂಡಲೇ ಜ್ಞಾಪಕಕ್ಕೆ ಬರುವುದು ಸುಮಾರು ೨ ಅಡಿಯಿಂದ ೫ ಅಡಿ ಎತ್ತರವಿರುವ ಹರಡದೆ ನೆಟ್ಟಗೆ ಮೇಲ್ಮುಖವಾಗಿ ಕೆಂಟೆಗಳ ಸಮೇತ ಬೆಳೆಯುವ ಏಕದಳ ಸಸ್ಯ. ಆದರೆ ಬತ್ತ ಸಸ್ಯದ ಬೆಳವಣಿಗೆಯಲ್ಲಿರುವ ವೈಪರೀತ್ಯಗಳಿಗೆ ಕೊನೆ ಮೊದಲಿಲ್ಲ.

ಪ್ರಪಂಚದಲ್ಲಿ ಸುಮಾರು ಒಂದೂವರೆ ಲಕ್ಷ ಬತ್ತದ ತಳಿಗಳು ಇವೆಯೆಂದು ಅಂದಾಜು ಮಾಡಲಾಗಿದೆ. ಇವುಗಳ ಪೈಕಿ ಸುಮಾರು ೭೩,೦೦೦ ತಳಿಗಳನ್ನು ಫಿಲಿಫೈನ್ಸ್‌ನಲ್ಲಿರುವ ಅಂತರರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರದಲ್ಲಿ ಈಗಾಗಲೇ ಸಂಗ್ರಹಿಸಿ ಕಾಪಾಡಿಕೊಂಡು ಬರಲಾಗುತ್ತಿದೆ. ಭಾರತದಲ್ಲಿಯೂ ಸಹ ಕಟಕ್‌ನಲ್ಲಿರುವ ಕೇಂದ್ರ ಬತ್ತ ಸಂಶೋಧನಾ ಕೇಂದ್ರದಲ್ಲಿ ಸುಮಾರು ೪೩೦೦೦ ತಳಿಗಳನ್ನು ಸಂಗ್ರಹಿಸಿ ಕಾಪಾಡಿಕೊಂಡು ಬರಲಾಗುತ್ತಿದೆ. ಇಂತಹ ಸಂಗ್ರಹಣೆಯಲ್ಲಿ ಸುಮಾರು ೧೫-೨೨ ಅಡಿ ಎತ್ತರ ಬೆಳೆಯಬಲ್ಲ ಕೆಲವು ಪ್ರಭೇದಗಳಿವೆ ಮತ್ತು ಅವು ಬೆಳೆಯುವ ರೀತಿ ಅಚ್ಚರಿಯುಂಟು ಮಾಡುವಂತಹದು.

ಕರ್ನಾಟಕ ರಾಜ್ಯದಲ್ಲಿ ಗೇರುಸೊಪ್ಪೆ ಮತ್ತು ದಕ್ಷಿಣ ಜಿಲ್ಲೆಗಳ ಕೆಲವು ಕೆರೆ ಬಾಜುಗಳನ್ನು ಬಿಟ್ಟರೆ ಉಳಿದ ಭಾಗಗಳ ಬತ್ತದ ತಳಿಗಳು ಸಾಮಾನ್ಯವಾಗಿ ೨ ರಿಂದ ೫ ಅಡಿ ಮಾತ್ರ ಬೆಳೆಯಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಪಶ್ಚಿಮ ಬಂಗಾಳ, ಈಶಾನ್ಯ ಭಾರತದ ಅಸ್ಸಾಂ ಮತ್ತು ಇತರ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಳವಾಗಿ ನಿಂತಿರುವ ಅಥವಾ ಹರಿಯುವ ನೀರಿನಲ್ಲಿ (ನೆರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ) ಕೆಲವು ವಿಶೇಷ ಜಾತಿ ಬತ್ತಗಳು ಬೆಳೆಯುತ್ತವೆ. ಥಾಯ ಲ್ಯಾಂಡ್ ಮತ್ತು ಬಾಂಗ್ಲಾದೇಶಗಳಲ್ಲಿ ಇಂತಹ ಬತ್ತಗಳು ಸಾವಿರಾರು ಹೆಕ್ಟೇರು ಪ್ರದೇಶಗಳಲ್ಲಿ ಬೆಳೆಯುತ್ತಿವೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಥವಾ ಆಳವಾದ ನೀರಿನಲ್ಲಿ ಬತ್ತಗಳು ಬೆಳೆಯುವ ರೀತಿ ನಿಜಕ್ಕೂ ಸೋಜಿಗ. ಇವು ನೀರಿನ ಮಟ್ಟಕ್ಕೆ ಅನುಗುಣವಾಗಿ ಬೆಳೆಯುತ್ತವೆ. ಅಂದರೆ ನೀರಿನ ಮಟ್ಟ ೨ ಅಡಿ ಇದ್ದರೆ ಇವು ಎರಡೂವರೆ ಅಡಿ ಮಾತ್ರ ಬೆಳೆಯುತ್ತದೆ. ೧೦ ಅಡಿ ಇದ್ದರೆ ಹತ್ತೂವರೆ ಅಡಿ ಬೆಳೆಯುತ್ತದೆ. ನೀರಿನ ಮಟ್ಟ ೧೫೫ ಅಡಿ ಬೆಳೆಯುತ್ತದೆ. ಹೀಗೆ ಸುಮಾರು ೨೨ ಅಡಿ ಎತ್ತರ ಬೆಳೆಯಬಲ್ಲ ಸಾಮರ್ಥ್ಯವುಳ್ಳ ಬತ್ತದ ಪ್ರಭೇಧಗಳಿವೆ.

ವಿಶೇಷ ಜಾತಿಯ ಮುಳುಗು ಅಥವಾ ತೇಲು ಬತ್ತಗಳು ನೀರಿನ ಮಟ್ಟಕ್ಕಿಂತಲೂ ಅರ್ಧ ಅಡಿ ಅಥವಾ ಇನ್ನು ಹೆಚ್ಚು ಬೆಳೆದು ನೀರಿನ ಮೇಲೆ ಕಾಣಿಸಿಕೊಳ್ಳುವುದು ವಿಶೇಷ ಗುಣ. ಒಂದು ದಿವಸಕ್ಕೆ ೧೬ ಸೆ.ಮೀ. ಎತ್ತರ ಬೆಳೆಯಬಲ್ಲ ಈ ತಳಿಗಳಲ್ಲಿ ವಿಶೇಷ ವಂಶವಾಹಿಗಳಿರುವುದೇ ಈ ಸೋಜಿಗ ಸ್ವಭಾವಕ್ಕೆ ಕಾರಣ.

ಮುಳುಗು ಬತ್ತಗಳ ಇನ್ನೊಂದು ವಿಶೇಷ ಗುಣವೆಂದರೆ ಪ್ರವಾಹಬಾರದಿದದ್ದರೆ ಅಥವಾ ಬಂದು ತಕ್ಷಣವೇ ಇಳಿದು ಹೋದ ಸಂದರ್ಭಗಳಲ್ಲಿ ಇತರ ಬತ್ತಗಳಷ್ಟೇ ಎತ್ತರಕ್ಕೆ ಬೆಳೆದು, ಹೂ ಬಿಟ್ಟು ಕಾಳು ಕಚ್ಚಿ ಕೊಯ್ಲಿಗೆ ಸಿದ್ಧಗೊಳ್ಳುತ್ತವೆ.

೨೨ ಅಡಿಗಳಷ್ಟು ಎತ್ತರ ಬೆಳೆಯುವ ಬತ್ತಗಳು ದಕ್ಷಿಣ ಭಾರತದಲ್ಲಿಲ್ಲ. ಆದರೆ ಸ್ವಲ್ಪ ಮಟ್ಟಿಗೆ ಅದರ ಗುಣ ಇರುವ ಬತ್ತಗಳು ದಕ್ಷಿಣದ ರಾಜ್ಯದಲ್ಲಿಯೂ ಇವೆ. ಕರ್ನಾಟಕದಲ್ಲಿ ಗೇರುಸೊಪ್ಪ ಪ್ರದೇಶದಲ್ಲಿ ಜಲಕಾಮಿನೀ ಮುಳುಗು ಬತ್ತಗಳು ಮತ್ತು ಕರಾವಳಿಯಲ್ಲಿ ಎಂ.ಟಿ.ಯು. ಬತ್ತಗಳು ಈಗಲೂ ಅಲ್ಲಲ್ಲಿ ಬೆಳೆಯುತ್ತಿವೆ. ಕೇರಳದಲ್ಲಿ ಕೊಳಪ್ಪಲ ಹಾಗೂ ಒರು ಮುಂಡಗನ್ ಹೆಸರಿನ ಬತ್ತಗಳು ಮತ್ತು ತಮಿಳುನಾಡಿನಲ್ಲಿ ಆರ್.ಎಸ್.ಆರ್. ಬತ್ತಗಳು ಇದೇ ಜಾತಿಗೆ ಸೇರಿದವೆನ್ನಬಹುದು.

ಬೇಸಾಯ ಕ್ರಮ:

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ಬೀಳುವುದಕ್ಕಿಂತ ಮುಂಚೆ ಒಣ ಭೂಮಿಗೆ ಈ ಜಾತಿಯ ಬತ್ತದ ಬೀಜಗಳನ್ನು ಚೆಲ್ಲುವುದು ವಾಡಿಕೆಯಲ್ಲಿದೆ. ಈ ಪ್ರದೇಶಗಳಲ್ಲಿ ಮಳೆ ಬಿದ್ದು ಪೈರು ಒಂದು ಅಥವಾ ಎರಡು ಅಡಿ ಬೆಳೆಯುವಷ್ಟರಲ್ಲಿ ಪ್ರವಾಹ ಬರುವ ಸಂಭವ ಇರುತ್ತದೆ. ಪ್ರವಾಹ ಬಂದಾಗ ಸಸ್ಯ ತೀವ್ರ ವೇಗದಲ್ಲಿ ಬೆಳೆದು ನೀರಿನ ಮಟ್ಟದ ಮೇಲೆ ೪-೬ ಅಂಗುಲ ಬೆಳೆದು ತನ್ನ ಬೆಳವಣಿಗೆಗೆ ಬೇಕಾದ ಸೂರ್ಯರಶ್ಮಿಯನ್ನು ಪಡೆದುಕೊಳ್ಳುತ್ತದೆ. ಮಧ್ಯೆ ಗಿಣ್ಣುಗಳಲ್ಲಿ ಬೇರು ಹೊರಡಿಸಿ ತನಗೆ ಬೇಕಾದ ಪೋಷಕಾಂಶಗಳನ್ನು ನೀರಿನಿಂದ ಪಡೆಯುತ್ತದೆ. ಬುಡದಲ್ಲಿರುವ ಮಣ್ಣಿನಲ್ಲಿ ಬೇರು ಬೆಳೆಸಿಕೊಂಡಿರುವುದರಿಂದ ಹರಿಯುವ ನೀರಿನ ರಭಸಕ್ಕೆ ಸಸ್ಯಗಳು ಕೊಚ್ಚಿಹೋಗುವ ಸಾಧ್ಯತೆ ಇಲ್ಲ. ಈ ತಳಿಗಳಿಗೆ ಸಾವಯವ ಅಥವಾ ರಸಗೊಬ್ಬರಗಳ ಅವಶ್ಯಕತೆಯೇ ಇಲ್ಲ. ಏಕೆಂದರೆ ನೀರಿನಲ್ಲಿ ಸಾಕಷ್ಟು ಫಲವತ್ತತೆ ಇರುತ್ತದೆ. ನೀರಿನೊಡನೆ ಬಂದ ಫಲವತ್ತತೆ ಮಣ್ಣಿನಲ್ಲಿಯೂ ಸೇರಿಕೊಂಡಿರುತ್ತದೆ. ಇಂತಹ ಬೆಳೆಗಳಿಂದ ಎಕರೆಗೆ ೨-೩ ಕ್ವಿಂಟಾಲ್ ಬತ್ತ ಇಳುವರಿ ದೊರೆತರೇ ರೈತರು ತೃಪ್ತರಾಗುತ್ತಾರೆ.

ಕೊಯಿಲು:

ಸಾಧಾರಣವಾಗಿ ಬೆಳೆಯು ಕೊಯ್ಲಿಗೆ ಬರುವ ಸಮಯದಲ್ಲಿ ಪ್ರವಾಹ ಇಳಿದಿರುತ್ತದೆ. ಅಥವಾ ಸಂಫೂರ್ಣ ನೀರೇ ಇಲ್ಲದಂತಾಗಿರುತ್ತದೆ. ನೀರಿಲ್ಲದೆ ಸಂದರ್ಭದಲ್ಲಿ ಇತರ ಬತ್ತಗಳಂತೆಯೇ ಇದನ್ನು ಕೊಯ್ಲು ಮಾಡಿ ಒಕ್ಕಣೆ ಮಾಡುತ್ತಾರೆ. ಸ್ವಲ್ಪ ನೀರಿನಲ್ಲಿ ಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ತೆನೆಗಳನ್ನು ಕತ್ತರಿಸಿ ಚೀಲದಲ್ಲಿ ಸಂಗ್ರಹಿಸಿ ಅನಂತರ ಒಣಗಿಸಿ ಒಕ್ಕಣೆ ಮಾಡುತ್ತಾರೆ. ಅತಿ ಆಳವಾದ ನೀರಾಗಿದ್ದಲ್ಲಿ ದೋಣಿಯಲ್ಲಿ ಹೋಗಿ ತೆನೆಗಳನ್ನು ಕೊಯ್ದು ಸಂಗ್ರಹಿಸಿ, ಒಣಗಿಸಿ ಅನಂತರ ಒಕ್ಕಣೆ ಮಾಡುತ್ತಾರೆ.