ಬತ್ತವು ಅಂಟಾರ್ಟಿಕಾ ಒಂದನ್ನು ಬಿಟ್ಟು ಉಳಿದ ಎಲ್ಲಾ ಖಂಡಗಳಲ್ಲಿಯೂ ಬೇಸಾಯದಲ್ಲಿರುವ ಪ್ರಪಂಚದ ಒಂದು ಮುಖ್ಯ ಕೃಷಿ ಬೆಳೆ. ನಾನಾ ಹವಾಗುಣ ಮತ್ತು ಮಣ್ಣುಗಳಿಗೆ ಹೊಂದಿಕೊಂಡು ಬೆಳೆಯಬಲ್ಲ ಶಕ್ತಿ ಕೇವಲ ಬತ್ತದ ಬೆಳೆಗೆ ಮಾತ್ರ ಇದೆಯೆಂಬ ನಂಬಿಕೆ ಇದೆ ಇದು ಸತ್ಯವೂ ಹೌದು. ಆದರೆ ಬತ್ತ ಬೆಳೆದಷ್ಟು ಅಥವಾ ಇನ್ನೂ ಹೆಚ್ಚಿನ ಹೊಂದಾಣಿಕೆ ಗುಣಗಳನ್ನು ಹೊಂದಿರುವ ಕವಡಿಗ ಬತ್ತದ ಕಳೆಯ ಪರಿಚಯ ಅನೇಕರಿಗಿಲ್ಲದಿರಬಹುದು.

ಗದ್ದೆಗಳ ಆಸುಪಾಸಿನಲ್ಲಿ ಓಡಾಡಿರುವ ಸುಮಾರು ಎಲ್ಲಾ ಜನರೂ ಇದನ್ನು ನೋಡಿದ್ದರೂ ಕೂಡಾ, ಅಕ್ಕಿಯನ್ನು ಬಳಸುವ ಜನರೆಲ್ಲ ಇದನ್ನು ಉಪಯೋಗಿಸಿದ್ದರು ಕೂಡಾ ಅವರು ಈ ಜಾತಿಯ ಬತ್ತದ ಕಳೆಯನ್ನು ಸುಲಭವಾಗಿ ಗುರುತಿಸಲಾರರು. ಆದರೆ ಈ ಸಸ್ಯದ ವಿವರ ಮತ್ತು ಇದರ ಇತರೇ ಗುಣಗಳನ್ನು ಎಂದು ನೆನಪಿಸಿಕೊಳ್ಳಬಲ್ಲರು.

ಕವಡಿಗ, ಗಂಡು ಬತ್ತ, ಕಾಡುಬತ್ತ ಎಂಬ ಹಲವು ಹೆಸರುಗಳಿಂದ ಕೆರೆಯಲ್ಪಡುವ ಈ ಕಳೆಯು ಮಾನವನ ಕಳೆ ನಿರ್ಮೂಲನಾನೊಡನೆ ಬೆಳೆದು, ನೀರು, ಮಣ್ಣು ಮತ್ತು ಪೋಷಕಾಂಶಗಳ ತನ್ನ ಭಾಗವನ್ನು ಪಡೆದೇ ತೀರುತ್ತದೆ. ಇದರ ಜೀವನಚಕ್ರ ನಿಜವಾಗಿಯೂ ಸ್ವಾರಸ್ಯಮಯ.

ಹಲವು ಹೆಸರುಗಳು

ಕವಡಿಗ, ಗಂಡುಬತ್ತ, ಕಾಡುಬತ್ತ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ಸಸ್ಯಕ್ಕೆ ಶಾಸ್ತ್ರಿಯವಾಗಿ ಎಕಿನೂಕ್ಲೋವ (Echinocloa Sp.) ಎಂಬ ಹೆಸರಿದೆ. ಅಲ್ಲದೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದಲೂ ಕರೆಯಲ್ಪಡುತ್ತಿದ್ದು, ಮುಖ್ಯವಾಗಿ Barn yard grass, water grass, millet, blue, stem, baronet grass, jungle rice and cat rail millet ಗಳನ್ನು ಹೆಸರಿಸಬಹುದು. ಈ ಕಳೆಗಳಲ್ಲಿ ಹಲವು ವಿಧದ ಉಪಜಾತಿಗಳೂ ಇವೆ.

ಸಸ್ಯ ರೂಪ

ಈ ಕಳೆಯ ಸಸ್ಯ ಸ್ವರೂಪವು ಹೂಗೊಂಚಲನ್ನು ಬಿಟ್ಟರೆ ಉಳಿದ ಎಲ್ಲಾ ರೀತಿಯಲ್ಲಿಯೂ ಬತ್ತ ಸಸ್ಯವನ್ನೇ ಹೋಲುತ್ತದೆ ಎನ್ನಬಹುದು. ಈ ಕಳೆಯೂ ಸುಮಾರು ೧೨೦ ರಿಂದ ೧೬೦ ಸೆ.ಮೀ ಎತ್ತರಕ್ಕೆ ಬೆಳೆಯುತ್ತದೆ. ಅಂದರೆ ಜಾತಿ, ಬತ್ತಗಳಷ್ಟೇ ಉದ್ದ ಬೆಳೆಯಬಲ್ಲದೆಂದಾಯ್ತು. ಆದರೆ ಇತ್ತೀಚೆಗೆ ಬಿಡುಗಡೆಯಾಗಿರುವ ಅಧಿಕ ಇಳುವರಿ ತಳಿಗಳಾವುವೂ ಸಾಮಾನ್ಯವಾಗಿ ಇಷ್ಟು ಎತ್ತರ ಬೆಳೆಯಲಾರವು ಎಂಬುದನ್ನು ಇಲ್ಲಿ ಗಮನಿಸಬೇಕು.

ಕಾಂಡವು ದುಂಡಾಗಿ ಕೊಳವೆಯಂತಿದ್ದು, ಬುಡದಲ್ಲಿ ತುಂಡಾದ ಆದರೆ ದಪ್ಪನಾದ ಗಿಣ್ಣಾಂತರಗಳನ್ನೂ (Internode)ತುದಿಯಲ್ಲಿ ಉದ್ದವಾದ ಆದರೆ ಸಣ್ಣ ಗಿಣ್ಣಾಂತರಗಳನ್ನೂ ಹೊಂದಿರುತ್ತದೆ. ಈ ಸಸ್ಯವು ೫ ರಿಂದ ೧೧ ತೆಂಡೆಗಳನ್ನು ಹೊರಡಿಸಬಲ್ಲದು. ತೆಂಡೆಗಳಲ್ಲಿ ಕವಲುಗಳು (Branches) ಇರುವುದೂ ಉಂಟು. ಈ ಕಳೆಯ ಬೀಜವು ಮೊಳಕೆ ಬಂದ ನಂತರ ಸುಮಾರು ೧೩೦ ರಿಂದ ೧೪೦ ದಿವಸಗಳಲ್ಲಿ ಬಲಿತು ಬೀಜ ಪ್ರಸಾರಕ್ಕೆ ಸಿದ್ಧವಾಗುತ್ತದೆ. ಬೀಜವು ಮೊಳಕೆ ಬಂದು, ಪೈರಾಗಿ ಬೆಳೆದು, ತೆಂಡೆ ಹೊರಡಿಸಿ, ಮೊಗ್ಗು ಕಟ್ಟಿ, ತೆನೆ ಹೊರ ಬರುವ ಕಷ್ಟ. ಆದರೆ ಸಸ್ಯ ತಜ್ಞರು ಇಂತಹ ಬೆಳವಣಿಗೆಯ ಗಟ್ಟದಲ್ಲಿ ಬೆಳೆಯುತ್ತಿರುವ ಈ ಸಸ್ಯವನ್ನು ಪರೀಕ್ಷಿಸಿ ಗಂಡು ಬತ್ತವನ್ನು ಗುರುತಿಸುವ ಮಾರ್ಗವನ್ನು ಹುಡುಕಿದ್ದಾರೆ.

ಬತ್ತದ ಸಸ್ಯಗಳಲ್ಲಿರುವಂತೆ ಗಂಡು ಬತ್ತದಲ್ಲಿ ಎಲೆಯ ಕವಚ (Leaf Sheath) ಮತ್ತು ಗರಿ (Leaf blade) ಇವೆರಡೂ ಕೂಡುವ ಜಾಗದಲ್ಲಿ ಎರಡು ವಿಧವಾದ ಲಿಗ್ಯೂಲ್ (Ligule) ಅಥವಾ ಅರಿಕಲ್ಸ್ (Auricles) ಎಂಬ ಕಡುಗೋಲು ಹಾಗೂ ಬರ್ಚಿ ಆಕಾರದ ಕೊಂಡಿಗಳು ಇರುವುದಿಲ್ಲ.

ಸಸ್ಯವು ತೆನೆ ಹೊರಡಿಸಿದ ನಂತರ ಇದನ್ನು ಬಹಳ ಸುಲಭವಾಗಿ ಗುರುತಿಸಬಹುದು. ಇದರ ತೆನೆಯ ಪುಷ್ಪ ಗುಚ್ಚಗಳು ಒತ್ತಾಗಿ ಕೂಡಿಕೊಂಡು ಬೆಕ್ಕಿನ ಬಾಲದ ಆಕೃತಿಯಲ್ಲಿರುವೆ. ಆದುದರಿಂದಲೇ ಕೆಲವು ಕಡೆ ಇದನ್ನು ಬೆಕ್ಕು ಬಾಲದ ಹುಲ್ಲು (Cat tail Grass) ಎನ್ನುತ್ತಾರೆ. ಅಲ್ಲದೆ ಇದರ ಪುಷ್ಪಗಳು ಬಹಳ ಪುಟ್ಟಗಿದ್ದು, ಬತ್ತಕ್ಕೆ ಹೋಲಿಸಿದರೆ ಅಧಿಕ ಸಂಖ್ಯೆಯಲ್ಲಿರುವುದು ತಿಳಿಯುತ್ತದೆ.

ಸಾಧಾರಣವಾಗಿ ನೂರು ಬತ್ತದ ಕಾಳುಗಳ ತೂಕ ೧.೭ ರಿಂದ ೨.೯ ಗ್ರಾಂ ಇರಬಲ್ಲುದಾದರೆ ನೂರು ಕವಡಿಗ ಬೀಜಗಳ ತೂಕವು ಕೇವಲ ೦.೪ ರಿಂದ ೦.೫ ಗ್ರಾಂ ಮಾತ್ರ ಇರುತ್ತದೆ.

ಬತ್ತದ ಒಂದು ಸಾಮಾನ್ಯವಾದ ತೆನೆಯಲ್ಲಿ ೯೦ ರಿಂದ ೨೫೦ ಕಾಳುಗಳು ಮಾತ್ರ ಇರುವುದಾದರೆ ಕವಡಿಗ ತೆನೆಯಲ್ಲಿ ೪೦೦ ರಿಂದ ೭೫೦ ಕಾಳುಗಳೂ ಇರಬಲ್ಲವು. ಇದರ ಬೀಜವು ಸಣ್ಣಗೆ ಗುಂಡಾಗಿ ಆದರೆ ಹಿಂಭಾಗ ಮತ್ತು ತುದಿ ಭಾಗಗಳನ್ನು ಚೂಪಾಗಿರುತ್ತದೆ. ತೆಳುವಾದ ಹೊಟ್ಟನ್ನು ಹೊಂದಿರುವ ಈ ಬೀಜದ ಮೇಲು ಭಾಗವು ಒಂದು ವಿಧವಾದ ಹೊಳಪನ್ನು ಹೊಂದಿರುತ್ತದೆ. ಮೀಸೆ ಇರುವ ಹಾಗೂ ಇಲ್ಲದಿರುವ ಎರಡು (Lustrous) ಮಾದರಿಯ ಕಾಳುಗಳೂ ಉಂಟು.

ಬೀಜ ಪ್ರಸಾರ

ಈ ಕಳೆಯ ಬೇಸಿಗೆ, ಮುಂಗಾರು ಹಾಗೂ ಹಿಂಗಾರು ಕಾಲಗಳಲ್ಲಿ ಬತ್ತದೊಡನೆ ಬೆಳೆಯುವ ಗುಣ ಹೊಂದಿದೆ. ಕೆಲವು ಜಾತಿಯ ಬತ್ತಗಳು ದೀರ್ಘಹಗಲು (Longdays) ದಿನಗಳಲ್ಲಿ ಬೆಳೆದಾಗ (ಕರ್ನಾಟಕದಲ್ಲಿ ಕರಾವಳಿ ಬಿಟ್ಟು ಉಳಿದ ಪ್ರದೇಶಗಳಲ್ಲಿ ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡಿದಾಗ) ಹೂ ಬಿಡುವುದಿಲ್ಲ (Photo Periad sensitive) ಎಂಬುದು ಅನೇಕರಿಗೆ ತಿಳಿದಿರುವ ವಿಷಯ. ಆದರೆ ಇತ್ತೀಚಿನ ಎಲ್ಲಾ ಹೊಸ ತಳಿಗಳೂ ಬೇಸಿಗೆಯಲ್ಲಿ ಹೂ ಬಿಡಬಲ್ಲವು. ಅಂತೆಯೇ ಈ ಕಳೆಯೂ ಸಹ ಯಾವ ಕಾಲದಲ್ಲಿ ನಾಟಿ ಮಾಡಿದರೂ ಸುಮಾರು ೪ ೧/೨ ತಿಂಗಳಲ್ಲಿ ಹೂ ಬಿಟ್ಟು, ಕಾಳಾಗಿ ಜೀವನ ಚಕ್ರವನ್ನು ಪೂರ್ಣಗೊಳಿಸುವ ಶಕ್ತಿ ಹೊಂದಿದೆ. ಬತ್ತದ ಗದ್ದೆಗಳಲ್ಲಿ, ಬದುಗಳಲ್ಲಿ, ನೀರುಣ್ಣಿಸುವ ಒಪಿಗಾಲುವೆಗಳ ಅಂಚಿನಲ್ಲಿ ಕೆರೆ ಕಟ್ಟೆಗಳ ಸುತ್ತಮುತ್ತಲಿನ ತೇವಾಂಶವಿರುವ ಪ್ರದೇಶಗಳಲ್ಲಿ ಯಾವ ಉಪಚಾರವು ಇಲ್ಲದೆ ತಾನಾಗಿಯೇ ಬೆಳೆದು ಅಸಂಖ್ಯಾತವಾಗಿ ಈ ಕಳೆಯ ಬೀಜಗಳು ಉತ್ಪಾದನೆಯಾಗುತ್ತದೆ.

ನೀರು ಕಾಲುವೆ, ಬಸಿಗಾಲುವೆ, ಹಕ್ಕಿಪಕ್ಷಿಗಳು, ದನ ಮುಂತಾದ ಪ್ರಾಣಿಗಳು, ಇತರ ಕೃಷಿ ಬೆಳೆಗಳ ಕಾಳುಗಳು, ಕೃಷಿ ಯಂತ್ರೋಪಕರಣಗಳು, ಗಾಳಿ ಮುಂತಾದವುಗಳ ಸಹಾಯದಿಂದ ಬೀಜ ಪ್ರಸಾರವಾಗುತ್ತದೆ. ಬಲಿತ ಕಾಳುಗಳುಳ್ಳ ಈ ಕಳೆಯ ಸಸ್ಯಗಳನ್ನು ದನಕರುಗಳು ಹುಲ್ಲಿನ ಜೊತೆ ತಿಂದಾಗ ಇದರ ಬೀಜಗಳು ಜೀರ್ಣವಾಗದೆ ಸಗಣಿ ಮೂಲಕ ಹೊರಬರುವ ಬೀಜವು ಮೊಳಕೆ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ ಎಂದು ನಂಬಿಕೆಯೂ ಇದೆ.

ಇದನ್ನು ಪರೀಕ್ಷಿಸುವ ಪ್ರಯತ್ನ ರಾಜ್ಯದ ಕೃಷಿ ವಿವಿಯ ಪ್ರಾದೇಶಿಕ ಸಂಶೋಧನಾ ಕೇಂದ್ರ, ವಿ.ಸಿ. ಫಾರಂ ಮಂಡ್ಯಾದಲ್ಲಿ ನಡೆಯುತ್ತದೆ.

ಫಸಲಿಗೆ ನಷ್ಟ

ಈ ಕಳೆಯ ಸಸ್ಯವು ಯಾವುದೇ ಬತ್ತದ ತಳಿ ಸಸ್ಯಕ್ಕಿಂತಲೂ ಹೆಚ್ಚಿನ ಬಿರುಸಿನಿಂದ ಬೆಳೆಯಬಲ್ಲ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು. ಸೂರ್ಯರಶ್ಮಿ, ನೀರು ಮತ್ತು ಸ್ಥಳ ಮೊದಲಾದವುಗಳಿಗೆ ಬತ್ತದ ಬೆಳೆಯೊಡನೆ ಈ ಕಳೆಯು ಪೈಪೋಟಿಗೆ ನಿಲ್ಲುತ್ತದೆ. ಕೃಷಿಕರ ಕಣ್ಣು ತಪ್ಪಿದರಂತೂ ಇಂತಹ ಪೈಪೋಟಿಯಲ್ಲಿ ಜಯ ಖಂಡಿತ ಗಂಡು ಬತ್ತದ್ದೇ ಆಗಿರುತ್ತದೆ. ಕೆಲವು ಪ್ರಾಚೀನ ಗಡಸು ಗುಣಗಳನ್ನು (Wild characteristic) ಹೊಂದಿರುವ ಗಂಡು ಬತ್ತವು, ಫಲವು ಕೊಡುವ ಬತ್ತಕ್ಕಿಂತಳೂ ಹೆಚ್ಚು ಸಾಮರ್ಥ್ಯದಿಂದ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಬಲ್ಲದು. ಇಂತಹ ನಷ್ಟದ ಜೊತೆಗೆ ಬತ್ತಕ್ಕೆ ತಗಲುವ ಅನೇಕ ರೋಗಾಣು ಮತ್ತು ಕೀಟಗಳಿಗೆ ಈ ಕಳೆಯ ಆಶ್ರಯ ನೀಡಿ ಅವುಗಳ ಅಭಿವೃದ್ಧಿಗೆ ನೆರವಾಗುತ್ತದೆ. ಈ ಕಳೆಯ ಹಾವಳಿಯಿಂದಾಗಿ ಬತ್ತದ ಇಳುವರಿ ಶೇ. ೫ ರಿಂದ ೨೫ರಷ್ಟು ನಷ್ಟವಾಗಬಹುದೆಂದು ಅಂದಾಜು ಮಾಡಲಾಗಿದೆ. ಇದನ್ನು ಸರಿಯಾಗಿ ನಿರ್ಧರಿಸಲು ಇದೀಗ ಕೃಷಿ ವಿ.ವಿ. ಯು ಕೆಲವು ಸಮೀಕ್ಷೆಗಳನ್ನು (Surveys) ನಡೆಸುತ್ತಿದೆ. ಬತ್ತದ ಇಳುವರಿ ನಷ್ಟವಾಗುವುದರ ಜೊತೆಗೆ ನಾವು ಈ ಕಳೆಯನ್ನು ಚೆನ್ನಾಗಿ ಬೆಳೆದ ನಂತರ ಕಿತ್ತು ಬಿಡಿದರೆ, ನಾವು ಗದ್ದೆಗೆ ಹಾಕಿನ ಗೊಬ್ಬರವನ್ನು ನಾವೇ ನಿಮ್ಮ ಕೈಯಿಂದಲೇ ಹೊರ ಹಾಕಿದಂತಾಗುತ್ತದೆ. ನೇರ ಬಿತ್ತನೆ ಬೇಸಾಯ ಕ್ರಮ ಇರುವಲ್ಲಿ ಇದರಿಂದ ಉಂಟಾಗುವ ನಷ್ಟ ನಾಟಿ ಬೇಸಾಯಕ್ಕಿಂತಲೂ ಹೆಚ್ಚು ಮಟ್ಟದ್ದು ಎಂಬುದು ಸ್ಪಷ್ಟವಾಗಿ ಕಂಡು ಬಂದಿರುವ ಅನುಭವ.

ನಿಯಂತ್ರಣ

ಸದ್ಯದಲ್ಲಿ ಈ ಕಳೆ ಮತ್ತು ಇತರ ಕಳೆಗಳನ್ನು ಕರ್ನಾಟಕ ಇತರೇ ಕಡೆ ಕೈಕಳೆ ಕೀಳಿಸುವುದು ಮತ್ತು ಕಳೆನಾಶಕಗಳನ್ನು ಉಪಯೋಗಿಸಿ ನಾಶ ಮಾಡಲಾಗುತ್ತಿದೆ. ೨, ೪ಡಿ ಮತ್ತು ಪ್ರೋಪಾನಿಲ್ ಕಳೆನಾಶಕಗಳನ್ನು ಇದಕ್ಕಾಗಿಯೇ ಸೂಚಿಸಲಾಗಿದೆ. ಇದರಿಂದ ಹೊಸದಾಗಿ ಮೊಳಕೆ ಬಂದ ಕತೆಗಳನ್ನು ಮಾತ್ರ ತಡೆಯಲು ಸಾಧ್ಯ. ಬಟ್ಲು ಪಾತಿಯಿಂದಲೂ ಬತ್ತದೊಡನೆ ಬೆಳೆದು ಅದರೊಡನೇ ನಾಟಿಯಾಗಲ್ಪಟ್ಟ ಕವಡಿಗ ಯಾವ ನಿಯಂತ್ರಣಕ್ಕೂ ಸಿಕ್ಕುವುದಿಲ್ಲ. ಹಳೆಯ ಬೀಜವಿಲ್ಲದ ಕಡೆ ಅಗೆ ಪಾತಿಗಳನ್ನು ಮಾಡುವುದು ಶಿಪಾರಸ್ಸಿನಲ್ಲಿದೆ.

ಅಮೇರಿಕಾ ಬತ್ತದ ತಜ್ಞರು ಗದ್ದೆಗಳಲ್ಲಿ ೫-೧೦ ಸೆ.ಮೀ. ಆಳದಲ್ಲಿ ಸದಾ ನೀರು ಕಟ್ಟಿ ಹಾಗೂ ಥಯೋಕಾರ್ಬನೇಟ್ (Thiocarbanate) ಎಂಬ ಕಳೆನಾಶಕವನ್ನು ಬಳಸಿ ಈ ಕಳೆಯನ್ನು ತಡೆಗಟ್ಟುವುದರಲ್ಲಿ ಸಫಲವಾಗಿದ್ದರೆ, ಇಂತಹ ಕೆಲವು ಕ್ರಮಗಳಿಂದ ಈ ಕಳೆಯನ್ನು ಹತೋಟಿಯಲ್ಲಿಟ್ಟು ಇದರಿಂದ ಫಸಲಿಗೆ ಉಂಟಾಗುವ ಹಾನಿಯನ್ನು ಕನಿಷ್ಟ ಮಟ್ಟಕ್ಕೆ ಇಳಿಸಲು ಸಾಧ್ಯವಾಗಿದೆ.

ಕಳೆಯ ನಿರ್ಮೂಲನ

ಈ ಕಳೆಯನ್ನು ಸಂಪೂರ್ಣವಾಗಿ ನಿರ್ಣಾಮಗೊಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಒಂದು ಪ್ರತ್ಯೇಕ ಯೋಜನೆ ಬೇಕಾಗುತ್ತದೆ. ನಾಲ್ಕಾರು ವರ್ಷ ಇಂತಹ ಒಂದು ಯೋಜನೆಯ ಮುಖ್ಯ ಕ್ರಮಗಳನ್ನು ಸತತವಾಗಿ ಮತ್ತು ಸಮಗ್ರವಾಗಿ ಪರಿಪಾಲಿಸಿದೆ. ಈ ಕಳೆಯ ನಿರ್ಮೂಲನೆ ಸಾಧ್ಯವಾದೀತು. ಇಂತಹ ಪರಿಣಾಮಕಾರಿ ಯೋಜನೆಯನ್ನು ರೂಪಿಸಲು ಈ ಕೆಳಗಿನ ಸೂಚನೆಗಳು ಸಹಕಾರಿಯಾಗಬಲ್ಲವು.

೧. ಅರ್ಹತೆ ಮುದ್ರ ಪಡೆದ (Certified) ಬೀಜಗಳನ್ನು ಮಾತ್ರ ಬಳಸಬೇಕು.

೨. ಸಾಧ್ಯವಿದ್ದಷ್ಟು ಪ್ರದೇಶದಲ್ಲೆಲ್ಲಾ ಗಿಡ್ಡ ಮತ್ತು ಅರೆಗಿಡ್ಡ ಸಸ್ಯಸ್ವರೂಪ ಹೊಂದಿರುವ ಆಧುನಿಕ ತಳಿಗಳನ್ನು ಆಯ್ಕೆ ಮಾಡಬೇಕು. ಇಂತಹ ತಳಿಗಳಲ್ಲಿ ಕವಡಿಗ ಸಸ್ಯಗಳನ್ನು ಹುಡುಕಿ ಕೀಳುವುದು ಸುಲಭ.

೩. ಕಾಲುವೆ, ಕೆರೆ, ಕುಂಟೆ, ಪಾತಿ ಮುಂತಾದ ಪ್ರದೇಶಗಳಲ್ಲಿ ಈ ಕಳೆಯು ಕಾಣಿಸಿಕೊಂಡ ಕೂಡಲೇ ಇದನ್ನು ಕಿತ್ತು ನಾಶಪಡಿಸಬೇಕು.

೪. ಬಟ್ಟು ಪಾತಿ ಮಾಡುವ ಕಾಳನ್ನು ಮುಂಚಿತವಾಗಿಯೇ ಒಮ್ಮೆ ನೀರು ಬಿಟ್ಟು ನೆನೆಸಿ, ಅದರಲ್ಲಿರಬಹುದಾದ ಹಳೆಯ ಸ್ವಯಂ ಪ್ರಸಾರಿತ ಬೀಜಗಳನ್ನು ಮೊಳೆಯಂತೆ ಮಾಡಿ, ಉತ್ತು ನಾಶಪಡಿಸಬೇಕು.

೫. ಚೆನ್ನಾಗಿ ಪರಿಪಕ್ವವಾಗುವ ಹಾಗೂ ಕೊಳಿತಿಲ್ಲದ ಗೊಬ್ಬರವನ್ನು (Under composed) ಬಳಸಬಾರದು.

೬. ಅಗೆ ಪಾತಿಗಳಲ್ಲಿ ಪೈರು ಬೆಳೆಯುತ್ತಿರುವಾಗ ಪೈರು ಕೀಳುವಾಗ ಹಾಗೂ ಸಿದ್ದಪಡಿಸುವಾಗ ನಾಟಿ ಮಾಡುವಾಗ ಕೊಂಡಿಗಳಿಲ್ಲದ ಪೈರುಗಳನ್ನು ಹುಡುಕಿ ತೆಗೆದು ನಾಶಪಡಿಸಬಹುದು.

೭. ಪೈರಾಗಿರುವಾಗ ಗುರುತಿಸಲಾಗದೆ ಉಳಿದುಕೊಂಡ ಕವಡಿಗ ಸಸ್ಯಗಳನ್ನು ಬೆಳೆಯುತ್ತಿರುವಾಗ ಹುಡುಕಿ ತೆಗೆಯಬಹುದು. ನಾಟಿಯಾದ ೩ ವಾರಗಳ ನಂತರ ಈ ಕಳೆಯು ಯಾವುದೇ ಆಧುನಿಕ ತಳಿ ಸಸ್ಯಗಳಿಗಿಂತ ಹೆಚ್ಚು ಎತ್ತರಕ್ಕೆ ಎದ್ದು ಕಾಣಿಸುತ್ತದೆ. ಅಲ್ಲದೆ ಇದರ ಎಲೆಗಳು ಹೊಸ ತಳಿ ಎಲೆಗಳಷ್ಟು ಚೂಪಾಗಿಯು ಇರುವುದಿಲ್ಲ.

೮. ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಿದಾಗ್ಯೂ ಕಣ್ಣು ತಪ್ಪಿಸಿ ಅಲ್ಲಲ್ಲಿ ಬೆಳೆದ ಸಸ್ಯವನ್ನು ಹೂ ಬಿಟ್ಟ ನಂತರ ಅಂದರೆ ಹೂಗೊಂಚಲಿನ ಆಕಾರದಿಂದ ಗುರುತಿಸಿ ಕಾಳು ಬಲಿಯುವ ಮುನ್ನ ಕಿತ್ತು ದನಗಳಿಗೆ ಮೇವಾಗಿ ಉಪಯೋಗಿಸಬಹುದು.

೯. ಈ ಹಂತವನ್ನು ದಾಟಿ ಕಾಳುಕಡ್ಡಿ ಮಾಗಿದ ನಂತರ ಸಸ್ಯಗಳು ಕಣ್ಣಿಗೆ ಬಿದ್ದರೆ, ಅವನ್ನು ಕಿತ್ತು ಬೀಜ ಹರಡದಂತೆ ಎಚ್ಚರಿಕೆ ವಹಿಸಿ ಸುಟ್ಟು ಬಿಡಬೇಕು.

ಈ ಎಲ್ಲಾ ಕ್ರಮಗಳನ್ನು ಅನುಸರಿಸಲು ಅಲ್ಲಲ್ಲಿ ಕೃಷಿ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಕೊಡಬೇಕಾಗುತ್ತದೆ. ಅಲ್ಲದೆ ಈ ಕ್ರಮಗಳನ್ನು ಸಮಗ್ರವಾಗಿ ಪರಿಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಕೆಲವು ಮಾತ್ರ ವಹಿಸಿದ ಶ್ರಮವು ವ್ಯರ್ಥವಾಗಬಹುದು. ಇಂತಹ ಶ್ರಮಗಳನ್ನು ಕೈಗೊಳ್ಳುವಾಗ ಕಾನೂನಿನ ಸಹಾಯ ಅಂದರೆ ಈ ಕಳೆಯನ್ನು ಕೀಳದೆ ಬಿಟ್ಟು ತಾಕುಗಳನ್ನು ಗುರುತಿಸಿ ಅವರು ಕಳೆಯನ್ನು ಕಿತ್ತೇ ಕೀಳುವಂತೆ ಮಾಡುವ ವಿಧಾನವೇನಾದರೂ ಇದೆಯೇ ಎಂಬುದನ್ನು ಆಡಳಿತಾಧಿಕಾರಿಗಳು ನಿರ್ಧರಿಸಬಹುದಾದ ವಿಷಯ.