ಭಾರತಾದ್ಯಂತ ಕುಟುಂಬ ಯೋಜನೆಯ ಪ್ರಚಾರದಿಂದಾಗಿ “ವಾಸೆಕ್ಟಮಿ” ಎಂದರೇನು ಎಂಬುದು ಬಹಳ ಜನರಿಗೆ ತಿಳಿದಿರುವ ಮತ್ತು ಉಪಯುಕ್ತವಾದ ವಿಷಯ. ಮಾನವರಲ್ಲಿ ಮಿತ ಸಂತಾನಕ್ಕಾಗಿ ವಾಸೆಕ್ಟಮಿಯ ಅವಶ್ಯಕತೆ ಇದ್ದರೆ, ಕೃಷಿಯಲ್ಲಿ ಅತಿ ಸಂತಾನಕ್ಕಾಗಿ ಅಂದರೆ ಹೆಚ್ಚು ಧಾನ್ಯ ಉತ್ಪಾದನೆಗೆ ಇದರ ಅವಶ್ಯಕತೆ ಇದೆ. ಕೃಷಿಯಲ್ಲಿ ಈಗಾಗಲೇ ಕೆಲವು ಬೆಳೆಗಳಲ್ಲಿ (ಭಾರತದಲ್ಲಿ ಜೋಳ ಮತ್ತು ಮುಸುಕಿನ ಜೋಳ) ಇದರ ಪ್ರಯೋಜನ ಅದ್ವಿತೀಯವೆನಿಸಿದೆ. “ಇಂಡಿಕಾ” ಬತ್ತದಲ್ಲಿ ಪ್ರಪಂಚದಲ್ಲೇ ಮೊಟ್ಟ ಮೊದಲನೆಯದಾಗಿ ಬತ್ತದ ತಜ್ಞರಿಂದ ಸೃಷ್ಟಿಸಲ್ಪಟ್ಟ ಸಂಪೂರ್ಣವಾಗಿ ಗಂಡು ಸತ್ವವಿಲ್ಲದ “ಹೈಬ್ರಿಡ್ ಬತ್ತ” (male Sterile) ಇಂತಹ ಒಂದು ಕೃಷಿ ಕ್ರಾಂತಿಗೆ ಅತಿ ಮುಖ್ಯವಾಗಿದೆ. ಕೃಷಿ ವಿಶ್ವವಿದ್ಯಾಲಯದ ಅಂಗವಾದ ಮಂಡ್ಯದ ಪ್ರಾದೇಶಿಕ ಸಂಶೋಧನೆ ಕೇಂದ್ರದ ತಜ್ಞರೇ ಇದನ್ನು ಕಂಡು ಹಿಡಿದಿದ್ದಾರೆ.

ಹೆಚ್ಚು ಸಸ್ಯಗಳಲ್ಲಿ ಹೆಣ್ಣು ಮತ್ತು ಗಂಡು ಭಾಗಗಳು ಒಂದೇ ಹೂವಿನಲ್ಲಿರುತ್ತವೆ. (Hemophrodire) ಕೆಲವು ಸಸ್ಯಗಳಲ್ಲಿ ಹೆಣ್ಣು ಮತ್ತು ಗಂಡು ಭಾಗಗಳು ಬೇರೆ ಬೇರೆ ಹೂವಿನಲ್ಲಿದ್ದರೂ ಈ ಎರಡು ಜಾತಿಯ ಹೂಗಳೂ ಒಂದೇ ಸಸಿಯಲ್ಲಿರುತ್ತವೆ. (Unisexual: Monoecious) ಇದಕ್ಕೆ ಮುಸುಕಿನ ಜೋಳ ಉದಾಹರಣೆ. ಆದರೂ ಪ್ರತಿಯೊಂದು ಜಾತಿಯ ಸಸ್ಯಕ್ಕೂ ತನ್ನದೆ ಆದ ಗರ್ಭ ಕಟ್ಟುವ ವಿಧಾನವಿರುತ್ತದೆ. ಬತ್ತ ಮತ್ತು ರಾಗಿ ಬೆಳೆಗಳಲ್ಲಿ ಸ್ವಕ್ರಿಯ ಗರ್ಭದಾನ (Self fertilization) ನಿಸರ್ಗದ ವೈಶಿಷ್ಟ್ಯ. ಈ ಕ್ರಿಯೆಗಳು ಗರ್ಭ ಕಟ್ಟುವ ನಿಯಮಕ್ಕನುಗುಣವಾಗಿ ಅಳವಡಿಸಲ್ಪಟ್ಟ ರೀತಿಯಲ್ಲಿ, ಅಂದರೆ (ಪರಕೀಯ ಗರ್ಭದಾನದಲ್ಲಿ) ಏಕ ಕಾಲಕ್ಕೆ ಅಥವಾ (ಸ್ವಕ್ರೀಯ ಗರ್ಭಾದಾನದಲ್ಲಿ) ಏಕ ಕಾಲಕ್ಕೆ ಹೆಣ್ಣು ಮತ್ತು ಗಂಡು ಭಾಗಗಳು ಕ್ರಿಯಾವಸ್ಥೆಗೆ ಬರುತ್ತವೆ. ಸ್ವಾಭಾವಿಕವಾಗಿರುವ ಈ ನಿಯಮಗಳಲ್ಲಿ ಹಸ್ತಕ್ಷೇಪ ಮಾಡಿ, ತನ್ನ ಇಷ್ಟದಂತೆ ಗರ್ಭ ಕಟ್ಟುವ ವಿಧಾನವನ್ನು ನಿರ್ಧರಿಸಲು, ಅವಶ್ಯಕವಿರುವಲೆಲ್ಲಾ ನಿಸರ್ಗದ ನಿಯಮವನ್ನು ತಿರುಗು ಮುರುಗು ಮಾಡುವುದರಲ್ಲಿ ಮಾನವನು ಇಂದು, ತಳಿ ಶಾಸ್ತ್ರದ ಪ್ರಗತಿಯಿಂದಾಗಿ ಸಫಲನಾಗಿದ್ದಾನೆ.

ಕೃಷಿ ಸಂಶೋಧನೆಯಲ್ಲಿ ತಳಿಶಾಸ್ತ್ರವು (Plant Breeding) “ಜಿನಿಟಿಕ್ಸ್” ಸಂಶೋಧನೆಯ ನೆರವಿನಿಂದ ಕಳೆದ ಆರೇಳು ದಶಕಗಳಲ್ಲಿ ಹಿಂದೆ ಯಾವಾಗಲೂ ಸಾಧ್ಯವಾಗದಷ್ಟು ಉನ್ನತ ಮಟ್ಟದ ಪ್ರಗತಿ ಸಾಧಿಸಿದೆ. ಕೊಯಲ್ ರೀಟರ್(೧೭೬೩)ನಿಂದ ಆರಂಭವಾದ ತಳಿ ಸಂಕರಣ ವಿಧಾನವು ಇಂದು ಪ್ರಪಂಚದ ಎಲ್ಲಾ ಸಸ್ಯ ಸಂಶೋಧನಾ ಕ್ಷೇತ್ರಗಳಲ್ಲಿಯೂ ಎಣಿಸಲು ಸಾಧ್ಯವಾಗದ ಸಂಖ್ಯೆಯಲ್ಲಿ ಮತ್ತು ಅನೇಕ ಉದ್ದೇಶಗಳಿಂದ ಪ್ರಯೋಗಿಸಲ್ಪಡುತ್ತಿದೆ. ಎರಡು ತಳಿಗಳು ಬೇರೆ ಬೇರೆ ಒಳ್ಳೆಯ ಗುಣಗಳನ್ನು ಹೊಂದಿದ್ದಾಗ, ಅವೆರಡು ಒಳ್ಳೆಯ ಗುಣಗಳನ್ನು ಒಂದೇ ತಳಿಗಳ ಸಂಕರಣ ಮತ್ತು ಅನಂತರ ಅದರಿಂದ ಹೊರಬರುವ ಪೀಳಿಗೆಯಲ್ಲಿ ಸೂಕ್ತ ಆಯ್ಕೆ ಮಾಡುವ ಉಪಾಯವನ್ನು ತಳಿ ಶಾಸ್ತ್ರಜ್ಞ ಉಪಯೋಗಿಸಿದ್ದಾನೆ. ಅಲ್ಲದೆ ಪ್ರತಿಯೊಂದು ಗುಣದ ಅನುವಂಶಿಕತೆಯ ನಿಯಮಗಳನ್ನು ಅರ್ಥ ಮಾಡಿಕೊಂಡು ಅದರಿಂದ ತೀವ್ರ ಗತಿಯಲ್ಲಿ ಎರಡು ಅಥವಾ ಹೆಚ್ಚು ಗುಣಗಳನ್ನು ಒಂದೇ ತಳಿಯಲ್ಲಿ ಶೇಖರಿಸಲು ಸಾಧ್ಯವಾಗಿದೆ. ಅವುಗಳ ಫಲ ರೈತರಿಗೆ ಅನೇಕ ಬೆಳೆಗಳಲ್ಲಿ ದೊರಕಿದೆ. ಅವುಗಳಲ್ಲಿ ಅತಿ ಮುಖ್ಯವಾದುದೆಂದರೆ “ಹೈಬ್ರಿಡ್” ಅಥವಾ ಮಿಶ್ರ ತಳಿಗಳು. ಸಾಮಾನ್ಯವಾಗಿ ಮಿಶ್ರ ತಳಿಗಳು ಇತರ ತಳಿಗಳಿಗಿಂತ ಹೆಚ್ಚು ದೃಢಕಾಯವಾಗಿರುವುವು. ಅವು ಹೆಚ್ಚು ಪ್ರಮಾಣದಲ್ಲಿ ಆಹಾರ ಮತ್ತು ಇತರ ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ತತ್ಸಮವಾಗಿ ಅಧಿಕ ಇಳುವರಿ ಕೊಡುವುದಲ್ಲದೆ, ಬೆಳೆದ ರೈತರಿಗೆ ತೃಪ್ತಿಕರ ನಿವ್ವಳ ಆದಾಯ ದೊರೆಯುವಂತೆ ಮಾಡುತ್ತವೆ. ಉತ್ಪಾದನೆಯನ್ನು ಒಮ್ಮೆಲೆ ಇಮ್ಮಡಿ ಮಾಡಲು ಇದುವರೆಗೆ ಅನೇಕ ಬೆಳೆಗಳಲ್ಲಿ ಸಹಾಯಕವಾಗಿರುವ ಮಿಶ್ರ ಅಥವಾ ಹೈಬ್ರಿಡ್ ತಳಿಗಳು ಇಂದು ರೈತ ಸಮಾಜದಲ್ಲಿ ಅನೇಕರಿಗೆ ಪರಿಚತವೆಂದು ಹೇಳಬಹುದು.

ಹೈಬ್ರಿಡ್ ತಳಿಗಳ ಬಳಕೆಯಲ್ಲಿ ದೊಡ್ಡ ಸಮಸ್ಯೆ ಎಂದರೆ ಅಧಿಕ ಪ್ರಮಾಣದಲ್ಲಿ ಬೀಜೋತ್ಪಾದನೆ ಮಾಡುವುದು. (ಹೈಬ್ರಿಡ್ ತಳಿ ಬೆಳೆಗಳಲ್ಲಿ ಪ್ರತಿ ಪೀಳಿಗೆಗೂ ವಿಶೇಷವಾಗಿ ತಯಾರಿಸಿದ ಬೀಜಗಳನ್ನೇ ಬಳಸಬೇಕಾಗುತ್ತದೆ. ಆದ ಬೆಳೆಯಿಂದ ಬೀಜಗಳನ್ನು ಆರಿಸುವಂತಿಲ್ಲ. ಹಾಗೆ ಆರಿಸಿದರೆ ಅವು ಇಷ್ಟವಾದ ಗುಣ ಯೋಗ್ಯತೆಯನ್ನು ಹೊಂದಿರುವುದಿಲ್ಲ). ಸ್ವಕೀಯ ಪರಾಗ ಸ್ಪರ್ಶ (ಸ್ವಕೀಯ ಗರ್ಭಾದಾನ) ನಿಯಮಕ್ಕೆ ಒಳಪಟ್ಟ ಅನೇಕ ಬೆಳೆಗಳಲ್ಲಿ ಇದರ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. ಪರಕೀಯ ಪರಾಗ ಸ್ಪರ್ಶವಾಗುವ ಮುಸುಕಿನ ಜೋಳದಲ್ಲಿ ವಾಸೆಕ್ಟಮಿ (ಡೆಟ್ಯಾಸಲಿಂಗ್)ಯಿಂದ ಅಂದರೆ ಸಸ್ಯದ ತುದಿಯಿಂದ ಬರುವ ಗಂಡು ಭಾಗವನ್ನು ಅರಳುವುದಕ್ಕಿಂತ ಮುಂಚೆಯೇ ಕತ್ತರಿಸಿ ಸುಲಭ ರೀತಿಯಲ್ಲಿ ಸಂಕರಣ ಮಾಡಿ ಹೆಚ್ಚು ಪ್ರಮಾಣದಲ್ಲಿ ಹೈಬ್ರಿಡ್ ಬೀಜೋತ್ಪಾದನೆ ಸಾಧ್ಯವಾಗಿದೆ. ಜೋಳದಲ್ಲಿ ನೈಸರ್ಗಿಕ ವಾಸೆಕ್ಟಮಿ (male sterile) ಎಂದು ಹೇಳಬಹುದಾದ, ಅಂದರೆ ಗಂಡು ಭಾಗಗಳು ಎಂದಿಗೂ ಅರಳದಂತೆ ಇರುವಂತಹ ಸಸ್ಯ ಜಾತಿಗಳು ಕಂಡು ಹಿಡಿಯಲ್ಪಟ್ಟು ಅವುಗಳ ಬಳಕೆಯಿಂದ ಹೆಚ್ಚು ಹೈಬ್ರಿಡ್ ಬೀಜೋತ್ಪಾದನೆ ಸಾಕಷ್ಟು ಪ್ರಯತ್ನದ ನಂತರ ಸಾಧ್ಯವಾಗಿದೆ.

ಜೋಳದಲ್ಲಿ ಸ್ವಕೀಯ ಹಾಗೂ ಪರಕೀಯ ಪರಾಗ ಸ್ಪರ್ಶ ಎರಡರಿಂದಲೂ ಕಾಳು ಕಟ್ಟುವುದರಿಂದ ಇದು ಸಾಧ್ಯವಾಯಿತು. ಬತ್ತ ಸಂಪೂರ್ಣವಾಗಿ ಸ್ವಕೀಯ ಗರ್ಭಾದಾನ ನಿಯಮಕ್ಕೊಳಪಟ್ಟ ಬೆಳೆ. ಸಾಲದ್ದಕ್ಕೆ ಇದರ ಹೂವು ಸಣ್ಣವಾದುದರಿಂದ ಸಂಕರಣ ಬಲುಕಷ್ಟ. ಸಂಕರಣ ಮಾಡಬೇಕಾದರೆ ಒಂದು ಹೂಬಿನ ಆರು ಸೂಕ್ಷ್ಮ ಕೇಸರ (anthers)ಗಳನ್ನು ಹೂವು ಅರಳುವ ಮುನ್ನವೇ ಕಿತ್ತು ಹಾಕಿ, ಸ್ವಕೀಯ ಪರಾಗ ಸ್ಪರ್ಶವನ್ನು ತಪ್ಪಿಸಬೇಕು. ಬಳಿಕ ನಿರ್ಧಿಷ್ಟ ತಳಿಯಿಂದ ಪರಾಗವನ್ನು ಶೇಖರಿಸಿ ಮೊದಲ ಸಸ್ಯದ ಬಲಿತ ಶಲಾಕೆ (Pistil)ಗಳ ಮೇಲೆ ಉದುರಿಸಬೇಕು. ಇದಕ್ಕೆ ಹೆಚ್ಚು ಜಾಗರೂಕತೆ, ಸಮಯ ಮತ್ತು ಕೆಲಸ ಬೇಕಾಗುತ್ತದೆ. ಅನೇಕ ಎರಡು ತೊಡರುಗಳನ್ನು ದಾಟಬೇಕಾಗುತ್ತದೆ. ಆದ್ದರಿಂದಲೇ ಬತ್ತದಲ್ಲಿ ಮಿಶ್ರ ತಳಿಯನ್ನು ಸೃಷ್ಟಿಸುವುದು ಸುಧೀರ್ಘ ಕಾಲ ತೆಗೆದುಕೊಂಡಿದೆ.

ಮಿಶ್ರತಳಿ ಸೃಷ್ಟಿಗೆ ಬತ್ತದಲ್ಲಿ ಜೋಳದಂತೆ ಪುರುಷತ್ವ ವಿಹೀನ ಸಸಿಗಳನ್ನು ಕಂಡು ಹಿಡಿಯುವುದು ಒಂದು ಪರಿಹಾರೋಪಾಯವಾಗಿದೆ. ಇದು ದುರ್ಲಭ. ಇಂಡಿಕಾ ಗುಂಪಿನ ಭಾರತೀಯ ಬತ್ತ ಜಾತಿಗಳಲ್ಲಿ ಇವು ಈವರೆಗೂ ಸಿಕ್ಕಿದಿಲ್ಲ. ಆದ್ದರಿಂದ ಮಿಶ್ರ ತಳಿಗಳನ್ನು ಸೃಷ್ಟಿಸುವ ಮತ್ತು ಅವುಗಳ ಗುಣ ಪರೀಕ್ಷಿಸುವ ಕೆಲಸ ಈ ದೇಶದಲ್ಲಿ ಶ್ರಮದ್ದೂ ವಿಲಂಬದ್ದೂ ಆಗಿತ್ತು.

ಹೀಗಿರುವಾಗ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂಡಿಕಾ ಜಾತಿಗಳಲ್ಲಿ ನಪುಂಸಕ ಸಸ್ಯಗಳನ್ನು ಕಂಡು ಹಿಡಿಯುವ ಸುಧೀರ್ಘ ಪ್ರಯತ್ನ ಕೈಗೊಂಡಿದ್ದರು. ಕೊನೆಗೆ ವಿಶ್ವವಿದ್ಯಾಲಯದ ಮಂಡ್ಯ ಸಂಶೋಧನಾ ಫಾರ್ಮಿನಲ್ಲಿ ಇಂಥ ಒಂದು ಸಸ್ಯವನ್ನು ಅವರು ಕಂಡು ಹಿಡಿದರು. ಒಂದು ಮಿಶ್ರ ತಳಿಯ ಸಸಿಗಳಲ್ಲಿ ಪುರುಷ ಭಾಗಗಳ ಕಾರ್ಯ ಶಕ್ತಿಯಲ್ಲಿ ಅಂತರಗಳಿದ್ದವೆಂದು ಗಮನಿಸಲಾಯಿತು. ಅನೇಕಾನೇಕ ಸಸಿಗಳನ್ನು ಪರೀಕ್ಷಿಸಿದ್ದಾಯಿತು. ಪುರುಷ ಭಾಗಗಳು ಬೆಳವಣಿಗೆಯನ್ನೇ ಹೊಂದಿದರೆ ಪೂರ್ತಿ ನಿಸ್ಸತ್ವವಾದ ಒಂದು ಸಸಿ ಅವರಿಗೆ ಕೊನೆಗೆ ಲಭ್ಯವಾಯಿತು.

ಈ ಆವಿಷ್ಕಾರದಿಂದ ಭಾರತದಲ್ಲಿ ಬತ್ತದ ಮಿಶ್ರ ತಳಿಗಳನ್ನು ಸೃಷ್ಟಿಸುವ ಕೆಲಸಕ್ಕೆ ತುಂಬಾ ವೇಗ ಲಭ್ಯವಾಗುವುದೆಂದು ನಿರೀಕ್ಷಿಸಲಾಗಿದೆ. ಬತ್ತದ ಈ ಸಸಿಯ ಪುರುಷ ಭಾಗ ನಿರ್ವೀಯವಾಗಿರುವುದರಿಂದ ಅದರ ಹೆಣ್ಣು ಭಾಗ ಪರಕೀಯ ಪರಾಗ ಸ್ಪರ್ಶದಿಂದಲೇ ಫಲಿಸಬೇಕಾಗುತ್ತದೆ. ಸಂಕರಣಕ್ಕಾಗಿ ಪುರುಷ ಭಾಗಗಳನ್ನು ಕಿತ್ತೊಗೆಯುವ ನಾಜೂಕಾದ ಕೆಲಸದ ಅಗತ್ಯವೇ ಉಳಿಯುವುದಿಲ್ಲ. ಆದರೆ ಈ ಜಾತಿಯ ಪುನರುತ್ಪತ್ತಿ  ಬೀಜ ಮೂಲಕ ಆಗಲಾರದು. ಇನ್ನೊಂದು ಜಾತಿಯಿಂದ ಇದರ ಹೆಣ್ಣು ಭಾಗ ಫಲಿತವಾದರೆ ಹುಟ್ಟಿದ ಕಾಳುಗಳಲ್ಲಿ, ಪುನಃ ಪುಂ-ಸ್ತ್ರೀ ಎರಡೂ ಭಾಗಗಳು ಸಚೇತನವಾಗುತ್ತದೆ.

ಈ ಸಮಸ್ಯೆಯನ್ನು ಬೀಜದ ಬದಲು ಸಸಿಯ ಕೂಳೆಯಿಂದ  ಸಸಿಗಳ ಪುನರುತ್ಪತ್ತಿ ಮಾಡಿ ಪರಿಹರಿಸಲಾಯಿತು. ಹೀಗೆ ಹೆಚ್ಚಿಸಿದ ಸಸಿಗಳಲ್ಲಿ ಪೂರ್ತಿ ಪುಂ – ಭಾಗ ನಿರ್ವೀಯವಾಗಿರುವುದರಿಂದ ಅವು ಕೂಡ ನೈಸರ್ಗಿಕ ವಾಸೆಕ್ಟಮಿ ಹೊಂದಿದ ಜಾತಿಯೇ ಆಗುತ್ತವೆ.

ಅದರ ಶಲಾಕೆ ಸ್ವಾಭಾವಿಕವಾಗಿದ್ದು, ಪರಕೀಯ ಪರಾಗ ಸ್ಪರ್ಶದಿಂದ ಗರ್ಭ ಕಟ್ಟುವ ಶಕ್ತಿಯನ್ನು ಹೊಂದಿರುತ್ತದೆ. ಹೀಗೆ, ಕೆಲವೇ ದಿವಸಗಳ ಹಿಂದೆ, ಸಮಯ ಮತ್ತು ಶ್ರಮ ಅನಿವಾರ್ಯವಾಗಿದ್ದ ಅನೇಕ ಹಂತಗಳ ಬತ್ತದ ಸಂಕರಣ ಈಗ ಅತಿ ಸುಲಭ. ಹೊಸ ಪುರುಷತ್ವವಿಲ್ಲದೆ ಮಿಶ್ರ ಬತ್ತವನ್ನು ಯಾವ ಬತ್ತಕ್ಕೆ ಬೇಕಾದರೂ ಅತಿ ಸುಲಭವಾಗಿ ಸಂಕರಣ ಮಾಡಬಹುದು. ಕೇವಲ ಇದರ ಕೂಳೆಯನ್ನು ನಿರ್ದಿಷ್ಟ ಬತ್ತದ ತಳಿಯ ತಾಕಿನ ಮಧ್ಯೆ ನೆಡುವುದರಿಂದ ಸಂಕರಣ ಹೆಚ್ಚು ಪ್ರಮಾಣದಲ್ಲಿ ತಾನಾಗಿಯೇ ನಡೆದೀತು. ಈಗಾಗಲೇ ನಡೆಸಿರುವ ಪ್ರಯೋಗದಿಂದ ಶೇ. ೪ ರಿಂದ ೨೧ ರಷ್ಟು ಕಾಳು ಪರಕೀಯ ಪರಾಗ ಸ್ಪರ್ಶದಿಂದ ಕಟ್ಟುವಂತೆ ಮಾಡಬಹುದು ಎಂದು ತಿಳಿದುಬಂದಿದೆ. ಹೀಗೆ ಕಟ್ಟಿದ ಸಂಕರಣ ಕಾಳುಗಳನ್ನು ಬಲಿತ ಮೇಲೆ ಶೇಖರಿಸಿ ಮುಂದಿನ ಸಂಶೋಧನೆಗೆ ತಳೀಕರಣಕ್ಕೇ ಆಗಲಿ ಅಥವಾ ಅನುವಂಶಿಕತೆಯ ನಿಯಮ (gene action) ಗಳನ್ನು ಅರ್ಥಮಾಡಿಕೊಳ್ಳಲೇ ಆಗಲಿ ಉಪಯೋಗಿಸಬಹುದು.

ಈ ಗಂಡು ಸತ್ವವಿಲ್ಲದೆ ಮಿಶ್ರ ಬತ್ತವು ಐ.ಆರ್. ೮ ಎಂಬ ಗಿಡ್ಡ ತಳಿಯನ್ನು ಹೆಣ್ಣಾಗಿಯೂ ಮತ್ತು ಮಲೆನಾಡಿನ ಸ್ಥಳೀಯ ತಳಿಯಾದ ಜೀರಿಗೆ ಸಣ್ಣ ಬತ್ತವನ್ನು ಗಂಡಾಗಿಯೂ ಉಪಯೋಗಿಸಿದ ಸಂಕರಣದಿಂದ ಮೊದಲನೇ ಪೀಳಿಗೆಯಲ್ಲಿಯೇ ಫಲಿಸಿತು. ಇದು ಐ.ಆರ್. ೮ ತಳಿಯ ಸಸ್ಯ ರೂಪ. ಹೆಚ್ಚು ಪ್ರಮಾಣದಲ್ಲಿ ಆಹಾರಾಂಶವನ್ನು ಬಳಸಿಕೊಂಡು ಅಧಿಕ ಇಳುವರಿ ಕೊಡುವ ಗುಣ, ಬೇಸಿಗೆಯಲ್ಲೂ ಹೂ ಬಿಟ್ಟು ಫಸಲಿಗೆ ಯೋಗ್ಯವಾಗುವ ಗುಣ ಇವುಗಳನ್ನು ಹೊಂದಿದೆ. ಜೀರಿಗೆ ಸಣ್ಣ ಬತ್ತವು ಚಳಿಯಲ್ಲೂ ಹೆಚ್ಚು ಜೆಳ್ಳುನಿಲ್ಲದೆ ಕಾಳು ಕಟ್ಟುವ ಗುಣ (ಚಳಿ ಅಥವಾ ಕೊರೆ ನಿರೋಧಕ ಶಕ್ತಿ) ಕಾಳು ಪುಟ್ಟಗೆ, ಸಣ್ಣವಾಗಿದ್ದು, ಅನ್ನ ಮಾಡಿದಾಗ ಹಿತವಾದ ಪರಿಮಳ ಸೂಸುವ ಗುಣ ಇವನ್ನು ಹೊಂದಿರುವುದರಿಂದ ಪಲಾವ್ ಮತ್ತಿತರ ವಿಶೇಷ ತಿನಿಸುಗಳಿಗೆ ಅತ್ಯುತ್ತಮವೆನಿಸಿದೆ. ಇದರ ನೆರವಿನಿಂದ ಈಗಾಗಲೇ ೨೦ ಸಂಕರಣದ ಪ್ರಯೋಗಗಳು ನಡೆದು ಇತರ ತಳಿಗಳೊಡನೆ ಸಂಕರಣ ಮಾಡಿ, ಉತ್ತಮ ತಳಿಯನ್ನು ಪಡೆಯಬಹುದೆಂದು ಕಂಡು ಕೊಂಡದ್ದಾಗಿದೆ. ಇತ್ತೀಚಿನ ತಳೀಕರಣದಲ್ಲಿ ನೇರ ಸಂಕರಣವನ್ನೇ (single cross) ಅವಲಂಬಿಸಿದೆ. ಹೆಚ್ಚು ಗುಣಗಳನ್ನು ಏಕ ತಳಿಯಲ್ಲಿ ಪಡೆಯಲು ಅವಶ್ಯವೆನಿಸಿರುವ ಬಹುಮುಖ ಸಂಕರಣ (multiple cross) ಅಂದರೆ ಎರಡಕ್ಕಿಂತಲೂ ಹೆಚ್ಚು ಮೂಲ ತಳಿಗಳನ್ನು ಒಳಗೊಂಡ ಸಂಕರಣವನ್ನು ನಡೆಸಲು ಇದು ಅತ್ಯಂತ ಅನುಕೂಲವಾಗಿದೆ. ಕರ್ನಾಟಕದಲ್ಲಿ ಸೃಷ್ಟಿಸಲ್ಪಟ್ಟ “ನೈಸರ್ಗಿಕ ವಾಸೆಕ್ಟಮಿ” ನಿಯಮಕ್ಕೊಳಪಟ್ಟ ಈ ಮಿಶ್ರ ಬತ್ತವು ರಾಷ್ಟ್ರದ ಇತರ ರಾಜ್ಯಗಳಲ್ಲಿ ಮಾತ್ರವೇ ಅಲ್ಲ ಹೊರ ದೇಶಗಳಲ್ಲೂ ಕೂಡ ಪ್ರಯೋಜನಕಾರಿಯಾಗಿದೆ.

ಈ ಪುರುಷ ಸತ್ವಹೀನ ಸಸಿಯ ಆವಿಷ್ಕಾರ ಬರೇ ಅನ್ವಿತ ಕೃಷಿ ಸಂಶೋಧನೆ ಅನ್ನುವುದಕ್ಕಿಂತಲೂ ಮೂಲಭೂತ ಸ್ವರೂಪದ್ದಾಗಿದೆ ಎನ್ನಬಹುದು. ಆದರೆ ತಕ್ಷಣ ಪ್ರಯೋಜನಗಳನ್ನು ಪಡೆಯಲಿಕ್ಕೂ ಇದು ಸಹಾಯವಾಗಬಲ್ಲದು. ಏಕೆಂದರೆ ಹಳೆ ಪದ್ದತಿಯನ್ನು ಸುತ್ತು ಬಳಸಿನ ಸಂಕಿರಣ ಪದ್ಧತಿಯನ್ನು ಅದು ಅನಗತ್ಯವಾಗಿ ಮಾಡುತ್ತದೆ. ಒಂದು ಸಲ ಈ ಜಾತಿಯಲ್ಲಿ ನಪುಂಸಕತ್ವವನ್ನು ಕಾಪಾಡುವ ಅನುವಂಶಿಕ ಗುಣ ಏತರಿಂದ ಬರುತ್ತದೆ ಮತ್ತು ಯಾವ ರೀತಿಯಲ್ಲಿ ನಪುಂಸಕತ್ವ ಕಳೆದು ಪುನಃ ಪುರುಷತ್ವಕ್ಕೆ ಅದಕ್ಕೆ ಲಭಿಸುತ್ತದೆ ಎಂಬ ಅಂಶಗಳನ್ನು ಕಂಡುಹಿಡಿದುಬಿಟ್ಟರೆ ಹೈಬ್ರಿಡ್ ಅಕ್ಕಿ ಜಾತಿಯನ್ನು ವ್ಯಾಪಾರಿ ಪ್ರಮಾಣದಲ್ಲಿ ಕೃಷಿ ಮಾಡುವುದು ಪ್ರಾರಂಭವಾಗಲು ಏನೂ ತಡವಾಗದು.