ತಣ್ಣಗಿನ ಬಂಡಾಯ

ನವೋದಯ ಕಾವ್ಯ ಸಂಪ್ರದಾಯದ ನೈಪುಣ್ಯತೆ ಸಾಧಿಸಿದ ಕವಿ ಕೊನೆ ಕೊನೆಗೆ ನವ್ಯ ಮತ್ತು ಬಂಡಾಯದ ಧಾಟಿಯನ್ನು ಇಷ್ಟಪಟ್ಟಂತೆ ತಮ್ಮ ಕಾವ್ಯಕ್ಕೂ ಅದನ್ನು ಬಳಸಿಕೊಂಡಿದ್ದಾರೆ. ಅವರ ಕೊನೆಯ ಸಂಕಲನ ‘ಸತ್ತವರು ನಾವಲ್ಲ’ ದ ಕವಿತೆಗಳು ಈ ದಾರಿಯಲ್ಲಿ ಸೃಜನಗೊಂಡಿವೆ.

ಬಸುಪಟ್ಟದರು ಸಾತ್ವಿಕ ಕವಿಗಳೆಂದೇ ಕರೆಯಿಸಿಕೊಂಡವರು. ಮೊದಲ ನಾಲ್ಕು ಸಂಕಲನಗಳು ಈ ಮಾತಿಗೆ ಸಾಕ್ಷಿಯಾಗಿವೆ. ನನ್ನ ಮತ್ತು ಬಂಡಾಯದ ಪ್ರಖರತೆ ಇದ್ದ ಕಾಲದಲ್ಲಿ ಕಾವ್ಯಧೋರಣೆ, ಧಾಟಿ ಅತ್ತ ಕಡೆಗೆ ಹೊರಳಿಕೊಂಡಿದ್ದಿಲ್ಲ ಆದರೆ ತಮ್ಮ ಜೀವಿತದ ಕೊನೆಯ ಗಳಿಗೆಯಲ್ಲಿ ಅವರ ಕವಿತೆಗಳು ನವ್ಯ ಮತ್ತು ಬಂಡಾಯದ ಮಾದರಿಯನ್ನು ಹೊಂದಿ ಅಚ್ಚರಿ ಮೂಡಿಸಿವೆ. ಆದರೆ ಅನ್ನಿನದ ತಣ್ಣಗಿನ ಬಂಡಾಯ ಮಾತ್ರ.

ಸಾತ್ವಿಕತೆ ಪರಿಣಾಮ ನೈಧಾನಿಕ ಇದರ ಪ್ರಜ್ಞೆಯೋ? ಜೀವ ಪ್ರೀತಿಗಳ ಯಾತನೆ ಶೋಷಣೆಗಳ ತಳಮಳವೋ? ರಕ್ಕಸ ಮನೋಭಾವಗಳ ದೌರ್ಜನ್ಯವೋ? ಹಿಂಸಾತ್ಮಕ ಧೋರಣೆಯೋ? ಅವುಗಳ ಮೇಲಿನ ಒಟ್ಟಾರೆಯಾದ ಆಕ್ರೋಶದ ನಿಲವೋ?

ರಿಂಗ್ ಮಾಸ್ಟಕೀ ಕಾಲ ಮುಗೀತು
ಮನಸ್ವಾರನೂ ಪಶೂನು
ಒಂದ ರೀತಿ
ಕನಿಕರ ಇಲ್ಲ ಕುಣಿಸ್ಯಾಡಿ
ಉರದಾದೂ
ಸರ್ಕಸ್ ಮಾಲೀಕತನದ ಕಾಲ ಹಿಂದ್ ಆತು
ಲಂಗಲಗಾಮು ಇಲ್ದಂಗ
ಮಂದಿಮ್ಯಾಲ ಜೋಲಿ ಹಾಕಿ
ಮುಂದುಕ ಬಿದ್ದು ಮೆರೆಯೋ ಕಾಲಾ
ಸುಡಗಾಡ ಸೇರ್ತು ss
`ಚಿತ್ತಾ ತೋರ್ಸಿ ಕೆಲ್ಸ ಮಾಡ್ಸೆನೊ’
ಅನ್ನೋ ಛಾತೀ
ಮಣ್ಣಗೂಡಿ ಮರ್ತ ss ಹೋಯ್ತು

ಎಂದು ಕಾಲದ ಬದಲಾವಣೆಯ ವಾಸ್ತವದ ದರ್ಶನ ಮಾಡಿಸುವ ಕವಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ.

“ಏಳ್ರೀ ಏಳ್ರೀ! ಹಿಂಗ್ಯಾಕ ಬಿದ್ದೀರಿ?
ಎದ್ದವ್ರ ನೆಳ್ಳುs ಬಿದ್ದವು ಮ್ಯಾಲಂತು
ಹೀಂಗss ಬಿದ್ರ
ಬರೀ ಆ ಮಂದಿ ನೆಳ್ಳಾಗs ಬೀಳ್ತೀರಿ
………………………………….
ಕಣ್ ತೆರೆದು ಎದ್ದವ್ರಿಗೆಲ್ಲಾ ಬೆಳಕs ಬೆಳಕು
(ಬೆಳಕಿನ್ಯಾಗ ಹೆಜ್ಜೀ ಇದ್ರೆ – ಸತ್ತವರು ನಾವಲ್ಲ)

ಯಾತನೆ ಅನೂಭವಿಸುತ್ತ ಬಿದ್ದವರ ಬಗ್ಗೆ ಕವಿಗೆ ಕಾಳಜಿಯಿದೆ.

ಅವರ ‘ಮಣ್ಣ ಕಣಗಳು’ ಕವಿತೆ ಶೋಷಿತರನ್ನು ಕುರಿತು ಹೇಳುತ್ತದೆ. ವಿಚಿತ್ರವೆಂದರೆ ಈ ಕವಿತೆಯಲ್ಲಿ ಪೋಷಕರು ಶೋಷಿತರ ಬಗ್ಗೆ ಹೇಳುವುದು ಗಮನಾರ್ಹವೆನಿಸಿದೆ. ಈ ಶೋಷಕರೂ ಮಣ್ಣ ಕಣಗಳಂತಿರುವ ದುರ್ಬಲರನ್ನು ತುಳಿದು ನೆಲಾ – ಹೊಲಾ, ಮನೆ – ಮಠಾ, ಮಹಲು ದಕ್ಕಿಸಿಕೊಂಡು ದೊಡ್ಡವರೆನಿಸಿದ್ದಾರೆ. ಧೂಳು ಏಳದ ಹಾಗೆ ಅವರನ್ನು ತುಳಿದು ವಚನಧಾರಿಕೆಯನ್ನು ಪಡೆದುಕೊಂಡಿದ್ದಾರೆ. ಅಶಕ್ತರ ಮೇಲೆ Road Roller ಆಡಿಸಿ ತಮಗೆ ಹಾದಿ ಮಾಡಿಕೊಂಡು ಮುಂದುವರಿದಿದ್ದಾರೆ. ದೀನದಲಿತರ ಸುತ್ತ ಭರಪೂರನಾಗಿ ಬೆಳೆದು ಕೆನೆಗಟ್ಟಿ, ತೆನೆಗಟ್ಟಿದರೂ ತಮ್ಮ ದಬ್ಬಾಳಿಕೆಯ ಪ್ರಕ್ರಿಯನ್ನು ಬಿಟ್ಟುಕೊಟ್ಟಿಲ್ಲ. ದೀನದಲಿತರು ಅವರಿಗೆ ಏಣಿಯಾಗಿದ್ದಾರೆ. ಏಣಿ ಹತ್ತಿದವರು ನಿರ್ಲಕ್ಷಿರಾಗಿರುವ ಆಡುವ ಮಾತು ನೋಡಿ,

ನಿಮ್ಮ ಮೇಲೆ ನಾವು ಹತ್ತಿ ನಿಂತು
ಬಂಗಾರದ ಬಾಚಣಿಕೆ ಹಿಡಿದು, ತಲೆಯ ಬಾಚುತ್ತೇವೆ
ಮುಗಿಲಿಗೆ ಕೈ ಹಚ್ಚುತ್ತೇವೆ
ಹೀಗಿದ್ದರೂ
ನಿಮ್ಮನ್ನು ಮೆಟ್ಟಿದ
ಈ ‘ಕಾಲ’s
ತಲೆಯ ಮೇಲೆ ಹೊತ್ತು ಆದಿಶೇಷನ ತರದಿ ನಿಂತಿದ್ದೀರಿ
ಅಂತೆಯೇ
ನಮ್ಮ ಈ ದೊಡ್ಡವರ
ಹಾರಾಟ – ಏರಾಟ

ಎಷ್ಟು ಅನುಮಾನಷವಲ್ಲವೆ ಈ ಕೃತ್ಯ? ಆದರೂ ಅವಳ ಒಳತೋಟಿ ಪ್ರಾಂಜಲವಾಗಿದೆ. ಉಳ್ಳವರ ದೃಷ್ಠಿಯಲ್ಲಿ ಬಡವರು ಮನುಷ್ಯರೇ ಅಲ್ಲ. ಅವರು ಕಹಿ ನುಂಗುತ್ತಿದ್ದರೂ ಖಾರವಾಗುವುದಿಲ್ಲ ಕೆಂಪಾಗುವುದಿಲ್ಲ. ಒಂದು ಅರ್ಥದಲ್ಲಿ ಅವರಿಗೆ ಜೀವವೇ ಇಲ್ಲ. ಹಾಗೇ ಜೀವಿಸಲಿಕ್ಕೆ ಸಿರಿವಂತರು ಬಿಟ್ಟೇ ಇಲ್ಲ. ನಿರಂತರ ಅವರನ್ನು ಶೋಷಿಸಿದ್ದಾರೆ ಅವರಿಂದ ಇವರು ಶೋಷಿತರಾಗಿದ್ದಾರೆ.

ಈ ಕವಿತೆಗೆ ಮುಖಾಮುಖಿಯಾಗುವಂತಹ ಕವಿ ‘ನಾನು ಸತ್ತವರಲ್ಲ’ ಕವಿತೆಯನ್ನು ಸೃಷ್ಠಿಸಿದ್ದಾರೆ. ಶೋಷಕರನ್ನು, ಶೋಷಿತರು ಸಂಭಾಳಿಸಿಕೊಂಡಿರಬಹುದು. ಸತ್ತಂತೆ ತೋರಿರಬಹುದು ನಿಜಕ್ಕೂ ಅವರು ಸತ್ತವರಲ್ಲ. ಅದನ್ನು ಅವರೇ ಬಾಯಿಬಿಟ್ಟು ಹೇಳುವುದು ಹೀಗೆ,

ನಾವು ಸತ್ತವರಲ್ಲ ಸಾರ್
ಆದರೆ ಮೊದಲೇ ನಾವು ಬಾಯಿ ಸತ್ತವರು
………………………………………….
ಧ್ವನಿ ದೊಡ್ಡದು ಮಾಡಿ ಕಿರುಚಿ ನಮಗೆ ಗೊತ್ತಿಲ್ಲ
ನಾವೇನೂ ಸತ್ತಿಲ್ಲ
…………………………………………………………
ಹಲವಾರು ತೆರದಿ ಬಡಿಬಡಿದು ಹೋದರೂ
ಕಲ್ಲು ಬಂಡೆಯ ತೆರದಿ ನಿಂತವರು ನಾನು.

ಎಂದು ತಮ್ಮ ಗಟ್ಟಿತನಕ್ಕೆ ಪುರಾವೆ ನೀಡುತ್ತಾರೆ. ಹಾಗೇ ಸ್ವಾರ್ಥಿಗಳ ದಾಹದ ವಿಪರೀತ ಬುದ್ಧಿಯನ್ನು ತಿವಿಯುತ್ತಾರೆ.

ಮನೆಯಲ್ಲಿ ಹೈನವಿದ್ದರೂ
ಬಾಗಿಲ ಮುಂದೆ ಶೆಗಣಿ ಬಿದ್ದರೆ
ಆ ಹೊತ್ತಿಲ ನನ್ನದೆಂದು ಮುಂದರಿದು
ಮನೆಯಲ್ಲಿ ತಂದು ಹಾಕುವ
ಹರಿತ ನಾಲಿಗೆಯವರು ನಾನಲ್ಲ
ಅಂಥ ಛಾತಿ ನಮಗೆ ಬರಲೇ ಇಲ್ಲ

ನಮ್ಮ ಒಡಲನು ತುಂಬಿ ಉಂಡಮನೆಗಳ ಎಣಿಸಿ
ಮನದಲ್ಲಿ ಏನೆನೋ ಗುಣಿಸಿ
ಸುಡುವ ಮನೆಗಳ ಗಳ ಹಿರಿದು
ನಮ್ಮ ಮನೆಯಲ್ಲಿ ಸುರಿದು
ನಿಲ್ಲುವ ಆ ತಾಕತ್ ನಮಗಿಲ್ಲ ಸಾರ್
ಅಂಥ ಜಾತಿ ಜನ ನಾವಲ್ಲ ಸಾರ್.

ಎಂಬ ಎದೆಗಾರಿಕೆಯ ಮಾತಾಡಿ ಉಳ್ಳವರ ಹಲ್ಕಾತನವನ್ನು ಬಯಲು ಮಾಡುವ ಪರಿ ಹರಿತವಾಗಿಯೇ ಇದೆ. ಬಾಯಿ ಇದ್ದವರು ಗುಲ್ಲೆಬ್ಬಿಸುತ್ತಾರೆ. ಸೋಪಿನಿಂದ ತಮಗೆ ಅಂಟಿಕೊಂಡ ಕಪ್ಪು ತೊಳೆದು, ಮಂದಿಯ ಮುಖಕ್ಕೆ ಮಸಿ ಬಳೆದು ತಮ್ಮ ಶುದ್ಧ ಸಾಬಿತನ ಮೆರೆಸುವ ಹಾದಿ ಮಾತ್ರ ಬಾಯಿ ಸತ್ತವರಿಗೆ ತಿಳಿದಿಲ್ಲ ಎಂಬುದನ್ನು ಕವಿ ಸ್ಪಷ್ಠೀಕರಿಸುತ್ತಾರೆ.

ನಡೆನುಡಿಯಲ್ಲಿ ಬೆರಕಿತನವನ್ನು ಮೇಳೈಸಿಕೊಂಡಿರುವವರು ಕಲಬೆರಕೆ ಮಂದಿ ಎಂದು ನಿಷ್ಠುರವಾಗಿ ನುಡಿದು,

ಹೌದಪ್ಪನ ಚಾವಡಿಯಲ್ಲಿ ಹೌದಪ್ಪನಾಗಿ
ಅಲ್ಲಪ್ಪನ ಚಾವಡಿಯಲ್ಲಿ ಅಲ್ಲಪ್ಪನಾಗಿ
ವ್ಯವಹರಿಸುವ ಚುರುಕುತನ ನಮಗೆ ಬರಲಿಲ್ಲ

ಎಂದು ತಮ್ಮ ಸಹಜತೆಯನ್ನು ಸಾರಿ ಹೇಳುತ್ತಾರೆ. ಮನುಷ್ಯ ಮನುಷ್ಯನಂತೆ ಬದುಕುವುದರಲ್ಲಿ ಈ ಸಹಜತೆಯ ಸೊಬಗು ಇದೆ. ರಕ್ಕಸ ಸ್ವಭಾವದ ಜನರಿಗೂ ಬೆಳಕಿನ ದಾರಿ ತೋರಿಸುವ ಕೆಲಸವನ್ನು ಪ್ರೀತಿಯಿಂದಲೇ ಮಾಡುತ್ತಾರೆ.

ಕತ್ತಲ್ದಾಗ ಹೆಗ್ಗಣದ್ಹಂಗ ಓಡ್ಯಾಡೂದ ಸಾಕಮಾಡ್ರಿ
ಕತ್ತಾಲ್ದಾಗಿನ ವ್ಯವಹಾರನ ಬಂದ ಮಾಡ್ರಿ
ಹಂದಿಹಾಂಗ ಹೊಲಿಸಿನ್ಯಾಗ
ಹೊಳ್ಸಾಡೊದು ನಿಲ್ಲಿಸಿ ಬಿಡ್ರೀ
(ಬೆಳಕಿನ್ಯಾಗ ಹೆಜ್ಜೀ ಇಡ್ರಿ – ಸತ್ತವರು ನಾವಲ್ಲ)

ಮನುಷ್ಯ ಶುದ್ಧನಿದ್ದರೆ ಜಗತ್ತು ಶುದ್ಧವಾಗಿರುತ್ತದೆ. ಎಲ್ಲ ಮನುಷ್ಯರು ಒಂದಾಗಿ ಬೆಳಕಿನ ಕಡೆಗೆ ಹೋಗುವುದರಲ್ಲಿ ಹಿತವಿದೆ.

ಗೂಳಿಯಂತೆ ರಣಹದ್ದುಗಳಂತಿರುವ ರಾಜಕಾರಣಿಗಳು, ಸಿರಿವಂತರು ಎಚ್ಚರವಾಗಿರಬೇಕಾದ ಸ್ಥಿತಿ ನಿರ್ಮಾಣವಾಗಿರುವುದರ ಬಗ್ಗೆ ಕವಿ ಅವರ ಗಮನ ಸೆಳೆಯುತ್ತಾರೆ. ಜನರ ಪ್ರಜ್ಞೆ ಈಗ ಮೊದಲಿನಂತೆ ಇಲ್ಲ ಎಂಬುದರ ಸೂಕ್ಷ್ಮವನ್ನು
ಅಂತೆಯೇ ಜನವಿಂದು
ನೀ ಬರುವಿಯೆಂದು ಬಡಿಗೆ ಹಿಡಿದಿದ್ದಾರೆ
ಜೋಕೆ ಬಲು ಜೋಕೆ
ಹಮ್ ಕರೇಸೋ ಕಾಯದಾ ಎಂಬ ಮಾತಿಗೆ
ಉಳಿದಿಲ್ಲ ಎಂದಿಗೂ ಯಾವ ನಂಟು
ಗೂಳಿ, ಎಬ್ಬಿಸಬೇಡ ನೀ ಇಲ್ಲದ ಧೂಳಿ
ಚಂಡಿಗೆ ಕೈಕೊಟ್ಟು ಬುದ್ಧಿಗಲಿಸುವರು
ಇಂಥ ಮಾತುಗಳ ಮೂಲಕ ಅಭಿವ್ಯಕ್ತಿಸುತ್ತಾರೆ.

ಬದುಕುವುದಕ್ಕೆ ಪ್ರೀತಿಯಷ್ಟೇ ಅಲ್ಲ ಬಡವರಿಗೆ ಈ ಧೈರ್ಯವೂ ಬಂದಿದೆ. ಅವರ ಮೇಲೆ ಅನ್ಯಾಯ ಎಸಗುವ ಜನ ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಇರಬೇಕೆನ್ನುತ್ತವೆ. ಕವಿತೆ ಬದುಕಿನ ಅರ್ಥವನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಕಾಲಿಟ್ಟ ನೆಲ ಕುಸಿದರೂ ಕೈಯಿಟ್ಟ ಕಾರ್ಯ ಜಿನದರೂ, ಮೇಲಿನವರು ಉರಿದುಬಿದ್ದರೂ ಮುಗಿಲು ಮೇಲೆ ಹರಿದುಬಿದ್ದರೂ ತಮ್ಮಷ್ಟಕ್ಕಾದರೂ ಬದುಕುವ ಹಠ ದೀನದಲಿತರಲ್ಲಿ ಹೆಪ್ಪು ಗಟ್ಟಿಗೆ. ಅದಕ್ಕಾಗಿ ಅವರು ದೃಢವಾಗಿ ವಲಿಯುತ್ತಾರೆ. ‘ಇರಬೇಕೆನ್ನುತ್ತವೆ ಸ್ವಾಮಿ’

ಈಗವರು ಕಟುಕುವ ಜೋಳಿಗೂ, ಚುಚ್ಚುವ ಮುಳ್ಳಿಗೂ ವಿಷದ ಹಾವಿಗೂ ಹೆದರುವುದಿಲ್ಲ. ಬದುಕುವ ಧೋರಣೆ ದೃಢವಾಗಿರುವುದರಿಂದ

ಅವರಿವರು ನಮ್ಮ ಮೇಲೆತ್ತುವುದು ಬೇಡ
ಅವರಿವರಿಗೆ ನಾವು ಹಡದಿ ಹಾಸುವುದು ಬೇಡ
ಹೆರವರ ಹರಕೆಗೆ ಬಾಯೊಡ್ಡುವುದೂ ಬೇಡ
ಹೆರವರ ಬಾಯ್ಯಂಬುಲಕೆ ಕೈಯಾನುವುದೂ ಬೇಡ

ಎಂದು ಗಟ್ಟಿಯಾಗಿದ್ದಾರೆ. ಮನ ಬರಡದಲ್ಲದ ಬಡವರು ಒಳ್ಳೆತನದಲಿ ಬಾಳ ಬೇಕೆಂದುಕೊಂಡಿದ್ದಾರೆ “ಹೊಡತೆನೆಯ ಹಾಲ್ಗಾಳ ಮೆಲಿದು ಬಲಿತು ಅರಿವಿನ ಘನ ಅಣುವ ಪಡೆಯಲಾಶಿಸಿ” ಗಟ್ಟರಾಗಿ ನಿಂತಿದ್ದಾರೆ ಕವಿ ಬಂಡಾಯದ ಮನೋಧರ್ಮದಲ್ಲಿ ಅವರನ್ನು ಲೋಕಕ್ಕೆ ತೋರಿಸುತ್ತಾರೆ.

ಕಾವ್ಯ ವೈವಿಧ್ಯತೆ

ಕವಿ ಬಸುಪಟ್ಟದ ತಮ್ಮ ಕಾವ್ಯದಲ್ಲಿ ವೈವಿಧ್ಯತೆಯನ್ನು ಚಂದವರಾಗಿದ್ದಾರೆ. ಅಲ್ಲಿ ಬಾಲ್ಯದಬೆರಗು, ಅಳುವನ್ನು ಹತ್ತಿಕ್ಕುವ ನಗೆಯ ಬಗೆ, ಪ್ರೇಮದ ಉತ್ಕಟ ಹಂಬಲ, ವಿರಹದ ಬೇಗೆ, ಸಾವಿನ ಬಯಕೆ, ಬದುಕಿನ ಲವಲವಿಕೆ, ಸಾಮಾಜಿಕ ಕಳಕಳಿ, ದೀನ – ದಲಿತರ ಬಗೆಗಿನ ಮಿಡಿತ, ವ್ಯವಸ್ಥೆಯ ಕ್ರೌರ್ಯದ ಬಗೆಗಿನ ನಟ್ಟು, ರಾಜಕಾರಣಿಗಳ ಆಕ್ರಮಣ, ಸಿರಿವಂತರ ದಬ್ಬಾಳಿಕೆ, ಇಳಿವಯಸ್ಸಿನವರ ಚಾಪಲ್ಯ, ವೇಶ್ಯಾಜೀವನ, ಶಿಕ್ಷಕರ ಜೀವನ, ಯುವಜನಾಂಗದ ಉಡಾಫೆ, ಮನುಷ್ಯ ಬದುಕಿನ ಮೌಲ್ಯಗಳ ತುಡಿತ, ಆಧ್ಯಾತ್ಮದ ಅರಿವು ಇವೆಲ್ಲ ಬಸುಪಟ್ಟದ ಕಾವ್ಯದೊಡಲನ್ನು ಸಿಂಗರಿಸಿಕೊಂಡು ಸಹೃದಯರಿಗೆ ಪ್ರಿಯವಾಗಿವೆ.

ಹಬ್ಬಗಳೆಂದರೆ ಕವಿಗೆ ಎಲ್ಲಿಲ್ಲದ ಹರುಷ. ಅವುಗಳ ಉದ್ದೇಶವನ್ನು ಕುರಿತು ಹಾಡುವ ರೀತಿಯಲ್ಲಿ ಸೊಗಸಾದುದು;

ಹಬ್ಬವು ಬಂದಿತು ಹರುಷದ ತಂದಿತೆ ನಾಡಿನ ಜನರೊಳಗೆ
ಬೆಳಗೂ ಬೈಗೂ ದುಡಿದೇ ದುಡಿದು ಬಿದ್ದರೆ ದೇಹವು ಕೆಳಗೆ,
ಅದೆ ನಿಮಿಷಾದರೂ ಅಳಲನು ಮರೆತು ಜೀವವು ತನ್ನೊಳಗೆ
ನಕ್ಕ್ರೆ ಜೀವ, ಉಕ್ಕಲು ಭಾವ, ಅದುವೇ ಹಬ್ಬವು ಇಳೆಯೊಳಗೆ
(ಹಬ್ಬವು ಬರುತಿದೆ – ವೈಜಯಂತಿ)

ಸಂಕ್ರಾಂತಿಯ ಸಂಭ್ರಮವನ್ನು ಕುರಿತು ಅಷ್ಟೇ ಹಿತವಾಗಿ ಕವಿ ಹಾಡಿಕೊಳ್ಳುತ್ತಾರೆ.

ಎಳ್ಳು – ಬೆಲ್ಲದ ಸ್ನೇಹಸ್ನಿಗ್ಧಮಯ ಮಾಧರ್ಯ
ಸ್ಪುರಿಸಿ ಬಾಳಿಗೆ ಜೀವ ತುಂಬುತಿಹುದು;
ಜೀವತುಂಬಿದ ಬಾಳು ತುಂಬುಬಾಳನು ಬಾಳಿ
ಪ್ರೇಮದಲಿ ದೇವತ್ವ ಕಾಂಬುತಿಹುದು

ದೀಪಾವಳಿ ಕವಿಯ ಪಾಲಿಗೆ ವಿಶೇಷ ಹಬ್ಬವೆನಿಸಿದೆ. ಈ ಹಬ್ಬದ ಸಡಗರವನ್ನು ಕುರಿತು ಮತ್ತೆ ಮತ್ತೆ ಹಾಡಿಕೊಳ್ಳುವ ಕವಿ ಅದರ ವಿಪರ್ಯಾಸಗಳನ್ನು ವಿಷಾದದಿಂದಲೇ ಅಭಿವ್ಯಕ್ತಿಸುತ್ತಾನೆ.


ಸಿರಿವಂತರ ಮನೆಯೊಳಗಿದೆ
ದೀಪಾವಳಿಯುಬ್ಬs
ಬಡಬಗ್ಗರ ಮನೆಯೊಳಗಿದೆ
ಸಂಕಷ್ಟದ ಮಬ್ಬು


ಧನವಂತರ ಮನೆ ಬೆಳಗಿವೆ
ವಿಧವಿಧದಾ ದೀಪ;
ಧನ ಹೀನರ ಮನೆಯೊಳಗಿವೆ
ಬಹುರೂಪದ ತಾಪ
(ದೀಪಾವಳಿ – ಚೈತ್ರಾಗಮನ)

ದೀಪಾವಳಿಯ ಸಂಭ್ರಮ ಎಲ್ಲ ಮನುಷ್ಯರಿಗೂ ಒಂದೇ ರೀತಿಯಾಗಿಲ್ಲದಿರುವುದು ಕವಿಯನ್ನು ತಳಮಳಿಸಿದೆ. ಅದಕ್ಕೆ ಕವಿ ತನ್ನ ನಲ್ಲಿಗೆ ದೀಪಾವಳಿಯ ವಾಸ್ತವವನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಾರೆ.

ದೈನ್ಯ, ದಾರಿದ್ರ್ಯ, ಭೀತಿ, ಅಜ್ಞಾನ ಎಲ್ಲ ಚದುರಿ ಬಿಡಲಿ
ಹಬ್ಬದುಬ್ಬಿದುವು ಇಹದ ಜೀವಿತಕೆ ಹೊಸತು ತಂದುಕೊಡಲಿ
ಸೊಗಸು, ಸೌಭಾಗ್ಯ, ಜ್ಞಾನ, ಪ್ರೀತಿ ಬುವಿಯನ್ನೇ ಬೆಳಗಿ ನಿಲಲಿ
ಹೊಸತನ್ನೇ ಊಡಿ ಹೊಸತನ್ನೇ ತೀಡಿ ದೀಪಾವಳಿಗೆ ಗೆಲುವ ತರಲಿ
(ದೀಪಾವಳಿಗೆ ಮಾಡುನಲ್ಲೆ – ಚೈತ್ರಾಗಮನ)

ದೀಪಾವಳಿಯ ಸಾರ್ಥಕತೆ ಇಲ್ಲಿ ಅನನ್ಯವಾಗಿ ಕಂಡಿದೆ.

ನೇಕಾರ, ರೈತ, ಇತರೆ ಶ್ರಮಜೀವಿಗಳ ಕುರಿತು ಕವಿ ಹಾಡು ಕಟ್ಟದ್ದಾರೆ. ಹುತಾತ್ಮರನ್ನು ಸ್ಮರಿಸಿದ್ದಾರೆ. ಸ್ವಚ್ಛಂದ ಜಲಲ ಧಾರೆಯಂತಿರುವ ಅವರ ಕಾವ್ಯಕ್ಕೆ ಯಾವ ಕಟ್ಟುಪಾಡುಗಳಿಲ್ಲ. ಗೇಯತೆ ಅವರ ಕಾವ್ಯ ಜೀವಾಳ. ಹಾಡು ಹಿಗ್ಗಿಗಾಗಿ ಎಂಬುದಕ್ಕೆ ಇಲ್ಲಿನ ಕವಿತೆಗಳು ಉದಾಹರಣೆಯಾಗಿ ನಿಲ್ಲುತ್ತವೆ. ‘ಬರಿದಲೆಯ ಬಾಲೆ’ ‘ನಲಿಯೋಣ ಬಾರಾ’ ಎಂಬಂಥ ಕವಿತೆಗಳು ಬೇಂದ್ರೆಯವರ ಕಾವ್ಯವನ್ನು ನೆನಪಿಸುತ್ತವೆ. ಬೇಂದ್ರೆಯವರ ಕಾವ್ಯ ಪ್ರಭಾವಕ್ಕೆ ಬಸುಪಟ್ಟದರು ಒಳಗಾಗಿದ್ದಾರೆ.

ಅನೇಕ ಕವಿಗೋಷ್ಠಿಗಳಲ್ಲಿ ಬಸುಪಟ್ಟದ ಅವರು ತಮ್ಮ ಕವನಗಳನ್ನು ವಾಚಿಸಿ ಜನಮನ್ನಣೆ ಗಳಿಸಿದ್ದಾರೆ. ಧಾರವಾಡ ಆಕಾಶವಣಿ ಅವರ ಭಾವಗೀತೆಗಳನ್ನು ಪ್ರಸಾರ ಮಾಡಿದೆ.

ಆಕಾಶವಾಣಿ ಏರ್ಪಡಿಸಿದ ಡಾ. ವಿ.ಕೆ. ಗೋಕಾಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿ. ವಿಜಾಪುರದಲ್ಲಿ ವಾರ್ತಾಪ್ರಚಾರ ಬಾನುಲಿ ಶಾಖೆಯವರು ಹಮ್ಮಿಕೊಂಡ ಕವಿ ಸಮ್ಮೇಳನ, ಕೆ. ವಿ. ಪುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಗದಗದಲ್ಲಿ ನಡೆದ ಕೆ.ಜಿ. ಕುಂದಣಗಾರ ಅವರ ಅಧ್ಯಕ್ಷತೆಯಲ್ಲಿ ನೆಡೆದ ಕವಿಗೋಷ್ಠಿಯಲ್ಲಿ ಬಸುಪಟ್ಟದರು ತಮ್ಮ ಕವನಗಳನ್ನು ನಿವೇದಿಸಿದ್ದಾರೆ. ಅಲ್ಲದೆ ಅವರ ಬಹಳಷ್ಟು ಕವಿತೆಗಳು ‘ಜಯಂತಿ; ‘ಕರ್ಮವೀರ’ ‘ಪ್ರಜಾಮತ; ‘ನವಯುಗ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಬಸುಪಟ್ಟದ ಕಾವ್ಯ ಕುರಿತು ರಂಶ್ರೀ.ಮುಗುಳಿಯವರು “ಅವರಲ್ಲಿಯ ಸತ್ವ ಮೇಲು ಮೊಗವಾಗಿದೆ. ಕಾವ್ಯಶಕ್ತಿ ಸಹಜವಾಗಿದೆ” ಎಂದರೆ ಡಾ.ಡಿ.ಎಸ್. ಕರ್ಕಿಯವರು “ಬಸುಪಟ್ಟದ ಅವರ ಕವನಗಳ ಭಾವ ಹೇಗೋ ಹಾಗೆ ಅವರ ಕವನಗಳ ಶೈಲಿ ಸುಕುಮಾರವಾದುದು. ನಯ ನಾಜುಕುಗಳಿಂದ ಜಡಗೂಡಿದುದು ಹೊಸ ಛಂದದ ಕೆಲವೊಂದು ಗತ್ತುಗಳನ್ನು ಅವರು ತಮ್ಮ ಕವಿತೆಗಳಲ್ಲಿ ಸುಖವಾಗಿ ಬಳಸಿದ್ದಾರೆ. ಆದುದರಿಂದ ಅವರ ಕವಿತೆಗಳಿಗೆ ಒಂದು ಹೆಚ್ಚಿನ ನಾದಮಾಧುರ್ಯವು ಪ್ರಾಪ್ತವಾಗಿದೆ.” ಎಂದು ಅಭಿಪ್ರಾಯಪಡುತ್ತಾರೆ. ಕವಿ ಡಿ.ಎಸ್.ಇಂಚಲರು “ರತ್ನದೀಪದ ಶುಭ್ರ ಕಿರಣಗಳಿಂದ ನಿಚ್ಚಳವಾಗಿ ನನ್ನ ಚಿತ್ತಭಿತ್ತಿಯಲ್ಲಿ ಮೂಡಿತು ಬೆಳಕನ್ನು ಬೀರುವುದೇ ದೀಪದ ಸಹಜ ಕಾರ್ಯ. ನಿಮ್ಮ ಬಾಳಿನ ದಾರಿಯುದ್ದಕ್ಕೂ ಏಳುಬೀಳುಗಳಲ್ಲಿ ಬಿರುಗಾಳಿ, ಸುಳಿಗಾಳಿಗಳಲ್ಲಿ,ಕವಿದ ಕಾರ್ಮೋಡಗಳಲ್ಲಿ ಬೆಳಕು ಬೀರಿ ಮುನ್ನಡೆಯಿಸಿದ ಆ ಸಾತ್ವಿಕದ ಶುಭ್ರ ಹೊಂಬೆಳಕು ಓದುಗರ ಬಾಳಬಟ್ಟೆಗೂ ದೀಪದಾನವನ್ನು ಮಾಡಬಲ್ಲದು” ಎಂದು ಮನದುಂಬಿ ಹೇಳಿದ್ದಾರೆ.

ಬಸುಪಟ್ಟದರ ಕಾವ್ಯದಲ್ಲಿ ಓರೆಕೋರೆಗಳು ಇಲ್ಲದೆಯಿಲ್ಲ. ಆದರೆ ಆ ಕಾವ್ಯ ಜನಮಾನವನ್ನು ತಟ್ಟಬಲ್ಲದು ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ.

ಬಾದಾಮಿ ತಾಲೂಕಾ ದರ್ಶನ

೧೯೮೬ರಲ್ಲಿ ಬೆಂಗಳೂರಿನ ಎಂ.ಬಿ.ಎಚ್ ಪ್ರಕಾಶನದವರು ಪ್ರಕಟಿಸಿದ ‘ಬಾದಾಮಿ ತಾಲುಕಾ ದರ್ಶನ’ ಕಿರುಹೊತ್ತಿಗೆಯನ್ನು ಬಸುಪಟ್ಟದ ಅವರು ಸಿದ್ಧಪಡಿಸಿದರು. ಅರವತ್ತ್ ಪುಟಗಳು ಈ ಕೃತಿ ಬಾದಾಮಿ ತಾಲೂಕಿನ ಸಮಸ್ತ ಮಾಹಿತಿಯನ್ನು ಒಲಗೊಂಡಿದೆ. ಅಂಕಿ – ಅಂಶಗಳಿಂದ ಭೌಗೋಳಿಕ ಪ್ರದೇಶವನ್ನು ಪುರಾಣ, ಇತಿಹಾಸ, ಸಂಗತಿಗಳಿಂದ ಪ್ರದೇಶದ ವೈಶಿಷ್ಟ್ಯವನ್ನು ಸಂಕ್ಷಿಪ್ತವಾಗಿ ಹೇಳುತ್ತ ಪ್ರಚಲಿತ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿ ತಾಲೂಕಿನ ಪ್ರವಾಸಿ ಕೇಂದ್ರಗಳನ್ನು ಧಾರ್ಮಿಕ ಕ್ಷೇತ್ರಗಳನ್ನು ಪರಿಚಯಿಸಿ ಕೊಡುತ್ತದೆ. ಅಲ್ಲದೆ ತಾಲೂಕಿನ ವ್ಯವಸಾಯ, ಪಶು – ಸಂಗೋಪನೆ, ಮೀನುಗಾರಿಕೆ, ಕೈಗಾರಿಕೆಗಳಿಗೆ ಸಂಮಂಧಿಸಿದಂತೆ ವಿವರಗಳನ್ನು ಒದಗಿಸುತ್ತದೆ. ಆಡಳಿತ, ಶೈಕ್ಷಣಿಕ ವೈದ್ಯಕೀಯ ಸೌಲಭ್ಯ, ಸಾಮಾಜಿಕ ಸೇವೆ, ಕಲೆ – ಸಾಹಿತ್ಯಗಳ ಉಲ್ಲೇಖಾರ್ಹ ಮಾಹಿತಿಗಳನ್ನು ದಾಖಲಿಸುತ್ತದೆ. ಇಲ್ಪಲ – ವಾತಾಪಿ ರಾಕ್ಷಸ ಬಂಧುಗಳನ್ನು ಅಗಸ್ತ್ಯ ಋಷಿಗಳು ನಿಗ್ರಹಿಸಿದ ಕಥೆಯನ್ನು ಲೇಖಕರು ಸ್ವಾರಸ್ಯಪೂರ್ಣವಾಗಿ ಹೇಳುತ್ತಾರೆ. ಚಾಲುಕ್ಯರ ವೀರಶ್ರೀಯನ್ನು ಲೋಕಕ್ಕೆ ಮೆರೆದುನಿಂತ ನಾಡಿನ ಸ್ವಾರಸ್ಯಪೂರ್ಣವಾಗಿ ಹೇಳುತ್ತಾರೆ. ಚಾಲುಕ್ಯರ ವೀರಶ್ರೀಯನ್ನು ಲೋಕಕ್ಕೆ ಮೆರೆದುನಿಂತ ನಾಡಿನ ಬಗ್ಗೆ ಕಪ್ಪೆ ಆರಭಟ್ಟನ ಶಾಸನ ವಿಶಿಷ್ಟತೆಯ ಬಗ್ಗೆ ಅಭಿಮಾನದಿಂದ ಬಣ್ಣಿಸಿದ ವಿವರಗಳಿವೆ. ಬಾದಾಮಿ ತಾಲೂಕು ದರ್ಶನ ಚಿಕ್ಕ ಹೊತ್ತಿಗೆಯಾದರೂ ಡಾ. ಬಸುಪಟ್ಟದರು ಅದನ್ನು ಚೊಕ್ಕವಾಗಿಸಿದ್ದಾರೆ.

ನಿಜಗುಣ ಶಿವಯೋಗಿಗಳು : ಜೀವನ ಮತ್ತು ಕೃತಿಗಳು

ಇದು ಡಾ.ಎಸ್.ಎಸ್. ಬಸುಪಟ್ಟದ ಅವರ ಸಂಶೋಧನಾ ಪ್ರಬಂಧ. ೧೯೯೩ರಲ್ಲಿ ಪ್ರೊ. ಎಸ್.ಎಸ್. ಭೂಸನೂರಮಠ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ. ವಿಶ್ವವಿದ್ಯಾಲಯ ಮಾನ್ಯ ಮಾಡಿ ಅವರಿಗೆ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಿತು. ದುರ್ದೈವವೆಂದರೆ ಈ ಪ್ರಬಂಧ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಲೇ ಇಲ್ಲ. ಅದು ಪ್ರಕಟವಾಗಿದ್ದು ೨೦೦೮ರಲ್ಲಿ. ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲದವರು ಕರ್ನಾಟಕ ಸುವರ್ಣ ಮಹೋತ್ಸವ ಗ್ರಂಥ ಮಾಲೆಯಲ್ಲಿ ಈ ಕೃತಿಯನ್ನು ಬೆಳಕಿಗೆ ತಂದು ಡಾ. ಬಸುಪಟ್ಟದರ ಆತ್ಮಕ್ಕೆ ಶಾಂತಿ ತಂದಿದ್ದಾರೆ.

ನಿಜಗುಣ ಶಿವಯೋಗಿಗಳು ನಮ್ಮ ನಾಡು ಕಂಡ ಘನಂವಂತರು. ಭಾಷೆ, ಕಾವ್ಯ, ಯೋಗಜ್ಞಾನ, ದರ್ಶನ, ಭಕ್ತಿ, ಅನುಭಾವ, ಪ್ರಾಪಂಚಿಕ ಅರಿವು, ಪಾಂಡಿತ್ಯ ದೃಷ್ಠಿಯಿಂದ ಮಹಾಪ್ರತಿಭಿಭಾವಂತರು. ದೇಹ, ಜೀವಾತ್ಮ, ಆತ್ಮ – ಪರಮಾತ್ಮ, ಮಾಯೆ ಇವುಗಳ ಸ್ವರೂಪವನ್ನು ನಿರಾಳ ಶೈಲಿಯಲ್ಲಿ ಮನಗಾಣಿಸಿ ಮಾಯೆಯಿಂದ ಮುಕ್ತಿ ಹೊಂದುವ ಬಗೆಯನ್ನು ಅವರು ತೋರಿಸಿಕೊಟ್ಟವರು. ಅವರು ರಚಿಸಿದ ಅರವತ್ಮೂರು ಪುರಾತನರ ತ್ರಿವಿಧಿ, ಅನುಭವಸಾರ, ಪರಮಾರ್ಥಗೀತೆ, ಪರಮಾನುಭವ ಬೋಧೆ, ಕೈವಲ್ಯಪದ್ಧತಿ, ಪಾರಮಾರ್ಥಿಕ ಚಿಂತನೆ, ವಿವೇಕ ಚಿಂತಾಮಣಿ, ಉಪಲಬ್ಧವಿರದ ದರ್ಶನಸಾರ, ಆತ್ಮಕರ್ತ ಚಿಂತಾಮಣಿ (ಸಂಸ್ಕೃತ) ಗ್ರಂಥಗಳು ಸುರತರು ಸರಧೇನುಗಳಾಗಿವೆ ಯೆಂಬುದನ್ನು ಡಾ.ಎಸ್.ಎಸ್.ಬಸುಪಟ್ಟದ ಅವರು ತಮ್ಮ ಈ ಮಹಾಪ್ರಬಂಧದಲ್ಲಿ ನಿರೂಪಿಸಿದ್ದಾರೆ.

ಒಟ್ಟು ಹನ್ನೆರಡು ಅಧ್ಯಾಯನಗಳ ಈ ಮಹಾಪ್ರಬಂಧ ಡಾ. ಬಸುಪಟ್ಟದರ ಸಂಶೋಧನಾ ಆಸ್ಥೆ ಮತ್ತು ಪ್ರತಿಭೆಯನ್ನು ಸಾಕ್ಷೀಕರಿಸುತ್ತದೆ. ವಿಜ್ಞಾನ ತಂತ್ರಜ್ಞಾನಗಳ ಜಿಜ್ಞಾಸೆಯನ್ನು ಮೊದಲ ಭಾಗದಲ್ಲಿ ಅವರು ವಿವರಿಸುವ ರೀತಿ ರೋಚಕವೆನಿಸಿದೆ. ಎರಡನೆಯ ಅಧ್ಯಾಯನದಲ್ಲಿ ನಿಜಗುಣರ ಬದುಕು – ಬರಹ ಹರಡಿ ನಿಂತಿದೆ. ಮೂರನೆಯ ಭಾಗದ ಒಂಬತ್ತು ಅಧ್ಯಾಯಗಳು ನಿಜಗುಣರ ತತ್ವ ಮೀಮಾಂಸೆಯನ್ನು ಕೇಂದ್ರೀಕರಿಸಿಕೊಂಡಿವೆ.

ನಿಜಗುಣರ ನಿಜದ ನೆಲೆಯ ಸೊಗಾಡಿನಿಂದ ಮಹಾಪ್ರಬಂಧ ತನ್ನ ಔನ್ನತ್ಯದವರ್ಧಿಸಿ ಕೊಂಡಿದೆ. ಬಸುಪಟ್ಟದ ಶ್ರಮವಿಲ್ಲಿ ಸಾರ್ಥಕತೆ ಸಾಧಿಸಿದೆ. ಡಾ. ವಿ.ಎಸ್. ಮಾಳಿಯವರು ಈ ಪ್ರಬಂಧವನ್ನು ಕುರಿತು ಹೇಳುವ ಮಾತುಗಳು ಇದನ್ನು ಸಮರ್ಥಿಸುತ್ತವೆ.

“ಡಾ. ಬಸುಪಟ್ಟದ ಕನ್ನಡಕ್ಕೆ ನೀಡಿದ ನಿಜಗುಣದ ಕೊಡುಗೆ ಅವರ ಶ್ರಮ ಸಾಧನೆ – ಆಶಯ ಕೃತಿ ರೂಪದಲ್ಲಿ ಸಾರ್ಥಕಗೊಂಡಿದೆ……..ಡಾ. ಬಸುಪಟ್ಟದ ಅವರ ಶೈಲಿ ಸರಳ ಭಾಷೆ ಸುಲಲಿತ. ಸಾಮಾನ್ಯ ಓದುಗರಿಗೂ ಕ್ಲಿಷ್ಟವೆನಿಸುವುದಿಲ್ಲ. ಚಿಕ್ಕ ಚಿಕ್ಕ ವಾಕ್ಯಗಳು ಸುಲಲಿತ ಓಘ ವಿಷಯವನ್ನು ಮರೆಮಾಚಲು ಸುತ್ತ ಬಳಸಿನ ಸರ್ಕಸ್ಸು ಅವರ ವ್ಯಕ್ತಿತ್ವಕ್ಕೆ ಬಗ್ಗದು ನೇರದಾರಿ, ಸ್ಪಷ್ಟ ಮಾತು, ದಿಟ್ಟನಡಿಗೆ, ಅವರು ಶಿಸ್ತಿನ ಸಂಶೋಧಕರು. ಅಲ್ಲಲ್ಲಿ ವಿಷಯ ಪುನರಾವರ್ತನೆಗೊಂಡರೂ ದೋಷವೆನಿಸುವುದಿಲ್ಲ ಅವರ ಓದಿನ ವ್ಯಾಪ್ತಿ ಹಿರಿದು ಜೀವನಾನುಭವ ದೊಡ್ಡದು. ಪೌರ್ವಾತ್ಯ – ಪಾಶ್ಚಾತ್ಯ ತತ್ವಪರಂಪರೆಯನ್ನು ಚೆನ್ನಾಗಿ ಮಥಿಸಿದ್ದಾರೆ. ಡಾ. ಬಸುಪಟ್ಟದವರ ಕೆಲಸ ಒಂದಾರ್ಥದಲ್ಲಿ ನಿಜಗುಣರ ಮೂಲಕ ಭಾರತೀಯ ತತ್ವಪರಂಪರೆಯ ಸಮುದ್ರಮಂಥನ ಮಹಾಪ್ರಬಂಧವನ್ನು ಓದಿ ಮುಗಿಸಿದಾಗ ಅವರ ಮೇಲಿನ ಅಭಿಮಾನ ಗೌರವಾದರಗಳು ಹೆಚ್ಚುತ್ತವೆ.

ಡಾ. ಮಾಳಿಯವರ ಅಭಿಪ್ರಾಯಗಳು ಅತೀಶಯೋಕ್ತಿ ಅನಿಸುವುದಿಲ್ಲ. ಡಾ. ಬಸುಪಟ್ಟದರ ಅಧ್ಯಾಪನ ಸಂಶೋಧನಾ ಪ್ರವೃತ್ತಿಯೇ ಅಂಥದ್ದು.

ಬಿಡಿಬರಹಗಳು

ಡಾ. ಬಸುಪಟ್ಟದ ಅವರಿಗೆ ಕಾವ್ಯದ ಬಗ್ಗೆ ಅತಿಯಾದ ಒಲವು ಇರುವಂತೆ ಗದ್ಯದ ಬಗ್ಗೆಯೂ ಅಕ್ಕರೆ. ಅನೇಕ ನಿಯತಕಾಲಿಕಗಳಲ್ಲಿ ಅವರ ಪ್ರಬುದ್ಧ ಲೇಖನಗಳು ಪ್ರಕಟವಾಗಿವೆ. ಪ್ರಸಿದ್ಧ ಲೇಖಕರನ್ನು ಕುರಿತ ವಿಮರ್ಶೆಗಳು, ಶಾಕುಂತಲ ನಾಟಕ ಕುರಿತ ವಿಮರ್ಶೆ, ಕಾವ್ಯಮೀಮಾಂಸೆಗೆ ಸಂಬಂಧಿಸಿದ ಲೇಖನಗಳು ‘ಬಾದಾಮಿ ಚಾಲುಕ್ಯರ ಕಾಲದ ಧರ್ಮಗಳು’ ಎಂಬ ಲೇಖನ, ಅನಿಮಿಷ ನೋತ (ಶೂನ್ಯ ಸಂಪಾದನೆ – ಪರಾಮರ್ಶೆ ವಿಮರ್ಶೆ), ವೈಜ್ಞಾನಿಕ ಮನೋಧರ್ಮ ಹಾಗೂ ಬಾಳಿನ ಸಾರ್ಥಕತೆ ಎಂಬಿತ್ಯಾದಿ ಲೇಖನಗಳು ಅವರ ಗದ್ಯದ ಜೀವಂತಿಕೆಯನ್ನು ತೋರಿಸಿಕೊಡುತ್ತವೆ. ಆ ಗದ್ಯದಲ್ಲಿ ಕಾಣಿಸಿಗುವ ವೈಚಾರಿಕ ನಿಲುವು ಕೂಡಾ ಪ್ರಖರ. ಧಾರವಾಡ ಆಕಾಶವಾಣಿಯಿಂದ ಪ್ರಸಾರವಾದ ಚಿಂತನಗಳು ಅವರ ಗದ್ಯದ ಚಂದವನ್ನು ವೈಚಾರಿಕತೆಯನ್ನು ಬಳಸಿಕೊಡುತ್ತವೆ. ಒಂದೆರಡು ಸಂಪುಟವಾಗುವಷ್ಟು ಅವರ ಗದ್ಯದ ಬರಹಗಳಿದ್ದರೂ ಅವು ಪುಸ್ತಕ ರೂಪದಲ್ಲಿ ಬರದಿರುವುದು ವಿಷಾದನೀಯ.

ಮುಳ್ಳು ಮಂಚವನ್ನೇರಿದ ಭೀಷ್ಮ

ನೈರಾಶ್ಯದ ನೆರಳು ಆವರಿಸಿದರೂ ಬಸುಪಟ್ಟದರು ಭರವಸೆಯ ಉಸಿರನ್ನು ಕ್ಷೀಣಿಸಿಕೊಂಡಿರಲಿಲ್ಲ. ಇರುವುದನ್ನು ಬಿಟ್ಟು ಇಲ್ಲದುದಕ್ಕಾಗಿ ತಡಕಾಡಿದವರೂ ಅಲ್ಲ ನೈಚ್ಛಾನುಸಂಧಾನಿದಿಂದ ಕೊರಗಿದವರೂ ಅಲ್ಲ ಬೇರೆಯವರ ಊರ್ಧ್ವಮುಖತ್ವ ಕಂಡು ಹಿಗ್ಗಿದರೆ ಹೊರತು ಅಸೂಯೆಯಿಂದ ವಿಲಿರಿಲಿದವರಲ್ಲ. ಅನುಭವವನ್ನು ಮಾಗಿಸಿಕೊಂಡು ಅನುಭಾವದ ನೆಲೆಯಲ್ಲಿ ಬದುಕಿಗೆ ಅರ್ಥ ತಂದುಕೊಳ್ಳುವಲ್ಲಿ ಹೆಣಗಾಡಿದವರು.

ಅವರ ಸಾತ್ವಿಕತೆಯ ಪ್ರಭಾವ ಎಲ್ಲರ ಮೇಲೂ ಆಗಿತ್ತು. “ಅವರೊಬ್ಬ ಒಳ್ಳೆಯ ಭಾವಜೀವಿ, ಕಲಾಪ್ರೇಮಿ, ಅವರ ಜೀವನದಲ್ಲಿಯೇ ಕಾವ್ಯವಿದೆಯೆಂಬುದು ಅವರ ಪರಿಚಯ ಮಾಡಿಕೊಂಡವರಿಗೆಲ್ಲ ಗೊತ್ತು” ಎಂದಿದ್ದಾರೆ ಕವಿ ಡಾ. ಡಿ.ಎಸ್. ಕರ್ಕಿ ಬಸುಪಟ್ಟದರ ಮುಗ್ಧ ಸ್ನೇಹವನ್ನು ಕಂಡು ಎಸ್.ಡಿ. ಇಂಚಲವರು “ಜೀವನದ ಅಮೋಘ ಪರಾಗತವಾದ ನಯವಿನಯಗಳಿಂದ ಪರಿಶೋಭಿತವಾದ ಒಂದು ಸುಸಂಕೃತ ಜೀವಕುಸುಮ” ಎಂದು ವ್ಯಕ್ತಪಡಿಸಿದ್ದಾರೆ. ಅವರನ್ನು ಬಹುವಾಗಿ ಇಷ್ಟಪಡುವ ಡಾ. ಶೀಲಕಾಂತ ಪತ್ತಾರ ಬಸುಪಟ್ಟದ ಅವರನ್ನು ‘ನಮ್ಮೂರ ಟ್ಯಾಗೋರ’ ಎಂದು ಅಭಿಮಾನದಿಂದ ಕರೆದಿದ್ದಾರೆ.

ಮಾತು ನಿನ್ನದು ಮಲ್ಲಿಗೆ
ಅಷ್ಟುಶುಭ್ರ; ಸುವಾಸಿತ
ಹಸಿರು ಗದ್ದೆಯ ಮಧ್ಯ
ಶ್ವೇತ ಕುಸುಮುವು ನೀನು

ಎಂಬುದು ಅವರ ಔಚಿತ್ತಪೂರ್ಣ ಬಣ್ಣನೆ ಆಗಿದೆ.

ಮಾತಿನಿಂದ ಇರಿದವನು ನೀನಲ್ಲ
ಹರಿದವನೂ ಅಲ್ಲ!
ಅಧಿಕಾರದ ಲಗಾಮು ಹಿಡಿದವನಲ್ಲ!
ನಿನ್ನಿಂದ ಬೆಲೆ ಆ ಕರ್ಚಿಗೆ !
ಅದರಿಂದ ನಿನಗಲ್ಲ
ನಿನ್ನ ಗುರುತ್ವಶಕ್ತಿಯೊಂದು ನನಗೆ ಒಗಟು

ಎಂಬ ಕವಿತೆಯ ಸಾಲುಗಳಿಂದ ಡಾ. ಶೀಲಾಕಾಂತರು ಡಾ. ಬಸುಪಟ್ಟದರ ವ್ಯಕ್ತಿತ್ವವನ್ನು ಮೇರುಗೊಳಿಸಿದ್ದಾರೆ.

ಬಸುಪಟ್ಟದರ ನೆಚ್ಚಿನ ಶಿಷ್ಯರಲ್ಲಿ ಒಬ್ಬರಾದ ಕವಿ ಮಲ್ಲಿಕಾರ್ಜುನಬನ್ನಿ ಅವರು “ಸಾಚಾತನದ ಹಾದಿಯಲ್ಲಿ ಯಾರಿಗೂ ಮುಳ್ಳಾಗದೆ ಪ್ರಶಸ್ತಿಗಾಗಿ ಮಳ್ಳಾಗದೆ ತಮ್ಮದೇ ವ್ಯಕ್ತಿತ್ವವನ್ನು ರೂಢಿಸಿಕೊಂಡವರು. ತಮ್ಮ ಬಾಗಿಲ ಮುಂದೆ ಆಕಳ ಸೆಗಣಿ ಬಿದ್ದರ್ಎ ಆ ಹೊತ್ತಲ ನನ್ನದಲ್ಲ ಎನ್ನುವ ಸ್ವಭಾವದವರು” ಎಂದು ಅವರ ಉದಾತ್ತ ನಿಲುವನ್ನು ಬಣ್ಣಿಸಿದ್ದಾರೆ. ಹಾ.ಮಾ. ನಾಯಕರು “ಹತ್ತಿರದಿಂದ ಬಲ್ಲವರಿಗೆ ಸಹೃದಯಮಿತ್ರ ಕಾವ್ಯಪ್ರೇಮಿಗಳಿಗೆ ನಿಜವಾದ ಕವಿ, ನಿಷ್ಠವಂತ ಅಧ್ಯಾಪಕ ತಾಳ್ಮೆ ಹಾಗೂ ಮಾಗುವಿಕೆ ಬಸುಪಟ್ಟದ ಅವರ ಬದುಕಿಗೆ ಸೂತ್ರ” ಎಂದು ಅಭಿಮಾನದಿಂದ ಹೇಳಿದ್ದಾರೆ.

ಒಳಗೆ ನೋವಿದ್ದರೂ ಮುಗುಳ್ನಗೆಯ ಮೋಹಕತೆಯನ್ನು ಅವರು ಬತ್ತಿಸಿಕೊಂಡವರಲ್ಲ ಸಂಕಟದ ಸಂದರ್ಭಗಳನ್ನು ಕಾವ್ಯ ಸೂಚಿಸುವಲ್ಲಿ ತಬಲಾ, ಹಾರ್ಮೋನಿಯಂ, ಕರಡಿ ಮಜಲು ನುಡಿಸುವಲ್ಲಿ ಕರಗಿಸಿಕೊಂಡವರು. ನಾಟಕ ಕಲೆಯ ಬಗ್ಗೆಯೂ ಅವರಿಗೆ ಸೆಳೆತವಿತ್ತು. ಬಸವೇಶ್ವರ ಪಾತ್ರದಿಂದ ಅವರು “ಜಗಜ್ಯೋತಿ ಬಸವೇಶ್ವರ” ನಾಟಕಕ್ಕೆ ಕಳೆ ತಂದುಕೊಟ್ಟಿದ್ದರು. ಕರಡಿಮಜಲಿನಲ್ಲಿ ಅವರಿಗೆ ಪ್ರಾವಿಣ್ಯತೆಯಿತ್ತು. ಈ ಕಲೆ ಅವರಿಗೆ ತಂದೆಯವರಿಂದ ಬಂದ ಬಳವಳಿಯಾಗಿತ್ತು. ಲಹರಿ ಬಂದಾಗಲೆಲ್ಲ ಅವರು ಕರಡಿ ಮಜಲಿನಲ್ಲಿ ಧ್ಯಾನಸ್ಥರಾಗುತ್ತಿದ್ದರು.

ತಮ್ಮ ಹುಟ್ಟೂರು ಗುಳೇದಗುಡ್ಡದ ಬಗ್ಗೆ ಅವರಿಗೆ ತುಂಬಾ ಅಭಿಮಾನ ಪ್ರೀತಿ. ಅಲ್ಲಿನ ಜನಗಳ ಬಗ್ಗೆ ವಿಶ್ವಾಸ ಸ್ವಂತ ಊರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಬಸುಪಟ್ಟದರು ನಿವೃತ್ತಿಯಾಗುವವರೆಗೂ ಬೇರೆಡೆಗೆ ಹೋಗಲಿಲ್ಲ. ವಿಶ್ವವಿದ್ಯಾಲಯಕ್ಕೆ ಹೋಗುವ ಅವಕಾಶ ಅವರಿಗೆ ಒದಗಿಬಂದಿತ್ತು. ಆದರೆ ಅದನ್ನವರು ಊರ ಮೇಲಿನ ಮಮತೆಯ ಸಲುವಾಗಿ ತಿರಸ್ಕರಿಸಿದ್ದರು. ಈ ಕಾರಣಕ್ಕಾಗಿಯೇ ಏನೋ ಅವರ ಅರವತ್ತೈದನೆಯ ವಸಂತದಲ್ಲಿ ಪುರಜನ ಸನ್ಮಾನ ಮಾಡಿ ಗೌರವಿಸಿದ್ದಾರೆ ಹಮ್ಮಿಣಿ ಅರ್ಪಿಸಿದ್ದಾರೆ.

‘ಮುಳ್ಳ ಮಂಚವನ್ನೇರಿ ನೀನಾಗು ಭೀಷ್ಮ’ ಇದು ಅವರ ಒಂದು ಕವಿತೆಯ ಸಾಲು ಈ ಕವಿತೆಯ ಗರ್ಭದಲ್ಲಿ ಕವಿಯ ವ್ಯಕ್ತಿತ್ವದ ಸಾರವೆಲ್ಲ ಮಡುಗಟ್ಟಿದೆ.

ಹತ್ತು ದಿಕ್ಕಿಗೂ ಹಾದಿ ಹರಡಿಹುದು ಸುತ್ತು
ಹಾದಿಯಲ್ಲಿ ಬಹುಮುಳ್ಳ;
ಹಾದಿಯಲಿ ಬಹ ಈ ಮುಳ್ಳಗಳ ತಳ್ಳು
ಸಾಗು, ಮುಂದಕೆ ಸಾಗು
ಅವುಗಳಿಗೆ ಎದೆಗೊಡದೆ
ನೀನದಕೆ ಕಿವಿಗೊಡದೆ
……………………..
ಸೊಲ್ಲು, ಸೊಲ್ಲೇ ಸೊಲ್ಲು
ಎಲ್ಲೆಲ್ಲೂ ಬರೀಗುಲ್ಲು
ಕಾತಿಲ್ಲ ಹೂತಿಲ್ಲ
ಮತಿಯಿಲ್ಲ ಗತಿಯಿಲ್ಲ
ತಳವಿಲ್ಲ ಬುಡವಿಲ್ಲ
ಮಾತಿನಲಿ ನೂರೆಂಟು ಮಜಲುಗಳು ಕಟ್ಟುವರು
ಬಾಯಿಯಲ್ಲಿ ನೂರಾರು ಗಜಲುಗಳ ಹಾಡುವರು

ಮಾತೆಷ್ಟು ಮಧುರ
ಅವರ ಮನಸಿ ಗತ್ತು
ಅವರ ಕನಸಿನ ಹುತ್ತು
ಯಾರ‍್ಯಾರ ಸುತ್ತ ಇಹುದೇನೋ ಕುತ್ತು!

ಅಡಪು ಹತ್ತಿದ ನಾಯಿ – ಅತ್ತ ಆ ಹುಚನಾಯಿ
ಬೊಗಳಿದವು ತೆರತೆರೆದು ತಮ್ಮ ಕಿಸುಬಾಯಿ
ತಿಳಿದು, ನೀನೇ ದೂರ ಸರಿದು ಹಾಯಿ

ಖೂಳದ ಹುನ್ನಾರಗಳ ವಾಸ್ತವವನ್ನು ತಾವು ಅರಿವಿಗೆ ತಂದುಕೊಂಡ ಬಸುಪಟ್ಟದರು ಮುಳ್ಳು ಮಂಚವನ್ನೇರಿದ ಭೀಷ್ಮನಂತಿರುವ ಸ್ಥೈರ್ಯವನ್ನು ತಮ್ಮ ಬದುಕಿಗೆ ಹೊಂದಿಸಿಕೊಂಡು ತಮ್ಮ ಪಾಡಿಗೆ ತಾವು ಹಾಡಿಕೊಂಡು ಬದುಕಿದವರು.

“ಗಾಳಿ ಹೀಂಗ ಜೋರ‍್ಲೆ ಬೀಸೂವಾಗ
ಹಗರ ಇದ್ದದ್ದು ಹಾರಿ ಹೊಕ್ಕೈತಿ
ವಜನ ಇದ್ದದ್ದು ಉಳೀತೈತಿ” ಎಂದು ಸಮಾಧಾನಗೊಂಡದದು

ಅವರ ಬದುಕಿನ ಕೊನೆಯ ಕ್ಷಣಗಳು ಮನಮಿಡಿಯುವಂತಿವೆ. ಮಗನೊಬ್ಬನ ಅಕಾಲಿಕ ಸಾವು, ಕಣ್ಣಿನ ಶಸ್ತ್ರ ಚಿಕಿತ್ಸೆ, ಅರ್ಧಾಂಗವಾಯು ಪೀಡೆ ನೆಪವಾಗಿ ಕವಿ ಬಸುಪಟ್ಟದ ಅವರನ್ನು ಮೃತ್ಯುದೇವತೆ ತನ್ನ ಬಳಿಗೆ ಕರೆದುಕೊಂಡಳು.

ಸಾವು ಯಾರನ್ನು ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾದ ಡಾ. ಬಸುಪಟ್ಟದ ಅವರ ಅಂತಿಮ ಯಾತ್ರೆಯಲ್ಲಿ ನೆರೆದ ಜನಸಮೂಹ ಜಾತ್ರೆಯಾಗಿದ್ದು, ಅದು ಅವರ ಆತ್ಮಕ್ಕೆ ಸಮಾಧಾನ ತರುವ ಸಂಗತಿ ಮಾತ್ರ.