ಧಾರವಾಡದ ಡಾ. ಗುರುಪಾದ ದಂಡಗಿಯವರು ಈಗ ನಿವೃತ್ತರು.  ಆದರೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸದಾ ನಿರತರು.  ನೆಲ-ಜಲ ಇವರ ಪ್ರಮುಖ ಗುರಿ.  ಕಳೆದ ೨೦ ವರ್ಷಗಳಲ್ಲಿ ೧೫ಕ್ಕೂ ಹೆಚ್ಚು ಸಂಶೋಧನೆಗಳನ್ನು ಮಾಡಿದ್ದಾರೆ.  ಎಲ್ಲವೂ ರೈತಪರ ಸಂಶೋಧನೆಗಳು.  ಅಷ್ಟೇ ಅಲ್ಲ, ಆ ಸಂಶೋಧನೆಗಳನ್ನು ಕಛೇರಿಯಲ್ಲೋ ಪೆಟ್ಟಿಗೆಯೊಳಗೋ ಇಟ್ಟು ಜಿರಲೆ ತಿನ್ನಲು ಬಿಡಲೇ ಇಲ್ಲ.  ತಾವೇ ಸ್ವತಃ ರೈತರ ಬಳಿಗೆ ಹೋದರು, ವಿವರಿಸಿದರು, ಅರ್ಥವಾಗುವವರೆಗೂ ತಾಳ್ಮೆಗೆಡದೇ ತಿಳಿಸಿದರು.  ಸಹಕಾರ ನೀಡಿದರು.  ಸ್ವತಃ ಮಾಡಿ ತೋರಿಸಿದರು.

೨೦ ವರ್ಷಗಳ ಹಿಂದೆ ಆಧುನಿಕ ವ್ಯವಸ್ಥೆಗಳಿಲ್ಲದಿದ್ದಾಗ ಗಿಡಗಳ ಬುಡಕ್ಕೆ ಹೂಜಿಯಿಟ್ಟು ಹನಿ ನೀರಾವರಿ ಅಳವಡಿಸುವ ವಿಧಾನ ಹಾಗೂ ಅದನ್ನು ಮತ್ತಷ್ಟು ಆಧುನಿಕಗೊಳಿಸಿದ, ಸುಲಭಗೊಳಿಸಿದ ವಿಧಾನ ಇಂದಿಗೂ ಪ್ರಸ್ತುತ.  ಅದಾದ ಮೇಲೆ “ಗುಟುಕು” ನೀರಾವರಿ, “ಏರ್‌ ಓ ಡ್ರಿಫ್” ನೀರಾವರಿ, “ವಸರು” ನೀರಾವರಿ, “ಸೈಫನ್‌ ಡ್ರಿಪ್‌” ನೀರಾವರಿ.  ಹೀಗೆ ಒಂದರ ಹಿಂದೊಂದು ಸಂಶೋಧನೆ.  ಮನೆಯಲ್ಲೇ ಪ್ರಯೋಗ, ಪರಿಷ್ಕರಣೆ ಹಾಗೂ ಜನರಿಗೆ ತಿಳಿಸುವುದು ಮಾಡುತ್ತಲೇ ಇದ್ದಾರೆ.   ಅತ್ಯಂತ ಕಡಿಮೆ ಖರ್ಚಿನ, ಸುಲಭವಾಗಿ ಮಾಡಿಕೊಳ್ಳಬಹುದಾದ ಪರಿಸರಸ್ನೇಹಿ, ಕುಟುಂಬಸ್ನೇಹಿ.  (ಅಂದರೆ ಮನೆಯಲ್ಲಿ ನಾವಿಲ್ಲದಿರುವಾಗ ಗಿಡಗಳಿಗೆ ನೀರು ಹಾಕುವ ಕೆಲಸ ಕುಟುಂಬದವರಿಗೆ ಬರುತ್ತದೆ.  ಅದನ್ನು ತಪ್ಪಿಸುವ ಉಪಾಯ), ನೆರೆಹೊರೆ ಸ್ನೇಹಿ.  ಹೀಗೆ ಎಲ್ಲರಿಗೂ ಸಹ್ಯವೆನಿಸುವ ವಿಧಾನಗಳು.

ಹೂಜಿ ಹನಿನೀರಾವರಿ

ಮಣ್ಣಿನ ಗಡಿಗೆಗೆ ತಳದಲ್ಲೊಂದು ರಂಧ್ರ ಮಾಡಿ ಸಸಿಗಳ ಬುಡದಲ್ಲಿ ಇಡುವುದು ಪದ್ಧತಿ.  ಇದು ಸ್ವಲ್ಪ ಕಾಲ ಮಾತ್ರ ಉಪಯುಕ್ತ.  ದಂಡಗಿಯವರು ಮಾರ್ಪಡಿಸಿದ್ದು ಹೀಗೆ.  ಗಡಿಗೆಯ ಬುಡದಲ್ಲಿ ರಂಧ್ರ ಮಾಡಬೇಕು.  ಗಡಿಗೆಯನ್ನು ಸುಡುವ ಮೊದಲೇ ಹೀಗೆ ಮಾಡಿಸಿದರೆ ಒಳ್ಳೆಯದು.  ಬಿಳಿ ಪೈಪನ್ನು ರಂಧ್ರದಲ್ಲಿ ಬಿಗಿಯಾಗಿ ಕೂರುವಂತೆ ತೂರಿಸಬೇಕು.  ಬಿಳಿ ಪೈಪಿನೊಳಗೆ ಬಿಗಿಯಾಗಿ ಕೂರುವ ಕಪ್ಪು ಪೈಪನ್ನು ಜೋಡಿಸಬೇಕು.  ಮತ್ತೊಂದು ತುದಿಗೆ ನೀರುಹನಿ ನಿಯಂತ್ರಕವನ್ನು ಜೋಡಿಸಿ ನೀರು ಹನಿಹನಿಯಾಗಿ ಬೀಳುವಂತೆ ಮಾಡಬೇಕು.

ಹೊಸ ಸಸಿಗಳಿಗೆ ದಿನಕ್ಕೆ ಮೂರು ಲೀಟರ್‌ ಹನಿ ನೀರು ಸಾಕು.  ಗಡಿಗೆಯು ೨೧ ಲೀಟರಿನ ಸಾಮರ್ಥ್ಯದ್ದಾದರೆ ವಾರಕ್ಕೊಮ್ಮೆ ತುಂಬಿಸಿದರೆ ಸಾಕು.  ನೀರು ಆವಿಯಾಗಿ ಹೋಗುವುದನ್ನು ತಪ್ಪಿಸಲು, ತೇವಾಂಶ ಹೆಚ್ಚು ಕಾಲ ಇರುವಂತೆ ಮಾಡಲು ಗಿಡಗಳ ಸುತ್ತಲೂ ಮರಳು, ಕಾಂಪೋಸ್ಟ್‌ ಗೊಬ್ಬರ ದಪ್ಪವಾಗಿ ಹಾಸಿರಬೇಕು.  ಆ ರೀತಿ ನೀರನ್ನು ಬೇಕಾದಂತೆ ನಿಯಂತ್ರಿಸಬಹುದು ಹಾಗೂ ಬಾಳಿಕೆ ಬರುತ್ತದೆ.

ವಸರುನೀರಾವರಿ

ಮನೆಯಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು, ಗಾಜಿನ ಬಾಟಲಿಗಳು ಖಾಲಿಯಾಗಿ ವ್ಯರ್ಥವಾಗಿದ್ದರೆ ಈ ಪದ್ಧತಿಗೆ ಸೂಕ್ತ.  ಬಾಟಲಿಗೆ ಮುಚ್ಚಳ ಕಡ್ಡಾಯವಾಗಿ ಇರಬೇಕು.  ಮುಚ್ಚಳಕ್ಕೆ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿರಿ.  ಬಾಟಲಿಯ ತುಂಬಾ ನೀರು ತುಂಬಿ ಮುಚ್ಚಳ ಹಾಕಿ.  ಅದನ್ನು ಯಾವುದೇ ಗಿಡದ ಪಕ್ಕ ಮಣ್ಣಿನೊಳಗೆ ೫ ಸೆಂಟಿಮೀಟರ್‍ ಆಳದಲ್ಲಿ ಮುಚ್ಚಳ ಅಡಿಗೆ ಇರುವಂತೆ ಹುಗಿಯಿರಿ.  ಬಾಟಲಿಯು ಗಿಡಗಳಿಂದ ೧೦ ಸೆಂಟಿಮೀಟರ್‌ ದೂರವಿರಲಿ.  ಇದನ್ನು ಪಾಟ್‌ಗಳಲ್ಲಿರುವ ಗಿಡಗಳಿಗೂ ಮಾಡಬಹುದು.  ಮಣ್ಣಿನಲ್ಲಿ ಹೀಗೆ ಹುಗಿಯುವುದರಿಂದ ರಂಧ್ರಗಳು ಮುಚ್ಚಿಹೋಗುವುದಿಲ್ಲ.  ಮಣ್ಣು ಬಾಟಲಿಯಲ್ಲಿರುವ ನೀರನ್ನು ನಿಧಾನ ಎಳೆದುಕೊಳ್ಳುತ್ತದೆ.  ಎಷ್ಟು ದಿನಕ್ಕೆ ಅಥವಾ ಗಂಟೆಗೆ ನೀರು ಖಾಲಿಯಾಗುತ್ತದೆ ಎಂಬುದನ್ನು ಗಮನಿಸಿ ರಂಧ್ರವನ್ನು ಹೆಚ್ಚು ಮಾಡಿರಿ.

ಏರ್ ಡ್ರಿಪ್’’ ನೀರಾವರಿ

ಪ್ಲಾಸ್ಟಿಕ್‌ ಬಾಟಲಿ ಅಥವಾ ಡೆಕ್ಸ್‌ಟ್ರೋಸ್‌ ಬಾಟಲಿ ಮುಚ್ಚಳದ ಮಧ್ಯದಲ್ಲಿ ಸಣ್ಣ ರಂಧ್ರ ಮಾಡಿ.  ಅದಕ್ಕೆ ಸೆಣಬಿನ ದಾರವನ್ನು ಹೊರಗಿನಿಂದ ಒಳಗೆ ಹಾಕಿ, ಗಂಟು ಹಾಕಿ ಉದ್ದಕ್ಕೆ ಇಳಿಬಿಡಿ.  ಬಾಟಲಿಗೆ ನೀರು ತುಂಬಿ ಗಿಡದ ಪಕ್ಕ ತೂಗುಹಾಕಿ.  ಮೇಲುಭಾಗದಲ್ಲಿ ಗಾಳಿ ಸೇರಿಕೊಳ್ಳುವಂತೆ ಸೂಜಿಯಿಂದ ಚುಚ್ಚಿ ರಂಧ್ರಮಾಡಿ ಅಥವಾ ಡ್ರಿಪ್‌ಗೆ ಹಾಕಿರುವಂತೆ ರಂಧ್ರದ ಸೂಚಿ ಚುಚ್ಚಿ.  ಆಮೇಲೆ ಸೆಣಬಿನ ದಾರದ ಉದ್ದವನ್ನು ಸರಿಗೊಳಿಸಿ ನೀರು ಬೇಕಾದಷ್ಟೇ ಬೀಳುವಂತೆ ಮಾಡಿರಿ.

ಇದೇ ರೀತಿ ಗಡಿಗೆಯನ್ನು ತೂಗುಹಾಕಿ ಸೆಣಬಿನ ದಾರವನ್ನು ಸದಾ ನೀರಿಗೆ ಮುಟ್ಟಿರುವಂತೆ ಮಾಡಿ ನೀರನ್ನು ಗಿಡಗಳಿಗೆ ಬೇಕಾದಷ್ಟೇ ಬೀಳುವಂತೆ ಮಾಡಬಹುದು.

ಸೈಫನ್ಡ್ರಿಪ್’’ ನೀರಾವರಿ

ಹಾಳಾದ ಟ್ಯೂ‌ಬ್‌ಲೈಟಿನ ಟ್ಯೂಬ್‌ಗಳನ್ನು ತೆಗೆದುಕೊಳ್ಳಿ.  ಒಂದು ಕಡೆ ಬಾಯಿ ತೆರೆದಿರಲಿ ಅಥವಾ ಉದ್ದನೆಯ ಡ್ರಿಪ್‌ ಪೈಪ್ ಸಿಕ್ಕಿಸುವಷ್ಟು ರಂಧ್ರಮಾಡಿ ಡ್ರಿಪ್‌ಪೈಪನ್ನು ಟ್ಯೂಬ್‌ಲೈಟಿನ ಕೊಳವೆಯ ತಳದವರೆಗೂ ಹೋಗುವಂತೆ ಮಾಡಿ. ಮತ್ತೊಂದು ತುದಿ ಗಿಡಗಳ ಬುಡಕ್ಕಿರಲಿ.  ಗಿಡಗಳ ಬುಡದಲ್ಲಿರುವ ಡ್ರಿಪ್‌ ಪೈಪಿನ ತುದಿಗೆ ನೀರು ನಿಯಂತ್ರಕವನ್ನು ಜೋಡಿಸಿ.  ಗಿಡಗಳ ಪಕ್ಕ ಟ್ಯೂಬ್‌ಲೈಟನ್ನು ನೆಟ್ಟಗೆ ನಿಲ್ಲಿಸಿ ನೀರು ತುಂಬಿಡಿ.  ಈ ಮಾದರಿ ಬಳ್ಳಿಗಳಿಗೆ ಉಪಯುಕ್ತ, ಕೆಲವು ಜಾತಿಯ ಬಳ್ಳಿಗಳು ಟ್ಯೂಬ್‌ಲೈಟ್‌ ಬಳಸಿಯೇ ಮೇಲೇರುತ್ತವೆ.  ಆಗ ಅದರ ಸೊಗಸೇ ಬೇರೆ.

ತುಂತುರುನೀರಾವರಿ

ಕೆಲವು ನೀರಿನ ಬಾಟಲಿಗಳ ತಳಭಾಗ ಉಬ್ಬಿರುತ್ತದೆ.  ಅಂದರೆ ನಾಲ್ಕು ಅಂಡುಗಳಿರುತ್ತವೆ.  ಅಂತಹ ಬಾಟಲಿಗಳು ತುಂತುರು ನೀರಾವರಿಗೆ ಬಹಳ ಅನುಕೂಲ.  ಪ್ರತಿ ಅಂಡಿಗೂ ಸೂಜಿಯಿಂದ ಚುಚ್ಚಿ ಸೂಕ್ಷ್ಮ ರಂಧ್ರ ಮಾಡಿರಿ.  ಬಾಟಲಿಗೆ ನೀರು ತುಂಬಿರಿ.  ಬಾಟಲಿ ಸೋರುವುದಿಲ್ಲ.  ಆದರೆ ಬಾಟಲಿಯ ಮಧ್ಯಭಾಗವನ್ನು ಕೈಯಲ್ಲಿ ಹಿಡಿದು ಒತ್ತಿದರೆ ಅಂಚಿನಲ್ಲಿರುವ ಸೂಕ್ಷ್ಮರಂಧ್ರಗಳಿಂದ ಪಿಚ್ಚನೆ ನೀರು ಹಾರುತ್ತದೆ.  ಅಗತ್ಯಕ್ಕೆ ತಕ್ಕಷ್ಟು ರಂಧ್ರಗಳನ್ನು ಮಾಡಿಕೊಳ್ಳಿ.  ಈ ರೀತಿಯ ನೀರಾವರಿ ಪದ್ಧತಿಯು ಆಗತಾನೆ ಬಿತ್ತಿದ ಬೀಜಗಳಿಗೆ, ಚಿಕ್ಕ ಚಿಕ್ಕ ಸಸಿಗಳಿಗೆ ನೀರುಣಿಸಲು ಸಹಕಾರಿ.

ಹನಿನೀರಾವರಿ

ಮನೆಯಲ್ಲಿ ವ್ಯರ್ಥವಾದ ಎಣ್ಣೆ ಕ್ಯಾನುಗಳಿದ್ದರೆ ಅದರ ತಳಭಾಗಕ್ಕೆ ಡ್ರಿಪ್‌ ಟ್ಯೂಬ್‌ಗಳನ್ನು ಅಳವಡಿಸಿರಿ.  ನೀರು ನಿಯಂತ್ರಕಗಳನ್ನು ಡ್ರಿಪ್‌ ಟ್ಯೂಬ್‌ನ ಮತ್ತೊಂದು ತುದಿಗೆ ಜೋಡಿಸಿ ಕ್ಯಾನ್‌ಗೆ ನೀರು ತುಂಬಿರಿ.

ಹೀಗೆ ಗಿಡಗಳಿಗೆ ಹನಿ ನೀರು ಬೀಳುವಂತೆ ಮಾಡಬಹುದು.  ಟ್ಯೂಬ್‌ಲೈಟ್‌ ಕೊಳವೆಯ ಎರಡೂ ಕಡೆ ಬಾಯಿ ತೆರೆದಿದ್ದರೆ, ಒಂದು ಬಾಯಿಗೆ ನೀರು ತುಂಬಬೇಕು.  ನಂತರ ಗಿಡಗಳ ಪಕ್ಕ ನೆಲಕ್ಕೆ ತಾಗುವಂತೆ ನಿಲ್ಲಿಸಿದರಾಯಿತು. ನೀರು ಹನಿ ಹನಿಯಾಗಿ ಇಳಿಯುತ್ತಿರುತ್ತದೆ.

ಎರಡು ಲೀಟರ್‌ ನೀರಿನ ಬಾಟಲಿಯಿದ್ದರೆ, ಮುಚ್ಚಳಕ್ಕೆ ಚಿಕ್ಕ ರಂಧ್ರ ಮಾಡಿರಿ.  ಮುಚ್ಚಳದ ಭಾಗ ನೆಲದ ದಿಕ್ಕಿಗೆ ಮಾಡಿ ಗಿಡಗಳ ಪಕ್ಕದಲ್ಲಿಡಿ.  ಬಾಟಲಿಯ ತಳಭಾಗವನ್ನು ಕತ್ತರಿಸಿರಿ.  ಮೇಲಿನಿಂದ ನೀರು ತುಂಬಿರಿ.

ಪ್ರತಿ ನೀರಾವರಿ ಪದ್ಧತಿ ಅಳವಡಿಸಿದ ಮೇಲೆ ನೀರು ಹನಿಯುವ ವೇಗ, ಸಮಯಗಳನ್ನು ದಾಖಲಿಸಿರಿ.  ಹೀಗೆ ಮಾಡುವುದರಿಂದ ನೀರು ಹನಿಯುವ ಪ್ರಮಾಣ, ಯಾವ ಗಿಡಗಳಿಗೆ ಎಷ್ಟು ನೀರು ಬೇಕು, ಯಾವ ರೀತಿ, ಹೇಗೆ ಒಳ್ಳೆಯದು, ಯಾವ ಗಿಡಗಳಿಗೆ ಯಾವ ರೀತಿ ಸೂಕ್ತ ಎಂಬೆಲ್ಲಾ ನಿರ್ಣಯಗಳನ್ನು ನೀವೇ ಮಾಡಬಹುದು.

ದಂಡಗಿಯವರ ಬಳಿ ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ವಿಧಾನಗಳಿವೆ.  ಅವರನ್ನು ಖುದ್ದಾಗಿ ಭೇಟಿ ಮಾಡಿದರೆ ತಿಳಿದುಕೊಳ್ಳಬಹುದು.  ಅವರ ಕೈದೋಟದಲ್ಲಿ ಅಳವಡಿಸಿದ ಹತ್ತಾರು ಪದ್ಧತಿಗಳನ್ನು ನೋಡಿ ನಿಮಗೆ ಬೇಕಾದ ಪದ್ಧತಿ ಆರಿಸಿಕೊಳ್ಳಬಹುದು.

ಇಷ್ಟೆಲ್ಲಾ ಮಾಡಿದ್ದೀರ… ಕೈ ಎಲ್ಲಾ ಮಣ್ಣಾಗಿದೆ… ಕೈತೊಳೆದುಕೊಳ್ಳಲೇಬೇಕಲ್ಲ, ರೀ ಸರ್‍ರ… ಅಲ್ಲಿ ಇಲ್ಲಿ ನಲ್ಲಿ ಹುಡುಕಬ್ಯಾಡ್ರಿ ಮತ್ತ… ನಿಮ್ಮ ಪಕ್ಕ ದಂಡಗಿಯವರು ಒಂದು ಬಾಟಲಿ ಹಿಡಿದು ನಿಂತಾರ ನೋಡ್ರಿ.  ಮಣ್ಣಾದ ಕೈ ಮುಂದ್‌ ಹಿಡೀರಿ.  ದಂಡಗಿಯವರು ಕೈಲಿರೋ ಬಾಟಲಿ ಒತ್ತುತ್ತಾರೆ.  ಅದರೊಳಗಿರೋ ಕೊಳವೆಯಿಂದ ಪಿಚಕ್ಕನೆ ನೀರು ಬರುತೈತ್ರಿ ನೋಡ್ರಿ.  ಮಣ್ಣು ಹೋತ ಇಲ್ಲಾ, ಏ ಬಿಡ್ರಿ, ಇನ್ನೊಮ್ಮೆ ಒತ್ತುತ್ತಾರೆ… ಹತ್ತು ಸಾರಿ ಒತ್ತಿದ್ರೇನು… ಮಣ್ಣಾದ ಕೈ ತೊಳಿಯಾಕ ಎಷ್ಟು ನೀರು ಬೇಕು ಗೊತ್ತಾತಿಲ್ಲೋ…

ಒಮ್ಮಿ ಒತ್ತಿದ್ರ ಮೂರು ಮಿಲಿಲೀಟರ್‌ ನೀರು ಬರತೈತ್ರಿ.  ಹತ್ತು ಸಾರಿ ಅಂದ್ರ ೩೦ ಮಿಲಿಲೀಟರ್‌ ಸಾಕು ಅಂತಾತು.  ನೀವು ನಲ್ಲಿ ಕೆಳಗೆ ನಿಂತು ಬಿಟ್ಕೋಂಡ್ರಂದ್ರ ಒಮ್ಮಿಗೆ ಎರಡು ಲೀಟರ್‌ ನೀರು ಗೋವಿಂದಂ…

ನೀರು ಉಳಿತಾಯ ಮಾಡಲು ಹೀಗೆ ಎರಡು ಬಾಟಲಿಗೆ ಪೈಪ್‌ ಜೋಡಿಸಿ ನೀರು ತುಂಬಿ ಇಟ್ಟುಕೊಂಡರೆ ಒಳ್ಳೆಯದು.  ಒಮ್ಮೆಗೆ ಕೈ ತೊಳೆಯಲು ಐದು ಮಿಲಿಲೀಟರ್‌ ನೀರು ಹೊರಬರುತ್ತದೆ.  ಈ ರೀತಿ ೩೦೦ ಮಿಲಿಮೀಟರ್‌ನ ಒಂದು ಬಾಟಲಿಯಿಂದ ೫೦ ಜನ ಕೈತೊಳೆದುಕೊಳ್ಳಬಹುದು ಎಂದು ಹೇಳುತ್ತಾರೆ.