ಭಾರತೀಯ ನೃತ್ಯಕ್ಷೇತ್ರದಲ್ಲಿ ರುಕ್ಮಿಣಿದೇವಿ ಅರುಂಡೇಲ್‌ಅವರದ್ದು ದೊಡ್ಡ ಹೆಸರು. ನಮ್ಮ ದೇಶದ ಕಲೆ ಮತ್ತು ಸಂಸ್ಕೃತಿಯ ತಿರುಳನ್ನು ಚೆನ್ನಾಗಿ ಅರಿತುಕೊಂಡು ಭರತನಾಟ್ಯ ಕಲೆಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಮಹಾನ್‌ಕಲಾವಿದೆ ರುಕ್ಮಿಣಿದೇವಿ. ಕುಲೀನ ಮನೆತನದ ಹೆಣ್ಣು ಮಕ್ಕಳು, ಸ್ತ್ರೀಯರು ಭರತನಾಟ್ಯವನ್ನು ಕಲಿತು ಪ್ರದರ್ಶಿಸಬಹುದು ಎಂದು ಧೈರ್ಯ ತುಂಬಿ ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರದ್ದು. ಮದರಾಸಿನ ಅಡಿಯಾರ್ ನಲ್ಲಿ ತಮ್ಮದೇ ಆದ ಕಲಾಕ್ಷೇತ್ರವನ್ನು ಸ್ಥಾಪಿಸಿ ಸಾವಿರಾರು ಮಂದಿ ದೇಶವಿದೇಶೀಯರನ್ನು ಈ ಕಲೆಯಲ್ಲಿ ಅವರು ತಯಾರಿಗೊಳಿಸಿದ್ದಾರೆ. ಕಲಾಕ್ಷೇತ್ರದ ಪಠ್ಯಕ್ರಮ ಒಂದು ವಿಶೇಷ ತೆರವಾದದ್ದು. ಅದನ್ನು ಇಂದಿಗೂ ನಾವು ಕಲಾಕ್ಷೇತ್ರ ಶೈಲಿ ಎಂದು ಗುರುತಿಸುತ್ತೇವೆ. ನೃತ್ಯ ಪ್ರದರ್ಶನದ ಕ್ರಮ, ವೇಷಭೂಷಣ, ರಂಗದ ಮೇಲೆ ಕಲಾವಿದೆಯ ನಿಲುವು, ನೃತ್ಯಬಂಧಗಳಲ್ಲಿನ ವೈಶಿಷ್ಟ್ಯಗಳಿಂದಾಗಿ ಆ ಶೈಲಿಯನ್ನು ಸುಲಭವಾಗಿ ಕಲಾಕ್ಷೇತ್ರಶೈಲಿ ಎಂದು ಗುರುತಿಸಬಹುದಾಗಿದೆ.

ಹಾಗೆಯೇ ಕರ್ನಾಟಕದ ಹಿರಿಯ ಭರತನಾಟ್ಯ ಕಲಾವಿದೆ ಪದ್ಮಭೂಷಣ ಡಾ.ಕೆ. ವೆಂಕಟಲಕ್ಷಮ್ಮ ಅವರ ಕೊಡುಗೆ ಕೂಡ ಭಾರತೀಯ ನೃತ್ಯಕ್ಷೇತ್ರಕ್ಕೆ ಅತ್ಯಂತ ಮಹತ್ವ ಪೂರ್ಣವಾದದ್ದು. ತಮ್ಮ ಗುರುಪರಂಪರೆಯಿಂದ ಹೊರ ಹೊಮ್ಮಿದ ಮೈಸೂರು ಶೈಲಿಯ ಭರತನಾಟ್ಯದ ಅಗ್ರಗಣ್ಯ ಗುರುಗಳಾಗಿ ಅವರು ನಾಡಿನ ನೃತ್ಯ ಕ್ಷೇತ್ರಕ್ಕೆ ಹಲವಾರು ಶಿಷ್ಯರನ್ನು ತಯಾರಿಗೊಳಿಸಿ ಕೊಡುಗೆ ನೀಡಿದ್ದಾರೆ. ಅವರ ಶಿಷ್ಯರು ಈ ಪರಂಪರೆಯನ್ನು ದೇಶದ ಒಳಗೆ ಹಾಗೂ ಹೊರಗೆ ಇಂದು ಪಸರಿಸುತ್ತಿದ್ದಾರೆ. ಡಾ. ವೆಂಕಟಲಕ್ಷಮ್ಮನವರ ಖ್ಯಾತಿ ಇಂದು ಮೈಸೂರಿಗೆ ಮಾತ್ರ ಸೀಮಿತವಾಗದೆ ಭಾರತೀಯ ನೃತ್ಯಕ್ಷೇತ್ರದಲ್ಲೇ ಮೈಸೂರು ಶೈಲಿಯ ಭರತನಾಟ್ಯದ ಪ್ರವರ್ತಕರಲ್ಲೊಬ್ಬರಾಗಿ ಚಿರಸ್ಥಾಯಿಯಾಗಿದೆ.

ವೆಂಕಟಲಕ್ಷಮ್ಮ ಅವರ ಹುಟ್ಟೂರು ಕಡೂರಿನ ತಂಗಲಿ ತಾಂಢ್ಯ. ೧೯೦೬ರ ಮೇ ೨೯ರಂದು ಜನಿಸಿದ ಇವರು ೯೬ ವರ್ಷಗಳ ತುಂಬು ಸಾರ್ಥಕ ಕಲಾಮಯ ಜೀವನ ನಡೆಸಿ ಜುಲೈ ೩, ೨೦೦೨ ರಂದು ಹುಟ್ಟೂರಿನಲ್ಲೇ ನಿಧನರಾದರು. ಇವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಅಜ್ಜ ರಾಮನಾಯಕ ಮತ್ತು ಅಜ್ಜಿಯ ಲಾಲನೆ ಪೋಷಣೆಯಲ್ಲೇ ಬೆಳೆದರು. ಇವರ ಬಾಲಪ್ರತಿಭೆಯನ್ನು ಗುರುತಿಸಿದ ಅಜ್ಜ-ಅಜ್ಜಿ ಇವರನ್ನು ಊರ ಹಿರಿಯರ ಸಲಹೆಯಂತೆ ಕಲಾಭ್ಯಾಸಕ್ಕಾಗಿ ಮೈಸೂರಿಗೆ ಕರೆ ತಂದರು. ಅಲ್ಲಿಂದ ಮುಂದೆ ಸುಮಾರು ೭೦-೭೫ ವರ್ಷ ಮೈಸೂರು ನಾಟ್ಯ ಸೀಮೆಯೇ ವೆಂಕಟಲಕ್ಷಮ್ಮನವರ ಕಲಾವೇದಿಕೆಯಾಯಹಿತು. ಒಂಬತ್ತನೆಯ ವಯಸ್ಸಿನಲ್ಲೇ ಮೈಸೂರಿನ ನಾಟ್ಯ ಸರಸ್ವತಿ ಬಿರುದಾಂಕಿತೆ ಜಟ್ಟಿ ತಾಯಮ್ಮನವರಿಂದ ಭರತನಾಟ್ಯ ತರಬೇತಿ ಪಡೆಯಲಾರಂಭಿಸಿದ ವೆಂಕಟಲಕ್ಷಮ್ಮ, ಬಿಡಾರಂ ಕೃಷ್ಣಪ್ಪ ಅವರ ಶಿಷ್ಯ ಆಸ್ಥಾನ ವಿದ್ವಾನ್‌ಬಿ. ದೇವೇಂದ್ರಪ್ಪ ಅವರಿಂದ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನೂ ಪಡೆದರು.

ವೆಂಕಟಲಕ್ಷಮ್ಮನವರ ಸಾಮಾನ್ಯ ವಿದ್ಯಾಭ್ಯಾಸ ಬರಿಯ ಎಂಟನೆಯ ತರಗತಿಗೇ ನಿಂತಿತಾದರೂ ನಾಟ್ಯಕಲೆಯಲ್ಲಿನ ಅವರ ಅಪಾರ ಸಾಧನೆ, ಪರಿಶ್ರಮಗಳ ಫಲವಾಗಿ ೧೯೭೭ರಲ್ಲಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್‌ ಲಭಿಸಿತು. ಕರ್ನಾಟಕದಲ್ಲೇ ನೃತ್ಯಕಲೆಯ ಸಾಧನೆಗಾಗಿ ಗೌರವ ಡಾಕ್ಟರೇಟ್‌ಗಳಿಸಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರು. ಹಾಗೆಯೇ ಭಾರತ ಸರಕಾರವು ಹತ್ತು ವರ್ಷಗಳ ಹಿಂದೆಯೇ (೧೯೯೨) ಇವರಿಗೆ ರಾಷ್ಟ್ರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇನ್ನು ಖಾಸಗಿ ಸಂಘ ಸಂಸ್ಥೆಗಳು ನೀಡಿರುವ ಪ್ರಶಸ್ತಿ ಪುರಸ್ಕಾರಗಳು ಸಹಸ್ರಾರು. ಇವೆಲ್ಲದರ ಹಿಂದೆ ಅವರ ಸುಮಾರು ಏಳು ದಶಕಗಳ ಅವಿರತ ಶ್ರಮ, ಕಲಾಬದ್ಧತೆ, ಕಲೆಯ ಮೇಲಿನ ಕಳಕಳಿ, ಕ್ರಿಯಾಶೀಲತೆ ಇರುವುದು ಸುಸ್ಪಷ್ಟ. ಮೈಸೂರು ಶೈಲಿಯ ಭರತನಾಟ್ಯದ ಪ್ರಚಾರಕ್ಕೆ ಅವರ ಕೊಡುಗೆಯೂ ಅಪಾರ.

ಮೈಸೂರು ಶೈಲಿ! ಏನಿದು?” ಇಂದು ನಮ್ಮಿಂದ ಕಣ್ಮರೆಯಾಗಿರುವ ನೃತ್ಯಗಾತಿ ವೆಂಕಟಲಕ್ಷಮ್ಮನವರ ಬಗ್ಗೆ ಮಾತನಾಡುವಾಗ ಅವರ ಮೈಸೂರು ಶೈಲಿಯ ಬಗ್ಗೆ ಕೂಡ ಕೊಂಚ ಬೆಳಕು ಚೆಲ್ಲಬೇಕಾದದ್ದೂ ಅತ್ಯಗತ್ಯ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಿವಿಧ ಘರಾನಾಗಳು ಇರುವಂತೆ ಭರತನಾಟ್ಯದಲ್ಲೂ ಹಲವಾರು ರೀತಿಯ ಸಂಪ್ರದಾಯಗಳನ್ನು ನಾವು ಇಂದು ಕಾಣುತ್ತೇವೆ. ಈ ಸಂಪ್ರದಾಯ ಅಥವಾ ಶೈಲಿ ಎಂಬುದು ಪರಂಪರೆಯಿಂದ ಬಂದದ್ದು. ಸಂಪ್ರದಾಯದಲ್ಲಿ ಸಂಸ್ಕೃತಿಯ ಮೌಲ್ಯಗಳ ಸಂವಹನ ಆಗುತ್ತದೆ. ಅದನ್ನು ಮುಂದುವರಿಸಿ, ವರ್ಧಿಸಿ ಸಂಗೋಪನೆ ಮಾಡುವುದು ಅತಿ ಮುಖ್ಯ. ಆದ್ದರಿಂದ ಸಂಪ್ರದಾಯ ಎಂದರೆ ಮಾಡಿದ್ದನ್ನೇ ಮಾಡುವುದು, ಬೀಸಿದ್ದನ್ನೇ ಬೀಸುವುದು ಎಂಬ ಅರ್ಥವಲ್ಲ. ಶಾಸ್ತ್ರಾನುಭವ, ವಿಷಯಾನುಭವ, ಲೋಕಾನುಭವ ಮೂಸೆಯಲ್ಲಿ ಮೂಡಿಬಂದಂತಹ ನಿರ್ದಿಷ್ಟವಾದ ನಿರ್ಣಯಗಳೊಂದಿಗೆ ಒಡಮೂಡಿದ ಅನುಭವಾಮೃತವು ಒಂದು ಸ್ಪಷ್ಟವಾದ ಕ್ರಮದಲ್ಲಿ ಅರಳಿದಾಗ ಅದನ್ನು ಒಬ್ಬರಿಂದ ಒಬ್ಬರು ಅನುಸರಿಸುತ್ತಾ ಬಂದಾಗ ಅದೊಂದು ಸಂಪ್ರದಾಯ ಅಥವಾ ಶೈಲಿ ಎನಿಸುತ್ತದೆ. ಒಬ್ಬ ನರ್ತಕ/ನರ್ತಕಿ ತನ್ನ ಅಧ್ಯಯನ ಶೀಲತೆಯ ಫಲವಾಗಿ ಪಡೆದ ಶಾಸ್ತ್ರಾನುಭವ, ವಿಷಯಾನುಭವ ಮತ್ತು ಲೋಕಾನುಭವಗಳನ್ನು ಬೆರೆಸಿ ಸಂಯೋಜಿಸಿದ ನೃತ್ಯಗಳನ್ನು ತನ್ನ ಶಿಷ್ಯರಿಗೆ ಬೋಧಿಸಿ ಒಂದು ಪರಂಪರೆಯನ್ನು ಸೃಷ್ಟಿಸಿದರೆ ಅದು ಒಂದು ಸಂಪ್ರದಾಯ ಎನಿಸಿಕೊಳ್ಳುತ್ತದೆ.

ಗುರು ಶಿಷ್ಯಪರಂಪರೆಯನ್ನು ಹೊಂದಿ, ಮೈಸೂರು ಸೀಮೆಯಲ್ಲಿ ಜನಜನಿತವಾದ ನೃತ್ಯ ವೈಖರಿಯನ್ನು ಮೈಸೂರು ಸಂಪ್ರದಾಯ ಎಂದು ಗುರುತಿಸಲಾಗಿದೆ. ಈ ಸಂಪ್ರದಾಯ ಅಥವಾ ಶೈಲಿ ಹುಟ್ಟಿ ಬೆಳೆದು ಬರಲು ಕಾರಣ ಕರ್ತರು ಮೈಸೂರನ್ನು ಆಳಿದ ಒಡೆಯರ್ ಮನೆತನದ ಕೆಲವು ಅರಸರು. ಇವರ ಪ್ರೋತ್ಸಾಹದಿಂದ ದೇಶದ ಮೂಲೆ ಮೂಲೆಗಳಿಂದ ಭರತನಾಟ್ಯಕಲಾವಿದರು ಆಕರ್ಷಿತರಾಗಿ ಮೈಸೂರು ಅರಮನೆಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಬರುವಂತಾಯ್ತು.

೧೮೧೧ ರಿಂದ ೧೯೬೯ರ ಅವಧಿಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲೇ ಭರತನಾಟ್ಯದ ಭಾವನಕಲ್ಪನೆಗಳಲ್ಲಿ ಬದಲಾವಣೆಗಳು ಕಂಡು ಬಂದು ಮೈಸೂರು ಶೈಲಿಯ ನಾಟ್ಯ ಉತ್ಥಾನವಾಗಿದ್ದಿರಬಹುದೆಂದು ಊಹಿಸಬಹುದಾಗಿದೆ. ಅಂದಿನ ನೃತ್ಯ ಕ್ಷೇತ್ರದಲ್ಲಿ ಮೈಸೂರು ಶೈಲಿಯ ಭರತನಾಟ್ಯ ಉಳಿದು ಬಂದಿರುವುದು ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮನವರ ಪರಂಪರೆಯಿಂದಲೇ ಎನ್ನಬಹುದು. ಈ ನಿಟ್ಟಿನಲ್ಲಿ ಜಟ್ಟಿ ತಾಯಮ್ಮನವರ ಶಿಷ್ಯೆಯಾಗಿರುವ ವೆಂಕಟಲಕ್ಷಮ್ಮನವರ ಕೊಡುಗೆ ಅಮೂಲ್ಯ. ಇವರು ಸುಮಾರು ಮೂವತ್ತು ವರ್ಷಗಳ ಕಾಲ ಮೈಸೂರು ಅರಮನೆಯ ಆಸ್ಥಾನ ವಿದುಷಿಯಾಗಿದ್ದುಕೊಂಡು ಮೈಸೂರು ಸೀಮೆಗೇ ಹೆಸರು ಗಳಿಸಿಕೊಟ್ಟಿದ್ದಾರೆ.

ಮೈಸೂರು ಶೈಲಿಯ ಭರತನಾಟ್ಯ ಪದ್ಧತಿಯಲ್ಲಿ ನಟ್ಟುವಾಂಗದವನು ಮೊದಲಿಗೆ ಮಂಗಳ ಶ್ಲೋಕವನ್ನು ಹಾಡಿ ಮೃದಂಗ, ತಾಳಗಳೊಡನೆ ತತ್‌ಕಾರವನ್ನು ರಚಿಸುತ್ತಿದ್ದುದು ವಾಡಿಕೆ. ತತ್‌ಕಾರವೆಂದರೆ ಒಂದು ಬಗೆಯ ವೈಶಿಷ್ಟ್ಯ ಪೂರ್ಣವಾದ ಜತಿಗಳ ಗುಂಪು. ಅನಂತರ ಹಿಮ್ಮೇಳದವರೆಲ್ಲ ಕೂಡಿ ಗಣೇಶ ವಂದನೆ ಹಾಡಿ ನುಡಿಸುತ್ತಿದ್ದರು. ಅನಂತರ ಕಲಾವಿದೆ ರಂಗಪ್ರವೇಶಮಾಡಿ ನಟ್ಟುವಾಂಗದವನ್ನೂ ಮೃದಮಗ ವಾದ್ಯಗಳನ್ನೂ, ವಾದಕರನ್ನೂ ಪ್ರದಕ್ಷಿಣೆ ಮಾಡಿ ನಮಸ್ಕರಿಸುತ್ತಿದ್ದಳು. ಇದಾದ ನಂತರ ಕಲಾವಿದೆ ಸಭಾ ಪೂಜೆ ಮಾಡಿ ನಾಟ್ಯ ಪ್ರಶಂಸೆಯ ಸಂಸ್ಕೃತ ಶ್ಲೋಕವನ್ನು ಹಾಡುತ್ತಿದ್ದಳು. ಅನೇಕ ವೇಳೆ ಈ ಸಂದರ್ಭದಲ್ಲಿ ಆಶ್ರಯದಾತ ರಾಜನ ಪ್ರಶಂಸೆಯುಳ್ಳ ಚೂರ್ಣಿಕೆಯೊಂದನ್ನು ಹಾಡುವುದೂ ಸಂಪ್ರದಾಯವಾಗಿತ್ತು. ರಾಜನಿಗೆ ಪರಾಕು ಹೇಳಿ ಹೊಗಳುವ ಸಾಹಿತ್ಯ ಇರುವ ಚೂರ್ಣಿಕೆಯನ್ನು ರಾಜವಂಧನೆ ಎಂದು ಕರೆಯುತ್ತಿದ್ದರು. ಹೀಗೆ ಪ್ರಭು ಪ್ರಶಂಸೆಯ ಅನಂತರ ಕಲಾವಿದೆ ಪುಷ್ಪಾಂಜಲಿ, ಹಯಗ್ರೀವ ಸ್ತುತಿ, ಸ್ವರಜತಿ, ವರ್ಣ, ಶಬ್ದ, ತಿಲ್ಲಾನಗಳ ಬಳಿಕ ಶ್ಲೋಕ, ಪಂಚಕ, ಪದ, ಜಾವಳಿ ಮುಂತಾಗಿ ಪ್ರದರ್ಶಿಸುವ ಕ್ರಮ ಮೈಸೂರು ಶೈಲಿಯದಾಗಿತ್ತು.

ರಸಾಭಿನಯದ ಪ್ರಾಮುಖ್ಯವೇ ಮೈಸೂರು ಶೈಲಿಯ ಹೆಗ್ಗಳಿಕೆ, ಜೀವಾಳ ಎಂಬುದು ಆ ಶೈಲಿಲಯ ಪ್ರವರ್ತಕರಲ್ಲೊಬ್ಬರಾದ ವೆಂಕಟಲಕ್ಷಮ್ಮನವರ ವಾದ. ಇದರ ಸತ್ಯತೆ ಮೈಸೂರು ಶೈಲಿಯ ಜಾವಳಿಗಳ  ಅಭಿನಯದಲ್‌ಇದೆ. ಡಾ. ವೆಂಕಟಲಕ್ಷಮ್ಮನವರು ಮಾತಾಡಬಾರದೇನೋ ಮಾರಮಣನೇ ಎಂಬ ಕನ್ನಡ ಜಾವಳಿಗೆ ಅಭಿನಯಿಸುತ್ತಿದ್ದ ರೀತಿ ಚಿರಸ್ಮರಣೀಯ. ಚಾಮರಾಜ ಒಡೆಯರಿಗೆ ಜಾವಳಿ ತುಂಬ ಪ್ರಿಯವಾಗಿತ್ತಂತೆ. ಹೀಗಾಗಿ ಅವರ ಕಾಲದಲ್ಲೇ ಕನ್ನಡ ಭಾಷೆಯಲ್ಲಿ ಹಲವಾರು ಜಾವಳಿಗಳು ರಚಿತವಾದವು. ರಾಜನ ಆಸ್ಥಾನದಲ್ಲಿ ನರ್ತಕಿಯರು ತಾವೇ ಜಾವಳಿಗಳನ್ನು ರಚಿಸಿ ನೃತ್ಯ ಮಾಡುತ್ತಿದ್ದರು. ಸ್ವತಃರಾಜರುಗಳು, ಆಸ್ಥಾನ ಮಹಾ ಪಂಡಿತರು ಹಾಡಿಗೆ ತಕ್ಕ ಅಭಿನಯ ನೀಡಬೇಕೆಂದು ಹೇಳುತ್ತಿದ್ದ ಕಾಲವೂ ಇತ್ತು. ಜಾವಳಿ ಎಂದರೆ ಉಲ್ಲಾಸವುಳ್ಳ ಆಕರ್ಷಕ ಸಂಯೋಜನೆಯಿಂದ ಕೂಡಿದ ಶೃಂಗಾರರಸ ಪ್ರಧಾನವಾದ ಒಂದು ರಚನೆ. ಮೈಸೂರು ಶೈಲಿಯ ಭರತನಾಟ್ಯದ ಹುರುಳು ಈ ಕನ್ನಡ ಜಾವಳಿಗಳ ಸತ್ವಶಕ್ತಿಯಲ್ಲಿ ಅಡಗಿದೆ ಎಂದರೂ ತಪ್ಪಾಗಲಾರದು.

ವೆಂಕಟಲಕ್ಷಮ್ಮನವರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದರೆ ೧೯೩೯ರಲ್ಲಿ ಮೈಸೂರು ಅರಮನೆಯ ಆಸ್ಥಾನ ವಿದುಷಿಯಾಗಿ ನೇಮಕಗೊಂಡರು. ನಂತರ ಸುಮಾರು ೩೦ ವರ್ಷಗಳ ಕಾಲ ಆಸ್ಥಾನ ವಿದುಷಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು. ಮೈಸೂರಿನ ಅರಮನೆಯಲ್ಲಿ ಆಗ ನೃತ್ಯಗಾತಿಯರ ಐದು ತಂಡಗಳಿದ್ದವು. ಮೂಗೂರು ತಾಯಕ್ಕ, ಬಳ್ಳಾಪುರದ ಭವಾನಮ್ಮ, ವಾಸಮ್ಮ, ಚಂದ್ರವದನಮ್ಮನ ಮಗಳು ಜಯಮ್ಮ ಮತ್ತು ಲಕ್ಷಮ್ಮ. ಈ ಲಕ್ಷಮ್ಮನ ನಿಧನದಿಂದ ತೆರನಾದ ಸ್ಥಾನಕ್ಕೆ ವೆಂಕಟಲಕ್ಷಮ್ಮನವರು ನೇಮಕವಾಗಿದ್ದರು.

ಅರಮನೆ ಆಸ್ಥಾನ ವಿದುಷಿಯಾಗಿ ತಾನು ಸಲ್ಲಿಸಿದ ಸೇವೆಯ ಬಗ್ಗೆ ವೆಂಕಟಲಕ್ಷಮ್ಮ ಯಾವಾಗಲೂ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅಲ್ಲಿನ ಕಲಾ ಅನುಭವಗಳನ್ನು ಅವರ ಬಾಯಿಯಿಂದ ಕೇಳಬೇಕು. ಕಥೆ ಹೇಳಿದಂತೆ ತಮ್ಮ ಅರಮನೆಯ ನೆನಪುಗಳನ್ನು ಅವರು ಶಿಷ್ಯರಿಗೆ ಆಗಾಗ್ಗೆ ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಡುತ್ತಿದ್ದರು. ಆಗ ಅವರಿಗೆ ತಿಂಗಳಿಗೆ ೩೫ ರೂಪಾಯಿ ಸಂಭಾವನೆ ಇತ್ತಂತೆ. ಅವರು ನಿವೃತ್ತಿ ಆಗುವಾಗ ಅದು ೫೦ ರೂಪಾಯಿ ಸಂಭಾವನೆ ಇತ್ತಂತೆ. ಅವರು ನಿವೃತ್ತಿ ಆಗುವಾಗ ಅದು ೫೦ ರೂಪಾಯಿ ಆಗಿತ್ತಂತೆ. ಆಗಿನ ಕಾಲದ ೩೫ ರೂಪಾಯಿ ಇಂದಿನ ಕಾಲದ ೩೫೦೦ ರೂಪಾಯಿಗಳಿಗೂ ಹೆಚ್ಚು ಎಂದುಯ ಅವರು ಅಭಿಮಾನದಿಂದ ಹೇಳುತ್ತಿದ್ದರು. ಅರಮನೆಯ ಕೆಲಸದ ಬಗ್ಗೆ ಇರುವ ಗೌರವ ಮತ್ತು ಬೆಲೆಯ ಬಗ್ಗೆ ಅವರಿಗೆ ಹೆಮ್ಮೆಯಿತ್ತು.

ಅರಮನೆಯಲ್ಲಿ ವಾರ್ಷಿಕವಾಗಿ ನಡೆಯುವ ಎರಡು ಪ್ರಮುಖ ಸಂದರ್ಭಗಳಲ್ಲಿ ನಡೆಯುತ್ತಿದ್ದ ನೃತ್ಯ ಸೇವೆಯ ಬಗ್ಗೆ ಅವರು ಯಾವಾಗಲೂ ಹೇಳುತ್ತಿರುತ್ತಿದ್ದರು. ಒಂದು ದಸರಾ ಸಂದರ್ಭ ಹಾಗೂ ಇನ್ನೊಂದು ಮಹಾರಾಜರ ವರ್ಧಂತಿ. ನವರಾತ್ರಿಯ ಹತ್ತು ದಿನಗಳಲ್ಲಿ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಕಟ್ಟಳೆ ಪೂಜೆ ಆದ ತಕ್ಷಣ ಅಲ್ಲಿ ನೃತ್ಯ ಸೇವೆ ಇರುತ್ತಿತ್ತಂತೆ. ಈ ನೃತ್ಯವನ್ನು ಒಮ್ಮೊಮ್ಮೆ ಮಹಾರಾಜರು ನೋಡುತ್ತಿದ್ದರಂತೆ. ಸುಮಾರು ಹತ್ತು ನಿಮಿಷಗಳ ಅವಧಿಯ ಈ ಸೇವೆಯಲ್ಲಿ ಸಾಮಾನ್ಯವಾಗಿ ಸಂಸ್ಕೃತದ ಶ್ಲೋಕಗಳು ಅಥವಾ ಚಾಮುಂಡೇಶ್ವರಿಯ ಕೀರ್ತನೆಗಳಿಗೆ ವೆಂಕಟಲಕ್ಷಮ್ಮ ಅಭಿನಯ ಒದಗಿಸುತ್ತಿದ್ದರಂತೆ.

ಹಾಗೆಯೇ ಇವರು ಭಾಗವಹಿಸುತ್ತಿದ್ದ ಮಹಾರಾಜರ ವರ್ಧಂತಿ ಕಾರ್ಯಕ್ರಮದ ರೀತಿಯೇ ಬೇರಯಾಗಿತ್ತು. ಈ ವರ್ಧಂತಿಯು ಮಹಾರಾಜರ ದರ್ಬಾರಿನಲ್ಲಿ ಅವರ ಸಿಂಹಾಸನದ ಮುಂದೆ ಎರಡು ಪಕ್ಕಗಳಲ್ಲಿ ಎರಡು ನೃತ್ಯ ತಂಡದವರು ಮಾಡುತ್ತಿದ್ದರಂತೆ. ಇಲ್ಲಿನ ವೈಶಿಷ್ಟ್ಯವೆಂದರೆ ಎರಡು ನೃತ್ಯ ತಂಡಗಳ ಹಾಡು,ಶೃತಿ, ರಾಗ, ಎಲ್ಲವೂ ಒಂದೇ ಆಗಿರಬೇಕು. ಒಂದೇ ರೀತಿ ಅಭಿನಯ ಒಂದೇರೀತಿ ಮಾಡಬೇಕಾಗಿತ್ತು. ಇದರಲ್ಲಿ ಎರಡು ತಂಡಗಳ ಮಧ್ಯೆ ಸ್ವಲ್ಪ ವ್ಯತ್ಯಾಸ ಆದರೂ ಅದು ಮಹಾರಾಜರ ಗಮನಕ್ಕೆ ಬರ್ತಿತ್ತಂತೆ. ಮರುದಿನ ಅಧಿಕಾರಿಗಳ ಪ್ರಶ್ನೆಗಳಿಗೆ ನರ್ತಕಿಯರು ಸಮಾಜಾಯಿಷಿ ಕೊಡಬೇಕಾಗುತ್ತಿತ್ತು. ಈ ನೃತ್ಯ ಕಾರ್ಯಕ್ರಮ ದರ್ಬಾರಿನಲ್ಲಿ ಸುಮಾರು ಅರ್ಧ ಗಂಟೆ ಕಾಲ ನಡೆಯುತ್ತಿತ್ತಂತೆ. ಆ ವೈಭವ ಈಗ ಒಂದು ಸಾಂಸ್ಕೃತಿಕ ಇತಿಹಾಸ ಮಾತ್ರ. ಆ ಇತಿಹಾಸದ ಒಂದು ಪ್ರಮುಖ ಪಾತ್ರವಾಗಿ ವೆಂಕಟಲಕ್ಷಮ್ಮನವರು ಆಗಿ ಹೋಗಿದ್ದಾರೆ. ಈಗ ಅವರ ನೆನಪು ಮಾತ್ರ ಉಳಿದಿದೆ. ಮೈಸೂರು ವಿಶ್ವವಿದ್ಯಾನಿಲಯವು ೧೯೬೩ರಲ್ಲಿ ಲಲಿತಕಲಾ ಕಾಲೇಜಿನ ನೃತ್ಯ ವಿಭಾಗಕ್ಕೆ ವೆಂಕಟಲಕ್ಷಮ್ಮನವರನ್ನು ನೇಮಕ ಮಾಡಿತು. ಮುಂದೆ ಮತ್ತೆ ಒಂಬತ್ತು ವರ್ಷಗಳ ಕಾಲ ಅವರು ರೀಡರ್ ಆಗಿಯೂ ಸೇವೆ ಸಲ್ಲಿಸಿದರು. ಭರತ ಕಲಾನಿಕೇತನ ಎಂಬ ಸ್ವಂತ ಸಂಸ್ಥೆಯೊಂದನ್ನೂ ನಡೆಸುತ್ತಿದ್ದರು. ಅಮೇರಿಕದ ವಿಶ್ವವಿದ್ಯಾನಿಲಯದ ಒಂದು ವಿದ್ಯಾರ್ಥಿಗಳ ತಂಡ ಇಲ್ಲಿಗೆ ಬಂದು ವೆಂಕಟಲಕ್ಷಮ್ಮನವರಿಂದ ತರಬೇತಿ ಪಡೆದರು. ಹಲವಾರು ಮಂದಿ ಪ್ರಖ್ಯಾತ ನೃತ್ಯಗಾರ್ತಿಯರೂ ವೆಂಕಟಲಕ್ಷಮ್ಮನವರ ಮೈಸೂರು ಶೈಲಿಯ ಅಭಿನಯವನ್ನು ಕಲಿತರು. ಇತ್ತೀಚಿನ ದಿನಗಳವರೆಗೂ ವೆಂಕಟಲಕ್ಷಮ್ಮನವರು ತಮ್ಮ ಅಭಿನಯ ಪ್ರದರ್ಶನವನ್ನು ನಿಲ್ಲಿಸಿರಲಿಲ್ಲ. ತಮ್ಮ ೭೦-೮೦ರ ವಯಸ್ಸಿನಲ್ಲಿಯೂ ಇವರು ವೇದಿಕೆಯ ಮೇಲೆ ಕೂಳಿತುಕೊಂಡೇ ಹಿನ್ನೆಲೆ ಗಾಯನಕ್ಕೆ ತಕ್ಕಂತೆ ರಸಾಭಿನಯ ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತಿದ್ದರು. ಇದು ಮದ್ರಾಸಿನ ಪ್ರಖ್ಯಾತ ಕಲಾವಿದೆ ಬಾಲಸರಸ್ವತಿ ಅವರನ್ನು ನೆನಪಿಗೆ ತರುತ್ತಿತ್ತು. ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ಅವರೇ ವೆಂಕಟಲಕ್ಷಮ್ಮನವರು ಅಷ್ಟಪದಿ, ಜಾವಳಿಗಳಿಗೆ ನೀಡಿದ ಅಭಿನಯವನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು.

ಕರ್ನಾಟಕದ ಸಂಗೀತ ನಾಟಕ ಅಕಾಡೆಮಿ ೧೯೬೨ರಲ್ಲೇ ಇವರನ್ನು ಸನ್ಮಾನಿಸಿತ್ತು. ೧೯೮೬ರಲ್ಲಿ ಮುಂಬಯಿಯ ಮೈಸೂರು ಅಸೋಸಿಯೇಶನ್‌ರವರು ಅವರ ೮೦ನೆಯ ಹುಟ್ಟು ಹಬ್ಬವನ್ನು ವೈಭವದಿಂದ ಆಚರಿಸಿ ಅವರಿಂಧ ಅಭಿನಯ, ಪ್ರಾತ್ಯಕ್ಷಿತೆ ಏರ್ಪಡಿಸಿ ಸನ್ಮಾನಿಸಿದರು. ೧೯೮೮ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ೧೯೮೯ರಲ್ಲಿ ಬೆಂಗಳೂರಿನ ಗಾಯನ ಸಮಾಜ ತಮ್ಮ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷರನ್ನಾಗಿ ವೆಂಕಟಲಕ್ಷಮ್ಮನವರನ್ನು ಆಯ್ಕೆ ಮಾಡಿ ಸಂಗೀತ ಕಲಾರತ್ನ ಬಿರುದು ನೀಡಿ ಗೌರವಿಸಿತು. ಸಾಹಿತಿ ಚದುರಂಗರ ನೇತೃತ್ವದಲ್ಲಿ ಗುರು ವೆಂಕಟಲಕ್ಷಮ್ಮನವರ ಸಾಕ್ಷ್ಯಚಿತ್ರವೊಂದನ್ನು ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ಮಿಸಿದ್ದು, ಸಂಗೀತ ನೃತ್ಯ ಅಕಾಡೆಮಿ ಕೂಡ ಸಾಕ್ಷ್ಯಚಿತ್ರದ ವೀಡಿಯೋ ಒಂದನ್ನು ತಯಾರಿಸಿದೆ. ೧೯೯೨ರಲ್ಲಿ ಇವರಿಗೆ ರಾಷ್ಟ್ರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು ಕರ್ನಾಟಕಕ್ಕೇ ಹೆಮ್ಮ ಎನಿಸಿದೆ. ಆದರೆ ನನಗೆ ತಿಳಿದಿರುವಂತೆ ವೆಮಕಟಲಕ್ಷಮ್ಮನವರು ಇದ್ಯಾವುದಕ್ಕೂ ಎಂದಿಗೂ ಆಸೆ ಪಟ್ಟವರೇ ಅಲ್ಲ. ಈ ಬಿರುದು ಬಾವಲಿಗಳು ಬರುವ ಮುನ್ನ ಅವರೇನು ಕೊರಗುತ್ತಿರಲಿಲ್ಲ. ಬಂದ ನಂತರ ಮೆರೆಯಲೂ ಇಲ್ಲ. ಇವರು ತುಂಬಿದ ಕೊಡದಂತಿದ್ದರು. ಸೂರ್ಯನು ಉದಯ ಕಾಲದಲ್ಲೂ, ಅಸ್ತಮಾನ ಕಾಲದಲ್ಲೂ ಕೆಂಪಗಿರುತ್ತಾನೆ. ಅದೇ ರೀತಿ ಉತ್ತಮರು ಸಂಪತ್ತಿನಲ್ಲೂ ವಿಪತ್ತಿನಲ್ಲೂ ಏಕರೀತಿಯಾಗಿರುತ್ತಾರೆ ಎಂಬ ಮಾತೊಂದಿದೆ. ಆ ಮಾತು ವೆಂಕಟಲಕ್ಷಮ್ಮನವರಿಗೆ ತುಂಬಾ ಅನ್ವಯಿಸುತ್ತದೆ. ೧೮ನೇ ವಯಸ್ಸಿನಲ್ಲಿ ಇದ್ದ ಉತ್ಸಾಹ ಅವರಿಗೆ ೮೦ ವರ್ಷದವರೆಗೂ ಇತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಸ್ವಲ್ಪ ಅನಾರೋಗ್ಯದಿಂದ ಮೈಸೂರು ತೊರೆದು ನೃತ್ಯ ವೃತ್ತಿ ತ್ಯಜಿಸಿ ಹುಟ್ಟೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕಡೂರಿನಲ್ಲಿ ದಿನಾಂಕ ೨.೭.೨೦೦೨ ರಂದು ವಿಧಿವಶರಾದರು.

ಸರಳವಾದ ನಿರಾಡಂಬರ ಜೀವನ. ಅಪಾರ ಗುರುಭಕ್ತಿ, ಆಧ್ಯಾತ್ಮದ ಕಡೆಗೆ ಹೆಚ್ಚಿನ ಆಸಕ್ತಿ. ಇವು ಇವರ ವ್ಯಕ್ತಿತ್ವದ ಕೆಲವು ಪ್ರಮುಖ ಅಂಶಗಳಾಗಿದ್ದವು. ತಮಗೆ ದೈವದತ್ತವಾಗಿ ಲಭ್ಯವಾಗಿರುವ ನೃತ್ಯ ಕಲೆಯ ಮಹತ್ವವನ್ನೂ ನಿಜಸ್ವರೂಪವನ್ನೂ ಸ್ವಲ್ಪವೂ ಮುಚ್ಚುಮರೆಯಿಲ್ಲದೆ ಶಿಷ್ಯವರ್ಗಕ್ಕೆ ಅನುಗ್ರಹ ಪೂರ್ವಕವಾಗಿ ನಿರೂಪಿಸಿರುವ ಗುಣ ವಿಶೇಷ ಇವರಿಗಿತ್ತು. ಇದೊಂದು ಮಹತ್ವದ ಮನೋಧರ್ಮ. ಇದುವೇ ಇವರು ಈ ಕ್ಷೇತ್ರಕ್ಕೆ ಸಲ್ಲಿಸಿರುವ ಅಸಾಧಾರಣ ಸೇವೆ. ಇಂತಹ ಬಿಚ್ಚು ಮನಸ್ಸಿನ ಗುಣ ಹೊಂದಿರುವ ಕಲಾವಿದರು ಅತಿ ವಿರಳ. ಎಲ್ಲೆಂದರಲ್ಲಿ ಯಾವುದೇ ಸಂಸ್ಥೆ ಆಶ್ರಯ ಕೊಟ್ಟು ಆಹ್ವಾನಿಸಿರಲಿ, ಅಲ್ಲಿ ಅಭಿನಯದ ಕಾರ್ಯಾಗಾರಗಳನ್ನು ನಡೆಸಿ ಸಾವಿರಾರು ನೃತ್ಯ ವಿದ್ಯಾರ್ಥಿಗಳಿಗೆ ಅಭಿನಯದ ಮಾಹಿತಿ, ಮಾರ್ಗದರ್ಶನ ನೀಡಿದ್ಧಾರೆ. ಹೆಚ್ಚು ಕಡಿಮೆ ನಾಡಿನ ಎಲ್ಲಾ ನೃತ್ಯ ಗುರುಗಳ ಶಿಷ್ಯರೂ ಒಂದಲ್ಲ ಒಂದು ಬಾರಿ ವೆಂಕಟಲಕ್ಷಮ್ಮನವರಿಂದ ಮಾರ್ಗದರ್ಶನ ಪಡೆದವರೆ ಆಗಿದ್ದಾರೆಂದರೆ ತಪ್ಪಾಗಲಾರದು.