ಕೃಷಿ ಮತ್ತು ಇನ್ನಿತರ ಸಾಹಿತ್ಯಗಳಲ್ಲಿ ತೆಂಗಿನ ಮರವನ್ನು ಕಲ್ಪವೃಕ್ಷಕ್ಕೆ ಹೋಲಿಸಿರುವುದನ್ನು ತಿಳಿದಿದ್ದೇವೆ. ಜಗತ್ತಿನ ಇತ್ತೀಚಿನ ಕೈಗಾರಿಕಾ ಪ್ರಗತಿಗೆ ಮೂಲವಸ್ತುಗಳನ್ನಾರಿಸುವ ಪ್ರಯತ್ನದಲ್ಲಿ ಬತ್ತದ ಸಸ್ಯವೂ ಕಲ್ಪವೃಕ್ಷದಂತೆ ಬಹುವಿಧ ಪ್ರಯೋಜನಕಾರಿ ಎಂಬುದು ಮನದಟ್ಟಾಗಿದೆ. ದಪ್ಪದ ಕಾಳು ಮಾನವ ಕೋಟೆಯ ಅತ್ಯಂತ ಮುಖ್ಯವಾದ ಆಹಾರವಾಗಿರುವುದರ ಜೊತೆಗೆ ಈ ಸಸ್ಯದ ಇತರ ಎಲ್ಲಾ ಭಾಗಗಳೂ ಸಹ ಯಾವುದಾದರೊಂದು ಕೈಗಾರಿಕೆಗೆ ಉಪಯೋಗಿಸಲ್ಪಡುತ್ತಿರುವುದು ಈ ಲೇಖನದಿಂದ ವ್ಯಕ್ತವಾಗುತ್ತದೆ.

01_262_ML-KUH

ಅಕ್ಕಿಯ ಜೊತೆ ಗೂಡಿ

ಬತ್ತದಿಂದ ಅಕ್ಕಿ ಮಾಡಿಸಿ, ಅದನ್ನು ಬೇಯಿಸಿ, ಅನ್ನ ಮಾಡಿ ಉಪಯೋಗಿಸುವುದು ಪ್ರಪಂಚದಾದ್ಯಂತ ಅನಾದಿ ಕಾಲದಿಂದಲೂ ರೂಢಿಯಲ್ಲಿರುವ ಪದ್ಧತಿ. ಬತ್ತ ಕುಟ್ಟುವಾಗ ಅಥವಾ ಗಿರಣಿಗಳಲ್ಲಿ ಅಕ್ಕಿಯ ನುಚ್ಚು ಹೊಟ್ಟು ಮತ್ತು ತೌಡು ಸಹ ಫಲಿಸುತ್ತದೆ. ಕೆಲವು ಪುರಾತನ ಗಿರಣಿಗಳಲ್ಲಿ ಹೊಟ್ಟು ಮತ್ತು ತೌಡು ಎರಡು ಮಿಶ್ರಿತವಾಗಿ ಹೊರ ಬರುತ್ತಿದ್ದವು. ಅದೇ ರೀತಿ ಪಾಲಿಷ್ ಮಾಡಲ್ಪಟ್ಟ ಅಕ್ಕಿಯಲ್ಲಿ ಅದಕ್ಕಿಂತಲೂ ಹೆಚ್ಚು ಉದ್ದವಿರುವ ಅಕ್ಕಿ ಮತ್ತು ನುಚ್ಚು ಎರಡೂ ಬೆರಕೆಯಾಗಿ ಯಂತ್ರದಿಂದ ಹೊರ ಬೀಳುತ್ತಿದ್ದವು. ಆದರೆ ಆಧುನಿಕ ಯಂತ್ರಗಳ ಬಳಕೆಯಿಂದ ಅನ್ನ ಮಾಡಲು ಯೋಗ್ಯವಾದ ಉದ್ದನ ಅಕ್ಕಿ, ನುಚ್ಚು, ಹೊಟ್ಟು ಮತ್ತು ತೌಡು ಈ ನಾಲ್ಕನ್ನೂ ಬೇರೆ ಬೇರೆಯಾಗಿ ಗಿರಣಿಯಿಂದ ಹೊರ ಬೀಳುವಾಗಲೇ ಸಂಗ್ರಹಿಸಲು ಸಾಧ್ಯವಾಗಿದೆ.

ಹೀಗೆ ಉಂಟಾದ ನುಚ್ಚಿನಿಂದ ಗಂಜಿ ಮಾಡಿ ಉಪಯೋಗಿಸುವುದು, ಇಡ್ಲಿ, ದೋಸೆ ಮುಂತಾದ ಅನೇಕ ಬಗೆಯ ಉಪಹಾರದ ವಸ್ತುಗಳನ್ನು ತಯಾರಿಸುವುದೂ ಸಾಮಾನ್ಯ. ಇತ್ತೀಚೆಗೆ ಅಕ್ಕಿಯನ್ನು ಪರಿಷ್ಕರಿಸಿ, ನೇರವಾಗಿ ಉಪಯೋಗಿಸಬಹುದಾದಂತಹ ಅನೇಕ ರುಚಿಯಾದ ತಿನಿಸುಗಳನ್ನು ತಯಾರಿಸಲಾಗುತ್ತಿದೆ. ಹಪ್ಪಳ, ಸಂಡಿಗೆ, ಪುರಿ, ಹರಳು, ಅವಲಕ್ಕಿ ಕರಿದ ಮತ್ತು ಬೇಯಿಸಿ ಡಬ್ಬಗಳಲ್ಲಿ ಶೇಖರಿಸಲ್ಪಟ್ಟ ಪದಾರ್ಥಗಳು ಹೀಗೆ ಹಲವಾರು ರುಚಿಕರವಾದ ಮತ್ತು ಹೆಚ್ಚು ಕಾಲ ಅಥವಾ ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಕ್ಕೆ ಬರುವಂತೆ “ದಿಡೀರ್” ಅನ್ನವಾಗುವಂತೆ ಅಕ್ಕಿಯನ್ನು ರೂಪಾಂತರಿಸಿ ಶೇಖರಿಸಿ ಕೊಡಲು ಇತ್ತೀಚಿನ ಸಂಶೋಧನೆಯಿಂದ ಸಾಧ್ಯವಾಗಿದೆ.

ಹೊಟ್ಟಿನ ಉಪಯೋಗ

ಅನೇಕ ಶತಮಾನಗಳಿಂದ ಒಲೆ ಉರುವಲಿಗೆ ಹೊಟ್ಟನ್ನು ಉಪಯೋಗಿಸುತ್ತಿದ್ದಾರೆ. ಹೊಟ್ಟಿನಿಂದ ರಟ್ಟು, ಕಾಗದ, ಇಟ್ಟಿಗೆಗಳು, ಪ್ಲಾಸ್ಟಿಕ್ ತಯಾರಿಕೆಯಲ್ಲಿ ಉಪಯೋಗಿಸುವ ಮೂಲ ವಸ್ತು ಸಾಣೆ ಮತ್ತು ಘರ್ಷಕ (ಅಬ್ರೇಸಿವ್) ಪದಾರ್ಥಗಳು ತಯಾರಿಸಲ್ಪಡುತ್ತಿವೆ. ಸಸ್ಯಕ್ಕೆ ಬೇಕಾದ “ಸಿಲಿಕಾ” ಎಂಬ ಅಂಶವನ್ನು ಒದಗಿಸಲು ಹೊಟ್ಟನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸುವುದು ಕೃಷಿಯಲ್ಲಿ ಬಳಕೆಯಲ್ಲಿದೆ. ಬೇಸಾಯದಲ್ಲಿ ಇದರ ಮತ್ತೊಂದು ಉಪಯೋಗವೇನೆಂದರೆ ಮಳೆಯಿಂದಲೇ ಆಗಲಿ ಅಥವಾ ನೀರಾವರಿಯಿಂದಲೇ ಆಗಲಿ ಭೂಮಿಗೆ ಸೇರಿದ ತೇವಾಂಶವನ್ನು ಹೆಚ್ಚು ದಿನಗಳು ಮಣ್ಣಿನಲ್ಲೇ ತಂಗುವಂತೆ ಮಾಡಲು ಹೊಟ್ಟನ್ನು ಬೆಳೆ ನಿಂತಿರುವ ಅಥವಾ ಬೆಳೆ ಹದಮಾಡಿ ಬಿಟ್ಟಿರುವ ಭೂಮಿಗೆ ಮೇಲ್ಪದರವಾಗಿ ಹರಡಲು (ಮಲ್್ಚಿಂಗ್) ಇದನ್ನು ಉಪಯೋಗಿಸಲಾಗುವುದು, ಕುಲುಮೆಯಲ್ಲಿಯೂ ಸಹ ಇದು ಉಪಯೋಗಿಸಲ್ಪಡುವುದು.

ತೌಡಿನ ಎಣ್ಣೆ

ಅಕ್ಕಿಯ ಗಿರಣಿಯಿಂದ ಪಡೆದ ತೌಡಿನಲ್ಲಿ ಶೇ. ೧೬ ರಿಂದ ೨೦ ಪ್ರಮಾಣದಷ್ಟು ಎಣ್ಣೆ ಇರುತ್ತದೆ. ಬರ್ಮಾ ಮತ್ತು ಜಪಾನ್ ದೇಶಗಳಲ್ಲಿ ತೌಡಿನ ಎಣ್ಣೆ (ರೈಸ್ ಬ್ರೌನ್ ಆಯಿಲ್) ಬಹಳ ಮಹತ್ವವಿದೆ. ಭಾರತ ದೇಶದಲ್ಲೂ ಸಹ ತೌಡಿನ ಎಣ್ಣೆ ಕಾರ್ಖಾನೆಗಳು ಸ್ಥಾಪಿಸಲ್ಪಡುತ್ತಿವೆ. ಕರ್ನಾಟಕ ರಾಜ್ಯದ ಮಂಡ್ಯ ಪಟ್ಟಣದಲ್ಲಿ ಈಗಾಗಲೇ ಒಂದು ಕೇಂದ್ರ ಎಣ್ಣೆ ಉತ್ಪಾದನೆಯನ್ನು ಕೈಗೊಂಡಿದೆ. ಚೆನ್ನಾಗಿ ಶುದ್ದೀಕರಿಸಿದ ತೌಡಿನ ಎಣ್ಣೆಯನ್ನು ಅಡಿಗೆಗೂ ಉಪಯೋಗಿಸಬಹುದೆಂದು ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನಾಲಯದ ಪ್ರಯೋಗಗಳಿಂದ ಗೊತ್ತಾಗಿದೆ. ಸಾಬೂನು ತಯಾರಿಕೆಯಲ್ಲಿ ಇದರ ಉಪಯೋಗ ಹೆಚ್ಚು. ಕೊಬ್ಬು ಕಳೆದ ಎಣ್ಣೆಯಲ್ಲಿ ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿರುತ್ತದೆ. ಎಣ್ಣೆ ರಹಿತ ತೌಡು ಹೆಚ್ಚು ದಿವಸ ಕೆಡದಂತೆ ನಿಲ್ಲುತ್ತದೆ.

ಎಣ್ಣೆ ತೆಗೆದ ತೌಡು ಜನಗಳ ಆಹಾರ ತಯಾರಿಸುವುದಕ್ಕೂ ಮತ್ತು ಬಿಸ್ಕತ್ ತಯಾರಿಕೆಯಲ್ಲಿಯೂ ಉತ್ಕೃಷ್ಟವಾಗಿ ಉಪಯೋಗಿಸಲ್ಪಡುತ್ತಿದೆ. ತೌಡಿನ ಎಣ್ಣೆಯಿಂದ ದೊರೆಯುವ ಮೇಣವನ್ನು ಕೈಗಾರಿಕೆಯಲ್ಲಿ ಬಳಸುತ್ತಾರೆ. ಅಲ್ಲದೆ ಅದರಲ್ಲಿರುವ ಮೇದು ಆಮ್ಲ (ಫ್ಯಾಟಿ ಆಸಿಡ್) ಗಳು ಪದಾರ್ಥಗಳನ್ನು ಕೆಡದಂತೆ ಇಡಲು ಉಪಯುಕ್ತವಾಗುವ ಲೇಪನಗಳ ತಯಾರಿಕೆಯಲ್ಲಿ ಉಪಯೋಗವಾಗಿದೆ. ಹಾಗೂ ರಾಳ (ರೆಸಿನ್ಸ್) ದಂತಹ ವಸ್ತುಗಳನ್ನು ತಯಾರಿಸಲೂ ಸಹ ಇದು ಪ್ರಯೋಜನಕಾರಿ ಎನಿಸಿದೆ. “ಟೋಕೋ ಫೆರಾಲ್” ರಾಸಾಯನಿಕ ತೆಗೆಯಲು ಇದು ಮೂಲವಾಗಿದೆ.

ಅಕ್ಕಿಯ ಭ್ರೂಣ

ಅಕ್ಕಿಯ ಭ್ರೂಣ (Germ or embryo) ಬಹು ಚಿಕ್ಕದಾಗಿ ಅಂದರೆ ಸುಮಾರು ಒಂದು ಅಕ್ಕಿಯ ಕಾಳಿನ ಶೇ. ೧.೫ ರಿಂದ ೨.೦ ರಷ್ಟು ಇರುತ್ತದೆ. ಶೇ. ೮೦ ರಿಂದ ೫ ರಷ್ಟು ಅಕ್ಕಿಯಲ್ಲಿನ ಭ್ರೂಣವು ಗಿರಣಿ ಮಾಡುವಾಗಲೇ ತೌಡಿನಲ್ಲಿ ಸೇರಿ ಹೊರ ಬೀಳುತ್ತದೆ. ಭ್ರೂಣವನ್ನು ತೌಡಿಗೆ ಸೇರಿಸಿದಂತೆ ಬೇರ್ಪಡಿಸಿದ್ದಲ್ಲಿ, ಇದರಲ್ಲಿ ಶೇ. ೧೬ ರಿಂದ ೧೮ ರಷ್ಟು ಪ್ರೋಟೀನ್ ಮತ್ತು ಶೇ. ೩೦ ರಷ್ಟು ಎಣ್ಣೆಯು (ರೈಸ್ ಜತ್ಮ್ ಆಯಿಲ್) ಇರುತ್ತದೆಂದು ತಿಳಿದಿದೆ. ಪಾಲಿಷ್ ಮಾಡಿದ ಅಕ್ಕಿಯ ಕಾಳಿನ ಶೇ. ೯೮ ರಿಂದ ೯೮.೫ ಭಾಗವಾದ ಬೀಜಾಂಶಸ್ಸಾರ (ಎಂಡೋಸ್ಪರ‍್ಮ) ವನ್ನು ಮಧ್ಯ ತಯಾರಿಸಲು ಉಪಯೋಗಿಸುತ್ತಾರೆ.

ಹುಲ್ಲಿನ ಉಪಯೋಗ

ಬತ್ತದ ಹುಲ್ಲು ಅತಿ ಮುಖ್ಯವಾದ ದನಗಳ ಮೇವು. ವರ್ಷವಿಡೀ ಒಣಗಿಸಿದ ಹುಲ್ಲುಗಳ ಬಳಕೆ ರೈತರಿಗೆ ಸರ್ವೇಸಾಮಾನ್ಯ. ಮನೆಗೆ ಮೇಲು ಹೊದಿಕೆಯಾಗಿ ಇದರ ಉಪಯೋಗ ಮಲೆನಾಡಿನಲ್ಲಿ ಹೆಚ್ಚೆಂದು ಹೇಳಬಹುದು. ಹುಲ್ಲಿನ ಹೊದಿಕೆ ಇರುವ ಮನೆ, ಮಳೆಗಾಲದಲ್ಲಿ ಬೆಚ್ಚಗೂ, ಬೇಸಿಗೆಯಲ್ಲಿ ತಂಪಾಗಿಯೂ ಇರುತ್ತದೆ. ಹುಲ್ಲನ್ನು ಹಗ್ಗವಾಗಿ ಮಾರ್ಪಡಿಸಿ ಉಪಯೋಗಿಸಲ್ಪಡುತ್ತಿರುವುದನ್ನು ಸಹ ಅನೇಕ ದೇಶಗಳಲ್ಲಿ ಕಾಣಬಹುದು. ವಿವಿಧ ರೀತಿಯ ಚಾಪೆಗಳು, ಶಬ್ದವನ್ನು ತಡೆಯುವಂತಹ ರಟ್ಟು, ಟೋಪಿ ಬೊಂಬೆ ಇತ್ಯಾದಿ ಸಾಮಾನುಗಳನ್ನು ತಯಾರಿಸಲೂ ಸಹ ಉಪಯೋಗಿಸಲ್ಪಡುತ್ತಿದೆ. ಮಲೆನಾಡು ಪ್ರದೇಶದಲ್ಲಿ ಹುಲ್ಲನ್ನು ಕೊಳೆಯುವಂತೆ ಮಾಡಿ, ಅದರ ಸಹಾಯದಿಂದ ತಿನ್ನಲು ಯೋಗ್ಯವಾದ ಅಣಬೆಗಳ (ಮಷರೂಮ್) ನ್ನು ಬೆಳೆಯುವುದನ್ನು ವಿಶೇಷವಾಗಿ ಕಾಣಬಹುದು. ಹೊಟ್ಟಿನ ಉಪಯೋಗಿಸಿದಂತೆ ಹುಲ್ಲನ್ನು ಸಹ ತೇವಾಂಶ ಶೇಖರಣೆಗೆ (ಮಲ್್ಚಿಂಗ್) ಉಪಯೋಗಿಸಬಹುದು.

ಹೀಗೆ ಮಾನವ ಜನಾಂಗದ ಬಹು ಸಂಖ್ಯೆಯ ಜೀವನಾಧಾರವಾದ ಬತ್ತದ ಸಸ್ಯದ ಎಲ್ಲಾ ಭಾಗಗಳೂ ಸಹ ನಾನಾ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಇಂತಹ ವಿವಿಧೋದ್ದೇಶ ಪೂರಕ ಸಸ್ಯವನ್ನು ನಾವು ಕಲ್ಪವೃಕ್ಷವೆಂದೇಕೆ ಕರೆಯಬಾರದು?