ಕರ್ನಾಟಕದಲ್ಲಿ ಬತ್ತವು ೨೯ ಲಕ್ಷ ಎಕರೆಗಳಲ್ಲಿ ಬೆಳೆಯಲ್ಪಡುತ್ತಿದೆ. ಇದರಲ್ಲಿ ೪.೫ ಲಕ್ಷ ಎಕರೆಗಳಲ್ಲಿ ಬತ್ತವನ್ನು ಬೆಳೆಯುವ ದಕ್ಷಿಣ ಕನ್ನಡ ಜಿಲ್ಲೆ ವಿಸ್ತೀರ್ಣದಲ್ಲಿ ಪ್ರಥಮ ಸ್ಥಾನವನ್ನು ಹೊಂದಿದೆ. ಸದ್ಯದಲ್ಲಿ ಶೇ. ೨೦ ರಷ್ಟು ಪ್ರಮಾಣದಲ್ಲಿ ಮಾತ್ರ ಅಧಿಕ ಇಳುವರಿ ತಳಿಗಳನ್ನು ಬೆಳೆಯುತ್ತಿರುವ ಈ ಜಿಲ್ಲೆಯ ಪ್ರಮಾಣ ರಾಜ್ಯದ ಸರಾಸರಿಗಿಂತ (೨೬.೫ ಶೇ) ಕಡಿಮೆ ಮಟ್ಟದಾಗಿದೆ. ಅಲ್ಲದೆ ಬತ್ತದ ಎಕರೆವಾರು ಇಳುವರಿ ಒಳನಾಡು ಮೈದಾನ ಪ್ರದೇಶಕ್ಕಿಂತ ಕಡಿಮೆ ಇದೆ. ಇತ್ತೀಚಿನ ಹೊಸ ತಳಿಗಳ ಬಳಕೆ. ಆಧುನಿಕ ಬೇಸಾಯ ಕ್ರಮದ ಅನುಕರಣೆ ಮತ್ತು ಸಸ್ಯ ಸಂರಕ್ಷಣೆಯಿಂದ ಈ ಜಿಲ್ಲೆಯು ಗಣನೀಯ ಪ್ರಮಾಣದಲ್ಲಿ ಉತ್ಪಾದನೆಗೆ ನೆರವಾಗಿ ಕರ್ನಾಟಕದ ಬತ್ತದ ಕಣಜ ಎನ್ನಿಸಿಕೊಳ್ಳುವುದು ಸಾಧ್ಯ ಎಂಬುದು ಕೃಷಿ ತಜ್ಞರ ಅಭಿಪ್ರಾಯ.

ಈ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ನಾಡ ತಳಿಗಳನ್ನೇ ಬೆಳೆಯಲು ಕಾರಣಗಳಿಲ್ಲದಿಲ್ಲ. ಬೇರೆಲ್ಲೂ ಇಲ್ಲದಷ್ಟು ಪ್ರಮಾಣದಲ್ಲಿ ಇಲ್ಲಿರುವ ಕೀಟಗಳ ಹಾವಳಿ ಬತ್ತ ಬೆಳೆಯುವ ರೈತರಿಗೆ ಒಂದು ದೊಡ್ಡ ಸಮಸ್ಯೆ ಅಲ್ಲದೆ ಕೀಟ ನಿವಾರಣೆಗೆ ಬೇಕಾದ ಸಿಂಪರಣೆ ಕೈಗೊಳ್ಳಲು ಅನೇಕ ಅಡಚಣೆಗಳು ಸಾಲಾಗಿ ನಿಲ್ಲುತ್ತದೆ. ಬಿಡುವಿಲ್ಲದೆ ಬೀಳುವ ಮಳೆ ಔಷಧಿ ಸಿಂಪರಣೆಗೆ ಅಡ್ಡಿ. ಸ್ವಲ್ಪ ಬಿಡುವು ದೊರೆತಾಗ್ಯು, ಸಿಂಪರಿಸಿದ ತಕ್ಷಣವೇ ಔಷಧಿಯನ್ನು ತೊಳೆದು ಹೋಗುವ ಮಳೆ ಸರ್ವೇ ಸಾಮಾನ್ಯ ಹೆಚ್ಚು ಪ್ರಮಾಣದ ಮಳೆಯಿಂದ ಭೂಮಿಯ ಸ್ವಾಭಾವಿಕ ಫಲವತ್ತು ಹಾಗೂ ಬೆಳೆಗೆ ಹಾಕಿದ ರಸಗೊಬ್ಬರಗಳು ಕೊಟ್ಟಿ ಅಥವಾ ಬಸಿದು ಹೋಗುವುದು ಮತ್ತೊಂದು ಸಮಸ್ಯೆ.

ಬತ್ತಕ್ಕೆ ತಗಲುವ ಹಲವಾರು ಕೀಟಗಳಲ್ಲಿ ಕಣೆ ಹುಳು ಅತ್ಯಂತ ನಾಶಕಾರಿ. ಈ ಕೀಟವು ಪ್ರಥಮ ಬೆಳೆಯಲ್ಲಿ (ಜೂನ್ – ಸೆಪ್ಟೆಂಬರ್) ಅಪಾರ ನಷ್ಟವನ್ನುಂಟು ಮಾಡುತ್ತದೆ. ಈ ಕೀಟದ ಹತೋಟಿಗೆಂದು ಕೇಂದ್ರ ಕೃಷಿ ಅನುಸಂಧಾನ ಪರಿಷತ್ತು ಮತ್ತು ರಾಜ್ಯದ ಕೃಷಿ ವಿಶ್ವವಿದ್ಯಾಲಯ ಇವುಗಳ ಆಶ್ರಯದಲ್ಲಿ ಹೈದರಾಬಾದ್ ಮತ್ತು ಮಂಗಳೂರು ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಸಂಶೋಧನೆಯಿಂದ ಮತ್ತು ರೈತರ ಭೂಮಿಯಲ್ಲಿ ನಡೆಸಿದ ಕೆಲವು ಪ್ರಯೋಗಗಳಿಂದ ಹೈದರಾಬಾದಿನಲ್ಲಿ ಕಂಡು ಹಿಡಿಯಲಾದ ಜಿ.ಎಂ.ಆರ್. ೨ (ಆರ್.ಪಿ.ಡಬ್ಲ್ಯು ೬-೧೩) ಬತ್ತದ ತಳಿಯು ಕಣೆಕೀಟಕ್ಕೆ ನಿರೋಧಕ ಶಕ್ತಿ ಹೊಂದಿದೆ ಎಂದು ತಿಳಿದುಬಂದಿದೆ. ಈ ತಳಿಯು ೧೯೭೪ರಲ್ಲಿ ರಾಜ್ಯ ತಳಿ ನಿರ್ಣಯ ಸಮಿತಿಯ ಅನುಮತಿ ಪಡೆದು “ವಿಕ್ರಮ್” ಎಂಬ ಹೆಸರಿನಿಂದ ರಾಜ್ಯದ ಶಿಫಾರಸ್ಸಿನ ತಳಿಗಳ ಪಟ್ಟಿಗೆ ಸೇರಿಸಲ್ಪಟ್ಟಿದೆ.

ತಳಿಯ ಮಾಹಿತಿ

ಈ ತಳಿಯನ್ನು ಐ.ಆರ್. ೮ ಮತ್ತು ಸಿ.ಎಂ. ೨೯ ಎಂಬ ತಳಿಗಳ ಸಂಕರಣದಿಂದ ಹೊರತೆಗೆಯಲಾಗಿದೆ. ಗಿಡ್ಡ ಜಾತಿಗೆ ಸೇರಿದ ಈ ತಳಿಯು ಕಣೆಹುಳು ಬಿದ್ದಾಗ ಬೆಳೆಯಲ್ಪಡುತ್ತಿರುವ ಜಯ ಮತ್ತು ಐ.ಆರ್. ೮ ಮತ್ತು ತಳಿಗಳಷ್ಟೇ ಇಳುವರಿ ನೀಡುತ್ತದೆ. ಅಂದರೆ ಈ ತಳಿಯನ್ನು ಬೆಳೆಯುವುದರಿಂದ ಕಣೆ ಹುಳುವಿಗೆ ಅಂಜಬೇಕಿಲ್ಲ ಅಥವಾ ಈ ಕೀಟಕ್ಕಾಗಿ ಕೀಟನಾಶಕದ ಅವಶ್ಯಕತೆ ಇಲ್ಲ. ಕಣೆಹುಳು ಅಲ್ಲದೆ ಇತರೇ ಕೀಟಗಳಿಗೆ ನಿರೋಧಕ ಶಕ್ತಿ ಈ ತಳಿಯಲ್ಲಿಲ್ಲ ಎಂಬುದು ಸ್ಪಷ್ಟಪಡಿಸಲೇ ಬೇಕಾದ ಅಂಶ. ಈ ತಳಿಯನ್ನು ಇಷ್ಟವುಳ್ಳವರು ಎರಡನೆ ಬೆಳೆಗೂ ಸಹ (ಅಕ್ಟೋಬರ್ – ಜನವರಿ) ಉಪಯೋಗಿಸಬಹುದು. ಎರಡನೆ ಮತ್ತು ಮೂರನೇ ಬೆಳೆಗೆ ಕಣೆಹುಳು ಬೀಳುವುದಿಲ್ಲ ಎಂಬುದು ಇಲ್ಲಿ ಸೂಚಿಸಬೇಕಾದ ಸಂಗತಿ. ಈ ತಳಿಯು ಹೆಚ್ಚು ಗೊಬ್ಬರ ಹಾಕಿದಾಗಲೂ ಬೀಳುವುದಿಲ್ಲ. ಹೆಚ್ಚು ತೆಂಡೆ ಹೊಡೆಯುವ ಈ ತಳಿಯ ಕಾಳು ದಪ್ಪಗಿದ್ದು, ಕುಸುಬಲು ಅಕ್ಕಿ ಮಾಡಲು ಯೋಗ್ಯವೆನಿಸಿದೆ.

ತಳಿಗೆ ಸೂಕ್ತ ಬೇಸಾಯ

“ವಿಕ್ರಮ್” ತಳಿಯನ್ನು ಕರಾವಳಿಯ ಮೊದಲನೆ ಬೆಳೆಗೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆ ಮತ್ತು ಕಣೆಕೀಟದ ಹಾವಳಿ ಇರುವಲೆಲ್ಲಾ ಇದನ್ನು ಬೆಳೆಯುವುದು ಸೂಕ್ತ. ಈ ತಳಿಯ ಅವಧಿಯನ್ನು ಜಯ ಮತ್ತು ಐ.ಆರ್. ೮ ತಳಿಗಳಿಗೆ ಹೋಲಿಸಬಹುದು. ಆದ್ದರಿಂದ ಈ ತಳಿಗಳನ್ನು ಬೆಳೆಯುವ “ಮಜಲು” ಪ್ರದೇಶದಲ್ಲಿ ಮಾತ್ರ ಇದನ್ನು ಬೆಳೆಯಬಹುದು. ಇದನ್ನು ಬೆಟ್ಟ ಪ್ರದೇಶಗಳಲ್ಲಿ ಬೆಳೆಯಬಾರದು. ಬೆಟ್ಟು ಪ್ರದೇಶಕ್ಕೆ ಜಿ.ಎಂ.ಆರ್. ೧ ಮತ್ತು ಕಾಕಕೀಯ ಎಂಬ ಅಲ್ಪಾವಧಿ ತಳಿಗಳು ಪ್ರಯೋಗದಲ್ಲಿವೆ ಎಂಬುದನ್ನು ಈ ಸಂದರ್ಭದಲ್ಲಿ ಸೂಚಿಸುವುದು ಅಗತ್ಯ. ಜಯ ಮತ್ತು ಎ.ಆರ್. ೮ ತಳಿಗಳಿಗೆ ಅನುಸರಿಸುತ್ತಿರುವ ಬೇಸಾಯ ಪದ್ಧತಿಯೇ (ನಾಟಿಯ ಕ್ರಮ, ಅಂತರ ಮತ್ತು ಗೊಬ್ಬರಗಳ ಬಳಕೆ) ಈ ತಳಿಗೂ ಅನ್ವಯಿಸುತ್ತದೆ. ಕಣೆನೊಣ ಬಿಟ್ಟು ಉಳಿದ ಕೀಟಗಳು ನಿಯಂತ್ರಣ ಕ್ರಮ ವಹಿಸುವುದು ಅಗತ್ಯ. ಹೆಚ್ಚಿನ ಮಾಹಿತಿಗೆ ಮಂಗಳೂರಿನಲ್ಲಿರುವ ಕಂಕನಾಡಿ ಕೃಷಿ ಸಂಶೋಧನಾ ಕೇಂದ್ರ, ಮಂಡ್ಯ (ವಿ.ಸಿ. ಫಾರಂ) ಪ್ರಾದೇಶಿಕ ಸಂಶೋಧನಾ ಕೇಂದ್ರ, ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗ (ಬೆಂಗಳೂರು – ೨೪) ಮತ್ತು ಜಿಲ್ಲೆಯ ಕೃಷಿ ಇಲಾಖೆಯೊಂದಿಗೆ ವ್ಯವಹರಿಸಬಹುದು.