ರಾಷ್ಟ್ರಪತಿಯಾಗಿ ಸೇವೆಯ ಅವಧಿ : ೧೩.೫.೧೯೬೨ ರಿಂದ ೧೨.೫.೧೯೬೭ ಆದರ್ಶ ಶಿಕ್ಷಕ, ವಿಶ್ವ ವಿಖ್ಯಾತ ತತ್ವಜ್ಞಾನಿ, ಭಾರತದ ಎರಡನೆಯ ರಾಷ್ಟ್ರಪತಿ ಡಾ|| ಸರ್ವಪಲ್ಲಿ ರಾಧಾಕೃಷ್ಣನ್. ಅವರ ಜನ್ಮದಿನವನ್ನೇ ಇಂದು “ಶಿಕ್ಷಕರ ದಿನ” ವನ್ನಾಗಿ ಆಚರಿಸಲಾಗುತ್ತಿದೆ. ೧೮೮೮ನೇ ಇಸವಿಯ ಸೆಪ್ಟಂಬರ್ ೫ರಂದು ರಾಧಾಕೃಷ್ಣನ್ ಅವರ ಜನನ. ತಮಿಳುನಾಡಿನ ತಿರುತ್ತಣಿ ಅವರ ಜನ್ಮ ಸ್ಥಳ. ತಂದೆ ವೀರಸಾಮಯ್ಯ ತಹಸೀಲ್‌ದಾರರು. ಇವರದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ಆದರೂ ತಂದೆಯು ಮಗನಿಗೆ ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ಶಾಲಾ ಕಾಲೇಜುಗಳಲ್ಲಿ ಆಧುನಿಕ ರೀತಿಯ ಶಿಕ್ಷಣ ಕೊಡಿಸಿದರು. ತಿರುಪತಿ, ವೆಲ್ಲೂರು ಮತ್ತು ಮದರಾಸ್ (ಈಗಿನ ಚೆನ್ನೈ) ನಲ್ಲಿ ವಿದ್ಯಾರ್ಜನೆ ಮಾಡಿದ ರಾಧಾಕೃಷ್ಣನ್ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ. ಪ್ರತಿಯೊಂದು ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಅವರಿಗೇ ಕಟ್ಟಿಟ್ಟದ್ದು. ಆಕಸ್ಮಿಕವಾಗಿ ನೆಂಟರೊಬ್ಬರು ಓದಲು ಕೊಟ್ಟ ಮೂರು ಪುಸ್ತಕಗಳು ಅವರ ಬಾಳಿನ ಗುರಿಯನ್ನೇ ನಿರ್ಧರಿಸಿಬಿಟ್ಟವು. ಅವುಗಳಿಂದ ಪ್ರಭಾವಿತರಾಗಿ, ಉನ್ನತ ಶಿಕ್ಷಣಕ್ಕಾಗಿ ತತ್ವಶಾಸ್ತ್ರವನ್ನು ಆರಿಸಿಕೊಂಡು ಬಿ.ಎ. (Hons) ಮತ್ತು ಎಂ.ಎ. ಪದವಿಗಳನ್ನು ಪಡೆದರು. ೧೮ನೇ ವಯಸ್ಸಿನಲ್ಲಿ ಶಿವಕಾಮದ್ದು ಅವರೊಂದಿಗೆ ವಿವಾಹವಾಯಿತು. ಇಪ್ಪತ್ತನೆಯ ವಯಸ್ಸಿನಲ್ಲಿ etjocs om vedanta ಎಂಬ ಮಹಾಪ್ರಬಂಧ ಬರೆದರು.

ಚಿಕ್ಕ ವಯಸ್ಸಿನಿಂದಲೂ ರಾಧಾಕೃಷ್ಣನ್ ಪುಸ್ತಕ ಪ್ರಿಯರು. ವೇದ, ಉಪನಿಷತ್ತುಗಳಷ್ಟೇ ಅಲ್ಲದೆ, ಹಿಂದಿ ಭಾಷೆಯನ್ನೂ ಕಲಿತರು. ಪೌರ್ವಾತ್ಯ – ಪಾಶ್ಚಿಮಾತ್ಯ ತತ್ವಶಾಸ್ತ್ರಗಳೆರಡರಲ್ಲಿಯೂ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದರು. ಕ್ರೈಸ್ತ ಮಿಷನರಿಗಳ ವಿದ್ಯಾಸಂಸ್ಥೆಗಳಲ್ಲಿ ಪಡೆದ ಶಿಕ್ಷಣದಿಂದ ಎರಡು ರೀತಿಯ ಪ್ರಯೋಜನ ಪಡೆದರು. ಅಲ್ಲಿನ ಶಿಸ್ತು, ಸಮಯ ಪರಿಪಾಲನೆ, ನಡೆನುಡಿಗಳಲ್ಲಿ ಗಾಂಭೀರ್ಯ ಮೊದಲಾದ ಸದ್ಗುಣಗಳನ್ನು ರೂಢಿಸಿಕೊಂಡರು. ಜೊತೆಗೆ, ಆ ಸಂಸ್ಥೆಗಳಲ್ಲಿ ಬೆಳೆದು ಬಂದಿದ್ದ. ಹಿಂದೂ ಧರ್ಮದ ಬಗೆಗಿನ ತಪ್ಪು ತಿಳುವಳಿಕೆಗಳು ಮತ್ತು ಅನಾದರವನ್ನೂ ಅವರ ತೀಕ್ಷ್ಣ ಚಿಕಿತ್ಸಕ ಬುದ್ಧಿ ಗುರುತಿಸಿತು; ಅವುಗಳನ್ನು ತಿದ್ದಬೇಕೆಂಬ ಹಂಬಲವೂ ಹುಟ್ಟಿತು. ಅವರ ಹಂಬಲಕ್ಕೆ ಒತ್ತಾಸೆ ನೀಡಿದ್ದು ಸ್ವಾಮಿ ವಿವೇಕಾನಂದರ ಚಿಂತನೆ. ಇವೆಲ್ಲದರ ಪರಿಣಾಮ – ಹಿಂದೂ ಧರ್ಮ, ಸಮಗ್ರ ಭಾರತೀಯ ಚಿಂತನ ಪರಂಪರೆ ಮತ್ತು ತತ್ವಶಾಸ್ತ್ರಗಳ ಆಳವಾದ ಅಧ್ಯಯನ, ಅವುಗಳ ನಿಖರವಾದ ನಿರೂಪಣೆ, ಲೇಖನ ಹಾಗೂ ಪುಸ್ತಕಗಳ ಪ್ರಕಟಣೆ.

ರಾಧಾಕೃಷ್ಣನ್ ಅವರ ವೃತ್ತಿ ಜೀವನ ೧೯೦೯ರಲ್ಲಿ ಮದರಾಸಿನ (ಚೆನ್ನೈ) ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಿರಿಯ ಉಪನ್ಯಾಸಕರಾಗಿ ಆರಂಭ, ಮರುವರ್ಷ, ಆ ಕಾಲದಲ್ಲಿ ಶಿಕ್ಷಕರಿಗೆ ಕಡ್ಡಾಯವಾಗಿದ್ದ. L.T. ಪದವಿ ಗಳಿಸಲು ಶಿಕ್ಷಕರ ತರಬೇತಿ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದರು. ಆದರೆ, ತತ್ವಶಾಸ್ತ್ರದಲ್ಲಿ ಇವರಿಗಿದ್ದ ಜ್ಞಾನದ ಆಳವನ್ನು ಕಂಡುಕೊಂಡ ಅಲ್ಲಿನ ಪ್ರಾಧ್ಯಾಪಕರು, ಇವರು ಪಾಠ ಕಲಿಯುವ ಅವಶ್ಯಕತೆ ಇಲ್ಲ; ಬದಲು, ತಮ್ಮ ಸಹ ವಿದ್ಯಾರ್ಥಿಗಳಿಗೆ ಪಾಠ ಕಲಿಸಲಿ ಎಂದು ತೀರ್ಮಾನಿಸಿದರು. ಇವರು ಕಲಿಸುವ ರೀತಿ ಇಷ್ಟು ವಿಶಿಷ್ಟವಾಗಿತ್ತೆಂದರೆ, ಕಬ್ಬಿಣದ ಕಡಲೆಯಂತಹ ತತ್ವಶಾಸ್ತ್ರ ಮೃದು ಮಧುರವಾಗುತ್ತಿತ್ತು. ೧೯೧೭ರಲ್ಲಿ ರಾಜಮಹೇಂದ್ರಿಯಲ್ಲಿ ಉಪನ್ಯಾಸಕರಾದರು.

೧೯೧೮ರಿಂದ ೧೯೨೧ರವರೆಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ||ರಾಧಾಕೃಷ್ಣನ್, ಅಲ್ಲಿಂದ ಮುಂದೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಆ ದಿನಗಳಲ್ಲಿ ಕವಿ ರವೀಂದ್ರನಾಥ ಟ್ಯಾಗೋರರ ಸಂಪರ್ಕ ಅವರಿಗೆ ಲಭಿಸಿತ್ತು ಅನಂತರ, ಇಂಗ್ಲೆಂಡಿನ ಆಕ್ಸಫರ್ಡ್ ವಿಶ್ವವಿದ್ಯಾಲಯವೂ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಆಂಧ್ರ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳ ಉಪಕುಲಪತಿಯಾಗಿ, ದಿಲ್ಲಿ ವಿಶ್ವವಿದ್ಯಾಲದ ಕುಲಪತಿಯಾಗಿ ಆಡಳಿತದಲ್ಲೂ ತಮ್ಮ ಪ್ರಾವೀಣ್ಯವನ್ನು ಮೆರೆದಿದ್ದಾರೆ. ಯನೆಸ್ಕೋದ ಅಧ್ಯಕ್ಷ ಸ್ಥಾನ, ಬ್ರಿಟಿಷ್ ಅಕಾಡೆಮಿಯ ಫೆಲೋಷಿಪ್, ಬ್ರಿಟನ್ನಿನ ರಾಣಿಯಿಂದ ದತ್ತವಾದ Order of Merit, ಬ್ರಿಟಿಷ್ ಚಕ್ರಾಧಿಪತ್ಯದ ನೈಟ್‌ಹುಡ್, ಟೆಂಪಲಟನ್ ಅವಾರ್ಡ್, ವಿವಿಧ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಜರ್ಮನಿಯ ಪುಸ್ತಕ ಮಾರಾಟಗಾರರ ಕೂಟದ ಶಾಂತಿ ಪುರಸ್ಕಾರ -ಇವು ಅವರಿಗೆ sಸೇರಿದ ಪ್ರಮುಖ ಗೌರವಗಳು. ೧೯೫೪ರಲ್ಲಿ ಭಾರತದ ಅತ್ಯುಚ್ಚ ಪುರಸ್ಕಾರವಾದ “ಭಾರತ ರತ್ನ” ಅವರಿಗೆ ನೀಡಲಾಯಿತು.

೧೯೧೫ರಲ್ಲೇ ಡಾ|| ರಾಧಾಕೃಷ್ಣನ್ ಗಾಂಧೀಜಿಯವರನ್ನು ಭೇಟಿಯಾಗಿದ್ದರು. ಅವರ ಚಿಂತನೆ ಮತ್ತು ಕಾರ್ಯವಿಧಾನಗಳನ್ನು ಸಮರ್ಥಿಸಿ ಲೇಖನಗಳನ್ನೂ ಬರೆದಿದ್ದರು. ಭಾರತ ಸ್ವತಂತ್ರ ರಾಷ್ಟ್ರವಾಗಬೇಕೆಂದು ಹಂಬಲಿಸುತ್ತಿದ್ದರು. ೧೯೪೭ರಲ್ಲಿ ಭಾರತ ಸ್ವತಂತ್ರವಾದಾಗ Constituent Assembly ಯ ಸದಸ್ಯರಾದರು. ಅನಂತರ ಸ್ವತಂತ್ರ ಭಾರತದ ರಾಯಭಾರಿಯಾಗಿ ಸೋವಿಯಟ್ ರಷ್ಯಾದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ೧೯೫೨ ರಿಂದ ೧೯೬೨ರವರೆಗೆ ೫ ವರ್ಷಗಳ ಎರಡು ಅವಧಿಗೆ ಉಪರಾಷ್ಟ್ರಪತಿಯಾಗಿ ನಿಯುತಕ್ತರಾದರು. ಉಪರಾಷ್ಟ್ರಪತಿಗಳೇ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವುದರಿಂದ ಅಲ್ಲಿನ ಕಾರ್ಯಕಲಾಪಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. ೧೯೬೨ರಲ್ಲಿ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿ ಮೇ, ೧೩ನೆಯ ತಾರೀಖು ಅಧಿಕಾರ ವಹಿಸಿಕೊಂಡರು. ಅವರು ರಾಷ್ಟ್ರಪತಿಗಳಾಗಿದ್ದ ಕಾಲದಲ್ಲಿ, ಚೀನಾ ಮತ್ತು ಪಾಕಿಸ್ಥಾನಗಳೆರಡರೊಂದಿಗೂ ಯುದ್ಧಗಳಾದವು. ಪ್ರಧಾನಿ ನೆಹರೂ, ನಂತರ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ-ಇಬ್ಬರೂ ನಿಧನರಾದರು. ಆ ಕಷ್ಟದ ದಿನಗಳಲ್ಲಿ ದೇಶದ ಆಡಳಿತ ಸುಸೂತ್ರವಾಗಿ ನಡೆಯಲು ಪ್ರಧಾನಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ೧೯೬೭ರಲ್ಲಿ ಮತ್ತೆ ರಾಷ್ಟ್ರಪತಿಗಳಾಗಬೇಕೆಂಬ ಒತ್ತಡಕ್ಕೆ ಮಣಿಯದೆ. ನಿವೃತ್ತರಾಗಿ ಮದರಾಸಿನಲ್ಲಿ (ಚೆನ್ನೈ) ನೆಲೆಸಿದರು. ದೀರ್ಘಕಾಲದ ಅನಾರೋಗ್ಯದಿಂದಾಗಿ ೧೯೭೫ರಲ್ಲಿ ನಿಧನರಾದರು.

ಡಾ|| ರಾಧಾಕೃಷ್ಣನ್ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ, ಅವರ ಶಿಷ್ಯರೊಬ್ಬರು “ಹೆಚ್ಚಿನ ಶಿಕ್ಷಣ ಪಡೆಯಲು ನೀವು ವಿದೇಶಕ್ಕೆ ಹೋಗಿದ್ದಿರಾ?” ಎಂದು ಕೇಳಿದರಂತೆ. ಅದಕ್ಕೆ ಅವರು “ಇಲ್ಲ, ಹೋಗುತ್ತೇವೆ-ಶಿಕ್ಷಣ ನೀಡಲು ಹೋಗುತ್ತೇವೆ” ಎಂದು ಉತ್ತರಿಸಿದರು. ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ “The Hindu View of Life” ಎಂಬ ವಿಷಯವಾಗಿ ಅವರು ಉಪನ್ಯಾಸ ಮಾಡಿದಾಗ ಅವರ ಭವಿಷ್ಯವಾಣಿ ನಿಜವಾಯಿತು. ಬ್ರಿಟಿಷ್ ಚಕ್ರಾಧಿಪತ್ಯದ ವಿಶ್ವವಿದ್ಯಾಲಯಗಳ ಸಮ್ಮೇಳನ ಹಾಗೂ ಹಾರ್ವರ್ಡನಲ್ಲಿ ಅಂತರ್ರಾಷ್ಟ್ರೀಯ ತತ್ವಶಾಸ್ತ್ರ ಸಮ್ಮೇಳನ ಇವುಗಳಲ್ಲಿ ಭಾಗವಹಿಸಲು ಯುರೋಪ್ ಮತ್ತು ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ವಿಶ್ವದ ಅನೇಕ ಪ್ರಮುಖ ರಾಷ್ಟ್ರಗಳಿಗೆ ಸೌಹಾರ್ದ ಭೇಟಿ ನೀಡಿದ್ದರು. ಅವರು ಹೋದಲ್ಲೆಲ್ಲ, ಭಾರತೀಯ ಚಿಂತನೆ ಹಾಗ ತತ್ವಶಾಸ್ತ್ರಗಳ ಸಾರವನ್ನು ಅಲ್ಲಿಯ ಜನತೆಗೆ ತಿಳಿಹೇಳುತ್ತಿದ್ದರು. ಡಾ|| ರಾಧಾಕೃಷ್ಣನ್ ಬರೆದ ಲೇಖನಗಳು ಮತ್ತು ಪುಸ್ತಕಗಳು ಸೇರಿ ಸುಮಾರು ೧೫೦ ಪ್ರಕಟಣೆಗಳಿವೆ. ಬೌದ್ಧಿಕ ಪ್ರಪಂಚದಲ್ಲಿ ತತ್ವಶಾಸ್ತ್ರವನ್ನು ಅವರಷ್ಟು ಸರಳವಾಗಿ, ನಿಖರವಾಗಿ ಪ್ರತಿಪಾದಿಸಿದವರು ವಿರಳ. “Indian Philosophy” ಎಂಬ ಬೃಹದ್ಗ್ ಂಥ ಇಂದಿಗೂ ಒಂದು ಮಾದರಿಯಾಗಿದೆ.

ಡಾ|| ರಾಧಾಕೃಷ್ಣನ್ ಒಬ್ಬ ಸರಳ, ಮಾನವೀಯ ವ್ಯಕ್ತಿ ಅವರ ವೇಷ ಭೂಷಣವೂ ಅಷ್ಟೇ ಸರಳ. ಶುಭ್ರವಾದ ಪಂಚೆ, ಉದ್ದನೆಯ ಕೋಟು, ಬಿಳಿಯ ಪೇಟಾ, ಎತ್ತರದ ನೇರ ನಿಲುವು, ನೋಡಿದ ಕೂಡಲೆ ಗೌರವ ಹುಟ್ಟಿಸುವ ವ್ಯಕ್ತಿತ್ವ. ವಿದ್ವತ್ತಿನ ಭಾರ ಅವರ ಸರಳತೆಯನ್ನು ಮರೆಮಾಡಲಿಲ್ಲ. ಚರ್ಚೆಯ ವಿಷಯ ಎಷ್ಟೇ ಲಘುವಾಗಿರಲಿ, ಕಠಿಣವಾಗಿರಲಿ, ವಿದ್ಯಾರ್ಥಿಗಳೊಂದಿಗೆ ಬೆರೆತು ಮುಕ್ತವಾಗಿ ಚರ್ಚಿಸಬಲ್ಲರು. ಹಾಸ್ಯದಲ್ಲಿ ಭಾಗಿಯಾಗಬಲ್ಲರು. ರಾಷ್ಟ್ರಪತಿಯಾಗಿ ಅವರಿಗೆ ಸಲ್ಲುತ್ತಿದ್ದ ಮಾಸಿಕ ಸಂಬಳವನ್ನು ೧೦,೦೦೦ ರೂ.ಗಳಿಂದ ರೂ.೨೦೦೦ಕ್ಕೆ ಸ್ವ-ಇಚ್ಚೆಯಿಂದ ಇಳಿಸಿಕೊಂಡದ್ದು ಅವರ ಋಜು ಸ್ವಭಾವಕ್ಕೆ ಸಾಕ್ಷಿ.

ಡಾ|| ರಾಧಾಕೃಷ್ಣನ್ ಅವರ ಬಹುಮುಖ ಪ್ರತಿಭೆಯನ್ನು ವಿಶ್ವದ ಅನೇಕ ಗಣ್ಯರು ಪ್ರಶಂಸಿಸಿದ್ದಾರೆ “ಮಹಾನ್ ತತ್ವಜ್ಞಾನಿ, ಶಿಕ್ಷಣವೇತ್ತ, ಮಹಾಮಾನವತಾವಾದಿಯಾದ ಇಂತಹ ಒಬ್ಬ ವ್ಯಕ್ತಿ ನಮ್ಮ ರಾಷ್ಟ್ರಪತಿಯಾಗಿರುವುದೇ ನಮ್ಮ ಸೌಭಾಗ್ಯ” ಎಂದು ಪಂಡಿತ್ ಜವಹರಲಾಲ್ ನೆಹರೂ ಹೇಳಿದ್ದರು. ಆಧುನಿಕ ಯುಗದ ಮಹಾ ತತ್ವಜ್ಞಾನಿ ಬರ‍್ಟ್ರಂಡ್ ರಸಲ್, “ಭಾರತವು ಒಬ್ಬ ತತ್ವಜ್ಞಾನಿಯನ್ನು ತನ್ನ ರಾಷ್ಟ್ರಪತಿಯಾಗಿ ಆಯ್ಕೆಮಾಡಿಕೊಂಡಿರುವುದು ಆದೇಶದ ಹೆಗ್ಗಳಿಕೆ” ಎಂದು ಹೇಳಿದ್ದಾರೆ.

ವಾಕ್ಪುಟದಲ್ಲಿ ಅವರನ್ನು ಸರಿದೂಗಿಸುವವರು ಇಡೀ ಜಗತ್ತಿನಲ್ಲಿಯೇ ವಿರಳವೆಂದು ಹೇಳಲಾಗುತ್ತಿತ್ತು. ಆದರೆ ಅವರು ಸಂದರ್ಭೋಚಿತವಾಗಿ ಮಾತ್ರ ಮಾತನಾಡುವವರಾಗಿದ್ದರು; ಭಾಷಣಪ್ರಿಯರಾಗಿರಲಿಲ್ಲ. ಅವರ ಜ್ಞಾಪಕಶಕ್ತಿಯು ಅದ್ಭುತವಾಗಿತ್ತು. ಪ್ಲೇಟೋ ಚಿತ್ರಿಸಿದ ಹಾಗೆ ರಾಷ್ಟ್ರಾಧ್ಯಕ್ಷ ಡಾ|| ರಾಧಾಕೃಷ್ಣನ್‌ರು “ರಾಜರ್ಷಿ”ಯಾಗಿದ್ದರೆಂದರೆ ತಪ್ಪಾಗಲಾರದು.