ಬೀಜವಿಲ್ಲದ ಸಂತಾನಾಭಿವೃದ್ಧಿ ಕೃಷಿಯಲ್ಲಿ ಅಪೂರ್ವವಾದ ಸಂಗತಿಯೇನೂ ಅಲ್ಲ. ಬೇರು ಕಾಂಡ, ಎಲೆ ಹೀಗೆ ಸಸ್ಯದ ಕೆಲವು ಭಾಗಗಳಿಂದ ಹೊಸ ಸಸ್ಯವನ್ನು ಪಡೆಯುವುದು ಅನಾದಿ ಕಾಲದಿಂದಲೂ ಬಳಕೆಯಲ್ಲಿದೆ. ಆದರೆ ಬತ್ತದಲ್ಲಿ ಮಾತ್ರ ಈ ರೀತಿಯ ಸಂತಾನಾಭಿವೃದ್ಧಿ ಹೊಸದೆಂದೇ ಹೇಳಬಹುದು. ಕೂಳೆ ಬೆಳೆ ಅಂದರೆ ಒಂದು ಬೆಳೆಯನ್ನು ಕೊಯ್ಲು ಮಾಡಿದಾಗ ಭೂಮಿಯಲ್ಲೇ ಉಳಿದಿರುವ ಕಾಂಡವು ಹಿತವಾದ ವಾತಾವರಣ ದೊರಕಿದಾಗ ಮತ್ತೆ ಚಿಗುರಿ ಮತ್ತೊಂದು ಹೊಸ ಬೆಳೆಯನ್ನೇ ನೀಡಬಲ್ಲ ಸಾಧ್ಯತೆಯ ಬಗ್ಗೆ ವಿವರಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಬೀಜ ಮತ್ತು ಕೂಳೆ ಇವೆರಡನ್ನೂ ಬಿಟ್ಟರೆ ಬೇರೆ ಯಾವ ಮಾರ್ಗವೂ ಹತ್ತದ ಸಸ್ಯ ಉತ್ಪಾದನೆಯಲ್ಲಿ ಸಾಧ್ಯವೆನಿಸಿರಲಿಲ್ಲ. ಆದರೆ ೧೯೬೭ ರಿಂದ ನಡೆಸಿದ ಸಂಶೋಧನೆಯಿಂದ ಬತ್ತದ ಸಸ್ಯದ ಯಾವುದೇ ಒಂದು ಭಾಗ (ಜೀವಕೋಶ) ಅಥವಾ ಪರಾಗದಿಂದ ಇಡೀ ಸಸ್ಯವನ್ನೇ ಬೆಳೆಸಬಲ್ಲ ಅತ್ಯಂತ ಆಧುನಿಕ ವಿಧಾನಗಳು ಪ್ರಯೋಗದಲ್ಲಿರುವುದು ಮತ್ತು ಕೆಲವು ಸಂಶೋಧಕರು ಈಗಾಗಲೇ ಸಫಲರಾಗಿರುವುದು ತಿಳಿದು ಬಂದಿದೆ. ಇದರ ಬಗ್ಗೆ ಈವರೆಗೆ ದೊರಕಿರುವ ಮಾಹಿತಿ ಕೆಳಕಂಡಂತಿವೆ.

ಸ್ವಚ್ಛಗೊಳಿಸಿದ ಬತ್ತದ ಬೀಜವನ್ನು ಒಂದು ನಿರ್ಧಿಷ್ಟ ರಾಸಾಯನಿಕ ವಸ್ತು ಮತ್ತು ೨, ೪ ಡಿ ಮಿಶ್ರಣದಲ್ಲಿಟ್ಟು ಕ್ಯಾಲಸ್ ಬೆಳೆಯುವಂತೆ ಮಾಡಬಹುದು. (ಯಮಾಡಾ, ಜನಾಕ ಮತ್ತು ಟಕಾಹಾಶಿ ೧೯೬೭) ಈ ಕ್ಯಾಲಸ್ ಅನ್ನು ಆಕ್ಸಿನ್ ರಹಿತ ಮಾಧ್ಯಮಕ್ಕೆ ವರ್ಗಾಯಿಸುವುದರಿಂದ ಸಸ್ಯದ ಕಾಂಡ ಮತ್ತು ಬೇರು ಬೆಳೆಯಲು ಅನುವಾಗುವಂತೆ ಮಾಡಬಹುದು. (ನಿಶಿ, ಯಮುಡಾ ಮತ್ತು ಟಕಾಹಾಶಿ ೧೯೬೮) ಹೀಗೆ ಒಮ್ಮೆ ಕ್ಯಾಲಸ್ ಬೆಳೆಸಿ ಅದರಿಂದ ಬಂದ ಸಸ್ಯದಿಂದ ಮತ್ತು ಕ್ಯಾಲಸ್ ಬೆಳೆಸಲು ಯತ್ನಿಸಿದರೆ, ಒಂದೆರಡು ಸಂತತಿಯ ನಂತರ ಈ ಸಸ್ಯವು ಮತ್ತೆ ಕ್ಯಾಲಸ್ ಹೊರಡಿಸುವ ಶಕ್ತಿಯನ್ನು ಕಳೆದುಕೊಳ್ಳುವುದು ಈ ವಿಧಾನದ ಅಭಿವೃದ್ಧಿಗೆ ಅಡಚಣೆಯಾಗಿದೆ. ಸಸ್ಯದ ಯಾವುದೇ ಒಂದು ಭಾಗದ ಜೀವಕೋಶವನ್ನು ಬಿಡಿಸಿ ತೆಗೆದು ಒಂದು ನಿರ್ದಿಷ್ಟ ಮಾಧ್ಯಮವನ್ನು ೨, ೪ ಡಿ ಜೊತೆ ಕೂಡಿಸಿ, ಅಥವಾ ನ್ಯಾಫ್ತಲೀಸ್ ಅಸಿಟೆಕ್ ಆಸಿಡ್ (ಎನ್.ಎ.ಎ.) ಜೊತೆ ಕೂಡಿಸಿ ಕ್ಯಾಲಸ್ ಬೆಳೆಯುವಂತೆ ಮಾಡಬಹುದು. ಪರಾಗದಿಂದ ಬೆಳೆದ ಕ್ಯಾಲಸ್ ನ ಜೀವಕೋಶಗಳಲ್ಲಿ ಕೇವಲ ಒಂದೊಂದೇ ವರ್ಣ ತಂತು ಮಾತ್ರ ಇದ್ದು, ಸಸ್ಯವು ಅಗುಣಿತವಾಗಿರುತ್ತದೆ. ಆದರೆ ಇತರೇ ಭಾಗದಿಂದ ಬೆಳೆಸಿದ ಕ್ಯಾಲಸ್‌ನಲ್ಲಿ ಕ್ಯಾಲಸ್ ಅಭಿವೃದ್ಧಿ ಹೊಂದುತ್ತಿರುವುದಾಗಿ ಒಂದು ಅಸಾಧಾರಣವಾದ ಒತ್ತಡವೇ ಕಾರಣ. ಆದರೂ ಪ್ರತಿಯೊಂದು ವರ್ಣತಂತು ಮತ್ತು ಜೀವವಾಹಿಗಳು ಎರಡೆರಡು ಇದ್ದು, (ದ್ವಿಗುಣಿತ, ವಿಭಿನ್ನಲಿಂಗಿ) ಸಂತಾನಾಭಿವೃದ್ಧಿಯಲ್ಲಿ ವ್ಯತ್ಯಾಸ ಕಂಡು ಬರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಪರಾಗದಿಂದ ಉಂಟಾದ ಅಗುಣಿತ ಕ್ಯಾಲಸ್ ಅನ್ನು ಕ್ಯಾಲಿಸಿನ್ ರಾಸಾಯನದಿಂದ ಉಪಚರಿಸಿ ಅದನ್ನು ದ್ವಿಗುಣಿತವಾಗಿ ಮಾರ್ಪಡಿಸಬಹುದು. (ವೂ ಮತ್ತು ಸು. ೧೯೭೫) ಕೆಲವು ವೇಳೆ ಕ್ಯಾಲಸ್ ಬೆಳೆಸಿದಾಗ ಬಿಳಿ ಸಸಿಗಳೇ ಲಭ್ಯವಾಗುವುದೂ ಎಂದು ಅನುಭವವಾಗಿದೆ. ಆದರೆ ಕೆಲವು ತಳಿಗಳಲ್ಲಿ ಬಿಳಿ ಸಸಿಗಳು ಒಮ್ಮೆಯೂ ಕಾಣಿಸಿಕೊಳ್ಳದಿರುವುದು ಆಶಾದಾಯಕವಾದ ಸಂಗತಿ. ಕ್ಯಾಲಸ್ ಬೆಳೆಯುವ ಶಕ್ತಿಯಲ್ಲಿಯೂ ಸಹ ತಳಿಯಿಂದ ತಳಿಗೆ ಸಾಕಷ್ಟು ವ್ಯತ್ಯಾಸ ವೇದ್ಯವಾಗಿದೆ. ಉದಾ: ನೋರಿನ್ ೨೦ ತಳಿಯು ಇತರ ತಳಿಗಳಿಗಿಂತ ೪ರಷ್ಟು ಹೆಚ್ಚು ಕ್ಯಾಲಸ್ ಹೊರಡಿಸಿತು. ಒಟ್ಟಿನಲ್ಲಿ ಇಂಡಿಕಾ ತಳಿಗಳಿಗಿಂತ ಜಪಾನಿಕಾ ತಳಿಗಳ ಪರಾಗಗಳು ಹೆಚ್ಚು ಕ್ಯಾಲಸ್ ಹೊರಡಿಸುವ ಶಕ್ತಿ ಹೊಂದಿದೆ ಎಂದು ವರದಿಯಾಗಿದೆ.

ಕ್ಯಾಲಸ್ ಬೆಳವಣಿಗೆಗೆ ಸುಕ್ರೋಸ್ ಅತ್ಯಾವಶ್ಯಕ ಸಾಂದ್ರತೆ ಅಷ್ಟು ಮುಖ್ಯವಲ್ಲ. ಅದರ ಕ್ಯಾಲಸ್ ಹೆಚ್ಚು ಸಂಖ್ಯೆಯಲ್ಲಿ ಬೆಳೆಯಲು ನ್ಯಾಫ್ತಲಿನ್ ಅಸಿಟಿಕ್ ಆಮ್ಲ ಸಹಾಯಕಾರಿಯಾಗುತ್ತದೆ. ತಳೀಕರಣದಲ್ಲಿ ಕ್ಯಾಲಸ್ ಬೆಳವಣಿಗೆಯ ಪ್ರಯೋಜನವನ್ನು ಪಡೆಯಲು, ಮೊದಲು ಉತ್ತಮ ಪ್ರತಿಕ್ರಿಯೆ ತೋರುವ ತಳಿಗಳ ಆಯ್ಕೆ ಮುಖ್ಯವಾದ ಅಂಶ. ಬೆಳೆಯುವ ಮಾಧ್ಯಮಕ್ಕಿಂತ ಉತ್ತಮ ಪ್ರತಿಕ್ರಿಯೆ ತೋರುವ ತಳಿಗಳ ಆಯ್ಕೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದು ಅಭಿಪ್ರಾಯ ಪಡಲಾಗಿದೆ.

ಕ್ಯಾಲಸ್ ಬೆಳವಣಿಗೆಯ ತಳೀಕರಣದಲ್ಲಿ ಹೆಚ್ಚು ಪ್ರಯೋಜನವಾಗಬಲ್ಲ ರೀತಿಯೆಂದರೆ ವರ್ಣತಂತುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವಿಕೆ. ಎರಡು ತಳಿಗಳ ಸಂಕರಣದಿಂದ ಲಭಿಸಿದ ಮಿಶ್ರ ಸಸ್ಯ (ಎಫ್) ದ ಪರಾಗದಿಂದ ಕ್ಯಾಲಸ್ ಬೆಳೆಸಿ, ಒಂದು ತಳಿಯಿಂದ ೧೧ ವರ್ಣ ತಂತುಗಳು ಮತ್ತೊಂದು ತಳಿಯಿಂದ ಇನ್ನೊಂದು ವರ್ಣತಂತು ಕೂಡಿಕೊಂಡು ಎರಡೂ ತಳಿಗಳಲ್ಲಿಯೂ ಇರುವ ಉತ್ತಮ ಗುಣಗಳನ್ನು ಒಂದರಲ್ಲಿ ಸೇರಿಸುವಂತೆ ಇರುವಾಗ, ಇದರ ವರ್ಣ ತಂತುಗಳ ಸಂಖ್ಯೆಯನ್ನು ದ್ವಿಗುಣ ಗೊಳಿಸಿ, ಏಕೈಕ ರೀತಿಯ ಪೀಳಿಗೆಯನ್ನು ಕೊಡಬಲ್ಲ ಸಸ್ಯವನ್ನು (ಸಮಲಿಂಗ ದ್ವಿಗುಣಿತ ಸಸ್ಯ) ಪಡೆಯಲು ಸಾಧ್ಯ. ಇದನ್ನು ಸುಮಾರು ಒಂದು ವರ್ಣದ ಅವಧಿಯಲ್ಲಿ ಮುಗಿಸಬಹುದು. ಇಷ್ಟೇ ಕಾರ್ಯವನ್ನು ಸಾಂಪ್ರದಾಯಿಕ ರೀತಿಯಲ್ಲಿ ತಿರುವು ಸಂಕರಣದ ಮೂಲಕ ಸಾಧಿಸಬೇಕಾದರೆ ಮೂರು ವರ್ಷಗಳೂ ಸಾಲದಿರಬಹುದು ಎಂಬುದು ಗಮನಿಸಬೇಕಾದ ಅಂಶ. ಆದರೆ ಎರಡನೆಯ ತಳಿಯಿಂದ ಬಂದ ಒಂದು ವರ್ಣ ತಂತುವು ಉತ್ತಮ ಗುಣಗಳ ಜೊತೆಗೆ ಕೆಲವು ಅಹಿತ ಗುಣಗಳಿಗೆ ಕಾರಣವಾದ ಜೀವವಾಹಿಗಳನ್ನೂ ಒಳಗೊಂಡಿದ್ದರೆ ಆಗ ಸಾಂಪ್ರದಾಯಿಕ ವಿಧಾನವನ್ನು ಬಳಸಬೇಕಾಗುತ್ತದೆ. ಬತ್ತದಲ್ಲಿ ಇಂಡಿಕಾ ಜಪಾನಿಕಾ ಸಂಕರಣಗಳಿಂದ ಉತ್ತಮ ಗುಣಗಳನ್ನುಳ್ಳ ತಳೀಕರಣ ನಡೆಸಲು ಈ ವಿಧಾನವು ಬಹಳ ಸಹಕಾರಿಯಾಗಬಲ್ಲದೆನಿಸಿದೆ.

ಕ್ಯಾಲಸ್ ಬೆಳವಣಿಗೆಯ ಇನ್ನೊಂದು ಅನುಕೂಲವೆಂದರೆ ವೈವಿಧ್ಯತೆಯ ಸೃಷ್ಟಿ. ಅಧಿಕ ಸಂಖ್ಯೆಯಲ್ಲಿ ಜೀವಕೋಶಗಳಿಂದ ಕ್ಯಾಲಸ್ ಬೆಳೆಸಿದಾಗ ಪರಿಸ್ಥಿತಿಯ ಒತ್ತಡದಿಂದ ವೈವಿಧ್ಯತೆ ಕಂಡು ಬರುತ್ತದೆ. ಉತ್ಪರಿವರ್ತನೆಗೆ ಕಾರಣವಾಗುವ ರಾಸಾಯನಿಕ ವಸ್ತುಗಳನ್ನು ಬಳಸಿ ಈ ವೈವಿಧ್ಯತೆಯನ್ನು ಮತ್ತಷ್ಟು ಹೆಚ್ಚಿಸಬಹುದು. ನಂತರ ಸಂಶೋಧಕರು ಇಚ್ಚಿಸಿದ ಗುಣಗಳನ್ನು ಒಳಗೊಂಡ ಪ್ರಭೇಧಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಗೊಳಿಸಬಹುದು. ಇದಕ್ಕೆ ನೆರವಾಗಲು ಕೆಲವು ನಿರ್ದಿಷ್ಟ ರಾಸಾಯನಿಕ ವಸ್ತುಗಳನ್ನು ಕ್ಯಾಲಸ್ ಬೆಳೆಯುವ ಮಾಧ್ಯಮಕ್ಕೆ ಸೇರಿಸಿದರೆ, ಹಳೆಯ ಗುಣವನ್ನು ಮಾತ್ರ ಹೊಂದಿರುವ ಜೀವಕೋಶಗಳು ನಶಿಸಿ ಹೋಗುವಂತೆಯೂ, ಕೇವಲ ಹೊಸ ಹಾಗೂ ವೈವಿಧ್ಯತೆಯುಳ್ಳ ಜೀವಕೋಶಗಳು ಕ್ಯಾಲಸ್ ಮಾತ್ರ ಬದುಕಿರುವಂತೆಯೂ ಮಾಡಲು ಸಾಧ್ಯವೆಂದು ಗೊತ್ತಾಗಿದೆ.

ಒಟ್ಟಿನಲ್ಲಿ ಇಂತಹ ಸಂಶೋಧನೆ ಪರಾಗದಿಂದ ಬೆಳೆದು ಬರುವ ಕ್ಯಾಲಸ್ ಬೇರೆ ಭಾಗಗಳಿಂದ ಬೆಳೆಸಿದ ಕ್ಯಾಲಸ್‌ಗಿಂತ ಉತ್ತಮವೆಂದು ಗೊತ್ತಾಗಿದೆ. ಇಂತಹ ಕ್ಯಾಲಸ್ ಅನ್ನು ಸುಲಭವಾಗಿ ಮತ್ತೆ ಕ್ಯಾಲಸ್ ಬೆಳೆಸಲು ಉಪಯೋಗಿಸಬಹುದು ಹಾಗೂ ವರ್ಣ ತಂತುಗಳನ್ನು ದ್ವಿಗುಣಗೊಳಿಸಿ ಸುಲಭವಾಗಿ ಸಸ್ಯವು ಒಮ್ಮಟ್ಟವುಳ್ಳ ಸಂತತಿಯನ್ನು ನೀಡುವಂತೆ ಮಾಡಬಹುದು. ಕ್ಯಾಲಸ್ ವಿಧಾನದಿಂದ ಲವಣ, ಕ್ಷಾರ, ರೋಗ ಮುಂತಾದ ಅಹಿತ ವಾತಾವರಣಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿಗಳ ಸೃಷ್ಟಿ ಸಾಧ್ಯವಾದೀತು ಎಂಬುದಕ್ಕೆ ಆಧಾರಗಳಿವೆ. ಅಲ್ಲದೆ ಸಸ್ಯದಲ್ಲಿ ಇರಬಹುದಾದ ಪೋಷಕಾಂಶಗಳ ಅದರಲ್ಲೂ ಅವಶ್ಯಕ ಅಮೈನೋ ಆಮ್ಲಗಳ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗುವುದೆಂಬುದಕ್ಕೆ ಕ್ಯಾರೆಟ್, ಹೊಗೆಸೊಪ್ಪು ಮತ್ತು ಬತ್ತದ ಬೆಳೆಗಳಲ್ಲಿ ಕರುಹು ಸಿಕ್ಕಿದೆ. ಸಸ್ಯದ ಇಳುವರಿ, ಎತ್ತರ ಮುಂತಾದ ಗುಣಗಳನ್ನು ಪರೀಕ್ಷಿಸುವ ಮಾರ್ಗಗಳನ್ನು ಇನ್ನೂ ಹುಡುಕಬೇಕಾಗಿದೆ.