ಕೃಷಿ ಉತ್ಪಾದನೆಯಲ್ಲಿ ಲಾಭದಾಯಕ ಇಳುವರಿಗೆ ಬೀಜ ಒಂದು ಮುಖ್ಯ ಆಧಾರ ಸ್ಥಂಭ. ಉತ್ತಮ ಬೀಜ ಆಧುನಿಕ ಕೃಷಿಯ ಯಶಸ್ಸನ್ನು ಬಹುಮಟ್ಟಿಗೆ ನಿರ್ಧರಿಸುತ್ತದೆ. ಆದರೂ ಬೀಜವು ಕೃಷಿಯ ಅತ್ಯಂತ ಅಗ್ಗದಾಯಕ ಸಂಪನ್ಮೂಲಗಳಲ್ಲಿ ಒಂದು. ಪುರಾತನ ಕಾಲದಿಂದಲೂ ಉತ್ತಮ ಬೀಜದ ಮಹತ್ವವನ್ನು ಅರಿತ ರೈತರು ಆರೋಗ್ಯ ಮತ್ತು ದೃಢಶಾಲಿಯಾದ ಬೆಳೆಗಳಿಂದ ಬೀಜವನ್ನು ಸಂಗ್ರಹಿಸುವುದಕ್ಕೆ ಮಹತ್ವ ಕೊಡುತ್ತಿದ್ದರು. ಉತ್ತಮ ಬೀಜದ ಉಲ್ಲೇಖಗಳನ್ನು ಸಂಸ್ಕೃತ ಸಾಹಿತ್ಯದಲ್ಲಿ ಕಾಣಬಹುದು. ಅನುವಂಶಿಕತೆ ಮತ್ತು ಸಸ್ಯತಳಿ ಅಭಿವೃದ್ಧಿಯ ಜೊತೆ ಬೀಜ ಪ್ರಗತಿಯ ಸುಧಾರಣೆಗಳೂ ಬೆಳೆದವು. ಶುದ್ಧ ತಳಿ ಆಯ್ಕೆ, ಸಂಸ್ಕರಣ ಬೀಜ, ಮ್ಯುಟೆಷನ್ ಮತ್ತು ಪಾಲಿಪ್ಲಾಯಿಡಿ (Polypoidisation) ಮುಂತಾದ ತಾಂತ್ರಿಕ ಜ್ಞಾನಗಳ ಅಳವಡಿಕೆ ತಳಿಗಳಲ್ಲಿ ಉತ್ತಮ ಪ್ರಗತಿಯನ್ನುಂಟು ಮಾಡಿದೆ.

ಭಾರತದಲ್ಲಿ ಆಧುನಿಕ ಬೀಜದ ಕಲ್ಪನೆಯ ಮೂಲ ೧೯೨೮ರ ರಾಯಲ್ ಕೃಷಿ ಆಯೋಗದೊಡನೆ ಪ್ರಾರಂಭವಾಯಿತು. ಈ ಆಯೋಗವು ಸುಧಾರಿಸಿದ ಬೀಜದ ಉತ್ಪಾದನೆಗೆ ಸಲಹೆ, ರೈತರ ಗದ್ದೆಗಳಲ್ಲಿ ಬೀಜ ಪರೀಕ್ಷೆ ಮಾಡುವುದು ಮತ್ತು ಭೂ ಪರೀಕ್ಷೆಯ ಆಧಾರದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ತಳಿ ಬೀಜಗಳ ವಿತರಣೆ ಮಾಡುವುದು ಮುಂತಾದ ಕಾರ್ಯಗಳನ್ನು ಆರಂಭಿಸಿತು. ಇತ್ತೀಚಿನ ವರ್ಷಗಳಲ್ಲಿ ತಳೀಕರಣ ಮತ್ತು ಬೀಜೋದ್ಯಮದಲ್ಲಿ ಬಹಳ ಪ್ರಗತಿ ಉಂಟಾಗಿದೆ. ಅರವತ್ತರ ದಶಕದಲ್ಲಿ ಬೀಜದ ಅನೇಕ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ ಕೇಂದ್ರೀಕೃತ ಪ್ರಯತ್ನವನ್ನು ಆರಂಭಿಸಲಾಯಿತು. ಮೊದಲನೆಯ ಮತ್ತು ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ಬೀಜೋತ್ಪಾದನೆ ಮತ್ತು ಅದರ ವಿತರಣೆಯನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು.

೧೯೬೧ರಲ್ಲಿ ಭಾರತವು ಅಂತರರಾಷ್ಟ್ರೀಯ ಬೀಜ ಪರೀಕ್ಷಾ ಸಂಸ್ಥೆಯ ಸದಸ್ಯ ಮುಸುಕಿನ ಜೋಳ, ಜೋಳ ಮತ್ತು ಸಜ್ಜೆಗಳ ಸಂಕರಣ ತಳಿಗಳು ಬಿಡುಗಡೆಯಾಗಲಾರಂಭಿಸಿದವು. ಈ ಸಂಕರಣ ತಳಿ ಬೀಜಗಳ ರಕ್ಷಣೆ, ಬೀಜೋತ್ಪಾದನೆ ಮತ್ತು ವಿತರಣೆಯ ಸಲುವಾಗಿ ೧೯೬೩ರಲ್ಲಿ ರಾಷ್ಟ್ರೀಯ ಬೀಜ ನಿಗಮವು ಸ್ಥಾಪಿತವಾಯಿತು. ಸಂಕರಣ ಬೀಜಗಳನ್ನು ಉತ್ಪಾದಿಸಿ, ಸಕಾಲಕ್ಕೆ ರೈತರಿಗೆ ಸಿಗುವಂತೆ ಮಾಡುವುದು ಅದರ ಪ್ರಾಥಮಿಕ ಉದ್ದೇಶವಾಗಿತ್ತು. ಅಂದಿನಿಂದ ಬೀಜೋತ್ಪಾದನೆ, ಪರಿಷ್ಕರಣೆ, ದಾಸ್ತಾನು, ಸಾಗಣೆ, ಮಾರುಕಟ್ಟೆ ಮತ್ತು ಉತ್ತಮ ವಿತರಣೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಬೀಜ ನಿಗಮವು ವಹಿಸಿಕೊಂಡಿತು. ಇದರ ಭಾರವನ್ನು ಕಡಿಮೆ ಮಾಡಲು ರಾಜ್ಯ ಬೀಜ ನಿಗಮಗಳು ಕೆಲವು ರಾಜ್ಯಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ಅದರಲ್ಲಿ ಕರ್ನಾಟಕ ರಾಜ್ಯವು ಒಂದು.

ಆಧುನಿಕ ತಳಿಗಳು ಮತ್ತು ಕೃಷಿ ಉತ್ಪಾದನೆ:

ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗಳ ಯೋಜನೆಯಲ್ಲಿ ೧೯೬೬-೬೭ರಲ್ಲಿ ಹೆಚ್ಚು ಇಳುವರಿ ತಳಿಗಳ ಕಾರ್ಯಕ್ರಮ ತ್ವರಿತಗತಿಯಿಂದ ಪ್ರಾರಂಭವಾಯಿತು. ಸಮೃದ್ಧಿ (ಕೃಷಿ) ವರ್ಷ ಎಂದು ಪರಿಗಣಿಸಲಾದ ೧೯೬೪-೬೫ ರಲ್ಲಿ ಸಾಧಿಸಲಾದ ೮೯.೪ ಮಿಲಿಯನ್ ಟನ್‌ಗಳ ಉತ್ಪಾದನೆ ೧೯೭೩-೭೪ರಲ್ಲಿ ೧೦೪.೭ ಮಮಿಲಿಯನ್ ಟನ್ ಗಳಷ್ಟಕ್ಕೆ ಏರಿತು. ಹೀಗೆ ಅಧಿಕ ಇಳುವರಿ ತಳಿಗಳು ಬೆಳೆಯಲ್ಪಟ್ಟು ವರ್ಷ, ವಿಸ್ತೀರ್ಣ/ಕ್ಷೇತ್ರ ಉತ್ಪಾದನೆಯ ಒಂದು ಪಕ್ಷಿನೋಟ ಕೆಳಕಂಡಂತಿವೆ:

ವರ್ಷ ವಿಸ್ತೀರ್ಣ/ಕ್ಷೇತ್ರ (ಮಿಲಿಯನ್)
ಹೆಕ್ಟೇರುಗಳಲ್ಲಿ
ಉತ್ಪಾದನೆ (ಟನ್‌ಗಳಲ್ಲಿ)
೧೯೬೬-೬೭ ೧.೮೯
೧೯೭೩-೭೪ ೨೭.೩ ೧೦೪.೭
೧೯೭೮-೭೯ ೪೧.೧ ೧೩೧.೩೭
೧೯೮೪-೮೫ ೫೬.೦ ೧೫೫.೬

ಬೀಜ ಕಾಯ್ದೆ:

ಹೆಚ್ಚು ಪ್ರದೇಶದಲ್ಲಿ ಬೆಳೆಯಲ್ಪಡುತ್ತಿರುವ ತಳಿ ಬೀಜಗಳ ಗುಣಮಟ್ಟ ಕಾಪಾಡಲೆಂದು ೧೯೬೬ರಲ್ಲಿ ರಾಷ್ಟ್ರದಲ್ಲಿ ಬೀಜ ಕಾಯ್ದೆ ಜಾರಿಗೆ ಬಂತು. ಇದರಂತೆ ಪ್ರಕಟಿತ (notified) ತಳಿಗಳ ಬೆಳೆಗಳಿಗಾಗಿ ಉತ್ಪಾದಿಸಿದ ಬೀಜ ಕಡಿಮೆ ಗುಣಮಟ್ಟದಾದರೆ (ಮೊಳಯುವಿಕೆ, ಅನುವಂಶಿಕ ಮತ್ತು ಭೋತಿಕ ಶುದ್ಧತೆ ಕಡಿಮೆ ಇದ್ದಲ್ಲಿ) ಯಾವ ವ್ಯಕ್ತಿಯೂ ಅಂಥ ಬೀಜಗಳನ್ನು ಮಾರಬಾರದು ಅಥವಾ ಮಾರಾಟಕ್ಕೆ ಕೊಡಬಾರದೆಂದು ೧೯೬೬ರ ಬೀಜ ಕಾನೂನು ಮತ್ತು ಅದರ ನಿಯಮಗಳು ತಿಳಿಸುತ್ತವೆ.

ಈ ಕಾಯ್ದೆಯಡಿಯಲ್ಲಿ ಬೀಜ ಪ್ರಮಾಣ ಐಚ್ಚಿಕವಾದುದು ಮತ್ತು ಮಾರಾಟ ಮಾಡಿದ ಎಲ್ಲ ಬೀಜಗಳು ಪ್ರಮಾಣಿತವಾಗಿರಬೇಕಾಗಿಲ್ಲ. ಆದರೂ ಪ್ರಮಾಣೀಕರಿಸಿದ ಬೀಜಗಳಿಗಾಗಿ ರೈತರದು ಹೆಚ್ಚು ಬೇಡಿಕೆಯಿದೆ. ರಾಷ್ಟ್ರೀಯ ಬೀಜ ಸಮಿತಿ (Central Seed Committee) ಅನುಭವ ಹಾಗೂ ಸಂಶೋಧನೆಯ ಆಧಾರದ ಮೇಲೆ ರಾಷ್ಟ್ರೀಯ ಬೀಜ ನಿಗಮದೊಡನೆ ಚರ್ಚಿಸಿ ಅನೇಕ ಬೆಳೆಗಳಿಗೆ ಗುಣಮಟ್ಟದ ಪ್ರಮಾಣವನ್ನು ನಿರ್ಧರಿಸಿದೆ. ೧೯೭೧ರಲ್ಲಿ ಸರಕಾರವು ಬೀಜ ಪ್ರಮಾಣದ ಕನಿಷ್ಟ ಗುಣಮಟ್ಟವನ್ನು ಪ್ರಕಟಿಸಿತು. ಈ ಗುಣಮಟ್ಟದ ಪ್ರಮಾಣ ಮೇಲಿಂದ ಮೇಲೆ ತಿದ್ದುಪಡಿಯಾಗುತ್ತಿರುತ್ತದೆ. ಸರಕಾರವು ರಾಜ್ಯ ಸರಕಾರಗಳಿಗೆ ಬೀಜ ಕಾಯ್ದೆ ಮಾಡುವಲ್ಲಿ ಬೇಕಾಗುವ ಅನುಕೂಲತೆಗಳು ಮತ್ತು ಒಂದೇ ಸಮನಾದ ಗುಣಮಟ್ಟ ಮತ್ತು ಕಾರ್ಯ ವಿಧಾನವನ್ನು ಸಾಧಿಸುವಲ್ಲಿ ಅನುಕೂಲವಾಗಲೆಂದು ಕೇಂದ್ರಿಯ ಬೀಜ ಪ್ರಮಾಣ ಸಂಸ್ಥೆಯನ್ನು ಸ್ಥಾಪಿಸಿದೆ.

ಬೀಜ ಗುಣಮಟ್ಟದ ನಿಯಂತ್ರಣ:

ಎಲ್ಲ ಹಂತಗಳಲ್ಲಿಯೂ ಹೆಚ್ಚು ಇಳುವರಿ ಕೊಡುವ ತಳಿಗಳ ಅನುವಂಶಿಕ ಶುದ್ದಿಕೆಯನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಬೀಜ ತಾಂತ್ರಿಕತೆಯ ಅನೇಕ ವಿಷಯಗಳಾದ ಬೀಜ ಬೇರ್ಪಡೆ ಅಂತರ (Isolation) ಅನುವಂಶಿಕ ಶುದ್ಧತೆ, ಬೀಜ ರೋಗಶಾಸ್ತ್ರ ಬೀಜ ಶರೀರ ಕ್ರಿಯಾಶಾಸ್ತ್ರ, ಪರಿಷ್ಕರಣೆ, ಪ್ಲಾಕಿಂಗ್ ಮತ್ತು ದಾಸ್ತಾನು ಮುಂತಾದವುಗಳ ಮೇಲೆ ಸಂಶೋಧನೆಯನ್ನು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಬೀಜ ಯೋಜನೆ ಮತ್ತು ದಿಲ್ಲಿಯ ಭಾರತೀಯ ಕೃಷಿ ಸಂಶೋಧನ ಕೇಂದ್ರ, ತಮಿಳುನಾಡು ಕೃಷಿ ವಿ.ವಿ. ಮತ್ತು ಪಂತನಗರದ ಗೋವಿಂದ ವಲ್ಲಭಪಂತ ಕೃಷಿ ವಿವಿ ಮತ್ತು ತಾಂತ್ರಿಕ ವಿವಿ ಯೋಜನೆಯಡಿಯಲ್ಲಿ ಸುಮಾರು ೧೧ ವಿ.ವಿ.ಗಳಲ್ಲಿ ಸಂಶೋಧನೆಯನ್ನು ಪ್ರಾರಂಭಿಸಲಾಗಿದೆ.

ರೈತರಿಗೆ ವಿತರಣೆ ಮಾಡಲೆಂದು ಇಟ್ಟಿದ್ದ ಬೀಜ, ಸ್ಥಳಗಳಿಂದ ತಂದ ನಮೂನೆಗಳನ್ನು ಮತ್ತು ಪ್ರಮಾಣ ಪಡೆಯಲಿರುವ ತಾಕುಗಳ ನಮೂನೆಗಳನ್ನು ಬೀಜ ಪರೀಕ್ಷಕರು ಪರೀಕ್ಷಿಸಲೆಂದು ರಾಜ್ಯ ಸರಕಾರವು ರಾಜ್ಯ ಬೀಜ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ. ಭಾರತೀಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸ್ಥಾಪಿಸಲಾದ ಕೇಂದ್ರ ಬೀಜ ಪರೀಕ್ಷಾ ಪ್ರಯೋಗಾಲಯವು ಇದಕ್ಕೆ ಆಧಾರಯುತವಾಗಿದೆ. ಈ ಪ್ರಯೋಗಾಲಯವು ರಾಜ್ಯ ಬೀಜ ಪರೀಕ್ಷಾ ಪ್ರಯೋಗಾಲಯಗಳ ಶೇ.೫ರಷ್ಟು ನಮೂನೆಗಳನ್ನು ಪರೀಕ್ಷಿಸುತ್ತದೆ. ಇದು ದೇಶದಲ್ಲೆಲ್ಲ ಬೀಜ ಪರೀಕ್ಷಾ ವಿಧಾನಗಳು ಒಂದೇ ರೀತಿಯಲ್ಲಿವೆಯೇ ಎಂಬುದನ್ನು ಅವಲೋಕಿಸುತ್ತದೆ.

ಕರ್ನಾಟಕ ರಾಜ್ಯ ಬೀಜ ಪ್ರಮಾಣ ಸಂಸ್ಥೆ ಬೀಜ ತಾಂತ್ರಿಕತೆ ಸಂಶೋಧನೆ:

ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಹೊಸ ಹೊಸ ತಳಿಗಳು ಪ್ರತಿ ಬೆಳೆಯಲ್ಲೂ ಬಿಡುಗಡೆಯಾಗುತ್ತಿವೆ. ಸಂಕರಣ, ಸಾಧಾರಣ, ಸಂಯುಕ್ತ, ಸಂಯೋಗ, ಏಕೀಕೃತ, ಕಸಿಯೋಗ್ಯ ಮುಂತಾದ ತಳಿಗಳು ರಾಷ್ಟ್ರಮಟ್ಟದಲ್ಲಿ ಸಾವಿರಾರು ಮತ್ತು ರಾಜ್ಯಮಟ್ಟದಲ್ಲಿ ನೂರಾರು ಬಿಡುಗಡೆಯಾಗಿ ಸಾಕಷ್ಟು ಪ್ರಮಾಣದಲ್ಲಿ ಹರಡಿವೆ. ನೂತನ ತಳಿಗಳು ನಾಡ ತಳಿಗಳಿಗಿಂತ ಬೀಜ ಸಂಖ್ಯಾವೃದ್ಧಿ ವಿಧಾನಗಳಲ್ಲಿ ಹೊರತಾಗಿರುವುದರಿಂದ ವೈಜ್ಞಾನಿಕವಾಗಿ ತರಬೇತಿ ಪಡೆದ ಸಂಸ್ಥೆ ಮತ್ತು ಸಿಬ್ಬಂದಿಗಳಿಂದ ಮಾತ್ರ ಉತ್ತಮ ಬೀಜೋತ್ಪಾದನೆ ಸಾಧ್ಯ. ಬೀಜೋತ್ಪಾದನೆಯು ಏಕ ಪ್ರಮಾಣದಲ್ಲಿ ಸಾಗಬೇಕಾಗಿರುವುದರಿಂದ ಯಾವುದೇ ಒಂದು ಅಥವಾ ಎರಡು ಸಂಸ್ಥೆಗಳಿಂದ ಕೈಗೊಳ್ಳಲಾಗುವುದಿಲ್ಲ. ಆದ್ದರಿಂದ ಅನೇಕ ಸರ್ಕಾರಿ, ಖಾಸಗಿ ಮತ್ತು ಅಲ್ಲಲ್ಲಿನ ಮುಂದುವರೆದ ರೈತರು ಬೀಜೋತ್ಪಾದನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೀಜದ ಗುಣಮಟ್ಟವನ್ನು ಕಾಪಾಡಿಕೊಂಡು ಬರಲು ಒಂದು ಸಂಸ್ಥೆಯ ಅವಶ್ಯಕತೆಯನ್ನು ಪೂರೈಸಲು ಕರ್ನಾಟಕ ರಾಜ್ಯ ಬೀಜ ಪ್ರಮಾಣ ಸಂಸ್ಥೆಯನ್ನು ರಾಜ್ಯದಲ್ಲಿ ೧೯೭೪-೭೫ರಲ್ಲಿ ರಾಷ್ಟ್ರದಲ್ಲೇ ಪ್ರಥಮವಾಗಿ ಸ್ಥಾಪಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ನೆರವಿನಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ ಲಾಭ ಮಾಡುವ ಗುರಿ ಇಲ್ಲ. ಭಾರತದಲ್ಲಿ ಜಾರಿಗೆ ಬಂದಿರುವ ಬೀಜ ಕಾಯ್ದೆಯ ಪ್ರಕಾರ ಈ ಸಂಸ್ಥೆ ಚಟುವಟಿಕೆಗಳನ್ನು ನಿರ್ಧರಿಸಲಾಗಿದೆ. ಉತ್ತಮ ಮಟ್ಟದ ಬೀಜಕ್ಕೆ ಇರಬೇಕಾದ ಗುಣಮಟ್ಟಗಳನ್ನು ಅರಿತು ನೊಂದಾಯಿಸಿದ ಬೀಜ ತಾಕುಗಳನ್ನು ನಿರ್ದಿಷ್ಟ ಕಾಲಗಳಲ್ಲಿಯೇ ಭೇಟಿ ಇತ್ತು, ಪರೀಕ್ಷಿಸಿ, ತೃಪ್ತಿಕರವಾದ ತಾಕುಗಳನ್ನು ಕೊಯ್ಲಿನವರೆಗೂ ನಂತರ ಪರೀಷ್ಕರಣವಾಗಿ ಬೀಜ ಪರೀಕ್ಷೆಯ ಫಲಿತಾಂಶಗಳನ್ನು ಪಡೆದು ಪ್ರಮಾಣಿಸಲಾಗುವುದು. ಹೀಗೆ ಲೋಪದೋಷಗಳಿರುವ ಬೀಜವನ್ನು ತಳ್ಳಿ ಹಾಕಲಾಗುವುದು. ಸಂಸ್ಥೆಯು ತನ್ನ ಚಟುವಟಿಕೆಯನ್ನು ಆರಂಭಿಸಿದ ಮೊದಲನೆಯ ವರ್ಷ (೧೯೭೪-೭೫) ೬೩೧೫ ಹೆಕ್ಟೇರು ಪ್ರದೇಶವನ್ನೊಳಗೊಂಡ ಬೀಜೋತ್ಪಾದನಾ ತಾಕನ್ನು ಪರಿಶೀಲಿಸಿ, ೬೫೧೭೯ ಕ್ವಿಂಟಲ್ ಉತ್ತಮ ಬೀಜೋತ್ಪಾದನೆಯಲ್ಲಿ ನೆರವು ನೀಡಿತ್ತು. ೧೯೮೧-೮೨ರಲ್ಲಿ ೭೪೧೧ ಹೆಕ್ಟೇರುಗಳನ್ನು ಪರೀಕ್ಷಿಸಿ ೬೨೭೯೮ ಕ್ವಿಂಟಾಲ್ ಬೀಜೋತ್ಪಾದನೆಗೆ ನೆರವಾಯಿತು. ರಾಜ್ಯದಲ್ಲಿ ಸದ್ಯಕ್ಕೆ ಕೆಲವೇ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯು ಇನ್ನೂ ವಿಸ್ತರಣೆಗೊಂಡು ಹೆಚ್ಚಿನ ಮಟ್ಟದಲ್ಲಿ ಉತ್ತಮ ಬೀಜದ ಉತ್ಪಾದನೆ ನಿರ್ವಹಿಸಬೇಕಾಗಿದೆ.

ಬೀಜ ತಾಂತ್ರಿಕತೆ ಸಂಶೋಧನೆ:

ಸಸ್ಯ ತಳಿ ಅಭಿವೃದ್ಧಿಕರಿಂದ ಉತ್ಪಾದಿಸಿದ ವಿವಿಧ ತಳಿಗಳ ಅನುವಂಶಿಕ ಶುದ್ಧತೆ, ತಳಿಯ ಆಯಸ್ಸು ಹೆಚ್ಚಿಸುವುದು ಮತ್ತು ಅಧಿಕ ಇಳುವರಿ ತಳಿಯ ಸಾಮರ್ಥ್ಯದ ಸಂಪೂರ್ಣ ಫಲವನ್ನು ಪಡೆಯಲು ಬೀಜ ತಾಂತ್ರಿಕತೆಯಲ್ಲಿ ಸಂಶೋಧನಾ ಪ್ರಗತಿ ಅವಶ್ಯಕ. ಅಂತೆಯೇ ಬೀಜ ತಾಂತ್ರಿಕ ಪ್ರತಿಷ್ಟಾನದ ಭಾಗಗಳಾದ ಅನುವಂಶಿಕ ಶುದ್ಧತೆ ಮತ್ತು ಇಲೈಡ್ ಬೀಜದ ರಕ್ಷಣೆ, ಬೀಜ ಮತ್ತು ಬೀಜ ಬೆಳೆಗಳ ಶರೀರ ಶಾಸ್ತ್ರ ಮತ್ತು ಕೃಷಿಶಾಸ್ತ್ರ, ಬೀಜರೋಗಶಾಸ್ತ್ರ ಮತ್ತು ಬೀಜ ಕೀಟಗಳು, ಬೀಜ ಪರಿಷ್ಕರಣೆ, ಒಣಗಿಸುವುದು ಮತ್ತು ದಾಸ್ತಾನು ಮಾಡುವುದಕ್ಕಾಗಿ ಯಂತ್ರದ ನಕ್ಷೆಗಳು ಮತ್ತು ಯಾಂತ್ರಿಕ ಬೆಳವಣಿಗೆ ಮುಂತಾದ ಕ್ಷೇತ್ರಗಳಲ್ಲೆಲ್ಲ ಸಂಶೋಧನೆಯನ್ನು ಪ್ರಾರಂಭಿಸಲಾಗಿದೆ.

ಯಾವುದೇ ತಳಿಯು ಕೆಡಲು ಅಂದರೆ ತನ್ನ ಇಳುವರಿ ಸಾಮರ್ಥ್ಯವನ್ನು ಕಳೆದುಕೊಳ್ಳಲು ಅನೇಕ ಕಾರಣಗಳಿದ್ದರೂ ಪ್ರಮುಖವಾದುದು ಅನನ್ಯ ಪರಾಗಸ್ಪರ್ಶ. ಈ ಕಾರಣದಿಂದ ಕುಗ್ಗಿದ ತಳಿಯ ಸಾಮರ್ಥ್ಯವನ್ನು ಯಾವ ರೀತಿಯಿಂದಲೂ ಸರಿಪಡಿಸಲಾಗುವುದಿಲ್ಲ. ಆದ್ದರಿಂದ ವೈಜ್ಞಾನಿಕವಾಗಿ ಸುರಕ್ಷಿತ ಅಂತರವನ್ನು ಪ್ರತಿ ಬೆಳೆಗೂ ನಿರ್ಧರಿಸಬೇಕು. ಇದಕ್ಕಾಗಿ ಸಾಕಷ್ಟು ಸಂಶೋಧನೆ ನಡೆಯಬೇಕು. ಬೀಜ ಸಂಖ್ಯಾಭಿವೃದ್ಧಿಯ ಪ್ರತಿ ಹಂತದಲ್ಲಿಯೂ ತಜ್ಞರಿಂದ ತಾಕುಗಳ ಪರೀಕ್ಷೆ ನಡೆಯಬೇಕು. ಹೋಲಿಕೆಯ ತಾಕುಗಳ ಪರೀಕ್ಷೆಯಲ್ಲಿ ಪ್ರತಿ ಬೀಜ ಸಂಬಂಧಿ ಸಂಸ್ಥೆಗಳ ಪ್ರತಿನಿಧಿಯಿರಬೇಕು. ಆಯಾ ಬೆಳೆಯ ಕೋ-ಆರ್ಡಿನೇಟರ್ ಸಸ್ಯ ತಳಿ ಅಭಿವೃದ್ಧಿಕರು, ರಾಷ್ಟ್ರೀಯ ಮತ್ತು ರಾಜ್ಯ ಬೀಜ ನಿಗಮಗಳ ಪ್ರತಿನಿಧಿ, ಬೀಜ ಪ್ರಮಾಣ ಸಂಸ್ಥೆಯ ಪ್ರತಿನಿಧಿಗಳು ಕೂಡಿ ತಾಕುಗಳ ಪರೀಕ್ಷೆಯನ್ನು ಮಾಡುತ್ತಾರೆ.

ಬೀಜ ಸಂಖ್ಯಾಭಿವೃದ್ಧಿಯ ಮಾದರಿ:

ಪ್ರಮಾಣಿತ ಬೀಜ ಕನಿಷ್ಟ ಗುಣಗಳನ್ನು ಮುಟ್ಟಲು ವೈಜ್ಞಾನಿಕವಾಗಿ ಮೂರು ಬೀಜ ವರ್ಗಗಳಿವೆ. ಅಭಿವೃದ್ಧಿಕ ಬೀಜ (breeder seed) ಮೂಲಬೀಜ (foundation seed) ಮತ್ತು ಪ್ರಮಾಣಿತ ಬೀಜ (certified seed). ಅಭಿವೃದ್ದಿಕ ಬೀಜ ಮತ್ತು ಮೂಲಬೀಜಗಳು ಸಾರ್ವಜನಿಕ ಸಂಸ್ಥೆಗಳಿಂದ ನಿರ್ವಹಿಸಲ್ಪಟ್ಟರೆ, ಪ್ರಮಾಣಿತ ಬೀಜಗಳು ಸಾರ್ವಜನಿಕ ಹಾಗೂ ಖಾಸಗಿ ವಲಯಗಳಿಂದಲೂ ನಿರ್ವಹಿಸಲ್ಪಡುತ್ತದೆ. ಪ್ರಮಾಣಿಸಿದ ಬೀಜದಿಂದಲೇ ಮತ್ತೊಂದು ಸಂತತಿ ಪ್ರಮಾಣಿಸಿದ ಬೀಜವನ್ನು ಉತ್ಪಾದಿಸುವ ಪದ್ಧತಿಯೂ ಕೆಲವು ದೇಶಗಳಲ್ಲಿ ಉಂಟು.

ಅಭಿವೃದ್ಧಿಕ ಬೀಜವು ಸಂಶೋಧನಾ ಕೇಂದ್ರಗಳಲ್ಲಿ ತಳಿ ತಜ್ಞರಿಂದ ಉತ್ಪಾದಿಸಲ್ಪಟ್ಟು, ಅತ್ಯಂತ ಶುದ್ಧವಾಗಿರುತ್ತದೆ. ಬೆಳೆಯ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಎರಡು ಹಂತಗಳಲ್ಲಿ ಉತ್ಪಾದನೆಯಾಗಬಹುದು. ಆಗ ಅದನ್ನು ಅಭಿವೃದ್ಧಿಕ ಬೀಜ ಹಂತ ಒಂದು, ಅಭಿವೃದ್ಧಿಕ ಬೀಜ ಹಂತ ಎರಡು (nuclus seed) ಎಂದು ಕರೆಯಲ್ಪಡುತ್ತದೆ. ಅಭಿವೃದ್ಧಿಕ ಬೀಜದಿಂದ ಬೆಳೆ ಬೆಳೆಸಿ ಮೂಲಬೀಜವನ್ನು ಉತ್ಪಾದಿಸಲಾಗುತ್ತದೆ. ಪ್ರಮಾಣಿಸಿದ ಬೀಜವನ್ನು ಮೂಲಬೀಜದಿಂದ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದನ್ನು ಉತ್ಪಾದಿಸಲು ಬೀಜ ಪ್ರಮಾಣ ಸಂಸ್ಥೆಗೆ ಅರ್ಜಿ ಸಲ್ಲಿಸಿ, ನಿಯಮಗಳಿಗೆ ಬದ್ಧವಾಗಿ ಬೆಳೆ ಬೆಳೆದು ಹಂತ ಹಂತದಲ್ಲಿಯೂ ಪ್ರಮಾಣ ಸಂಸ್ಥೆ ಸಿಬ್ಬಂದಿಯ ಒಪ್ಪಿಗೆ ಪಡೆದು ಚೀಟಿಯನ್ನು ಪಡೆಯಬೇಕು.

ಈ ಮೂರು ವರ್ಗಗಳಲ್ಲದೆ ಚೀಟಿ ಲಗತ್ತಿಸಿದ ಬೀಜವನ್ನು ಬೀಜೋತ್ಪಾದಕರೂ ಒದಗಿಸಬಹುದು. ಇದಕ್ಕೆ ಲಗತ್ತಿಸಿರುವ ಚೀಟಿಯಲ್ಲಿ ತಳಿಯ ಹೆಸರು, ಮೊಳಕೆ ಪ್ರಮಾಣ ಮತ್ತು ಶುದ್ದತೆಯ ಬಗ್ಗೆ ವಿವರವಿರಬೇಕು.

ಭವಿಷ್ಯತ್ತಿನ ಯೋಜನೆಗಳು:

ರಾಷ್ಟ್ರೀಯ ಕೃಷಿ ಆಯೋಗದ ಪ್ರಕಾರ ಕ್ರಿ.ಶ. ೨೦೦೦ ರಷ್ಟೊತ್ತಿಗೆ ೨೦೦ ಮಿಲಿಯನ್ ಹೆಕ್ಟೇರುಗಳಲ್ಲಿ ಕ್ಷೇತ್ರದಲ್ಲಿ ಎಲ್ಲ ತರದ ಧಾನ್ಯ, ವಾಣಿಜ್ಯ, ತೋಟಗಾರಿಕೆ, ಪ್ಲಾಂಟೇಷನ್ ಮತ್ತು ಮೇವಿನ ಬೆಳೆಗಳಿಗೆ ೭೦ ಬೀಜ ಸಂಸ್ಥೆಗಳು ಬೇಕಾಗುತ್ತವೆ. ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಸರಕಾರಿ ಮತ್ತು ಖಾಸಗಿಯವರನ್ನು ಕೂಡಿಸಿ ೫೦ ಮೂಲಬೀಜ ಸಂಸ್ಥೆಗಳು ಬೇಕಾಗುತ್ತದೆ. ಮತ್ತು ೩೬೦ ಪ್ರಮಾಣಿತ ಬೀಜ ಸಂಸ್ಥೆಗಳು ಬೇಕಾಗುತ್ತದೆ. ಇದಕ್ಕೆ ೩೦೦೦ ಬೀಜ ಪರಿಷ್ಕರಣ ಯೂನಿಟ್‌ಗಳು ಮತ್ತು ಅಷ್ಟೇ ಸಂಖ್ಯೆಯಲ್ಲಿ ದಾಸ್ತಾನು ಸೌಕರ್ಯಗಳು ಬೇಕಾಗುತ್ತವೆ.

ರಾಷ್ಟ್ರೀಯ ಕೃಷಿ ಆಯೋಗಕ್ಕೆ ಬೀಜೋದ್ಯಮವು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತೆ ಮಾಡುವುದಕ್ಕಾಗಿ ವಿಶ್ವಬ್ಯಾಂಕಿನ ನೆರವು ದೊರಕಿದೆ. ಈ ಯೋಜನೆಯಲ್ಲಿ ೧೬ ಕೃಷಿ ವಿ.ವಿ. ಯಲ್ಲಿ ೨೬ ಅಭಿವೃದ್ಧಿಕ ಬೀಜೋತ್ಪಾದನೆಯ ಶಾಖೆಗಳನ್ನು ೬ ರಾಷ್ಟ್ರೀಯ ಕೃಷಿ ಸಂಶೋಧನಾ ಕೇಂದ್ರಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ೨೪ ಮೂಲಬೀಜ ಉತ್ಪಾದನೆ ಶಾಖೆಗಳನ್ನು ಮತ್ತು ೧೦ ರಾಜ್ಯ ಬೀಜ ನಿಗಮಗಳನ್ನು ಸ್ಥಾಪಿಸುವಲ್ಲಿ ಸಹಾಯ ಮಾಡಿದೆ. ಅದಲ್ಲದೆ ೧೧ ಕೃಷಿ ವಿವಿಗಳಲ್ಲಿ ಬೀಜ ತಾಂತ್ರಿಕ ಸಂಶೊಧನಾ ಪ್ರಯೋಗಾಲಯಗಳು ಸ್ಥಾಪಿಸಲ್ಪಟ್ಟಿವೆ. ಅಭಿವೃದ್ಧಿಕ ಬೀಜ ಉತ್ಪಾದನಾ ಮತ್ತು ಪರಿಷ್ಕರಣ ಕೇಂದ್ರ (BSPUS) ಮೂಲಬೀಜ ಉತ್ಪಾದನಾ ಮತ್ತು ಪರಿಷ್ಕರಣ ಕೇಂದ್ರ (FSPUS) ಪ್ರಮಾಣಿತ ಬೀಜ ಉತ್ಪಾದನಾ ಮತ್ತು ಪರಿಷ್ಕರಣ ಕೇಂದ್ರ ಮತ್ತು ಬೀಜ ತಾಂತ್ರಿಕತೆ ಸಂಶೋಧನೆ (SRT)  ಪ್ರಯೋಗಾಲಯಗಳು ಅತ್ಯಾಧುನಿಕ ಸಲಕರಣೆ ಮತ್ತು ಸೌಲಭ್ಯಗಳನ್ನು ತಮ್ಮ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತಿವೆ.

ಬೀಜ ಪ್ರಗತಿ ಕಾರ್ಯದಲ್ಲಿ ಒಳಗೊಂಡಿರುವ ಸಂಸ್ಥೆಗಳು:

ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಬಹುದೊಡ್ಡ ಸಂಖ್ಯೆಯಲ್ಲಿ ಬೀಜ ಪ್ರಗತಿಯ ಕಾರ್ಯದಲ್ಲಿ ಮಗ್ನವಾಗಿದೆ. ಈ ಸಂಸ್ಥೆಗಳು ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು (ಕೃಷಿ ಶಾಖೆ), ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, (ICAR) ರಾಜ್ಯ ಮತ್ತು ಕೇಂದ್ರ ಕೃಷಿ ಸಂಶೋಧನಾ ಕೇಂದ್ರಗಳು, ಕೃಷಿ ವಿಶ್ವವಿದ್ಯಾನಿಲಯಗಳು, ರಾಷ್ಟ್ರೀಯ ರಾಜ್ಯ ಬೀಜ ನಿಗಮಗಳು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಹಕಾರಿ ಮಾರುಕಟ್ಟೆ ಸಂಸ್ಥೆಗಳು, ಹಳ್ಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಹಕಾರ ಮಾರುಕಟ್ಟೆ ಸಂಸ್ಥೆಗಳು, ಖಾಸಗಿ ಬೀಜ ಕಂಪನಿಗಳು ಮತ್ತು ಬೀಜ ನಿಗಮಗಳು, ಇದಲ್ಲದೆ ಪ್ರಗತಿಪರ ರೈತರು, ಬೀಜ ಬೆಳೆಯುವವರು ಮತ್ತು ವರ್ತಕರ ಸಂಘಗಳು ಇವೇ ಮುಂತಾದವು.

ಭಾರತೀಯ ಕೃಷಿ ಸಂಶೊಧನಾ ಪರಿಷತ್ತು ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ತು, ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಗಳು, ಕೃಷಿ ವಿವಿ.ಗಳೊಂದಿಗೆ ಜೊತೆಗೂಡಿ ಬೀಜ ಸಂಶೋಧನೆ ಮತ್ತು ಸಂಶೋಧನೆಗೆ ಮಾರ್ಗದರ್ಶನ ಹಾಗೂ ಸಹಾಯ ನೀಡುತ್ತಿವೆ. ರಾಷ್ಟ್ರೀಯ ಬೀಜ ನಿಗಮವು ಭಾರತೀಯ ಕೇಂದ್ರಮಟ್ಟದ ಬೀಜೋದ್ಯಮದ ಏಕಮಾತ್ರ ಸಂಸ್ಥೆಯಾಗಿದೆ. ಅದು ಸ್ವತಃ ಉತ್ಪಾದನೆ, ಪರಿಷ್ಕರಣೆ ಮತ್ತು ಬೀಜ ಪ್ರಮಾಣ ಕಾರ್ಯಗಳಲ್ಲಿ ಮಗ್ನವಾಗಿದ್ದರೂ ಸಹ, ಅದು ಮಾರುಕಟ್ಟೆ ಮತ್ತು ಸೇವಾಸಂಘಟನೆ ಕಾರ್ಯಕರ್ತರ ಮೂಲಕ ಭವಿಷ್ಯದ ಬೀಜೋದ್ಯಮದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ರಾಜ್ಯ ಬೀಜ ನಿಗಮಗಳು, ಪಂಜಾಬ್, ಹರಿಯಾಣ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟಿವೆ. ರಾಜ್ಯ ಬೀಜ ನಿಗಮಗಳ ನಿರ್ಮಾಣ ೬೦ರ ದಶಕದಲ್ಲಿ ಪಂತನಗರದಲ್ಲಿ ಮಾಡಿದ ಕೆಲಸಕ್ಕೆ ಅತ್ಯುತ್ತಮ ಕಾಣಿಕೆಯಾಗಿ ತಾರಾಯ್ ಪ್ರಗತಿ ನಿಯಮ (TDC) ಹುಟ್ಟಿತು. ಈಗ ಇದು ಭಾರತದಲ್ಲಿ ಬೀಜ ನಿಗಮದ ಮಾದರಿಯಾಗಿ ನಿಂತಿದೆ. ಬೀಜ ಕಾನೂನಿನ ಪ್ರವೇಶದಿಂದಾಗಿ ರಾಜ್ಯ ಸರಕಾರಗಳು ಬೀಜೋತ್ಪಾದನೆ ಮತ್ತು ಪ್ರಮಾಣ ನೋಡಿಕೊಳ್ಳುವ ಸಲುವಾಗಿ ತಮ್ಮ ಸ್ವಂತ ಬೀಜ ಪ್ರಮಾಣ ಸಂಸ್ಥೆಗಳನ್ನು ಸ್ಥಾಪಿಸಿದೆ.

ಸದ್ಯದಲ್ಲೇ ಉಳಿದ ರಾಜ್ಯ ಸರಕಾರಗಳೂ ತಮ್ಮ ಅವಶ್ಯಕತೆಗನುಸಾರವಾಗಿ ತಮ್ಮದೇ ಆದ ಬೀಜ ನಿಗಮಗಳನ್ನು ಮತ್ತು ಪ್ರಮಾಣ ಸಂಸ್ಥೆಗಳನ್ನು ಸ್ಥಾಪಿಸಲು ಅನುವಾಗುತ್ತಿವೆ.

ರಾಷ್ಟ್ರೀಯ ಬೀಜ ಯೋಜನೆ:

ರಾಷ್ಟ್ರೀಯ ಬೀಜ ಯೋಜನೆಯ ಅಡಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ರಾಷ್ಟ್ರ ಮತ್ತು ಪ್ರಾಂತೀಯ ಮಟ್ಟದ ಅಭಿವೃದ್ಧಿಕ ಬೀಜಗಳ ಉತ್ಪಾದನೆ ಮತ್ತು ಗುಣಮಟ್ಟವನ್ನು ಗುರುತಿಸಿ ಸಂಘಟನೆ ನಡೆಸುತ್ತಿದೆ. ರಾಜ್ಯ ಮತ್ತು ಸ್ಥಳೀಯ ತಳಿಗಳ ಅಭಿವೃದ್ಧಿಕ ಬೀಜ ಉತ್ಪಾದನೆ ರಾಜ್ಯ ಕೃಷಿ ವಿವಿಗಳು ಮತ್ತು ಸಂಬಂಧಿಸಿದ ರಾಜ್ಯ ಬೀಜ ನಿಗಮಗಳ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟದ ಮೂಲಬೀಜ ತಳಿಗಳ ಉತ್ಪಾದನೆ ಮತ್ತು ಸಂಘಟನೆ ರಾಷ್ಟ್ರೀಯ ಬೀಜ ನಿಗಮದ ಕಾರ್ಯ ಇದಕ್ಕೆ ಪ್ರಮಾಣಿಕ ಬೀಜಗಳ ಉತ್ಪಾದನೆ, ಪರಿಷ್ಕರಣೆ, ದಾಸ್ತಾನು ಮತ್ತು ಮಾರುಕಟ್ಟೆ ಜವಾಬ್ದಾರಿ ಇದ್ದರೂ ಕುಡ ರಾಜ್ಯ ಬೀಜ ನಿಗಮಗಳಲ್ಲದೆ ಅಂತರ ರಾಜ್ಯ ಮಾರುಕಟ್ಟೆ ಮತ್ತು ರಾಜ್ಯಗಳಲ್ಲಿ ಮಾರಾಟದ ವ್ಯವಸ್ಥೆ ಕೂಡ ಇದರದೇ ಆಗಿದೆ. ರಾಷ್ಟ್ರೀಯ ಬೀಜ ನಿಗಮವು ರಾಷ್ಟ್ರೀಯ ಬೀಜ ಯೋಜನೆಗಳ ಬಗ್ಗೆ ತಾಂತ್ರಿಕ ವರ್ಗದವರಿಗೆ ಬೀಜ ಪರೀಕ್ಷೆ ಮತ್ತು ಪರಿಷ್ಕರಣೆಯಲ್ಲಿ ಅಲ್ಪಾವಧಿಯ ತರಬೇತಿಯನ್ನು ಕೊಡುವ ಕಾರ್ಯ ನಿರ್ವಹಿಸುತ್ತಿದೆ.

ರಾಷ್ಟ್ರೀಯ ಬೀಜ ಯೋಜನೆಗಳ ಅಡಿಯಲ್ಲಿ ೧೧ ಕೃಷಿ ವಿವಿಗಳಲ್ಲಿ ಬೀಜ ತಾಂತ್ರಿಕ ಸಂಶೋಧನೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿಶ್ವ ಬ್ಯಾಂಕಿನ ಪರಿಣಿತರು ಇವೆಲ್ಲ ಪ್ರಯೋಗಾಲಯಗಳಿಗೆ ಬೇಕಾಗುವ ಸೌಕರ್ಯಗಳನ್ನು ನೀಡುತ್ತಿದ್ದಾರೆ. ಕೃಷಿ ವಿ.ವಿ. ಗಳು ಕಳುಹಿಸಿದ ಅಭ್ಯರ್ಥಿಗಳಿಗೆ ಬೀಜ ತಾಂತ್ರಿಕ ಜ್ಞಾನದಲ್ಲಿ ತರಬೇತಿಯನ್ನು ಭಾರತ ಮತ್ತು ಹೊರದೇಶದಲ್ಲಿ ನೀಡಲಾಗುತ್ತಿದೆ.

ಖಾಸಗಿ ವಲಯಗಳಲ್ಲಿ ಬೀಜೋದ್ಯಮ:

ಸಹಕಾರಿ ಸಂಸ್ಥೆಗಳು ಚಿಲ್ಲರೆಯಾಗಿ (Retail) ಬೀಜ ವಿತರಣೆ, ಬೀಜೋತ್ಪಾದನೆಯ ಬೆಳವಣಿಗೆ ಮತ್ತು ಪರಿಷ್ಕರಣೆಯ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿವೆ. ಈ ಉದ್ಯಮವು ಸಾರ್ವಜನಿಕ ಸಂಸ್ಥೆಗಳಿಗೆ ಮಾತ್ರ ಮೀಸಲಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ಬೇಕಾಗುವ ವಿವಿಧ ಬೀಜಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಖಾಸಗಿ ಸಂಸ್ಥೆಗಳೂ ಮುಂದೆ ಬಂದಿವೆ. ಇವು ದೇಶಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿವೆಯಲ್ಲದೆ ಬೇರೆ ದೇಶಗಳಿಗೆ ಬೀಜಗಳನ್ನು ರಫ್ತು ಮಾಡುತ್ತಿವೆ.

ಭಾರತೀಯ ಕೃಷಿ ಅಭಿವೃದ್ಧಿ ಮತ್ತು ಪ್ರಮಾಣಿತ ಬೀಜೋತ್ಪಾದಕರ ಸಂಘ, ಅಖಿಲ ಭಾರತ ತರಕಾರಿ ಬೀಜೋತ್ಪಾದಕರು, ವರ್ತಕರು, ಮತ್ತಿತರ ಬೀಜ ಸಂಬಂಧಿ ಸಂಸ್ಥೆಗಳು ಬೀಜ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ತಲೆದೋರುವ ಅನೇಕ ಸಂಸ್ಥೆಗಳನ್ನು ಮತ್ತು ಅದಕ್ಕೆ ಪರಿಹಾರ ಕ್ರಮಗಳನ್ನು ಚರ್ಚಿಸುವ ಕೆಲಸ ಮಾಡುತ್ತಿವೆ.

ದೇಶವು ಕಳೆದ ೧೫ ದಾಖಲೆ ವರ್ಷಗಳಲ್ಲಿ ಸ್ವಾವಲಂಬಿಯಾಗಿದ್ದರೂ, ಬೀಜ ಕಾರ್ಯಕ್ರಮ ತೃಪ್ತಿಕರವಾಗಿಲ್ಲ. ಗೋಧಿ ಮತ್ತು ಬತ್ತಗಳ ಸುಧಾರಿಸಿದ ತಳಿಗಳನ್ನು ಹೆಚ್ಚಿನ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಬೀಜ ನಿಗಮಗಳು, ಖಾಸಗಿ ಬೀಜ ಸಂಸ್ಥೆಗಳು ಬೆಳೆಸಿದ್ದರೂ ಸಹ, ದ್ವಿದಳ ಕಾಳುಗಳು, ಎಣ್ಣೆಕಾಳುಗಳು, ಜೋಳ, ಮೆಕ್ಕೆಜೋಳ ಮತ್ತು ಗೋಧಿಗಳ ಹೈಬ್ರಿಡ್ ತಳಿಗಳಲ್ಲಿ ಸುಧಾರಣೆ ಹೇಳಿಕೊಳ್ಳುವಷ್ಟಿಲ್ಲ. ಈ ಸಮತೋಲನದ ಬಗ್ಗೆ ಸಂಬಂಧಿಸಿದವರ ಲಕ್ಷ್ಯ ಸೆಳೆಯಬೇಕು.