ನನ್ನ ಮೂವತ್ತೈದು ವರ್ಷಗಳ ಅಧ್ಯಾಪಕ ವೃತ್ತಿಯ ಕಾಲಮಾನದಲ್ಲಿ ನಾನು ಗಳಿಸಿದ ಸಂಪತ್ತು ಎಂದರೆ ತುಂಬ ಪ್ರತಿಭಾವಂತರಾದ ಬಹುಸಂಖ್ಯೆಯ ವಿದ್ಯಾರ್ಥಿಗಳೇ. ಇವರಲ್ಲಿ ಅನೇಕರು ಕರ್ನಾಟಕದ ವಿವಿಧ ವಲಯಗಳಲ್ಲಿ, ಮುಖ್ಯವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅವರು ಯಾರು ಎಂಬುದನ್ನು ನಾನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ. ಈ ಶಿಷ್ಯ ಸಂಪತ್ತಿನಲ್ಲಿ ದಿವಂಗತ ಡಿ.ಆರ್. ನಾಗರಾಜ್ ಕಣ್ಣು ಕೋರೈಸುವ ವಜ್ರದಂತೆ.

ಇಂದಿಗೂ ನನಗೆ ನೆನಪಿದೆ. ೧೯೭೫ರಲ್ಲೋ ಏನೋ, ನಾಗರಾಜ್ ಆಗ ಕನ್ನಡ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿ. ಕನ್ನಡ ಎಂ.ಎ. ಪರೀಕ್ಷೆಯ ಮೌಖಿಕ ಪರೀಕ್ಷೆಯ ದಿನ. ಹೊರಗಿನಿಂದ ಪರೀಕ್ಷರಾಗಿ ಬಂದ ಮೂವರಲ್ಲಿ ಡಾ. ಹಾ. ಮಾ. ನಾಯಕರೂ ಒಬ್ಬರೆಂದು ನನಗೆ ನೆನಪು. ಈ ಮೌಖಿಕ ಪರೀಕ್ಷೆಯ ಸಂದರ್ಭದಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹೊರಗಿನ ಪರೀಕ್ಷಕರು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಯಾದ ನಾಗರಾಜ್ ಕೊಟ್ಟ ಉತ್ತರಗಳೊಳಗಿನ ನಿಶಿತ ವೈಚಾರಿಕತೆಗೆ ಅವರೆಲ್ಲ ಬೆರಗಾಗಿ ಬಿಟ್ಟರು. ನಾನೂ ಕೂಡ!

ದೊಡ್ಡಬಳ್ಳಾಪುರದಂಥ ಊರಿನ, ನೇಕಾರ ಕುಟುಂಬದಿಂದ ಬಂದ ಈ ಹುಡುಗ, ನೋಡನೋಡುತ್ತಲೇ ತನ್ನ ಅಸಾಧಾರಣ ಪ್ರತಿಭೆಯಿಂದ, ಕೆಲವೇ ವರ್ಷಗಳ ಕಾಲಮಾನದಲ್ಲಿ, ತನ್ನ ಮಿತಿಮೀರಿದ ವೇಗದಿಂದ, ಮಹತ್ವಾಕಾಂಕ್ಷೆಯಿಂದ, ಸಮಕಾಲೀನ ಶೈಕ್ಷಣಿಕ-ಸಾಹಿತ್ಯಕ-ಸಾಂಸ್ಕೃತಿಕ ಮಗ್ಗದೊಳಗೆ ಮಿಂಚಿನ ಲಾಳಿಯಂತೆ ಸಂಚರಿಸುತ್ತ, ಅಪೂರ್ವ ವೈಚಾರಿಕತೆಯ ದೇವಾಂಗವನ್ನು ನೆಯ್ಯುತ್ತ, ಹಠಾತ್ತನೆ ನಿರ್ಗಮಿಸಿ ಒಂದು ‘ವಸಂತಸ್ಮ ತಿ’ ಯಾಗಿ ಉಳಿದದ್ದು, ಈಗ ಚರಿತ್ರೆಯ ಒಂದು ಭಾಗವಾಗಿದೆ.

ನವ್ಯೋತ್ತರ ಕನ್ನಡ ಸಾಹಿತ್ಯ ವಿಮರ್ಶೆ, ಎಪ್ಪತ್ತರ ದಶಕದ ದಲಿತ ಬಂಡಾಯ ಚಳುವಳಿಯನಂತರ, ತನ್ನ ಸಾಮಾಜಿಕ ಆಯಾಮಗಳನ್ನು ಹೇಗೆ ವಿಸ್ತರಿಸಿಕೊಂಡಿ- ತೆಂಬುದು ಎಲ್ಲರೂ ಬಲ್ಲ ಸಂಗತಿಯಾಗಿದೆ. ಅದರ ಮುಂದಿನ ಹೆಜ್ಜೆಯಾಗಿ-ಕಳೆದ ಎರಡು ದಶಕಗಳ ಕಾಲಮಾನದಲ್ಲಿ, ಕನ್ನಡ ಸಾಹಿತ್ಯ ವಿಮರ್ಶೆ ಪಡೆದುಕೊಂಡ ಸಾಂಸ್ಕೃತಿಕ ಆಯಾಮಗಳನ್ನು ಕುರಿತು ಇನ್ನೂ ಅಧ್ಯಯನ ನಡೆಯಬೇಕಾಗಿದೆ. ಹೀಗೆ ಸಾಂಸ್ಕೃತಿಕ ಆಯಾಮಗಳನ್ನು ಪಡೆದುಕೊಂಡ ಈ ವಿಮರ್ಶಾ ಪ್ರಸ್ಥಾನದ ಶ್ರೇಷ್ಠ ಪ್ರತಿನಿಧಿ ಡಾ.ಡಿ. ಆರ್. ನಾಗರಾಜ್, ಎಂದು ನಾನು ತಿಳಿದಿದ್ದೇನೆ.

ತನ್ನ ಅಲ್ಪಾವಧಿಯ ಜೀವಿತ ಕಾಲದೊಳಗೆ, ಈ ದೇಶದ ಹಾಗೂ ಹೊರಗಿನ ಎತ್ತರದ ಬುದ್ಧಿ ಜೀವಿಗಳೊಂದಿಗೆ ಸಂವಾದ ಹಾಗೂ ಚರ್ಚೆಗಳಲ್ಲಿ ತೊಡಗಬಲ್ಲ ಪರಿಣತಿಯನ್ನು ಗಳಿಸಿಕೊಂಡ ನಾಗರಾಜ್ ಅವರ ಅಧ್ಯಯನದ ವ್ಯಾಪ್ತಿ ಆಶ್ಚರ್ಯಕರವಾಗಿದೆ. ಹೆಗ್ಗೋಡಿನ ‘ಅಕ್ಷರ ಚಿಂತನ ಮಾಲೆ’ಯಕೃತಿಗಳನ್ನು ಅವರು ಯೋಜಿಸಿದ ಕ್ರಮ, ಆ ಒಂದೊಂದು ಕೃತಿಗೂ ಅವರು ಬರೆದಿರುವ ವಿದ್ವತ್ ಪೂರ್ಣ ಪ್ರಸ್ತಾವನೆಗಳು- ಅವರ ಬಹುಶ್ರುತತ್ವಕ್ಕೆ ಹಾಗೂ ವಿಶ್ಲೇಷಣಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಈ ಬಗೆಯ ಪೂರ್ವಸಿದ್ಧತೆ ಅವರ ಓರಗೆಯವರಾರಿಗೂ ಈ ಪ್ರಮಾಣದಲ್ಲಿ ಬಹುಶಃ ಇದ್ದಿರಲಾರದೆಂದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು. ಜಗತ್ತಿನ ವಿವಿಧ ಧರ್ಮಗಳ ಬಗ್ಗೆ, ಭಾರತೀಯ-ಪಾಶ್ಚಾತ್ಯ ಹಾಗೂ ಇಸ್ಲಾಮಿಕ್ ಕಾವ್ಯ ಮೀಮಾಂಸೆಗಳ ಬಗ್ಗೆ, ಭಾರತದ ವಿವಿಧ ದರ್ಶನಗಳ ಬಗ್ಗೆ, ಕನ್ನಡದ ಗತಕಾಲದ ಸಂಸ್ಕೃತಿ ಮತ್ತು ರಾಜಕಾರಣದ ಸಂಬಂಧಗಳ ಬಗ್ಗೆ, ನಾಗರಾಜ್ ಅಧ್ಯಯನ ಹಾಗೂ ಚಿಂತನೆಯ ಮೂಲಕ ಮೈಗೂಡಿಸಿಕೊಂಡ ತಿಳಿವು, ದೂರಾಂತರ್ಗತವಾದ ಸಂಬಂಧಗಳನ್ನು ಹುಡುಕಿತಂದು, ಬೆಸೆದು ಹೊಸ ಅರ್ಥವಂತಿಕೆಯ ಸ್ಫೋಟಗಳನ್ನು ಹುಟ್ಟಿಸಬಲ್ಲ ಸಂಯೋಜಕ ಪ್ರತಿಭೆ, ಅವರ ಬರೆಹಗಳ ಮುಖ್ಯಲಕ್ಷಣವಾಗಿದೆ.

ಇಪ್ಪತ್ತನೆ ಶತಮಾನದ ಕನ್ನಡ ಸಾಹಿತ್ಯ ಹಾಗೂ ಸಾಹಿತ್ಯ ವಿಮರ್ಶೆಗಳು ಪಶ್ಚಿಮದ ಪ್ರೇರಣೆ-ಪ್ರಭಾವ-ಮಾದರಿಗಳನ್ನು ತಮ್ಮ ಅಗತ್ಯಕ್ಕೆ ತಕ್ಕ ಹಾಗೆ ಬರಮಾಡಿಕೊಳ್ಳುತ್ತ, ಗುರುತಿಸಬಹುದಾದ ಮೂರುನಾಲ್ಕು ಚಳುವಳಿಗಳ ಮೂಲಕ ಎಂಥ ಸಮೃದ್ಧಿ ಹಾಗೂ ವೈವಿಧ್ಯತೆಯನ್ನು ಪಡೆದುಕೊಂಡವು ಎನ್ನುವುದು ಈಗಾಗಲೇ ದಾಖಲಾಗಿರುವ ಸಂಗತಿಯಾಗಿದೆ. ಆದರೆ ವಸಾಹತುಶಾಹಿಯ ಪರಿಣಾಮವಾಗಿ, ಭಾರತೀಯ ಸಂದರ್ಭದಲ್ಲಿ ಅದುವರೆಗೂ ನಮ್ಮ ಸಾಹಿತ್ಯವು ತನ್ನ ನೆರೆಹೊರೆಯ ಭಾಷಾಸಾಹಿತ್ಯಗಳೊಂದಿಗೆ ಬಹುಕಾಲದಿಂದಲೂ ನಡೆಯಿಸುತ್ತಿದ್ದ ಸಂವಾದವು ಹಠಾತ್ತಾಗಿ ಕಡಿದು ಹೋಗಿ, ಪಶ್ಚಿಮ ಬುದ್ಧಿಯಾದ ಭಾರತೀಯ ಮನಸ್ಸಿನಲ್ಲಿ ತನ್ನ ದೇಶೀಯವಾದ ತಿಳಿವಳಿಕೆಗಳ ಮೇಲೆ ಒಂದು ಬಗೆಯ ವಿಸ್ಮ ತಿ ಕವಿದು ಕೊಂಡಿತು -ಎಂಬ ಎಚ್ಚರವೊಂದು, ಕಳೆದ ಶತಮಾನದ ಕೊನೆಕೊನೆಗೆ ಹುಟ್ಟಿಕೊಂಡಿತು. ಈ ಕಾರಣದಿಂದ ಗಟ್ಟಿಗೊಂಡ ಚಿಂತನೆಯೆಂದರೆ: ಇನ್ನು ಮುಂದಾದರೂ ನಮ್ಮ ಸಾಹಿತ್ಯವು ಇದುವರೆಗಿನ ಹಾಗೆ ತನ್ನ ಪ್ರೇರಣೆ ಪ್ರಭಾವಗಳಿಗೆ ಅನ್ಯದೇಶೀಯವಾದ ಮಾದರಿಗಳನ್ನು ಅವಲಂಬಿಸದೆ, ಕಾರಣಾಂತರಗಳಿಂದ ತಾನು ನಿರ್ಲಕ್ಷಿಸಿದ ಅಥವಾ ಮರೆತ, ತನ್ನ ಚರಿತ್ರೆ, ಪುರಾಣ, ಜಾನಪದ ಇತ್ಯಾದಿಗಳ ನಿಧಿಯಾದ ದೇಶೀಯತೆಯಲ್ಲಿ ಬೇರೂರಿ ಅಲ್ಲಿಂದಲೇ ತನಗೆ ಬೇಕಾದುದನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.

ಈ ಅಗತ್ಯವನ್ನು ಆಧುನಿಕ ಪ್ರಜ್ಞೆಯ ನಾಗರಾಜ್ ಅವರ ಬರೆಹಗಳು ಪೂರೈಸುವ ಕ್ರಮ ವಿಶೇಷ ರೀತಿಯದಾಗಿದೆ. ಅದುವರೆಗೂ ಪಶ್ಚಿಮದ ಕವಿಗಳೊಂದಿಗೆ, ನಮ್ಮ ಕವಿಗಳನ್ನು ಇರಿಸಿ ನಡೆಯಿಸುತ್ತಿದ್ದ ನಮ್ಮ ತೌಲನಿಕ ವಿಮರ್ಶೆಯನ್ನು, ಭಾರತೀಯ ಪರಿಸರದ ಕವಿಕೃತಿಗಳ ಕಡೆಗೆ, ಅದರಲ್ಲೂ ದೇಶೀಪ್ರತಿಭೆಗಳ ಕಡೆಗೆ  ಹೊರಳಿಸಿದವರು ನಾಗರಾಜ್. ‘ಆದಿಪುರಾಣದ ಜತೆಗೆ ಜುಂಜಪ್ಪನ ಕಾವ್ಯವನ್ನು ಇಡದಿದ್ದರೆ ಕನ್ನಡದ ಪ್ರತಿಭೆಯ ಸ್ವರೂಪವೇ ತಿಳಿಯುವುದಿಲ್ಲ’ ಎನ್ನುವ ನಾಗರಾಜ್, ಕನ್ನಡ ಪರಂಪರೆಯಲ್ಲಿ ‘ಕುಮಾರವ್ಯಾಸ ಭಾರತ ಒಂದು ಕಡೆಗಿದ್ದರೆ, ಅಷ್ಟೆ ಶ್ರೇಷ್ಠವಾದ ಮಲೆಮಾದೇಶ್ವರ ಕಾವ್ಯ ಇನ್ನೊಂದು ಕಡೆಗೆ ಇದೆ’-ಎಂಬ ಸಂಗತಿಯ ಕಡೆ ನಮ್ಮ ಗಮನವನ್ನು ಸೆಳೆಯುತ್ತಾರೆ. ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಎನ್ನುವ ಕೃತಿಯಲ್ಲಿ, ಅಭಿನವ ಗುಪ್ತರೊಂದಿಗೆ ಮತ್ತು ಗೋರಕ್ಷನೊಂದಿಗೆ ಅಲ್ಲಮನನ್ನು ಮುಖಾಮುಖಿಯಾಗಿ ನಿಲ್ಲಿಸುವುದರ ಜತೆಗೆ, ಮಂಟೇಸ್ವಾಮಿಯಂಥ ಜಾನಪದ ನಾಯಕನೊಂದಿಗೆ, ಅಲ್ಲಮನನ್ನು ಅಭೇದಗೊಳಿಸುತ್ತ ಶೂನ್ಯ ಸಂಪಾದನೆಯ ಕಥನ ಕ್ರಮವನ್ನು ವಿಶ್ಲೇಷಿಸುವ ನಾಗರಾಜ್ ಅವರ ಕ್ರಮ ತುಂಬ ಕುತೂಹಲಕಾರಿಯಾಗಿದೆ. ಇದೇ ಕೃತಿಯ ಮೊದಲಲ್ಲಿ ಭಾರತೀಯ ದರ್ಶನ ಮತ್ತು ಧಾರ್ಮಿಕ ದಂಗೆಗಳ ಇತಿಹಾಸವನ್ನು ಹಾಗೂ ಅವುಗಳ ‘ವಿದ್ರೋಹೀ ನಾವೀನ್ಯತೆ’ಯನ್ನೂ ಕುರಿತು ಪ್ರಸ್ತಾಪಿಸುತ್ತ, ಭಾರತೀಯ ತತ್ವ ಶಾಸ್ತ್ರದಲ್ಲಿ ಅಧಿಕೃತವಾಗಿ ಮಾತನಾಡಬಲ್ಲವರೆಂದು ಹೆಸರು ಮಾಡಿರುವ ಶ್ರೀ ಸುರೇಂದ್ರನಾಥ ದಾಸಗುಪ್ತ ಅವರು, ಹನ್ನೆರಡನೆಯ ಶತಮಾನದ ಕರ್ನಾಟಕದಲ್ಲಿ ಸಂಭವಿಸಿದ ವೀರಶೈವ ಚಳುವಳಿಯ ಬಗ್ಗೆ, ಅದರ ಮಹತ್ವವನ್ನು ಸರಿಯಾಗಿ ಗುರುತಿಸದಿರುವುದು ಮಾತ್ರವಲ್ಲ, ‘ಕನ್ನಡದ ಕ್ರಾಂತಿಯ ಗುರುವಾದ ಬಸವಣ್ಣ ಒಬ್ಬ ಸಾಮಾನ್ಯ ಒಳಸಂಚುಗಾರ, ದೊಂಬಿಯ ನಾಯಕ ಎಂಬಂಥ’ ‘ಉಡಾಫೆಯ ನಿಲುವನ್ನು’ ಪ್ರಕಟಿಸಿರುವ ವಿಚಾರದಲ್ಲಿ ನಾಗರಾಜ್ ತಮ್ಮ ತೀವ್ರ ಅತೃಪ್ತಿಯನ್ನು ದಾಖಲಿಸುತ್ತಾರೆ. ಶಿಷ್ಟ ಮತ್ತು ಜಾನಪದಗಳೆರಡೂ ಬೇರೆಬೇರೆ  ಎಂಬ ರೂಢಿಗತವಾದ ವಿಕಲ್ಪವನ್ನು ನಿರಾಕರಿಸುತ್ತ ‘ಶಿಷ್ಟ ಮತ್ತು ಜಾನಪದಗಳೆಂಬ ವಿಂಗಡಣೆಯೇ ಕೃತಕ’ ಎಂದು ಘೋಷಿಸುವ ನಾಗರಾಜ್, ಜನಪ್ರಿಯತೆಯನ್ನು ಅತ್ಯಂತ ಗುಮಾನಿಯಿಂದ ನೋಡುತ್ತಿದ್ದ ನವ್ಯರ ನಿಲುವಿಗೆ ಪ್ರತಿಕ್ರಿಯೆ ಎಂಬಂತೆ ಕನ್ನಡದ ‘ಸ್ಕೂಲ್‌ಮಾಸ್ಟರ್’ ಮತ್ತು ‘ಚಂದವಳ್ಳಿಯತೋಟ’ ಎಂಬ ಎರಡು ಕನ್ನಡ ಚಲನ ಚಿತ್ರಗಳನ್ನು ಅತ್ಯಂತ ಗಂಭೀರವಾದ ಚರ್ಚೆಗೆ ಗುರಿಪಡಿಸಿರುವ ಲೇಖನಗಳು ಅವರ ಅಧ್ಯಯನದ ಸ್ವರೂಪವನ್ನು, ಸಾಂಸ್ಕೃತಿಕ ನಿಲುವುಗಳನ್ನು ಸ್ಪಷ್ಟಪಡಿಸುತ್ತವೆ.

ಸಂಸ್ಕೃತಿಯ ಚಿಂತನಾಕ್ರಮದಲ್ಲಿ, ಪರಂಪರೆಯನ್ನು ಭಾರತೀಯ ಸಂದರ್ಭದಲ್ಲಿ, ಮಹತ್ ಪರಂಪರೆ (Great Treadition) ಮತ್ತು ಕಿರುಪರಂಪರೆ (Little Tradition)-ಎಂದು ವಿಭಾಗಿಸಿ ನೋಡುವ ಪರಿಕಲ್ಪನೆಗಳನ್ನು ನಾಗರಾಜ್ ತಿರಸ್ಕರಿಸಿ, ‘ವೈದಿಕ’ ‘ವೈದಿಕೇತರ’ ಎಂಬ ಪರಿಕಲ್ಪನೆಗಳನ್ನು ಮಾಡಿಕೊಂಡು, ಅವುಗಳಲ್ಲಿ ‘ವೈದಿಕೇತರ’ ಪರಂಪರೆಯೊಳಗಿರುವ ಬಹುಮುಖೀ ಧಾರೆಗಳನ್ನು, ಮತ್ತು ಅವುಗಳು ‘ವೈದಿಕ’  ಚಿಂತನೆಗಳೊಂದಿಗೆ ಮುಖಾಮುಖಿಯಾಗುವ ಕ್ರಮವನ್ನು ತುಂಬ ಉತ್ಸಾಹದಿಂದ ಚರ್ಚಿಸುತ್ತಾರೆ. ಯಾವುದನ್ನು ಇತ್ತೀಚೆಗೆ ‘ಕೆಳಸ್ತರಗಳ ಅಧ್ಯಯನ’ ಎಂದು ಗುರುತಿಸಲಾಗುತ್ತಿದೆಯೋ, ಅದಕ್ಕೆ ಒಂದು ಚಹರೆಯನ್ನು, ನೆಲೆಯನ್ನು ಕನ್ನಡದ ಸಂದರ್ಭದಲ್ಲಿ ತಂದು ಕೊಟ್ಟವರು ನಾಗರಾಜ್. ಅವೈದಿಕ ಜನಾಂಗಗಳಿಗೆ, ಬ್ರಾಹ್ಮಣೇತರ ಜಾತಿಗಳಿಗೆ ಅವರದೇ ಆದ ಸಾಂಸ್ಕೃತಿಕ ಬದುಕು ಹಾಗೂ ಚರಿತ್ರೆ ಇಲ್ಲ ಎಂಬ ತಪ್ಪುಕಲ್ಪನೆಗಳನ್ನು ನಿರಾಕರಿಸಿ, ಚರಿತ್ರೆಯುದ್ದಕ್ಕೂ ಮೇಲುಜಾತಿಯವರ ಧಾರ್ಮಿಕ ಅಧಿಕಾರವನ್ನು ಪ್ರತಿರೋಧಿಸುವ ಕೆಳವರ್ಗದ ಸಾಂಸ್ಕೃತಿಕಶಕ್ತಿಗಳೂ ಇದ್ದುವು ಎಂಬ ಸಂಗತಿಯನ್ನು, ವಿವಿಧಭಾರತೀಯ ‘ದೇಸೀದಂಗೆ’ಗಳ ಮೂಲಕ ನಾಗರಾಜ್ ಸ್ಪಷ್ಟಪಡಿಸುತ್ತ, ‘ಅಲ್ಲಮಪ್ರಭುವೇ ಕೆಳಜಾತಿಯವನು, ಇಂಥವನನ್ನು ಸೃಷ್ಟಿಸಿದ ಶೂದ್ರವರ್ಗಕ್ಕೆ ಸಾಂಸ್ಕೃತಿಕ ಶಕ್ತಿ ಇರಲಿಲ್ಲ ಎಂದು ಹೇಳಲಾದೀತೆ?’ ಎಂದು ಪ್ರಶ್ನಿಸುತ್ತಾರೆ. ಮೇಲುವರ್ಗದವರ ಧಾರ್ಮಿಕ ಅಧಿಕಾರವನ್ನು ಪ್ರತಿಭಟಿಸುವ ಕೆಳವರ್ಗದವರ ಚಳುವಳಿಗಳನ್ನು ಎರಡು ಬಗೆಯವೆಂದು ನಾಗರಾಜ್ ಗುರುತಿಸುತ್ತಾರೆ. ಒಂದು ‘ಸಕೀಲಚಳುವಳಿ’, ಮತ್ತೊಂದು ‘ವಿಶಾಲ ಚಳುವಳಿ,’ ಸಾಮಾಜಿಕ ಅಸಮಾನತೆ ಮತ್ತು ಶೋಷಣೆಗಳಿಂದ ಕುಗ್ಗಿ ಹೋಗಿರುವ ಜನರಿಂದ ಹುಟ್ಟುವ ಹೋರಾಟಗಳು ‘ಸಕೀಲ ಚಳುವಳಿ’ಗಳು; ಒಂದು ಸಾಮಾಜಿಕವರ್ಗಕ್ಕೆ ಸೀಮಿತವಾಗದೆ ಹೆಚ್ಚು ವಿಶಾಲವಾಗಲು ಪ್ರಯತ್ನಿಸುವ ಚಳುವಳಿಗಳು ‘ವಿಶಾಲ ಚಳುವಳಿಗಳು’.

ನಾಗರಾಜ್ ತಮ್ಮ ಸಾಹಿತ್ಯ ಹಾಗೂ ಸಂಸ್ಕೃತಿಯ ಗ್ರಹಿಕೆಗೆ ‘ವೈದಿಕ-ಅವೈದಿಕ’, ‘ವಿಮುಖತೆ-ವಿಸ್ಮೃತಿ’ ‘ಅನುಭಾವಿ-ವಿಚಾರವಾದಿ’, ಎಂಬಂಥ ಜೋಡಿ ಪರಿಕಲ್ಪನೆಗಳನ್ನು ಕಟ್ಟಿಕೊಡುತ್ತಾರೆ. ಹೀಗೆಯೆ ಭಾರತೀಯ ಮಹಿಳಾ ಸಾಹಿತ್ಯವನ್ನು ‘ಕಾತ್ಯಾಯಿನಿ ಮಾದರಿ-ಗಾರ್ಗಿಮಾದರಿ’ ಎಂದು ವರ್ಗೀ ಕರಿಸುತ್ತಾರೆ. ‘ಕಾತ್ಯಾಯಿನಿ ಮಾದರಿಯನ್ನು ಗೃಹವಾದಿನಿ ಮಾದರಿ ಎನ್ನಬಹುದು. ಈಕೆ ತಾಯಿ-ಸಖೀ-ಅಕ್ಕ-ತಂಗಿ- ಯಜಮಾನಿ ಹೀಗೆ. ಈಕೆ ಪುರುಷಪ್ರಧಾನ ಮೌಲ್ಯಗಳನ್ನು ಕೂಡಾ ಸಿಂಗರಿಸಿಬಿಡಬಲ್ಲಳು. ಪ್ರಗತಿಪರ ಸ್ತ್ರೀವಾದಿಗಳಿಗೆ ಈಕೆಯನ್ನು ಕಂಡರಾಗದು. ಕನ್ನಡ ಮಹಿಳಾಬರಹಗಳಲ್ಲಿ ಸಂಕೀರ್ಣವಾಗಿ ಬಂದಿರುವುದು ಈ ಗೃಹವಾದಿನಿಯ ವಸ್ತುವೇ. ಇನ್ನು  ಗಾರ್ಗಿಮಾದರಿ. ಅದು ತನ್ನನ್ನು ತುಳಿಯುತ್ತಿರುವ, ಅವಮಾನಕ್ಕೆ ಈಡು ಮಾಡುವ ಎಲ್ಲ ಅಧಿಕಾರಗಳನ್ನು ಉಗ್ರವಾಗಿ ಪ್ರತಿಭಟಿಸುತ್ತದೆ’. ಮಹಿಳೆಯರ ಬರೆಹಗಳನ್ನು ಪರಿಶೀಲಿಸಲು ಇದೊಂದು ನಿರ್ದೇಶನ.

ಕನ್ನಡದ ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ. ಅದರೊಂದಿಗೆ ಸಂಗಡಿಸಿಕೊಂಡ ನಾಗರಾಜ್ ಆ ಚಳುವಳಿಗೆ ‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’-ಎಂಬ ಘೋಷಣಾವಾಕ್ಯವೊಂದನ್ನು ಕೊಟ್ಟರು. ಅಷ್ಟೇ ಅಲ್ಲ, ದಲಿತರ ಅಥವಾ ಅಸ್ಪೃಶ್ಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಗಾಂಧಿ ಮತ್ತು ಅಂಬೇಡ್ಕರ್ ಅವರ ನಿಲುವುಗಳ ಮುಖಾಮುಖಿಯನ್ನು ಕುರಿತ ‘ಫ್ಲೇಮಿಂಗ್ ಫೀಟ್’ (Flaming feet) ಎನ್ನುವ ಕೃತಿಯನ್ನು ಬರೆದರು. ದಲಿತ ಚಳುವಳಿಯ ಸಾಮಾಜಿಕ-ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಆಯಾಮಗಳನ್ನು ವಿವೇಚನೆಗೆ ಗುರಿಪಡಿಸಿರುವ ನಾಗರಾಜ್ ಅವರ ಈ ಕೃತಿ, ಅವರ ಬಹುಮುಖೀ ಚಿಂತನೆಗಳನ್ನು ಮಂಡಿಸಿದ, ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಖ್ಯಾತಿಯನ್ನು ತಂದು ಕೊಟ್ಟ ಕೃತಿಯಾಗಿದೆ. ಈಚೆಗೆ ‘ಉರಿಚಮ್ಮಾಳಿಗೆ’ ಎಂಬ ಹೆಸರು ಹೊತ್ತು ಇದು ಕನ್ನಡಕ್ಕೆ ಭಾಷಾಂತರವಾಗಿದೆ. ಈ ಕೃತಿಯಲ್ಲಿ ಅವರು ‘ಸಾಮಾಜಿಕ ಕ್ರೋಧದ ಮಾದರಿ’ ಮತ್ತು ‘ಆಧ್ಯಾತ್ಮಿಕ ಹುಡುಕಾಟದ ಮಾದರಿ’ ಎಂಬ ಪರಿಕಲ್ಪನೆಗಳ ಮೂಲಕ ದಲಿತಸಾಹಿತ್ಯವನ್ನು ಹೊಸದಾಗಿ ನೋಡುವ ದೃಷ್ಟಿ ಕೋನವೊಂದನ್ನು ಪ್ರಸ್ತಾಪಿಸುತ್ತಾರೆ. ‘ಪಾಶ್ಚಿಮಾತ್ಯ ವಿಚಾರವಾದದ ಪರಿಭಾಷೆಗಿಂತ ಬೇರೆ ರೀತಿಯ ವೈಚಾರಿಕತೆ ನಮ್ಮ ಸಂಸ್ಕೃತಿಯಲ್ಲೂ ಇದೆ. ಈ ದೇಶದ ಪ್ರಗತಿಪರ ಹೋರಾಟಗಳಿಗೆ ದೇಸೀಸತ್ವ ಒದಗಬೇಕಾದರೆ ಈ ರೀತಿಯ ಸ್ವದೇಶೀಮೂಲಗಳಿಗೆ ನಾವು ಈಗ ವಾಪಸ್ಸು ಹೋಗಬೇಕಾಗಿದೆ’-ಎನ್ನುವ ನಿಲುವಿನ ನಾಗರಾಜ್, ಗಾಂಧಿ ಅಂಬೇಡ್ಕರ್ ಲೋಹಿಯಾ ಅವರ ಭಾಷೆಯಲ್ಲಿ ಮಾತನಾಡುತ್ತ, ರೂಢಿಗತವಾದ ಎಷ್ಟೋಪರಿಕಲ್ಪನೆಗಳನ್ನು ಚಿಕಿತ್ಸೆಗೆ ಒಳಗುಪಡಿಸುತ್ತ, ರೂಪಕಾತ್ಮಕ ವಿಧಾನದಲ್ಲಿ ವಿಚಾರಗಳನ್ನು ಮಂಡಿಸುತ್ತ ಹೊಸಬಗೆಯ ಸಾಂಸ್ಕೃತಿಕ ವಿಮರ್ಶೆಯನ್ನು ಅತ್ಯಂತ ಸೃಜನಾತ್ಮಕವಾದ ಮನಃಸ್ಥಿತಿಯಮೂಲಕ ಕಟ್ಟಿಕೊಟ್ಟಿದ್ದಾರೆ.

ನಾಗರಾಜ್ ಅವರ ಬರೆಹಗಳ ಮರು ಪರಿಶೀಲನೆ, ಮತ್ತು ವಿಮರ್ಶೆ ಇನ್ನೂ ನಡೆಯಬೇಕಾಗಿದೆ. ಯಾಕೆಂದರೆ ನಾಗರಾಜ್ ಅವರ ವಿಶಿಷ್ಟವಾದ ಬರೆವಣಿಗೆ ಹೊಸ ವಾಗ್ವಾದಗಳಿಗೆ ತೆರೆದ ದಾರಿಯಾಗಿದೆ.

ಯಾವುದೂ ಸಣ್ಣದಲ್ಲ : ೨೦೦೦