Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ಕೆ. ಮರುಳಸಿದ್ದಪ್ಪ

ಕನ್ನಡ ರಂಗಭೂಮಿ, ಸಾಹಿತ್ಯ, ಶಿಕ್ಷಣ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ವಿದ್ವಾಂಸ ಡಾ|| ಕೆ. ಮರುಳಸಿದ್ದಪ್ಪ ಅವರು.
ಚಿಕ್ಕಮಗಳೂರು ಜಿಲ್ಲೆಯ ಶಿವನೆ ಹೋಬಳಿಯ ಕಾರೆಹಳ್ಳಿಯಲ್ಲಿ ಜನನ, ಮೈಸೂರಿನಲ್ಲಿ ವಿದ್ಯಾಭ್ಯಾಸ, ಕನ್ನಡ ಎಂ.ಎ.ಯಲ್ಲಿ ಪ್ರಥಮ ಬ್ಯಾಂಕ್, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿ ಗಳಿಕೆ. ೧೯೬೫ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ವೃತ್ತಿ ಪ್ರಾರಂಭಿಸಿದ ಶ್ರೀಯುತರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ರೀಡರ್, ಪ್ರೊಫೆಸರ್, ನಿರ್ದೆಶಕರ ಹುದ್ದೆ ನಿರ್ವಹಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಕನ್ನಡ ರಂಗಭೂಮಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀಯುತರು ‘ಆಧುನಿಕ ಕನ್ನಡ ನಾಟಕ’ ಎಂಬ ವಿದ್ವತ್‌ಪೂರ್ಣ ಕೃತಿಯನ್ನು ರಚಿಸಿದ್ದಾರೆ. ರಂಗ ತಂಡಗಳಾದ ಪ್ರತಿಮಾ ನಾಟಕ ರಂಗ, ಸಮುದಾಯ, ನಾಟ್ಯ ಸಂಘ ಥಿಯೇಟರ್ ಸೆಂಟರ್‌ನೊಡನೆ ನಿಕಟ ಸಂಪರ್ಕ ಹೊಂದಿರುವ ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಅರ್ಥಪೂರ್ಣ ಸೇವೆ ಸಲ್ಲಿಸಿದ್ದಾರೆ.
ಕನ್ನಡ ನಾಟಕ ಸಮೀಕ್ಷೆ, ಷಟ್ನದಿ ಸಾಹಿತ್ಯ, ಒಡನಾಟ, ನೋಟ ನಿಲುವು, ಎಲೆಕ್ಟ್ರ, ಮೀಡಿಯ, ರಕ್ತಕಣಗಿಲೆ ಮೊದಲಾದ ಗ್ರಂಥಗಳನ್ನು ರಚಿಸಿದ್ದಾರೆ. ಶ್ರೀಯುತರು ಸಂಪಾದಿಸಿದ ಕನ್ನಡ ನಾಟಕ ವಿಮರ್ಶೆ, ಲಾವಣಿಗಳು, ವಚನ ಕಮ್ಮಟ, ಶತಮಾನದ ನಾಟಕ ಕೃತಿಗಳು ವಿದ್ವಜ್ಜನರ ಗೌರವಕ್ಕೆ ಪಾತ್ರವಾಗಿವೆ. ಸಾಹಿತ್ಯ ಸಮ್ಮೇಳನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿರುವ ಶ್ರೀಯುತರ ಐವತ್ತಕ್ಕೂ ಹೆಚ್ಚು ಬಿಡಿ ಲೇಖನಗಳು ಪ್ರಕಟವಾಗಿವೆ. ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಷಿಪ್ ಹಾಗೂ ಭೂಪಾಲ್‌ನಲ್ಲಿ ನಡೆದ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾಹಿತ್ಯ, ಶಿಕ್ಷಣ, ಜಾನಪದ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಪ್ರತಿಭಾವಂತ ಸಾಧಕ ಡಾ|| ಕೆ. ಮರುಳಸಿದ್ದಪ್ಪ ಅವರು.