ಹಸಿರು ಕ್ರಾಂತಿ ಆಯಿತು. ಬತ್ತದ ಉತ್ಪಾದನೆ ಇಮ್ಮಡಿಯಾಯಿತು. ಇದಕ್ಕೆ ಆರ್ಥಿಕ ಇಳುವರಿ ತಳಿಗಳೇ ಹೆಚ್ಚು ಮಟ್ಟಿಗೆ ಕಾರಣ. ಭಾರತದಲ್ಲಿ ಸುಮಾರು ೪೦೦ ಸುಧಾರಿತ ತಳಿಗಳು ಈಗಾಗಲೇ ಬಿಡುಗಡೆಯಾಗಿದ್ದು, ಕರ್ನಾಟಕ ರಾಜ್ಯದಲ್ಲೇ ೩೦ ಬಿಡುಗಡೆಯಾಗಿದೆ. ಆದರೆ ಚಳಿಗಾಲಕ್ಕೆ ಸರಿ ಹೊಂದುವಂತಹ ತಳಿ ಒಂದೂ ಇಲ್ಲ ಹಳೆ ತಳಿಗಳನ್ನೇ ಬೆಳೆಸಲು ಹೊರಟರೆ ಈಗ ರೋಗ ರುಜಿನಗಳು ಹೆಚ್ಚಾಗಿದ್ದು, ಅವುಗಳು ಕಟಾವಾಗುವ ಭರವಸೆ ಇಲ್ಲ. ಆದರೆ ಚಳಿಗಾಲದಲ್ಲಿ ಬತ್ತ ಬೆಳೆಯದೇ ಸುಮ್ಮನೆ ಕೂಡುವ ಹಾಗೂ ಇಲ್ಲ. ಏಕೆಂದರೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕೆರೆ ನೀರು ತುಂಬುವುದೇ ಆಗಸ್ಟ್ ಸೆಪ್ಟೆಂಬರ್ ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ಎರಡು ಲಕ್ಷಕ್ಕು ಹೆಚ್ಚು ಹೆಕ್ಟೇರುಗಳಲ್ಲಿ ಬತ್ತ ಬೆಳೆಯಲು ಈ ಕೆರೆಯ ನೀರೇ ಆಶ್ರಯ. ಕಾರಾಣಾಂತರದಿಂದ (ನೆರೆ ಹಾವಳಿ, ತಡವಾದ ಮಳೆ ಇತ್ಯಾದಿ) ಬಿತ್ತನೆ ನಿಧಾನವಾದರೆ ಬತ್ತ ಚಳಿಗೆ ಸಿಕ್ಕಿ ಜೊಳ್ಳಾಗುವ ಪರಿಸ್ಥಿತಿ. ಪ್ರತಿ ವರ್ಷ ಒಂದಲ್ಲ ಒಂದು ಭಾಗದಲ್ಲಿ ಹೀಗೆ ಆಗುತ್ತಲೇ ಇದ್ದು, ಅನೇಕ ರೈತರು ತಮ್ಮ ಫಸಲನ್ನು ಕಳೆದುಕೊಳ್ಳುತ್ತಿದ್ದಾರೆ.

ಇಂತಹ ಪರಿಸ್ಥಿತಿಗೆ ಉತ್ತಮ ನೀಡುವ ಉದ್ದೇಶದಿಂದ ಅಂದರೆ ಚಳಿ ರೋಗಗಳನ್ನು ಎದುರಿಸಿ ತೃಪ್ತಿಕರವಾದ ಇಳುವರಿ ನೀಡಬಲ್ಲ ಬತ್ತದ ತಳಿಯನ್ನು ಸೃಷ್ಟಿಸಲೆಂದು ಕೃಷಿ ವಿದ್ಯಾಲಯದಲ್ಲಿ ೧೯೮೩ ರಲ್ಲಿ ಯೋಜನೆ ಹಾಕಲಾಯಿತು. ಆ ಯೋಜನೆಯ ಫಲ ಎಂದರೆ ಮುಕ್ತಿ ಬತ್ತದ ತಳಿಯ ಬಿಡುಗಡೆ.

ಹಾಲುಬ್ಬಲು, ಚೈನಾ (ಸಿ.ಎಚ್.೨, ಎಚ್.೫) ಬಂಗಾರ ಕಡ್ಡಿ (ಎಸ್-೭೦೫) ಇವು ಅನೇಕ ದಶಕಗಳಿಂದ ದಕ್ಷಿಣ ಕರ್ನಾಟಕದ ಜಿಲ್ಲೆಗಳ ಕೆರೆ ಪ್ರದೇಶಗಳಲ್ಲಿ ಬೆಳೆಯಲ್ಪಡುತ್ತಿದ್ದ ತಳಿಗಳು. ಹೆಕ್ಟೇರಿಗೆ ೨೦ ರಿಂದ ೨೫ ಕ್ವಿಂಟಾಲ್ ಬತ್ತ ಸಿಗುತ್ತಿದ್ದುದು ಎರಡು ದಶಕಗಳ ಹಿಂದಿನ ಕತೆ. ಈಗ ೧೦ ಕ್ವಿಂಟಾಲ್ ಸಹ ಬೆಳೆಯಲಾಗುವುದಿಲ್ಲ. ಇದಕ್ಕೆ ಕಾರಣ ವ್ಯಾಪಕವಾಗಿರುವ ಬೆಂಕಿ ರೋಗದ ಹಾವಳಿ. ಹೊಸ ತಳಿಗಳನ್ನು ಅಂದರೆ ಜಯಾ, ಯಾರ್ ೮, ಐಆರ್ ೨೦, ಪ್ರಕಾಶ್, ಮಂಡ್ಯ ವಿಜಯ ಇಂತಹವುಗಳನನ್ನು ಬೆಳೆದರೆ ಬೆಂಕಿ ರೋಗ ತಗುಲದಿದ್ದರೂ ಬೆಳೆ ಕೈಗೆ ಸೇರುವುದಿಲ್ಲ ಕಾರಣ ಈ ತಳಿಗಳೆಲ್ಲ ಚಳಿಗೆ ಸೂಕ್ಷ್ಮ ಉಷ್ಣಾಂಶ ಯಾವುದೇ ದಿನದ ಸಮಯದಲ್ಲಿ ೧೭ ಡಿಗ್ರಿಗಳಿಗಿಂತ ಕಡಿಮೆ ಇದ್ದಲ್ಲಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸಸ್ಯ ಹಳದಿ ಬಣ್ಣಕ್ಕೆ ತಿರುಗುತ್ತದೆ. ತೆನೆ ಸರಿಯಾಗಿ ಹೊರಬರುವುದಿಲ್ಲ. ಪರಾಗ ಸ್ಪರ್ಶ ಸರಿಯಾಗಿ ನಡೆಯದೇ ಅಥವಾ ನಡೆದರೂ ಸಹ ಕಾಳು ಕಟ್ಟುವುದಿಲ್ಲ. ಫಸಲಾಗಿ ಸಿಗುವುದು ಜೊಳ್ಳು ಮಾತ್ರ ಕಾಳಲ್ಲ ಇದು ಸಾಮಾನ್ಯವಾಗಿ ಎಲ್ಲಾ ಗಿಡ್ಡ ಸಸ್ಯ ಸ್ವರೂಪ ಹೊಂದಿರುವ ಅಧಿಕ ಇಳುವರಿ ತಳಿಗಳಲ್ಲಿ ಕಂಡು ಬರುವುದು ನ್ಯೂನತೆ ಚಳಿಗಾಲದಲ್ಲಿ ಬೆಳೆದಾಗ.

ಚಳಿಗಾಲದಲ್ಲಿ ಚೆನ್ನಾಗಿ ಬೆಳೆದು ಹೆಚ್ಚು ಇಳುವರಿ ಕೊಡಬಲ್ಲ ತಳಿಯ ಸೃಷ್ಟಿಗೆ ಬೆಂಗಳೂರಿನಲ್ಲಿರುವ ಮುಖ್ಯ ಕೃಷಿ ಕೇಂದ್ರದಲ್ಲಿ ಮೂರು ಮಾರ್ಗಗಳನ್ನು ಅನುಸರಿಸಲಾಯಿತು. ನಾಡ ತಳಿಗಳನ್ನು ಕ್ಷಕಿರಣದ ಮೂಲಕ ಸುಧಾರಿಸುವುದು. ಸಂಕರಣ ಮಾಡಿ ಸುಧಾರಿಸುವುದೂ ಮತ್ತು ಚಳಿ ನಿರೋಧಕ ತಳಿಗಳನ್ನು ಬೇರೆ ಕಡೆಯಿಂದ ತರಿಸಿ ಪರೀಕ್ಷಿಸುವುದು ಅದಕ್ಕಾಗಿ ಅಂತರ ರಾಷ್ಟ್ರೀಯ ಬತ್ತ ಸಂಶೋಧನೆ ಕೇಂದ್ರದೊಡನೆ ಸಹಕಾರ ಮೂಡಿಸಿ ಬೆಂಗಳೂರಿನಲ್ಲಿ ಪರೀಕ್ಷೆಗಳನ್ನು ನಡೆಸಿ, ೧೯೮೩-೮೪ ರಲ್ಲಿ ಸಿ.ಟಿ.ಎಚ್. ೧ ಎಂಬ ಚಳಿ ನಿರೋಧಕ ತಳಿಯನ್ನು ಸುಮಾರು ೭೦೦ ತಳಿಗಳ ಮೇಲೆ ನಡೆಸಿದ ಪರೀಕ್ಷೆಯ ಆಧಾರದ ಮೇಲೆ ಹುಡುಕಿ ತೆಗೆಯಲಾಯಿತು. ಇದು ಇಂಡೋನೇಷಿಯಾದಲ್ಲಿ ಎರಡು ತಳಿಗಳ ಸಂಕರಣಾ ನಂತರ ಹೊರಬಿದ್ದ ಹೊಸ ತಳಿ ಚಳಿಗಾಲದಲ್ಲಿ ಕುಗ್ಗದೆ ಸರ್ವೇಸಾಮಾನ್ಯ ಎತ್ತರಕ್ಕೆ (೯೦ ಸೆ.ಮೀ.) ಬೆಳೆದು ಮತ್ತು ಬೆಂಕಿ ರೋಗಕ್ಕೆ ಜಗ್ಗದೆ ಬೆಳೆದು ತೃಪ್ತಿಕರವಾದ ಇಳುವರಿ ನೀಡಬಲ್ಲದು ಎಂದು ಬೆಂಗಳೂರು ಮತ್ತು ಮಂಡ್ಯದ ಕೃಷಿ ಸಂಶೋಧನಾ ಕ್ಷೇತ್ರಗಳಲ್ಲಿ (೧೯೮೪-೮೭) ನಡೆದ ಪರೀಕ್ಷೆಗಳಲ್ಲಿ ದೃಢವಾಯಿತು. ೧೯೮೭-೮೮ನೇ ಸಾಲಿನಲ್ಲಿ ರೈತರ ಗದ್ದೆಗಳಲ್ಲಿ ಚಳಿಗಾಲದಲ್ಲಿ ಬೆಳೆದಾಗ ಹೆಕ್ಟೇರಿಗೆ ೨೦-೩೫ ಕ್ವಿಂಟಾಲ್ ಇಳುವರಿ ಪಡೆದುದರಿಂದ ಈ ತಳಿಗೆ ಚಳಿ ತಡೆಯುವ ಶಕ್ತಿ ಇದೆ ಎಂದು ಖಚಿತವಾಯಿತು. ಅಖಿಲ ಭಾರತ ಬತ್ತ ಸುಧಾರಣಾ ಯೋಜನೆಯ ಆಶ್ರಯದಲ್ಲಿ ಬೆಳೆದಾಗ ಮೂಡಗೆರೆ, (ಚಿಕ್ಕಮಗಳೂರು ಜಿಲ್ಲೆ) ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆಸಿದ ಪರೀಕ್ಷೆಗಳಲ್ಲಿಯೂ ಸಹ ಇದು ಉತ್ತಮ ಫಲಿತಾಂಶ ನೀಡಿದಾಗ ಈ ತಳಿಯ ಚಳಿಗೆ ಹಿಂಜರಿಯದ ಸಾಮರ್ಥ್ಯವನ್ನು ಪುಷ್ಟೀಕರಿಸಿದಂತಾಯಿತು.

ಆಶಾದಾಯಕ

ಬೆಂಕಿ ರೋಗ ಒರೆಗೆ ಹಚ್ಚಲು ಈ ತಳಿಯನ್ನು ಪೊನ್ನಂಪೇಟೆಯಲ್ಲಿ ಬೆಳೆದು ನೋಡಲಾಯಿತು. ಬೇರೆ ತಳಿಗಳು ಸಂಪೂರ್ಣವಾಗಿ ನಾಶವಾದರೂ ಈ ತಳಿಗೆ ಸ್ವಲ್ಪ ಮಾತ್ರ ಬೆಂಕಿ ರೋಗ ಕಾಣಿಸಿಕೊಂಡದ್ದು, ಈ ತಳಿಯ ಉತ್ಪಾದನಾ ಶಕ್ತಿಯನ್ನು ಮತ್ತೂ ದೃಢೀಕರಿಸಿದಂತಾಯಿತು. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಈ ತಳಿಯನ್ನು ಪ್ರಯೋಗಾತ್ಮಕವಾಗಿ ನಾಟಿ ಮಾಡಿದಾಗ ಬೇರೆ ತಳಿಗಳು ಸಂಪೂರ್ಣ ಜೊಳ್ಳಾಗಿದ್ದರೂ ಈ ತಳಿ ಹೆಕ್ಟೇರಿಗೆ ೨ ರಿಂದ ೩ ಟನ್‌ಗಳಷ್ಟು ಇಳುವರಿ ಕೊಟ್ಟದ್ದು ಆಶಾದಾಯಕವೆನಿಸಿತು. ವಿಪರೀತ ಚಳಿಯಿಂದಾಗಿ ಯಾವ ತಳಿ ಸಹ ಒಂದು ಕಾಳನ್ನೂ ಕೊಡಲಾಗದ ಸಂದರ್ಭದಲ್ಲಿ ಈ ತಳಿ ೧.೨೮ ಟನ್ ಹೆಕ್ಟೇರು ಕಾಳನ್ನು ಕೊಟ್ಟಿದ್ದು, ಅನೇಕ ಪರೀಕ್ಷೆ ಮತ್ತು ವರದಿಗಳಿಂದ ಮನದಟ್ಟಾಯಿತು. ಸತತವಾಗಿ ೧೯೮೪ ರಿಂದ ಪರೀಕ್ಷಾ ತಾಕೂಗಳಲ್ಲಿ ಈ ತಳಿ ಇತರೇ ತಳಿಗಿಂತ ಎರಡರಷ್ಟೂ ಇಳುವರಿ ಕೊಟ್ಟಿದೆ. ಚೈನಾ ಬತ್ತ ಹೆಕ್ಟೇರಿಗೆ ಕೇವಲ ೧೫-೧೬ ಕ್ವಿಂಟಾಲ್ ಬತ್ತ ಕೊಟ್ಟಾಗ ಮುಕ್ತಿ ತಳಿ ೩೧.೫ ಕ್ವಿಂಟಾಲ್ ಇಳುವರಿ ಕೊಟ್ಟಿದೆ.

ಮೈಸೂರು ಜಿಲ್ಲೆಯ ಸಾವಿರಾರು ಎಕರೆ ಪ್ರದೇಶಗಳಲ್ಲಿ ಈ ತಳಿಯನ್ನು ಚಳಿಗಾಲದಲ್ಲಿ ಬೆಳೆಯಲಾಗುತ್ತಿದೆ. ಡಿಸೆಂಬರ್ – ಜನವರಿಯಲ್ಲಿ ಕೊಯ್ಲು ಮಾಡಿ ಏಪ್ರಿಲ್ ಮೇ ತಿಂಗಳಲ್ಲಿ ಮತ್ತೊಂದು ಕೂಳೆ ಬೆಳೆ ತೆಗೆಯಬಹುದು ಎಂದು ಗೊತ್ತಾಗಿದೆ. ಬೀಜವನ್ನು ಮಂಡ್ಯದ ಬಳಿ ಇರುವ ವಿ.ಸಿ. ಫಾರಂ ಅಥವಾ ಬೆಂಗಳೂರಿನಲ್ಲಿ ಕೃಷಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರೊಂದಿಗೆ ವ್ಯವಹರಿಸಿ ಪಡೆಯಬಹುದು.