ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಎಪ್ಪತ್ತೊಂಬತ್ತು ವರ್ಷದ ಡಾ. ಎಲ್ ಆರ್ ಹೆಗಡೆಯವರು ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರ ಕಂಡ ಹಿರಿಯ ವಿದ್ವಾಂಸರು.
ಉತ್ತರ ಕನ್ನಡ ಜಿಲ್ಲೆಯ ಜಾನಪದದ ಅಧಿಕೃತ ವಕ್ತಾರರೆಂಬ ಖ್ಯಾತಿವೆತ್ತ ಶ್ರೀ ಹೆಗಡೆ ಅವರು ಸಂಗ್ರಹಿಸಿ ಪ್ರಕಟಿಸಿದ ಇನ್ನೂರಕ್ಕೂ ಹೆಚ್ಚು ಜಾನಪದ ಲೇಖನಗಳು ಮತ್ತು ಜಾನಪದ ಕಥೆಗಳು ವಿದ್ವಾಂಸರಿಂದ ಪ್ರಶಂಸಿಸಲ್ಪಟ್ಟಿವೆ. ‘ನಾಟಿ ವೈದ್ಯ’ ಎಂಬ ಕೃತಿ ಹಲವು ಮುದ್ರಣ ಕಂಡು ಶ್ರೀಯುತರಿಗೆ ಖ್ಯಾತಿ ತಂದು ಕೊಟ್ಟ ಗ್ರಂಥ.
ಮುಕರಿ ಮತ್ತು ಹೊಲೆಯರ ಪದಗಳು, ಗೊಂಡರ ಪದಗಳು, ಹಾಲಕ್ಕಿ ಹೆಂಗಸರ ಹಾಡುಗಳು, ಗುಮ್ಮಟೆ ಪದಗಳು, ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಹೆಂಗಸರ ಹಾಡುಗಳು ಮುಂತಾದವು ಜಾನಪದ ಕಾವ್ಯಗಳಾದರೆ ಸಿದ್ಧಿಯರ ಕಥೆಗಳು, ಹೊನ್ನಮ್ಮನ ಕಥೆಗಳು, ಮಲೆನಾಡಿನ ಕಥೆಗಳು, ಸಣಕೂಸನ ಕಥೆಗಳು ಮುಂತಾದವು ದಲಿತರ ಬದುಕಿನ ಚಿತ್ರಣ ಒಳಗೊಂಡ ಕಥನ ಕಾವ್ಯಗಳಾಗಿವೆ.
ಜಾನಪದದಿಂದಾಚೆಗೂ ಶ್ರೀಯುತರ ಪ್ರತಿಭೆ ವಿಸ್ತರಿಸಿದಕ್ಕೆ ಉದಾಹರಣೆಯಾಗಿ ಅವರ ಕುಮಾರವ್ಯಾಸನ ಪಾತ್ರಗಳು, ಕಾವ್ಯ ವ್ಯಾಸಂಗ, ಬತ್ತಲೇಶ್ವರ ರಾಮಾಯಣ ಮೊದಲಾದ ಕೃತಿಗಳನ್ನು ಹೆಸರಿಸಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳ ಅಧ್ಯಕ್ಷತೆ ಇವರಿಗೆ ಸಂದ ಗೌರವ ಎಂಬತ್ತರ ಇಳಿವಯಸ್ಸಿನಲ್ಲೂ ಜಾನಪದ ವಿಷಯವನ್ನೇ ತುಂಬಿಕೊಂಡು ಚಿಂತಿಸುವ ಹಿರಿಯ ವಿದ್ವಾಂಸರು, ಲೇಖಕರು ಡಾ. ಎಲ್ ಆರ್ ಹೆಗಡೆ ಅವರು.