ನಮ್ಮ ರಾಷ್ಟ್ರದಲ್ಲಿ ೧೯೬೬ನೇ ಇಸವಿಯಲ್ಲಿ ೩೫.೨ ಮಿಲಿಯನ್ ಹೆಕ್ಟೇರುಗಳಲ್ಲಿ ಬತ್ತ ಬೆಳೆಯುತ್ತಿದ್ದು, ಉತ್ಪಾದನೆಯು ೩೦.೪ ಮಿಲಿಯನ್ ಟನ್‌ಗಳಾಗಿತ್ತು. ೧೯೭೧ ರಲ್ಲಿ ವಿಸ್ತೀರ್ಣದಲ್ಲಿ ಕೇವಲ ೨.೨ ಮಿಲಿಯನ್ ಹೆಕ್ಟೇರುಗಳಷ್ಟೇ ಹೆಚ್ಚಿದ್ದರೂ, ಉತ್ಪಾದನೆಯಲ್ಲಿ ೧೨.೦ ಮಿಲಿಯನ್ ಟನ್‌ಗಳು ಹೆಚ್ಚಿರುವುದು ಗಮನಾರ್ಹ. ಈ ರೀತಿ ಹೆಚ್ಚು ಉತ್ಪಾದನೆಯ ಪ್ರಮುಖ ಕಾರಣಗಳೆಂದರೆ ಸುಧಾರಿತ ತಳಿಗಳ ಬಳಕೆ. ಆಧುನಿಕ ಬೇಸಾಯ ಪದ್ಧತಿ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳ ಅನುಕರಣೆ, ಸಕಾಲ ಬಿತ್ತನೆ ಮತ್ತು ನಾಟಿ, ಕಾಲಕ್ಕೆ ಮತ್ತು ಹವಾಗುಣಕ್ಕೆ ಸಲಹೆಯಲ್ಲಿರುವ ತಳಿಯ ಉಪಯೋಗ, ತಳಿಗೆ ಸೂಚಿಸಿದ ಬೇಸಾಯ ಕ್ರಮ ಅನುಸರಿಸಿದಲ್ಲಿ ಅಧಿಕ ಇಳುವರಿ ಕೊಡುವ ಗಿಡ್ಡ ತಳಿಗಳು, ನಾಡ ತಳಿಗಳ ಎರಡಷ್ಟು ಇಳುವರಿ ಕೊಡುತ್ತವೆ.

ಹಾಗಿದ್ದಲ್ಲಿ ಇಂತಹ ತಳಿಗಳು ಬಳಕೆಗೆ ಬಂದು ಆರು ವರ್ಷಗಳಾಗಿದ್ದರೂ ಉತ್ಪಾದನೇ ಇಮ್ಮಡಿಯಾಗಿಲ್ಲ ಏಕೆ? ಎಂಬುದು ಒಂದು ಪ್ರಶ್ನೆ. ರಾಷ್ಟ್ರಮಟ್ಟದಲ್ಲಿ ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ: – ೧. ಈವರೆಗೂ ಸಲಹೆಯಲ್ಲಿರುವ ತಳಿಗಳ ಕೊರತೆ. ೨. ತಂಡಿಯಲ್ಲಿ (ಕೊರೆ, ಚಳಿ) ಹೂ ಬಿಟ್ಟು ಇಳುವರಿ ಕೊಡುವ ಚಳಿ ನಿರೋಧಕ ಶಕ್ತಿ ಹೊಂದಿರುವ ತಳಿಗಳ ಕೊರತೆ ೩. ನೇರ ಬಿತ್ತನೆ ಬತ್ತದ ಬೇಸಾಯದ ಕೆಲವು ಪ್ರದೇಶಕ್ಕೆ ಹೊಂದುವ ತಳಿಗಳ ಕೊರತೆ ಮತ್ತು ೪. ಚೌಳು ಭೂಮಿಯಲ್ಲಿ ಚೆನ್ನಾಗಿ ಫಸಲಾಗುವ ತಳಿಗಳ ಕೊರತೆ ಜೊತೆಗೆ ಹೆಚ್ಚು ಇಳುವರಿ ತಳಿಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದಿರುವುದು. ಕೆಲವಾರು ಸಲ ಹೆಚ್ಚಿಗೆ ಗೊಬ್ಬರ ಹಾಕಲೇಬೇಕು, ನಾಟಿ ಮಾಡಲೇಬೇಕು, ಕೀಟ ಮತ್ತು ರೋಗಗಳನ್ನು ಹೊಸ ತಳಿಗಳನ್ನು ಬೆಳೆದಾಗ ನಿವಾರಿಸುವುದು ಇತ್ಯಾದಿ ತಪ್ಪು ತಿಳುವಳಿಕೆಗಳನ್ನು ಅನೇಕ ರೀತಿಯಲ್ಲಿ ಬೇರೂರಿರುವುದೂ ಒಂದು ಕಾರಣ. ಬೆಳೆಯಬೇಕೆಂಬ ಹಂಬಲವಿದ್ದರೂ ಆರ್ಥಿಕ ಸ್ಥಿತಿ ಅಡ್ಡಿಯಾಗುವ ಸಂದರ್ಭಗಳೂ ಅಪರೂಪವೇನಲ್ಲ.

ಕಾಳು ದಪ್ಪ, ಗಂಜಿ ಹೆಚ್ಚು

ಮೇಲೆ ತಿಳಿಸಿರುವ ಮೊದಲನೇ ನಾಲ್ಕು ಅಂಶಗಳನ್ನು ಒಳಗೊಂಡ ಎಲ್ಲಾ ಸಂದರ್ಭಗಳಲ್ಲೂ ಹೆಚ್ಚು ಪ್ರಮಾಣದಲ್ಲಿ ಬೆಳೆಯಲ್ಪಡುತ್ತಿರುವ ತಳಿಗಳೆಂದರೆ ಮಧ್ಯಮ ವರ್ಗಕ್ಕೆ (೧೩೦-೧೫೦ ದಿವಸಗಳು) ಸೇರಿದವು. ಈವರೆಗೂ ಈ ವರ್ಗದಲ್ಲಿ ರಾಷ್ಟ್ರಾದ್ಯಂತ ಸಲಹೆಯಲ್ಲಿದ್ದು, ಹೆಚ್ಚು ಪ್ರಮಾಣದಲ್ಲಿ ಬೆಳೆಯಲ್ಪಡುತ್ತಿರುವ ತಳಿಗಳೆಂದರೆ “ಜಯ” ಮತ್ತು “ಐ.ಆರ್. ೮” ತಳಿಗಳು ಬೆಳೆಯುತ್ತಿರುವುದು ದಿಟವಾದರೂ, ಎಲ್ಲಾ ರಾಜ್ಯಗಳಲ್ಲಿಯೂ ಮತ್ತು ಯೋಗ್ಯ ಹವಾಗುಣ ಇರುವಲ್ಲೆಲ್ಲಾ ಇವು ಬೆಳೆಯಲ್ಪಡುತ್ತಿಲ್ಲ. ಇದಕ್ಕೆ ಇವುಗಳ ಕಾಳು ದಪ್ಪನಾಗಿದ್ದು, ಅನ್ನ ಗಂಜಿ ಕಟ್ಟುವುದೇ ಮುಖ್ಯ ಕಾರಣವೆನ್ನಬಹುದು. ಮೈಸೂರು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಇನ್ನೂ ಅನೇಕ ರಾಜ್ಯಗಳಲ್ಲಿ ಇದನ್ನು ಬೆಳೆಯುವವರಲ್ಲದೆ ಸ್ವತಃ ಉಪಯೋಗಕ್ಕೆ ನಾಡತಳಿಗಳನ್ನೇ ಬೆಳೆಯುತ್ತಾರೆ. ಕುಸುಬಲು ಅಕ್ಕಿ ಬಳಸುವ ಕೇರಳ, ತಮಿಳುನಾಡಿನಲ್ಲಿ ಕೆಲವು ಪ್ರದೇಶಗಳು ಮತ್ತು ಮೈಸೂರು ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಇದು ಇತರ ಭಾಗಗಳಿಗಿಂತ ಹೆಚ್ಚು ಪ್ರಚಾರಕ್ಕೆ ಬಂದಿದೆ. ಇದಕ್ಕೆ ಕಾರಣ ಇಲ್ಲಿನ ಜನಗಳಿಗೆ ಸಣ್ಣ ಕಾಳಿನ ಬೇಡಿಕೆ ಇಲ್ಲದಿರುವುದು, ಅಲ್ಲದೆ ಕುಸುಬಲು ಮಾಡುವುದರಿಂದ ಅನ್ನ ಗಂಜಿ ಕಟ್ಟುವಿದಿಲ್ಲ. ಮಧ್ಯಮ ಅವಧಿಯ ತಳಿಗಳಲ್ಲಿರುವ ಈ ದೋಷ ಪರಿಹಾರಕ್ಕೆಂದು ೧೯೬೯ರಲ್ಲಿ ಹೈದರಾಬಾದಿನಲ್ಲಿ ಆರಂಭವಾದ ಯೋಜನೆಯ ಒಂದು ಫಲಿತಾಂಶವೇ ಐ.ಇ.ಟಿ. ೧೯೯೧ ಎಂಬ ಹೊಸ ತಳಿಯ ನಿರ್ಮಾಣ.

ಹಸನಾದ ಕಾಳು, ರುಚಿಯಾದ ಅನ್ನವಾಗುವ ಗುಣವನ್ನು ಹೊಂದಿರುವ “ಜಿ.ಇ.ಬಿ. ೨೨೪” ನಾಡ ತಳಿಯನ್ನು ಹೆಚ್ಚು ಗೊಬ್ಬರಕ್ಕೆ ತಕ್ಕಂತೆ ಹೆಚ್ಚು ಇಳುವರಿ ನೀಡಲು ಬೇಕಾದ ಸಸ್ಯ ಸ್ವರೂಪವನ್ನೊಳಗೊಂಡ “ಟಿ(ಎನ್)೧” ಎಂಬ ತಳಿಯೊಡನೆ ಸಂಕರಣೆ ಮಾಡಿ, ೫ನೇ ವಂಶವೃಕ್ಷ (ಸಂತತಿ)ಯಿಂದ ಆಯ್ಕೆ ಮಾಡಿ, ಈ ಎರಡೂ ತಳಿಯ ಒಳ್ಳೆಯ ಗುಣವನ್ನು ಕ್ರೋಡೀಕರಿಸಿದ ಬತ್ತವೇ “ಐ.ಇ.ಟಿ. ೧೯೯೧” ಎಂಬ ನೂತನ ತಳಿಯಾಗಿದೆ. ಈ ತಳಿಯು ೧೯೭೦-೭೧ನೇ ಸಾಲಿನಿಂದ ಎಲ್ಲಾ ರಾಜ್ಯಗಳಲ್ಲಿಯೂ ಪ್ರಯೋಗಕ್ಕೆ ಒಳಪಟ್ಟು ಹೈದಾರಾಬಾದಿನಲ್ಲಿರುವ ಅಖಿಲ ಭಾರತ ಬತ್ತದ ಸುಧಾರಣೆ ಯೋಜನೆಯ ನೇತೃತ್ವದಲ್ಲಿ ಈ ಫಸಲಿನ ಉತ್ತಮ ಗುಣಗಳು ಮತ್ತು ನ್ಯೂನತೆಯ ಬಗ್ಗೆ ವಿಷಯ ಸಂಗ್ರಹಿಸಲಾಗಿದೆ.

ಹೊಸ ತಳಿಯ ಗುಣಗಳು

ಈ ತಳಿಯು ಗಿಡ್ಡ ಜಾತಿಯಾಗಿದ್ದು, ಗಟ್ಟಿಯಾದ ಕಾಂಡ ಹೊಂದಿದೆ. ಹೆಚ್ಚು ಗೊಬ್ಬರ ಕೊಟ್ಟಷ್ಟೂ ಸೊಂಪಾಗಿ ಬೆಳೆದು, ಫಸಲು ಬೀಳದೆ ಲಾಭದಾಯಕವಾದ ಇಳುವರಿ ಕೊಡಬಲ್ಲುದೆಂದು ಸಂಶೋಧನೆಯಿಂದ ಹೊರ ಬಿದ್ದಿದೆ. ಇದರ ಕಾಳು ಬಹಳ ಸಣ್ಣಗೆ ಮತ್ತು ಉದ್ದವಾಗಿದ್ದು, ಪಾಲಿಷ್ ಮಾಡಿದ ಅಕ್ಕಿಯು ನೋಡಲು ಬಹಳ ಅಂದವಾಗಿರುತ್ತದೆ. ಬತ್ತದಲ್ಲಿ ಪಾಲಿಷ್ ಮಾಡದ (ಬ್ರೌನ್ ರೈಸ್) ಅಕ್ಕಿಯ ಪ್ರಮಾಣವು ಶೇ. ೭೬ ರಿಂದ ೭೮ ರಷ್ಟಿದೆ. ಅನ್ನ ಗಂಜಿ ಕಟ್ಟುವುದಿಲ್ಲ ಮತ್ತು ಉದುರಾಗಿ, ಮೃದುವಾಗಿ ಮತ್ತು ಮಧುರವಾಗಿರುತ್ತದೆಂದು ಪರೀಕ್ಷೆಯಿಂದ ತಿಳಿದು ಬಂದಿದೆ. ಆಯಾ ರಾಜ್ಯದ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಗಳ ಮೂಲಕ ಪ್ರಯೋಗಿಸಲ್ಪಟ್ಟಿರುವ ಈ ತಳಿಯು ಹಿಮಾಚಲ ಪ್ರದೇಶ, ಕಾಶ್ಮೀರ, ಕೇರಳ, ತಮಿಳುನಾಡಿನಲ್ಲಿ ಕೆಲವು ಭಾಗಗಳು ಮತ್ತು ಮೈಸೂರು ರಾಜ್ಯದ ಕೆಲವು ಭಾಗಗಳನ್ನು ಬಿಟ್ಟು ಉಳಿದ ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿಯೂ ಹೆಚ್ಚು ಪ್ರಮಾಣದಲ್ಲಿ ಬೆಳೆಯಲು ಯೋಗ್ಯವೆಂದು ಕಂಡು ಬಂದಿದೆ. ೧೯೭೨ನೇ ಇಸವಿ ಬೇಸಿಗೆ ಬೆಳೆಯಿಂದ “ಕೇಂದ್ರ ಬತ್ತದ ಅಭಿವೃದ್ಧಿ ಖಾತೆ” ನೇತೃತ್ವದಲ್ಲಿ ಅನೇಕ ರಾಜ್ಯಗಳಲ್ಲಿ ಮಿನಿಕಿಟ್ ಪ್ರಯೋಗದಲ್ಲಿ ಪರೀಕ್ಷಿಸಲ್ಪಟ್ಟ, ಈ ಅವಧಿಯ ಎಲ್ಲಾ ನೂತನ ತಳಿಗಳಿಗಿಂತಲೂ ಈ ತಳಿಯು ಅತ್ಯುತ್ತಮವೆಂದು ಕಂಡು ಬಂದಿದೆ. ಸಂಶೋಧನೆ ಫಲಿತಾಂಶ ಪುಷ್ಟೀಕರಿಸಿದ ಈ ಪ್ರಯೋಗಗಳನ್ನೂ ಗಣನೆಗೆ ತೆಗೆದುಕೊಂಡು, ೧೯೭೨ನೇ ಅಕ್ಟೋಬರ್ ತಿಂಗಳಲ್ಲಿ ಕಾನ್ಪುರದಲ್ಲಿ ನಡೆದ ಬತ್ತದ ತಜ್ಞರ ಸಮ್ಮೇಳನವು ಈ ತಳಿಯನ್ನು ರಾಷ್ಟ್ರ ಮಟ್ಟದಲ್ಲಿ ಬಿಡುಗಡೆ ಮಾಡಲು ಶಿಫಾರಸ್ಸು ಮಾಡಿದೆ.

ಮೈಸೂರು ರಾಜ್ಯದಲ್ಲಿ:

ಮೈಸೂರು ರಾಜ್ಯದಲ್ಲಿಯೂ ಸಹ ೧೯೭೦-೭೧ ನೇ ಸಾಲಿನಲ್ಲಿ ಮಂಡ್ಯ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ನಂತರ ಇತರ ಸಂಶೋಧನಾ ಕ್ಷೇತ್ರಗಳಲ್ಲಿ (ಹೆಬ್ಬಾಳ, ಹಿರಿಯೂರು, ಸಿರಿಗುಪ್ಪ, ಗಂಗಾವತಿ, ಮುಗದ, ಅಂಕೋಲ, ಸಿರಸಿ, ಶಿವಮೊಗ್ಗ, ಮಂಗಳೂರು, ಮಡಿಕೇರಿ, ಪೊನ್ನಂಪೇಟೆ ಮತ್ತು ನಾಗೇನಹಳ್ಳಿ) ಇತರ ತಳಿಗಳೊಡನೆ ಇದನ್ನು ಪ್ರಯೋಗಿಸಲಾಗಿದೆ. ಈ ತಳಿಯು ಕರಾವಳಿ (ಉ.ಕನ್ನಡ, ದ.ಕನ್ನಡ) ಮತ್ತು ಬೆಟ್ಟ ಪ್ರದೇಶಗಳಿಗೆ (ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶಗಳು) ಹೊಂದುವುದಿಲ್ಲವೆಂದು ಕಂಡು ಬಂದಿದೆ. ಇದರ ಇಳುವರಿಯು ಜಯ ತಳಿಯ ಶೇ. ೮೫ ರಿಂದ ೯೫ ರಷ್ಟು ಇರುತ್ತದೆಂದೂ, ಈ ತಳಿಯು (ಐ.ಇ.ಟಿ. ೧೯೯೧) ಐ.ಇ.ಟಿ. ೧೦೩೯ ಕ್ಕಿಂತ ಎಲ್ಲಾ ದೃಷ್ಟಿಯಿಂದ ಉತ್ತಮವೆಂದು ವ್ಯಕ್ತವಾಗಿದೆ. ನಮ್ಮ ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ಪ್ರದೇಶದಲ್ಲಿ (ಹಾಸನ, ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು ಮತ್ತು ಕೋಲಾರ) ಮಳೆಗಾಲದ ಬೆಳೆಯಲ್ಲಿ ಜುಲೈ ೧೫ರ ಒಳಗೆ ನಾಟಿ ಮುಗಿಯಬೇಕು. ತಡವಾದರೆ ಚಳಿಗೆ ಸಿಕ್ಕಿ ಬತ್ತವು ಜಳ್ಳಾಗಿ ಇಳುವರಿ ಬಹಳ ಕುಗ್ಗುವ ಸಂಭವವುಂಟು. ಹೆಚ್ಚು ಬೆಂಕಿ ರೋಗದ ಹಾವಳಿಯಿರುವಲ್ಲಿ ಇದನ್ನು ಬೆಳೆಯಬಾರದು. ಈ ಎಚ್ಚರಿಕೆಗಳು ಜಯ ಮತ್ತು ಐ.ಆರ್. ೮ ತಳಿಗಳಿಗೂ ಅನ್ವಯಿಸುವುದರಿಂದ ಈ ತಳಿಗಳನ್ನು ಬೆಳೆಯುತ್ತಿರುವವರೆಲ್ಲ ಐ.ಇ.ಟಿ. ೧೯೯೧ ತಳಿಯನ್ನು ಉತ್ಕೃಷ್ಟವಾಗಿ ಬೆಳೆಯಬಹುದು.

ಬೇಸಿಗೆ ಬೆಳೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡಲು ಸಾಧ್ಯವಿದ್ದು, ೫ ತಿಂಗಳ ನೀರು ಸರಬರಾಜಾದಲ್ಲಿ ಈ ತಳಿಯು ಚೆನ್ನಾಗಿ ಬರುತ್ತದೆ. ಅಕಾಲ ನಾಟಿ ಮಾಡಿದರೆ ಈ ಬೆಳೆಯ ಫಸಲು ಕುಳ್ಳಾಗಿ ತೆನೆಯು ಸಂಪೂರ್ಣವಾಗಿ ಹೊರಬರದೆ ಜಳ್ಳು ಹೆಚ್ಚಿ ಇಳುವರಿ ಕುಗ್ಗುವುದುಂಟು. ಸಕಾಲ ನಾಟಿ ಸಾಧ್ಯವಾದಲ್ಲಿ, ಕೊಯಮತ್ತೂರು ಸಣ್ಣ, ಬಂಗಾರ ಸಣ್ಣ (ಎಸ್. ೭೦೧), ಬಂಗಾರ ಕೋವಿ (ಎಸ್. ೧೦೯೨), ರತ್ನಚೂಡಿ (ಎಸ್. ೭೪೯), ಇಂಡೋ ಜಪಾನಿಕಾ (ಎಸ್. ೨೨೨೨), ಜೇನುಗೂಡು (ಜಿ.೧೯೨), ಜಿ.ಇ.ಟಿ. ೨೪, ಡೆಲ್ಲಿಭೋಗ ಮತ್ತು ಹಾಲುಬ್ಬಲು (ಎಸ್. ೩೧೭) ತಳಿಗಳ ಬದಲು ಈ ನೂತನ ತಳಿಯನ್ನು ಬೆಳೆದರೆ ಶೇ. ೪೦ ರಿಂದ ೧೦೦ ರಷ್ಟು ಹೆಚ್ಚು ಇಳುವರಿ ಪಡೆಯಬಹುದೆಂದು ತಿಳಿದು ಬಂದಿದೆ. ಈ ತಳಿಯು ಕಡಿಮೆ ಉಷ್ಣಾಂಶ ಪ್ರದೇಶದಲ್ಲಿ ಮಳೆಗಾಲದಲ್ಲಿ ೧೪೫ ದಿವಸಗಳನ್ನು, ಬೇಸಿಗೆಯಲ್ಲಿ ೧೫೫ ದಿವಸಗಳ ಅವಧಿ ತೆಗೆದುಕೊಳ್ಳುತ್ತದೆ. ಹೆಚ್ಚು ಉಷ್ಣಾಂಶ ಪ್ರದೇಶದಲ್ಲಿ ಒಂದು ವಾರ ಮುಂಚಿತವಾಗಿ ಬರುತ್ತವೆ. ಈ ತಳಿಯ ಕಾಳುಗಳು ತೆನೆಗೆ ಭದ್ರವಾಗಿ ಅಂಟಿಕೊಂಡಿರುವುದರಿಂದ ಒಕ್ಕಣಿಯಲ್ಲಿ ಕಾಳು ಹುಲ್ಲಿನ ಜೊತೆಯಲ್ಲಿ ಹೋಗದಂತೆ ಎಚ್ಚರಿಗೆ ವಹಿಸಬೇಕು. ಕೊಯ್ಲಿನ ಸಮಯದಲ್ಲಿ ಮಳೆ ಬಿದ್ದಾಗ ಗೊನೆಯಲ್ಲಿ ಕಾಳು ಮೊಳಕೆ ಬಂದಿರುವ ವರದಿಗಳಿವೆ. ಚೌಳು ಭೂಮಿಗೆ ಈ ತಳಿಯು ಸರಿ ಹೊಂದುವುದಿಲ್ಲ. ಈ ವಿಷಯಗಳನ್ನು ಗಮನದಲ್ಲಿಟ್ಟು ಎಚ್ಚರಿಕೆ ವಹಿಸುವುದು ಅವಶ್ಯಕ.

ಬೇಸಾಯ ಕ್ರಮದಲ್ಲಿ “ಐ.ಆರ್. ೮” ಮತ್ತು “ಜಯ” ತಳಿಗಳಿಗೂ ಇದಕ್ಕೂ ಏನು ವ್ಯತ್ಯಾಸವಿಲ್ಲದ್ದರಿಂದ ಆ ಬಗ್ಗೆ ಮತ್ತೆ ಮಾಹಿತಿ ಅನಾವಶ್ಯಕ. ಆಧುನಿಕ ಬೇಸಾಯ ಪದ್ಧತಿಯಂತೆ ಈ ಬತ್ತದ ಒಳ್ಳೆಯ ಫಸಲಿಗೆ ಎಕರೆಗೆ ಸುಮಾರು ೮೦೦ ರೂಪಾಯಿ ಖರ್ಚು ತಗಲುತ್ತದೆ. ಇದರ ಸಾಧಾರಣ ಉತ್ಪಾದನೆ ಎಕರೆಗೆ ೨೮ ಕ್ವಿಂಟಾಲಿದ್ದು, ಎಕರೆಗೆ ನಿವ್ವಳ ಆದಾಯ ಸುಮಾರು ೧೬೦೦-೧೭೦೦ ರೂಪಾಯಿಗಳಾದೀತು. ಬೇಸಾಯದ ವಿವಿಧ ಹಂತದಲ್ಲಿ ಏರು ಪೇರಾದರೂ, ಇಳುವರಿ ಹೆಚ್ಚು ಕಡಿಮೆಯಾದರೂ, ನಾಡ ತಳಿಗಿಂತ ನಿವ್ವಳ ಆದಾಯ ಎಕರೆಗೆ ಕನಿಷ್ಠ ೫೦೦ ರೂಪಾಯಿಯಷ್ಟು ಹೆಚ್ಚಿರುತ್ತದೆ ಎಂದು ಸಂಶೋಧನೆಯಿಂದ ಹೊರಬಿದ್ದಿವೆ.