ಕೃಷಿ ವಿಜ್ಞಾನ ಇಂದು ಬಹುಬಗೆಯಾಗಿ ಮೈದುಂಬಿ ಬೆಳೆದು ಬಂದಿದೆ. ವ್ಯವಸಾಯೋತ್ಪಾದನೆ ಅಧಿಕೃತವಾಗಿ, ಶಕ್ತಿ ಗುಂದಿದ ರೈತ ಇಂದು ಚೇತರಿಸಿಕೊಂಡು ಬಲಿಷ್ಠವಾಗುವಂತಾಗಿದೆ. ಇದನ್ನೇ ಇನ್ನೊಂದು ಮಾತಿನಲ್ಲಿ ಹಸಿರು ಕ್ರಾಂತಿ ಎಂದು ಕರೆಯುವುದು. ಈ ಹಸಿರು ಕ್ರಾಂತಿಗೆ ಕಾರಣಗಳು ಅನೇಕ. ಇವುಗಳಲ್ಲಿ ಪ್ರಮುಖವಾದವು ಅಧಿಕ ಇಳುವರಿ ತಳಿಗಳ ಬಳಕೆ, ಆಧುನಿಕ ಬೇಸಾಯ ಕ್ರಮಗಳ ಅನುಕರಣೆ, ಹೊಸ ಬಹುಬೆಳೆ ಮತ್ತಿತರ ಯೋಜನೆಗಳನ್ನು ಅಳವಡಿಸುವುದು, ಸಕಾಲ ಸಸ್ಯ ಸಂರಕ್ಷಣೆ, ಆಧುನಿಕ ಕ್ರಮಗಳ ಬಳಕೆ ಇತ್ಯಾದಿ. ಹಸಿರು ಕ್ರಾಂತಿ ಆಯಿತು ಎನ್ನುವುದನ್ನು ಸುಮಾರು ಎಲ್ಲರೂ ಒಪ್ಪುತ್ತಾರೆ. ಆದರೆ ಉತ್ಪಾದನೆಯನ್ನು ಹೀಗೆ ಹೆಚ್ಚಿಸಲು ಕೈಗೊಂಡ ಮಾರ್ಗಗಳೆಲ್ಲವೂ ರೈತನಿಗೆ ನಿಶ್ಚಿಂತತೆಯನ್ನುಂಟು ಮಾಡತಕ್ಕವುಗಳೇ ಎಂಬುದು ವಿವಾದಾಸ್ಪದ. ಆಧುನಿಕ ತಳಿಗಳು ಹಾಗೂ ಬೇಸಾಯ ಮತ್ತು ಸಸ್ಯ ಸಂರಕ್ಷಣೆ ಕ್ರಮಗಳ ಪ್ರಯೋಜನ ತಾತ್ಕಾಲಿಕ ಎನ್ನುವವರು ಕೆಲವರಿದ್ದರೆ ಇವು ಕ್ರಮೇಣ ಮುಂದಿನ ಪೀಳಿಗೆಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದು ಮತ್ತೆ ಕೆಲವರ ಅಭಿಪ್ರಾಯ. ಕೃಷಿ ಸಂಶೋಧನೆಯಲ್ಲಿನ ಪ್ರಗತಿ ಹಲವಾರು ದಶಕಗಳು (ಬಹಳ ಕಾಲ) ಪ್ರಯೋಜನಕಾರಿಯಾಗಬಲ್ಲದು ಎಂಬುದು ಕೆಲವು ಕೃಷಿ ಸಂಶೋಧಕರ ಅನಿಸಿಕೆಯಾದರೆ, ಮತ್ತೆ ಕೆಲವರ ದೃಷ್ಟಿಯಲ್ಲಿ ಇದು ಕೇವಲ ತಾತ್ಕಾಲಿಕ, ಆಧುನಿಕ, ಕೃಷಿ ಅನುಕರಣೆಯಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು ಎಂದು ಹೇಳುವವರೂ ಇಲ್ಲದಿಲ್ಲ.

ಈ ವಿಷಯವನ್ನು ಕುರಿತು ಆಳವಾಗಿ ವಿಚಾರ ಮಾಡಿದಾಗ ಎರಡು ವಾದಿಗಳಲ್ಲಿಯೂ ಸತ್ಯಾಂಶವಿದೆಯೆಂದು ತೋರುತ್ತದೆ. ಉದಾ: ಸಸ್ಯ ಸಂರಕ್ಷಣೆಗೆಂದು ಬಳಸುವ ಕೆಲವು ರಾಸಾಯನಿಕಗಳು ಹಾನಿಕಾರಕ ಕೀಟಗಳನ್ನಲ್ಲದೆ ಅವುಗಳನ್ನು ಪ್ರಕೃತಿ ನಿಯಮದಲ್ಲೇ ಹತೋಟಿಯಲ್ಲಿಡುವ ಉಪಯುಕ್ತ ಸ್ವಾಭಾವಿಕ ಶತೃ (ಪರತಂತ್ರ ಜೀವಿ ಹಾಗೂ ಭಕ್ಷಕ ಜೀವ)ಗಳನ್ನು ಸಹ ಕೊಂದು ಬಿಡುತ್ತದೆ. ಅಂತೆಯೇ ಬಹು ಬೆಳೆ ಪದ್ಧತಿಯಂತೆ. ಬೆಳೆಗಳನ್ನು ನಿಬಿಡವಾಗಿ ಬೆಳೆದು ಹೊಸ ಹೊಸ ಮಣ್ಣಿನ ಸಮಸ್ಯೆಗಳು ಉದ್ಭವಿಸಿರುವುದು ಸರ್ವವಿದಿತ. ಹದ ಮಾಡಿದ ಜಮೀನುಗಳಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ನೀರನ್ನು ಉಪಯೋಗಿಸಿ, ಕೆಲವು ಫಸಲು ತೆಗೆದುಕೊಳ್ಳುವಷ್ಟರಲ್ಲಿ ಮಣ್ಣಿನ ದೋಷಗಳು (ಲವಣ ತೀಕ್ಷ್ಣತೆ ಮುಂತಾದವುಗಳು) ಉದ್ಭವಿಸಿ ಆ ಮಣ್ಣಿನ ಉತ್ಪಾದನೆ ಸಾಮರ್ಥ್ಯ ಕುಗ್ಗಿರುವುದುಂಟು. ಹೀಗೆ ಹಸಿರು ಕ್ರಾಂತಿಗೆ ಹೆಚ್ಚು ಪ್ರಮಾಣದಲ್ಲಿ ನೆರವಾದ ತಳಿಗಳ ಮತ್ತು ದುಷ್ಪರಿಣಾಮ ವಿಮರ್ಶೆಯನ್ನು ಈ ಲೇಖನದಲ್ಲಿ ಕಾಣಬಹುದು.

ಕ್ಷೀಣಿಸುತ್ತಿರುವ ತಳಿ ಸಂಪತ್ತು:

ಪ್ರಾಚೀನ ಕಾಲದಿಂದಲೂ ನಿಸರ್ಗದ ಕೊಡುಗೆಯಾಗಿ ಮತ್ತು ಮಾನವ ಪ್ರಯತ್ನದಿಂದಾಗಿ ಪ್ರತಿ ಬೆಳೆಯಲ್ಲಿಯೂ ಅಸಂಖ್ಯಾತ ತಳಿಗಳು ಉದ್ಭವಿಸಿದೆ. ಇಂತಹ ಒಂದು ಸಮೂಹ ಅಥವಾ ತಳಿ ಸಂಪತ್ತು ಸಮಗ್ರವಾಗಿ ಯಾವುದೇ ಪ್ರತಿಕೂಲ ಸನ್ನಿವೇಶಗಳನ್ನು ಸಹಿಸಬಲ್ಲ ವಂಶವಾಹಿನಿಗಳನ್ನು ಪಡೆದಿರುತ್ತದೆ. ಆಧುನಿಕ ತಳಿಗಳು ಹೆಚ್ಚು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಇವುಗಳ ಪ್ರಚಾರದಲ್ಲಿ ಯತ್ನದಲ್ಲಿ ಹಳೆಯ ತಳಿಗಳು ಕಣ್ಮರೆಯಾಗುತ್ತಿವೆ. ಉದಾ: ಬತ್ತ ಒಂದರಲ್ಲೇ ೧.೫ ಲಕ್ಷಕ್ಕೂ ಹೆಚ್ಚು ತಳಿಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಇದ್ದವು ಎಂದು ಅಂದಾಜು ಮಾಡಲಾಗಿದೆ. ಆದರೆ ಇಂದು ಅವುಗಳೆಲ್ಲವೂ ಬಳಕೆಯಲ್ಲಿವೆಯೇ? ಎಂಬ ಪ್ರಶ್ನೆಗೆ ದೊರಕುವ ಉತ್ತರ ಅಸಮಾಧಾನ ತಂದೀತು. ಇತ್ತೀಚೆಗೆ ರಕ್ಷಿಸುವ ಗುರುತರ ಜವಾಬ್ದಾರಿಯನ್ನು ಹೊತ್ತಿವೆಯಾದರೂ ಈ ಕಾರ್ಯ ಎಷ್ಟರಮಟ್ಟಿಗೆ ಸಂಪೂರ್ಣವಾಗಿ ಈಡೇರುತ್ತದೆಂಬುದು ಸಂದೇಹಕ್ಕೆ ಎಡೆಗೊಡುತ್ತದೆ. ತಳೀಕರಣಕ್ಕೆ ಬೇಕಾಗುವ ಅಮೂಲ್ಯವಾದ ವಂಶವಾಹಿನಿಗಳನ್ನು ಪಡೆದ, ಕಾಲಾನುಕಾಲಕ್ಕೆ ಮತ್ತು ಹೊಸ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳಬಲ್ಲ ತಳಿ ಅಭಿವೃದ್ಧಿ ಕಾರ್ಯದಲ್ಲಿ ಪುರಾತನ ತಳಿ ಸಂಪತ್ತಿನ ಕೊರತೆಯಿಂದಾಗಿ ಪ್ರಾಂತೀಯ ತಳಿ ಅಭಿವೃದ್ಧಿಕರು ಕಣ್ಣು ಕಣ್ಣು ಬಿಡುವಂತಾಗಬಹುದು. ಅಥವಾ ಅಂತರ ರಾಷ್ಟ್ರೀಯ ಕೇಂದ್ರ ಸಂಸ್ಥೆಗಳನ್ನು ಅವಲಂಭಿಸಬೇಕಾಗಬಹುದು. ಇಂತಹ ಅವಲಂಭನೆಯಿಂದಾಗಿ ಸಂಶೋಧನಾ ಪ್ರಗತಿ ಕುಂಠಿತವಾಗುವ ಸಂಭವವಿರುತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿನ ತಳಿ ಸಂಪತ್ತು ಕ್ಷೀಣಿಸಿರುವುದೇ ಇದಕ್ಕೆ ಒಳ್ಳೆಯ ನಿದರ್ಶನ.

ಈಗಾಗಲೇ ಪ್ರಸ್ತಾಪಿಸಿರುವಂತೆ ನೂರಾರು ನಾಡ ತಳಿಗಳನ್ನು ಬೆಳೆಯುತ್ತಿದ್ದ ಪ್ರದೇಶದಲ್ಲಿ ಬೆರಳಣಿಕೆಯಷ್ಟು ತಳಿಗಳನ್ನು ಮಾತ್ರ ಬೆಳೆಯುತ್ತಿರುವುದು ಮತ್ತು ಪ್ರಾಚೀನ ತಳಿಗಳ ಕುರುಹು ಇಲ್ಲದಂತಾಗುತ್ತಿರುವುದು ಸರ್ವವೇದ್ಯವಾಗಿದೆ. ಉದಾ: ಕೇವಲ ೯ ಜಿಲ್ಲೆಗಳನ್ನು ಒಳಗೊಂಡಿದ್ದ ಹಳೆಯ ಮೈಸೂರು ರಾಜ್ಯದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಬತ್ತದ ತಳಿಗಳು ಲೆಕ್ಕಕ್ಕೆ ಸಿಕ್ಕಿದ್ದ ಹೆಸರುಗಳು ಈಗಲೂ ದಾಖಲೆಯಲ್ಲಿದೆ. ಆದರೆ ೧೯ ಜಿಲ್ಲೆಗಳನ್ನು ಒಳಗೊಂಡ ಇಂದಿನ ವಿಶಾಲ ಕರ್ನಾಟಕದಲ್ಲಿ ಕೇವಲ ೧೭ ಬತ್ತದ ತಳಿಗಳು ಮಾತ್ರ ಬಳಕೆಯಲ್ಲಿರುವುದು ಮತ್ತು ಅವುಗಳ ಬೀಜೋತ್ಪಾದನೆ ಮತ್ತು ಅವುಗಳ ಬಗ್ಗೆ ಗಮನ ಕೊಡುತ್ತಿರುವುದು ಆಳವಾಗಿ ಚಿಂತಿಸಬೇಕಾದ ವಿಷಯ. ಒಂದೆರಡು ತಳಿಗಳ ಮೇಲಿನ ಅವಲಂಬನೆಯಿಂದ ಆಗಬಹುದಾದ ಅನರ್ಥವನ್ನು ಇಲ್ಲಿ ನಿದರ್ಶಿಸಬಹುದು. ಒಂದೆರಡು ತಳಿಗಳಿರುವ ಸಂದರ್ಭದಲ್ಲಿ ನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಆಗಾಗ್ಗೆ ಕಂಡು ಬಂದಿರುವ ಅನುಭವ. ಕರ್ನಾಟಕ ಮಲೆನಾಡು ಪ್ರದೇಶಕ್ಕೆ ವರವಾಗಿ ಬಂದ ಇಂಟಾನ್ ಬತ್ತದ ತಳಿಯು ಹಲವಾರು ವರ್ಷಗಳು ಲಾಭದಾಯಕವೆನಿಸಿತು. ಕೇವಲ ಮಲೆನಾಡು ಪ್ರದೇಶ ಒಂದರಲ್ಲೇ ಪ್ರತಿವರ್ಷ ೨-೩ ಲಕ್ಷ ಎಕರೆಗಳಲ್ಲಿ ೭-೮ ವರ್ಷಗಳು ಬೆಲೆಯಲ್ಪಟ್ಟ ಮತ್ತು ಈಗಲೂ ಬೆಳೆಯಲ್ಪಡುತ್ತಿರುವ ಈ ತಳಿಗೆ ಹೊಸದಾಗಿ (೧೯೮೨) ರಿಂದ ಬೆಂಕಿ ರೋಗ ಕಾಣಿಸಿಕೊಂಡಿದೆ. ಅದಕ್ಕಾಗಿ ಬದಲಾಗಿ ಶಿಫಾರಸ್ಸು ಮಾಡಬಲ್ಲ ಯಾವುದೇ ತಳಿಗಳು ಇಲ್ಲವಾದ ಕಾರಣ ರೈತರು ಮತ್ತು ವಿಸ್ತರಣಾಧಿಕಾರಿಗಳು ಕಂಗಾಲಾಗಿದ್ದಾರೆ ಮತ್ತು ಮಿತಿ ಮೀರಿದ ಖರ್ಚಿನಿಂದ ಸಸ್ಯ ಸಂರಕ್ಷಣೆ ಕೈಗೊಂಡು ಇದೇ ತಳಿಯನ್ನು ಮುಂದುವರಿಸಿ ಕೊಂಡು ಹೋಗಬೇಕಾಗಿದೆ. ಇಂತಹ ಸಂದರ್ಭಕ್ಕೆ ಇಂತಹ ಸನ್ನಿವೇಶಕ್ಕೆ ಬಾರದಂತೆ ನಾಲ್ಕಾರು ಸಮಾನ ತಳಿಗಳನ್ನು ಅಭಿವೃದ್ಧಿಗೊಳಿಸಿದ ವಿಜ್ಞಾನಿಯದೇ ತಪ್ಪಾಗಿರಲಿ ಅಥವಾ ಬೇರೆ ಯಾವುದೇ ತಪ್ಪಿರಲಿ ರೈತರ ಭಾಗಕ್ಕೆ ಹೆಚ್ಚು ಖರ್ಚು ತಗಲುವಂತಾಗಿದೆ. ಇದಕ್ಕೆ ಪರಿಹಾರ ದೊರಕುವವರೆಗೂ ರೈತನಿಗೆ ಇದು ಒಂದು ಚಿಂತೆಯಾಗಿ ಪರಿಣಮಿಸಿದೆ. ಒಂದೆರಡು ತಳಿಗಳ ಬಿಡುಗಡೆಯ ಹಾದಿಯಲ್ಲಿ ಅನಿವಾರ್ಯವಾದರೂ ಸರಿಸಮನಾದ ತಳಿಗಳ ಅಭಿವೃದ್ಧಿ ಮತ್ತು ಅವುಗಳ ಬಿಡುಗಡೆಗೆ ನೀಡಬೇಕಾದ ಮಹತ್ವವನ್ನು ಇದರಿಂದ ಅರಿತುಕೊಳ್ಳಬಹುದು.

ಅಧಿಕ ಇಳುವರಿ ತಳಿಗಳು ಸಣ್ಣ ರೈತರಿಗೆ ಸೂಕ್ತವೆ ?

ಕೆಲವು ಅಧಿಕ ಇಳುವರಿ ತಳಿಗಳು ಸಂಪನ್ಮೂಲಗಳನ್ನು ಅದ್ಧೂರಿಯಾಗಿ ಒದಗಿಸಿದಾಗ ಮಾತ್ರ ನೋಡಲು ಸೊಂಪಾಗಿ ಬೆಳೆದು ತೃಪ್ತಿಕರವಾಗಿ ಇಳುವರಿ ಕೊಡುತ್ತವೆ. ಮತ್ತೆ ಕೆಲವು ನಾಡತಳಿಯಷ್ಟೇ ಇಳುವರಿಯನ್ನು ಕೊಟ್ಟರೂ ಸಹ ಫಸಲು ತಾಕಿನಲ್ಲಿರುವಾಗ ಕೊರತೆಯಿಂದ ನೋಡಲು ನಿರಾಶೆಯಾಗುವಷ್ಟು ಕಳಪೆಯಾಗಿ ಕಾಣುತ್ತವೆ. ಸಾರಜನಕದ ಕೊರತೆಯಲ್ಲಿ ಜಯ, ಪಿ.ಆರ್. ೮ ಬತ್ತ ತಳಿಗಳನ್ನು ಬೆಳೆದಾಗ ಮತ್ತು ರಂಜಕದ ಕೊರತೆಯಲ್ಲಿ ಇಂಟಾನ್ ಬತ್ತದ ತಳಿಯನ್ನು ಬೆಳೆದಾಗ ಬೆಳೆಯು ಬಣ್ಣಗೆಟ್ಟಿರುವುದರ ಮೂಲಕ ಈ ವಿಷಯ ಚೆನ್ನಾಗಿ ಮನದಟ್ಟಾಗುತ್ತದೆ. ಸಣ್ಣ ಪುಟ್ಟ ಹಿಡುವಳಿದಾರರು ಕಡಿಮೆ ರಸಗೊಬ್ಬರವನ್ನು ಬಳಸಿದಾಗ ಇಂತಹ ಪರಿಸ್ಥಿತಿ ಒದಗಿರುವುದು ಆಗಾಗ್ಗೆ ಗಮನಕ್ಕೆ ಬಂದಿರುವ ವಿಷಯ.

ಪೋಷಕಾಂಶಗಳು ಮತ್ತು ಮಣ್ಣಿನ ಫಲವತ್ತತೆ:

ಅಧಿಕ ಇಳುವರಿ ತಳಿಗಳು ನಿರೀಕ್ಷಿಸುವಂತೆ ಮಣ್ಣಿನ ಫಲವತ್ತತೆಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳುತ್ತದೆ. ಈ ತಳಿಗಳಿಂದ ಒಂದೆರಡು ಬೆಳೆ ತೆಗೆದುಕೊಳ್ಳುವಷ್ಟರಲ್ಲಿ ಮಣ್ಣಿನ ಸಾರ ಕ್ಷೀಣಿಸಿ ದುರ್ಬಲಗೊಳ್ಳುತ್ತದೆ. ಅನಂತರದ ಬೆಳೆಗಳಲ್ಲಿ ಒಂದಲ್ಲ ಒಂದು ಪೋಷಕಾಂಶದ ಕೊರತೆ ಕಂಡು ಬಂದು ಫಸಲು ಬೆಳೆಯು ಹಂತದಲ್ಲೇ ಕುಂಠಿತಗೊಂಡು ನಿರಾಶೆಯುಂಟು ಮಾಡುತ್ತದೆ. ಇಂತಹ ಪರಿಸ್ಥಿತಿಗೆ ಸರಿಯಾದ ಕಾರಣ ತಿಳಿಯುವುದು ಕಷ್ಟ. ಕಾರಣ ತಿಳಿಯುವಷ್ಟರಲ್ಲಿ ಕ್ಲಿಷ್ಟ ಸಮಯ ಮುಗಿದಿರಬಹುದು. ಮತ್ತೆ ಕೆಲವು ಸಾರಿ ಕೊರತೆ ನೀಗಿಸಲು ಖರ್ಚು ದುಬಾರಿಯಾಗಿರಬಹುದು. ಅಂತಹ ಸಮಯದಲ್ಲಿ ಒಬ್ಬ ಸಾಧಾರಣ ರೈತ ಆರ್ಥಿಕ ಸಂಪನ್ಮೂಲಗಳ ಸುಲಭ ಸರಬರಾಜು ಇಲ್ಲದಿದ್ದಲ್ಲಿ ಆ ಪರಿಸ್ಥಿತಿಯನ್ನು ಯಾವುದೋ ಒಂದು ಶಾಪ ಅಥವಾ ಮಾರಿ ಎಂದು ನಿರಾಶನಾಗುವುದುಂಟು. ಆಧುನಿಕ ಬೇಸಾಯದಲ್ಲಿ ನುರಿತ ತಜ್ಞರ ಮೇಲ್ವಿಚಾರಣೆ ಮತ್ತು ಸಂಪನ್ಮೂಲ ಸಾಲ ಸೌಲಭ್ಯಗಳು ಸುಧಾರಿಸುವವರೆಗೆ ನಿಜವಾಗಿಯೂ ಶಾಪವಲ್ಲದ ಈ ಶಾಪ ಮುಂದುವರೆಯುತ್ತದೆಯಾದ್ದರಿಂದ ಶಾಪವೆನ್ನುವವರ ಬಾಯಿ ಮುಚ್ಚಿಸುವುದು ಕಷ್ಟ.

ಪ್ರತಿಕೂಲ ಸನ್ನಿವೇಶದಲ್ಲಿ:

ಇದುವರೆಗೆ ಬಿಡುಗಡೆಯಾಗಿರುವ ಅಧಿಕ ಇಳುವರಿ ತಳಿಗಳು ಫಲವತ್ತಾದ ಭೂಮಿ, ಉತ್ತಮ ಹವಾಮಾನಗಳಿಗೆ ಹೆಚ್ಚು ಏರುಪೇರುಗಳಿಲ್ಲದ ಸನ್ನಿವೇಶಗಳಿಗೆ ಮಾತ್ರ ಹೊಂದಿಕೊಳ್ಳುವಂತಹದಾಗಿದೆ. ಇದೀಗ ನಿರೋಧಕ ಶಕ್ತಿ ಹೊಂದಿರುವ ತಳಿಗಳು ಬಿಡುಗಡೆಯಾಗುತ್ತಿರುವೆಯಾದರೂ ಒಣ ಬೇಸಾಯ, ಬಾಧೆ ಪೀಡಿತ ಮಣ್ಣುಗಳು, ನೆರೆಗೆ ತುತ್ತಾಗುವ ಭೂಮಿ, ಹೆಚ್ಚು ನಂಜು, ಕೀಟ, ರೋಗಗಳು, ಚಳಿ, ಹಿಂಗಾಲ ಅಥವಾ ಅಕಾಲ ಬೆಳೆಗಳಿಗೆ ಹೊಂದಿಕೊಂಡು ಹೆಚ್ಚು ಇಳುವರಿ ಕೊಡಬಲ್ಲ ತಳಿಗಳು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಕಂಡು ಹಿಡಿಯಲ್ಪಟ್ಟು ಬಿಡುಗಡೆಯಾಗಬೇಕಾಗಿದೆ. (ಉದಾ: ಚಳಿಗಾಲಕ್ಕೆ ಅಂದರೆ ಅಕ್ಟೋಬರ್ ನಾಟಿಗೆ ಹೊಂದುವ ಬತ್ತ, ಹಿಂಗಾರು ಹಂಗಾಮಿಗೆ ಅಲ್ಪಾವಧಿ ಜೋಳ, ಕ್ಷಾರ ಚೌಳು ಮಣ್ಣಿಗೆ ಯೋಗ್ಯತಳಿ ಇತ್ಯಾದಿ) ನಾಡ ತಳಿಗಿಂತ ಅಧಿಕ ಇಳುವರಿ ತಳಿಗಳನ್ನು ವಿವೇಚನೆ ಇಲ್ಲದೆ ಪ್ರತಿಕೂಲ ಸನ್ನಿವೇಶಗಳಲ್ಲಿ ಬೆಳೆದಾಗ ಬೆಳೆ ನಾಶವಾಗುವುದು ಅನೇಕ ಬೆಳೆಗಳ ವಿಫಲ ವರದಿಗೆ ಒಂದು ಪ್ರಮುಖ ಕಾರಣವಾಗಿದೆ. ಚಳಿಗಾಲದಲ್ಲಿ ಅಥವಾ ಪುಣಜಿಯಲ್ಲಿ ದೊಡ್ಡಿ, ಹಾಲುಬ್ಬಲು, ಆಲೂರು-ಸಣ್ಣ ಬತ್ತಗಳ ಬದಲು ಯಾವುದೇ ಹೊಸ ತಳಿಯನ್ನು ಬೆಳೆದಾಗ, ಇಬ್ಬನಿ ರಾಗಿ ಬೆಳೆಯುತ್ತಿದ್ದಲ್ಲಿ, ಹೊಸ ರಾಗಿ ತಳಿಗಳನ್ನು ಬೆಳೆದಾಗ ಕಂಡು ಬರುವ ಅನುಭವ ಇದಕ್ಕೆ ಸಾಕ್ಷಿ. ಹೀಗೆ ಆಗದಿರಲು ಸೂಕ್ತ ತಳಿಗಳು ದೊರಕುವ ತನಕ ಸೂಕ್ತ ಮಾಹಿತಿ ಪ್ರಚಾರದ ಬಗ್ಗೆ ವಿಶೇಷ ಲಕ್ಷ್ಯ ಪೂರೈಸುವುದು ಅವಶ್ಯ.

ಅಧಿಕ ಇಳುವರಿ ತಳಿಗಳು ರೈತರಿಗೆ ವರ ಯಾವಾಗ ?

ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ಅಧಿಕ ಇಳುವರಿ ತಳಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಒಂದು ಹೆಕ್ಟೇರಿಗೆ ಕೇವಲ ೧೫ ರಿಂದ ೨೦ ಕ್ವಿಂಟಾಲ್ ಧಾನ್ಯ ಬೆಳೆಯುತ್ತಿದ್ದು, ಜಮೀನುಗಳಲ್ಲಿ ನೂತನ ತಳಿಗಳಿಂದ ಎರಡರಷ್ಟನ್ನು ಮೀರಿಸಿ, ಇಳುವರಿ ತೆಗೆಯಲಾಗುತ್ತಿದೆ. ನಾಡತಳಿಗಳು ಹೆಚ್ಚು ರಸಗೊಬ್ಬರ ಕೊಟ್ಟರೆ ಬಿದ್ದು ಹೋಗಿ ಫಸಲು ನಷ್ಟಕ್ಕೆ ಕಾರಣವಾಗುತ್ತಿದ್ದವು. ಆದರೆ ಅಧಿಕ ಇಳುವರಿ ತಳಿಗಳು ಹೆಚ್ಚು ತೆಂಡೆಯೊಡೆದು ಸೊಂಪಾಗಿ ಬೆಳೆದು ಹೆಚ್ಚು ಲಾಭಕ್ಕೆ ನೆರವಾಗುತ್ತಿವೆ. ರಾಜ್ಯದಲ್ಲಿ ವಿವಿಧ ಬೆಳೆಗಳಲ್ಲಿ ಬಳಕೆಯಲ್ಲಿರುವ ನೂತನ ತಳಿಗಳೇ ಇದಕ್ಕೆ ಸಾಕ್ಷಿ. ಭೂಮಿ ವಿಸ್ತರಣಾವಕಾಶವಿಲ್ಲದಿರುವಂತಹ ಹೆಚ್ಚು ಜನಸಂದಣಿ ಇರುವ ಭಾರತದಂತಹ ದೇಶಗಳಲ್ಲಿ ಇರುವಷ್ಟೇ ಭೂಮಿಯಲ್ಲಿ ಹೆಚ್ಚು ಇಳುವರಿ ಪಡೆಯುವ ಸಾಂದ್ರ – ಬೇಸಾಯ ಪದ್ಧತಿಯ ಪಾತ್ರ ಸಾಕಷ್ಟಿದ್ದರು ಅಂತಹ ಬೇಸಾಯಕ್ಕೆ ಪ್ರತಿಕ್ರಿಯೆ ಪಾತ್ರ ಸಾಕಷ್ಟಿದ್ದರೂ ಅಂತಹ ಬೇಸಾಯಕ್ಕೆ ಪ್ರತಿಕ್ರಿಯೆ ತೋರು ವಿನೂತನ ತಳಿಗಳಿಲ್ಲದಿದ್ದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಲು ಅಸಾಧ್ಯವಾಗುತ್ತಿತ್ತು. ಅಂತೆಯೇ ನೂತನ ತಳಿಗಳು ವರವಾಗಿದ್ದು, ಇಂದಿನ ಉತ್ಪಾದನಾ ಪ್ರಗತಿಯಲ್ಲಿ ಅವುಗಳ ಪಾತ್ರ ಅಪಾರವೆನ್ನುವುದು ನಿಸ್ಸಂದೇಹ.

ನಾಡತಳಿಗಳಲ್ಲಿದ್ದ ಇನ್ನೊಂದು ಎಂದರೆ ದೀರ್ಘ ಅವಧಿ. ಅಧಿಕ ಇಳುವರಿ ತಳಿಗಳ ಪೈಕಿ ಅಲ್ಪಾವಧಿ ತಳಿಗಳೇ ಹೆಚ್ಚು. ವರ್ಷಕ್ಕೆ ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲು (ಬಹು ಬೆಳೆ) ಅಥವಾ ಯಾವುದೇ ಕಾರಣದಿಂದ ಕಾಲಾವಧಿ ಕಡಿಮೆ ಇರುವಾಗ, ನೀರಿನ ಅಭಾವವಿದ್ದಾಗ, ಕಾಲ ಮಿಂಚಿ ಹೋದಾಗ ಅಲ್ಪಾವಧಿ ತಳಿಗಳ ಪಾತ್ರ ಮಹತ್ವದ್ದು. ಬೆಳೆಯೇ ಸಂಪೂರ್ಣವಾಗಿ ವಿಫಲವಾಗುವ ಸನ್ನಿವೇಶಗಳಲ್ಲಿ ಅಲ್ಪಾವಧಿ ಅಧಿಕ ಇಳುವರಿ ತಳಿಗಳಿಂದ ಮಾತ್ರ ಲಾಭದಾಯಕವಾದ ಫಸಲು ತೆಗೆಯಲು ಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬೇಕು. ಬತ್ತದಲ್ಲಿ ಮಧು, ಮಂಗಳ, ರಾಗಿಯಲ್ಲಿ ಇಂಟಾಫ್ ೫, ೭ ಹರಳಿನಲ್ಲಿ ಅರುಣ, ತೊಗರಿಯಲ್ಲಿ ಎಚ್. ೨ ಸಿ, ಜೋಳದಲ್ಲಿ ಸಿ ಎಸ್.ಎಚ್. ೧ ಸಿ, ಎಸ್.ಎಚ್. -೬, ಎಸ್. ಬಿ – ೯೦೫ ಬಾರಲಿಯಲ್ಲಿ ಬಿ.ಜೆ. ೧ ಹತ್ತಿಯಲ್ಲಿ ಸೌಭಾಗ್ಯ, ಲಕ್ಷ್ಮೀ ವರಲಕ್ಷ್ಮೀ ಸೂರ್ಯಕಾಂತಿಯಲ್ಲಿ ಮಾ‌‌ಡ್ರೇನ್ ಅಲಸಂದೆಯಲ್ಲಿ ಎಸ್. ೪೮೮, ಹೀಗೆ ನೂತನ ಅಲ್ಪಾವಧಿ ಅಧಿಕ ತಳಿಗಳು ರಾಜ್ಯದ ಅಥವಾ ರಾಷ್ಟ್ರದ ಉತ್ಪಾದನೆ ಹೆಚ್ಚಿಸುವುದರಲ್ಲಿ ವಹಿಸಿರುವ ಪಾತ್ರ ಮಹತ್ತರವಾದದ್ದು. ಇತ್ತೀಚಿನ ರೋಗ ನಿರೋಧಕ, (ಸಿ.ಎಸ್.ಎಚ್. ೬, ಜೋಳ, ಕೀರ್ತಿಗೋಧಿ) ಕೀಟ ನಿರೋಧಕ (ವಿಕ್ರಮ, ಫಲ್ಗುಣ, ಕಣಿ ನಿರೋಧಕ ಬತ್ತ) ಚಳಿ ನಿರೋಧಕ (ಮಂಗಳ ಬತ್ತ, ಇಬ್ಬನಿ ರಾಗಿ) ಚೌಳು ಅಥವಾ ಕ್ಷಾರ ನಿರೋಧಕ (ಪ್ರಗತಿ – ಬತ್ತ, ಪ್ಯಾರಾ ಹುಲ್ಲು ಸಂಶೋಧನೆಯಲ್ಲಿರುವ ರಾಗಿ) ಮಸಗೆ ನಿರೋಧಕ (ಎಸ್.ಎ.ಆರ್. ಜೋಳ) ನೆರೆ ನಿರೋಧಕ (ಫಲ್ಗುಣ ರಾಜರಾಜನ್ ಬತ್ತಗಳು) ಬರ ನಿರೋಧಕ (ಶಕ್ತಿ ರಾಗಿ, ಲಕ್ಷ್ಮೀ ಹತ್ತಿ, ರಾಸಿ ಬತ್ತ) ಮುಂತಾದವುಗಳನ್ನು ಕಂಡು ಹಿಡಿಯಲ್ಪಟ್ಟಿರುವುದರಿಂದ ಹಿಂದೆ ಫಸಲೇ ಆಗದಿದ್ದಂತಹ ಕೆಲವು ಸನ್ನಿವೇಶಗಳಲ್ಲಿ ಈಗ ಲಾಭದಾಯಕ ಫಸಲು ಬೆಳೆಯಲು ಸಾಧ್ಯವಾಗಿದೆ.

ಬೆಳೆಯುತ್ತಿರುವ ಬೀಜೋತ್ಪಾದನೆ ಉದ್ಯಮ:

ಶಕ್ತಿಮಾನ್ ತಳಿಗಳು (ಸಂಕರನ ತ್ರಿಮುಖಿ ಸಂಕರಣ, ಬಹುಮುಖಿ ಸಂಕರಣ) ಸಂಯುಕ್ತ ತಳಿಗಳು, ಅವುಗಳಲ್ಲಿರುವ ಸುಪ್ತಾವಸ್ಥೆ ತೆಗೆಯುವುದು, ಪರಿಷ್ಕರಿಸುವುದು, ದಾಸ್ತಾನು ಮಾಡುವುದು, ಬೀಜ ಪ್ರಮಾಣ ಮುಂತಾದ ಹಂತಗಳಲ್ಲಿ ಬೀಜೋತ್ಪಾದನೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಒಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಎಲ್ಲಾ ತರಹದ ಹವಾಮಾನಗಳು ಇರುವುದರಿಂದ ನಾನಾ ಬೆಳೆಗಳ ಬೀಜೋತ್ಪಾದನೆಗೆ ಯೋಗ್ಯವೆನಿಸಿರುವುದರಿಂದ ವಿದೇಶಿ ವಿನಿಮಯ ಸಂಪಾದಿಸಲು ಇದು ಹೆಚ್ಚು ಭವಿಷ್ಯವುಳ್ಳ ಉದ್ಯಮ. ಅದಕ್ಕೆ ಕಾರಣ ನೂತನ ಅಧಿಕ ಇಳುವರಿ ತಳಿಗಳ ಅಭಿವೃದ್ಧಿ ಮತ್ತು ಬಿಡುಗಡೆ.

ಈ ಹಿಂದೆ ಅಧಿಕ ಇಳುವರಿ ತಳಿಗಳು ಪ್ರತಿಕೂಲ ವಾತಾವರಣಕ್ಕೆ ಹೊಂದುವುದಿಲ್ಲವೆಂದು ಒಂದು ಕಡೆ. ಪ್ರತಿಕೂಲ ಸನ್ನಿವೇಶಕ್ಕೆ ಹೊಂದಿಕೊಂಡು ಹೆಚ್ಚು ಇಳುವರಿ ಕೊಡಬಲ್ಲ ಶಕ್ತಿ ಅಧಿಕ ಇಳುವರಿ ತಳಿಗಳಿಗೆ ಮಾತ್ರ ಉಂಟು ಎಂದು ವಾದಿಸಲಾಗಿದೆ. ಇದರಿಂದ ಓದುಗರಿಗೆ ಉಂಟಾಗಬಹುದಾದ ಗೋಜನ್ನು ಇಲ್ಲಿ ಪರಿಹರಿಸಬೇಕಾದುದು ಸರಿಯಷ್ಟೆ. ಪ್ರತಿಕೂಲ ಸನ್ನಿವೇಶಗಳು ಸಾವಿರಾರು ಇರುತ್ತವೆ. ಅನಾದಿ ಕಾಲದಿಂದಲೂ ಅವುಗಳಿಗೆ ಹೊಂದಿಕೊಂಡು ಬಂದಿರುವ ತಳಿಗಳು ಇರುತ್ತವೆ ಮತ್ತು ಸಾಧಾರಣ ಇಳುವರಿ ಕೊಡಬಲ್ಲವಾಗಿರುತ್ತವೆ. ಇಂತಹ ಕೆಲವೇ ಸನ್ನಿವೇಶಗಳಿಗೆ ಮಾತ್ರ ನೂತನ ತಳಿಗಳನ್ನು ಕಂಡು ಹಿಡಿಯಲಾಗಿದ್ದು, ವಿವೇಚನೆಯಿಲ್ಲದ ಎಲ್ಲಾ ಪ್ರತಿಕೂಲ ಸನ್ನಿವೇಶಗಳಲ್ಲಿ ಕೆಲವೇ ತಳಿಗಳನ್ನು ಬಳಸುವುದರಿಂದ ನಷ್ಟ ಉಂಟಾಗುತ್ತದೆ.

ಈ ದೃಷ್ಟಿಯಿಂದ ಅಧಿಕ ಇಳುವರಿ ತಳಿಗಳು ವರವೇ ಸರಿ. ಕೆಲವು ವೇಳೆ ಶಾಪವೆನಿಸಿರುವ ಸನ್ನಿವೇಶ ಸೂಕ್ತ ಮಾಹಿತಿಯ ಕೊರತೆಯಿಂದ ಮೂಡಿ ಬರುವ ಅಭಿಪ್ರಾಯ. ತಾಂತ್ರಿಕ ಜ್ಞಾನದ ಸದುಪಯೋಗ ಸರ್ವರಿಗೂ ದೊರಕಿದಲ್ಲಿ ಶಾಪ ವರವಾಗುವ ಸಂದರ್ಭಗಳುಂಟು. ತಳಿ ಸಂಪತ್ತನ್ನು ಕಾಪಾಡಿಕೊಂಡು ಹೋಗಲು ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಂಡು ಹೊಸ ಹೊಸ ತಳಿಗಳನ್ನು ಪ್ರತಿಯೊಂದು ಸನ್ನಿವೇಶ ಋತುಗಳಿಗೆ ಅನುಗುಣವಾಗಿ ಒಂದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬಿಡುಗಡೆ ಮಾಡಿ, ಬೀಜ ಉತ್ಪಾದನೆಗೆ ಸಾಕಷ್ಟು ಮಾನ್ಯತೆ ನೀಡಿ ಶುದ್ಧವಾದ ಬೀಜ ಉತ್ಪಾದನೆಗೆ ಸರಬರಾಜು ಮಾಡಿ ಸಾಲ ಸೌಲಭ್ಯ ತಾಂತ್ರಿಕ ಜ್ಞಾನದ ಸೌಲಭ್ಯ ಒದಗಿಸಿ, ವಿಸ್ತರಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದಲ್ಲಿ ಅಧಿಕ ಇಳುವರಿಗಳಿಂದಾಗುವ ಕುಂದು ಕೊರತೆಗಳನ್ನು ನೀಗಿಸಿದಲ್ಲಿ ವರವೇ ಸರಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.