ನಮ್ಮ ದೇಶದ ಧಾನ್ಯಗಳಲ್ಲಿ ಬತ್ತ ಒಂದು ಮುಖ್ಯ ಬೆಳೆ. ಈ ಬೆಳೆಯಲ್ಲಿ ನಮ್ಮ ದೇಶದ ಸುಮಾರು ೪೨ ದಶಲಕ್ಷ ಹೆಕ್ಟೇರು ಪ್ರದೇಶದಲ್ಲಿ ಬೆಳೆಯುತ್ತಿದ್ದು, ವಾರ್ಷಿಕ ಅಕ್ಕಿಯ ಉತ್ಪಾದನೆ ೭೫ ದಶಲಕ್ಷ ಟನ್ನುಗಳಷ್ಟಿದೆ. ಅರವತ್ತರ ದಶಕದಿಂದ ಬತ್ತದ ಉತ್ಪಾದನೆಯಲ್ಲಿ ನಾವು ಪ್ರಗತಿಯನ್ನು ಸಾಧಿಸುತ್ತಾ ಬಂದಿದ್ದೇವೆ. ನೂತನ ಗಿಡ್ಡ ತಳಿಗಳ ಉಪಯೋಗ ಮತ್ತು ಸುಧಾರಿತ ಬೇಸಾಯ ಕ್ರಮಗಳ ಅಳವಡಿಕೆ ಈ ಪ್ರಗತಿಗೆ ಕಾರಣವೆನ್ನಬಹುದು. ಆದಾಗ್ಯೂ ಇತ್ತೀಚಿನ ೫-೬ ವರ್ಷಗಳಿಂದ ಬತ್ತದ ಎಕರೆವಾರು ಇಳುವರಿಯಲ್ಲಿ ಹೆಚ್ಚಳ ಕಂಡುಬರುತ್ತಿಲ್ಲ. ಬೆಳೆಯುತ್ತಿರುವ ಜನಸಂಖ್ಯೆಯ ಅಂದಾಜಿನ ಪ್ರಕಾರ ಈ ಶತಮಾನದ ಅಂತ್ಯದ ವೇಳೆಗೆ ಪ್ರತಿವರ್ಷ ೪-೫ ದಶ ಲಕ್ಷ ಟನ್ ಹೆಚ್ಚಿನ ಅಕ್ಕಿಯನ್ನು ಬೆಳೆಯುವ ಗುರುತರ ಹೊನೆ ನಮ್ಮ ಮೇಲಿದೆ. ಬತ್ತ ಬೆಳೆಯುವ ಒಟ್ಟು ಕ್ಷೇತ್ರವನ್ನು ಹೆಚ್ಚಿಸುವ ಸಾಧ್ಯತೆಗಳು ಕಡಿಮೆ ಇರುವ ಕಾರಣ, ಎಕರೆವಾರು ಇಳುವರಿಯನ್ನು ಹೆಚ್ಚಿಸುವುದೊಂದೇ ಸೂಕ್ತವಾದ ಮಾರ್ಗ.

ಸಸ್ಯ ಸಂವರ್ಧನಾಶಾಸ್ತ್ರ, ವಿಜ್ಞಾನಿಗಳು ಬತ್ತದ ಇಳುವರಿಯನ್ನು ಹೆಚ್ಚಿಸಲು ನಿರಂತರ ಪ್ರಯತ್ನಮಾಡುತ್ತಿದ್ದಾರೆ. ಬತ್ತದ ಇಳುವರಿಯನ್ನು ಹೆಚ್ಚಿಸಲು ನಮಗೆ ಲಭ್ಯವಿರುವ ಅನೇಕ ವಿಧಾನಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವು ಬಹಳ ಪ್ರಾಯೋಗಿಕ ಹಾಗೂ ತಕ್ಷಣ ಅಳವಡಿಸಬಹುದಾದ ವಿಧಾನವಾಗಿದೆ. ಈ ತಂತ್ರಜ್ಞಾನವನ್ನು ಬಳಸಿ ಚೀನ ದೇಶವು ೧೦ ವರ್ಷಗಳ ಹಿಂದೆಯೇ ಬತ್ತದ ಉತ್ಪಾದನೆಯಲ್ಲಿ ಮಹತ್ತರವಾದ ಸಾಧನೆ ಗಳಿಸಿದ ವಿಷಯವೇ ಈ ಮಾತಿಗೆ ನಿದರ್ಶನವೆನ್ನಬಹುದು. ಈಗ ಚೀನ ದೇಶದಲ್ಲಿ ಸುಮಾರು ೧೭ ದಶಲಕ್ಷ ಹೆಕ್ಟೇರ್ (ಬತ್ತ ಬೆಳೆಯುವ ಕ್ಷೇತ್ರದ ಅರ್ಧಭಾಗ) ಕ್ಷೇತ್ರದಲ್ಲಿ ಹೈಬ್ರಿಡ್ ಬತ್ತವನ್ನು ಬೆಳೆಯುತ್ತಿದ್ದು, ಆ ದೇಶದ ಸರಾಸರಿ ಇಳುವರಿ ಹೆಕ್ಟೇರಿಗೆ ೬೮ ಕ್ವಿಂಟಾಲ್ ಇರುತ್ತದೆ. ಇಲ್ಲಿಯವರೆಗೆ ಚೀನ ದೇಶವು ಹೈಬ್ರಿಡ್ ಬತ್ತವನ್ನು ಬೆಳೆಯುವ ಏಕಮೇವ ದೇಶವಾಗಿತ್ತು. ಇದೀಗ ನಮ್ಮ ದೇಶವು ತನ್ನದೇ ಆದ ತಂತ್ರಜ್ಞಾನವನ್ನು ವಿಕಸಿತಗೊಳಿಸಿ, ಹೈಬ್ರಿಡ್ ಬತ್ತವನ್ನು ಬೆಳೆಯುವ ಎರಡನೆಯ ದೇಶವೆಂಬ ಹೆಗ್ಗಳಿಗೆ ಪಡೆದಿದೆ.

ಹೈಬ್ರಿಡ್ ಬತ್ತದ ಪ್ರಾಮುಖ್ಯತೆಯನ್ನು ಗಮನಿಸಿ, ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐ.ಸಿ.ಆರ್.) ೧೯೮೯ ಹೈಬ್ರಿಡ್ ಬತ್ತದ ಪ್ರಯೋಜನವನ್ನು ನಿರೂಪಿಸಿತು. ಈ ಪ್ರಯೋಜನೆಯಡಿಯಲ್ಲಿ ದೇಶವು ಹಲವು ರಾಜ್ಯಗಳ ಹನ್ನೆರಡು ಕೇಂದ್ರಗಳಲ್ಲಿ ಹೈಬ್ರಿಡ್ ಬತ್ತದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಬೆಂಗಳೂರು ಕೃಷಿ ವಿ.ವಿ. ಪ್ರಾಂತೀಯ ಸಂಶೋಧನಾ ಕೇಂದ್ರ, ಮಂಡ್ಯ ಈ ಪ್ರಯೋಜನೆಯ ಒಂದು ಅಂಗವಾಗಿದ್ದು, ಇಲ್ಲಿ ನಡೆದ ಸಂಶೋಧನೆಯ ಫಲವಾಗಿ ವಿ.ವಿ. ಕರ್ನಾಟಕ ಹೈಬ್ರಿಡ್ ಬತ್ತ ೧ ನ್ನು ಬಿಡುಗಡೆ ಮಾಡಿದೆ.

ಹೈಬ್ರಿಡ್‌ಗಳನ್ನು ಸಂಕರಣ, ಶಕ್ತಿಮಾನ್ ಅಥವಾ ಮಿಶ್ರತಳಿ ಎಂದೂ ಕರೆಯುತ್ತಾರೆ. ಅನುವಂಶಿಕವಾಗಿ ಬೇರೆಯಾಗಿರುವ ಎರಡು ತಳಿಗಳನ್ನು ಸಂಕರಣ ಮಾಡಿದಾಗ ಹೈಬ್ರಿಡ್ ತಳಿ ಉತ್ಪತ್ತಿಯಾಗುತ್ತದೆ. ಇಂತಹ ಹೈಬ್ರಿಡ್ ತಳಿಗಳು ತಮ್ಮ ಅನುವಂಶಿಕ ತಳಿಗಳಿಗಿಂತ ಅಧಿಕ ಇಳುವರಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅನೇಕ ಬೆಳೆಗಳಲ್ಲಿ ಉದಾ: ಮೆಕ್ಕೆಜೋಳ, ಜೋಳ, ಸಜ್ಜೆ ಹತ್ತಿ, ಟೊಮ್ಯಾಟೊ ಇತ್ಯಾದಿ ಬೆಳೆಗಳಲ್ಲಿ ಶಕ್ತಿಮಾನ್ ತಳಿಗಳು ಲಭ್ಯವಿರುವುದು ರೈತರಿಗೆಲ್ಲಾ ಚಿರಪರಿಚಿತ ಇಂತಹ ಹೈಬ್ರಿಡ್ ತಳಿಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯಕವಾಗುವುದಲ್ಲದೇ ರೈತರ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆನ್ನಬಹುದು.

ಬತ್ತದಲ್ಲಿ ಒಂದು ಪರಾಗಸ್ಪರ್ಶದಿಂದ ಒಂದೇ ಒಂದು ಬೀಜ ಉತ್ತತ್ತಿಯಾಗುತ್ತದೆ. ಇದರಿಂದ ಬತ್ತದಲ್ಲಿ ಹೈಬ್ರಿಡ್ ತಳಿಗಳ ಉತ್ಪಾದನೆ ಅಸಾಧ್ಯವೆಂದು ನಂಬಲಾಗಿತ್ತು. ಆದರೆ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ (ಚೀನಾ, ಅಂತರರಾಷ್ಟ್ರೀಯ ಬತ್ತ ಸಂಶೋಧನಾ ಸಂಸ್ಥೆ, ಪಿಲಿಪೈನ್ಸ್, ಕೃಷಿ ವಿ.ವಿ. ಬೆಂಗಳೂರು) ಕಂಡು ಹಿಡಿದ ನಪುಂಸಕ ತಳಿಗಳ ಸಹಾಯದಿಂದ ತಳಿ ಸಂವರ್ಧನಾ ಶಾಸ್ತ್ರಜ್ಞರು ಅನೇಕ ಹೈಬ್ರಿಡ್ ಬತ್ತದ ತಳಿಗಳನ್ನು ತಯಾರಿಸುತ್ತಿದ್ದಾರೆ.

ಹೈಬ್ರಿಡ್ ಬತ್ತವನ್ನು ಮುಖ್ಯವಾಗಿ ಮೂರು ವಂಶಕ್ರಮದ ವಿಧಾನದಿಂದ ವೃದ್ಧಿಪಡಿಸಬಹುದಾಗಿದ್ದು, ಆ ವಿಧಾನದ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

ಮೂರು ವಂಶಕ್ರಮದ ವಿಧಾನ:

ಜಗತ್ತಿನಾದ್ಯಂತ ಪ್ರತಿಶತ ೯೫ರ ಮೇಲ್ಪಟ್ಟು ಹೈಬ್ರಿಡ್ ಬತ್ತದ ತಳಿಗಳು ಈ ವಿಧಾನದಿಂದಲೇ ತಯಾರಿಸಲ್ಪಡುತ್ತದೆ. ಹೈಬ್ರಿಡ್ ತಳಿ ಉತ್ಪಾದನೆಗೆ ಮೂರು ವಂಶಕ್ರಮಗಳು ಬೇಕಾದ್ದರಿಂದ ಇದಕ್ಕೆ ಮೂರು ವಂಶಕ್ರಮದ ವಿಧಾನ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಉಪಯೋಗಿಸಲ್ಪಡುವ ಮೂರು ವಂಶಕ್ರಮಗಳು ಈ ಕೆಳಗಿನಂತಿವೆ.

ಎ. (A) ವಂಶಕ್ರಮ ಅಥವಾ ನಪುಂಸಕ ವಂಶಕ್ರಮ

ಬಿ. (B) ವಂಶಕ್ರಮ ಅಥವಾ ನಪುಂಸಕತ್ವವನ್ನು ಉಳಿಸಿಕೊಡುವ ವಂಶಕ್ರಮ

ಆರ್. (R) ವಂಶಕ್ರಮ ಅಥವಾ ಪುರುಷತ್ವವನ್ನು ಮರಳಿ ಕೊಡುವ ವಂಶಕ್ರಮ

ಎ – ವಂಶಕ್ರಮ ಇಂತಹ ಬತ್ತದ ತಳಿಗಳ ಹೂವಿನ ಪುರುಷ ಭಾಗವು ನಿಷ್ಕ್ರೀಯವಾಗಿದ್ದು, ಇದು ಪರಕೀಯ ಪರಾಗ ಸ್ಪರ್ಶದಿಂದಲೇ ಫಲಿಸಬೇಕಾಗುತ್ತದೆ. ಈ ನಪುಂಸಕ ತಳಿಗಳ ಜೊತೆಗೆ ಬೇರೆ ಯಾವುದೇ ತಳಿಗಳನ್ನು ಸಂಕರಣ ಮಾಡಿದಾಗ ಕೆಲ ಸಂತಾನಗಳು ನಪುಂಸಕವಾಗಿಯೂ ಪರಿವರ್ತಿತಗೊಳ್ಳುತ್ತದೆ. ಇದು ಸಂಕರಣ ವಿಧಾನಕ್ಕೆ ನೆರವಾಗಬಲ್ಲ ಗುಣವಾಗಿದೆ. ಹೀಗೆ ತಳಿ ಸಂವರ್ಧನಾ ಶಾಸ್ತ್ರಜ್ಞರು ಈ ನಪುಂಸಕ ಬತ್ತದ ತಳಿಗಳ ಸಹಾಯದಿಂದ ತಮ್ಮ ಇಚ್ಛೆಯ ಮೇರೆಗೆ ಯಾವುದೇ ಒಂದು ತಳಿಯ ಪುರುಷತ್ವವನ್ನು ಕಳೆದುಕೊಳ್ಳುವಂತೆಯೂ ಮತ್ತು ಅದೇ ನಪುಂಸಕ ತಳಿಗಳನ್ನು ಬೇರೊಂದು ತಳಿಯ ಜೊತೆ ಸಂಕರಿಸಿದಾಗ ಸಂತಾನವು ಪೂರ್ಣ ಫಲಪ್ರದವಾಗುವಂತೆಯೂ ಮಾಡಬಹುದಾಗಿದೆ.

ಬಿ – ವಂಶಕ್ರಮ ಎ ಮತ್ತು ಬಿ ವಂಶಕ್ರಮಗಳು ಎಲ್ಲ ರೀತಿಯಿಂದಲೂ ಒಂದೆ ಆಗಿದ್ದು, ಕೇವಲ ಪುರುಷತ್ವದ ದೃಷ್ಟಿಯಿಂದ ಮಾತ್ರ ಭಿನ್ನವಾಗಿರುತ್ತದೆ. ಎ ವಂಶಕ್ರಮವು ನಪುಂಸಕವಾಗಿದ್ದರೆ, ಬಿ ವಂಶಕ್ರಮವು ಸಾಮಾನ್ಯ ತಳಿಗಳ ತರಹ ಪುರುಷತ್ವವನ್ನು ಹೊಂದಿರುತ್ತದೆ. ನಪುಂಸಕ ತಳಿಯ ಬೀಜವನ್ನು ಉತ್ಪಾದಿಸಲು ನಾವು ಎ ಮತ್ತು ಬಿ ವಂಶಕ್ರಮಗಳ ನಡುವೆ ಸಂಕರಣ ನಡೆಸಬೇಕು. ಈ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾದರೆ ಎ ಮತ್ತು ಬಿ ವಂಶಕ್ರಮಗಳ ತಳಿಗಳನ್ನು ನಿರ್ದಿಷ್ಟ ಸಾಲುಗಳ ಪ್ರಮಾಣದಲ್ಲಿ ನೆಡಬೇಕಾಗುತ್ತದೆ.

ಆರ್ – ವಂಶಕ್ರಮ ನಾವು ಬೆಳೆಯುವ ಅನೇಕ ಸಾಮಾನ್ಯ ಬತ್ತದ ತಳಿಗಳನ್ನು ನಪುಂಸಕ ತಳಿಗಳೊಂದಿಗೆ ಸಂಕರಿಸಿದಾಗ ಕೆಲವು ಅದರ ಪುರುಷತ್ವವನ್ನು ಸಂಪೂರ್ಣವಾಗಿ ಮರಳಿ ಪಡೆಯುವಲ್ಲಿ ಶಕ್ಯವಾಗುತ್ತದೆ. ಅಂತಹವುಗಳನ್ನು ಆರ್ ವಂಶಕ್ರಮಗಳನ್ನು ಕರೆಯುತ್ತಾರೆ. ಸಾಧಾರಣವಾಗಿ ನಾವು ಸಂಕರಿಸುವ ಸಾಮಾನ್ಯ ತಳಿಗಳಲ್ಲಿ ಪ್ರತಿಶತ ೮-೧೦ರಷ್ಟು ಆರ್ ವಂಶಕ್ರಮದ ಗುಣ ಹೊಂದಿರುತ್ತದೆ. ಉತ್ತಮವಾದ ಆರ್ ವಂಶಕ್ರಮಗಳನ್ನು ಕಂಡುಹಿಡಿಯಲು ನಾವು ಸಾವಿರಾರು.

ಹೈಬ್ರಿಡ್ ಬತ್ತದ ಮೌಲೀಕರಣ ಮತ್ತು ಆಯ್ಕೆ

ಹೈಬ್ರಿಡ್ ಎಂದಾಕ್ಷಣ ಎಲ್ಲ ಹೈಬ್ರಿಡ್‌ಗಳು ಯಾವಾಗಲೂ ಶ್ರೇಷ್ಟವಾಗಿರುವುದಿಲ್ಲ. ಆದ್ದರಿಂದ ಉತ್ತಮ ಹೈಬ್ರಿಡ್‌ಗಳ ಆಯ್ಕೆಗೆ ಮೌಲೀಕರಣದ ಅವಶ್ಯಕತೆಯಿದೆ. ಮೊದಲು ಉತ್ತಮವಾದ ನಪುಂಸಕ ತಳಿಗಳ ಜೊತೆ ಅನೇಕ ಸಾಮಾನ್ಯ ತಳಿಗಳನ್ನು ಸಂಕರಣ ಮಾಡಬೇಕು. ಹೀಗೆ ತಯಾರಾದ ಎಲ್ಲ ಹೈಬ್ರಿಡ್ ತಳಿಗಳ ಸಂತಾನವನ್ನು ಕೂಲಂಕಷವಾಗಿ ಅಭ್ಯಸಿಸಬೇಕು. ಅವುಗಳಲ್ಲಿ ಯಾವ ಪೀಳಿಗೆಗಳು ಸಾಮಾನ್ಯ ತಳಿಗಳಂತೆ ಪುರುಷತ್ವವನ್ನು ಹೊಂದಿರುತ್ತವೆಯೇ ಅವುಗಳನ್ನು ತಂದೆ ತಳಿ ಅಥವಾ ಆರ್ ವಂಶಕ್ರಮ ಎಂದು ಪರಿಗಣಿಸಬೇಕು. ಹೀಗೆ ಕಂಡು ಹಿಡಿದ ಅನೇಕ ಆರ್ ವಂಶಕ್ರಮಗಳನ್ನು ಮತ್ತೆ ನಪುಂಸಕ ತಳಿಗಳ ಜೊತೆ ಸಂಕರಿಸಿ ಆ ಹೈಬ್ರಿಡ್ ತಳಿಗಳನ್ನು ಆಯಾ ಕ್ಷೇತ್ರದ ಶ್ರೇಷ್ಠ ತಳಿಗಳ ಜೊತೆ ತುಲನೆ ಮಾಡಬೇಕು. ಹೀಗೆ ಕಂಡುಹಿಡಿದ ಯಾವ ಹೈಬ್ರಿಡ್ ಒಂದು ಟನ್ ಹೆಚ್ಚಿನ ಇಳುವರಿ ಕೊಡುತ್ತದೆಯೋ ಅವುಗಳನ್ನು ರೈತರ ಹೊಲದಲ್ಲಿ ಬೆಳೆದು ಮತ್ತೆ ಮೌಲೀಕರಿಸಬೇಕು. ಇಂತಹ ಪ್ರಾತ್ಯಕ್ಷಿಕೆಗಳಲ್ಲಿ ಶ್ರೇಷ್ಟವಾಗಿ ಕಂಡುಬಂದ ಹೈಬ್ರಿಡ್ ತಳಿಗಳನ್ನು ಕೃಷಿಗಾಗಿ ಬಿಡುಗಡೆ ಮಾಡಲಾಗುತ್ತದೆ.

ಹೈಬ್ರಿಡ್ ಬತ್ತದ ಪ್ರಾಯೋಜನೆ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ ೪೦೦ಕ್ಕಿಂತ ಹೆಚ್ಚು ಹೈಬ್ರಿಡ್ ತಳಿಗಳನ್ನು ದೇಶದ ೧೨ ಸಂಶೋಧನಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಮೌಲೀಕರಣ ಮಾಡಲಾಗಿದೆ. ಇದರಿಂದಾಗಿ ಆಯಾ ಕ್ಷೇತ್ರಕ್ಕೆ ಸೂಕ್ತವಾಗಿರುವ ಹೆಚ್ಚು ಇಳುವರಿ ಕೊಡುವ ಹೈಬ್ರಿಡ್ ಬತ್ತದ ತಳಿಗಳನ್ನು ಕಂಡುಹಿಡಿಯಲಾಗಿದೆ.

10_262_ML-KUH 

ಹೈಬ್ರಿಡ್ ಬತ್ತದ ಕೃಷಿ ಸಾಮಾನ್ಯವಾಗಿ ಹೆಚ್ಚು ಇಳುವರಿ ಕೊಡುವ ತಳಿಗಳ ಕೃಷಿಗಿಂತ ಬಹಳ ಭಿನ್ನವಾಗಿಲ್ಲ. ಆದರೂ ಹೈಬ್ರಿಡ್ ಬತ್ತದ ಕೃಷಿಯಿಂದ ಹೆಚ್ಚಿನ ಲಾಭ ಪಡೆಯಲು ಕೆಲವು ವಿಶೇಷ ವಿಧಾನಗಳನ್ನು ಅನುಸರಿಸುವುದು ಸೂಕ್ತವೆನಿಸುತ್ತದೆ ಅವು ಕೆಳಗಿನಂತಿವೆ.

ಹೈಬ್ರಿಡ್ ಬತ್ತವನ್ನು ಮುಂಗಾರು ಮತ್ತು ಹಿಂಗಾರು ಕಾಲದಲ್ಲಿ ಬೆಳೆಯಬಹುದು. ಆದಾಗ್ಯೂ ಮುಂಗಾರು ಸಮಯದಲ್ಲಿ ಹೈಬ್ರಿಡ್ ತಳಿಗಳು ಹೆಚ್ಚು ಇಳುವರಿ ಕೊಡುವ ತಳಿಗಳಿಗಿಂತ ಅಧಿಕ ಇಳುವರಿ ಕೊಡುತ್ತವೆ ಎಂದು ಕಂಡು ಬಂದಿದೆ.

ಪ್ರತಿ ಹೆಕ್ಟೇರಿಗೆ ಬೇಕಾಗುವ ಬೀಜ ಕೇವಲ ೨೦-೨೫ ಕೆಜಿ ಹೈಬ್ರಿಡ್ ಬತ್ತದ ಕೃಷಿಗೆ ಸಸಿ ಮಡಿಗಳನ್ನು ವಿಶೇಷ ಕಾಳಜಿಯಿಂದ ತಯಾರಿಸಬೇಕು. ಇದಕ್ಕೆ ಕೆಸರು ಮಡಿಗಳೇ ಸೂಕ್ತ. ಉತ್ತಮವಾಗಿ ತಯಾರಿಸಿ ಸಂಪೂರ್ಣ ತಳಿಗಳನ್ನು ನಪುಂಸಕ ತಳಿಯ ಜೊತೆ ಸಂಕರಿಸಿ, ಅವುಗಳ ಸಂತಾನವನ್ನು ಕೂಲಂಕಷವಾಗಿ ಅಭ್ಯಸಿಸಬೇಕಾಗುತ್ತದೆ.

ಸಮತಲ ಮಾಡಿದ ಮಡಿಗಳಲ್ಲಿ ಪ್ರತಿ ಚದರ ಮೀಟರ್ ಮಡಿಯಲ್ಲಿ ೨೫-೩೦ ಗ್ರಾಂ ಮೊಳಕೆ ಮಾಡದ ಬೀಜಗಳನ್ನು ತೆಳುವಾಗಿ ಚೆಲ್ಲಿಸಬೇಕು. ಸಸಿ ಮಡಿಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ಕಾಳಜಿ ವಹಿಸಬೇಕು. ಈ ರೀತಿ ತೆಳು ಮಡಿಯಿಂದ ಸಸಿಗಳು ಸದೃಡವಾಗಿ ಬೆಳೆದು ನಾಟಿ ಮಾಡುವ ಸಮಯಕ್ಕೆ ೩-೪ ತೆಂಡೆಗಳನ್ನು ಹೊಂದಿರುತ್ತದೆ.

ನಾಟಿ ಮಾಡಲು ಪ್ರದೇಶದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ (ಹೆಕ್ಟೇರ್ ಗೆ ೨ ಟನ್) ಹಾಕಿ ಹದವಾಗಿ ತಯಾರಿಸಿ.

ನಾಟಿ ಮಾಡಲು ೨೦-೨೫ ದಿವಸಗಳ ಸದೃಢವಾದ ಸಸಿಗಳನ್ನು ಬಳಸಿ ಒಂದು ಗುಡ್ಡೆಗೆ ಒಂದೇ ಸಸಿಯನ್ನು ನಾಟಿ ಮಾಡಿದರೆ ಸಾಕು. ನಾಟಿ ಮಾಡಲು ೨೦ ರಿಂದ ೧೫ ಸೆ.ಮೀ. ಅಥವಾ ೧೫ ರಿಂದ ೧೫ ಸೆ.ಮೀ. ಅಂತರವನ್ನಿಡಬಹುದು. ಸಾಲಿನಲ್ಲಿ ನಾಟಿ ಮಾಡಲು ಸಾಧ್ಯವಾಗದಿದ್ದರೆ ಪ್ರತಿ ಚದರ ಮೀಟರ್ ಪ್ರದೇಶದಲ್ಲಿ ೪೦ ರಿಂದ ೫೦ ಗುಡ್ಡೆಗಳು ಬರುವ ಹಾಗೆ ನಾಟಿ ಮಾಡಬೇಕು.

ಹೈಬ್ರಿಡ್ ಬತ್ತದ ತಂತ್ರಜ್ಞಾನದಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳಷ್ಟೇ ರಾಸಾಯನಿಕ ಗೊಬ್ಬರದ ಅವಶ್ಯಕತೆಯಿದೆ. ಅದರಲ್ಲೂ ೧೦ ಪ್ರತಿಶತ ಹೆಚ್ಚಿನ ಸಾರಜನಕ ಕೊಡುವುದರಿಂದ ಅಧಿಕ ಲಾಭವಿದೆಯೆಂದು ಕಂಡುಬಂದಿದೆ. ಈ ಹೆಚ್ಚಿನ ಸಾರಜನಕವನ್ನು ಹೂ ಸಮಯದಲ್ಲಿ ಒದಗಿಸುವುದು ಉತ್ತಮ. ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.

ಉತ್ತಮ ಹೈಬ್ರಿಡ್ ತಳಿಯನ್ನು ಆರಿಸಿ, ಮೇಲೆ ವಿವರಿಸಿದ ವಿಧಾನಗಳನ್ನು ಅನುಸರಿಸಿದರೆ ಹೆಚ್ಚು ಇಳುವರಿ ಕೊಡುವ ತಳಿಗಿಂತ ಹೆಕ್ಟೇರಿಗೆ ಒಂದು ಟನ್ನು ಅಧಿಕ ಇಳುವರಿ ಪಡೆಯಲು ಸಾಧ್ಯ.

ಕಾಳಿನ ಗುಣ: ಆಹಾರ ಧಾನ್ಯಗಳಲ್ಲಿ ಕಾಳಿನ ಗುಣಕ್ಕೆ ಬಹಳ ಮಹತ್ವವಿದೆ. ಹೀಗಾಗಿ ಹೈಬ್ರಿಡ್ ಬತ್ತದ ಕಾಳಿನ ಗುಣ ಹೇಗೋ ಎಂಬ ಪ್ರಶ್ನೆ ಬರುವುದುಂಟು ನೂರಾರು ಹೈಬ್ರಿಡ್ ತಳಿಗಳ ಕಾಳಿನ ಗುಣವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಸಾಮಾನ್ಯ ತಳಿಗಳಲ್ಲಿ ಕಂಡು ಬರುವ ಕಾಳಿನ ಗುಣಗಳೇ ಹೈಬ್ರಿಡ್ ತಳಿಗಳಲ್ಲಿ ಕಂಡು ಬಂದಿದೆ. ಮೇಲಾಗಿ ಉತ್ತಮ ಕಾಳಿನ ಗುಣದ ತಳಿಗಳಾದ `ಮಸೂರ’, `ಬಾಸುಮತಿ’ ತರಹದ ಹೈಬ್ರಿಡ್ ತಳಿಗಳನ್ನು ತಯಾರಿಸುವುದು ಕಷ್ಟ ಸಾಧ್ಯವಲ್ಲ. ಈ ಕಾಳಿನ ಗುಣ ಸುಧಾರಿಸುವಲ್ಲಿ ತಳಿ ಶಾಸ್ತ್ರಜ್ಞರು ಈಗ ಕಾರ್ಯನಿರತರಾಗಿದ್ದಾರೆ.