Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಎಸ್. ಬಲಬೀರ್‌ಸಿಂಗ್‌

ಬಹುಮುಖಿ ಕ್ಷೇತ್ರಗಳಲ್ಲಿ ಸೇವೆಗೈದ ವಿಶಿಷ್ಟ ಸಮಾಜಸೇವಕ ಡಾ. ಎಸ್. ಬಲಬೀರ್‌ಸಿಂಗ್‌, ಬೀದರ್ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯ ಪಾತ್ರಧಾರಿ. ಬಡವರಿಗೆ ನೆರವಾದ ಉದ್ಯಮಿ. ೧೯೬೦ರ ಮಾರ್ಚ್‌ ೧೫ರಂದು ಜನಿಸಿದ ಬಲಬೀರ್‌ಸಿಂಗ್‌ ಬಿ.ಎ ಪದವೀಧರರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ, ಪ್ರವೃತ್ತಿಯಲ್ಲಿ ಸಮಾಜಸೇವಕ, ಭಾವಸಂಪನ್ನದ ಸಹೃದಯಿ, ಹಣವಂತರಾದರೂ ಹೃದಯವಂತರು. ಗುರುನಾನಕ್ ಶೈಕ್ಷಣಿಕ ಸಂಸ್ಥೆ, ಗುರುದ್ವಾರ ಶ್ರೀನಾನಕ್ ಜೀರಾಸಾಹೇಬ್ ಹಾಗೂ ಗುರುನಾನಕ್ ಆಸ್ಪತ್ರೆಯ ಅಧ್ಯಕ್ಷರಾಗಿ ಬಹುರೂಪಿ ಸೇವೆ. ಗುರುದ್ವಾರದಲ್ಲಿ ೪೦೦ ಕೊಠಡಿಗಳ ನಿರ್ಮಾಣ, ಉಚಿತ ವಸತಿ, ಅನ್ನದಾಸೋಹದ ಸೇವೆ. ೧೫ ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ. ೧೫೦೦ಕ್ಕೂ ಹೆಚ್ಚು ಶಿಕ್ಷಿತರಿಗೆ ಉದ್ಯೋಗದಾಸರೆ, ಗುರುನಾನಕ್ ಆಸ್ಪತ್ರೆಯಲ್ಲಿ ಬಡವರಿಗೆ ಅಲ್ಪದರದಲ್ಲಿ ಚಿಕಿತ್ಸೆ, ಸಿಖ್ ಸಮುದಾಯಕ್ಕೆ ೨೦೦೮ರಲ್ಲಿ ಕೇಂದ್ರ ಸರ್ಕಾರ ಕೊಟ್ಟ ೧೫೦ ಕೋಟಿ ರೂ. ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ, ಹೊರವರ್ತುಲ ರಸ್ತೆ ನಿರ್ಮಾಣದಿಂದ ಬೀದರ್‌ನ ಶೈಕ್ಷಣಿಕ-ಆರ್ಥಿಕ ಚಿತ್ರಣವನ್ನೇ ಬದಲಿಸಿದ ಉದ್ಯಮಿ, ಸಮುದಾಯದ ಸೇವೆಯಲ್ಲೇ ಸಾರ್ಥಕತೆ ಕಂಡುಕೊಂಡ ಬಲಬೀರ್‌ಸಿಂಗ್‌ ಗುಲ್ಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್‌ಗೆ ಪಾತ್ರರು. ಬೀದರ್ ಜಿಲ್ಲೆಯ ಹೆಮ್ಮೆ-ಸಮಾಜಸೇವೆಗೆ ಮಾದರಿ.