Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಚ್.ಜೆ. ಲಕ್ಕಪ್ಪಗೌಡ

ಸಾಹಿತ್ಯ, ಸಂಸ್ಕೃತಿ, ಜಾನಪದ, ಆಡಳಿತ, ಕಾನೂನು, ಸಂಘಟನೆಗಳಲ್ಲಿ ವಿಶೇಷ ಸಾಮರ್ಥ್ಯವನ್ನು ಪ್ರಕಟಿಸಿದ ಕ್ರಿಯಾಶೀಲ ಚೇತನ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು.
ಕರ್ನಾಟಕ ಜಾನಪದ ಅಧ್ಯಯನದಲ್ಲಿ ಅದಕ್ಕೆ ಹೊಸ ಚಿಂತನೆಯನ್ನು ಮೂಡಿಸಿದವರು. ಸಮಕಾಲೀನ ಜಾನಪದ ಅಸ್ತಿತ್ವಕ್ಕೆ ಭದ್ರ ಬುನಾದಿ ಹಾಕಿದವರು. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಶಾರದಾ ವಿಲಾಸ ಕಾಲೇಜು ಹಾಗೂ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮುಂದೆ ಬಿ.ಆರ್.ಪ್ರಾಜೆಕ್ಟ್ನ ಸ್ನಾತಕೋತ್ತರ ಕೇಂದ್ರ ಸೇರಿ, ವಿಭಾಗದ ಮುಖ್ಯಸ್ಥರಾಗಿ, ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ದಕ್ಷ ಆಡಳಿತಗಾರರೆಂದು ಹೆಸರು ಪಡೆದವರು. ಅಧ್ಯಾಪಕ ವೃತ್ತಿಯಲ್ಲಿರುವಾಗಲೇ ಹಲವಾರು ಸಂಘ ಸಂಸ್ಥೆಗಳ ಆಡಳಿತಗಾರರಾಗಿ, ಸಲಹೆಗಾರರಾಗಿ ಕೆಲಸ ಮಾಡಿದರು. ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಲಹೆಗಾರರಾಗಿ, ಕಲಾ ವಿಭಾಗದ ಕ್ಷೇಮಪಾಲಕರಾಗಿ, ಸೆನೆಟ್ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲಕ್ಕಪ್ಪಗೌಡರು ಮಾಡಿದ ಸಾಧನೆ ಅಪಾರವಾದದ್ದಷ್ಟೇ ಅಲ್ಲ, ವೈವಿಧ್ಯಮಯ ಮತ್ತು ಆದರ್ಶಪ್ರಾಯವಾದದ್ದು. ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತ ಕಾಳಜಿಯನ್ನು ಒಂದು ವಿಶ್ವವಿದ್ಯಾಲಯದ ಮೂಲಕ ತೋರಿಸಿ, ಅದನ್ನು ನೆರವೇರಿಸುವ ಹೊಣೆಗಾರಿಕೆಯನ್ನು ನಿಭಾಯಿಸಿದ್ದು ಅತ್ಯಂತ ಮಹತ್ವಪೂರ್ಣವಾದದ್ದು.
ಸ್ವಾತಂತ್ರ್ಯಾನಂತರದಲ್ಲಿ ಜಾನಪದವನ್ನು ಉಳಿಸಲು ಮತ್ತು ಬೆಳೆಸಲು ಶ್ರಮಿಸಿದ ಅಗ್ರಪಂಕ್ತಿಯ ಜಾನಪದ ವಿದ್ವಾಂಸರಲ್ಲಿ ಡಾ. ಎಚ್.ಜೆ. ಲಕ್ಕಪ್ಪಗೌಡರು ಒಬ್ಬರಾಗಿದ್ದಾರೆ.