ಕರ್ನಾಟಕ ರಾಜ್ಯದಲ್ಲಿ ೧೧.೬ ಲಕ್ಷ ಹೆಕ್ಟೇರಿನಲ್ಲಿ ಬತ್ತ ಬೆಳೆಯಲ್ಪಡುತ್ತದೆ. ಇದರಲ್ಲಿ ಸುಮಾರು ೨.೫ ಲಕ್ಷ ಹೆಕ್ಟೇರುಗಳನ್ನು ಬೇಸಿಗೆ ಬೆಳೆ ಎನ್ನಬಹುದು. ವಾರ್ಷಿಕ ಸರಾಸರಿ ಶೇ. ೨೩.೯ ರಷ್ಟು ಪ್ರದೇಶದಲ್ಲಿ ಅಧಿಕ ಇಳುವರಿ ತಳಿಗಳನ್ನು ಬೆಳೆಸುತ್ತಾರೆ. ಬೇಸಿಗೆಯಲ್ಲಿ ಶೇ. ೬೦ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಅಧಿಕ ಇಳುವರಿ ತಳಿಗಳನ್ನು ಬೆಳೆಯುತ್ತಿರುವುದು ಗಮನಾರ್ಹ. ಕಳೆದ (೧೯೭೪) ಬೇಸಿಗೆಯಲ್ಲಿ ಕೋಲಾರ, ದಕ್ಷಿಣ ಕನ್ನಡ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ರಾಯಚೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಅಧಿಕ ಇಳುವರಿ ತಳಿಗಳ ಪ್ರಮಾಣ ಶೇ. ೫೦ಕ್ಕೂ ಹೆಚ್ಚು ಪ್ರದೇಶದಲ್ಲಿತ್ತು. ಆದರೆ ಮಲೆನಾಡು ಪ್ರದೇಶದಲ್ಲಿ ಕೊಡಗು, ಚಿಕ್ಕಮಗಳೂರು ಮತ್ತು ಮಲೆನಾಡಿಗೆ ಸೇರ್ಪಡೆಯಾದ ಉತ್ತರ ಕನ್ನಡ, ಶಿವಮೊಗ್ಗ, ಹಾಸನ ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಅಧಿಕ ಇಳುವರಿ ತಳಿಗಳ ಪ್ರಮಾಣ ಬಹಳ ಕಡಿಮೆ ಎನ್ನಬಹುದು. ಇದಕ್ಕೆ ಅನೇಕ ಕಾರಣಗಳಿವೆ.

ಬೇಸಿಗೆಯ ಸಮಸ್ಯೆಗಳು: – ರಾಜ್ಯದಲ್ಲಿ ಈಗ ಪ್ರಚಾರದಲ್ಲಿರುವ ಯಾವ ಅಧಿಕ ಇಳುವರಿ ತಳಿಗಳೂ ಡಿಸೆಂಬರ್ ಜನವರಿಯಲ್ಲಿ ಇರಬಹುದಾದ ಕಡಿಮೆ ಉಷ್ಣಾಂಶ ಮತ್ತು ಚಳಿಯಲ್ಲಿ ಸಾಧಾರಣ ರೀತಿಯಲ್ಲಿ ಬೆಳೆಯುವ ಗುಣಗಳನ್ನು ಹೊಂದಿಲ್ಲ. ಈ ತಳಿಗಳು ಬೇಸಿಗೆಯಲ್ಲಿ ೧೪೦ ದಿವಸಗಳಿಗಿಂತ ಮುಂಚೆ ಕಟಾವಿಗೆ ಬರುವುದಿಲ್ಲ. ಆದ್ದರಿಂದ ಇವುಗಳ ಇಳುವರಿ ತೃಪ್ತಿಕರವಾಗಿಲ್ಲ. ಕೆಲವು ವೇಳೆ ತೃಪ್ತಿಕರವಾದ ಇಳುವರಿ ಬಂದರೂ, ಮೇ ತಿಂಗಳಿನ ನಂತರ ಕೊಯ್ಲಿಗೆ ಬರುವುದರಿಂದ ಬೆಳೆಯು ಮಳೆಗೆ ಸಿಕ್ಕಿ ನಷ್ಟವಾಗುವ ಸಂಭವ ಉಂಟು. ಮಲೆನಾಡಿಗೆ ಯೋಗ್ಯವೆನಿಸುವ ತಳಿಯ ಸೃಷ್ಟಿಗಾಗಿ ಕೃಷಿ ವಿಶ್ವವಿದ್ಯಾಲಯ ಹಾಕಿದ ಒಂದು ಯೋಜನೆಯ ಸಂಶೋಧನಾ ಫಲಿತಾಂಶವೇ ಎಂ.ಆರ್. ೨೭೨ ಬತ್ತದ ತಳಿಯ ಉದ್ಭವ.

ಈ ತಳಿಯ ಗುಣಗಳು: – ಎಂ.ಆರ್. ೨೭೨ ತಳಿಯನ್ನು ಜಯ ಮತ್ತು ಹಾಲುಬ್ಬಲು (ಎಸ್. ೩೧೭) ಗಳಿಗಳ ಸಂಕರಣದಿಂದ ಪಡೆಯಲಾಗಿದೆ. ಇದು ಅತಿ ಗಿಡ್ಡ ಸಸ್ಯ ಸ್ವರೂಪವನ್ನು ಹೊಂದಿದ್ದು, ಕರಾವಳಿಯಲ್ಲಿ ೯೦ ದಿನಗಳಲ್ಲಿಯೂ ಮೈದಾನ ಪ್ರದೇಶದಲ್ಲಿ ೧೦೫ ದಿನಗಳಲ್ಲಿಯೂ ಮತ್ತು ಮಲೆನಾಡಿನಲ್ಲಿ ೧೨೦-೧೩೦ ದಿನಗಳಲ್ಲಿಯೂ ಕಟಾವಿಗೆ ಬರುತ್ತದೆ. ಇದು ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಒಟ್ಟು ಹಾಕಿ ನಾಟಿ ಮಾಡಿದಾಗ ಹುಲುಸಾಗಿ ಬೆಳೆದು ಸುಮಾರು ೧೮-೨೦ ಕ್ವಿಂಟಾಲು ಇಳುವರಿ ನೀಡಬಲ್ಲದು. ಇದರ ಬೆಳವಣಿಗೆ ಚಳಿಗಾಗಲಿ ಅಥವಾ ಕಡಿಮೆ ಉಷ್ಣಾಂಶದಿಂದಾಗಲಿ ಕುಗ್ಗುವುದಿಲ್ಲ. ಈ ಗುಣವನ್ನು ಗಾಲುಬ್ಬಲು ತಳಿಯಿಂದ ಪಡೆಯಲಾಗಿದೆ. ಈ ತಳಿಯು ಡಿಸೆಂಬರ್ ಜನವರಿಯಲ್ಲಿ ಒಟ್ಟು ಹಾಕಿದರೆ, ಮೇ ಮಧ್ಯದಲ್ಲಿ ಅಥವಾ ಮುಂಚಿತವಾಗಿ ಕೊಯ್ಲಿಗೆ ಬರುತ್ತದೆ. ಈಗಾಗಲೇ ಬೆಳೆಯುತ್ತಿರುವ ಮಧು ತಳಿಗಳಿಗಿಂತ ಈ ತಳಿಯು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡಬಲ್ಲದೆಂಬುದನ್ನು ಮಡಿಕೇರಿ ಸಂಶೋಧನಾ ಕ್ಷೇತ್ರದ ಮತ್ತು ಕೆಲವು ರೈತರ ತಾಲ್ಲೂಕುಗಳಲ್ಲಿ ನಡೆಸಿದ ಪರೀಕ್ಷಾ ಫಲಿತಾಂಶಗಳಿಂದ ತಿಳಿಯಲಾಗಿದೆ. ಐ.ಆರ. ೮, ಜಯ ಮತ್ತು ಟಿ (ಎನ್)೧ ತಳಿಗಳು ಕಟಾವಿನ ಕಾಲದಲ್ಲಿ ಮಳೆಗೆ ಸಿಕ್ಕಿ ಹಾಳಾಗುವುದನ್ನು ತಪ್ಪಿಸಲು ಕಡಿಮೆ ಅವಧಿಯಲ್ಲಿ ಬರುವ ಈ ತಳಿ ಬೆಳೆಯುವುದರಿಂದ ಈ ಸಮಸ್ಯೆಯನ್ನು ಬಗೆಹರಿಸುವುದು. ಮಲೆನಾಡಿನ ಬೇಸಿಗೆ ಬೆಳೆ ಸಮಸ್ಯೆಗೆ ಈ ತಳಿಯು ಸಂಪೂರ್ಣ ಪರಿಹಾರವಲ್ಲದಿದ್ದರೂ, ನಿರ್ದಿಷ್ಟ ಪ್ರಮಾಣ ಮತ್ತು ಅವಧಿಯಲ್ಲಿ ಕಡಿಮೆ ವೆಚ್ಚದಿಂದ ತೃಪ್ತಿಕರವಾದ ಇಳುವರಿ ಪಡೆಯಲು ಈ ತಳಿಯೂ ನೆರವಾಗಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ. ಅತಿ ಹೆಚ್ಚು ಚಳಿ ಪ್ರದೇಶದಲ್ಲಿ ಮಡಿಕೇರಿಯಲ್ಲಿ ಇದನ್ನು ಜನವರಿ ೨ರಲ್ಲಿ ಬಿತ್ತನೆ ಮಾಡಿ, ಫೆಬ್ರವರಿ ೫ ರಲ್ಲಿ ನಾಟಿ ಮಾಡಿದಾಗ ಮೇ ೧೮ಕ್ಕೆ ಕಟಾವಿಗೆ ಸಿದ್ಧವಾಗಿತ್ತೆಂಬುದು ಇಲ್ಲಿ ನಮೂದಿಸಬೇಕಾದ ಸಂಗತಿ. ಕಡಿಮೆ ಚಳಿ ಇರುವ ಪ್ರದೇಶದಲ್ಲಿ ಇನ್ನೂ ಬೇಗ ಬರುತ್ತದೆ ಎಂಬುದು ಪ್ರತಿಯೊಬ್ಬರೂ ಗ್ರಹಿಸಬಹುದಾದ ವಿಷಯ. ಇದರ ಕಾಳು ಹಾಲುಬ್ಬಲಿನ ಹಾಗೆ ಮಧ್ಯಮ ದರ್ಜೆಯಾಗಿದ್ದು, ಅನ್ನ ಮಾಡಿದಾಗ ಉದುರಾಗಿರುತ್ತದೆ. ಇಡ್ಲಿ ಮಾಡುವುದಕ್ಕೆ ಅತ್ಯುತ್ತಮವೆಂಬುದು ಬೆಂಗಳೂರು ಹೋಮ್ ಎಕನಾಮಿಕ್ಸ್ ಅವರ ಪ್ರಯೋಗದ ವರದಿ. ಅಲ್ಲದೆ ಸ್ವಲ್ಪ ಮಟ್ಟಿಗೆ ಕ್ಷಾರಭಾಧಿ ಮಣ್ಣಿನಲ್ಲಿಯೂ ಇದು ತೃಪ್ತಿಕರವಾದ ಇಳುವರಿ ಕೊಡಬಲ್ಲದೆಂದು ತಿಳಿದುಬಂದಿದೆ.

ಬೇಸಾಯ ಕ್ರಮ:

ಉತ್ತಮವಾದ ೩೦ ಕೆಜಿ ಬೀಜವು ಒಂದು ಎಕರೆ ನಾಟಿ ಮಾಡಲು ಬೇಕಾಗುತ್ತದೆ. ಸುಮಾರು ಒಂದು ತಿಂಗಳಿನ ಪೈರನ್ನು ಗುಣಿಗೆ ೨-೩ ಪೈರಿನಂತೆ ೬ ಅಂಗುಲ ಅಂತರದ ಸಾಲುಗಳಲ್ಲಿ ಗುಣಿಯಿಂದ ಗುಣಿಗೆ ೪ ಅಂಗುಲ ಅಂತರದಲ್ಲಿ ನಾಟಿ ಮಾಡಬೇಕು. ಅಂದರೆ, ಒಂದು ಚದರ ಗಜಕ್ಕೆ ೨೫ ಗುಣಿ ಬರುವ ಹಾಗೆ ನಾಟಿ ಮಾಡುವುದು ಬಹಳ ಮುಖ್ಯವಾದ ಅಂಶ. ಇದು ಅಲ್ಪಾವಧಿ ತಳಿಯಾದ್ದರಿಂದ ತೆಂಡೆ ಹೊಡೆಯುವ ಶಕ್ತಿ ಕಡಿಮೆ. ಆದ್ದರಿಂದ ಒತ್ತಾಗೊ ನಾಟಿ ಮಾಡುವುದು ಬಹಳ ಮುಖ್ಯವಾದ ಅಂಶ. ಇದಕ್ಕೆ ಬೇಕಾಗುವ ಗೊಬ್ಬರ ಎಕರೆಗೆ ೩೦ ಕೆಜಿ ಸಾರಜನಕ, ೨೦ ಕೆಜಿ ರಂಜಕ ಮತ್ತು ೨೦ ಕೆಜಿ ಪೊಟ್ಯಾಷ್. ಪೊಟ್ಯಾಷ್ ಮತ್ತು ರಂಜಕ ಗೊಬ್ಬರಗಳನ್ನು ಸಂಪುರ್ಣವಾಗಿಯೂ ಮತ್ತು ಮೂರನೇ ಒಂದು ಭಾಗ ಸಾರಜನಕವನ್ನು ನಾಟಿ ಮಾಡುವಾಗಲೂ ಕೊಡಬೇಕು. ಇನ್ನೊಂದು ಮೂರನೇ ಒಂದು ಭಾಗ ಸಾರಜನಕವನ್ನು ನಾಟಿ ಮಾಡಿದ ೨೦ನೇ ದಿವಸ ಮೇಲು ಗೊಬ್ಬರವಾಗಿ ಕೊಡಬೇಕು. ಉಳಿದ ಮೂರನೇ ಒಂದು ಭಾಗ ಸಾರಜನಕವನ್ನು ಮೊಗ್ಗು ಕಚ್ಚುವಾಗ (panicle initiation) ಅಂದರೆ ನಾಟಿಯಾದ ೬ ಅಥವಾ ೭ನೇ ವಾರದಲ್ಲಿ ಕೊಡಬೇಕು. ಸಾರಜನಕದ ಪ್ರಮಾಣ ಮತ್ತು ಮೇಲು ಗೊಬ್ಬರವನ್ನು ಒದಗಿಸುವ ಸಮಯ ಹವಾಗುಣಕ್ಕೆ ತಕ್ಕಂತೆ ಒಂದು ವಾರ ಹಿಂದೆ ಅಥವಾ ಮುಂದೆ ಆಗಬಹುದು. ರಸಗೊಬ್ಬರಗಳನ್ನು ನಿರ್ಧರಿಸುವಾಗ ಮಣ್ಣಿನ ಪರೀಕ್ಷೆಯೂ ಅವಶ್ಯಕ. ಸಾಮಾನ್ಯವಾಗಿ ರೋಗಗಳಿಗಾಗಿ ಯಾವ ಸಿಂಪರಣೆಯೂ ಬೇಕಾಗುವುದಿಲ್ಲ. ಆದರೆ ಸಸಿ ಮಡಿಯಲ್ಲಿ ಒಮ್ಮೆ ನಾಟಿಯಾದ ಎರಡನೇ ವಾರ ಇನ್ನೊಮ್ಮೆ ನಾಟಿಯಾದ ೬-೭ನೇ ವಾರ ಮತ್ತೊಮ್ಮೆ ಕೀಟನಾಶಕವನ್ನು ಸಿಂಪರಣೆಯಾಗಲಿ ಅಥವಾ ಹರಳು ರೂಪದಲ್ಲಾಗಲೀ ಉಪಯೋಗಿಸಬಹುದು. ಈ ತಳಿಯ ಕಾಳು ತೆನೆಯಿಂದ ಉದುರುವ ಗುಣ ಹೊಂದಿರುವುದರಿಂದ ಸಾಂಪ್ರದಾಯಿಕವಾಗಿ ಕೊಯ್ಲು ಮಾಡುವುದಕ್ಕಿಂತ ಒಂದು ವಾರ ಮುಂಚಿತವಾಗಿಯೇ ಕಟಾವು ಮಾಡುವುದು ಅನಿವಾರ್ಯ.

ಈ ತಳಿಯು ಹೊಸದಾಗಿದ್ದರಿಂದ ಇದನ್ನು ಬೆಳೆಯಲು ಇಚ್ಛಿಸುವವರು ಪ್ರಾಯೋಗಿಕವಾಗಿ ಒಂದು ಅಥವಾ ಎರಡು ಎಕರೆಗಳಲ್ಲಿ ಬೆಳೆದು ಒಳ್ಳೆಯದು ಎಂದು ಖಚಿತವಾದರೆ ಮುಂದೆ ಹೆಚ್ಚು ಪ್ರಮಾಣದಲ್ಲಿ ಬೆಳೆಯಬಹುದು. ಈ ತಳಿಯು ಮಧು ತಳಿಗಿಂತಲೂ ಸುಮಾರು ೧೦ ದಿವಸ ಮುಂಚಿತವಾಗಿ ಕಟಾವಿಗೆ ಬರುವುದರಿಂದ ಮಲೆನಾಡಲ್ಲದೆ ನೀರಿನ ಅಭಾವವಿರುವ ಇತರ ಪ್ರದೇಶಗಳಲ್ಲಿಯೂ ಇದನ್ನು ಬೆಳೆಯಬಹುದು. ಅಲ್ಲದೆ ಚಳಿಗಾಲದಲ್ಲಿ ಬಿತ್ತನೆ ಮಾಡುವವರು ಸಹ (ಬೇಗ ಕಟಾವಿಗೆ ಬರುವಂಥ ತಳಿಯನ್ನು ಬಿತ್ತುವವರು) ಇದನ್ನು ಬೆಳೆಯಬಹುದು. ಇದಕ್ಕೆ ಜಯ, ಐ.ಆರ್. ೮ ಮತ್ತು ಸೋನಾ ತಳಿಗೆ ಕೊಡುವ ರಸಗೊಬ್ಬರಗಳ ಪ್ರಮಾಣದ ಮೂರನೇ ಎರಡು ಭಾಗ ರಸಗೊಬ್ಬರವನ್ನೇ ಕೊಟ್ಟರೆ ಸಾಕು. ಅತಿ ಮುಖ್ಯವಾದ ವಿಷಯವೆಂದರೆ ಇದರಿಂದ ದೊರೆಯುವ ಹುಲ್ಲು ಇತರ ಅಧಿಕ ಇಳುವರಿ ಗಾತ್ರದಲ್ಲಿ ಹೆಚ್ಚಿನ ಪ್ರಮಾಣದ್ದಾಗಿರುತ್ತದೆ. ಹೊಸದಾಗಿ ಕೊಯ್ಲು ಮಾಡಿದ ಒಮ್ಮೆ ಒಣಗಿಸಿ ತಕ್ಷಣವೇ ಮುಂದಿನ ಬೆಳೆಗೆ ಬಿತ್ತನೆಗಾಗಿ ಉಪಯೋಗಿಸಬಹುದು.