ಏಳು ಏಳಲೆ ಜೀವ ಬೀಳಬೇಡ
          ಬಾಳು ಹಾಳೆಂದು ಹೇಳಬೇಡ
          ಬಾಳಿನಳವನ್ನೆಲ್ಲ ಅಳೆದು ನೋಡು
          ಬಾಳಿನಾಳಕೆ ಇಳಿದು ತಿಳಿದು ನೋಡು

ಮನುಷ್ಯ ಜೀವನ ಕುರಿತು ಕವಿ ಎಸ್.ಎಸ್. ಬಸುಪಟ್ಟದ ಅವರು ಅಭಿವ್ಯಕ್ತಿಸುವ ಆಶಯವಿದು. ಎಲೆಯ ಮರೆಯ ಕಾಯಿಯಂತೆ ಇಡೀ ಜೀವನದುದ್ದಕ್ಕೂ ಬಾಳಿ ಬದುಕಿದ ಬವಣೆ – ಕಾವುಗಳನ್ನು ಬೆಂದರೂ ನಗುವನ್ನು ಮಾಸಿಕೊಳ್ಳದ, ಆಂತರ್ಯದ ಜೀವಸೆಲೆಯೊಂದಿಗೆ ಜಗತ್ತನ್ನು ಪ್ರೀತಿಸಿದ ಈ ಕವಿ “ನಿಂತ ನೆಲ ಕುಸಿದರೂ, ಬಿರುಗಾಳಿ ಬೀಸಿದರೂ | ನಮ್ಮ ಶ್ರದ್ಧೆಯು ಇರಲಿ ಅಚಲವಾಗಿ” ಎಂದು ಹಾಡಿಕೊಂಡು ತೃಪ್ತಿಪಟ್ಟವರು. ಕಾವ್ಯ, ಕಲೆ, ಸಂಸ್ಕೃತಿಯ ಸಾತತ್ಯದಲ್ಲಿ ತಮ್ಮನ್ನು ಜಂಗಮಶೀಲವಾಗಿಸಿಕೊಂಡು ಕನ್ನಡ ಜನಮಾನಸದಲ್ಲಿ ಬೆಚ್ಚಗೆ ಉಳಿದುಕೊಂಡವರು.

ಹುಟ್ಟು ಮತ್ತು ಬಾಲ್ಯ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ಖಣಗಳೋದ್ಯಮದಕ್ಕೆ ಹೆಸರುವಾಸಿ. ಕವಿ ಬಸುಪಟ್ಟದ ಅವರು ಹುಟ್ಟಿದ್ದು ಇಲ್ಲಿ. (೧೪ ನವಂಬರ್ ೧೯೨೩). ನೇಕಾರ ಮನೆತನದ ಶಿವಪ್ಪ – ನೀಲವ್ವ ಅವರ ಒಡಲ ಕುಡಿಯಾದ ಸಂಗಪ್ಪ ಬಸುಪಟ್ಟದ ಬಡತನವನ್ನೇ ಉಸಿರಾಗಿಸಿಕೊಂಡವರು. ಇದರ ಕಹಿಯನ್ನು ಮೆಲ್ಲುತ್ತಲೇ ಸಹಜವಾಗಿ ಬೆಳೆದರು. ಎಳೆ – ಎಳೆಗಳನ್ನು ಹಾಸು ಹೊಕ್ಕಾಗಿಸಬಲ್ಲ ನೇಕಾರ ತನ್ನ ಬದುಕನ್ನು ಚಿತ್ತಾರವಾಗಿಸುವಲ್ಲಿ ನಿರಂತರ ಹೋರಾಡುತ್ತಾನೆ. ಆದರೆ ಅದರ ಫಲವಂತಿಕೆ ಮಾತ್ರ ಶೂನ್ಯ. ಆ ಶೂನ್ಯದೊಳಗೂ ಜೀವಪ್ರೀತಿಯ ಕುರುಹು ತೋರುವ ಉಲ್ಲಾಸ ಆದಮ್ಯವೆನಿಸಿದೆ. ಬಸುಪಟ್ಟದರು ಗರಿ ಬಿಚ್ಚಿಕೊಂಡದ್ದು ಈ ಉಲ್ಲಾಸದಲ್ಲಿ. ಇದಕ್ಕೆ ಕಾರಣವೆನಿಸಿದ್ದು ಅವರ ಕವಿ ಪ್ರತಿಭೆ. ಬಡತನವಿದ್ದಲ್ಲಿ ಪ್ರತಿಭೆ ನಿತಾಂತವಾಗಿರುವುದು ಎಂಬುದಕ್ಕೆ ಇದೇ ಸಾಕ್ಷಿ.

ಗುಳೇದಗುಡ್ಡದ ಶಾಲೆಯೂಂದರಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿರುವ ಬಾಲಕ ಬಸುಪಟ್ಟದ ಸಾಹಿತ್ಯಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿ, “ಅರಳು ಮಲ್ಲಿಗೆ” ಎಂಬ ಹಸ್ತಪತ್ರಿಕೆಯನ್ನು ಸಂಪಾದಿಸಿದ್ದು ಅಚ್ಚರಿಯ ಸಂಗತಿಯೇ ಹೌದು. ಮನುಷ್ಯ ಬದುಕನ್ನು ಬಿಂಬಿಸುವ ಕಥೆ, ಕವನ, ಲೇಖನಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡ ‘ಅರಳುಮಲ್ಲಿಗೆ’ ವೈವಿಧ್ಯತೆಯಿಂದ ಗಮನಾರ್ಹವೆನಿಸಿತ್ತು. ಮುಖಪುಟದಲ್ಲಿ ಹೆಸರಾಂತ ಸಾಹಿತಿಗಳ ಭಾವಚಿತ್ರ. ಒಳಪುಟದಲ್ಲೊಂದು ಬಸುಪಟ್ಟದ ಕವಿತೆ

ಬಸುರಿನ ತಾವರೆಯೊಳಗಾ ಬ್ರಹ್ಮನು
          ನಸುನಗೆ ಸೂಸುತ ಕೂತಿಹನು;
          ಬಾಲಕರೊಂದಿಗೆ ಸ್ನೇಹವ ಬೆಳೆಸಲು
          ಆತನು ಆತುರ ಪಡುತಿಹನು

ಬೆಳೆವಸಿರಿ ಮೊಳಕೆಯಲ್ಲಿ ನೋಡು ಎಂಬುದಕ್ಕೆ ನಿದರ್ಶನವಾದ ಈ ಕವಿತೆಯ ಸಾಲುಗಳು ಬಸುಪಟ್ತದ ಕಾವ್ಯ ಸಂಸ್ಕಾರವನ್ನು ಪರಿಚಯಿಸುತ್ತವೆ.

ವಿದ್ಯಾಭ್ಯಾಸ, ಅಧ್ಯಾಪಕ ವೃತ್ತಿ

ಭಾವಜೀವಿಯಾದ ಬಸುಪಟ್ತದ ಅವರು ಜ್ಞಾನದ ಹಸಿವಿನವರು ಶಾಲೆಯಲ್ಲಿ ಚುರುಕಾಗಿದ್ದರು. ಗುಳೇದಗುಡ್ಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು ಗದಗಿನ ಮುನ್ಸಿಪಲ್ ಹೈಸ್ಕೂಲಿನಿಂದ ಮೆಟ್ರಿಕ್ಯುಲೇಶನ್ ಮುಗಿಸಿದರು (೧೯೪೩) ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂಟರ್ ಆರ್ಟ್ಸ್ (೧೯೪೫), ಬಾಲಿಬೆ ವಿಶ್ವವಿದ್ಯಾಲಯದ ಸೋಲಾಪುರ ಡಿ.ಎ.ವ್ಹಿ. ಕಾಲೇಜಿನಿಂದ ಬಿ.ಎ ಆನ್ಸರ್ ಪದವಿ ಪಡೆದುಕೊಂಡರು (೧೯೪೭), ಅದೇ ಕಾಲೇಜಿನಲ್ಲಿ ಕನ್ನಡ – ಇಂಗ್ಲೀಷ್ ಆಯ್ದುಕೊಂಡು ಸ್ನಾತಕೋತ್ತರ ಪದವೀಧರಾದರು (೧೯೪೯), ಕರ್ನಾಟಕ ವಿಶ್ವವಿದ್ಯಾಲಯದ ಬೆಲಗಾವಿಯ ಎಸ್.ಟಿ.ಕಾಲೇಜಿನಿಂದ ಬಿ.ಈಡಿ (೧೯೫೩) ಪದವಿ ಪಡೆದರು.

ಶಿಕ್ಷಣಾರ್ಹತೆ ಅವರನ್ನು ಮನೆಯಲ್ಲಿ ಕುಳ್ಳಿರಿಸಿಕೊಡಲಿಲ್ಲ ಬಿ.ಎ. ಆನರ್ಸ್ ಮುಗಿಸುತ್ತಲೇ ಅವರು ಸೋಲಾಪುರದ ಕಾಡದಿ ಹೈಸ್ಕೂಲಿನಲ್ಲಿ ಸಹಶಿಕ್ಷಕರಾಗಿ ಒಂದು ವರ್ಷ ದುಡಿದರು. ನಂತರ ಗುಳೇದಗುಡ್ಡದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಸೇವೆಗೆ ಸೇರಿ ಹತ್ತು ವರ್ಷಗಳ ಕಾಲ ಸಹಶಿಕ್ಷಕರಾಗಿ (೧೯೪೯ – ೫೯), ಮತ್ತೆ ಹತು ವರ್ಷ ಅದೇ ಹೈಸ್ಕೂಲಿನ ಮುಖ್ಯೋಧ್ಯಾಪಕರಾಗಿ ದುಡಿದ ಅವರು ಸ್ಥಳೀಯ ಭಂಡಾರಿ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರೆಂದು ಕೆಲಸ ಮಾಡಿ ಮೂರು ವರ್ಷಗಳ ಬಳಿಕ ಅದೇ ಕಾಲೇಜಿನ ಪ್ರಾಚಾರ್ಯರಾಗಿ ಐದು ವರ್ಷ ಕಾರ್ಯನಿರ್ವಹಿಸಿ ೧೯೭೮ರಲ್ಲಿ ನಿವೃತ್ತರಾದರು.

ಬಸುಪಟ್ಟದ ಅಧ್ಯಾಪಕ ವೃತ್ತಿಗೆ ಹೇಳಿ ಮಾಡಿಸಿದಂತಹ ವ್ಯಕ್ತಿಯಾಗಿದ್ದರು. ಅವರದು ಪರಿಣಾಮಕಾರಿ ಬೋಧನೆ, ಅದರ ಸೊಗಡು ಸವಿದ ವಿದ್ಯಾರ್ಥಿಗಳ ಸಂಖ್ಯೆಯೂ ಅಪಾರ. ಅವರೆಲ್ಲ ಈಗಲೂ ಅದನ್ನು ಮೆಲುಕಾಡಿಸುತ್ತಾರೆ. ವಿಷಯದ ಬಗೆಗಿನ ಆಲ, ಅದರ ಮಗ್ಗಲುಗಳ ವಿಸ್ತೃತ ಅನುಭವ, ರೋಚಕತೆ. ಗಾಂಭೀರ್ಯ ವಿದ್ಯಾರ್ಥಿ ಸಮುದಾಯವನ್ನು ಸುಪ್ರೀತಗೊಳಿಸಿದ್ದಿದೆ. ಅವರಿಗೆ ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲಿ ಪ್ರಬುದ್ಧತೆ ಇತ್ತು. ಹೀಗಾಗಿ ನಿವೃತ್ತಿಯ ತರುವಾಯ ಅವರು ಒಂದು ವರ್ಷ ಅದೇ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಇಂಗ್ಲೀಷ್ ಬೋಧಿಸಿದರು.

ನಿವೃತ್ತ ಜೀವನವನ್ನು ಅವರು ಆರಾಮಾಗಿ ಕಳೆಯಬಹುದಾಗಿತ್ತು. ಆದರೆ ಅವರೊಳಗಿನ ಶಿಕ್ಷಕ ಇನ್ನೂ ಚೈತನ್ಯನಾಗಿದ್ದ. ಹೀಗಾಗಿ ಅವರು ಉತ್ತರ ಕನ್ನಡ ಜಿಲ್ಲೆಯ ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಹೋದರು. ಒಂದು ವರ್ಷದ ಅವಧಿ ಅವರ ಪ್ರಕೃತಿಯನ್ನು ಕಂಗೆಡಿಸಿತು. ಅಲ್ಲಿಯ ಅವಮಾನ ಅವರನ್ನು ಇರಗೊಡಲಿಲ್ಲ. ಹಿಂತಿರುಗಿದ ಅವರು ಇನ್ನೂ ಅಧ್ಯಾಪಕ ವೃತ್ತಿಗೆ ವಿದಾಯ ಹೇಳಬೇಕೆಂದು ನಿರ್ಧರಿಸುವ ವೇಳೆಯಲ್ಲಿ ಬಾದಮಿಯ ಶ್ರೀ ವೀರಪುಲಿಕೇಶಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಬೇಕಾದ ಸನ್ನಿವೇಶ ಒದಗಿಬಂತು. ಮೂರು ವರ್ಷದ ಅವರ ಸಾರಥ್ಯದಲ್ಲಿ ಕಾಲೇಜು ಸುಸ್ಥಿರಗೊಂಡಿತು. ನಂತರ ಒಂದು ವರ್ಷ ಧಾರವಾಡದ ಹುರಕಡ್ಲಿ ಅಜ್ಜಾ ಶಿಕ್ಷಣ ಸಂಸ್ಥೆಯ ಶ್ರೀಮತಿ ಕೆ.ಎಸ್. ಜಿಗಳೂರ ಮಹಿಳಾ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕೆಲಸ ಮಾಡಿದರು.

ಕಲಿಸುವಲ್ಲಿನ ಆಸಕ್ತಿ, ಆಡಳಿತದಲ್ಲಿನ ದಕ್ಷತೆ ಬಸುಪಟ್ಟದ ಅವರನ್ನು ಎತ್ತರಕ್ಕೆ ಒಯ್ದಿದ್ದವು. ಅಧ್ಯಯನ ಅಧ್ಯಾಪನ ಅವರ ವ್ಯಕ್ತಿತ್ವವನ್ನು ಮೆರುಗೊಳಿಸಿದ್ದವು. ಅವರ ಆರ್ಥಿಕ ಪರಿಸ್ಥಿತಿ ಉಚ್ಛಮಟ್ಟದಲ್ಲಿತ್ತು ಎನ್ನುವಂತಿರಲಿಲ್ಲವಾದರೂ ಮೊದಲಿನ ದಾರಿದ್ರ್ಯವಿರಲಿಲ್ಲ. ನೆಮ್ಮದಿಯ ಬದುಕಿಗೆ ಕೊರತೆಯಿರಲಿಲ್ಲ. ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆ, ಹೀಗೆ ಕುಟುಂಬದ ಸೌಖ್ಯಕ್ಕಾಗಿ ಅವರು ಕೊನೆಯವರೆಗೂ ದುಡಿದರು.

ಬಸುಪಟ್ಟದ ಕುಟುಂಬ ಪ್ರೇಮಿಯಾಗಿದ್ದರು. ಓದು, ಬರಹ, ಬೋಧನೆ, ಆಡಳಿತ ಇವುಗಳ ಮಧ್ಯದಲ್ಲೂ ಅವರು ಕುಟುಂಬವನ್ನು ನಿರ್ಲಕ್ಷಿಸಿರಲಿಲ್ಲ. ಹದಿನೆಂಟು ವಯಸ್ಸಿನಲ್ಲಿ ಅವರ ಮದುವೆಯಾಗಿತ್ತು. ಧರ್ಮಪತ್ನಿ ನೀಲವ್ವ ಸಾತ್ವಿಕ ಸ್ವಾಭಾವದ ಹೆಣ್ಣು ಮಗಳು ಗಂಡ ಹೆಂಡಿರದು ಗಂಧ ತಿಡಿದ ಬದುಕು. ಪರಸ್ಪರ ತಿಳುವಳಿಕೆಯ ಪ್ರೀತಿ ತುಂಬಿದ ಆದರ್ಶದಾಂಪತ್ಯ, ನಾಲ್ವರು ಪುತ್ರರು, ಮೂವರು ಪುತ್ರಿಯರು, ಭಾವಜೀವಿ ಗಂಡನ ಬದುಕಿಗೆ ಶ್ರೇಯಸ್ಸು ತಂದ ಅನೂನತೆ ನೀಲವ್ವಳದು. ಆ ಕೃತಜ್ಞತೆಗೂ ಎನ್ನುವಂತೆ ಬಸುಪಟ್ಟದ ಅವರು ‘ಗೆ’ ಎನ್ನುವ ಪದ್ಯಗಳಲ್ಲಿ ಮಡದಿಯ ಪ್ರಭಾವವನ್ನು ನೆನಪಿಸಿಕೊಳ್ಳುತ್ತಾರೆ.

ಎನ್ ಕಣ್ ಮನದಲ್ಲಿ ನಿನ್ನ ಮೂರುತಿ ತುಂಬಿ
          ಅಗಲದೊಲು ಎಂದೆಂದು, ನೀನು ನಿಂದಿರುವೆ
          ಹೃದಯ ಗದ್ದುಗೆ ಹತ್ತಿ ಅಳುತಿಹ ಎನ್ನರನೆ
          ಎನ್ನ ಬಾಳಿಗೆ ಅತುಲ ಸೊಗುವ ತರುತಿರುವೆ

ಜತೆಗಾತಿಯ ಬಗ್ಗೆ ಹೀಗೆ ತಮ್ಮ ಮನದ ಮಿಡಿತದ ಭಾವನೆಗಳನ್ನು ಅಭಿವ್ಯಕ್ತಿಸುವ ಬಸುಪಟ್ಟರು ಕುಟುಂಬ ಪ್ರೇಮದ ಸಾತ್ವಿಕತೆಗೂ ಬೆಲೆ ತರುತ್ತಾರೆ.

ಕಾವ್ಯನೆಯ್ಗೆ

ಬಸುಪಟ್ಟದರ ಕುಲಕಸುಬು ನೇಕಾರಿಕೆ ಎಂಬುದು ಈಗಾಗಲೇ ತಿಳಿದಿರುವ ಸಂಗತಿ. ನೆಯ್ಗೆಯ ಕುಶಲಗಾರಿಕೆಯನ್ನು ಕರಗತವಾಗಿಸಿಕೊಂಡಿದ್ದ ಅವರು ಬಿಡುವಿನ ವೇಳೆಯಲ್ಲಿ ಮಗ್ಗದ ಕುಣಿಯಲ್ಲಿ ಕುಳಿತು ಸುಂದರ ಖಣಗಳನ್ನು ನೆಯ್ಯುತ್ತಿದ್ದರು. ನೂಲಿನ ಸೂಕ್ಷ್ಮ ಎಳೆಗಳನ್ನು ಒಂದರೊಳಗೊಂದು ಹಾಸುಹೊಕ್ಕಾಗಿಸುವ ನಯಗಾರಿಕೆಯನ್ನು ದಕ್ಕಿಸಿಕೊಂಡಿದ್ದ ಬಸುಪಟ್ಟದ ಕಾವ್ಯ ಸೃಷ್ಠಿಯಲ್ಲೂ ಅದನ್ನು ಗಾಢವಾಗಿಸಿ ಕೊಂಡಿದ್ದರು.

ಅವರ ಮೊದಲ ಕವನ ಸಂಕಲನ “ವೀಣಾ – ನಾದ” ಪ್ರಕಟವಾಗಿದ್ದು ೧೯೪೪ ರಲ್ಲಿ ಆಗ ಅವರಿನ್ನೂ ಇಂಟರ್ ಆರ್ಟ್ಸ ಓದುತ್ತಿದ್ದ ಸಮಯ ಅದಕ್ಕೂ ಪೂರ್ವದಲ್ಲಿ ಅವರ ಕವಿತೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅವೆಲ್ಲ ಈ ಸಂಕಲನದಲ್ಲಿದ್ದವು.

‘ಅರಿಕೆ’ ಯಲ್ಲಿ ಕವಿ ಬಸುಪಟ್ಟದ ಅವರು, “ಕಬ್ಬದೊಂಟದಲ್ಲಿ ಆಟಕ್ಕೆ ಹೋದಾಗ ಕಟ್ಟಿಗಂಟಿದ ರವದೆ ತಂದುದನ್ನು ಬಿರಿದಲರನ್ನಾಯ್ದುಕೊಳ್ಳಬೇಕೆಂದು ಹೋದಾಗ ಹೂವು ನಿಲುಕದೆ ಅದರ ಕೆಲ ಪಕಳೆಗಳನ್ನು ಹರಿದುಕೊಂಡು ಬಂದುದು ನೆನಪಾಯಿತು. ಅವನ್ನೇ ತೆಗೆದುಕೊಂಡು ಪೀ ಮಾಡಿ ಊದಿದೆ. ದನಿ ಹೊರಟಿತು ಹಾಗೆ ಊದ ತೊಡಗಿದೆ. ಊದತೊಡಗಿದಂತೆ ನನಗರಿಯದೇ ನಾಲ್ಕಾರು ಸ್ವರಗಳು ಸ್ಫಟಿಸಿದವು. ವಾಣಿಯ ‘ವೀಣಾನಾದ’ ವೇ ಈ ‘ಸ್ವರ’ ಎಂದು ಭಾವಿಸಿ ಪೂಜೆ ಸಾಗಿಸಿದರೆ ಜನ ಅದೆಷ್ಟರ ಮಟ್ಟಿಗೆ ನಂಬಬಹುದು ನಮ್ಮ ಹುಡುಗತನದ ಮಾತನ್ನು? ಅಂತೂ

ವಾಣಿಯ ವೀಣೆಯ ನುಡಿಸೆ ಹೊರಟ ವೀಣಾನಾದ
          ಗಾಳಿಯಲೆಯಲಿ ಬೆರೆತು ಲೀನವಾಯಿತು
          ಇನಿದಾದ ಬಿರುನಾದ ಸರವು ನಾದವು ಬೆರೆತು
          ಒಂದೆ ನಾದವನಾಗಿ ಗಾನವಾಯ್ತು

ಎಂದು ಹೇಳಿಕೊಂಡಿದ್ದಾರೆ. ಈ ಸಂಕಲನಕ್ಕೆ ಮುನ್ನುಡಿ ಬರೆದ ಶಂಕರ್ ಮೂಗಿಯವರು “ಈ ವೀಣಾ – ನಾದ ಎಂಬ ಕವನ ಸಂಗ್ರಹದಲ್ಲಿಯ ಅನೇಕ ಕವನಗಳಲ್ಲಿ ಕವಿಯ ಪ್ರತಿಭೆ ಚೆನ್ನಾಗಿ ಒಡಮೂಡಿದೆ. ನೇಯಿಗ ‘ಬರಿದೆಲೆಯ ಬಾಲೆ’ ‘ನಲಿಯೋಣ ಬಾರಾ’ ‘ಬಾಳ್ ಬೆಳಗು’ ಈ ಕವನಗಳಲ್ಲಿ ತಮ್ಮ ಭಾವಗಳನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಅವು ಓದುಗರನ್ನು ಆನಂದಗೊಳಿಸಿ ಭಾವನೆಗಳನ್ನು ಸ್ಥಿರಗೊಳಿಸುತ್ತವೆ. ‘ಅನಿಲಂಗೆ’ ’ಸಾಮಸುಂದರಿ’ ‘ಉಷಾ’ ‘ಮಳೆಬಂತು’ ಇವೆಲ್ಲ ಕವನಗಳಲ್ಲಿ ಸೃಷ್ಠಿ ಸೌಂದರ್ಯದಿಂದೊದಗುವ ಹರುಷದ ಹೊಗರು ಕಂಡುಬರುವುದು ಮತ್ತು ಮಗುವಿನ ನಗೆ ಎಂಬ ಕವನದಲ್ಲಿ ಮಗುಗಳ ನಗೆಯೊಡನೆ ಬೆರೆತು ಆಡುವ ಕವಿಯ ಸಹಜ ಪವೃತ್ತಿಯು ತೋರುವುದು. ಇವರು ಎಳೆಯ ಕವಿಗಳು. ಈ ಮಟ್ಟದಲ್ಲಿ ಕವಿತಾ ಸಾಮರ್ಥ್ಯವು ಇದೆ ಎಂದು ಹೇಲಬಹುದು” ಎಂದು ಕವಿಯನ್ನು ಉತ್ತೇಜಿಸಿದ್ದಾರೆ.

“ರತ್ನದೀಪ” ಬಸುಪಟ್ಟದರ ಎರಡನೆಯ ಕವನ ಸಂಕಲನ. ಅದು ಪ್ರಕಟವಾದ ವರ್ಷ ೧೯೫೨. ಈ ಸಂಕಲನವನ್ನು ಕವಿ ತಮ್ಮ ವಿದ್ಯಾಗುರುಗಳಾದ ವರಕವಿ ದ.ರಾ. ಬೇಂದ್ರೆಯವರಿಗೆ ಅರ್ಪಿಸಿದ್ದಾರೆ. ಬೇಂದ್ರೆಯವರು ರಸಗಂಗೆಯಂತಿರುವ ತಮ್ಮ ವಿಚಾರವಾಹಿನಿಯಿಂದ ಬಸುಪಟ್ಟದರ ಜೀವನ ದೃಷ್ಠಿಯಿಂದ ವಿಶಾಲವಾಗಿ ಉನ್ನತ ಧ್ಯೇಯ, ಉಚ್ಚ ವಿಚಾರಗಳೆಡೆಗೆ ಹೊರಳಿಸಿದ ಗುರುವರ್ಯರೆನಿಸಿದ್ದಾರೆ.

‘ರತ್ನದೀಪ’ ಸಂಕಲನದ ಕವಿತೆಗಳ ಹುಟ್ಟಿಗೆ ಕಾರಣವಾಗಿರುವ ಸಂಗತಿಗಳನ್ನು ಕವಿ ತಮ್ಮ ‘ಅರಿಕೆ’ಯಲ್ಲಿ ಹೀಗೆ ನಿವೇದಿಸಿಕೊಂಡಿದ್ದಾರೆ. “ಈ ರತ್ನದೀಪದಲ್ಲಿ ಸಂಗ್ರಹಿಸಲ್ಪಟ್ಟ ಕವನಗಳೆಲ್ಲ ಒಂದಿಲ್ಲೊಂದು ರೀತಿಯಲ್ಲಿ ನನ್ನ ಬಾಳಿನ ಸ್ಥಿತಿಯನ್ನು ನಿರೂಪಿಸುತ್ತವೆ. ನನ್ನ ಬಾಳಿನಲ್ಲಿ ಹರಡಿದ್ದ ನಿರಾಶಮಯವಾದ ವಿಷಪೂರಿತ ವಾತವರಣವನ್ನು ನೆನದರೆ, ಮನ ಈಗಲೂ ಹೌಹಾರುತ್ತದೆ; ಈಗಲೂ ಕಂಪಿಸುತ್ತದೆ. ಬಾಳಿನ ಆ ಸಂಕಷ್ಟಗಳಿಗೆ ಹೆಗಲುಗೊಡುವ ಪ್ರಸಂಗ ಬಂದಾಗ ಜೀವ ತತ್ತರಿಸಿ ಹೋಗಿತ್ತು. ನನ್ನ ಬಾಳಿನ ಸುಖ – ದುಃಖ, ಸುಖಕ್ಕಿಂತ ಹೆಚ್ಚಾಗಿ ದುಃಖವೇ ಮನಸ್ಸನ್ನು ಭಾವನೆಗಳ ಮಲ್ಲ ಶಾಲೆಯನ್ನಾಗಿ ಮಾರ್ಪಡಿಸಿತು. ಸುಖ – ದುಃಖದ ಆ ಹಲಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಅದೆಷ್ಟೇ ತಡೆಹಿಡಿದರೂ ಜೀವ ಸುಮ್ಮನಿರದೆ ಅವುಗಳನ್ನು ಕುರಿತು ಹಾಡಿತು. ತನ್ನ ಗೋಳನ್ನು ತೋಡಿಕೊಂಡಿತು. ಕಾರ್ಗತ್ತಲೆ ಕವಿದು ಬಂದಂತಾಗಿ ದಿಕ್ಕುಗಾಣದೆ ಜೀವತೊಳಲ ತೊಡಗಿದಾಗ, ಅಂತರಾತ್ಮ ಸಾತ್ವಿಕ ತೇಜೋಬಿಂಬವೊಂದೇ ದಾರಿತೋರಬಲ್ಲುದೆಂಬ ಭಾವನೆ ಬಂದಿತು. ಆ ಭಾವನೆಯೇ ನನ್ನ ರತ್ನದೀಪವಾಯಿತು”.

ಈ ಕೃತಿಗೆ ಮುನ್ನುಡಿ ಬರೆದ ಶ್ರೀಧರ ಖಾನೋಳಕರ “ಇದೊಂದು ಶ್ರೀ ಬಸುಪಟ್ಟದ ಅವರು ಕಟ್ಟಿದ ಸುಂದರವಾದ ಕಾವ್ಯ ಸಂಗ್ರಹ. ಹೀಚಿನಿಂದ ಹಣ್ಣು ಯಾವ ಗುಣಗಳುಳ್ಳದೆಂಬುದನ್ನು ಕಂಡು ಹಿಡಿಯುವುದು ಬಹಳ ಕಠಿಣವಾದ ಕೆಲಸ. ಈ ಕವಿತಾಮಾಲೆಯಲ್ಲಿಯ ಪ್ರತಿಯೊಂದು ಹೂವು ಸುಗಂಧಿತವಾಗಿದೆ. ಮಗಮಗಿ ಸುತ್ತಲಿರ್ಪ ನರಸುಯ್ ಪ್ರತಿಯೊಂದು ಹೂವಿನಲ್ಲಿಯೂ ಹೊರಚಿಮ್ಮುತಿದೆ. ಇದರ ಪರಿಚಯವನ್ನು ಕನ್ನಡಿಗರಿಗೆ ಮಾಡಿಕೊಡುವ ಸದ್ಭಾಗ್ಯ ನನ್ನ ಪಾಲಿಗೆ ಬಂದಿದೆ……….. ರತ್ನದೀಪವನ್ನು ಮೊದಲಿನಿಂದ ಕಡೆತನಕ ಓದಿದರೂ ಹಾಡಿದರೂ ಎಲ್ಲಿಯೂ ಕಠಿಣತೆ ಎಂಬುದೇ ಇಲ್ಲ. ಎಲ್ಲವೂ ಸರಳವಾದದ್ದು, ಸುಂದರವಾದದ್ದು ಪ್ರತಿಯೊಂದು ಪದದಲ್ಲಿ ಇದ್ದ ಅರ್ಥಕ್ಕೆ ಸರಿಯಾದ ಶೈಲಿಯೂ, ಸರಿಯಾದ ಶಬ್ದ ಮಾಧುರ್ಯವೂ ಹೊಂದಿಕೊಂಡಿರುವುದರಿಂದ ಕೆಲವು ಕವಿತೆಗಳನ್ನು ಎಷ್ಟು ಸಲ ಹಾಡಿದರೂ ಸಂತೋಷ ಕಡಿಮೆಯಾಗುವುದಿಲ್ಲವೆಂಬುದನ್ನು ಈ ಕವಿತೆಗಳನ್ನು ಹಾಡಿಯೇ ನೋಡಬೇಕು ‘ರತ್ನದೀಪ’ ಹೊಸ ಮಾದರಿಯ ಕವಿತಾ ಸಂಗ್ರಹ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಮುಕುಟಪ್ರಾಯವೆನ್ನುವಂತೆ ಬೇಂದ್ರೆಯವರ ಹರಕೆಯೂ ಇದೆ. “ಶ್ರೀ ಬಸುಪಟ್ಟದ ಅದರ ಕವಿ ದರ್ಶನವು ವೈಯಕ್ತಿಕವಾಗಿ ಪ್ರೇಮ ಪ್ರಕಾಶವನ್ನು ಸಾಮೂಹಿಕವಾಗಿ ಜ್ಞಾನಪ್ರಕಾಶವನ್ನು ಕಾಣಲು, ತೋರಲು ತವಕಿಸುತ್ತದೆ. ‘ರತ್ನದೀಪ’ ಅದರ ಮುಂಬೆಳಗಿನ ಮುಂಚೂಣಿ, ಶಿವವು ಅವರಿಗೆ ದಾರಿಯನ್ನು ತೋರಲಿ, ಶಕ್ತಿಯು ಆ ದಾರಿಯಿಂದ ನಡೆಯುವ ಸಾಮರ್ಥ್ಯ ದಯಪಾಲಿಸಲಿ. ಆಗ ಅದರ ಸೌಂದರ್ಯ” ಎಂದು ಕವಿ ಬೇಂದ್ರೆಯವರು ತಮ್ಮ ಶಿಷ್ಯನನ್ನು ಆಶೀರ್ವದಿಸಿದ್ದಾರೆ.

ಗುರುವಿನ ಹರಕೆಯೊಂದರಿಂದಲೇ ಸಂತೋಷಿಸಿದ್ದ ಬಸುಪಟ್ಟದ ಅವರ ಮೂರನೇಯ ಕವನ ಸಂಕಲನ “ಚೈತ್ರಾಗಮನ” ಕ್ಕೆ ದ.ರಾ. ಬೇಂದ್ರೆಯವರ ಮುನ್ನುಡಿ ನೀಡಿ ಅತೀವ ಪರವಶರನ್ನಾಗಿಸಿದ್ದಾರೆ. ಜೀವನದ ವಿವಿಧ ಮುಖಗಳಿಗೆ ಸಂಬಂಧಿಸಿದ ಕವನಗಳ ಈ ಸಂಕಲನ ಪ್ರಕಟವಾಗಿದ್ದು ೧೯೫೮ರಲ್ಲಿ.

“ಚೈತ್ರಾಗಮನ ಕಾವ್ಯ ಸಂಗ್ರಹ ಪ್ರಕಟಿಸಿ ಶ್ರೀ ಬಸುಪಟ್ಟದ ಅವರು ಇಂದಿನ ಕವಿಗಣದೊಳಗಿನ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಿದ್ದಾರೆ……….. ಇಲ್ಲಿಯ ಇಪ್ಪತೊಂಬತ್ತು ಕವನಗಳಲ್ಲಿ ವಿವಿಧ ದ್ರವ್ಯವಿದೆ. ಸೌಂದರ್ಯದ ಇಣುಕು ನೋಟ, ಗುಡ್ಡ – ಹೊಳೆ – ಮರಗಳಿಂದ ಕಲಿತಾ ಪಾಠ, ಪ್ರಣಯದ ಪಲ್ಲವಿ, ವರುಷ – ವರುಷವೂ ಬಂದು ಹೋಗಿ ಒಂದೊಂದು ನೀತಿ – ನಯ, ಮಿಂಚಿಸುವ ದೀಪಾವಳಿಯ ಸೊಬಗು, ನಾಡಿನ ಆಂದೋಲನದಲ್ಲಿ ಆಗುವ ಏರಿಳಿತಗಳ ಪರಿಣಾಮ, ನಮ್ಮ ರಾಷ್ಟ್ರದ ಸುಖ ದುಃಖ ಎಲ್ಲವೂ ಕವಿ ಚಿತ್ತದಲ್ಲಿ ವಿಚಾರಲಹರಿಗಳನ್ನೋ, ಭಾವಲಹರಿಗಳನ್ನೋ ಎಬ್ಬಿಸದೇ ವ್ಯರ್ಥ ಹೋಗುವುದಿಲ್ಲ. ಆ ಲಹರಿಗಳು ಮಾತಿನಲ್ಲಿ ಕಟ್ಟುಪಡೆದು ಪುನರುದ್ದೀಪಕ ಶಕ್ತಿಯನ್ನು ಪಡೆದಿದೆ……..

ಶ್ರೀ ಬಸುಪಟ್ಟದವರ ಕಾವ್ಯ – ಪ್ರಕೃತಿ ಸುಕುಮಾರ, ಲಲಿತ, ಸೌಮ್ಯ ಅಲ್ಲಿ ಕ್ಷೋಭೆ ಹೆಚ್ಚಿಲ್ಲ ಉದ್ವೇಗದ ಲಹರಿ ಒಂದಾದರೆ, ಉತ್ಸಾಹದ ಲಹರಿ ನಾಲ್ಕು ದುಃಖ ಸಂವೇದನೆಗೆ ಅದು ಅಪರಿಚಿತವಲ್ಲ. ಆದರೆ ಅದರಲ್ಲಿ ಆಕ್ರೋಶ, ರಂಭಾಟ ಇಲ್ಲ ಅವರ ಪ್ರಣಯದ ದರ್ಶನದಲ್ಲಿ ಸ್ವಚ್ಛಂದೋನ್ಮಾದವಿಲ್ಲ ಏನಿದೆ? ಕವಿ ಜೀವನದ ಸೌಮನಸ್ಸವಿದೆ. ಅದರ ಪುಷ್ಪಲತೆಗೆ ಅವರೂ ಕಾಯಬೇಕು; ಯಾರು ಕಾಯಬೇಕು ಅಲ್ಲಿಯವರೆಗೆ ಈ ಚೈತ್ರದ ಸಿಗುರಿಗೆ ದೃಷ್ಠಿ ತಾಕದಂತೆ ಅದರ ದೈವ ಅದನ್ನು ಕಾಪಾಡುತ್ತಿದೆ. ಇದು ಒಂದು ಚಿಹ್ನೆ.

ಈ ಕವಿಯ ಉಕ್ತಿಯ ವಿಲಾಸವು ಸಾಮಾನ್ಯದ ಮಟ್ಟವನ್ನೇ ಏರಿಸುತ್ತಿದೆ. ಎಲ್ಲಿಯೂ ದಡಬಡವಿಲ್ಲ – ತಂಪು, ಮಂದ – ನುಂದ, ಮೃದಗಂಧ ವಸಂತ ಮಾರುತನ ಸಂಚಾರದಂತೆ ಇಲ್ಲಿಯ ಸೌಂದರ್ಯದರ್ಶನವು ಕಣ್ಣು ಕುಕ್ಕುವುದಿಲ್ಲ. ಆದರೂ ಸಹೃದಯರಿಗೆ ಗೋಚರವಾಗಲು ಪ್ರಯಾಸವಿಲ್ಲ ಕವಿಯ ಮುಂದಿನ ಮಾರ್ಗದಲ್ಲಿ ಬೇರೆ ದರ್ಶನ ಸುಖವು ಕಾದಿದೆ” ಎಂದು ಹೃದಯ ತುಂಬಿ ಹಾರೈಸಿದ್ದಾರೆ.

೧೯೮೯ರಲ್ಲಿ ಬಸುಪಟ್ತದ ಅವರ ‘ವೈಜಯಂತಿ’ ‘ಸತ್ತವರು ನಾವಲ್ಲ’ ಎಂಬ ಎರಡು ಕಾವ್ಯ ಸಂಗ್ರಹಗಳು ಪ್ರಕಟವಾಗಿವೆ. ಡಾ. ಎಸ್.ಎಸ್. ಬಸುಪಟ್ಟದವರ ಪೌರ ಸನ್ಮಾನ ಸಮಿತಿಯವರು ಪ್ರಕಟಿಸಿದ ‘ಸತ್ತವರು ನಾವಲ್ಲ’ ಪ್ರಕಟಿಸಿದರೆ ಧಾರವಾಡದ ಜಾಗೃತ ಭಾರತ ವೈಜಯಂತಿಯನ್ನು ಪ್ರಕಟಿಸಿದೆ.

‘ವೈಜಯಂತಿ’ ಗೆ ಚೆನ್ನವೀರ ಕಣವಿಯವರು ಬರೆದ ಮುನ್ನುಡಿಯ ಮಾತು ಗಮನಾರ್ಹವಾಗಿವೆ. ಇಲ್ಲಿಯ ವ್ನಾಲ್ವತ್ನಾಲ್ಕು ಕವನಗಳ ವಸ್ತುವಿನಲ್ಲಿ ಸಾಕಷ್ಟು ವೈವಿಧ್ಯವಿದೆ. ಪ್ರಕೃತಿ ಸೌಂದರ್ಯ, ದೈವೀಶ್ರದ್ಧೆ, ದೇಶದ ಆಗು – ಹೋಗುಗಳು, ನಾಡು – ನುಡಿಯ ಕಳಕಳಿ, ಹಬ್ಬಗಳ ಸಂಭ್ರಮ, ವಿಶಿಷ್ಟ ವ್ಯಕ್ತಿಗಳು, ಜೀವನದ ಸುಖ ದುಃಖ ಇವೆಲ್ಲವೂ ಕವಿಯ ಮನಸ್ಸಿನಲ್ಲಿ ಎಬ್ಬಿಸಿದ ವಿಚಾರ ಲಹರಿಗಳು, ಭಾವ ತರಂಗಗಳು ನುಡಿಯಲ್ಲಿ ಛಂದದ ನಡಿಗೆಯಲ್ಲಿ ಒಡಮೂಡುತ್ತ ಬಂದಿವೆ. ಜೀವನದ ಮಾಗುವಿಕೆಯಿಂದ ಒದಗುವ ಮಾಧುರ್ಯವನ್ನು ಒಂದಲ್ಲ ಒಂದು ರೀತಿಯಲ್ಲಿ ಈ ಕವನಗಳು ಓದುಗರಿಗೆ ನೀಡಬಲ್ಲವು……..

ನವೋದಯ ಮಾರ್ಗದ ಸಾಲುಮರಗಳು ನೆರಳಿನಲ್ಲಿ ಸಾಗಿ ಬಂದಿರುವ ಬಸುಪಟ್ಟದ ಅದೇ ನಂದ – ಬಂಧಕ್ಕೆ; ಅದೇ ತಂತು – ಇಂತಿಗೆ, ಅದೇ ಭಾಷೆ – ಭಾವಕ್ಕೆ ಒಳಗಾಗಿದ್ದಾರೆ……..” ಈ ಮಾತುಗಳು ಬಸುಪಟ್ಟದರ ಒಟ್ಟು ಕಾವ್ಯಕ್ರಿಯೆಯ ವ್ಯಾಖ್ಯಾನವೆನಿಸಿದೆ.

ಆದರೆ ‘ಸತ್ತವರು ನಾವಲ್ಲ’ ಕವನಗಳಲ್ಲಿ ನವ್ಯದ ವಿನ್ಯಾಸವನ್ನೂ ಕವಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮನುಷ್ಯ ಜೀವನದ ಮೌಲ್ಯಗಳನ್ನು ಪಲ್ಲಟವಾಗುವ ಸಂದರ್ಭಗಳನ್ನು ಸವಲಾಗಿ ಸ್ವೀಕರಿಸುವ ಮನೋಧರ್ಮವನ್ನು ವ್ಯಕ್ತಪಡಿಸಿದ್ದಾರೆ. ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯತೆ ಹರಡಿಗೊಂಡಿದೆ. ಬದುಕಿನ ಜಿಗುಟತನವಿದೆ ವ್ಯವಸ್ಥೆಯ ಬಗ್ಗೆ ಆಕ್ರೋಶವು ಅದನ್ನು ಹಾಳುಗೆಡುವಿದ ನೀಚರ ಬಗ್ಗೆ ಎಚ್ಚರಿಕೆಯೂ ಕವಿಯ ಕಾಳಜಿಯನ್ನು ಪ್ರಧಾನವಾಗಿ ತೋರಿಸುತ್ತವೆ.

ನಿಸರ್ಗದೊಲವು

ಕವಿಯ ಕಾವ್ಯಕ್ಕೆ ಪ್ರೇರಕವಾದದ್ದು ನಿಸರ್ಗ ಮಲೆನಾಡಿನ ಪ್ರಕೃತಿಯ ಚೇಲುವಿನಷ್ಟು ಬಯಲುನಾಡಿನ ಪ್ರಕೃತಿ ಚೆಲುವು ಶ್ರೀಮಂತವಲ್ಲವಾದರೂ ಅದಕ್ಕೆ ಅದರದೇ ಆದ ವಿಶಿಷ್ಟತೆಯಿದೆ. ಅದರ ಆಹ್ಲಾದತೆಗೆ ಕವಿ ಬಸುಪಟ್ಟದ ಮಾರು ಹೋಗಿದ್ದಾರೆ. ಅಲ್ಲಿನ ಗುಡ್ಡ – ಬೆಟ್ಟ, ಹೊಳೆ – ಹಳ್ಳ, ಗಿಡಮರ, ಹೂವು – ಬಳ್ಳಿಗಳ ಸೆಳೆತಕ್ಕೆ ಒಳಗಾಗಿದ್ದಾರೆ. ಬಾನು – ಭೂಮಿ, ಗಾಳಿ – ಬೆಳಕಿಗೆ ಅರಳಿಕೊಂಡಿದ್ದಾರೆ. ಹೀಗಾಗಿ ನಿಸರ್ಗ ಕುರಿತು ಹಾಡುವ ಅವರ ದನಿಗೆ ದಣಿವು ಎಂಬುದೇ ಇಲ್ಲ. ಪ್ರಕೃತಿ ದರ್ಶನದಿಂದ ಮನುಷ್ಯ ಬದುಕಿಗೆ ದೊರಕುವ ಹೊಸ ಚೈತನ್ಯ ಅವರಿಗೆ ಮಹತ್ವಪೂರ್ಣವೆನಿಸದೇ ಇಲ್ಲ.

ಕವಿಯ ಕಣ್ಣಿಗೆ ನೆಲವೆಲ್ಲ ಸುಂದರವಾಗಿ ಚೆಲುವಿನ ಐಸಿರಿಯಿಂದ ಮರೆಯುತಿದೆ. ದವಸ – ಧಾನ್ಯ. ರುಚಿಯಾದ ಹಣ್ಣು ಹಂಪಲ ಸಂವೃದ್ಧಿಯ ನೆಲ ಜಗ ಜೀವರನ್ನು ಹರುಷದ ಹಳೆಯಲಿ ತಣಿಸುವಂತೆ ಕಾಣಿಸುತ್ತಿದೆ. ಸುಮಗಳು “ತನ್ನಂತೆ ಮಾನವನ ಬಾಳಿರುವುದೆಂದು” ಸಾರಿದರೆ, ಸೌಂದರ್ಯ ದಾಸರನು ಸಂಪ್ರೀಯಗೊಳಿಸುವ ನೇಸರನನ್ನು ಮೂಡಲವನೀತೆ ಹಣೆಗೆ ಕುಂಕುಮವಿಟ್ಟು ಸ್ವಾಗತಿಸಿದರೆ, ಗಿರಿ – ಗಗನಗಳು ಗಲ್ಲಗಲ್ಲವ ಹಚ್ಚಿ ಲಲ್ಲೆಯಾ ತಾನಾಡುವಂತೆ ತೋರುತ್ತವೆ. ‘ಜಗದೊಳಗೆ ಲಯ ವೆಂಬುದಿಲ್ಲವಾತ್ಮಕ’ ಎಂದು ಜೀವ ಕೋಗಿಲೆ ಹಾಡಿಕೊಂಡರೆ ನೀಲಿಯ ಆಕಾಶದ ಮೇಲೆ ತೇಲುವ ಪಕ್ಷಿ ದೇವನು ಕತ್ತಿ ನಿಲಿಸಿರುವ ನಕ್ಷಿಯಂತೆ ಕಾಣಿಸುತ್ತದೆ. ಹಕ್ಕಿಗಳ ಕಲರವ ಗಂಧರ್ವ ಕಿನ್ನರದ ರಮಣೀಯ ಕಂಠಕ್ಕೆ ಸಮಾನವಾಗಿದೆ. ಸಂತೆ ಹೆಣ್ಣಿನ ಮೋಗವು ಸೂಸುಗೆಂಪಾಗಿದೆ. ಚಂದಿರನು ವಿಶ್ವಹೂಜೆಯಲಿ ಹಾಲನು ತುಂಬಿ ತಂದು ಜನತೆಯ ನಲಿವು ಹೆಚ್ಚಿಸಿದ್ದಾನೆ. ಮುರುಳೀಧರ ಜಗದೊಳಗೆಲ್ಲೆಡೆ ಜೀವ ತುಂಬಿದ್ದಾನೆ. ಭಾರತ ಮಾತೆಯ ವರಧಾನ ಹರಿಯಲು ನಸುಕಿನ ನೇಸರ ರನ್ನದ ಹರಳು ಕೆಚ್ಚಿದ ಚಿನ್ನದ ರಥವೆರಿದ್ದಾನೆ. ತಾರೆಯು ನಾಡ ಮಾತೆಯ ಮುಕುಟಕೆ ಕೆಚ್ಚಿದ ರತ್ನದ ಹಾಗೆ ಹೊಳೆದಿದೆ. ಜಗದೊಳಿರುವ ಪ್ರಾಣ ತಂತುಯೆನಿಸಿರುವ ಮಳ ಇಳೆಗೆ ಬಂದು ಹೊಸಕಳೆ ತಂದಿದೆ. ಮರವೊಂದು “ಸುಳಿಗಾಳಿ, ಫಲಪುಷ್ಪ, ನೆಳಲುಗಳ ನರ್ಪಿಸುತ| ಈ ಜಗದ ಸೇಲೆಯನು ಕೈಕೊಂಡರೆ”, ‘ಹೊಳೆ’ಯೊಂದು

ತುಂಬು ಹೊಳೆ ತಾ ಹರಿದು ದೂರದೂರದಲಿರುವ
          ಎರಡು ದಡಗಳನಿಲ್ಲಿ ಕೂಡಿಸುತಲಿಹುದು;
          ಎರಡೆಲ್ಲ ಒಂದಾಗಿ ನಿಂದಿರಲಿ ಬಾಳಿನಲಿ
          ಎಂಬ ನುಡಿಯನು ಇಳೆಗೆ ಊಡಿಸುತಲಿಹುದು
          (ಹೊಳೆ – ಚೈತ್ರಾಗಮನ)

ಹೀಗೆ ನಿಸರ್ಗದ ಸತ್ಯಸೌಂದರ್ಯಕ್ಕೆ ಮಾರು ಹೋದ ಕವಿ ಅಲ್ಲಿ ದೇವಕಾರುಣ್ಯವನ್ನು ದರ್ಶಿಸುತ್ತಾನೆ. ಅಲ್ಲಿರುವ ಚೈತನ್ಯ ತನ್ನ ಬದುಕಿಗೆ ಶ್ರೇಯಸ್ಸು ತರಬಲ್ಲದೆಂದು ನಂಬುತ್ತಾನೆ. ಅ ನಂಬಿಕೆಯಲ್ಲಿ ಭಯ ನೀಗಿಕೊಳ್ಳಲು ಕಾತರಿಸುತ್ತಾನೆ.

ನಿನ್ನ ಕರುಣೆಯ ಕಿರಣ ಕಣಕಣದಿ ತೋರಿಬರೆ
          ನಾನೇಕೆ ಭಯಪಡಲಿ ಎನ್ನ ದೊರೆಯೆ?
          ನಿನ್ನ ಕರುಣೆಯ ಕಿರಣ ಸ್ಪರ್ಶಮಾತ್ರದಿ ಇಲ್ಲಿ
          ಪ್ರತಿವಸ್ತು ತಾವೆಲ್ಲ ಚೈತನ್ಯದಾ ಸರಿಯೆ
(ನಿನ್ನ ಕರುಣೆ – ವೈಜಯಂತಿ)

ಜೀವಪ್ರೀತಿಲೋಕಪ್ರೀತಿ

ಕವಿ ಬಸುಪಟ್ಟದರು ಜೀವಪ್ರೀತಿಯ ತುಡಿತವುಳ್ಳವರು. ಆದರೆ ದುಃಖ ದುಗುಡಗಳು ಹೂವಕೊರೆವ ಕೀತದಂತೆ ಮನವನ್ನು ಘಾಸಿಗೊಳಿಸಿದ ಕ್ಷಣದಲ್ಲಿ ಜೀವದ ಬಗ್ಗೆ ಬೇಸರ ಹುಟ್ಟಿ ‘ಸಾವಹೂವೇ ಬೇಗ ಬಾರ | ಮಧುರ ಸೊಗವ ಬೇಗ ತಾರ’ ಎಂದು ಹಂಬಲಿಸಿದವರು ಆವರಿಸಿದ ಭಯ, ಬದುಕಿಗೆ ಆಸ್ಪದವೇ ಇಲ್ಲವೆನ್ನುವ ಸನ್ನಿವೇಶ ಸೃಷ್ಟಿಸಿದಾಗ ಕವಿ ಮೃತ್ಯುದೇವಿಯನ್ನು ಕರೆದಿದ್ದಿದೆ. ಆದರೆ ಬದುಕಿನ ಉತ್ಸಾಹಕ್ಕೆ ಪ್ರೇರಣೆ ದೊರೆತಾಕ್ಷನ ಸಾವನ್ನು ಮರೆತು, ಎದೆಯನ್ನು ಗಟ್ಟಿಗೊಳಿಸಿಕೊಂಡು ಸಾವಿಗಾಗಿ ಕಾತರಿಸುವವರನ್ನು ದೃಢಗೊಳಿಸುವಲ್ಲಿ ಕವಿ ಆಸ್ಥೆ ತೋರುತ್ತಾರೆ.

ಬೀಳುಗಳ ನೋಡಿ ನೀ ಬೆಚ್ಚಬೇಡ
          ಬಾಳಿನಲಿ ಅವುಗಳನೆ ನೆಚ್ಚಬೇಡ;
          ಬೀಳಿನೊಲು ಏಳಿಹವು ಬಾಳಿನೊಳಗೆ
          ಮುನ್ನುಗ್ಗು ಇದನರಿತು ನೀನು ನೀನ್ನೊಳಗೆ
          (ಏಳುಏಳಲೆ ಜೀವ – ರತ್ನದೀಪ)

ಹೀಗೆಂದು ಬರಿ ಹೇಳುವುದಿಲ್ಲ. ಅದಕ್ಕೆ ರತ್ನದೀಪದ ಭರವಸೆ ನೀಡುತ್ತಾರೆ.

ತಾಯಸದ ತಮವು ಸುತ್ತೆಲ್ಲ ತುಂಬಿ ನಿಂತಿಹುದು ಬಾಳಿನಲ್ಲಿ
          ರಾಜಸದ ಹಕ್ಕಿ ತಾಮಸದಿ ಸಿಕ್ಕು ತೊಳಲುವುದು ಗೋಳಿನಲ್ಲಿ
          ಕೈಹಿಡಿದು ನಡೆಸು ನೀನೆಮ್ಮ ಜೀವನದ ಏಳುಬೀಳಿನಲ್ಲಿ
          ಸಾತ್ವಿಕದ ಶುಭ್ರ ಹೊಂಬೆಳಕ ಹರಿಸಿ ಜಗದ ಕೇಳಿಯಲ್ಲಿ
          (ರತ್ನದೀಪ)

ಸಾತ್ವಿಕದ ಶುಭ್ರ ಹೊಂಬೆಳಕು ಮನಸ್ಸಿನ ಮೇಲೆ ಹರಿದ ಮೇಲೆ ಅಲ್ಲಿ ದುಃಖಕ್ಕೆ ಅವಕಾಶವೇ ಇಲ್ಲ ಎಂಬ ವಿಶ್ವಾಸವನ್ನು ಕವಿ ಅಭಿವ್ಯಕ್ತಿಸುತ್ತಾರೆ. ಜೀವಶಕ್ತಿ ರತ್ನದೀಪದಿಂದಲೇ ಸಾಧ್ಯ “ಬೆಳಕು ಬೆಳಕು ಮಡುಗಟ್ಟಿ ಮನದ ಹೊರಗು ಒಳಗು ನಿಂತರೆ ಜೀವನಕೆ ಅದುವೆ ಚೆನ್ನ” “ನೆಳಲಿಹುದು ಬೆಳಕಿಹುದು ಬಾಳಿದಲಿ | ನೆಮ್ಮದಿಯು ಬಂದುದನು ತಾಳಿದಲ್ಲಿ” (ಏಳು, ಏಳಲೆ ಜೀವ) ಕಷ್ಟಗಳ ನಿವಾರಣೆಗೆ ನಗುವೊಂದೇ ಮದ್ದು ನಗುವಿರಲಿ ಅನವರತ ಎನ್ನುತ್ತಾರೆ ಕವಿ ಜಗವನ್ನು ತಬ್ಬಿರುವ ಹೊಗೆ ಮಂಜು ಶಾಸ್ವತವಲ್ಲ, ಕಳವಳ ಹುಟ್ಟಿಸುವ ಹದ್ದುಗಳ ಹಾರಾಟ ಕಾಗೆಗಳ ಕಿರುಚಾಟಗಳು ಅಶುಭವೆನ್ನದೆ ಮುನ್ನುಡಿಯಲು ಕವಿ ಕರೆನೀಡುತ್ತಾರೆ. ಗುಡುಗು ಸಿಡಿಲಬ್ಬರ ಹೀಗೆ ಉಳಿಯುವುದಿಲ್ಲ ಇಂದು ಮುಳುಗಿದ ಭಾನು ನಾಳೆ ವರಯಿಸದೇ ಇರುವುದಿಲ್ಲ. ಕತ್ತಲೆಯನ್ನು ಬದಿಗೊತ್ತಿ ಬೆಳಕು ಬಂದೇ ಬರುವುದು.

ಬಾಳಿದುವು ಸಂಗ್ರಾಮ, ಇಳೆಯ ರಣ…..ರಂಗ!
          ಮನುಜನವ ಹೋರಾಡುತಿಹ ವೀರಸಿಂಗ;
          ತೂಗುದೊಟ್ಟಿಲದಿಂದ ಗೋರಿಗಟ್ಟುವವರೆಗೆ
          ಸಂತತವು ಸಂಗ್ರಾಮ ಸಾಗೆ ಸಾಗುವುದಿಲ್ಲ
          (ಸಂಗ್ರಾಮ – ಚೈತ್ರಾಗಮನ)

ಬಂದುದನು ಎದುರಿಸುವ ಮನುಜನು ಮಾತ್ರ ಮುಂದೆ ಸಾಗಲು ಸಾಧ್ಯ. ಅದಕ್ಕೆ ಧೈರ್ಯಬೇಕು. ಸಂಗ್ರಾಮಕ್ಕೆ ಹೆದರುವಂತಿಲ್ಲ ಸೋಲನ್ನು ನೆನೆಯುವಂತಿಲ್ಲ. ಗೆಲವು ಪಡೆದು ಹೆಮ್ಮೆಯಿಂದ ಬೀಗುವ ಕನಸುಗಾರಿಕೆ ಬದುಕನ್ನು ಆನಂದಮಯ ಗೊಳಿಸುವುದು. ಕವಿಯ ಈ ಆಶಯ ಜೀವಪ್ರೀತಿಯ ತಹತಹಿಕೆಯಾಗಿದೆ.

ಜೀವ ಪ್ರೀತಿಯೊಂದಿಗೆ ಮನುಷ್ಯನಿಗೆ ಲೋಕ ಪ್ರೀತಿಯೂ ಇರಬೇಕೆನ್ನುತ್ತಾರೆ ಕವಿ ಸ್ವಾರ್ಥಕ್ಕಾಗಿ ಬಾಳುವುದು ಬಾಳಲ್ಲ. ತನ್ನಂತೆ ಇತರರೂ ಬದುಕಬೇಕು ಲೋಕಪ್ರೀತಿ ಅವನ ಮೌಲ್ಯವನ್ನು ಹೆಚ್ಚಿಸುವುದು ವೈಯಕ್ತಿಕ ತೆವಲಿಗಾಗಿ ಜೀವಿಸುವವರಿಗೆ ಸಮಾಧಾನವೆಂಬುದೇ ಇರುವುದಿಲ್ಲ. ಕೆಡಕು ಮಾಡುವವರಿಗೆ ಉಳಿಗಾಲವೂ ಇಲ್ಲ. ಹಾದಿ ಬಿಡುವ ಹರಲಿ ಹೊರುವವರಿಗೆ ಬಾಳಿನ ದಾರಿಯೂ ಇಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದರ ಕಡೆಗೆ ಗಮನ ಕೊಡಬೇಕು. ತರತಮ ಭಾವನೆಯ ಕ್ಲೀಕ್ಷೆಯನ್ನು ಕಳೆದುಕೊಳ್ಳಬೇಕು.

ಮೇಲುಕೀಲುಗಳೆಂಬ, ಹಿರಿಕಿರಿಯ ಎಂದೆಂಬ
          ಭೇಧಭಾವಗಳೆಲ್ಲ ಹೂಳಿಬಿಡಲಿ
          ನಾವೆಲ್ಲ ಒಂದೆಂಬ ಸಮತೆಯಾ ಭಾವವದು
          ಭರತಜರ ಮನವನ್ನೆ ಆಳಿಬಿಡಲಿ
          (ಹೊಸದಿನ – ರತ್ನದೀಪ)

ಸಮತೆ ಮನುಷ್ಯರನ್ನು ಆಳಿದಾಗ ಲೋಕಪ್ರೀತಿಗೆ ಗೌರವ ದೊರಕುವುದು. ಒಡಲಲ್ಲಿ ವಿಷವಿಟ್ಟುಕೊಂಡು ಪ್ರೀತಿಯ ಮಾತು ಆಡಿದರೆ ಸಮತೆ ಗಟ್ಟಿಯಾಗಿರಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಿಸಿ ಕೊಡುತ್ತಾನೆ ಕವಿ.

ಆದರ್ಶಗಳ ಉಲಿತ

ಮನುಷ್ಯ ಜೀವನದ ಮೌಲ್ಯಗಳು ಆದರ್ಶಗಳ ಪ್ರಭಾವಕ್ಕೊಳಗಾದ ಕವಿ ತಮ್ಮ ಕಾವ್ಯದಲ್ಲಿ ಅವನೆಲ್ಲ ಅಭಿವ್ಯಕ್ತಿಸಲು ಹಾತೊರೆದಿದ್ದಾರೆ. ಅವರ ಕಾಲಘಟ್ಟದಲ್ಲಿ ಈ ಮೌಲ್ಯ ಆದರ್ಶಗಳಿಗೆ ಹೆಚ್ಚು ಗೌರವಾದರಗಳಿದ್ದವು ಎಂಬುದು ಮಿಥ್ಯವಲ್ಲ. ಅಂದಿನ ಬದುಕು ಇಂದಿನಂತೆ ವ್ಯವಹಾರಿಕವಾಗಿರಲಿಲ್ಲ ವ್ಯಕ್ತಿತ್ವ ದ್ವಂದ್ವಕ್ಕೊಳಗಾಗಿ ಸ್ವಾರ್ಥವನ್ನು ವಿಜೃಂಭಿಸಿರಲಿಲ್ಲ ಎಲ್ಲರದೂ ತೆರೆದ ಮನಸ್ಸು ಹರಾಮಿ ಗಬ್ಬುಗೌರಿಗೆ ಆಸೆಪಡದ ಸ್ವಂತದ ದುಡಿಮೆಯಿಂದ ಬದುಕಿನ ಸುಖ ಅನುಭವಿಸುವ ದಾವಂತ ಅದರನುಭವದ ಪಕ್ವತೆಯನ್ನು ದಕ್ಕಿಸಿಕೊಂಡಿರುವ ಕವಿ,

ಮುಂದಿನ ಬೇಯ್ಬ್ಯಾಡ ಮಂದೀದು ಒಯ್ಯ್ಬಾಡ
          ಮಂದೀಯ ಕಂಡಾಸೆ ಪಡಬೇಡಾ
          ಬಂದಷ್ಟೆ ಬರಲೆಂದು ಬಂದದ್ದೆ ಇರಲೆಂದು
          ದುಡಿದುಣ್ಣು ಆಸೆ ನೀ ಬಿಡಬೇಡ
          (ಬರುತ್ಸನ, ಇರತಾನ – ವೈಜಯಂತಿ)

ಎಂದು ಎಚ್ಚರಿಸಿದ್ದಾರೆ. ಬೇರೆಯವರ ಬೆವರಿನ ಫಲವನ್ನು ದಾರ್ಷ್ಟ್ಯತನದಿಂದ ದಕ್ಕಿಸಿಕೊಳ್ಳುವುದಾಗಲಿ ಬೇರೆಯವರ ಸಿರಿಸಂಪತ್ತನ್ನು ಕಂಡು ಕರಬುವುದಾಗಲಿ

ಯಾರಿಗೂ ಸಲ್ಲದು.

ಧನಕನ ಚಿರವಲ್ಲ ಮನೆಮಠವು ಸ್ಥಿರವಲ್ಲ
          ಗುಣವದುವೆ ತೋರಿತಿಹುದು
(ಗುಣವೇ ಚಿರ – ವೈಜಯಂತಿ)

ಈ ಗುಣದಿಂದ ಬಾಳಹಿರಿಮೆ ಸಾಧ್ಯ ಎನ್ನುವ ಕವಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸುತ್ತಾನೆ. ಹೀಗೆ ದುಡಿಮೆಯಾವಾಗಲೂ ಫಲಾಪೇಕ್ಷಿಯ ಪರಿಣಾಮಕ್ಕೆ ಮನುಷ್ಯ ಎದೆಗೂಡಲು ಸಿದ್ದನಾಗಿರಬೇಕೆನ್ನುತ್ತಾರೆ.

ನಮ್ಮ ದುಡಿಮೆಗೆ ಫಲವು ಬಾರದಿದ್ದರು ಕೂಡ
          ಜೋಲುಮೋರೆಯ ಮಾತು ಬೇಡ ನಮಗೆ;
          ದುಡಿಮೆಯಲಿ ಸಂತಸವ ಪಡೆಯುವ ಶಕುತಿಯನು
          ದೇವ ಕರುಣಿಸಲಿ ಎಂದೆಂದು ನಮಗೆ
(ಅಚಲಶ್ರದ್ಧೆ – ವೈಜಯಂತಿ)

ಎಂದು ಅಪೇಕ್ಷಿಸುತ್ತಾರೆ. ಬಸುಪಟ್ಟದರ ಕೂಡಾ ಹೀಗೆ ಬದುಕಿದರು. ಬೇರೆಯವರು ಮುಂದೆ ಹೋಗುವುದನ್ನು ನೋಡಿ ಅಸೂಯೆ ಪಡದೆ ತಮ್ಮ ಇರುವಿಕೆಯಲ್ಲಿ ಸಂತೃಪ್ತಿ ಪಡೆದುಕೊಂಡಿದ್ದರು.