Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ನಾ.ಸೋಮೇಶ್ವರ

‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕವೇ ಜನಪ್ರಿಯರಾಗಿರುವ ಸಾಧಕರು ನಾ. ಸೋಮೇಶ್ವರ, ವೈದ್ಯರು, ಲೇಖಕರು, ರಸಪ್ರಶ್ನೆ ತಜ್ಞರಾಗಿ ಅವರದ್ದು ನಾಡಿಗೆ ನಾಡೇ ಮೆಚ್ಚುವಂತಹ ಬಹುಶ್ರುತ ಸಾಧನೆ.
ಬೆಂಗಳೂರು ಮೂಲದವರಾದ ನಾ.ಸೋಮೇಶ್ವರ ಹುಟ್ಟಿದ್ದು ೧೯೫೫ರ ಮೇ ೧೪ ರಂದು. ನಾರಪ್ಪ ಮತ್ತು ಅಂಜನಾ ದಂಪತಿ ಸುಪುತ್ರರು, ಅಧ್ಯಯನ, ಕ್ರಿಯಾಶೀಲತೆ ಮತ್ತು ಪ್ರತಿಭಾಸಂಪನ್ನತೆ ಹುಟ್ಟಿನಿಂದಲೇ ಬಂದ ಗುಣವಿಶೇಷ. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನದಿ’ ಮಾಸಿಕ ಪತ್ರಿಕೆ ಹೊರತಂದ ಪ್ರತಿಭಾವಂತರು. ಬಿಎಸ್ಸಿ ಪದವಿ ಬಳಿಕ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದವರು.ವೃತ್ತಿಯಿಂದ ವೈದ್ಯರಾದ ಸೋಮೇಶ್ವರ ಫಾರ್ಮಸಿಟಿಕಲ್ ಕಂಪನಿಯ ಸಲಹೆಗಾರರೂ ಕೂಡ.ಬರವಣಿಗೆ-ಸಾಮಾಜಿಕ ವಿಷಯಗಳಲ್ಲಿ ವಿಶೇಷ ಆಸಕ್ತಿ.ಅವರೊಳಗಿನ ಜ್ಞಾನಶೀಲತೆ ಬೆಳಕಿಗೆ ಬಂದಿದ್ದು ‘ಥಟ್ ಅಂತ ಹೇಳಿ’ ಕಾರ್ಯಕ್ರಮದಿಂದಲೇ. ೨೦೦೪ರಲ್ಲಿ ಚಂದನ ವಾಹಿನಿಯಲ್ಲಿ ಆರಂಭವಾದ ಈ ಜ್ಞಾನ ಪ್ರಸರಣದ ರಸಪ್ರಶ್ನೆ ಕಾರ್ಯಕ್ರಮ ೧೫ ವರ್ಷಗಳಿಂದಲೂ ವಾರಕ್ಕೆ ಐದು ದಿನ ಪ್ರಸಾರವಾಗುತ್ತಿದ್ದು ೩೨೦೦ಕ್ಕೂ ಹೆಚ್ಚು ಕಂತುಗಳನ್ನು ದಾಟಿ ಮುನ್ನಡೆದಿರುವುದು ವಿದ್ಯುನ್ಮಾನ ಮಾಧ್ಯಮದ ಇತಿಹಾಸದಲ್ಲೇ ಅದ್ವಿತೀಯ ದಾಖಲೆ. ಲೇಖಕರಾಗಿಯೂ ಹಲವು ಪುಸ್ತಕಗಳನ್ನು ಹೊರತಂದಿರುವ ನಾ. ಸೋಮೇಶ್ವರ ಅವರು ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಭೂಷಿತರು.