ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೧೩.೦೫.೧೯೬೭ ರಿಂದ ೦೩.೦೫.೧೯೬೯

ಡಾ|| ರಾಧಾಕೃಷ್ಣನ್ ಅವರಂತೆಯೇ ಶಿಕ್ಷಣ ಕ್ಷೇತ್ರದಿಂದ ರಾಷ್ಟ್ರಪತಿ ಸ್ಥಾನಕ್ಕೆ ಏರಿದವರು ಡಾ|| ಜಾಕೀರ್ ಹುಸೇನ್ ಖಾನ್; ಅವರಂತೆಯೇ ಉಪರಾಷ್ಟ್ರಪತಿ ಸ್ಥಾನದಿಂದ ರಾಷ್ಟ್ರಪತಿಯಾಗಿ ಆಯ್ಕೆಯಾದವರು. ದಿಲ್ಲಿಯ ಜಾಮೀಯಾ ಮಿಲಿಯಾ ಇಸ್ಲಾಮಿಯಾ (ರಾಷ್ಟ್ರೀಯ ಮುಸ್ಲಿಂ ವಿಶ್ವವಿದ್ಯಾಲಯ) ಮತ್ತು ಅವರೇ ರೂಪಿಸಿದ “ಮೂಲ ಶಿಕ್ಷಣ ಪದ್ಧತಿ”- ಇವೆರಡೂ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಹೆಮ್ಮೆಯ ಸಾಧನೆಗಳು. ಡಾ|| ಜಾಕೀರ್ ಹುಸೇನರ ಮನೆತನದ ಹಿರಿಯರು ಆಫ್ಘ್‌ನ್ ಮೂಲದವರು. ೧೮ನೇ ಶತಮಾನದಲ್ಲೇ ಉತ್ತರಪ್ರದೇಶದ ಕೈಮ್ ಗಂಜಿಗೆ ಬಂದು ನೆಲೆಸಿದ್ದರು. ಜಾಕೀರ್ ಹುಸೇನ್‌ರ ತಂದೆ ಫಿದಾ ಹುಸೇನ್ ಖಾನ್, ಅಲ್ಲಿಂದ ಹೈದರಾಬಾದಿಗೆ (ಆಂಧ್ರಪ್ರದೇಶ) ಬಂದು ಕಾನೂನು ಶಿಕ್ಷಣ ಪಡೆದು ಪ್ರಸಿದ್ಧ ವಕೀಲರಾದರು. ತಾಯಿ ನಾಜನೀನ್ ಬೇಗಂ. ೧೮೯೭ ರ ಫೆಬ್ರವರಿ ೮ರಂದು ಹುಟ್ಟಿದ ಜಾಕೀರ್ ಹುಸೇನ ೧೦ ವರ್ಷದ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಮತ್ತೆ ತಮ್ಮ ಹಿರಿಯರು ನೆಲೆಸಿದ್ದ ಉತ್ತರ ಪ್ರದೇಶಕ್ಕೆ ಹೋದರು. ಎಟಾವಾದಲ್ಲಿ ಶಾಲಾ ಶಿಕ್ಷಣ, ಅಲಿಘರ್ ಮಹಮ್ಮಡನ್ ಓರಿಯಂಟಲ್ ಕಾಲೇಜಿನಲ್ಲಿ (ಈಗಿನ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ) ಉಚ್ಚ ಶಿಕ್ಷಣ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದರು. ಕಾನೂನು ಪದವಿಗಾಗಿ ಅಧ್ಯಯನ ಮಾಡುತ್ತಿದ್ದಾಗಲೇ ೧೯೨೦ರಲ್ಲಿ ಗಾಂಧೀಜಿಯವರ ಅಸಹಕಾರ ಚಳವಳಿಯ ಕರೆಗೆ ಓಗೊಟ್ಟು, ಕಾಲೇಜಿನಿಂದ ಹೊರಬಂದರು. ಆ ದಿನಗಳಲ್ಲಿ ಪ್ರಮುಖ ಮುಸ್ಲಿಂ ನೇತಾರರಾಗಿದ್ದ ಡಾ|| ಅನ್ಸಾರಿ, ಅಲಿ ಸಹೋದರರು ಮೊದಲಾದವರ ಸಹಕಾರದಿಂದ ಖಾಸಗಿಯಾಗಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು. ತಮ್ಮ ಬುದ್ಧಿಮತ್ತೆ, ಆಕರ್ಷಕ ವರ್ಚಸ್ಸು- ಇವುಗಳಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು, ರಾಜಕೀಯ ವ್ಯಕ್ತಿಗಳು ಮುಂತಾಗಿ ಎಲ್ಲರ ವಿಶ್ವಾಸವನ್ನೂ ಗಳಿಸಿಕೊಂಡರು. ಇವರು ಒಳ್ಳೆಯ ವಾಗ್ಮಿ ಮತ್ತು ಲೇಖಕರು . ವಿದ್ಯಾರ್ಥಿಯಾಗಿದ್ದಾಗಲೇ ಗ್ರೀಸ್ ದೇಶದ ಮಹಾನ್ ತತ್ವಜ್ಞಾನಿ ಪ್ಲೇಟೋನ “ರಿಪಬ್ಲಿಕ್” ಗ್ರಂಥವನ್ನು ಉರ್ದುವಿನಲ್ಲಿ ಅನುವಾದಿಸಿದ್ದರು.

೧೯೨೨ರಲ್ಲಿ ಜರ್ಮನಿಗೆ ಹೋಗಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಿ, ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡರು. ಅಲ್ಲಿದ್ದಾಗಲೇ, ಜರ್ಮನ್ ಲೇಖಕರೊಬ್ಬರ ಸಹಯೋಗದಲ್ಲಿ ಗಾಂಧೀಜಿಯವರ ಬಗ್ಗೆ ಜರ್ಮನ್ ಭಾಷೆಯಲ್ಲಿ ಪುಸ್ತಕ ರಚಿಸಿದರು. ೧೯೨೬ರಲ್ಲಿ ಜರ್ಮನಿಯಿಂದ ಸ್ವದೇಶಕ್ಕೆ ಹಿಂತಿರುಗಿದಾಗ, ಅವರು ಕಂಡದ್ದು ತೀವ್ರ ಹಣಕಾಸಿನ ತೊಂದರೆಗೊಳಗಾಗಿ ಮುಚ್ಚುವ ಸ್ಥಿತಿಗೆ ಬಂದಿದ್ದ ಜಾಮಿಯಾ ಮಿಲಿಯಾವನ್ನು. ಜಾಕೀರ್ ಹುಸೇನ್ ಅದನ್ನು ಪುನರುಜ್ಜೀವನಗೊಳಿಸಿದ್ದೇ ಅಲ್ಲದೆ, ತಮ್ಮ ೨೯ನೆಯ ವಯಸ್ಸಿನಲ್ಲಿ ಅದರ ಉಪಕುಲಪತಿಯಾಗಿ ಅಹರ್ನಿಶಿ ದುಡಿದು, ಅದನ್ನು ಒಂದು ಉತ್ತಮ ವಿದ್ಯಾಕೇಂದ್ರವನ್ನಾಗಿ ರೂಪಿಸಿದರು. ಕಟ್ಟಾ ರಾಷ್ಟ್ರವಾದಿಗಳಾಗಿದ್ದ ಜಾಕೀರ್ ಹುಸೇನ್ ಆ ಕಾಲದಲ್ಲಿ ಹಿಂದು ಮತ್ತು ಮುಸ್ಲಿಮರ ಮಧ್ಯೆ ಬೆಳೆಯುತ್ತಿದ್ದ ಭೇದ ಭಾವವನ್ನು ತೊಡೆದು ಹಾಕಲು ಸತತವಾಗಿ ಶ್ರಮಿಸುತ್ತಿದ್ದರು. ೧೯೪೬ರಲ್ಲಿ ಹಿಂದು-ಮುಸ್ಲಿಂ ಗಲಭೆಗಳು ಎಲ್ಲೆಲ್ಲೂ ತಾಂಡವಾಡುತ್ತಿದ್ದಾಗ ಜಾಮಿಯಾ ಮಿಲಿಯಾಕ್ಕೆ ಬೆಳ್ಳಿಹಬ್ಬದ ಸಂಭ್ರಮ. ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ಸಿನ ಪ್ರಮುಖರೆಲ್ಲರೂ ಸೇರಿದ್ದ ಸಮಾರಂಭದಲ್ಲಿ ಎರಡು ಕೋಮುಗಳವರೂ ಪರಸ್ಪರ ದ್ವೇಷ ಭಾವನೆಯನ್ನು ತೆರೆಯಬೇಕೆಂದು ಅವರು ಮಾಡಿದ ಕಳಕಳಿಯ ಕರೆ ಅವರ ರಾಷ್ಟ್ರೀಯತೆಯನ್ನು ಎತ್ತಿ ತೋರಿಸುತ್ತದೆ.

ಜಾಕೀರ್ ಹುಸೇನ್ ಮೊಟ್ಟ ಮೊದಲು ಗಾಂಧೀಜಿಯವರನ್ನು ಭೇಟಿಯಾದದ್ದು ೧೯೨೬ರಲ್ಲಿ. ೧೯೩೭ರಲ್ಲಿ ವಾರ್ಧಾದಲ್ಲಿ ನಡೆದ ಅಖಿಲಭಾರತ ರಾಷ್ಟ್ರೀಯ ಶಿಕ್ಷಣ ಸಮ್ಮೇಳನಕ್ಕೆ ಗಾಂಧೀಜಿ ಅಧ್ಯಕ್ಷರು. ಶಿಕ್ಷಣ ಕ್ಷೇತ್ರದಲ್ಲಿ ಡಾ|| ಜಾಕೀರ್ ಹುಸೇನ್ ಮಾಡಿದ್ದ ಸಾಧನೆಗಳ ಬಗ್ಗೆ ತಿಳಿದಿದ್ದ ಗಾಂಧೀಜಿ, ಅವರನ್ನು “ಮೂಲ ಶಿಕ್ಷಣ”ದ ಪಠ್ಯಕ್ರಮವನ್ನೂ ರಚಿಸಲು ಆಹ್ವಾನಿಸಿದರು. ಪಠ್ಯಕ್ರಮವನ್ನು ರಚಿಸುವುದರ ಜೊತೆಗೆ, ಅಂತಹ ಶಿಕ್ಷಣ ನೀಡಬೇಕಾದ ಶಿಕ್ಷಕರ ತರಬೇತಿ ಕೇಂದ್ರವನ್ನು ಜಾಕೀರ್ ಹುಸೇನ್ ಜಾಮಿಯಾ ಮಿಲಿಯಾದಲ್ಲಿ ಸ್ಥಾಪಿಸಿದರು.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನ, ಜಾಗತಿಕ ವಿಶ್ವವಿದ್ಯಾಲಯದ ಸೇವಾ ಸಂಸ್ಥೆಯ ಅಧ್ಯಕ್ಷತೆ, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಅಧ್ಯಕ್ಷ ಪದವಿ, ವಿವಿಧ ರಾಜ್ಯಗಳ ಶೈಕ್ಷಣ
ಿಕ ಪುನರ್ರಚನಾ ನಿಯೋಗಗಳ ಸದಸ್ಯತ್ವ. ಯುನೆಸ್ಕೋದಲ್ಲಿ(UNESCO)ಭಾರತದ ಪ್ರತಿನಿಧಿತ್ವ ಮುಂತಾಗಿ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೇಗಳಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಇವರ ವಿಶಿಷ್ಟ ಸೇವೆಗಾಗಿಯೇ ೧೯೫೨ ಮತ್ತು ೧೯೫೬ರಲ್ಲಿ ಇವರನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಯಿತು.

೧೯೫೭ರಲ್ಲಿ ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡರು.ಡಾ|| ರಾಧಾಕೃಷ್ಣನ್ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಾಗ ತರವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಡಾ|| ಜಾಕೀರ್ ಹುಸೇನ್ ಅಯ್ಕೆಗೊಂಡರು. ೧೯೬೨ರ ಮೇ ೧೩ನೆಯ ತಾರೀಖು ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಡಾ|| ರಾಧಾಕೃಷ್ಣನ್‌ರ ನಿವೃತ್ತಿಯ ಬಳಿಕ ಡಾ|| ಜಾಕೀರ‍್ ಹುಸೇನ್‌ರೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಮತ್ತೂ ೧೯೬೭ರ ಮೇ ೧೩ನೇ ತಾರೀಖು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರದ ಅತ್ಯುಚ್ಚ ಪದವಿಗೆ ಅವರು ಆರಿಸಿ ಬಂದದ್ದು ಅವರ ದೇಶಪ್ರೇಮ, ರಾಷ್ಟ್ರೀಯ ಮನೋಭಾವ, ಸಾಧನೆ ಸಿದ್ದಿಗಳಿಗೆ ಸಂದ ಗೌರವ. ಅದಕ್ಕಿಂತ ಹೆಚ್ಚಾಗಿ, ಅವರ ಆಯ್ಕೆ, ಭಾರತದ ಮೂಲಭೂತ ತತ್ವವಾದ ಸರ್ವಧರ್ಮ ಸಮಭಾವನೆಯ ಪ್ರತೀಕವೂ ಆಯಿತು. ಡಾ|| ಜಾಕೀರ್ ಹುಸೇನ್ ಉಪರಾಷ್ಟ್ರಪತಿಯಾಗಿ ಆಫ್ರಿಕಾ, ಪಶ್ಚಿಮ ಏಷ್ಯಾ ಮತ್ತು ಯುರೋಪಿನ ಕೆಲವು ದೇಶಗಳಿಗೆ ಸೌಹಾರ್ದ ಭೇಟಿ ನೀಡಿದ್ದರು. ರಾಷ್ಟ್ರಪತಿಯಾಗಿ ಸೋವಿಯಟ್ ಒಕ್ಕೂಟ ಮತ್ತು ನೇಪಾಲಗಳಿಗೆ ಭೇಟಿ ಕೊಟ್ಟರು. ಭಾರತದ ಅನೇಕ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಷರೇಟ್ ನೀಡಿವೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಸಿದ್ಧಿಗಳಿಗಾಗಿ ೧೯೫೪ರಲ್ಲೇ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು; ೧೯೬೩ರಲ್ಲಿ “ಭಾರತ ರತ್ನ” ಪ್ರಶಸ್ತಿ ಸಹ ನೀಡಲಾಯಿತು.

ರಾಷ್ಟ್ರಪತಿಯಾಗಿ ಅವಧಿ ಪೂರೈಸುವ ಮೊದಲೇ ೧೯೬೯ರ ಮೇ ೩ನೇ ತಾರೀಖು ಇದ್ದಕ್ಕಿದಂತೆ ಡಾ||ಜಾಕೀರ್ ಹುಸೇನ್ ವಿಧಿವಶರಾದರು. ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಪದವಿ ಗಳಿಸಲು ಸೀಮಿತವಾಗಬಾರದು; ಸಮಾಜದ ಉನ್ನತಿಗೆ ಶ್ರಮಿಸಲು ಮನುಷ್ಯನಿಗೆ ತರಬೇತಿ ನೀಡಬೇಕು ಎನ್ನುವುದು ಡಾ|| ಜಾಕೀರ್ ಹುಸೇನ್ ತಳೆದಿದ್ದ ಧೋರಣೆ; ಇದೇ ಆದರ್ಶಕ್ಕಾಗಿ ಅವರು ದುಡಿದರು. ಅವರು ತುಂಬಾ ಸ್ನೇಹಪರರು, ಕುಟುಂಬ ಪ್ರೇಮಿ.ತೋಟಗಾರಿಕೆಯಲ್ಲಿ ಅವರಿಗೆ ತುಂಬ ಆಸಕ್ತಿ. ತಾವು ವಾಸಿಸಿದ ಮನೆಗಳು, ಬಂಗಲೆಗಳು ಮತ್ತು ರಾಷ್ಟ್ರಪತಿಭವನ- ಇವುಗಳಲ್ಲಿ ಉದ್ಯಾನಗಳ ನಿರ್ವಹಣೆಗೆ ಹೆಚ್ಚು ಗಮನ ನೀಡುತ್ತಿದ್ದರು. ಚಿತ್ರಕಲೆ, ಕಾವ್ಯ, ಚಿತ್ರವಿಚಿತ್ರ ಕಲ್ಲುಗಳು ಮತ್ತು ಖನಿಜಗಳ ಸಂಗ್ರಹಣೆ – ಇವೆಲ್ಲವೂ ಅವರ ಹವ್ಯಾಸದ ವಿಷಯಗಳು.

ಯಾವುದೇ ಕೆಲಸವಾದರೂ ಅದು ತಮ್ಮ ಘನತೆಗೆ ಕಡಿಮೆ ಎಂದು ಭಾವಿಸುತ್ತಿರಲಿಲ್ಲ. ಇದೇ ಆದರ್ಶವನ್ನೇ ತಮ್ಮ ವಿದ್ಯಾರ್ಥಿಗಳಿಗೆ, ಸಹ ಶಿಕ್ಷಕರಿಗೆ ಬೋಧಿಸುತ್ತಿದ್ದರು ಉಪದೇಶದಿಂದಲ್ಲ, ತಮ್ಮ ಷೂ ಪಾಲಿಷ್ ಮಾಡಿಕೊಳ್ಳದಿದ್ದ ವಿದ್ಯಾರ್ಥಿಗಳ ಷೂಗಳನ್ನು ತಾವೇ ಪಾಲಿಷ್ ಮಾಡಿ ಅವರಿಗೆ ಕರ್ತವ್ಯದ ಅರಿವು ಮಾಡಿಕೊಟ್ಟರು. ಕೆಲವು ಶಿಕ್ಷಕರು ಪ್ರೈಮರಿ ಶಾಲೆಯ ಮಕ್ಕಳಿಗೆ ಪಾಠ ಹೇಳಲು ಒಪ್ಪದಿದ್ದಾಗ, ತಾವೇ ಪಾಠ ಹೇಳಿ, ಶಿಕ್ಷಕರಿಗೆ ಅವರ ಹೊಣೆಯ ಅರಿವು ಮಾಡಿಕೊಟ್ಟರು.

ಅವರ ಕಾಲದಲ್ಲಿ ಉಪರಾಷ್ಟ್ರಪತಿಯಾಗಿದ್ದ ಶ್ರೀ ವಿ.ವಿ.ಗಿರಿಯವರು ಹೇಳಿದ ಮತು ಅಕ್ಷರಶಃ ಸತ್ಯ- “ಡಾ.ಜಾಕೀರ್ ಹುಸೆನ್ ತುಂಬ ಸರಳ ವ್ಯಕ್ತಿ, ಸಜ್ಜನ, ಸಾಮಾನ್ಯ ಶಿಕ್ಷಕನಾಗಿದ್ದಾಗಲೂ ಅಷ್ಟೇ, ರಾಷ್ಟ್ರಪತಿಯಾದಾಗಲೂ ಅಷ್ಟೇ; ಸಾರ್ವಜನಿಕ ಜೀವನದಲ್ಲಿ ಯಾವುದೇ ಸ್ಥಾನದಲ್ಲಿದ್ದರೂ, ಆ ಸ್ಥಾನ ತಮಗೆ ಸೇವೆ ಸಲ್ಲಿಸಲು ಮತ್ತೊಂದು ಅವಕಾಶ ನೀಡಿದೆ ಎಂದು ಭಾವಿಸುತ್ತಿದ್ದರು.”