ತೋಟಗಾರಿಕೆಯ ಅಭಿವೃದ್ಧಿಗಾಗಿ ಮಹತ್ತರ ಸೇವೆ ಸಲ್ಲಿಸಿರುವ ತೋಟಗಾರಿಕಾ ತಜ್ಞ ಡಾ. ಕೆ. ಆರ್. ತಿಮ್ಮರಾಜು ಅವರು.
ತುಮಕೂರು ಜಿಲ್ಲೆಯ ಕಾಲೇನಹಳ್ಳಿ ಗ್ರಾಮದಲ್ಲಿ ೧೯೩೪ ರಲ್ಲಿ ಜನಿಸಿದ ಡಾ. ಕೆ. ಆರ್. ತಿಮ್ಮರಾಜು ಮೈಸೂರು ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಬಿ.ಎಸ್. ಆನರ್ಸ್ ಮತ್ತು ಎಂ.ಎಸ್ಸಿ. ಪದವಿ, ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸ್ನಾತಕೋತ್ತರ ಶಾಲೆಯಿಂದ ಪಿಹೆಚ್.ಡಿ. ಪದವಿ ಪಡೆದಿದ್ದಾರೆ.
ಬೆಂಗಳೂರಿನ ಸೆಯಿಂಟ್ ಜೋಸೆಫ್ ಕಾಲೇಜು ಮತ್ತು ಯುವರಾಜ ಕಾಲೇಜುಗಳಂಥ ಪ್ರತಿಷ್ಠಿತ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತೋಟಗಾರಿಕಾ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆಯಿಂದ ನಿವೃತ್ತಿ.
ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಶ್ರೀಯುತರು ಅಮೆರಿಕ ಸಂಯುಕ್ತ ಸಂಸ್ಥಾನ, ಅಮೆರಿಕ, ಫ್ರಾನ್ಸ್, ಜಪಾನ್, ಕೆನ್ಯಾ ದೇಶಗಳಿಗೆ ಭೇಟಿ ನೀಡಿದ್ದಾರೆ. ಅನೇಕ ಅಂತರರಾಷ್ಟ್ರೀಯ ಕಾರ್ಯಾಗಾರ, ವಿಚಾರಸಂಕಿರಣ, ಗೋಷ್ಠಿಗಳಲ್ಲಿ ಭಾಗವಹಿಸಿ ತೋಟಗಾರಿಕೆಯ ಬಗ್ಗೆ ವಿದ್ವತ್‌ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಗಾಗಿ ಅಮೆರಿಕನ್ ಬಯೊಗ್ರಾಫಿಕಲ್ ಸಂಸ್ಥೆಯಿಂದ ಪ್ರಶಸ್ತಿ ಪಡೆದಿರುವ ಶ್ರೀಯುತರು ತೋಟಗಾರಿಕಾ ವಿಸ್ತರಣ ಕಾರ್ಯಕ್ರಮದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ‘ಮಲ್ಲಿಕಾ’ ಮಾವಿನ ಮಿಶ್ರತಳಿಯನ್ನು ಪರಿಚಯಿಸಿ ಮಾವು ಬೆಳೆಗಾರರಲ್ಲಿ ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರು. ಮಾವು, ಹುಣಸೇ ಮತ್ತು ಹಲಸಿನ ಬೆಳೆಗಳನ್ನು ತಮ್ಮ ಸಂಶೋಧನಾ ಕ್ಷೇತ್ರವಾಗಿಸಿಕೊಂಡ ಶ್ರೀಯುತರು ಒಣಭೂಮಿ ತೋಟಗಾರಿಕಾ ಅಭಿವೃದ್ಧಿ ಬಗೆಗೆ ವಿಚಾರಸಂಕಿರಣಗಳನ್ನು ಏರ್ಪಡಿಸಿದ್ದಾರೆ. ರೇಡಿಯೊ, ದೂರದರ್ಶನ ಮೂಲಕ ತೋಟಗಾರಿಕಾ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ಪ್ರಸಾರ ಮಾಡಿರುವ ಶ್ರೀಯುತರು ತೋಟಗಾರಿಕೆಗೆ ಸಂಬಂಧಿಸಿದ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ತೋಟಗಾರಿಕೆಯ ಅಭಿವೃದ್ಧಿಗಾಗಿ ಶ್ರಮಿಸಿರುವ, ತೋಟಗಾರಿಕಾ ತಜ್ಞ ಜನಪ್ರಿಯ ಅಧ್ಯಾಪಕ ಮತ್ತು ಸಂಶೋಧಕ ಡಾ. ಕೆ.ಆರ್. ತಿಮ್ಮರಾಜು ಅವರು.
Categories
ಡಾ. ಕೆ.ಆರ್. ತಿಮ್ಮರಾಜು
