Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕನ್ನಡದ ಪ್ರಸಿದ್ದ ಕವಿ, ನಾಟಕಕಾರ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನಕಾರ, ಸಾಹಿತ್ಯ ಲೋಕದ ಗಣ್ಯ ಬರಹಗಾರ ಡಾ|| ಎಚ್.ಎಸ್. ವೆಂಕಟೇಶಮೂರ್ತಿ ಅವರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ಜನಿಸಿದ ಡಾ. ವೆಂಕಟೇಶಮೂರ್ತಿ ಅವರು ಬಾಲ್ಯದಿಂದಲೇ ಪ್ರತಿಭಾವಂತರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪದವಿ ಪಡೆದು ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿಜೀವನ ನಡೆಸಿ ಇದೀಗ ನಿವೃತ್ತರಾಗಿದ್ದಾರೆ.
ಆಳವಾದ ಚಿಂತನೆ, ಸುಲಭಗ್ರಾಹ್ಯ ನಿರೂಪಣೆ, ಆಕರ್ಷಕ ಶೈಲಿ ಇವರ ಬರವಣಿಗೆಯ ವೈಶಿಷ್ಟ್ಯ. “ಪರಿವೃತ್ತ’, ‘ಬಾಗಿಲ ಬಡಿವ ಜನ’, ‘ಮೊಗ್ತಾ’, ‘ಕ್ರಿಯಾಪರ್ವ’, ‘ಒಣಮರದ ಗಿಳಿಗಳು, ‘ಸೌಗಂಧಿಕ’, ‘ಇಂದುಮುಖಿ’, ‘ಹರಿಗೋಲು’, ‘ಮರೆತ ಸಾಲುಗಳು’, ‘ಎಲೆಗಳು ನೂರಾರು’, ‘ಅಗ್ನಿ ಸಂಭ’, ‘ಎಷ್ಟೊಂದು ಮುಗಿಲು’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ.
ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಉರಿಯ ಉಯ್ಯಾಲೆ, ಹೂವಿ ಮತ್ತು ಸಂಧಾನ ಮೊದಲಾದ ನಾಟಕಗಳನ್ನು ಬರೆದಿದ್ದಾರೆ.
ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕವಿತೆ, ಕಥೆ, ಕಾದಂಬರಿ, ಜೀವನ ಚರಿತ್ರೆ, ನಾಟಕಗಳನ್ನು ಬರೆದು ಜನಪ್ರಿಯ ಮಕ್ಕಳ ಸಾಹಿತಿ ಎಂದು ಮನ್ನಣೆ ಗಳಿಸಿದ್ದಾರೆ.
‘ನೂರು ಮರ ನೂರು ಸ್ವರ’, ‘ಕಥನ ಕವನ’, ‘ಮೇಘದೂತ’, ‘ಕವಿತೆಯ ಜೋಡಿ’, ‘ಆಕಾಶದ ಹಕ್ಕು ಮುಂತಾದ ಇವರ ವಿಮರ್ಶಾ ಬರವಣಿಗೆಗಳು ವಿದ್ವತ್ ಲೋಕದ ಮೆಚ್ಚುಗೆಗೆ ಪಾತ್ರವಾಗಿವೆ.
ಇವರು ಬರೆದ ಅನೇಕ ಕವಿತೆಗಳು, ನಾಟಕಗಳು ಹಿಂದಿ, ಇಂಗ್ಲಿಷ್, ತೆಲುಗು, ತಮಿಳಿಗೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕೆ ಅನಿಕೇತನದ ಸಂಪಾದಕರಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಸಂಸ್ಕೃತ ನಾಟಕ ಹಾಗೂ ಬಂಗಾಳಿ ಕವಿತೆಗಳನ್ನು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕಾಳಿದಾಸನ ‘ಋತುಸಂಹಾರ’ದ ಅನುವಾದಕ್ಕಾಗಿ ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಡಾ|| ವೆಂಕಟೇಶಮೂರ್ತಿ ಅವರು ಬರೆದ ನಾಟಕಗಳು ರಾಷ್ಟ್ರೀಯ ಮನ್ನಣೆ ಗಳಿಸಿವೆ. ವರ್ಷದ ಉತ್ತಮ ಪುಸ್ತಕಕ್ಕಾಗಿ ಕೊಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಇವರು ಐದು ಬಾರಿ ಪಡೆದಿದ್ದಾರೆ. ದೇವರಾಜ್ ಬಹದ್ದೂರ್ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ ಮೊದಲಾದ ಗೌರವಗಳು ಶ್ರೀಯುತರಿಗೆ ಸಂದಿವೆ.
ಸಾಹಿತ್ಯ ವಲಯದ ಬಹುತೇಕ ಎಲ್ಲ ಹಿರಿ ಕಿರಿಯರೊಡನೆ ಸ್ನೇಹಪೂರ್ಣ ಸಂಬಂಧವಿರಿಸಿಕೊಂಡು, ಎಳೆಯ ಪ್ರತಿಭೆಗಳನ್ನು ಉತ್ತೇಜಿಸುತ್ತ ಸದಾ ಹಸನ್ಮುಖಿಯಾಗಿರುವ ಕನ್ನಡದ ಗಣ್ಯ ಸಾಹಿತಿ ಡಾ|| ಎಚ್‌. ಎಸ್. ವೆಂಕಟೇಶಮೂರ್ತಿ ಅವರು.