ಮೂರ್ತಿ ಸಣ್ಣದು, ಕೀರ್ತಿ ದೊಡ್ಡದು ಎಂಬ ನಾಣ್ಣುಡಿ ಗಂಗೂಬಾಯಿ ಹಾನಗಲ್‌ ಅವರ ನಿದರ್ಶನದಿಂದಲೇ ನಿರ್ಮಾಣವಾಯಿತೇನೋ ಎನ್ನುವಂತಿದೆ. ಪ್ರಥಮ ಸಲ ದಿಲ್ಲಿ, ಕಲಕತ್ತಾಗಳಲ್ಲಿ ಸಂಗೀತ ಬೈಠಕಿಗೆಂದು ಆಮಂತ್ರಿಸಲ್ಪಟ್ಟಾಗ ಇವರ ಪುಟ್ಟ ಆಕೃತಿ, ಸರಳ ನಡೆ, ಸಾದಾವೇಷ ನೋಡಿ ‘ಇಂತಹ ಅಖಿಲ ಭಾರತ ಖ್ಯಾತಿಯ ಕಲಾವಿದೆ ಇವರೇಯೆ?’ ಎಂದು ಜನ ಅಚ್ಚರಿಪಟ್ಟುಕೊಂಡಿದ್ದಿದೆ.

ಅವರು ಜನಿಸಿದ್ದು ಮಾರ್ಚ್ ೫, ೧೯೧೩-ಧಾರವಾಡದಲ್ಲಿನ ಶುಕ್ರವಾರ ಪೇಟೆಯಲ್ಲಿ. ನಡೆಯಂತೆ ನುಡಿ ಸರಳ, ನುಡಿಯಂತೆ ನಡೆ ಸರಳ-ಇದು ಗಂಗೂಬಾಯಿ ಹಾನಗಲ್‌ ಅವರ ಇರವು. ಅವರ ಮನೆ ಅವರ ಮಟ್ಟಕ್ಕೆ ಚಿಕ್ಕದೆ. ಆದರೆ ಅವರ ಮನ ದೊಡ್ಡದು. ಮನೆ ತುಂಬಾ ಚಿಕ್ಕ ಮಕ್ಕಳು. ದೊಡ್ಡ ಮಕ್ಕಳು. ಚಿಕ್ಕಮಕ್ಕಳಿಗೆ ಅಜ್ಜಿಯಾಗಿ, ದೊಡ್ಡಮಕ್ಕಳಿಗೆ ತಾಯಿಯಾಗಿ, ಮನೆಗೆ ಬಂದ ಅತಿಥಿಗಳಿಗೆ ಉದಾರ ಅತಿಥೇಯರಾಗಿ ಅಚ್ಛೆ, ಅಕ್ಕರೆ ಅಂತಃಕರಣಗಳ ಸಾಕಾರ ಮೂರ್ತಿಯಾಗಿ ಕಂಡುಬರುತ್ತಾರೆ ಗಂಗೂಬಾಯಿ.

ಊರುದಾಟಿ, ಗಡಿದಾಟಿ, ದೇಶದಾಟಿ ತಮ್ಮ ಹೆಸರನ್ನು ಹಸಿರಾಗಿ ನಿಲ್ಲಿಸಿದ ಪ್ರಖ್ಯಾತಿಯುಳ್ಳ ಈ ‘ಭಾರತೀಕಂಠೆ’ಯನ್ನು ಯಾರಾದರೂ ಮೊದಲ ಬಾರಿಗೆ ಪರಿಚಯ ಮಾಡಿಕೊಳ್ಳಲಪೇಕ್ಷಿಸಿದರೆ ಈ ಮಹಾ ವ್ಯಕ್ತಿಯನ್ನು ಹೇಗೆ ಕಾಣುವುದು, ಹೇಗೆ ಮಾತನಾಡಿಸುವುದು, ಏನು ಆಡಿದರೆ ಏನು ಅಪಚಾರವಾದೀತೊ ಎಂದೆಲ್ಲ ದಿಗಿಲುಗೊಳ್ಳಬೇಕಿಲ್ಲ. ಸಣ್ಣವರನ್ನು ತಮ್ಮನಂತೆ ದೊಡ್ಡವರನ್ನು ಅಣ್ಣನಂತೆ ಆತ್ಮೀಯವಾಗಿ ಮಾತನಾಡಿಸುವ ನಿರಾಡಂಬರದ ನಿರಹಂಕರದ ಹೃದಯವಂತಿಕೆ ಅಕ್ಕನದು. ಈ ಸ್ವರ ಶಿರೋಮಣಿ ದೇಶ-ವಿದೇಶಗಳನ್ನು ಸುತ್ತಾಡಿ ಬಂದರೂ ದೇಶಸ್ಥ ಮಹಿಳೆಯಂತೆ ಹೊಟ್ಟೆ ತುಂಬ ಮಾತನಾಡುತ್ತೃಎ. ಅದರಲ್ಲಿ ಕೃತ್ರಿಮದ ಕಸರು ಸಿಗದು. ಹೃದಯದಾಳದಿಂದ ಹೊರ ಹೊಮ್ಮಿ ಬರುವ ಅವರ ಸಪ್ತಸ್ವರಗಳಂತೆ ಅವರ ಮಾತೂ ಎರಡಿಲ್ಲದ ಭಾವದಿಂದ ಎದ್ದು ಬರುತ್ತದೆ. ಆ ಪ್ರಾಂಜಲಪಣದಿಂದ ನಮ್ಮ ಪ್ರಾಣಸ್ಥಾನವನ್ನು ಮುಟ್ಟುತ್ತವೆ.

ಗಂಗೂಬಾಯಿ ಅವರ ಮನೆಯಲ್ಲಿ ಎಲ್ಲರೂ ಅಷ್ಟೇ-ಹಿರಿಯ ಅಕ್ಕನ ಹಾಗೆಯೇ. ಮಗಳು ಕೃಷ್ಣ ತನ್ನ ಪ್ರತಿಭೆ, ಪರಿಣತಿಗಳಿಂದ ತಾಯಿಯ ಸಂಗ ಈತ ಸಾಧನೆಯ ಸ್ಥಾನ-ಮಾನಗಳನ್ನು ಸಮೀಪಿಸುವ ಪ್ರಗತಿ ಇದ್ದರೂ ಸಾಮಾಜಿಕ ರೀತ್ಯಾ ತಾಯಿಯಷ್ಟೇ ಸರಳ, ತಾಯಿಯಷ್ಟೆ ಸೋಶಿಯಲ್‌. ಎರಡನೆಯವರು ‘ನಾನಿ’ಸರಕಾರಿ ಪಿ.ಡಬ್ಲ್ಯು.ಡಿ. ಅಧಿಕಾರಿ. ಈಗ ನಿವೃತ್ತರಾಗಿದ್ದಾರೆ. ಹಿರಿಯ ಮಗ ಬಾಬಣ್ಣ ಖಾಸಗಿ ದಂಧೆಯಾದುದರಿಂದ ಸಾಮಾನ್ಯವಾಗಿ ಮನೆಯಲ್ಲಿ ಸಿಗುತ್ತಾರೆ. ಏನಾದರೊಂದು ಸಾರ್ವಜನಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುತ್ತಾರೆ.

ಇವರ ಮನೆ ಒಳಹೊಗುತ್ತಿದ್ದಂತೆ ಎಡಗಡೆ ಒಂದು ಸಿಟಿಂಗ ರೂಂ ಇದೆ ಅಷ್ಟೆ. ಈ ಕೋಣೆಯಲ್ಲೆ ಗುರು ಸವಾಯಿಗಂಧರ್ವರು ತಮ್ಮ ಆಯುಷ್ಯದ ಕೊನೆಯ ಭಾಗದಲ್ಲಿ ಪಾರ್ಶ್ವವಾಯುಬಾಧಿತರಾಗಿ ಶಿಷ್ಯೆಯ ಶುಶ್ರೂಷೆಯಲ್ಲಿದ್ದರು. ಈಗ ಅವರ ಸುಂದರ ಮುಖಮುದ್ರೆಯ ದೊಡ್ಡ ಪೊಟೋ ಇದೆ ಅಲ್ಲಿ. ಒಳಗಡೆ ನಡುಮನೆಯಲ್ಲಿ ಒಂದು ಗೋಡೆಗೆಕ ಹಿರಿಯ ಗುರುಗಳಾದ ಖಾನ್‌ ಸಾಹೇಬ ಅಬ್ದುಲ್‌ ಕರೀಮಖಾನರ ಫೊಟೊ. ಇನ್ನೊಂದು ಗೋಡೆಗೆ ಯಾರ ತೊಡೆಯ ಮೇಲೆ, ಯಾರ ಎದೆಯ ಸಂಗೀತ ಸುಧೆಯನ್ನು ಸವಿದು ಈ ಕೋಗಿಲೆಯ ಮರಿ ಬೆಳೆದುದೋ ಆ ತಾಯಿ ಅಂಬಾಬಾಯಿಯ ಫೊಟೊ. ಈ ಮೂರು ಮೂರ್ತಿಗಳೆ ಗಂಗೂಬಾಯಿ ಅವರ ಪೂಜನೀಯ ದತ್ತಾತ್ರಯ ಅವತಾರ. ಈ ಮೂರು ಮಹಾವ್ಯಕ್ತಿಗಳು ಯಾವ ಮನೆಯಲ್ಲಿ ತಾಯಿ ಮಕ್ಕಳಿಂದ ಪೂಜಿಸಲ್ಪಡುತ್ತಾರೊ ಆ ಮನೆಯ ಹುಬ್ಬಳ್ಳಿಯ ಸ್ಥಾನಿಕ ಕಿರಾನಾ ಘರಾಣೆ.

ಗಂಗೂಬಾಯಿ ಅವರ ಮನೆಯ ಎಡಗಡೆಗಿರುವುದೆ ಸೋದರಮಾವ ರಾಮಣ್ಣನವರ ಮನೆ! ಇಂದು ಆ ಮನೆಯಲ್ಲಿ ಆ ಮನೆಯೊಡೆಯನಿಲ್ಲ. ತಾಯಿಯ ತರುವಾಯ ಈ ಸೋದರಮಾವನೆ ಈ ಸೋದರಸೊಸೆಯಲ್ಲಿ ಅಂಕುರಿಸಿ ಮೊಳೆತು ಚಿಗಿಯುತ್ತಿದ್ದ ಸಂಗೀತ ವೃಕ್ಷಕ್ಕೆ ನೀರೆರೆದು ಬೆಳೆಯಿಸಿದ ಮಾತೃಶಕ್ತಿ.

ಈ ವಯಸ್ಸಿನಲ್ಲೂ ಗಂಗೂಬಾಯಿಯವರಿಗೆ ಒಂಟಿತನದ ನೋವು ಬಾಧೆ ಕೊಡುತ್ತದೆ. ತನಗಾಗಿ ಈ ಮನೆಯ ನೆರಳು ಮಾಡಿಕೊಟ್ಟವರು ಕೈ ಹಿಡಿದ ಯಜಮಾನರು ಗುರುರಾವ ಕೌಲಗಿ ಅವರು! ಆ ಮನೆ ಅವರ ನೆರಳು. ಈ ಪರಿವಾರ ಅವರ ತಿರುಳು. ಈ ವಾತ್ಸಲ್ಯ ಪಾರಿಜಾತದ ಮರ ಅವರ ಕರುಳು. ಇಂದು ಅವರು ಇಲ್ಲ. ತಾಯಿ, ಗುರು, ಮಾಮಾ, ಯಜಮಾನರು ಯಾರೂ ಇಲ್ಲದ ಅನಾಥ ಪ್ರಜ್ಞೆ, ಗಂಗೂಬಾಯಿ ಅವರಿಗೆ ಯಾವುದೆ ಪ್ರಶಸ್ತಿ ದೇವಪ್ರೇತವಾಗಿ ಬಂದಾಗ ಅವರನ್ನು ಕಾಡುತ್ತದೆ. ಸಂತೋಷದ ಸಮಯದಲ್ಲೂ ಕಂಬನಿ ಚೆಲ್ಲುವಂತೆ ಮಾಡುತ್ತದೆ. ೧೯೭೧ರ ಮಾತು: ಜನವರಿ ೨೫ರ ರಾತ್ರಿ. ಸೋದರಮಾವ ರಾಮಣ್ಣನೊಡನೆ ಗಂಗೂಬಾಯಿ ರೇಡಿಯೋ ಕೇಳುತ್ತ ಕುಳಿತ್ತಿದ್ದರು. ಗಣರಾಜ್ಯದ ಪ್ರಶಸ್ತಿ ಘೋಷಣೆ ಬರಲಿಲ್ಲ. ಬಹುಶಃ ತಮಗೆ ಅದು ಸಿಕ್ಕಿರಲಿಲ್ಲವೆಂದೇ ಗಂಗೂಬಾಯಿ ಕಲ್ಪನೆ. ಜನ ಏನದಾದರೊಂದು ವದಂತಿ ಹಬ್ಬಿಸುತ್ತಾರೆ-ಎಂದು ಸ್ವಲ್ಪ ಬೈದುಕೊಂಡು ನಿದ್ದೆ ಹೋದರು . ರಾತ್ರಿ ಹನ್ನೆರಡುವರೆ! ಹೊರಗೆ ಸೈಕಲ್‌ ಗಂಟೆಯ ಶಬ್ದ. ಟೆಲಿಗ್ರಾಂ! ಅಡ್ಡಬರಸಿ ಬಗಿಲು ತೆರೆದರು. ರಾಮಣ್ಣ ತಮ್ಮ ಮನೆಯಿಂದ ಧಾವಿಸಿ ಬಂದರು. ಸ್ವತಃ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ತಂತಿ! “ಪದ್ಮಭೂಷಣ ಪ್ರಶಸ್ತಿಗಾಗಿ ಅಭಿನಂದನೆಗಳು” ಎಂದಿತ್ತು! ಇಬ್ಬರಿಗೂ ಸಂತೋಷವಗಿ ಹಬ್ಬದ ನಗೆ ಉಬ್ಬಿ ಬರಬೇಡವೆ? ಇಲ್ಲ. ಇಬ್ಬರೂ ಕಣ್ಮರೆಯಾದ ಹಿರಿಯ ಜೀವಗಳನ್ನು ನೆನೆದು ಕಣ್ಣೀರು ಹಾಕತೊಡಗಿದರು. ತಾಯಿ ಅಂಬಾಬಾಯಿ ಜೀವಂತ ಮೂರ್ತಿ ಕಣ್ಣೆದುರಿಗೆ ಬಂದು ಕಣ್ಣೀರಧಾರೆ ಧಾರಾಕಾರವಗಿ ಹರಿಯಿತು. ಇದು, ಸಂವೇದನೆಗಳ ಮೂರ್ತಿ, ಗಂಗೂಬಾಯಿ ಅವರ ಸ್ವಭಾವ.

೧೯೫೨ ನವೆಂಬರ್ ೯! ಆಕಾಶವಾಣಿಯಲ್ಲಿ ಗಂಗೂಬಾಯಿ ಅವರ ಪ್ರಥಮ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ. ಅಭಿಮಾನ, ಆನಂದಗಳ ಮಧ್ಯದಲ್ಲಿಯೂ ದುಃಖದ ಆವೇಗ ಉಮ್ಮಳಿಸಿ ಬಂತು. ಗುರು ಸವಾಯಿ ಗಂಧರ್ವರು ಈ ಶಿಷ್ಯೆಯನ್ನು, ಇತರ ಶಿಷ್ಯ ಪರಿವಾರವನ್ನೂ ತ್ಯಜಿಸಿ ತಮ್ಮ ಬದುಕಿನ ಭೈರವಿ ಹೇಳಿ ಸುರಗಂಧರ್ವಲೋಕಕ್ಕೆ ತೆರಳಿದ್ದರು. ಅಂದಿನ ರಾಷ್ಟ್ರೀಯ ಕಾರ್ಯಕ್ರಮ ಗಂಗೂಬಾಯಿ ಅವರ ಪಾಲಿಗೆ ಗುರುಗಳಿಗೆ ಸಲ್ಲಿಸಿದ ಬಾಷ್ಪಾಂಜಲಿಯಾಗಿತ್ತು.

ಗಂಗೂಬಾಯಿ ಯಾವುದೇ ಕಚೇರಿ ಕಾರ್ಯಕ್ರಮದಲ್ಲಿ ಭಾವ ಸಮಾಧಿ ಹೊಂದಿ ತಂಬೂರಿಯ ಸಾ.ಪ.ಸಾ. ಸ್ವರಗಳಲ್ಲಿ ಲೀನರಾಗಿ ತಂಬೂರಿಯ ಷಡ್ಜಸ್ವರವನ್ನು ನಾದಲೀನಗೊಳಿಸಿದಾಗ ಅವರು ಗಂಗೂಬಾಯಿ ಅಲ್ಲ, ಸಂಗೀತ ಗಂಗಾಸ್ರೋತ. ಹೃದಯ, ಆತ್ಮ,, ಜೀವಗಳು ಕರಗಿ ಏಕಪ್ರವಾಹವಾಗಿ ಒಂದೇ ಘನೀಭೂತ ಸ್ವರವಾಗಿ ಪ್ರವಹಿಸುತ್ತಿರುವಂತೆ ಭಾಸವಾಗಿ ಕೇಳುಗರ ಕಿವಿ ನಿಮಿರಿ ನಿಲ್ಲುತ್ತವೆ.

ಇಂತಹ ಒಂದು ಅನುಭವ ಇತ್ತೀಚೆಗೆ ನಾನು ಪಡೆದದ್ದು ೧೯೮೪ ಡಿಸೆಂಬರ್ ೩ ರಂದು. ಅಂದು ಬೆಂಗಳೂರಿನಲ್ಲಿ, ಧಾರವಾಡದ ಗಾಯನಾಚಾರ್ಯ ಗುರುರಾವ ದೇಶಪಾಂಡೆ ಅವರ ದ್ವಿತೀಯ ಪುಣ್ಯಸ್ಮರಣೆ! ಅವರ ಪ್ರಮುಖ ಶಿಷ್ಯ ವಿನಾಯಕ ತೊರವಿ ಮತ್ತು ಕಲಾಕಾರ ಮಿತ್ರರು ಏರ್ಪಡಿಸಿದ್ದರು. ನಾನು ಅತಿಥಿಯಾಗಿ ಹೋಗಿದ್ದೆ. ಮಂತ್ರಿ ಜೀವರಾಜ ಆಳ್ವ ಉದ್ಘಾಟಕರು. ಮುಖ್ಯ ಅತಿಥಿಗಳ ಸಂಗೀತ. ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್‌ ಅವರಿಂದ. ಅವರ ಜೊತೆಗೆ ಕೃಷ್ಣಾ ಹಾನಗಲ್‌, ತಮ್ಮ ಶೇಷಗಿರಿ ಹಾನಗಲ್‌, ಒಬ್ಬರು ವೋಕಲ್‌ ಸಾಥಿ, ಇನ್ನೊಬ್ಬರು ತಬಲಾಸಾಥಿ. ಅಂದು ಗಂಗೂಬಾಯಿಯವರ ತೋಡಿರಾಗದ ಸ್ವರಗಳು ಭೂಗಂಗೆ ಮತ್ತೆ ಸ್ವರ್ಗಕ್ಕೆ ಸ್ವರಗಂಗೆಯಾಗಿ ಮೆಟ್ಟಲು ಮೆಟ್ಟಲಾಗಿ ಆರೋಹಣ ಮಾಡುತ್ತಿರುವಂತೆ ಭಾಸವಾಯಿತು. ಅದಕ್ಕೆ ಪ್ರತಿಯಾಗಿ ಗಗನಭೇದಿ ಗುಡುಗು ಸಿಡಿಲು ತೋಡಿ ತಾನವಿತಾನವಾಗಿ ಅಬ್ಬರಿಸುವಂತೆ ಶ್ರೋತೃವೃಂದ ಸ್ಪಂದನ ಕಂಪನಗಳಿಂದ ನಡುಗಿ ಹೋಗಿತ್ತು. ರತ್ನಾಕರವರ್ಣಿ ವರ್ಣಿಸುವಂತೆ ಹೃದಯದಿಂದ ಒಳಗೆ ಉಣ್ಮಿದ ಆನಂದ ತನುತುಂಬಿ ಮನತುಂಬಿ ಪುಳಕವಾಗಿ ಹೊರ ಹೊಮ್ಮುವಂತೆ ಅನುಭವವಾಯಿತು. ತಾಯಿ-ಮಗಳು ತಾನಿನ ಮೇಲೆ ತಾನಿನ ಮೇಲಾಟನಡೆಸುತ್ತಿರುವಂತೆ ‘ಆ’ಕಾರದ ಖಡ ಖಡಾಟ, ತೋಡಿರಾಗವು ನಸುಕಿನರಾಗ; ಆದರೆ. ಅಂದು ಮಧ್ಯಾಹ್ನವನ್ನು ನಸುಕನ್ನಾಗಿ ಮಾಡಿತ್ತು, ಗಂಗೂಬಾಯಿಯವರ ತೋಡಿ; ಬದುಕಿನ ಬಂಧನದ ಬೇಡಿಯನ್ನೇ ಕತ್ತರಿಸಿ ಹಾಕಿದಂತಿತ್ತು ಆ ತೋಡಿ; ಗುರುವಾವ ದೇಶಪಾಂಡೆ ಅವರ ಬಗ್ಗೆ ವಿಶೇಷ ಆದರ ಭಾವವಿದ್ದ ಗಂಗೂಬಾಯಿ ಅವರ ಅಂದಿನ ಆ ಸಂಗೀತ ಸೇವೆಯಿಂದಾಗಿ ನಿಜವಾದ ಪುಣ್ಯಸ್ಮರಣೆಯಾಗಿತ್ತು ಸ್ವರ ಸಮಾರಂಭ.

ಸಂಗೀತವು ಬುದ್ಧಿ ಚಾತುರ್ಯದಿಂದ, ಭಾತಖಾಂಡೆ ಅವರ ಸಂಗೀತದ ಸಂಪುಟಗಳನ್ನು ಓದಿ, ಕರಗತ ಮಾಡಿಕೊಳ್ಳುವ ಕಲೆಯಲ್ಲ. ಬರಿ ಶಾಸ್ತ್ರ ಜ್ಞಾನ ಬೆಳೆಸಿಕೊಂಡ ಮಾತ್ರಕ್ಕೆ ಬರುವಂಥದ್ದೂ ಅಲ್ಲ. ಗುರುವಿನ ಗುಲಾಮವನಾಗಿ ಹಲವು ವರ್ಷಕಾಲ ನಿಷ್ಠಯಿಂದ ಸಾಧನೆ ಮಾಡಿದರೆ ಮಾತ್ರ ಅದರ ಸಿದ್ಧಿ ಸಾಧ್ಯ.

ಗುರುಗಳ ಬಳಿ ತಮ್ಮ ಶಿಕ್ಷಣ ಮುಗಿದ ಮೇಲೂ ಕೆಲವೊಂದು ಕಚೇರಿಗಳಲ್ಲಿ ಗುರುಗಳು ಹಾಜರ ಇದ್ದರೆ ಸಣ್ಣ ಸಣ್ಣ ದೋಷಗಳನ್ನು ಎತ್ತಿ ಹೇಳುತ್ತಿದ್ದರೆಂದು ಗಂಗೂಬಾಯಿ-ಹೀಗೆ ಹೇಳಿದರೆ ಅದು ಯಾವುದೆ ಕಡಿಮೆ ತನವಲ್ಲವೆಂದು-ಪ್ರಾಮಾಣಿಕವಾಗಿ ಇಂದಿಗೂ ತೆರೆದ ಮನದಿಂದ ತೋಡಿಕೊಳ್ಳುತ್ತಾರೆ. ಮೊದಲ ಬಾರಿಗೆ ತಾಳ ಕಚ್ಚಾ ಇದ್ದಿತು ಎಂಬ ಪ್ರಾಮಾಣಿಕ ಒಪ್ಪಿಗೆ ಅವರದು. ಕೋಮಲ-ತೀವ್ರ ಸ್ವರಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದಾಗ ಗುರುಗಳಿಂದ ಬೈಸಿಕೊಂಡುದಕ್ಕೆಯೆ ತಮಗೆ ಸಂಗೀತ ಶಾರೆದೆ ಅನುಗ್ರಹಿಸಿದಳೆಂಬ ಪ್ರಾಂಜಲಶ್ರದ್ಧೆ ಗಂಗೂಬಾಯಿ ಅವರದು. ಈ ಶ್ರದ್ಧಾ ಸಾಮರ್ಥ್ಯದಿಂದಲೆ ದಿಲ್ಲಿ, ಆಗ್ರಾ, ಲಖನೊ, ಬಡೋದ್ರೆ, ಹೈದರಾಬಾದ,ಗ್ವಾಲೇರ, ಪ್ರಯಾಗ, ಅಮೃತಸರ, ಲಕರಾಚಿ, ಗಯಾ, ಡೆಹರಾಡೊನ್‌, ಆಗ್ರಾ, ಮದ್ರಾಸ್‌, ಮೈಸೂರು, ತ್ರಿವೇಂಡ್ರಂ ಹೀಗೆ ಭಾರತದ ಉದ್ದಗಲವನ್ನೆಲ್ಲಾ ಭೈರವ ಭೈರವಿಗಳ ಧ್ವಜ ಹಿಡಿದು, ಕಲ್ಯಾಣ ಕಲ್ಯಾಣಿಗಳ ಶೃತಿ ಹಿಡಿದು ಸ್ವರ ಸಂಚಾರ ಮಾಡಿದರು. ಕಿರಾನಾ ಕಿರಣ ಸಹಸ್ರವನ್ನು ಅಜಸ್ರವಾಗಿ ಪಸರಿಸುತ್ತ ಜಯ ಜಯವಂತಿಯನ್ನು ಗೀತಿಸಿ ಬಂದವರು. ಮುಂದೆ ಸಾಗರದಾಚೆ ವಿದೇಶಗಳನ್ನೂ ಸುತ್ತಿಬಂದರು. ವಿದೇಶಿ ರಸಿಕರನ್ನು ಮುಗ್ಧಗೊಳಿಸಿದರು.

ಸ್ವಾತಂತ್ಯ್ರ ಪೂರ್ವದ ಕಾಲ ಸವಾಯಿಗಂಧರ್ವರ ಘನತೆಯ ಕಾಲವಾದರೆ ಸ್ವಾತಂತ್ಯ್ರೋತ್ತರ ಕಾಲ ಗಂಗೂಬಾಯಿಯವರದು. ಸ್ವಾತಂತ್ಯ್ರೋತ್ತರ ಕಾಲದ ಗಂಗೂಬಾಯಿ ಅವರಿಗೆ ದೊರೆತ ಪದವಿ, ಪ್ರಶಸ್ತಿ, ಪುರಸ್ಕಾರಗಳನ್ನು ನೋಡಿದರೆ ಸವಾಯಿಗಂಧರ್ವರಿಗೆ ದೊರೆತೆ ಗೌರವಗಳು ಕಡಿಮೆ ಎನಿಸಬಹುದು.

ಆದರೆ ಸವಾಯಿ ಗಂಧರ್ವರ ಶಿಷ್ಯೆ ಗಂಗೂಬಾಯಿ ಅವರು, ಒಮ್ಮೆ ಹೇಳಿದಂತೆ ಸವಾಯಿ ಗಂಧರ್ವರು ಒಂದು ವೇಳೆ ಈಗಿನ ಕಾಲದಲ್ಲಿರುತ್ತಿದ್ದರೆ ತಮಗೆ ದೊರೆತ ಪ್ರಶಸ್ತಿಗಳಿಗಿಂತ ಎಷ್ಟೊ ಪಟ್ಟು ಜಾಸ್ತಿ ಅವರಿಗೆ ದೊರೆಯಬಹುದಾಗಿತ್ತು.

ಸ್ವಾತಂತ್ಯ್ರೋತ್ತರದ ಖ್ಯಾತಿಯ ಗಂಗೂಬಾಯಿ ಅವರನ್ನು ಗೌರವಿಸಿದ ಪ್ರಶಸ್ತಿ ಪುರಸ್ಕಾರಗಳಲ್ಲಿ ಕೆಲವು ಹೀಗಿವೆ: ೧೯೪೮-ಭಾರತೀಕಂಠ ಬಿರುದು ಬನಾರಸ ‘ಹಿಂದೀ ನಾಗರಿಕ ಪ್ರಚಾರ ಸಭಾ’ ಇವರಿಂದ, ೧೯೬೨-ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ, ಪ್ರಶಸ್ತಿ, ೧೯೬೯-ಸ್ವರಶಿರೋಮಣಿ ಬಿರುದು ಪ್ರಯಾಗ ಸಂಗೀತ ಸಮಿತಿಯಿಂದ, ೧೯೭೦-ನವೆಂಬರ ೧ –ರಾಜ್ಯ ಪ್ರಶಸ್ತಿ, ೧೯೭೧- ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ, ೧೯೭೩-ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ೧೯೭೫-ರೂ.ಇ.ಗಜಲ್‌ ಬೇಗಂ ಅಖ್ತಾರ್ ಅವಾರ್ಡ್‌ (ನಗದು ಹತ್ತು ಸಾವರಿ) ದಿಲ್ಲಿ, ೧೯೭೭- ಆಕಾಶವಾಣಿ ಸ್ವರ್ಣ ಮಹೋತ್ಸವದ ಮೆಮೆಂಟೊ,ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಂದ. ೧೯೭೮-ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿ, ೧೯೭೮-ಕರ್ನಾಟಕ ರಾಜ್ಯ ಸಂಗೀತ ಅಕಾಡೆಮಿ ಸದಸ್ಯತ್ವ, ೧೯೮೦-ಕರ್ನಾಟಕ ವಿಶ್ವವಿದ್ಯಾಲಯದ ನಾಮಿನೇಟೆಡ್‌ ಸದಸ್ಯತ್ವ, ೧೯೮೧-ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಪದವಿ, ೧೯೮೨-ಇಂಡಿಯನ್‌ ಟೊಬ್ಯಾಕೊ ಕಂಪನಿಯಿಂದ ಹತ್ತು ಸಾವಿರ ನಗದು ಬಹುಮಾನ, ೧೯೮೪-ತಾನ್‌ಸೇನ್‌ ಪ್ರಶಸ್ತಿ, ೧೯೯೦ರ-ಕನಕ ಪುರಂದರ ಪ್ರಶಸ್ತಿ; ವಿಧಾನಪರಿಷತ್‌ ದಶಕದಲ್ಲಿ ಗೌರವ ಸದಸ್ಯತ್ವ (ಕರ್ನಾಟಕ ರಾಜ್ಯ),೨೦೦೧-ಪದ್ಮವಿಭೂಷಣ ಪ್ರಶಸ್ತಿ.

ಇಷ್ಟೆಲ್ಲ ಬಿರುದಾವಳಿ, ಪ್ರಶಸ್ತಿ, ಪದವಿಗಳು ಗಂಗೂಬಾಯಿ ಅವರ ಮೇಲೆ ಪ್ರಶಂಸೆಯ ಮಳೆಗರೆದರೂ ಅವರು ತಮ್ಮ ವಿದ್ಯಾಸಾಧನೆಯ ಬಗ್ಗೆ ಹೇಳುವುದೆಂದರೆ ‘ನಮ್ಮ ಗುರುಗಳ ವಿದ್ಯೆಯ ಎರಡಾಣೆಯ ಪ್ರಮಾಣವೂ ನನ್ನದಾಗಿಲ್ಲ’ ಇದರಲ್ಲಿ ಅವರ ವಿನಯವೂ-ಕೂಡಿರಬೇಕು. ‘ವಿದ್ಯಾವಿನಯೇನ ಶೋಭಿತೇ’. ಆದರೂ ಗುರು ಸವಾಯಿ ಗಂಧರ್ವರ ಯೋಗ್ಯತೆಯ ಪ್ರಮಾಣವನ್ನು ನಾವು ಈ ಮಾನದಿಂದ ಊಹಿಸಿಕೊಳ್ಳಬಹುದಾಗಿದೆ.

‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದಿದ್ದಾರೆ ಅಲ್ಲವೆ ನಮ್ಮ ಪುರಂದರದಾಸರು; ಈ ಮುಕ್ತಿಯಂದರೆ ಪೂರ್ಣತೆ, ವಿದ್ಯಾ ಪರಿಣತಿ ಎಂದು ನಾವು ಅರ್ಥೈಸಬೇಕು. ಡಾ. ಗಂಗೂಬಾಯಿ ಅವರು ೧೯೩೮ರಿಂದ ಸವಾಯಿ ಗಂಧರ್ವರ ಅಡಿಯಲ್ಲಿ ಆರಂಭಿಸಿದ ಸಂಗೀತ ಶಿಕ್ಷಣ, ಸಾಧನೆಗಳು ಒಂದು ನಾಲ್ಕುವರ್ಷ ಸಹ ಪೂರ್ತಿಯಾಗಿ ನಡೆಯಲಿಲ್ಲ. ೧೯೪೨ ರಲ್ಲಿ ಗುರುಗಳು ಪಾರ್ಶ್ವವಾಯುವಿಗೆ ತುತ್ತಾಗಿ ಅಸಹಾಯಕ ಸ್ಥಿತಿಯ ನ್ನು ಹೊಂದಿದರು. ಗಂಗೂಬಾಯಿ ಅವರು ಗುರುಗಳ ಪಷ್ಟ್ಯಬ್ದಿ ಪೂರ್ತಿಯ ನಂತರ ತಮ್ಮ ಹುಬ್ಬಳ್ಳಿಯ ಮನೆಯಲ್ಲೆ ಗುರುಗಳನ್ನೇ ಕರೆಯಿಸಿಕೊಂಡು ಉಪಚರಿಸಿದರು. ಸ್ವಲ್ಪ ನೆಮ್ಮದಿಯೆನಿಸಿದಾಗ ಗುರುಗಳು ತಮ್ಮ ಶಿಷ್ಯೆಗೆ ಸಂಗೀತ ವಿದ್ಯಾದಾನ ಮುಂದುವರಿಸಿದ್ದರು.

ಮೊದಮೊದಲು ಪದ, ಭಜನೆ, ಠುಮರಿ, ಗಝಲ್‌ಗಳನ್ನು ತಾವೇ ರೂಢಿಸಿಕೊಂಡು ಹಾಡುತ್ತಿದ್ದ ಗಂಗೂಬಾಯಿ ಅವರು ಮುಂದೆ ಕೇವಲ ಶಾಸ್ತ್ರೀಯ ಸಂಗೀತಕ್ಕೆ ಅಂಟಿಕೊಂಡರು. ೧೯೨೪ರ ಬೆಳಗಾವಿ ಕಾಂಗ್ರೆಸ್‌ನಲ್ಲಿ ಕನ್ನಡ ಸ್ವಾಗತಗೀತ ಹೇಳಿದರು.

ಆದರೆ ಒಂದು ಮಾತು ನಿಜ. ಕೇವಲ ಶಾಸ್ತ್ರೀಯ ಸಂಗೀತದಲ್ಲಿಯೇ ಸ್ಪೆಶಲೈಜೇಶನ್‌ ಮಾಡಿಕೊಂಡ ಡಾ. ಗಂಗೂಬಾಯಿ ಹಾನಗಲ್‌ ಅವರು ಇಂದು ಕಿರಾನಾ ಘರಾಣೆಯ ಶ್ರೇಷ್ಠ ಗಾಯಿಕಿ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ಮಗಳು ಕೃಷ್ಣ ಹಾನಗಲ್‌ ತಾಯಿಗೆ ಕಳೆದ ಎರಡು ಮೂರು ದಶಕಗಳಿಂದ ಸಹ ಗಾಯಕಿಯಾಗಿ ಸಾಥ್‌ ನೀಡುತ್ತ ಬಂದು ತಾಯಿಯ ಖಾಸಾ ಶಿಷ್ಯೆಯಾಗಿ ಸ್ವತಂತ್ರ ಹಾಡುಗಾರಿಕೆಯ ಕಚೇರಿಗಳನ್ನು ಮಾಡುತ್ತಿದ್ದಾರೆ.

ಗಂಗೂಬಾಯಿ ಅವರು ತಮ್ಮ ಸಂಗೀತ ಕಚೇರಿಗಳ  ಅನುಭವಗಳನ್ನು ಹೇಳತೊಡಗಿದರೆ ಕೇಳುಗರಿಗೆ ಕೌತುಕ, ಕುತೂಹಲ, ನಗೆ, ವಿಷಾದ ಎಲ್ಲ ಬಗೆಯ ಸಂವೇದನೆಗಳೂ ಸುಳಿದು ಹೋಗುತ್ತವೆ. ಅಮೆರಿಕೆಯಲ್ಲಿ ಲಸುಹಾಸಿನೀ ಮುಳಗಾಂವಕರ ತಮ್ಮ ಒಂದು ಸಂಗೀತ ಸಭೆಯಲ್ಲಿ ಎದುರಿಗೆ ಗಂಗೂಬಾಯಿ ಕುಳಿತದ್ದನ್ನು ನೋಡಿ-‘ಗಂಗೂಬಾಯಿ ಅವರಂಥವರು ಎದುರಿಗೆ ಕುಳಿತಾಗ ನಾಹೇಗೆ ಹಾಡಲಿ’ ಎಂದು ಭಯ, ಭಕ್ತಿ ತೋರಿದಾಗ ಹುಬ್ಬಳ್ಳಿಯಲ್ಲಿ ಇಮ್ರತ್‌ಖಾನರ ಸಿತಾರವಾದನ ನಡೆದಾಗ ಗಂಗೂಬಾಯಿ ಬಂದು ಕೂತರೆ’ ನನ್ನ ಹಿರಿಯ ಸಿತಾರ ಕೇಳಖಿದ ನಿಮ್ಮ ಮುಂದೆ ನಾನೇನು ಬಾರಿಸಲಿ’ ಎಂದು ಉದ್ಗಾರ ತೆಗೆದಾಗ ಅವರು ಗಂಗೂಬಾಯಿ ಅವರ ಬಗ್ಗೆ ತಾಳಿದ ಅಭಿಮಾನವನ್ನು ನಾವು ಅನುಭವಿಸುತ್ತೇವೆ.

ಗಂಗೂಬಾಯಿ ಅವರು ತಮ್ಮ ಶಿಷ್ಯ ಪರಂಪರೆಯನ್ನು ನಿರ್ಮಿಸುತ್ತಿದ್ದಾರೆ. ಮಗಳು ಕೃಷ್ಣಾ ಅವರನ್ನು ಬಿಟ್ಟರೆ ಸೀತಾ ಹಿರೇಬೆಟ್ಟ, ನಾಗನಾಥ ಒಡೆಯರ್ ಅವರ ಹೆಮ್ಮೆಯ ಶಿಷ್ಯರು. ನಾಗನಾಥ ಒಡೆಯರು ಗಂಗೂಬಾಯಿಯವರಿಗೆ ಆಗಾಗ ಪೇಟೀ ಸಾಥ ಒದಗಿಸುತ್ತಾರೆ. ಅವರು ಹಾಡತೊಡಗಿದರೆಂದರೆ ನಿಜವಾಗಿಯೂ ಗಂಗೂಬಾಯಿ ಅವರು ಹಾಡಿದಂತೆ ಭಾಸವಾಗುತ್ತದೆ. ಇದನ್ನು ನೆನೆದಾಗ ಗಂಗೂಬಾಯಿಯವರದು ನಿಜವಾಗಿಯೂ ಗಂಡು ಧ್ವನಿಯೇ ಎಂಬುದಕ್ಕೆ ಅವರ ಹಿಂದಿನ ಒಂದು ಸಂಗತಿಯನ್ನು ಇಲ್ಲಿ ಉಲ್ಲೇಖಿಸಬೇಕು. ಚಿಕ್ಕಂದಿನಲ್ಲಿ ಗಂಗೂಬಾಯಿ ಅವರಿಗೆ ಟಾನ್ಸಲ್ಸ್ ತೊಂದರೆ ಇತ್ತು. ಅವರ ಹಿತ ಚಿಂತಕ ಡಾಕ್ಟರ್ ಜೋಶಿ ಅವರು ಟಾನ್ಸಲ್ಸ್ ಆಪರೇಶನ್‌ ಅನಿವಾರ್ಯ ಎಂದು ತಿಳಿದು ಚಿಕಿತ್ಸೆ ಮಾಡಿದನಂತರ ಅವರ ಧ್ವನಿ ಪಟಲವೆ ಬದಲಾಗಿ ಗಂಡು ಧ್ವನಿ ಆಯಿತು. ಒಮ್ಮೆ ಕಲಕತ್ತಾ ಕೇಂದ್ರದಿಂದ ಪ್ರಸಾರಮಾಡಲಿಕ್ಕೆ ಹೋದಾಗ ಇವರ ಆತಿಥೇಯರ ಮಗಳು ಇವರ ಪ್ರಸಾರ ಕಾರ್ಯಕ್ರಮವನ್ನು ಕೇಳಿ ನಿರಾಶೆಗೊಂಡರಂತೆ. ಕಾರಣವೆಂದರೆ ಗಂಗೂಬಾಯಿಯವರ ಬದಲು ಯಾರೋ ಗಂಡಸರು ಹಾಡಿದರು ಎಂಧು ಆಕೆ ಭಾವಿಸಿದ್ದರು. ಮನೆಗೆ ಬಂದ ಗಂಗೂಬಾಯಿ ಆಕೆಗೆ ನನ್ನ ಕಾರ್ಯಕ್ರಮ ಕೇಳಿದೆಯಾ ಎಂದಾಗ ಕೇಳಿದೆ ಆದರೆ ನಿಮ್ಮ ಬದಲು ಯಾರೋ ಗಂಡಸರು ಹಾಡಿದರು ಎಂದು ತನ್ನ ನಿರಾಶೆಯನ್ನು ಹೇಳಿಕೊಂಡಳಂತೆ. ಗಂಗೂಬಾಯಿ ಅವರು ನಕ್ಕು “ಇಲ್ಲಾ ಹಾಡಿದ್ದು ನಾನೇ ನನ್ನ ಧ್ವನಿ ಹಾಗೆ ಕೇಳಿಸಿರಬೇಕು” ಎಂದು ಅದಕ್ಕೆ ಕಾರಣವನ್ನು ಹೇಳಿದರಂತೆ.

ಗಂಗೂಬಾಯಿ ಚಿಕ್ಕಂದಿನಲ್ಲಿಯೇ ಎಂದರೆ ತಮ್ಮ ಹದಿವಯದಲ್ಲಿ ಧ್ವನಿ ಇನ್ನೂ ಎಳಿಕವಾಗಿದ್ದಾಗ ಹಾಡಿದ ಮರಾಠಿ ಗೀತಗಳು, ಶಾಸ್ತ್ರೀಯ ಸಂಗೀತದ ಚೀಜುಗಳನ್ನು ಮತ್ತೆ ಮತ್ತೆ ಕೇಳಬೇಕು ಎನಿಸುವಷ್ಟು ಸೊಗಸಾಗಿವೆ. ಅದರಲ್ಲಿಯೂ ‘ರಾಮಹರೀಕಾ ಭೇದನ ಪಾಯೋ’ ಎಂಬ ಜೋಗಿಯಾ ಚೀಜೂ ಮರೆಯುವಂತಿಲ್ಲಾ. ಅದರಂತೆಯೆ ಮಿಯಾಮಲ್ಹಾರದ ‘ಕಹೆಲಾಡಲೀ’ ಎಂಬ ಚೀಜ್‌ನ ಧ್ವನಿಮುದ್ರಿಕೆಯು ಸೆಡವಿನ ತಾನಬಾಜಿಯ ಬಿಗುವನ್ನು ಕೇಳಿ, ಕಂಡುಕೊಳ್ಳಬೇಕು.

ಗಯಾದಲ್ಲಿ ನಡೆದ ಮ್ಯೂಸಿಕ್‌ ಕಾನ್‌ಫೆರೆನ್ಸ್ ನಲ್ಲಿ ಫೈಯಾಜ್‌ ಖಾನ್‌, ಓಂಕಾರನಾಥರಂಥ ಹಳೆಯ ಹುಲಿಗಳು. ಆಗ ಗಂಗೂಬಾಯಿ ಅವರು ಬಹಳ ಚಿಕ್ಕವರು. ಈ ಚಿಕ್ಕಗಾಯಕಿಗೆ ಹದಿನೈದು ನಿಮಿಷಗಳ ಕಾಲ ಮಾತ್ರ ನಿಗದಿ ಆಗಿತ್ತು. ‘ರಾಮಹರೀ ಕಾ ಭೇದನ ಪಾಯೋ’ ಜೋಗಿಯಾ ರಾಗದ ಚೀಜ್‌ ಹಾಡಿದರು. ಕಿರಾನಾದ ಸ್ವರ ಸಿದ್ಧಿ ಗಂಗೂಬಾಯಿ ಗಾಯಿಕೆಯಲ್ಲಿ ಸ್ಫುಟವಾಗಿ ಸ್ಫರಿಸಿತ್ತು. ಖಾನ್‌ ಸಾಹೇಬರ ಈ ಪ್ರಶಿಷ್ಯೆಯ ಲಹರಿಯಿಂದ ಫೈಯಾಜ್‌ ಖಾನ್‌ ಖುಷಿ ಪಟ್ಟರು. ಹಿರಿಯ ಓಂಕಾರನಾಥ್‌ ಬುವಾ ಅವರು ‘ವಾಹವಾ’ ಎಂದರು.

ಕಲಕತ್ತಾ ಕಾನ್‌ಫರೆನ್ಸಿಗೆ ಹೋದಾಗಲೆಲ್ಲಾ ‘ನ್ಯೂಥಿಯೇಟರ್ಸ್‌’ನ ಸೈಗಲ್‌, ಕಾನನಬಾಲಾ, ಪಹಾರಿ ಸನ್ಯಾಲರು ಈ ‘ಭಾರತೀಕಂಠ’ವನ್ನು ಚಾತಕದಂಥೆ ಎದುರು ನೋಡುತ್ತಿದ್ದು ತಮ್ಮ ತಮ್ಮಲ್ಲಿಗೆ ಸ್ವಾಗಿತಿಸುತ್ತಿದ್ದರು. ಪ್ರಥಮ ಸಲ ಕಲಕತ್ತೆಗೆ ಹೋದಾಗ ‘ದೇವದಾಸ’ ಚಿತ್ರದಲ್ಲಿ ಅಬ್ದುಲ್‌ ಕರಿಂಖಾನರ ‘ಪಿಯಾ ಬಿನ ನಾಹಿ ಅವತ ಚೈನ್‌’ ಎಂಬ ಗೀತ ಹಾಡಿ ಖಾನ್‌ಸಾಹೇಬರ ಬಗ್ಗೆ ತಮ್ಮ ಮಮತೆ ಗೌರವಗಳನ್ನೂ ಪ್ರಕಟಿಸಿದ್ದ ಸೈಗಲರು ಗಂಗೂಬಾಯಿ ಸಂಗೀತ ಕೇಳಿ ಬೆನ್ನ ಮೇಲೆ ಶಾಬಾಸಗಿರಿಯ ಕೈ ತಟ್ಟಿದಾಗ ಗಂಗೂಬಾಯಿ ಅವರಿಗೆ ವಿಶೇಷ ಅಭಿಮಾನವೆನಿಸಿತ್ತು.

ಗಂಗೂಬಾಯಿ ಅವರು ಈಗ ತೊಂಬತ್ತರಲ್ಲಿ ಕಾಲಿರಿಸಿದ್ದಾರೆ. ಕೀರ್ತಿಯ ಶಿಖರವನ್ನು ಮುಟ್ಟಿದ ಈ ಪದ್ಮವಿಭೂಷಣೆ ಇನ್ನೇನು ಸಾಧಿಸಬೇಕಾಗಿದೆ?