Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎನ್.ಎಂ. ಪ್ರಭು

ಶಸ್ತ್ರಚಿಕಿತ್ಸಾ ತಜ್ಞ ಮತ್ತು ವೈದ್ಯಕೀಯದಲ್ಲಿ ಸಮಾಜ ಸೇವಾ ಧುರೀಣರು ಡಾ. ಎನ್.ಎಂ. ಪ್ರಭು ಅವರು.
೧೯೩೨ ರಲ್ಲಿ ಜನಿಸಿದ ಡಾ. ಎನ್.ಎಂ. ಪ್ರಭು ಅವರು ಎಂ.ಬಿ.ಬಿ.ಎಸ್. ಹಾಗೂ ಎಡಿನ್ಬರ್ಗ್ ಮತ್ತು ಇಂಗ್ಲೆಂಡ್ನಲ್ಲಿ ಎಫ್.ಆರ್.ಸಿ.ಎಸ್. ಪದವಿ ಪಡೆದಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಸರ್ಜರಿಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಸಂಬಂಧಪಟ್ಟ ರಾಜ್ಯ ಮಟ್ಟದ ರಾಷ್ಟ್ರಮಟ್ಟದ ಮತ್ತು ಅಂತರ ರಾಷ್ಟ್ರೀಯ ಮಟ್ಟದ ವಿವಿಧ ವೈದ್ಯಕೀಯ ಸಮ್ಮೇಳನಗಳಲ್ಲಿ ವಿವಿಧ ಶಸ್ತ್ರಚಿಕಿತ್ಸಾ ವಿಷಯಗಳ ಬಗ್ಗೆ ಲೇಖನಗಳನ್ನು ಮಂಡಿಸಿದ್ದಾರೆ. ಎಫ್.ಐ.ಎ.ಎಮ್.ಎಸ್, ಎಫ್.ಎ.ಐ.ಎಸ್.ನ ಸ್ಥಾಪಕ ಫೆಲೋ ಆಗಿದ್ದಾರೆ.
“ಕರ್ನಾಟಕ ನರ್ಸಿಂಗ್ ಹೋಂ’ ಎಂಬ ತಮ್ಮದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿರುವ ಶ್ರೀ ಎನ್.ಎಂ. ಪ್ರಭು ಅವರು ಉತ್ತರ ಕರ್ನಾಟಕದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗ್ಯಾಸ್ಟೋಸ್ಕೋಪನ್ನು ಪ್ರಾರಂಭಿಸಿದ ಮೊದಲ ವೈದ್ಯರು ಮತ್ತು ಸಮಗ್ರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ಟೋಸ್ಕೋಪಿ ನಡೆಸಿದ ಮೊದಲ ವೈದ್ಯರು.
ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ ಚಟುವಟಿಕೆಗಳನ್ನು ನಡೆಸಲು ರುಕ್ಷ್ಮಿಣಿ ಮುಕುಂದ ಪ್ರಭು ಚಾರಿಟಿಸ್, ಕೆನರಾ ಚಾರಿಟಬಲ್ ಸೊಸೈಟಿ, ಲಯನ್ಸ್ ಯೋಗ ಸೊಸೈಟಿ. ಮುಂತಾದ ದತ್ತಿ ಸಂಸ್ಥೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಶ್ರೀಯುತರದು.
ಸಾಯಿ ಸಂದೇಶ ಪ್ರದೇಶ ಪ್ರಸಾರ ಸಂಘ, ಮಹರ್ಷಿ ಮಹೇಶ ಯೋಗ ವೇದ ವಿಜ್ಞಾನ ಭವನದ ಹುಬ್ಬಳ್ಳಿ ಶಾಖೆ ಮುಂತಾದ ಧಾರ್ಮಿಕ ಸಂಸ್ಥೆಯನ್ನು ಪ್ರಾರಂಭಿಸಿದವರು.
ಸಹಸ್ರಮೇವ ವೈದ್ಯ ಪ್ರಶಸ್ತಿ, ಉತ್ತಮ ಗ್ಯಾಸ್ಟೋಎಂಟ್ರೋಲಜಿ ಪ್ರಶಸ್ತಿ, ಕರುಣಾಸಾಗರ ಸನ್ಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ವೈದ್ಯರಾಗಿ ಉತ್ತರ ಕರ್ನಾಟಕದ ಜನರ ಆರೋಗ್ಯವನ್ನು ಕಾಪಾಡುತ್ತಿರುವವರು ಡಾ. ಎನ್.ಎಂ. ಪ್ರಭು ಅವರು.