ರಸಿಕತೆ ಮತ್ತು ದಾಂಪತ್ಯದ ಸೊಗಸು

ಬದುಕಿನ ತಳಮಳದ ನಡುವೆಯೂ ಕವಿ ಸಂಸಾರದ ರಸಿಕತೆಯನ್ನು ತಮ್ಮ ಜೀಹೋಲ್ಲಸಕ್ಕೆ ದ್ರವ್ಯವಾಗಿಸಿಕೊಂಡು ಅದನ್ನು ಸಹೃದಯರಿಗೂ ಹಂಚಿ ಸಂತಸ ಪಟ್ಟವರು. ಕೊಡ ಹೊತ್ತ ಬಾಲೆಯ ಚೆಲುವಿಕೆಗೆ ಮನಸೋತು ಮೋಹಿಸುವ ಮನದ ಮೌನ ಮತಿಸಲೆಂದು ಬಂದ ಹೆಣ್ಣನ್ನು ಮಾಯಮಾಧುರಿ, ಕಣ್ಮಣಿ, ಸ್ವರ್ಗ ಸುಂದರಿ, ಸುಂದರಾಂಗಿಣಿ, ಅಪ್ಪರಾಂಗಿಣಿ, ಜಪದಜವ್ವನೆ ಎಂದು ಕರೆದು ಆನಂದಿಸುವ ರೀತಿ ಎಲ್ಲರಿಗೂ ಪ್ರಿಯವೆನಿಸುವುದು.

ಕಾರವಾರದ ಹುಡುಗಿಯನ್ನು ಕಂಡಾಗ ಉಕ್ಕಿದ ರಸಿಕತೆಯ ಪರಿಣಾಮ ಇನ್ನೂ ಅದ್ಭುತ
ಒಂದೆ ನಿಮಿಷದ ನಿನ್ನ ಸೂಸುಗೆಂಪಿನ ಕೆನ್ನೆ
          ಮನಕೆ ಕಚಗುಳಿ ಇಟ್ಟು ಕುಣಿಸುತಿಹುದು;
          ಸುಪ್ತಕಾಮದ ಸುರುಳಿ ಎಡೆಬಿಡದೆ ಹೊಡಮರಳಿ
          ಏನೆನೋ ಮನದಲ್ಲಿ ಗುಣಿಸುತಿಹುದು
(ಕಾರವಾರದ ಹುಡುಗಿ – ವೈಜಯಂತಿ)

ಮನುಷ್ಯನ ರಸಿಕತೆಗೆ ಸಂಕೇತವೆನಿಸಿದ ಹುಣಸೆ ಗಿಡವನ್ನು ಕವಿ ವರ್ಣಿಸುವ ರೀತಿ ಅತ್ಯಂತ ರಮ್ಯವೆನಿಸಿದೆ.

ಹುಣಸೆ ಗಿಡ ಮುಪ್ಪಾದರೂ ಹುಳಿಗೆ ಮುಪ್ಪೇ?
ನಾ ಹುಟ್ಟುವ ಮೊದಲು ಹುಟ್ಟಿತ್ತು
ನಾ ಬೆಳೆದ ಮುನ್ನವೇ ಅದು ಬೆಳೆದು ನಿಂತಿತ್ತು

ಹಿಂದೆ ಪಾಕಕ್ಕೆ ಬಂದ ಆ ಹುಣಸೆ
ಲೋಕಕ್ಕೆ ತನ್ನ ರುಚಿಯಿಂದ ತಣ್ಣಸಿ
ಜನರ ಕಣ್ಣದನು ಕಣ್ಣಾರೆ ಕಂಡು
ಇನ್ನೂ ಅದರೆಡೆಗೆ ನೋಡಿಯೇ ನೊಡುತಿದೆ
ಹೀಗಿದ್ದ ಆ ಹುಣಸೆ ಇಂದೂ ಕಾಣುತಿದೆ
ಪಾಕಕ್ಕೆ ಬಂದ ಆ ಡೊಗರುಗಾಯನು ಹೊತ್ತು
ಮಣ್ಣವಾಸನೆ ಹೀರಿ
ಹುಳಿ ಉಪ್ಪು ಕಾರವನ್ನುಂಡು ಬೆಳೆದ ಪೈ
ಬಿಡಬಹುದೇ ಎಂದಾದರೂ ತನ್ನ ಕೈ?

ಹುಣಸೆಯಂತೆ ಜೀವ ಪ್ರೀತಿಯ ಮನುಷ್ಯನ ರಸಿಕತೆ ಲವಲವಿಕೆಯಿಂದ ಇರುವುದನ್ನು ಮೇಲಿನ ಸಾಲುಗಳು ಪರಿಣಾಮಕಾರಿಯಾಗಿಯೇ ವಿವರಿಸುತ್ತವೆ.

ದಾಂಪತ್ಯದ ಸಂಭ್ರಮವನ್ನು ಕವಿ ಅತ್ಯಂತ ಸಂಭ್ರಮದಿಂದಲೇ ಬಣ್ಣಿಸುತ್ತಾರೆ. ದಾಂಪತ್ಯ ಕಾವ್ಯಕ್ಕೆ ಪ್ರಿಯವಾದ ವಸ್ತು, ಗಂಡ – ಹೆಂಡತಿಯರ ವಿಶಿಷ್ಟ ಸಂಬಂಧವನ್ನು ಅಭಿವ್ಯಕ್ತಿಸುವ ದಾಂಪತ್ಯದಲ್ಲಿ ಅಸಾಮನ್ಯ ಸ್ವಾರಸ್ಯವಿದೆ. ಅದು ಮಧುರವಾಗಿದ್ದಷ್ಟು ಸಾರವತ್ತಾಗಿರುವುದು. ಕನ್ನಡ ಸಾಹಿತ್ಯದಲ್ಲಿ ದಾಂಪತ್ಯ ಗೀತೆಗಳಿಗೆ ತನ್ನದೇ ಆದ ವರ್ಚಸ್ಸುಯಿದೆ. ಕವಿ ಬಸುಪಟ್ಟದ ಕೂಡಾ ತಮ್ಮ ಬಾಳಿನ ಜೊತೆಗಾತಿಯ ವ್ಯಕ್ತಿತ್ವವನ್ನು ಲವಲವಿಕೆ, ಅರ್ಥವತ್ತಾದ, ಮಾತುಗಳಲ್ಲಿ ರೆಬಸುತ್ತಾರೆ.

ಅವರ ‘ಗೆ’ ಎನ್ನುವ ಎರಡು ಕವಿತೆಗಳಲ್ಲಿ ಸಂಗಾತಿ ಬಗೆಗಿನ ಒಲವು ಯೋಘವಾಗಿ ಪ್ರಕಟವಾಗಿದೆ.

ನೀನೆ ಎನ್ನ ಜೀವದರಳು
          ನಿನ್ನೊಲುಮೆಯ ಅದರ ಹುರುಳು
          ನೀನು ಬಳಿಯ ಬಂದು ಸುಳಿಯೆ
          ಬಂತೂ ಸ್ವರ್ಗ ಜೀವ ಬಳಿಯೆ

ಎಂದು ಕವಿ ಹೃದಯ ತೃಪ್ತಿಯಿಂದ ಮಿಡಿಯುತ್ತದೆ. ಮನಕೆ ಹಬ್ಬ ತರುವ ಸಂಗಾತಿಯ ಸಹವಾಸದಿಂದ ಭಾಗ್ಯ ಕಂಡ ಕವಿ ‘ತನು ನಿನ್ನದು ಮನು ನಿನ್ನದು ಆತ್ಮ ಪರಮ ನಿನ್ನದು’ ಎಂದೂ ಅವಳಿಗೆ ಶರಣಾಗತನಾಗುತ್ತಾರೆ.

ಮಡದಿಯ ವ್ಯಕ್ತಿತ್ವದ ಪರಿಣಾಮ ಕವಿಗೆ ಮಹೋನ್ನತವೆನಿಸಿದೆ
          ದೃಷ್ಟಿ ಕೂಡಿದ ಚಣಕೆ ಹೊಸ ಸೃಷ್ಠಿ ಕಾಣುವುದು
          ಹೊಸ ಚೆಲುವು ಹೊಸ ನಿಲುವು ಹೊಸಹೊಸದೆ ಎಲ್ಲವೂ;
          ಹೊಸಭಾವ ಹೊಸತಾವುದೋ ಉಸಿರನೂರಿ ಬಿಡೆ
          ಬೇವಿರದೆ ಎಲ್ಲೆಡೆಯೂ ಬೆಲ್ಲವೇ ಬೆಲ್ಲವು
          ನೆಮ್ಮದಿಯನ್ನು ಹರಳುಗಟ್ಟಿಸುವ ಕಾರಣದಿಂದ ಕವಿ
          ನೋಡಿದೆನು ಕಣ್ತುಂಬ ನೋಡಿಯೇ ನೋಡಿದೆನು
          ಇಂಥ ಚೆಲುವಿನ ಚೆನ್ನೆ ಶೃಂಗಾರ ಗೌರಿಯನು

ಎಂದು ಹೆಮ್ಮೆಯಲಿ ಬೀಗಿಗೊಳ್ಳುತ್ತಾರೆ. ಹೆಂಡತಿಯಲ್ಲಿ ಪ್ರೀತಿ, ವಿಶ್ವಾಸ, ಇರಿಸಿಕೊಂಡು ಗಂಡನ ಉತ್ತುಂಗ ಸ್ಥಿತಿಯದು. ದಾಂಪತ್ಯದ ಗೆಲುವಿಗೆ ಇದೇ ಮೆಟ್ಟಿಲು.

ಆಕೆ ಅವನಿಗೆ ಗುಣವಂತಿ ಮತಿವಂತಿ ಸುಖದ ಶಾಂತಿ ಅನಿಸಿದ್ಯಾಳ ಮನದ ಮಲಿನತೆ ತೊಳೆದು ಕಣ್ಣ ಕಿಲ್ಬಿಷ ಕಳೆದಿದ್ದಾಳೆ. ಮನಬೆಳಗಿ ಬಾಳಿನ ಒಳ ಹೊರಗೆಲ್ಲಾ ಬೆಳಕು ಹರಿಸಿದ್ದಾಳೆ. ಅವಳ ನಿತ್ಯ ಸತ್ಯವೇ ಕವಿಗೆ ಜೀವದುಸಿರಾಗಿದ

ಕಾಮುಕದ ಕುರುಹಿರದೆ ಭ್ರಾಮಡದ ಭ್ರಮೆಯಿರದೆ
          ಕೈಹಿಡಿದು ನೀ ಜೊತೆಗೆ ಸಾಗಿಬರೆ ನಿತ್ಯ;
          ಎನ್ನ ಒಲವಿನ ಚೆಲವೂ ನಿನ್ನ ಚೆಲುವಿನ ಒಲವು
          ಇಳೆಯ ಬಾಳಲಿ ಎನಗದುವೆ ನಿತ್ಯ
          (ಗೆ – ಚೈತ್ರಾಗಮನ)

ಎಂಬ ಅನೊನತೆಯ ಹಾಡು ಹೇಳುತ್ತಾರೆ. ಸಂಗಾತಿಯ ಒಲವು – ಚೆಲುವಿನ ಆಳ ಕವಿಗೆ ನಿಲುಕದೆ ಅದರ ಬಲದಿಂದ ಆಣೆಮುತ್ತು ಬಾಲಿನಲ್ಲಿ ಸಫಲನಾಗಿದ್ದಾನೆ. ಮಡದಿಯ ನೋಟ ಮಾಟ ಗಂಡನಿಗೆ ತೀರಾ ಚೆನ್ನ ಮಾತು ಮನ ಎಲ್ಲವೂ ಮೋಹಕ ಅದನ್ನು ಮೆಲ್ಲಿದ ಪರಿಣಾಮವೂ ಅಗಾಧ

ನೀನೆರಡು ನುಡಿ ನುಡಿಯೆ, ಅಕ್ಕರೆಯ ಸಕ್ಕರೆಯ
          ಹಾಲುಜೇನಿನ ಹೊಳೆಯ ಹರಿದು ಬಂತು;
          ಕಣ್ಣಮಿಂಚದು ತಾನು ಸಾಂದ್ರ ಚಂದ್ರಿಕೆಯಾಗಿ
          ಹೃದಯದಂಗವನ್ನು ಬೆಳಗಿತಿಂತು
          (ಒಲವಿನಾಟ – ಚೈತ್ರಾಗಮನ)

ಆ ಬೆಳಕಿನಲ್ಲಿ ಮಿಂದ ಕವಿ ಬದುಕಿನ ಚಂದ ಅನುಭವಿಸುತ್ತಾರೆ.

ಹೆಂಡತಿಯೆಂದರೆ ಭೋಗದ ವಸ್ತುವಲ್ಲ ಅವಳ ವ್ಯಕ್ತಿತ್ವಕ್ಕೂ ಗೌರವವಿದೆ. ಇದನ್ನು ಪ್ರಮಾಣೀಕವಾಗಿ ಒಪ್ಪಿಕೊಳ್ಲುವ ಪತಿ, ಸತಿಯನ್ನು ತನ್ನ ಕಣ್‍ಗೊಂಬೆ ಸಮವೆಂದು ಕೊಳ್ಳುತ್ತಾನೆ. ತಿಳಿವೆರೆದ ಗುರು, ಶಾಂತಿ ದೇವತೆ, ನಲವೆರೆದ ಸ್ಪರುಷಮಣಿ, ಕಷ್ಟಸುಖಗಳ ಗೆಳತಿ ಎಂದು ಕರೆದು ತಣಿಯುತ್ತಾನೆ. ಅಷ್ಟು ಸಾಲದೆಂಬಂತೆ,

ಮನದಕಲ್ಮಷವೆಲ್ಲ ತೊಳೆದು ತಿಳಿಗೊಳವಾಯ್ತು
          ಅಮರ ಗಂಗ ನದಿಯು ನೀನು
          ಚಪಲ ಚಂಚಲ ನಿಂತು ಚಿತ್ತ ಸುಸ್ಥಿರವಾಯ್ತು
          ಅನುಪಮ ಹಿಮಾಚಲ ನೀನು
          (ಸಖಿ – ವೈಜಯಂತಿ)

ಎಂದು ಮನದನ್ನೆಯನ್ನು ಔನತ್ಯಗೊಳಿಸುತ್ತಾನೆ. ನಿಜ ದಾಂಪತ್ಯದ ಸಾಕ್ಷಿಪ್ರಜ್ಞೆಯಂತಿರುವ ಈ ಸಾಲುಗಳು ತೀವ್ರವಾಗಿ ನಮ್ಮನ್ನು ಸೆಳೆಯುತ್ತವೆ.

ಹೆಂಡತಿಗೆ ಗಂಡನ ಬಗ್ಗೆಯೂ ಅಷ್ಟೇ ಒಲವು ಇದೆ. ಅವನು ಎದುರಿಲ್ಲವೆಂದರೆ ಅವಳ ತಳಮಳಕ್ಕೆ ಲೆಕ್ಕವೇ ಇಲ್ಲ. ಊರಿಗೆ ಹೋಗಿರುವ ಗಂಡನ ನಿರೀಕ್ಷೆಯಲ್ಲಿರುವ ಆಕೆಯ ಮಿಡಿತಗಳನ್ನು ಈ ಕೆಳಗಿನ ಸಾಲುಗಳಿಂದಲೇ ಗ್ರಹಿಸಬಹುದು.

ಅವರು ಊರಿಗೆ ಹೋಗಿ ಮೂರ್ದಿ ಆಯ್ತೀಗ
          ಯುಗಕು ಹಿರಿದೇನ ದಿನಮಾ;
          ಜಗದೊಳಗೆ ಇರುವುದು ಮೂರೆಮೂರ್ ಯುಗವೆಂದು
          ಹೇಳುವ ಮಾತದು ನಿಜಜೀವನ
          (ಏನು ಹೇಳಲಿ ಬಾರ – ರತ್ನದೀಪ)

ಹೆಂಡತಿಯನ್ನು ಕ್ಷಣವೂ ಬಿಟ್ಟಿರದ ಗಂಡನ ತಳಮಳವನ್ನು ಹೊಯ್ದಟ್ಟವನ್ನು ಜೀವದೇವ ಕವಿತೆ ಚೆನ್ನಾಗಿ ಪ್ರತಿಪಾದಿಸುತ್ತದೆ.

ಆಧ್ಯಾತ್ಮಿಕ ಬೆಳಕು

“ಈ ಜಗದಿ ಬಂದೆಲ್ಲ | ಭೋಗಿಸಿದುದಾಯ್ತು; | ಒಲ್ಲೆನೊಲ್ಲೆನು ತಾಯೆ | ಬಾಳು ಸಾಕಾಯ್ತು” ಎಂದು ಕೊಂಡಾಗವೆಲ್ಲ ಕವಿಗೆ ಆಧ್ಯಾತ್ಮದ ಬಗೆಗೆ ಆಸಕ್ತಿ ಮೂಡುತ್ತದೆ. ಜೀವ ಆತ್ಮದ ಸಂಬಂಧ, ಜೀವ ದೇವರ ಸಂಬಂಧಕ್ಕಾಗಿ ತಡಕಾಡುತ್ತಾ ಅಧ್ಯಾತ್ಮದ ಬೆಳಕಿನಲ್ಲಿ ಮಿಂದು ಚಿತ್ತಕ್ಕೆ ಸಮಾಧಾನ ತಂದುಕೊಳ್ಳುವ ಸಾಧ್ಯತೆಯುಂಟಾಗುತ್ತದೆ.

ಮನುಷ್ಯ ಜೀವವು ಗಾಳಿಪಟದಂತೆ ಅದರ ಸೂತ್ರ ದೇವರ ಕೈಯಲ್ಲಿದೆ ಎಂಬುದನ್ನು ಕವಿ ಹೇಳುವ ರೀತಿಯೇ ಸೊಗಸಿನದು.

ಜೀವ ಸೂತ್ರವನು ಹಿಡಿದು ಆಡಿಸುವ ದೇವ ಗಾಳಿಪಟವ
          ಆಲುಗಿಸುತ ಕೈಯ ಆಚೇಚೆ ಒಮ್ಮೆ ತೇಲಿಸುವನವನು ಪಟವ
          ಗಾಳಿಪಟದ ಜೀವಾಳವೆಲ್ಲಾ ಇಹುದಲ್ಲಿ ಅವನ ಕೈಯಲ್ಲಿ
          ಅವನ ಮನದಂತೆ ಆಡುತಿಹುದು ತಾ ಪಟವು ಬಯಲಿನಲ್ಲಿ
          ಏರಿಸಿರಲು ಏರಿಹುದು ಗಾಳಿಪಟ ಅವನ ಕರುಣೆಯಿಂದ;
          ಹಾರುತಿಹುದು ಸ್ವಚ್ಛಂದದಿಂದ ಮೇಲೆದ್ದು
          ಮನತೆಗೆದು ಅವನು ಎಳೆ ಚಿವುಟಿ ಬಿಡಲು ಪಟ ಕಾಣದಾಗುವುದು
          ಎತ್ತೊ ಸುತ್ತಿ ತಾ ಹೇಗೋ ಹಾರಿ ದೂರದಲಿ ಭೂಮಿಗೊರಗುವುದು

ತಮ್ಮ ಬಾಳಿನ ಗೊತ್ತುಗುರಿಗಳ ನಿರ್ದೇಶಕ ದೇವರ ಅವನ ಇಚ್ಛೆಯಂತೆ ಮನುಷ್ಯರು ಪಾತ್ರವಾಡಬೇಕು. ಗಾಳಿಪಟದ ಹಾರಾತ ಚಂದವಾಗಿಸುವುದು ಅದನ್ನು ಆಕಾಶದಲ್ಲಿ ಹಾರಾದಿಸುವುದು, ಬೇಡವೆನಿಸಿದರೆ ಸೂತ್ರ ಹರಿದು ನೆಲಕ್ಕೊರಗಿಸುವುದು ದೇವರ ಇಚ್ಛೆಗೆ ಬಿಟ್ಟಿದ್ದು ಎಂದು ಕವಿ ತಮ್ಮ ಬಾಳಿನ ಸಿದ್ಧಾಂತವನ್ನು ಈ ಕವಿತೆಯ ಮೂಲಕ ಅಭಿವ್ಯಕ್ತಿಸುತ್ತಾರೆ.

ನೇಕಾರ ಜಗದ ಜನತೆಯ ಮಾನ ಮುಚ್ಚಲು ಬಟ್ಟೆ ನೆಯ್ಯುತ್ತಾನೆ. ಆದರೆ ದೇವರು ಅವನಿಗಿಂತಲೂ ಹಿರಿಯ ನೇಯಿಗ. ಸುಳಿವ ಜೀವವೆಳೆಯ ಮಾಡಿ ನೇಯ್ವ ನಿಪುಣತೆ ಅವನಿಗಿದೆ. ನೇಯ್ವ ಕಾಯಕದಲ್ಲಿ ಅವನಿಗೆ ನಿಮಿಷ ಕೂಡ ಪುರುಸೊತ್ತಿಲ್ಲ.

          ಆಗಹೋಗು, ಸೌಖ್ಯದುಃಖ, ಏಳುಬೀಳು, ಸೋಲುಗೆಲುವ
          ಹೂವ ಮಾಡಿ ಸೊಗದ ಜೊತೆಗೆ ಬಾಳಹಾಸಿನಲ್ಲಿ ವೆಲುವ
          ಹೊಕ್ಕ ಹಾಕಿ ನೇಯ್ವನಿವನು

ಅಖಂಡ ವಿಶ್ವವೇ ಅವನ ನೇಯ್ಗೆ. ಲೀಲಾ ಜಾಲವಾಗಿರುವ ಅವನ ನೇಯ್ಗೆಯೊಂದು ಅಧ್ಬುತಕಲೆ. ಆ ಕಲೆಯಲ್ಲಿ ಮನುಷ್ಯ ಸ್ವರ್ಣರೇಖೆಯಾಗಿ ಮೆರೆಯಬೇಕಾಗಿದೆ. ದೇವ ಕುಣಿಸಿದಂತೆ ಕುಣಿದು, ಮಣಿಸಿದಂತೆ ಮಣಿದು ಬದುಕಬೇಕಾಗಿದೆ. ಆತ್ಮದರಿವು – ದೇವನರಿವು ಮಾಡಿಕೊಳ್ಳುವುದರಲ್ಲಿ ಅವನ ಸಾರ್ಥಕ್ಯವಿದೆ.

ಎನ್ನದಿಹುದು ಬೇರೊಂದು ಆಟ ಬೇರದರ ದೃಷ್ಠಿಪಾಟ
          ಮುಗಿಲಂಚದಾಟಿ ಇಹುದೆನ್ನ ಆಟ ಅದು ಎನ್ನಬಾಳಬೇಟ
(ಮನದ ಹಕ್ಕಿ – ರತ್ನದೀಪ)

ಹೀಗೆಂದು ಬದುಕಿನ ತೊಡಕು ಬಿಡಿಸಿಕೊಳ್ಳುವ ದಾರಿ ತೋರುವ ಕವಿ,

ಚಿತ್ತಭಿತ್ತಿಯಲಿ ದೊರೆಯ ಚಿತ್ತಾರ, ಜಗದ ಜೀವಜಾತಿ
          ನಿನ್ನ ಪಾದದಲಿ ತುಂಬಿಯಾಗಿ ಸುಳಿಯುವುದು ಸೂಸಿ ಪ್ರೀತಿ
          (ಭಾವದೇವಿ – ರತ್ನದೀಪ)

ಎಂಬ ಸಾಲುಗಳ ಮೂಲಕ ಆಧ್ಯಾತ್ಮದ ಅನುಭವಗಳ ಅನ್ಯಾದೃಶ್ಯ ಭಾವಗಳನ್ನು ವ್ಯಕ್ತಪಡಿಸುತ್ತಾರೆ.

ಆತ್ಮ – ಪರಮಾತ್ಮ ಸ್ವರೂಪದ ಆಧ್ಯಾತ್ಮ ಮನುಷ್ಯನ ಬದುಕನ್ನು ಮಿಗಿಲಾಗಿಸುವ ಬಗೆಯನ್ನು ಕವಿ ಬಲ್ಲಿದವರಾಗಿದ್ದರು ಎಂಬುದಕ್ಕೆ ಅವರ ಕೆಲವು ಕವಿತೆಗಳು ಸಾಕ್ಷಿ ಒದಗಿಸುತ್ತವೆ.

ನಾಡುನುಡಿ ದೇಶಪ್ರೇಮ

ಬಸುಪಟ್ಟದ ಅವರು ಸ್ವಾತಂತ್ರ್ಯ ಚಳುವಳಿಯನ್ನು ಕನ್ನಡ ನಾಡಿನ ಏಕೀಕರಣ ಹೋರಾಟವನ್ನು ಕಣ್ಣಾರೆ ಕಂಡವರು. ಗಡಿನಾಡ ಪ್ರದೇಶವಾದ ಸೋಲಾಪುರದಲ್ಲಿ ಶಿಕ್ಷಣ ಪಡೆದ ಅವರಿಗೆ ಸಹಜವಾಗಿ ನಾಡು – ನುಡಿ – ದೇಶಪ್ರೇಮ ಇವುಗಳ ಬಗ್ಗೆ ಅನೂನ ಪ್ರೀತಿ, ಕಾಳಜಿ ಇರುವುದು. ಅದನ್ನೆಲ್ಲ ಅವರು ತಮ್ಮ ಕಾವ್ಯಕ್ಕೆ ವಸ್ತುವನ್ನಾಗಿ ಬಳಸಿಕೊಂಡಿದ್ದಾರೆ.

ದೇಶ ಗುಲಾಮಗಿರಿಯಿಂದ ವಿಮೋಚನೆಗೊಂಡು ಕವಿಯನ್ನು ಸಂತೋಷಗೊಳಿಸಿದೆ. ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವ ಅವರನ್ನು ಸಂಪ್ರೀತಗೊಳಿಸುವುದು ಅವರ ಪಾಲಿಗದು ಹಬ್ಬವೇ. ಅದು ಉಲ್ಲಸದ ಪ್ರತೀಕ. ಈ ಉಲ್ಲಾಸ ಬರಿ ಒಣದಾಗಿ ಬಣ ಬಣವಾಗಿ ಕಾಣಬಾರದು ಎಂಬುವ ಹಂಬಲ ಕವಿಯದು. ಈ ಹಬ್ಬದಾಚರಣೆ ಭಾರತದ ಜನಕ್ಕೆ ಸಂದೇಶ ಸಾರಬೇಕು ಪ್ರಗತಿಪಥದ ಅನಂತತೆಯ ಸೊಗಡನ್ನು ದೇಶಕಾಣುವಂತಾಗಬೇಕು ಅದಕ್ಕೆ ಕವಿ,

ರಕ್ತ ರಹಿತ ಹೋರಾಟದಿಂದ ಸ್ವಾತಂತ್ರ್ಯ ಪಡೆದವಂದು
          ದೈನ್ಯದಾರಿದ್ರ್ಯ ತೊಡೆದು ನಾಡಿನಲಿ ಸಮತೆಯನು ತಂದು
          ಸ್ವಾರ್ಥಸಂಕುಚಿತ ಜಾತಿ ಪಂಥಗಳನೆಲ್ಲ ಮೆಟ್ಟಿನಿಂತು
          ಸತ್ಯಜಗದ ತಾಯ್ತಂದೆಯಾಗಿ ಬಾಳೋಣ ಎಲ್ಲರಿಂದು

ಎಂದು ಕರೆಕೊಡುತ್ತಾರೆ.

ಬೆಂಕಿ ಬೀಳುವ ಮುನ್ನ ಸುತ್ತು ಸುಡುವ ಮುನ್ನ
          ಅಗ್ನಿಕುಂಡಕೆ ನಮ್ಮ ರಕುತವೆ ಆಜ್ಯ
          ನಾಡರಕ್ಷನೆಯೊಂದೆ ನಮ್ಮ ಕಣ್ಮುಂದಿರಲಿ
          ಉಳಿದೆಲ್ಲವು ಸದರ ಮುಂದೆ ತ್ಯಾಜ್ಯ

ಒಣ ಮಾತುಗಳಿಂದ ದೇಶ ರಕ್ಷಣೆ ಸಾಧ್ಯವಿಲ್ಲವೆಂಬುದು ಕವಿಗೆ ವೇದ್ಯವಾಗಿದೆ. ಅದಕ್ಕಾಗಿ ದೇಶಾಭಿನಾದ ನಿಜದ ನೆಲೆಯನ್ನು ಅವರು ಹೀಗೆ ತೋರಿಸಿಕೊಡುತ್ತಾರೆ

ಒಂದೆ ಜನ ಒಂದೆ ಮನ ಒಂದೆ ನಡೆ ಒಂದೆ ಪಡೆ
          ನಮ್ಮ ದೇಶದ ಜನರ ಸತ್ವವೊಂದು
          ವಿಧವಿಧದ ನುಡಿಯಿರಲು ಯಾವ ಭೇದವು ಇಲ್ಲ
          ನಮ್ಮ ದೇಶದ ಜೀವಶಕ್ತಿಯೊಂದು
          (ನಾವು ಮುಟ್ಟುವ ಗುರಿ ಮುಟ್ಟಬೇಕು – ವೈಜಯಂತಿ)

ಈ ಜೀವಶಕ್ತಿ ದೇಶದ ಅಭಿವೃದ್ಧಿಗೂ ಮೆರಗಿಗೂ ಕಾರಣವಾಗಬೇಕೆನ್ನುವ ಪ್ರಾಮಾಣಿಕ ಹಂಬಲ ಕವಿಯದಾಗಿದೆ. ಪ್ರಜಾರಾಜ್ಯದಿನವು, ಭರತಜರ ಹಿರಿಮೆ, ಬೆಳ್ಳಿಹಬ್ಬವಿಂದು, ಕಾಳಂಗ, ಸ್ವಾತಂತ್ರ್ಯದಿನ, ಆಗಸ್ಟ್ ೧೫, ಪ್ರಜಾರಾಜ್ಯ ದಿನೋತ್ಸವ ಮುಂತಾದ ಕವಿತೆಗಳಲ್ಲಿ ಕವಿಯ ದೇಶಾಭಿಮಾನ ಹರಳುಗಟ್ಟಿದೆ.

ಹರಿದು ಹಂಚಿಹೋದ ಕನ್ನಡನಾಡು ಏಕೀಕರಣದ ಹೋರಾಟದಿಂದ ಒಂದಾಗಿರುವ ಬಗ್ಗೆ ಕವಿಗೆ ಹೆಮ್ಮೆಯಿದೆ. ನಾಡಜನಗಳ ಪುಣ್ಯಸಂಚಯವು ಫಲವಂತಿಕೆ ಕಂಡಿದ್ದರ ಕಾರಣದಿಂದ ಕವಿಮನ ಹರುಷಗೊಂಡಿದೆ. ನಾಡದೇವಿಗೆ ಸುಪ್ರಭಾತ ಬಯಸುವ ಉಮೇದಿನಲ್ಲಿ,

ಬಂದಿತೋ ಹೊಸದಿನವು ಕೊನೆಗದು ಅಖಿಲಭಾರತ ದೇಶಕೆ
ತಂದಿತೋ ಹೊಸತೊಂದು ಬಾಗಿನ ಇಂದು ಕನ್ನಡ ದೇಶಕೆ;
ನುಗ್ಗಿಸಾಗಲಿ ನಮ್ಮ ಜನವದು ದುಷ್ಟಶಕ್ತಿಯ ನಾಶಕೆ

ಎಂಬ ಆಶಯ ವ್ಯಕ್ತಪಡಿಸುತ್ತಾರೆ.

ಕನ್ನಡ ನೆಲವೆಲ್ಲ ಕನ್ನಡದ ಜಲವೆಲ್ಲ
          ಕನ್ನಡದ ಜನಮನದ ಬಾಳಿಗಾಗಿ;
          ಕನ್ನಡದ ಗಿರಿಯೆಲ್ಲ ಕನ್ನಡದ ಸಿರಿಯೆಲ್ಲ
          ಕನ್ನಡದ ಮುನ್ನಡೆಯ ಕೇಳಿಗಾಗಿ
          (ಧನ್ಯವಾಗಲಿ ನಾಡು – ಚೈತ್ರಾಗಮನ)

ಕನ್ನಡ ನಾಡು ಸಂಪದ್ಭರಿತ ಅದರ ಸೌಭಾಗ್ಯವೆಲ್ಲ ಕನ್ನಡಿಗರ ಪಾಲಿನದು ಅದನ್ನು ಬಳಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಅರ್ಥವಂತಿಕೆ ಹೊಣೆಗಾರಿಕೆ ಕೂಡಾ ಕನ್ನಡಿಗರದು. ಕನ್ನಡಿಗರ ಬದುಕಿಗೆ ನಾಡಿನ ಸಮೃದ್ಧಿಗೆ ಇದರ ಪ್ರಯೋಜನವಾಗಬೇಕು ಇದು ಕವಿಯ ಇಚ್ಛೆ. ಇವತ್ತು ಕನ್ನಡಿಗರ ಪಾಲಿಗೆ ಎರವಾಗುತ್ತಿರುವ ಈ ನಾಡಿನ ಸಂಪತ್ತು ಅನ್ಯರ ಭೋಗಕ್ಕೆ ಈಡಾಗುತ್ತಿರುವುದನ್ನು ಕವಿ ಮೊದಲೇ ಊಹಿಸಿದ್ದರೋ ಏನೋ? ಅದಕ್ಕೆ ಈ ಮಾತನ್ನು ಇಲ್ಲಿ ಹೇಳಿದ್ದಾರೆ.

ನಾಡು – ನುಡಿಯ ಅಸ್ಮಿತೆಯನ್ನು ಪ್ರೀತಿಯನ್ನು ಕನ್ನಡಿಗ ಹೊಂದುವದಕ್ಕೂ ಅವರು ಉತ್ತೇಜಿಸುತ್ತಾರೆ. ‘ನಡೆ ಸಾಗು’ ‘ನೋಡು ನಲ್ಲೆ ಈ ದಿನ’ ‘ಧನ್ಯವಾಗಲಿ ನಾಡು’ ‘ನೀನಲ್ಲವೆ?’ ‘ನಾಡಕಹಳೆ’ ಯಂತಹ ಕವಿತೆಗಳಲ್ಲಿ ಕವಿಯ ಕನ್ನಡಾಭಿಮಾನ ಸಾಂದ್ರವಾಗಿ ಪ್ರಕಟವಾಗಿದೆ.

ವ್ಯಕ್ತಿಗೀತ ಸುನೀತಗಳು

ಅನೇಕ ಯೋಗಿ ಮಹಾಪುರುಷ ಮಹಾನ್ ವ್ಯಕ್ತಿಗಳ ಪ್ರಭಾವ ಕವಿಯ ಮೇಲಾಗಿರುವುದು ಸ್ಪಷ್ಟ. ಅವರ ಚೇತನದ ಮಹತ್ವವನ್ನು ಬಸುಪಟ್ಟದ ಅವರು ತಮ್ಮ ಕವಿತೆಗಳಲ್ಲಿ ಸೊಗಸಾಗಿ ಚಿತ್ರಿಸುತ್ತಾರೆ. ಅವರ ವ್ಯಕ್ತಿಗೀತ ಸುನೀತಗಳು ಸಹೃದಯರನ್ನು ತೀವ್ರವಾಗಿ ಒಳಗು ಮಾಡಿಕೊಳ್ಳುವ ವಿಶಿಷ್ಟತೆಯನ್ನು ಪಡೆದುಕೊಂಡಿವೆ.

ಕವಿತೆಯೊಳಗಿನ ಕೆಲವು ಸಾಲುಗಳು ಆ ವ್ಯಕ್ತಿಗಳ ಧೀಮಂತ ನಿಲುವನ್ನು ಗಂಧದಂತೆ ತೀಡಿ ನಿತಾಂತ ಪರಿಮಳ ಬೀರುವ ಬಗೆ ಗಮನಾರ್ಹವೆನಿಸಿದೆ.

…ವಚನವಿರಲಿ ಹೊಮ್ಮಿಸುತ ಹೊಸಜೀವ,
ಚಿಮ್ಮಿಸಿದೆ ಅದರ ಜೊತೆ ಹೊಸಭಾವ, ರಸಭಾವ;
…ವಾಙ್ಮಯ ಸಿರಿಯ ಹೆಚ್ಚಿನದ ಹೇ ಬಸವ
(ಅಣ್ಣ ಬಸವಗೆ)

ನಿನ್ನ ಜಪತವವೆಲ್ಲ ಕನ್ನಡದ ಮುನ್ನುಡೆಗೆ
ಮುಡಿಪಾಗಿ ಸಂದಿತೈ ಆ ನಿನ್ನ ತಪಗೋಳ
(ವಿದ್ಯಾರಣ್ಯ)

ಕೆಚ್ಚದೆಯ ಕಡುಗಲಿ ಎನಿತ ವಿಭೂತಿ ನೀನಾದೆ
(ವೀರ ಪುಲಿಕೇಶಿ)

ನಿನ್ನ ಮೋಹನ ಮೂರ್ತಿ ಭುವನ ಜನಸಂಕೀರ್ತಿ
(ಬುದ್ಧದೇವ)

ಮಾನವರ ಅನುತನುವ ಕಾರುಣ್ಯದಲಿಕೇಳಿ
ಮನದ ಕಾಲಿಕೆ ಕಳೆದೆ ಇಳೆಯಲ್ಲಿ ಮೈದಾಳಿ
(ಸಿದ್ಧಲಿಂಗ ಯತಿ)

ಬಿತ್ತು ಎತ್ತರಕೇರಿ ತುತ್ತ ತುದಿಯಲಿ ನಿಂತ
ಚಿತ್ತ – ರಾಗದ ವಿಜಯಿ ಯೋಗಿವರ ಮಹಾಂತ
(ವಿಜಯ ಮಹಾಂತೇಶ)

ಮಾನವತೆ ಮೈಗೊಂಡ ಓ ಮೂರ್ತಿಮೋಹನನೆ
ಕರ್ತವ್ಯ – ಕರಮರಾ ಓ ಪುಣ್ಯ ಬೆಳಸೆ
(ಬಾಪೂಜಿ)

ಫ.ಗು. ಹಳಕಟ್ಟಿಯವರನ್ನು ಕುರಿತು
ವಚನಶಾಸ್ತ್ರದ ಪಿತಾಮಹ ನೀನಾದಿ;
ನುಡಿಯುತಿಹ ನಡೆಯುತಿಹ ಗೋಳಗುಮ್ಮಟವಾಗಿ
(ವರ ಪುಣ್ಯಪುರುಷ)

ಶಿವರಾಮ ಕಾರಂತರನ್ನು ಕುರಿತು,
ಸೋಲು ಮಾಸದ ಮಹಾಸಾಹನೆಗೆ ಸಂಚಾರಿ
ಬಾಳಕ್ಷೇತ್ರದಿ ಮೆರೆವ ಪೌರುಷದ ಪೂಜಾರಿ
(ಧೀರ ಸಾಹಿತಿ ಭಾನು)

ಇಂದಿರಾ ಗಾಂಧಿಯವರನ್ನು ಕುರಿತು,
ತಾಯಿ,
ನೀವು ಸ್ಟೇಜಿನ ಮೇಲೆ ಬಂದು ನಿಂತಂದಿನಿಂದ
ನಿಮ್ಮ ಪಾತ್ರದ ವೈಖರಿ ಅನರ್ಘ್ಯ – ಅಮೋಘ!
(ಅಂಕಿನಪರಡೆ ಒಲಿದು ಬಿಡ್ತು)

ಹೀಗೆ ಆಪ್ತರಾದ ನುಡಿಗಳಿಂದ ಕವಿ ಲಾಲಬಹೂದ್ದೂರ ಶಾಸ್ತ್ರಿ. ನೇತಾಜಿ, ನೆಹರೂ, ಅವರ ವ್ಯಕ್ತಿತ್ವವನ್ನು ಬಣ್ಣಿಸುವ ರೀತಿ ಓದುಗರನ್ನು ಪ್ರಭಾವಗೊಳಿಸದೆ ಇರದು.