ಪುರಾದ ಹಾದಿಯಲ್ಲಿ ನವಚೇತನಸಮೃದ್ಧ ಗ್ರಾಮ ಸೃಷ್ಟಿಯ ಮಹದುದ್ದೇಶದೊಂದಿಗೆ ರೂಪುಗೊಂಡ ನವಚೇತನ ಕಾರ್ಯಕ್ರಮ ನಾಡಿನಾದ್ಯಂತ ಸಂಚಲನ ಮೂಡಿಸುತ್ತಿದೆ.  ಡಾ. ಅಬ್ದುಲ್ ಕಲಾಂರವರ ದೃಷ್ಟಿಯಲ್ಲಿ ಗ್ರಾಮಗಳ ಅಭಿವೃದ್ಧಿ ಹೇಗೆ ಆದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೋ ಆ ದಿಶೆಯಲ್ಲಿ ಸಂಸ್ಥೆ ಸಾಗುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರ.  ಗ್ರಾಮದ ಪ್ರತಿ ಕುಟುಂಬಗಳ ಸಹಭಾಗಿತ್ವ, ಸಮರಸ, ಸಹಚಿಂತನಗಳಿಂದ ಕಾರ್ಯಕ್ರಮ ರೂಪಿಸುವುದು, ಗ್ರಾಮದ ಯುವಚೇತನಗಳನ್ನು ಗುರುತಿಸಿ ನಾಯಕತ್ವ ತರಬೇತಿ ನೀಡಿ ಆ ಮೂಲಕ ಗ್ರಾಮದ ಜಾಣ್ಮೆ ಗುರುತಿಸಿ ಕೃಷಿಪೂರಕ, ಕೃಷಿ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸುವುದು, ಜೊತೆಗೆ ಸ್ವಸಹಾಯ ಗುಂಪುಗಳ ಮೂಲಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.  ಈ ಕಾರ್ಯಕ್ರಮ ಕೇವಲ ಹಳ್ಳಿಗಳ ಬಡತನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಬದಲಾಗಿ ಗ್ರಾಮಗಳಲ್ಲಿ ಸಮೃದ್ಧಿ ಸೃಷ್ಟಿಸುವ ಕಾರ್ಯಕ್ರಮ, ಇಲ್ಲಿ ಜಾತಿ, ಮತ, ಭೇದ, ಸಮುದಾಯದ ಬೇಲಿಯಿಲ್ಲ, ಬಂಧನವಿಲ್ಲ.ಗ್ರಾಮಾಡಳಿತ, ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸಲು ಸಂಸ್ಥೆಯು ನವಚೇತನದ ೪ ಸ್ಥಂಭಗಳನ್ನು ಅಭಿವೃದ್ಧಿಗೊಳಿಸಿದೆ.  ಈ ಆಧಾರಸ್ತಂಭಗಳು ಗ್ರಾಮ ಸಮೃದ್ಧಿಗೆ ಹೇಗೆ ಅನಿವಾರ್ಯ, ಅವಶ್ಯಕ ಎನ್ನುವ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ.  ನಿಮಗೆ ತಿಳಿದಂತೆ, ಗ್ರಾಮಗಳ ಅಭಿವೃದ್ಧಿ ಕೆಲವೇ ವ್ಯಕ್ತಿಗಳಿಂದಾಗಲಿ ಅಥವಾ ಸರಕಾರದಿಂದಾಗಲಿ ದಿಢೀರ್ ಸಾಧ್ಯದ ಮಾತಂತೂ ಅಲ್ಲ.  ಈ ಕೈಂಕರ್ಯಕ್ಕೆ ನಿಮ್ಮಗಳ ಸೂಕ್ತ ಸಲಹೆ, ಸಹಕಾರ, ಪಾಲುದಾರಿಕೆ ಬೇಕೇ ಬೇಕು.  ಹಾಗಿದ್ದರೆ ಮಾತ್ರ ಮಹಾತ್ಮಾ ಗಾಂಧೀಜಿ, ಡಾ|| ಮಣಿಭಾಯಿಜಿ ಮತ್ತು ಡಾ. ಕಲಾಂರವರು ಕಂಡ ನವ್ಯ, ಸಮೃದ್ಧ ಭಾರತ ಕಾಣಲು ಸಾಧ್ಯ.  ದಯವಿಟ್ಟು ಈ ನಿಟ್ಟಿನಲ್ಲಿ ಪಣ ತೊಟ್ಟು ನಮ್ಮ ಜೊತೆ ನವಚೇತನಕ್ಕೆ ನೆರವಾಗಿ.

ವಿಳಾಸ : ಬೈಫ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶಾರದಾ ನಗರ, ತಿಪಟೂರು

ಮುಂಜಾವಿನ ಆ ಮಂಜಿನಲ್ಲಿ ಅಂದು ಮಂಜುನಾಥಪುರಕ್ಕೆ ಮಹಾನ್ ಚೇತನವೊಂದು ಭೇಟಿ ನೀಡಿತು.  ಊರಿನ ಸಾಧಕಿ ರತ್ನಮ್ಮ ಆ ಚೇತನದಿಂದ ಕೈಯಾರೆ ಬಾಗಿನ ಪಡೆದ ಭಾಗ್ಯವಂತೆ.  ಆಕೆಯ ಯಶಸ್ಸು ಕೇಳಲು, ಕಣ್ಣಾರೆ ನೋಡಿ ಆನಂದಿಸಲು, ಅದನ್ನು ದೇಶದ ಜನರೊಂದಿಗೆ ಹಂಚಿಕೊಳ್ಳಲು ಭಾರತದ ಪ್ರಥಮ ವ್ಯಕ್ತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ತವಕದಿಂದ ಬಂದಿದ್ದರು.

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಮಂಜುನಾಥಪುರ ಪುಟ್ಟ ಹಳ್ಳಿಯಾಗಿ ರೂಪುಗೊಂಡಿದ್ದೇ ೪೫ ವರ್ಷಗಳ ಹಿಂದೆ.  ೭೦ ಹರಿಜನ ಕುಟುಂಬಗಳು ಸರ್ಕಾರದಿಂದ ತಲಾ ನಾಲ್ಕು ಎಕರೆ ಜಮೀನನ್ನು ಅನುದಾನವಾಗಿ ಪಡೆದವು.  ಬರಡು ನೆಲ, ನೀರು ಮಳೆ ಬಂದಾಗ ಮಾತ್ರ.  ಉಳಲು ಕಾಸಿಲ್ಲ, ಬಿತ್ತಲು ಕಾಳಿಲ್ಲ.  ನಿರ್ಗತಿಕರಿಗೆ ಜಮೀನು ನೀಡಿದ ಸರ್ಕಾರ ಕಣ್ಣೆತ್ತಿಯೂ ನೋಡಲಿಲ್ಲ.  ಬರಡು ನೆಲ ಫಲ ಕೊಡಲೇ ಇಲ್ಲ.  ಜನ ಗುಳೆ ಎದ್ದು ಕೂಲಿ ಅರಸಿ ಊರೂರು ಅಲೆಯತೊಡಗಿದರು.  ಹೀಗೆ ವರ್ಷಗಳು ಉರುಳಿದವು.

ಇಂತಹ ಸಮಯದಲ್ಲೇ ಬೈಫ್ ಸಂಸ್ಥೆ ಮಂಜುನಾಥಪುರಕ್ಕೆ ಕಾಲಿಟ್ಟಿತು.  ಸಂಸ್ಥೆಯ ಕೆಲಸವೇ ಗಾಂಧಿಯ ಕನಸಿನ ಸಾಕಾರಗೊಳಿಸುವಿಕೆ.  ವೈಜ್ಞಾನಿಕವಾಗಿ, ತಾತ್ವಿಕವಾಗಿ ಚೈತನ್ಯದಾಯಕ ನಾಯಕತ್ವವನ್ನು ಸಂಸ್ಥೆ ವಹಿಸಿಕೊಂಡಿತು.  ಮಂಜುನಾಥಪುರದ ಸಾಮಾನ್ಯ ರೈತಮಹಿಳೆ ರತ್ನಮ್ಮನವರ ಯಶೋಗಾಥೆ ಬೈಫ್‌ನ ಕೆಲಸಗಳನ್ನು ವಿವರಿಸುತ್ತದೆ.

ಇಸವಿ ೧೯೬೩ರಲ್ಲಿ ರಾಮಯ್ಯನ ಕುಟುಂಬ ಮಂಜುನಾಥಪುರದಲ್ಲಿ ನೆಲೆಸಿತು.  ಇಸವಿ ೧೯೭೧ರಲ್ಲಿ ರತ್ನಮ್ಮ ರಾಮಯ್ಯನವರ ಹೆಂಡತಿಯಾಗಿ ಬಂದರು.  ಇವರಿಗೆ ಮೂವರು ಮಕ್ಕಳು.  ಕುಟುಂಬ ದೊಡ್ಡದಾಯಿತೇ ಹೊರತು ಜಮೀನಿಲ್ಲಿ ಫಲ ಇರಲಿಲ್ಲ, ಕೃಷಿ ಗೊತ್ತಿಲ್ಲ, ಕೂಲಿ ಹೊಟ್ಟೆಗೆ ಸಾಲುತ್ತಿರಲಿಲ್ಲ.  ರತ್ನಮ್ಮನಿಗಂತೂ ನೀರು ತರಲು, ಸೌದೆ ತರಲು, ಹಿಟ್ಟು ತರಲು ದಿನವೆಲ್ಲಾ ಬೇಕಾಗುತ್ತಿತ್ತು.  ಹಸಿವಿನಿಂದ ದಿನಗಳು ಯುಗಗಳಂತೆ ಅನಿಸುತ್ತಿತ್ತು.

೧೯೯೨ರಲ್ಲಿ ಬೈಫ್ ಅಲ್ಲಿನ ಜನರೊಂದಿಗೆ ಬದುಕು ಬದಲಿಸಿಕೊಳ್ಳುವ ಕುರಿತು ಚರ್ಚಿಸಿತು.  ಹಸಿದ ಹೊಟ್ಟೆ ಹಿಟ್ಟನ್ನಲ್ಲದೆ ಬೇರೆ ಏನನ್ನೂ ಯೋಚಿಸಲು ಬಿಡುವುದಿಲ್ಲ.  ಹೀಗಿರುವಾಗ ಮರ ಆಧಾರಿತ ಕೃಷಿ ತಂತ್ರಜ್ಞಾನ ಅವರಿಗೆ ಅರ್ಥವಾಗಲು ಹೇಗೆ ಸಾಧ್ಯ.  ಎಷ್ಟೋ ಚರ್ಚೆ, ವಿಚಾರ ವಿನಿಮಯಗಳ ನಂತರ ರತ್ನಮ್ಮನವರ ಕುಟುಂಬ ಬೈಫ್ ಜೊತೆ ಸೇರಲು ಒಪ್ಪಿತು.

ಜಮೀನಿನ ಸುತ್ತ ಜೀವಂತ ಬೇಲಿಗಳ ನಿರ್ಮಾಣ ಮೊದಲ ಕೆಲಸ.  ಉರುವಲಿಗೆ, ಮೇವಿಗೆ ಹಾಗೂ ಗೊಬ್ಬರಕ್ಕೆ ಉಪಯುಕ್ತವಾಗುವ ಗಿಡಗಳನ್ನು ನೆಡಲಾಯಿತು.  ಗಿಡಗಳು ಆಳೆತ್ತರ ಬೆಳೆದಾಗ ರತ್ನಮ್ಮನವರಿಗೆ ಅವು ಗಾಳಿಯನ್ನು ನಿಯಂತ್ರಿಸಿದ್ದು, ಫಸಲ ಹೆಚ್ಚಿದ್ದು ಅರಿವಿಗೆ ಬಂತು.  ದಿನ ಕಳೆದಂತೆ ಉರುವಲು, ಮೇವು ಸಿಕ್ಕಿದಾಗ ರತ್ನಮ್ಮನವರ ಸಮಯ ಹಾಗೂ ಶ್ರಮ ಅರ್ಧದಷ್ಟು ಕಡಿಮೆಯಾಯಿತು.

ಎರಡನೇ ಸುತ್ತಿನಲ್ಲಿ ಮಾವು, ಗೇರು ಮುಂತಾದ ಗಿಡಗಳನ್ನು ನೆಡುವ ಯೋಜನೆ ರೂಪಿಸಿದರು.  ಅದಕ್ಕೆ ನೀರು ನೀಡಲು ಜಮೀನಿನಲ್ಲಿ ಬಾವಿ ಇಲ್ಲ.  ನೀರು ತರಲು ಕತ್ತೆಗಳು ಹಾಗೂ ಗಾಡಿನ ಸಹಾಯವನ್ನು ಊರಿನ ಸ್ವಸಹಾಯ ಗುಂಪು ನೀಡಿತು.  ಹೊಲದಲ್ಲಿ ನಿರ್ಮಿಸಿದ ಉದಿಬದುಗಳ ಮೇಲೆ ತೇಗ, ನೀಲಗಿರಿ ಹಾಗೂ ಮೇವಿನಹುಲ್ಲುಗಳನ್ನು ಬೆಳೆಸಿದರು.  ಒಂದಿಷ್ಟು ಮಾವಿನಗಿಡಗಳು ಸತ್ತುಹೋದವು.  ಮತ್ತೆ ನೆಟ್ಟರು.  ಜೊತೆಗೆ ತೆಂಗಿನ ಗಿಡಗಳನ್ನು ನೆಟ್ಟರು.

ಸಂತಸದಲ್ಲೊಂದು ನೋವು

ಕಲಾಂ ಬಗ್ಗೆ ದೇಶಕ್ಕೇ ತಿಳಿದಿದೆ.  ರಾಷ್ಟ್ರಪತಿಗಳಿಗೆ ಬಿಗಿ ಬಂದೋಬಸ್ತ್ ನೀಡುವುದು ಸರ್ಕಾರದ ಕರ್ತವ್ಯ.  ಆದರೆ ಕಲಾಂರವರ ಅಪ್ಪಣೆಯಲ್ಲಿ ಹೆಲಿಪ್ಯಾಡಿಗಾಗಿ ಮರಗಳನ್ನು ಕಡಿಯುವುದು ನಿಷೇಧ.  ಮಕ್ಕಳನ್ನು ಬಿಸಿಲಿನಲ್ಲಿ ಸಾಲಾಗಿ ನಿಲ್ಲಿಸಿ ಸ್ವಾಗತಕ್ಕೆ ಅಣಿ ಮಾಡುವುದು ನಿಷೇಧ.  ಹೀಗೆ ಅನೇಕ ಮಾನವೀಯ ಅಂಶಗಳು ಸೇರಿವೆ.  ಆದರೂ ರಕ್ಷಣಾಧಿಕಾರಿಗಳ ಅತಿ ಎಚ್ಚರಿಕೆ ಅನೇಕ ಅಮಾನವೀಯ ಕೆಲಸಗಳಿಗೆ ಕಾರಣವಾಗುತ್ತದೆ.  ರಾಷ್ಟ್ರಪತಿಗಳು ಬರುವ ದಾರಿಯ ಪಕ್ಕ ಹುತ್ತವೊಂದಿತ್ತು.  ಅದರಲ್ಲಿ ಜೇನು ಕುಟುಂಬವೊಂದು ವಾಸವಾಗಿತ್ತು.  ರಕ್ಷಕರು ಆ ಹುತ್ತವನ್ನು ಮಣ್ಣಿನಿಂದ ಮುಚ್ಚಿದರು.  ಆಹಾರ ತರಲು ಹೋಗಿದ್ದ ಜೇನುಹುಳುಗಳೆಲ್ಲಾ ಬಂದಾಗ ಮನೆಯನ್ನು ಹುಡುಕತೊಡಗಿದವು.

ಮನೆ ಇದ್ದ ಜಾಗದಲ್ಲೇ ಗುಂಪಾಗಿ ಕುಳಿತವು.  ಮತ್ತೆ ಆಗಮಿಸಿದ ರಕ್ಷಕರು ಆ ಜೇನುಹುಳುಗಳನ್ನೆಲ್ಲಾ ಕ್ರಿಮಿನಾಶಕ ಸಿಂಪಡಿಸಿ ಕೊಲೆ ಮಾಡಿದರು.  ಇದನ್ನು ಡಾ. ಕಲಾಂರವರಿಗೆ ಹೇಳುವವರು ಯಾರು?

ಈ ಮರಗಳ ಬುಡದಲ್ಲೇ ಅಧಿಕ ಫಸಲು ನೀಡುವ ರಾಗಿಯನ್ನು ಬಿತ್ತಿದರು.  ಕೆಲಸಕ್ಕೆ ಕೂಲಿ ಆಳುಗಳನ್ನು ಕರೆದರು.  ಸುಮಾರು ಎಂಟು ಕ್ವಿಂಟಾಲ್ ಫಸಲು ಎಕರೆಗೆ ಸಿಕ್ಕಿತು.

ಹೊಲದ ಮಧ್ಯೆ ಸ್ವಲ್ಪ ಜಾಗ ತರಕಾರಿಗಳಿಗೆ ಮೀಸಲು.  ಅದರಲ್ಲಿ ಮೆಣಸಿನಕಾಯಿ, ಟೊಮ್ಯಾಟೋ, ಬದನೆ, ಹುರುಳಿ ಹಾಗೂ ಗೋರಿಕಾಯಿಗಳನ್ನು ಬೆಳೆದರು.  ಇದು ರಾಗಿಯ ಮಧ್ಯೆ ಉಪಬೆಳೆಯಾಗಿಯೂ ಇತ್ತು.

ಗೊಬ್ಬರಕ್ಕಾಗಿ ಊರೂರು ಅಲೆಯದೇ ಮನೆಯಲ್ಲೇ ಎರೆಹುಳು ಗೊಬ್ಬರ ತಯಾರಿ.  ಕೈಯಲ್ಲಿ ಹಣ ಸೇರತೊಡಗಿತು.  ಸ್ವಸಹಾಯ ಸಂಘದಿಂದ ಸಾಲ ಮಾಡಿ ಕುರಿ ಕೊಂಡರು.  ಮಿಶ್ರತಳಿಯ ಹಸುಗಳನ್ನು ಕೊಂಡರು.  ಬೈಫ್‌ ಸಹಾಯದಿಂದ ಕೃತಕ ಗರ್ಭಧಾರಣೆ ಮಾಡಿದ ಎರಡು ಹಸುಗಳು ಹೆಣ್ಣು ಕರು ಹಾಕಿದವು.  ಕುರಿ ಹಾಗೂ ಹಸುಗಳನ್ನು ಮಾರಿದ ರತ್ನಮ್ಮ ಹೊಲದಲ್ಲಿ ಕೊಳವೆಬಾವಿ ತೆಗೆಸಿದರು.  ವರ್ಷಾವಧಿ ನೀರು ಸಿಕ್ಕಿತು.  ಇದರಿಂದ ಹಣ್ಣಿನ ಗಿಡಗಳು ಮತ್ತು ತೆಂಗಿನ ಫಸಲು ಹೆಚ್ಚಿತು.

ಆರ್ಥಿಕ ಮಟ್ಟ ಹೆಚ್ಚಿಸಿದಂತೆ ರತ್ನಮ್ಮ ಮನೆಯನ್ನು ಒಂದು ಕೋಣೆಯಿಂದ ವಿಸ್ತರಿಸಿ ಜಗುಲಿ, ಉಗ್ರಾಣ, ಅಡುಗೆಮನೆ, ಚಿಕ್ಕಕೋಣೆ, ಬಚ್ಚಲು, ಶೌಚಾಲಯ ಹಾಗೂ ಕೊಟ್ಟಿಗೆ ಕಟ್ಟಿಸಿದರು.  ಮನೆಯ ಸುತ್ತಲೂ ಚಿಕ್ಕ ತೋಟ.  ದಿನಬಳಕೆ ಹಾಗೂ ನಾಟಿ ಔಷಧಿಗಳ ಸಸ್ಯಗಳನ್ನು ನೆಟ್ಟರು.

ಇಡೀ ಊರಿನ ಜನರೇ ಅಭಿವೃದ್ಧಿಯ ಫಲದಿಂದ ಪುಳಕಿತರಾಗಿದ್ದರು.  ತಮ್ಮ ಜಮೀನುಗಳ ಹಕ್ಕುಪತ್ರ ಪಡೆಯುವುದಿರಲಿ, ಊರಿನ ಯಾವುದೇ ಕೆಲಸವಿರಲಿ ಒಗ್ಗಟ್ಟಾಗಿ ಸೇರಿ ಹೋರಾಟ ಮಾಡತೊಡಗಿದರು.  ಪರಿಣಾಮ ೧೫ ವರ್ಷಗಳ ನಂತರ, ಇಡೀ ಊರೇ ಹಸಿರಾಗಿದೆ.  ಹಾಲು ಹಣ್ಣುಗಳಿಂದ ತುಂಬಿದೆ.  ಆಧುನಿಕ ಸವಲತ್ತುಗಳು ಬಂದಿವೆ.  ಅಂತರ್ಜಲ ಹೆಚ್ಚಿ ನೀರ ನೆಮ್ಮದಿ ತಂದಿದೆ.

ಕಲಾಂರವರು ತಮ್ಮ ಪುರ ಯೋಜನೆ ಸಾಕಾರಗೊಳ್ಳಲು ಬಯಸಿದ ಹಿನ್ನೆಲೆಗೆ ಇಂತಹ ಹಳ್ಳಿಗಳೇ ಪ್ರೇರಣೆ, ಬೈಫ್ ಇಂತಹ ನೂರಾರು ಹಳ್ಳಿಗಳನ್ನು ಕಟ್ಟಿದೆ.  ಇದನ್ನು ಕಲಾಂರವರು ದೇಶದಾದ್ಯಂತ ಬೈಫ್‌ಗೆ ಪದೇ ಪದೇ ಭೆಟಿ ನೀಡಿ ಗಮನಿಸಿದ್ದರು.  ಆಂಧ್ರಪ್ರದೇಶದಲ್ಲಿರುವ ಅನೇಕ ಹಳ್ಳಿಗಳಲ್ಲಿ ಪುರ ಯೋಜನೆ ಅಳವಡಿಸಿದ ಮೇಲೂ ಬಡತನವನ್ನು ನೋಡಿದ ಕಲಾಂರವರಿಗೆ ಬೈಫ್ ಮಾದರಿ ಆಪ್ತವಾದದ್ದು ಸಹಜ.

ಪುರ (PURA-Providing Urban Amenities in Rural Areas) ಗ್ರಾಮೀಣಾಭಿವೃದ್ಧಿಯನ್ನು ಮುಖ್ಯವಾಗಿಟ್ಟುಕೊಂಡು ರೂಪಿಸಿದ ಯೋಜನೆ.  ಆರೋಗ್ಯ, ಶಿಕ್ಷಣ, ಸಂಪರ್ಕ ಮತ್ತು ವಿದ್ಯುನ್ಮಾನ ವ್ಯವಸ್ಥೆಗಳನ್ನು ಹಳ್ಳಿಗಳಿಗೆ ಸಮರ್ಪಕವಾಗಿ ನೀಡುವುದು ಉದ್ದೇಶ.  ಆರು ಅಥವಾ ಎಂಟು ಹಳ್ಳಿಗಳನ್ನು ಸೇರಿಸುವ ರಸ್ತೆ ನಿರ್ಮಾಣ, ಉತ್ತಮ ಸಾರಿಗೆ ಸಂಪರ್ಕದಿಂದ ಸಂವಹನ ಸುಲಭವಾಗುತ್ತದೆ.  ಈ ಹಳ್ಳಿಗಳಿಗೆ ಪ್ರಾಥಮಿಕ ಆರೋಗ್ಯಕೇಂದ್ರ, ವೈದ್ಯರು ಹಾಗೂ ಆಧುನಿಕ ಸೌಲಭ್ಯ ನೀಡಲಾಗುತ್ತದೆ.

ಶಾಲೆಗಳಿಗೆ ಕಂಪ್ಯೂಟರ್, ರೈತರಿಗೆ ಬೇಕಾದ ಜ್ಞಾನ ಸೌಲಭ್ಯ, ಸಾಕ್ಷರತೆ, ವಿವಿಧ ರೀತಿಯ ತರಬೇತಿ ಕೇಂದ್ರಗಳು ಶಿಕ್ಷಣದಡಿಯಲ್ಲಿ ಸಿಗುತ್ತವೆ.  ಟೆಲಿಫೋನ್‌ನಿಂದ ಆಧುನಿಕ ತಂತ್ರಜ್ಞಾನವಾದ ಇ-ಮೇಲ್‌ವರೆಗೆ ಜಾಗತಿಕ ಅರಿವು ಸಿಗುವ ವ್ಯವಸ್ಥೆ ವಿದ್ಯುನ್ಮಾನ ಕೇಂದ್ರದಲ್ಲಿ ಕಲ್ಪಿಸಲಾಗುವುದು.  ಈ ಯೋಜನೆಗಳು ಹಳ್ಳಿಗಳನ್ನು ಸಶಕ್ತಗೊಳಿಸುತ್ತವೆ.

ಪುರದ ವಿಸ್ತೃತರೂಪವೇ ಗ್ರಾಮೀಣ ಪ್ರದೇಶಕ್ಕೆ ನಗರದ ಸೌಲಭ್ಯಗಳನ್ನು ಅಳವಡಿಸುವುದು ಎಂದು.  ಇದು ಹಸಿವು, ಬರಡು, ವ್ಯಾಜ್ಯ, ರಾಜಕೀಯ, ಆರ್ಥಿಕ, ಸಾಮಾಜಿಕ ಬಲಹೀನತೆಯಿಂದ ನರಳುವ ಹಳ್ಳಿಗಳಿಗೆ ಖಂಡಿತಾ ಶೋಭಿಸುವುದಿಲ್ಲ.  ಪಲವತ್ತಾದ ಜಮೀನು, ಹಾಲು ಹಣ್ಣುಗಳ ಸಮೃದ್ಧಿ, ಸುಸ್ಥಿರ ಜೀವನ, ಮೌಲ್ಯಾಧಾರಿತ ಬದುಕು, ಜನರ ಸಹಭಾಗಿತ್ವ ಮತ್ತು ನಿರ್ವಹಣೆ, ಸಬಲತೆ ಹಾಗೂ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಇರುವ ಹಳ್ಳಿಗಳಿಗೆ ಈ ಸೌಲಭ್ಯಗಳು ನವಚೈತನ್ಯ ನೀಡುತ್ತವೆ.

ಈ ನವಚೇತನ ನೀಡುವ ಕೆಲಸ ಬೈಫ್ ಪ್ರಾರಂಭಿಸಿ ದಶಕಗಳೇ ಸಂದಿವೆ.  ಹಾಸನ ಜಿಲ್ಲೆಯ ಮೈಲನಹಳ್ಳಿ, ಬಾಳೆಹಳ್ಳಿಗಳಾಗಿರಲಿ, ಧಾರವಾಡ ಜಿಲ್ಲೆಯ ಕಲಘಟಗಿಯ ಸೂರಶೆಟ್ಟಿಕೊಪ್ಪ, ಗದಗದ ವಿರೂಪಾಪುರ, ಕಾರವಾರ ಜಿಲ್ಲೆಯ ದಾಸನಕೊಪ್ಪ ಹೀಗೆ ಬೈಫ್ ಕೆಲಸ ಮಾಡಿದ ನೂರಾರು ಹಳ್ಳಿಗಳಲ್ಲಿ ಇಂದು ಜನರ ಬದುಕು ಸುಭದ್ರವಾಗಿದೆ.  ಸ್ವಾವಲಂಬನೆ, ಆರ್ಥಿಕ ಸಬಲತೆ, ಆತ್ಮವಿಶ್ವಾಸಗಳು ಇಲ್ಲೆಲ್ಲಾ ಸಹಜವೆನ್ನಿಸುವಷ್ಟು ಆಳವಾಗಿವೆ.

ಕಲಾಂರವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದ ಮಕ್ಕಳ ವಿದ್ಯಾಭ್ಯಾಸ, ನೀರಿನ ಫ್ಲೋರೈಡ್ ಅಂಶ ನಿವಾರಣೆ, ಕೃಷಿಕರಿಗೆ ಸಹಾಯ, ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ, ಸ್ವಚ್ಛತೆ, ಕುಟುಂಬಯೋಜನೆ ಈ ಎಲ್ಲವನ್ನೂ ಬೈಫ್ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ.  ಇದೆಲ್ಲಾ ಗಮನಿಸಿದ ರಾಷ್ಟ್ರಪತಿಗಳು ಹಳ್ಳಿಗಳ ಭೇಟಿಯ ತಮ್ಮ ಆಶಯವನ್ನು ಬೈಫ್ ಹಳ್ಳಿಗಳಿಗೆ ಭೇಟಿ ನೀಡುವ ನೆಪದಲ್ಲಿ ಪೂರೈಸಿಕೊಂಡಿದ್ದಾರೆ.  ಈ ಹಳ್ಳಿಗಳಿಗೆ ತಂತ್ರಜ್ಞರು, ವಿಜ್ಞಾನಿಗಳು, ನಾಯಕರು, ಯೋಜನಾಧಿಕಾರಿಗಳು, ಕೃಷಿಕರು, ಯಾರೇ ಭೇಟಿ ನೀಡಿದರೂ ಅವರಿಗೆಲ್ಲಾ ಅಚ್ಚರಿ ಎನಿಸುವಷ್ಟು ಪ್ರಬುದ್ಧವಾಗಿವೆ, ಅಭಿವೃದ್ಧಿಯಾಗಿವೆ.

ಡಾ. ಕಲಾಂರವರ ಬಳಿ ಇರುವ ನೀಲಿನಕ್ಷೆಯಲ್ಲಿ ಗಾಂಧೀಜಿಯವರ ಕಳಕಳಿಯಿದೆ.  ಅದಕ್ಕವರು ಹೊಸ ತಂತ್ರಜ್ಞಾನ ಹಾಗೂ ವೇಗವರ್ಧಕಗಳನ್ನು ಜೋಡಿಸಿದ್ದಾರೆ.  ಅದನ್ನು ಜೀರ್ಣೀಸಿಕೊಳ್ಳುವ ಶಕ್ತಿ ಜನರಿಗಿದೆಯೇ?  ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಹೂಡಿಕೆ ಹೂಡಿ ತಕ್ಷಣದ ಪ್ರತಿಫಲ ಬಯಸುವುದು ಸರಿಯೇ?   ಕಲಾಂರವರ ಕನಸನ್ನು ಸಾಕಾರಗೊಳಿಸಲು ಅತ್ಯಂತ ನಿಪುಣ ಯೋಜನಾಧಿಕಾರಿಗಳ ಬಲ ಬೇಕು. ಸೂಕ್ತವಾಗಿ ಜಾರಿಗೊಳಿಸುವ ವ್ಯವಸ್ಥಾಪಕರು ಬೇಕು.  ಇದನ್ನೆಲ್ಲಾ ಜನರೇ ರೂಪಿಸುವಂತೆ, ನಿರ್ವಹಿಸುವಂತೆ ಮಾಡುವ ಕಾರ್ಯನಿರ್ವಾಹಕರು ಬೇಕು.  ಈ ಬದಲಾವಣೆಗಳಿಂದ ಸುಸ್ಥಿರತೆ ಉಂಟಾಗಬೇಕು.  ಇದೊಂದು ಸಮುದಾಯದ ಸಾರಥ್ಯದಲ್ಲಿ ಸ್ಥಿರವಾದ ಕೆಲಸವಾಗಬೇಕು.

ಬೈಫ್ ೧೩ ರಾಜ್ಯಗಳಲ್ಲಿ ವ್ಯವಸ್ಥಿತವಾಗಿ, ಗಾಂಧಿ ತತ್ವಗಳಿಗೆ ಅನುಗುಣವಾಗಿ ಕಲಾಂರವರ ಕನಸನ್ನು ಎಂದಿನಿಂದಲೋ ಹಳ್ಳಿಗಳಿಗೆ ವರ್ಗಾಯಿಸುತ್ತಿದೆ.  ಇದನ್ನು ಅರಿತ ಕಲಾಂ ಮತ್ತೆ ಮತ್ತೆ ಬೈಫ್‌ಗೆ ಭೇಟಿ ನೀಡುತ್ತಿದ್ದಾರೆ.  ತಮ್ಮ ಹೊಸ ಹೊಸ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಹೊಸ ವಿಷಯಗಳನ್ನು ಬಿತ್ತುತ್ತಿದ್ದಾರೆ