Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ನರಪತ್‌ಚಂದ್ ಸೋಲಂಕಿ

ದೃಷ್ಟಿಹೀನರ ಚಿಕಿತ್ಸೆಯಲ್ಲಿ ಅಹರ್ನಿಶಿ ತೊಡಗಿಸಿಕೊಂಡು ಹತಭಾಗ್ಯ ಬಡಜನತೆಯ ಸೇವೆಯಲ್ಲಿ ಧನ್ಯತೆಯನ್ನು ಕಾಣುತ್ತಿರುವ ಸಮಾಜಸೇವಕ ನೇತ್ರವೈದ್ಯ ಡಾ|| ನರಪತ್‌ಚಂದ
ಸೋಲಂಕಿ ಅವರು.
ಮಹಾವೀರ ನೇತ್ರ ಚಿಕಿತ್ಸಾಲಯದಲ್ಲಿ ೧೯೮೭ರಲ್ಲಿ ಪ್ರಧಾನ ಸರ್ಜನ್ ಆಗಿ ಸೇವೆ ಪ್ರಾರಂಭಿಸಿದ ಶ್ರೀ ಸೋಲಂಕಿ ಅವರು ಬೆಂಗಳೂರಿನ ಅನೇಕ ಚಿಕಿತ್ಸಾಲಯಗಳಲ್ಲಿ ತಮ್ಮ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ವ್ಯಾಸಂಗ ಮಾಡುತ್ತಿದ್ದಾಗಲೇ ಹಿರಿಯ ವೈದ್ಯರೊಡಗೂಡಿ ನೂರಾರು ನೇತ್ರ ಚಿಕಿತ್ಸಾ ಶಿಬಿರಗಳಲ್ಲಿ ಪಾಲ್ಗೊಂಡು ಅನುಭವ ಗಳಿಸಿಕೊಂಡ ಶ್ರೀಯುತರು ೧೯೯೦ನೇ ಇಸವಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಪ್ರಾರಂಭಿಸಿ ಎಂಟು ವರ್ಷಗಳ ಅವಧಿಯಲ್ಲಿ ೪೦ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದಾರೆ.
‘ಪ್ರಾಜೆಕ್ಟ್ ದೃಷ್ಟಿ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿ ಜಾತಿ ಮತ, ವರ್ಗಗಳ ಭೇದವಿಲ್ಲದೇ ಕಡು ಬಡವರಿಗೆ, ಉಚಿತ ನೇತ್ರ ಚಿಕಿತ್ಸೆಯನ್ನು ಪ್ರಾರಂಭಿಸಿ ಈವರೆಗೆ ೪೦ ಸಾವಿರ ಮಂದಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಶ್ರೀಯುತರದು.
ಪ್ರತಿ ತಿಂಗಳೂ ಇಬ್ಬರು ಕಿರಿಯ ವೈದ್ಯರಿಗೆ ವಿಶೇಷವಾದ ತರಬೇತಿಯನ್ನು ನೀಡುವ ಮೂಲಕ ದೃಷ್ಟಿದಾನ ಚಳುವಳಿಯಲ್ಲಿ ತಮ್ಮೊಡನೆ ನೂರಾರು ಕೈಗಳೂ ಸೇರಿಕೊಳ್ಳಲೆಂಬ ಉದಾತ್ತ ಧೈಯವನ್ನು ಹೊಂದಿರುವ ಶ್ರೀ ಸೋಲಂಕಿಯವರಿಗೆ ಸೇವಾ ಶಿರೋಮಣಿ, ಕರ್ನಾಟಕ ಜ್ಯೋತಿ ಪ್ರಶಸ್ತಿ, ಸಮಾಜ ಭೂಷಣ ಮೊದಲಾದ ಪುರಸ್ಕಾರಗಳು ಸಂದಾಯವಾಗಿವೆ.
“ನೋಡುವ ಹಕ್ಕು ಪ್ರತಿ ವ್ಯಕ್ತಿಗೂ ಇದೆ’ ಎಂಬ ಧೈಯ ವಾಕ್ಯವನ್ನು ಘೋಷಿಸಿ ಅಂತಹ ಉನ್ನತ ಗುರಿಯನ್ನು ಸಾಧಿಸುವೆಡೆ ತಮ್ಮ ಜೀವನವನ್ನು ಮುಡಿಪಾಗಿರಿಸಿರುವ ಮಾನವೀಯ ಅಂತಃ ಕರಣದ ಅಪರೂಪದ ನೇತ್ರವೈದ್ಯ ಡಾ|| ನರಪತ್‌ಚಂದ ಸೋಳಂಕಿ ಅವರು.