Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ. ಎಸ್.ಕೆ. ಶಿವಕುಮಾರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು ಶ್ರೀರಂಗಪಟ್ಟಣ ಕೃಷ್ಣಮೂರ್ತಿ ಶಿವಕುಮಾರ್.
೧೯೯೮ರಿಂದಲೂ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ನೆಟ್‌ವರ್ಕ್‌ನ ನಿರ್ದೇಶಕರು. ದೂರ ಸಂವೇದಿ ಉಪಗ್ರಹಗಳ ನಿರ್ವಹಣೆ, ನಿಯಂತ್ರಣ ಘಟಕದ ಮುಖ್ಯಸ್ಥರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮದಲ್ಲಿ ೧೯೫೩ ಮಾರ್ಚ್‌ ೧೭ರಂದು ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್‌ಸಿ, ತದನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಿ.ಇ., ಎಂ.ಟೆಕ್ ಪದವಿ.
ಇಸ್ರೋದ ಅನೇಕ ಯಶಸ್ಸಿನಲ್ಲಿ ಭಾಗಿಯಾಗಿರುವ ಶ್ರೀಯುತರು ಇಸ್ರೋ ಅಭಿವೃದ್ಧಿಪಡಿಸಿದ ಪೂರ್ಣ ದೇಶಿ ತಂತ್ರಜ್ಞಾನದ ೧೦೦ ಅಡಿ ಸುತ್ತಳತೆಯ ಅಂತರಿಕ್ಷ ಜಾಲ ಆ್ಯಂಟೆನಾ ಅಭಿವೃದ್ಧಿಪಡಿಸುವ ಯೋಜನಾ ನಿರ್ದೇಶಕರೂ ಹೌದು. ಭಾರತದ ಪ್ರಥಮ ಚಂದ್ರಯಾನ-೧ ಯೋಜನೆಗೆ ನೆರವಾಗುವುದರ ಜೊತೆಗೆ ಭವಿಷ್ಯದ ಅಂತರಿಕ್ಷ ಯಾತ್ರೆಗಳಿಗೂ ಈ ಆ್ಯಂಟೆನಾ ಸಹಕಾರಿ.
ಶ್ರೀಯುತರು ಇಸ್ರೋ ಉಪಗ್ರಹ ಕೇಂದ್ರದಲ್ಲೂ ಕಾರ್ಯನಿರ್ವಹಿಸಿದ್ದು ಭಾಸ್ಕರ, ಆ್ಯಪಲ್, ಐಆರ್‌ಎಸ್ ಮತ್ತು ಇನ್ಸಾಟ್‌ ಉಪಗ್ರಹ ಉಡಾವಣೆ ಕಾರ್ಯಕ್ರಮಗಳಲ್ಲೂ ಭಾಗಿ.
ಭಾರತೀಯ ರಾಷ್ಟ್ರೀಯ ದೂರ ಸಂವೇದಿ ಪ್ರಶಸ್ತಿ, ಬಾಹ್ಯಾಕಾಶ ಮೂಲಸೌಕರ್ಯ ನಿರ್ವಹಣೆಯ ದಕ್ಷತೆಗಾಗಿ ಇಸ್ರೋ ಮೆರಿಟ್ ಅವಾರ್ಡ್‌ ಸಂದಿವೆ. ಅಂತರಿಕ್ಷ ಕ್ಷೇತ್ರದಲ್ಲಿ ಸ್ವಾಯತ್ತತೆ ಪಡೆಯುವ ಸಂಬಂಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ೪೦೦ ವಿಜ್ಞಾನಿಗಳ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಿರುವ ಪ್ರಯೋಗಶೀಲ ವಿಜ್ಞಾನಿ ಶ್ರೀ ಎಸ್.ಕೆ.ಶಿವಕುಮಾರ್.