Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೆ ಜಿ ದಾಸ್

ಸಮರ್ಪಣಾಭಾವದ ವೈದ್ಯರು, ಪ್ರತಿಭಾವಂತ ಪ್ರಾಧ್ಯಾಪಕರು, ಬಡವರ ಬಂಧು ಆಗಿರುವ ಕರ್ನಾಟಕದ ಗಣ್ಯ ವೈದ್ಯರು ಡಾ. ಕುತ್ತುಪಡಿ ಗೋವಿಂದದಾಸ್ ಅವರು.

ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ವಿಶೇಷ ಪರಿಶ್ರಮ ಇವರದು. ಅಮೆರಿಕೆಯ ಫ್ಲೋರಿಡಾ, ಹೂಸ್ಟನ್, ಇಂಗ್ಲೆಂಡ್ ಮೊದಲಾದ ಸ್ಥಳಗಳ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಆಳವಾದ ಜ್ಞಾನವನ್ನು ಸಂಪಾದಿಸಿರುವ ತಜ್ಞರು.

ಸಹಸ್ರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿರುವ ಡಾ. ದಾಸ್ ಅವರು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಿಳಿ ಹೇಳುವ ಅಪರೂಪದ ಉಪಾಧ್ಯಾಯರು ಅಷ್ಟೇ ಅಲ್ಲ ವೈದ್ಯಕೀಯ ಕ್ಷೇತ್ರದ ಅನೇಕ ಸಮಸ್ಯೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿರುವ ಕ್ರಿಯಾಶೀಲರು. ಇವರು ರಚಿಸಿರುವ ಅನೇಕ ವಿದ್ವತ್ ಪೂರ್ಣ ಪ್ರಬಂಧಗಳು ಜಗತ್ತಿನ ವೈದ್ಯಕೀಯ ಕ್ಷೇತ್ರದ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿವೆ. ಇವರ ಅನೇಕ ಪುಸ್ತಕಗಳು ಪಠ್ಯಪುಸ್ತಕಗಳಾಗಿ

ಅಂಗೀಕಾರವಾಗಿವೆ.

ಡಾ. ದಾಸ್ ಅವರು ಸಹಸ್ರಾರು ಮಂದಿ ಕಡುಬಡ ರೋಗಿಗಳಿಗೆ ಉಚಿತವಾದ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿದ ಕರುಣಾಮಯಿ. ಮೈಸೂರು ಮಹಾರಾಜರಿಂದ ‘ರಾಜಸೇವಾಸಕ್ತ’ ಎಂಬು ಬಿರುದನ್ನು, ಉಡುಪಿಯ ಕೃಷ್ಣಮಠದಿಂದ ತಮ್ಮ ಮಾನವೀಯ ಸಮಾಜಸೇವೆಗಾಗಿ ಸನ್ಮಾನಗಳನ್ನು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನಿನ ‘ಡಾಕ್ಟರ್ ಡೇ’ ಪ್ರಶಸ್ತಿಯನ್ನು ಪಡೆದಿರುವ ತಜ್ಞ ವೈದ್ಯ ಡಾ. ಕೆ.ಜಿ. ದಾಸ್ ಅವರು.