ಭಾರತವು ಕಳೆದ ವರ್ಷದವರೆಗೂ ಖಾದ್ಯತೈಲವನ್ನು ಭಾರಿ ಪ್ರಮಾಣದಲ್ಲಿ ಅಮದು ಮಾಡಿಕೊಳ್ಳುತ್ತಿತ್ತು. ಎಣ್ಣೆ ಬೀಜ ಸಸ್ಯಗಳ ಸುಧಾರಣೆ ಮತ್ತು ಬೆಳೆಗಾರರ ಸಹಕಾರಿ ಆಂದೋಲನದಿಂದಾಗಿ ಅಲ್ಪ ಸಮಯದಲ್ಲೇ ಖಾದ್ಯ ತೈಲ ಬೀಜಗಳ ಉತ್ಪಾದನಾ ಸ್ವರೂಪವೇ ಬದಲಾಗಿದೆ. ಎಪ್ಪತ್ತರ ದಶಕದಲ್ಲಿ ಭಾರತದ ತೈಲ ಬೀಜಗಳ ಉತ್ಪಾದನೆ ಸುಮಾರು ಒಂದು ಕೋಟಿ ಟನ್‌ಗಳಷ್ಟಿತ್ತು. ಆದರೀಗ ೧೬ ಕೋಟಿ ಟನ್‌ಗಳಿಗೆ ಏರಿದೆ. ಬೇಡಿಕೆ ಪೂರೈಸಲು ಪರದೇಶದಿಂದ ಸರಾಸರಿ ೧೫ ಲಕ್ಷ ಟನ್‌ಗಳಷ್ಟು ಖಾದ್ಯ ತೈಲವನ್ನು ಪ್ರತಿವರ್ಷ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದಕ್ಕಾಗಿಯೇ ಸುಮಾರು ೫೦೦ ಕೋಟಿ ರೂ.ಗಳಷ್ಟು ವಿದೇಶಿ ವಿನಿಮಯವನ್ನು ವ್ಯಯಮಾಡಬೇಕಾಗಿತ್ತು.

ಖಾದ್ಯ ತೈಲದ ಮೂಲ ಕೇವಲ ವ್ಯವಸಾಯ ಬೆಳೆಗಳು ಮಾತ್ರವಲ್ಲ ಅರಣ್ಯ ಸಸ್ಯ ಮೂಲದಿಂದ ಪಡೆಯುವ ತೈಲವು ಗಣನೀಯ ಪ್ರಮಾಣದಲ್ಲಿ ಉಪಯೋಗದಲ್ಲಿದೆ. ಭಾರತದಲ್ಲಿ ಇಂತಹ ಸಸ್ಯಗಳಿಂದ ವಾರ್ಷಿಕ ಉತ್ಪನ್ನಗಳನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಯಾವ ರಾಜ್ಯದಲ್ಲಿಯೂ ಸರಿಯಾಗಿ ಮಾಪನ ಮಾಡುವ ವ್ಯವಸ್ಥೆ ಇಲ್ಲ. ಜೊತೆಗೆ ಅರಣ್ಯ ಸಸ್ಯ ಬೀಜಗಳ ಉತ್ಪಾದನೆಯಲ್ಲಿನ ವ್ಯತ್ಯಾಸ ಖಾದಿ ಮತ್ತು ಗ್ರಾಮೀಣ್ಯ ಕೈಗಾರಿಕಾ ಕಮೀಷನ್ ಪ್ರಕಾರ ವಾರ್ಷಿಕವಾಗಿ ಮರಗಳ ಬೀಜ ತೈಲ ಉತ್ಪಾದನೆ ೭೬ ಲಕ್ಷ ಟನ್ ಎಂದು ಅಂದಾಜು ಖಾದ್ಯ ತೈಲ ಬೀಜಗಳ ಉತ್ಪಾದನೆಯಲ್ಲಿ ಇದು ಶೇ. ೩ ರಷ್ಟಾದರೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆ ಕಾಣಬಹುದು.

ಮರಗಳ ಬೀಜಗಳಿಂದ ಪಡೆಯುವ ತೈಲವು ಆಹಾರ. ಔಷಧ, ಔದ್ಯೋಗಿಕ, ರಾಸಾಯನಿಕ ಮತ್ತು ಸಾವಯವ ಗೊಬ್ಬರಕ್ಕಾಗಿ ಉಪಯೋಗಿಸಲಾಗುತ್ತಿದೆ. ಇಂತಹ ಬೀಜಗಳ ಉಪಯೋಗದ ವ್ಯಾಪ್ತಿಯನ್ನು ಹೆಚ್ಚಿಸುವ ಪ್ರಯತ್ನಗಳು ಇತ್ತೀಚೆಗೆ ನಡೆದಿದೆ. ಸಾರ್ವತ್ರಿಕವಾಗಿ ಮರದ ಬೀಜಗಳ ಉತ್ಪಾದನೆ ಮತ್ತು ಉಪಯೋಗದ ಬಗ್ಗೆ ಅರಿವು ಕಡಿಮೆ. ಬೀಜ ಉತ್ಪಾದನೆಯು ಆಹಾರದ ಬೆಳೆಗಳಂತೆ ವ್ಯವಸ್ಥಿತ ಮತ್ತು ನಿಯಂತ್ರಿತವಾಗಿ ಇರದೆ ಇರುವುದರಿಂದ ಮರದ ಬೀಜಗಳ ಉತ್ಪಾದನೆ ಹೆಚ್ಚಾಗಿ ನಿಸರ್ಗಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಹೆಚ್ಚೆಂದರೆ ಇಂತಹ ಮರಗಳ ಸಂಖ್ಯೆಯನ್ನು ವೃದ್ಧಿಸಿ ಉತ್ಪಾದನಾ ಪ್ರಮಾಣ ಏರಿಕೆಯನ್ನು ಎದುರು ನೋಡಬಹುದು.

ಸ್ಥಳೀಯ ಮರಗಳಿಂದ ಪಡೆಯುವ ಬೀಜಗಳು ಪ್ರಾಚೀನ ಕಾಲದಿಂದಲೂ ಒಂದಿಲ್ಲೊಂದು ಉಪಯೋಗದಲ್ಲಿದೆ. ಈಗ ಇಂತಹ ಬೀಜಗಳನ್ನು ಹೆಚ್ಚಾಗಿ ಸಾಬೂನು ಕೈಗಾರಿಕೆಯಲ್ಲಿ ಉಪಯೋಗಿಸುತ್ತಿದ್ದಾರೆ. ಇಂತಹ ಕೈಗಾರಿಕೆಗಳಿಂದ ಉಳಿಯುವ ಅನುಪಯೋಗಿ ಸಹ ಉತ್ಪನ್ನವಾದ ತೈಲರಹಿತ ಹಿಂದ್ದಿ (ಹಿಪ್ಪೆ)ಯು ಸತ್ವಭರಿತ ಸಾವಯವ ಗೊಬ್ಬರವೆಂದು ಇತ್ತೀಚೆಗೆ ತಿಳಿದುಬಂದಿದೆ. ಈ ಗೊಬ್ಬರದಲ್ಲಿ ಸಸ್ಯಗಳಿಗೆ ಬೇಕಾಗುವ ಅವಶ್ಯಕ ಪೋಷಕಾಂಶಗಳು ಇವೆ. ಇಂತಹ ಹಿಂಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಸಾರಜನಕವನ್ನು ಸುಲಭವಾಗಿ ಸಸ್ಯಗಳಿಗೆ ಸಾಗುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ಇಂತಹ ಹಿಂಡಿಯ ಪ್ರಮಾಣವು ೩೮ ಲಕ್ಷ ಟನ್‌ಗಳಿದ್ದು, ಇದರಿಂದ ಸಿಗುವ ಸಾರಜನಕ (೮೭ ಸಾವಿರ ಟನ್) ಫಾಸ್ಪರಸ್ (೨೫ ಸಾವಿರ ಟನ್) ಮತ್ತು ಪೊಟಾಶ್ (೫೭ ಸಾವಿರ ಟನ್) ಗಳ ಒಟ್ಟು ಪ್ರಮಾಣವು ೧೭ ಲಕ್ಷ ಟನ್ ಗಳಾಗುತ್ತವೆ. ಇಷ್ಟು ಅಗಾಧ ಪ್ರಮಾಣದಲ್ಲಿ ಉತ್ಪತ್ತಿಯಾಗುವ ತೈಲರಹಿತ ಹಿಂಡಿಯನ್ನು ಫಲಪ್ರದವಾಗಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿಕೊಂಡರೆ ರಾಸಾಯನಿಕ ಗೊಬ್ಬರದ ಅವಶ್ಯಕತೆಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು. ಈ ನಿಟ್ಟಿನಲ್ಲಿ ಸಂಶೋಧನಾ ಫಲಿತಾಂಶ ಹೊರಬರಬೇಕಾಗಿದೆ.

ಬೇವಿನ ರಸ:

ಸಾವಯವ ಕೃಷಿಯ ಬಗ್ಗೆ ಇತ್ತಿಚೆಗೆ ಹೆಚ್ಚಿನ ಒಲವು ಮೂಡತೊಡಗಿದೆ. ವಿವೇಚನಾರಹಿತ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಪರಿಸರ ಮತ್ತು ಮಣ್ಣಿನ ಫಲವತ್ತತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಕೃಷಿ ಪದ್ಧತಿಯ ಮೇಲೆ ದುಷ್ಪರಿಣಾಮ ಬೀರಿದೆ. ರಾಸಾಯನಿಕಗಳ ದುರ್ಬಳಕ್ಕೆ ತಡೆದು ಬೇವಿನ ರಸವನ್ನೇ ರಾಮಬಾಣವಾಗಿ ಉಪಯೋಗಿಸಿಕೊಳ್ಳುವ ಆಲೋಚನೆಯಿದೆ.

ಬೇವಿನ ಬೀಜದಲ್ಲಿರುವ ಅಜಾರ್ಡಿಕ್ಟಿನ್ ಎಂಬ ವಿಷ ವಸ್ತು ಹಲವು ಕ್ರಿಮಿಗಳನ್ನು ಕೊಲ್ಲುವ ಶಕ್ತಿಯನ್ನು ಮನುಷ್ಯ ಮತ್ತು ಬೆಳೆಗಳಿಗೆ ಯಾವ ಭಾದೆಯೂ ಉಂಟುಮಾಡದು. ಎಷ್ಟೋ ಸಂದರ್ಭಗಳಲ್ಲಿ ಬೀಜಗಳನ್ನು ಅರೆದು ನೀರಿನಲ್ಲಿ ಮಿಶ್ರಣಮಾಡಿ ಬೆಳೆಗಳಿಗೆ ಸಿಂಪಡಿಸಿ ಕೀಟ ನಿಯಂತ್ರಿಸಿದ ಉದಾಹರಣೆಯೂ ಉಂಟು.

ಬೇವಿನ ಬೀಜಗಳಿಂದ ಸಿಗುವ ತೈಲರಹಿತ ಹಿಂಡಿಯೂ ಸಹ ಸತ್ವಬರಿತವಾಗಿದ್ದು, ಅದರಲ್ಲಿ ಗಂಧಕ ಪ್ರಮಾಣ ಹೆಚ್ಚಾಗಿದೆ. ಇಷ್ಟಾದರೂ ಬೇವಿ ಬೀಜದ ಉಪಯೋಗವು ಅದರ ಸ್ವಾಭಾವಿಕ ಉತ್ಪನ್ನದ ಶೇ. ೨೫ ಮಾತ್ರವೆಂದು ಹೇಳಲಾಗಿದೆ. ಹಾಗೆಯೇ ಇತರ ಮರದ ಬೀಜಗಳ ಸಂಗ್ರಹಣೆ ಮತ್ತು ಉಪಯೋಗವು ತೀರ ಕೆಳಮಟ್ಟದಲ್ಲಿದ್ದು ಕೊಬ್ಬಿನ ಮೂಲಗಳನ್ನು ಅವಲಂಭಿಸಿ ಹೆಚ್ಚಿನ ಖರ್ಚಿಗೆ ದಾರಿಯಾಗಿದೆ.

ಭಾರತ ಸರ್ಕಾರವು ದನದ ಮಾಂಸದ ಕೊಬ್ಬನ್ನು ಆಮದು ಮಾಡಿಕೊಳ್ಳುವುದನ್ನು (ಒಂದು ಲಕ್ಷ ಟನ್) ನಿಷೇಧಿಸಿದ ನಂತರ ವನಸ್ಪತಿ ತುಪ್ಪ ಮತ್ತು ಸಾಬೂನು ತಯಾರಿಕೆಗಾಗಿ ಸ್ಥಳೀಯ ಮರದ ಬೀಜಗಳ ಬಳಕೆ ಅಯೋಗ್ಯವಾದ ತೈಲದ ಉಪಯೋಗ ಹೆಚ್ಚಾಯಿತು. ಅಂತಹ ಬೀಜಗಳ ಸಂಗ್ರಹಣೆ ಮತ್ತು ಮರಗಳ ಸಂಖ್ಯಾವೃದ್ಧಿಗೆ ಪ್ರೋತ್ಸಾಹ ಸಿಗಲಾರಂಭಿಸಿತು. ಸುಮಾರು ೧೦೦ ಅರಣ್ಯ ಸಸ್ಯಗಳಿಗೆ ತೈಲ ಕೊಡುವ ಸಾಮರ್ಥ್ಯವಿದ್ದರೂ ಕೇವಲ ಹತ್ತನ್ನು ಮಾತ್ರ ಬಳಿಸಿಕೊಳ್ಳಲಾಗಿದೆ. ಸಾಲ ಹೊಂಗೆ, ಬೇವು, ಇಪ್ಪೆ, ಧೂಪ, ಇಪ್ಪುಗೆ, ಮೂರುಗಲ, ಹೊನ್ನೆ ಮತ್ತು ಕೆಂದಾಳೆಗಳನ್ನು ಬೀಜ ಉಪಯೋಗಿ ಅರಣ್ಯ ಸಸ್ಯಗಳೆಂದು ಗುರುತಿಸಲಾಗಿದೆ ಇಷ್ಟೆ. ಉಪ್ಪಿಗೆ ಮತ್ತು ಹೊನ್ನೆ ಬೀಜಗಳು ಸಾಬೂನು ಕೈಗಾರಿಕೆಯಲ್ಲೂ ಧೂಪದ ಬೀಜ ತೈಲದಿಂದ ಔಷಧಿ ಮತ್ತು ಚರ್ಮ ಹದಗೊಳಿಸುವಿಕೆಯಲ್ಲೂ ಕೆಂದಾಳೆ ತೈಲವನ್ನು ಆಹಾರಕ್ಕಾಗಿ ಮತ್ತು ಗೊಬ್ಬರಕ್ಕಾಗಿಯೂ ಮೂರಗಳ ಮತ್ತು ಬೇವು ಬೀಜದಿಂದ ಹಿಂಡಿ ಅಲ್ಲದೆ ಯಂತ್ರ ನುಣುಪುಗೊಳಿಸುವುದಕ್ಕಾಗಿಯೂ ಉಪಯೋಗಿಸಲಾಗುತ್ತದೆ. ಸಾಲ್‌ಬೀಜ ತೈಲದ ಪ್ರಮಾಣವು ಅರಣ್ಯ ಸಸ್ಯಗಳಲ್ಲಿಯೇ ಸಿಂಹಪಾಲಾಗಿದ್ದು, ಅದರ ಒಟ್ಟು ಉತ್ಪಾದನೆ ಮತ್ತು ಉಪಯೋಗವು ಶೇ.೮೦ರಷ್ಟು ಎಂದು ದಾಖಲಾಗಿದೆ. ಸಾಲ ಬೀಜ ತೈಲವು ಬಳಕೆಗೆ ಅಯೋಗ್ಯವಾಗಿದ್ದರೂ ವನಸ್ಪತಿ ತುಪ್ಪ ಮತ್ತು ಚಾಕ್‌ಲೆಟ್ ಕೈಗಾರಿಕೆಯಲ್ಲಿ ಪ್ರಮುಖವಾಗಿ ಉಪಯೋಗವಾಗುತ್ತದೆ.

ಕೋಕೋ ಬೆಣ್ಣೆಯ ದುಬಾರಿ ಬೆಲೆಯಿಂದಾಗಿ ಸಾಲ ಬೀಜದ ತೈಲವು ಅದಕ್ಕೆ ಪರ್ಯಾಯವಾಗಿ ಕಂಡದ್ದರಿಂದ ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚುತ್ತಿದೆ.

ಇಂತಹ ಪ್ರಮುಖ ತೈಲಭರಿತ ಅರಣ್ಯ ಸಸ್ಯ ಬೀಜಗಳ ಸಂಗ್ರಹಣೆಯು ವ್ಯವಸ್ಥಿತವಾಗಿ ಕಾರಣದಿಂದ ಅವುಗಳ ಶುದ್ಧತೆ ನಾಶವಾಗಿ ಹೋಗುವುದೇ ಹೆಚ್ಚು ಬೀಜ ಸಂಗ್ರಹಣೆ ಕೆಲಸವು ಗ್ರಾಮೀಣ ಜನರ ಸಹಕಾರಿ ಚಳುವಳಿಯಾಗಿ ರೂಪಗೊಂಡರೆ ಸಾಕಷ್ಟು ಜನರಿಗೆ ಉದ್ಯೋಗ ಕಲ್ಪಿಸುವ ಜೊತೆ ಇತರ ವ್ಯವಸಾಯ ತೈಲ ಬೀಜಗಳ ಮೇಲಿನ ವಿಪರೀತ ಅವಲಂಬನೆಯನ್ನೂ ಕಡಿಮೆಗೊಳಿಸಬಹುದು. ಈ ನಿಟ್ಟಿನಲ್ಲಿ ಅರಣ್ಯ ಸಸ್ಯ ಬೀಜಗಳ ಸರಿಯಾದ ಉಪಯೋಗ ಬೀಜ ಸಂಗ್ರಹಣೆಯಲ್ಲಿನ ತಾಂತ್ರಿಕತೆ. ದಾಸ್ತಾನು ಮತ್ತು ಇನ್ನಿತರ ಉಪಯೋಗಗಳ ವ್ಯಾಪ್ತಿಯನ್ನು ವೈಜ್ಞಾನಿಕವಾಗಿ ನಿರ್ಣಯಿಸಬೇಕಿದೆ. ಈಗಿನವರೆಗೂ ಇಂತಹ ಸಸ್ಯಗಳ ಬೀಜದ ತಾಂತ್ರಿಕತೆಯಾಗಲಿ ಸಂಶೋಧನೆಗಳಾಗಲಿ ತೃಪ್ತಿಕರವಾಗಿ ನಡೆದಿಲ್ಲ. ಮುಂಬರುವ ದಿನಗಳಲ್ಲಿ ಇಂತಹ ಸಸ್ಯಗಳ ಮೇಲೆ ಅವಲಂಬನೆ ಹೆಚ್ಚಾಗುವುದರಿಂದ ಅರಣ್ಯ ಕೃಷಿಯಲ್ಲಿ ಯತೇಚ್ಚವಾಗಿ ಅಳವಡಿಸಿಕೊಂಡು ಮರದ ತೈಲ ಬೀಜಗಳ ಉತ್ಪಾದನೆ ಹೆಚ್ಚಿಸುವುದು ಒಳಿತು.