ಗೌರಿ ಸಣ್ಣ ಅಥವಾ ಮಷೂರಿ ಎಂಬ ಬತ್ತ ರಾಷ್ಟ್ರಾದ್ಯಂತ ಹಾಗೂ ಅನೇಕ ದೇಶಗಳಲ್ಲಿ ಜನಪ್ರಿಯ. ಇದು ಕರ್ನಾಟಕ ರಾಜ್ಯದ ತಳಿ ಶಿಫಾರಸ್ಸಿನ ಪಟ್ಟಿಯಲ್ಲಿಲ್ಲದಿದ್ದರೂ ರೈತರು ಪ್ರತಿ ಋತುವಿನಲ್ಲಿಯೂ ಸಾವಿರಾರು ಹೆಕ್ಟೇರುಗಳಲ್ಲಿ ಬೆಳೆಯುತ್ತಿದ್ದು, ಜನಪ್ರಿಯವಾಗಿದೆ. ಉತ್ತಮ ಗುಣಗಳಿದ್ದರೂ ಇದನ್ನು ರೈತರು ಬೆಳೆಯಲು ಸಂಬಂಧಪಟ್ಟವರು ಶಿಫಾರಸ್ಸು ಮಾಡುತ್ತಿಲ್ಲವೇಕೆ ಎಂಬುದು ಇಲ್ಲಿ ತಲೆದೋರಬಹುದಾದ ಪ್ರಶ್ನೆ. ಈ ತಳಿಯಲ್ಲಿ ಬೆಂಕಿ ರೋಗ ನಿರೋಧಕ ಶಕ್ತಿ ಇಲ್ಲ. ಆದ್ದರಿಂದ ಬೆಂಕಿ ರೋಗಕ್ಕೆ ತುತ್ತಾಗಿ ಇಡೀ ಬೆಳೆಯೇ ನಾಶವಾಗುವ ಸಂಭವವುಂಟು. ಅಲ್ಲದೆ ಇದರಲ್ಲಿರುವ ಮತ್ತೊಂದು ದೋಷವೆಂದರೆ ಬತ್ತ ಮಾಗುತ್ತಿರುವಾಗಲೇ ತೆನೆಯಿಂದ ಕಾಳು ಉದುರುವುದು, ಕೊಯ್ಲು ಸ್ವಲ್ಪ ತಡವಾದರೆ ಅಥವಾ ಕೊಯ್ಲಿನ ಸಮಯದಲ್ಲಿ ಮಳೆ ಗಾಳಿ ಇದ್ದಲ್ಲಿ ಇದರಿಂದಾಗಬಹುದಾದ ನಷ್ಟ ಗಣನೀಯ.

ಗೌರಿ ಸಣ್ಣ ತಳಿಯಲ್ಲಿರುವ ಈ ದೋಷಗಳನ್ನು ಅರಿತ ರಾಜ್ಯದ ಕೃಷಿ ವಿ.ವಿ. ಬತ್ತದ ಸಂಶೋಧಕರು ಮತ್ತು ಅಂತರ ರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಈ ತಳಿಯ ಸುಧಾರಣೆಗೆಂದು ೧೯೭೮-೭೯ರಲ್ಲಿ ಒಂದು ಯೋಜನೆ ರೂಪಿತಗೊಂಡಿತು.

ಸುಧಾರಣೆ

ಗೌರಿ ಸಣ್ಣ ತಳಿಯನ್ನೂ ರಾಜ್ಯದಲ್ಲಿ ಜನಪ್ರಿಯವಾದ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿರುವ ಇಂಟಾನ್ ತಳಿಯನ್ನೂ ಆಯ್ಕೆ ಮಾಡಿ ಸಂಕರಣ ಮಾಡಲಾಯಿತು. ಸಂಕರಣೋತ್ತರ ಎರಡು ಸಂತತಿಗಳನ್ನು (ಎಫ್ ೧ ಎಫ್ ೨) ಫಿಲಿಫೈನ್ಸ್ ಕೇಂದ್ರದಲ್ಲಿ ಬೆಳೆದು ನಂತರ ೧೯೮೦ರಲ್ಲಿ ಅದನ್ನು ರಾಜ್ಯದ ಪ್ರಾದೇಶಿಕ ಸಂಶೋಧನಾ ಕೇಂದ್ರ ಮಂಡ್ಯ ಮತ್ತು ಕೃಷಿ ವಿ.ವಿ. ಯ ಇತರ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಪರೀಕ್ಷಿಸಿ, ಮುಂದಿನ ಸಂತತಿಗಳಲ್ಲಿ ಅಪೇಕ್ಷಿತ ಗುಣಗಳುಳ್ಳ ಸಸ್ಯಗಳ ಆಯ್ಕೆಯನ್ನು ಮುಂದುವರೆಸಿ ಅಂತಹ ಗುಣಗಳಿಗೆ ಕಾರಣವಾದ ವಂಶವಾಹಿನಿಗಳು ಸೇರಿಕೊಂಡಿರುವುದನ್ನು ಖಚಿತ ಪಡಿಸಿಕೊಳ್ಳಲಾಗಿ ತಾಯಿ ತಿಳಿಯಾದ ಗೌರಿ ಸಣ್ಣದೊಡನೆ ಹಾಗೂ ರಾಜ್ಯದಲ್ಲಿ ಶಿಫಾರಸ್ಸಿನಲ್ಲಿರುವ ಇತರ ತಳಿಗಳೊಡನೆ ಹೆಬ್ಬಾಳ, ಮಂಡ್ಯ, ಮಡಿಕೇರಿ, ಪೊನ್ನಂಪೇಟೆ, ಗಂಗಾವತಿ, ಸರ್ಸಿ ನಾಗೇನಹಳ್ಳಿ ಕತ್ತಲಗೆರೆ, ಹಿರಿಯೂರು ಹೊನ್ನವಿಲೆ ಮುಂತಾದ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಪರೀಕ್ಷಿಸಲಾಯಿತು. ಈ ಸಂಶೋಧನೆಯ ಕೊಡುಗೆಯೇ ಈಗ ಬಿಡುಗಡೆ ಹಾದಿಯಲ್ಲಿರುವ ಇಂಟಾನ್ ಗೌರಿ ಬತ್ತ.

ಗುಣವಿಶೇಷ

ಅಧಿಕ ಇಳುವರಿ ತಳಿಗಳು ಆದಿಯಿಂದಲೂ ಹೊಂದಿದ್ದ ಕಾಳಿನ ಕೆಲವು ದೋಷಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಹೆಚ್ಚು ಹರಡಲು ಅಡ್ಡಿಯಾಗಿದ್ದ ಸಮಸ್ಯೆಯು ಈ ತಳಿಯಿಂದ ಸುಮಾರು ಮಟ್ಟಿಗೆ ನಿವಾರಣೆಯಾಗುವ ಸಂಭವವಿದೆ. ಇಂಟಾನ್ ಗೌರಿ ತಳಿಯ ಅವಧಿ ೧೩೦-೧೪೦ ದಿನಗಳಷ್ಟಿದ್ದು, ಕಾಳು, ಗೌರಿಸಣ್ಣ ಬತ್ತವನ್ನೇ ಹೋಲುತ್ತದೆ. ಅನ್ನವು ಉದುರಾಗಿ ರುಚಿಯಾಗಿರುವುದರಿಂದಲೂ ಕೆಲವು ರೋಗ ಮತ್ತು ಕೀಟಗಳಿಗೆ ಹೆಚ್ಚು ತುತ್ತಾಗದೆ ಮತ್ತು ಬೆಂಕಿ ರೋಗಕ್ಕೆ ಸಾಕಷ್ಟು ಪ್ರತಿರೋಧ ಶಕ್ತಿ ಹೊಂದಿರುವುದರಿಂದ ಇದು ಬಿಡುಗಡೆಗೆ ಮುನ್ನವೇ ಹೆಚ್ಚು ಜನಪ್ರಿಯವಾಗುತ್ತಿದೆ.

ರೈತರನ್ನು ಆಕರ್ಷಿಸುವ ಇತರ ಗುಣಗಳೆಂದರೆ ಜಯ ಮತ್ತು ಪ್ರಕಾಶ್ ತಳಿಗಳಿಗಿಂತಲೂ ೭-೧೦ ದಿವಸಗಳು. ನಿಧಾನವಾಗಿ ನಾಟಿ ಮಾಡಬಹುದು. ಬೆಂಕಿರೋಗಕ್ಕೆ ಗೌರಿಸಣ್ಣದಷ್ಟು ತುತ್ತಾಗುವುದಿಲ್ಲ. ಕಾಳು ಚೆನ್ನಾಗಿ ಮಾಗುವವರೆಗೂ ಉದುರುವುದಿಲ್ಲ. ಈವರೆಗೆ ಶಿಫಾರಸ್ಸಿನಲ್ಲಿರುವ ಎಲ್ಲಾ ತಳಿಗಳಿಗಿಂತಲೂ (ಇಂಟಾನ್ ಒಂದನ್ನು ಬಿಟ್ಟು) ಎತ್ತರವಾಗಿ ಅಂದರೆ ಗೌರಿ ಸಣ್ಣ ತಳಿಯಷ್ಟೇ ಬೆಳೆ ಬೆಳೆದು ಹೆಚ್ಚು ಹುಲ್ಲು ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಮತ್ತು ಅಕ್ಕಿ ಗಿರಣಿಯಲ್ಲಿ ಕ್ವಿಂಟಾಲಿಗೆ ಇತರೇ ಸಣ್ಣ ಬತ್ತಗಳಿಗಿಂತ ೨೦-೨೫ ರೂಪಾಯಿ ಹೆಚ್ಚು ಸಿಗುತ್ತದೆ ಮತ್ತು ಇದನ್ನು ಗಿರಣಿಗೆ ಕೊಟ್ಟಾಗ ಅಷ್ಟಾಗಿ ನುಚ್ಚಾಗುವುದಿಲ್ಲ.

ಅಧಿಕ ಇಳುವರಿಯಲ್ಲಿ ವಿಕ್ರಮ ಸಾಧಿಸಿದ ಜಯ ತಳಿಯ ಸರಾಸರಿ ಶೇ. ೮೦-೮೫ ರಷ್ಟು ಇಳುವರಿ ಕೊಡಬಲ್ಲ ಈ ಹೊಸ ತಳಿಯು ಒಟ್ಟಿನಲ್ಲಿ ಹೆಚ್ಚು ಲಾಭದಾಯಕ. ರಾಜ್ಯದ ಸುಮಾರು ೧೨ ಸಂಶೋಧನಾ ಕೇಂದ್ರಗಳು ಸರಾಸರಿ ಇಳುವರಿ ಎಕರೆಗೆ ೨೦ ರಿಂದ ೩೦ ಕ್ವಿಂಟಾಲ್ ಇದ್ದು, ರೈತರು ಗದ್ದೆಗಳಲ್ಲಿ ಇಷ್ಟೇ ಅಥವಾ ಇದಕ್ಕೂ ಹೆಚ್ಚು ಇಳುವರಿ ಪಡೆದಿರುವ (ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ) ನಿದರ್ಶನಗಳಿವೆ. ಬತ್ತದಲ್ಲಿ ಅಕ್ಕಿಯ ಪ್ರಮಾಣ ನಾಡತಳಿಗಳು ಅಥವಾ ಕೆಲವು ಆಧುನಿಕ ತಳಿಗಳಿಗಿಂತ ಶೇ.೪-೫ರಷ್ಟು ಹೆಚ್ಚಾಗಿದೆ. ಪ್ರೋಟೀನ್ ಅಂಶವು ೮೦-೮೫ರಷ್ಟಿದೆ. ಇದೂ ಚೌಳು ಭೂಮಿಯಲ್ಲಿಯೂ ಚೆನ್ನಾಗಿ ಬರಬಹುದೆಂದು ಹೆಬ್ಬಾಳ ಮುಖ್ಯ ಸಂಶೋಧನಾ ಕೇಂದ್ರದಲ್ಲಿ ಒಂದು ವರ್ಷದ ಸಂಶೋಧನೆಯ ಸೂಚನೆಯಾಗಿದೆ.

ಜುಲೈ ತಿಂಗಳ ನಂತರ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ನಾಟಿ ಮಾಡಿದಲ್ಲಿ ಇಳುವರಿ ಕಡಿಮೆಯಾಗುತ್ತದೆ. ಬೇಸಿಗೆ ಬೆಳೆಯಲ್ಲಿ ಮುಂಗಾರು ಬೆಳೆಗಿಂತ ೫-೭ ದಿವಸಗಳು ಅವಧಿ ಹೆಚ್ಚಾಗುತ್ತದೆ. ಈ ತಳಿಯು ಇನ್ನೂ ರೈತರ ಗದ್ದೆಗಳಲ್ಲಿ ಪರೀಕ್ಷಿಸಲಾಗುತ್ತಿರುವುದರಿಂದ ಇದನ್ನು ಬಿಡುಗಡೆ ಮಾಡಲು ಸಮಯವಿದೆ ಮತ್ತು ರೈತರ ತಾಕಿನ ಪರೀಕ್ಷೆಗಳ ಫಲಿತಾಂಶಗಳನ್ನು ಅವಲಂಭಿಸಿದೆ.

ಒಂದು ಎಕರೆ ನಾಟಿ ಮಾಡಲು ೨೦-೨೫ ಕೆಜಿ ಬೀಜ ಬೇಕು. ಬೀಜವನ್ನು ಒಕ್ಕಣೆ ಮಾಡಿ ಚೆನ್ನಾಗಿ ಒಣಗಿಸಿದ ನಂತರ ಒಂದು ವಾರವಾಗಿದ್ದಲ್ಲಿ ಬೀಜವು ಬಿತ್ತನೆಗೆ ಸಿದ್ಧವಿದೆ ಎಂದು ತಿಳಿಯಬಹುದು. ೨೦-೨೨ನೇ ದಿನಗಳ ಪೈರುಗಳನ್ನು ೮ ಅಂಗುಲ ಅಂತರದ ಸಾಲುಗಳಲ್ಲಿ ೪ ಅಂಗುಲ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದಾಗ ಒಂದು ಗುಣಿಗೆ ೨-೩ ಪೈರುಗಳನ್ನು ತೇಲಿಸಿ ನೆಡಮಾಡಬೇಕು. ಇದಕ್ಕೆ ಒಟ್ಟು ಬೇಕಾಗುವ ರಾಸಾಯನಿಕ ಗೊಬ್ಬರ ಎಕರೆಗೆ ೪೦:೨೦:೨೦ ಕೆಜಿ ಸಾರಜನಕ: ರಂಜಕ: ಪೋಟಾಷ್, ಸಂಪೂರ್ಣವಾಗಿಯೂ ಮತ್ತು ಸಾರಜನಕದ ಶೇ. ೫೦ ರಷ್ಟನ್ನು ನಾಟಿ ಮಾಡುವಾಗ ಹಾಕಬೇಕು. ಉಳಿದ ೫೦ರಷ್ಟು ಸಾರಜನಕವನ್ನು ೨ ಸಮಭಾಗವಾಗಿ ತೆಂಡೆ ಹೊಡೆಯುವಾಗ ಮತ್ತು ಗರ್ಭಾಂಕುವಾಗುವಾಗ ಮೇಲ್ಗೊಬ್ಬರವಾಗಿ ಕೊಡಬೇಕು. ಹೆಚ್ಚು ಮರಳು ಮಿಶ್ರಿತ ಭೂಮಿಯಲ್ಲಿ ಸಾರಜನಕವನ್ನು ಮಿಶ್ರಿತ ಭೂಮಿಯಲ್ಲಿ ಸಾರಜನಕವನ್ನು ಇನ್ನೂ ಹೆಚ್ಚಿನ ಹಂತಗಳಲ್ಲಿ ಕೊಡುವುದು ಒಳ್ಳೆಯದು.

ಎಚ್ಚರಿಕೆ

ಈ ತಳಿಗೆ ಚಳಿ ನಿರೋಧಕ ಶಕ್ತಿ ಇಲ್ಲದಿರುವುದರಿಂದ ಕರ್ನಾಟಕ ದಕ್ಷಿಣ ಜಿಲ್ಲೆಗಳಲ್ಲಿ ಜುಲೈ ತಿಂಗಳೊಳಗೆ ನಾಟಿ ಮಾಡಲು ಸಾಧ್ಯವಾದರೆ ಮಾತ್ರ ಬೆಳೆಯಬಹುದು. ಮಲೆನಾಡಿನಲ್ಲಿ ಹೆಚ್ಚು ಚಳಿ ಮತ್ತು ಬೆಂಕಿ ರೋಗವಿರುವುದರಿಂದ ತಳಿ ಅಲ್ಲಿ ಬೆಳೆಯಲು ಸೂಕ್ತವಲ್ಲ. ರಾಜ್ಯದ ಕರಾವಳಿಯಲ್ಲಿ ಗೌರಿಸಣ್ಣ ಬೆಳೆಯುವವರಿಲ್ಲವಾದ್ದರಿಂದ ಇದನ್ನು ಬೆಳೆದು ನೋಡಿಲ್ಲ. ಅತಿ ಹೆಚ್ಚು ರಸಗೊಬ್ಬರ ಕೊಡುವುದರಿಂದ ಬೆಳೆ ಬಿದ್ದು, ನಷ್ಟವಾಗುತ್ತದೆ. ನೀರು ಕಡಿಮೆ ಇದ್ದಲ್ಲಿ ಬೇಸಿಗೆಯಲ್ಲಿ ಇದನ್ನು ಬೆಳೆಯಬಾರದು.