ಪೂಜ್ಯ ಗುರುವರ್ಯ ಗಾನಯೋಗಿ-ಶಿವಯೋಗಿ ಡಾ. ಪುಟ್ಟರಾಜ ಗವಾಯಿಗಳವರು ೧೯೧೪ ಮಾರ್ಚ್ ೩ರಂದು ಧಾರವಾಡ ಜಿಲ್ಲೆಯ ಕರ್ಜಗಿಯ ಹತ್ತಿರದ ದೇವಗಿರಿ ಎಂಬ ಹಳ್ಳಿಯಲ್ಲಿ ಜನ್ಮ ತಾಳಿದರು. ಇವರು ಕಲಾಪ್ರಪಂಚಕ್ಕೆ ಅತ್ಯಮೂಲ ಅನರ್ಘ್ಯ ರತ್ನ ವಾಗಿದ್ದಾರೆ.

ಚಿಕ್ಕಂದಿನಲ್ಲಿಯ ತಂದೆಯನ್ನು ಕಳೆದುಕೊಂಡ ಪುಟ್ಟರಾಜ ಸೋದರಮಾವಂದಿರಾದ ಶ್ರೀ ಚಂದ್ರಶೇಖರಯ್ಯನವರ ಪೋಷಣೆಯಲ್ಲಿ ಬೆಳೆದರು. ಹುಟ್ಟುವಾಗ ಹುಡುಗನಿಗೆ ಕಣ್ಣುಗಳೆರಡೂ ಕಾಣುತ್ತಿದ್ದರೂ ಬಾಲ್ಯದಲ್ಲಿ ಸಿಡುಬಿನ ಖಾಯಿಲೆ ಬಂದು ಕಣ್ಣುಗಳ ಕಾಣದಂತಾಗಲು, ತಾಯಿಗೆ ಮತ್ತು ಮಾವನಿಗೆ ಆದ ದುಃಖ ವರ್ಣಿಸಲಾಗದ್ದು. ಅಂದು ಅವರಿಗೇನು ಗೊತ್ತು ‘ಪುಟ್ಟರಾಜ ಜನಿಸಿ ಬಂದ, ಕಾವ್ಯ ನಾಟ್ಯ ಗಾನದಿಂದ ಜಗವ ಬೆಳಕ ಮಾಡಬಂದ’ ಎಂದು ಜನರು ಮುಂದೆ ಹಾಡುವರೆಂದು! ಹೀಗೆ ದಿನ ಕಳೆದಂತೆ ದುಃಖಿಸಿ ಫಲವಿಲ್ಲವೆಂದು ಚಂದ್ರಶೇಖರಯ್ಯನವರು ಅಳಿಯ ಪುಟ್ಟಯ್ಯನಿಗೆ ಸಂಗೀತ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಶ್ರೀ ಚಂದ್ರಶೇಖರಯ್ಯನವರು ಗುರುವರ್ಯ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಶಿಷ್ಯರಾಗಿದ್ದವರು. ಅನಂತರ ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಯುವುದರಲ್ಲೇ ದೇವಗಿರಿಗೆ ಭಿಕ್ಷಕ್ಕೆ ದಯಮಾಡಿಸಿದ ಶ್ರೀ ಪಂಚಾಕ್ಷರಿ ಗವಾಯಿಗಳವರು ಬಾಲಕ ಪುಟ್ಟಯ್ಯನನ್ನು ನೋಡಿ, ಆತನ ಸಂಗೀತ ವಿದ್ಯಾಚತುರತೆಯನ್ನು ಮನಗಂಡು ಪುಟ್ಟರಾಜರ ತಾಯಿ ಮತ್ತು ಮಾವನವರ ಒಪ್ಪಿಗೆ ಮೇರೆಗೆ ಬಾಲಕ ಪುಟ್ಟಯ್ಯನನ್ನು ತಮ್ಮ ನೆಚ್ಚಿನ ಶಿಷ್ಯಮಾಲೆಯಲ್ಲಿ ಸೇರಿಸಿಕೊಂಡರು. ಪುಟ್ಟಯ್ಯನನ್ನು ಗುರುಗಳಿಗೆ ಒಪ್ಪಿಸುವಾಗ “ಗುರುದೇವಾ ಈ ಕಣ್ಣಿಲ್ಲದ ಕಂದನನ್ನು ನಿನ್ನ ಚರಣಗಳಿಗೆ ಒಪ್ಪಿಸಿದ್ದೇವೆ. ಇವನು ನೇತ್ರಹೀನವಾಗಿರುವುದು ನಮಗೆ ಕಳವಳವಾಗಿದೆ. ಇದೆಲ್ಲವನ್ನೂ ಸರಿಪಡಿಸಲು ನಿಮ್ಮ ವಿನಃ ಬೇರಿಲ್ಲ. ಈ ಮಗುವಿನ ಮೇಲೆ ಕೃಪೆ ಮಾಡಬೇಕು” ಎಂದು ಪುಟ್ಟರಾಜರ ಮಾವ ಮತ್ತು ತಾಯಿಯವರು ಕಣ್ಣೀರು ಸುರಿಸಿ ಗುರುವರ್ಯ ಶ್ರೀ ಪಂಚಾಕ್ಷರ ಗವಾಯಿಗಳಿಗೆ ನಮಸ್ಕರಿಸಿದರು. ಪಂಚಾಕ್ಷರ ಗವಾಯಿಗಳು ಇವರ ಮಾತಿಗೆ ನಕ್ಕು “ನೀವೇನೂ ಚಿಂತಿಸಬೇಕಾಗಿಲ್ಲ, ಇವನ ಮೇಲೆ ಕುಮಾರೇಶ್ವರನ ಕೃಪೆ ಸಂಪೂರ್ಣವಾಗಿದೆ. ಈತನು ತನ್ನ ಜೀವನವನ್ನು ಸುಗಮವಾಗಿ ಮಾಡಿಕೊಳ್ಳುವುದರೊಂದಿಗೆ ಜಗತ್ತಿನ ಸಹಸ್ರಾರು ಜನರ ಜೀವನದ ನಿರ್ವಹಣೆಗೆ ಕಾರಣೀಭೂತನಾಗುವಂತಹ ಭಾಗ್ಯಶಾಲಿಯಾಗಿದ್ದಾನೆ. ಇವನಿಂದ ಕರ್ನಾಟಕದ ಕಲೆ ಜೀರ್ಣೋದ್ಧಾರವಗಬೇಕಾಗಿದೆ’ ಎಂದು ಹೇಳಿ ಅವರನ್ನು ಹರಸಿ ಪುಟ್ಟರಾಜರೊಡನೆ ಗವಾಯಿಗಳು ಅಲ್ಲಿಂದ ಹೊರಟರು.

ತರುವಾಯ ಪುಟ್ಟರಾಜರು ಗುರುಗಳ ಪೂರ್ಣ ಕೃಪೆಗೆ ಪಾತ್ರನಾಗಿ ಸಂಗೀತ ಸಾಹಿತ್ಯಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಸಂಪಾದಿಸಿಕೊಂಡುದ್ದಲ್ಲದೇ, ಪಂಚಾಕ್ಷರಿ ಗವಾಯಿಗಳವರಂತೆ ಬ್ರಹ್ಮಚರ್ಯ, ಆಚಾರ, ನೇಮನಿಷ್ಠೆಗಳಲ್ಲಿ ಶ್ರದ್ಧೆ ವಹಿಸಿ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಚಾಚೂ ತಪ್ಪದಂತೆ ನಡೆದು ಹಲವಾರು ಕುಟುಂಬಗಳಿಗೆ ಮಾರ್ಗದರ್ಶಕರಾಗಿ ಕರ್ನಾಟಕದ ಕಲಾಪಿಪಾಸು ಬಡಮಕ್ಕಳ ಕಾಮಧೇನುವಾಗಿದ್ದಾರೆ. ಸಂಗೀತ, ಸಾಹಿತ್ಯ ಕಲಾ ಮಹಾವಿಶಾರದ, ಉಭಯ ಗಾಯನಾಚಾರ್ಯ, ತ್ರಿಭಾಷಾ ಕವಿ, ಡಾ. ಪುಟ್ಟರಾಜ ಗವಾಯಿಗಳು ಪಂಚಾಕ್ಷರಿ ಗವಾಯಿಗಳಂತೆ ಕುರುಡು ಮಕ್ಕಳಿಗೆ ಅನ್ನ-ವಸ್ತ್ರ-ವಸತಿಗಳನ್ನಿತ್ತು, ಸಂಗೀತ, ನಾಟಕ ಇತ್ಯಾದಿ ಕಲೆಗಳಲ್ಲಿ ಜಾತಿ-ಕುಲಗಳ ಭೇದವನ್ನೆಣಿಸದೆ ಕೇವಲ ನೀತಿಗೇನೇ ಬೆಲೆ ಕೊಟ್ಟು ವಿದ್ಯಾದಾನ ಮಾಡುತ್ತಾ ಪಂಚಾಕ್ಷರ ಗವಾಯಿಗಳಿಂದ ಸ್ಥಾಪಿತವಾದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯ ಹಾಗೂ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಇವುಗಳ ಕುಲಪತಿಗಳಾಗಿ ಕನ್ನಡತಾಯಿಯ ಸತ್ಪುತ್ರರಾಗಿದ್ದಾರೆ. ಇಂದು ಪುಣ್ಯಾಶ್ರಮದಲ್ಲಿ ೪೫೦ ವಿದ್ಯಾರ್ಥಿಗಳಿರುವರು. ಅವರಲ್ಲಿ ೧೫೦ ಅಂಧರು, ೭೫ ಅಂಗವಿಕಲರು ಇದ್ದಾರೆ.

ಒಮ್ಮೆ ಗವಾಯಿಗಳ ನಾಟಕ ಸಂಸ್ಥೆ ಕೊಪ್ಪಳದಲ್ಲಿ ಮೊಕ್ಕಾಂ ಮಾಡಿತ್ತು. ಆಗ ಸದಾಶಿವರಾವ ಗರೂಡರು ‘ಸತ್ಯ ಸಂಕಲ್ಪ’ ನಾಟಕವನ್ನು ಹೊಸದಾಗಿ ಅಭ್ಯಾಸ ಮಾಡಿ ಆಡಬೇಕಿತ್ತು. ಆ ನಾಟಕದ ಉದ್ಘಾಟನೆಯಂದು ಗರುಡರು ಹಮ್ಮಿಗಿ ನೀಲಕಂಠಪ್ಪನವರು ಮತ್ತು ತಮ್ಮೆಲ್ಲ ವಿದ್ಯಾರ್ಥಿಗಳೊಡನೆ ಪಾತ್ರವಹಿಸಿದ್ದರು. ಆಗ್ಗೆ ಪಂಚಾಕ್ಷರಿ ಗವಾಯಿಗಳವರು ಸಂಸ್ಥೆಯ  ಭಾರವನ್ನು ಪುಟ್ಟರಾಜರಿಗೆ ಒಪ್ಪಿಸಿ ತಾವು ಗದಗಿನಲ್ಲಿ ಅನುಷ್ಠಾನಕ್ಕೆ ಕುಳಿತು ನಿಶ್ಚಿಂತೆಯಿಂದ ಇದ್ದವರು ಆ ದಿನ ತಾವೂ ಸಹ ಈ ಹೊಸ ನಾಟಕವನ್ನು ನೋಡಲು ಗದಗಿನಿಂದ ಕೊಪ್ಪಳಕ್ಕೆ ಬಂದಿದ್ದರು. ಜನಗಳ ಒತ್ತಾಯದ ಮೇರೆಗೆ ನಾಟಕದ ಮಧ್ಯೆ ಪುಟ್ಟರಾಜರ ಹಾರ್ಮೋನಿಯಂ, ಶ್ರೀ ಪಂಚಾಕ್ಷರಿ ಗವಾಯಿಗಳ ತಬಲಾ ವಾದನ ಶ್ರೋತೃಗಳನ್ನು ಆನಂದಪರವಶರಾಗುವಂತೆ ಮಾಡಿ ಮೈಮರೆಸಿತು. ಅರ್ಧ ಘಂಟೆ ಮಾತ್ರ ನಾಟಕದ ಮಧ್ಯೆ ಕಾರ್ಯಕ್ರಮ ಸಾಕೆಂದು ನಿಶ್ಚಯಿಸಲಾಗಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ಒಂದೇ ರಾಗ ಎರಡು ಗಂಟೆ ಕಾಲ ನುಡಿಸಿದರು. ಪಂಚಾಕ್ಷರಿ ಗವಾಯಿಗಳಂತೂ ತಬಲಾ ಬಾರಿಸುತ್ತಾ ಹಾರ್ಮೋನಿಯಂ ವಾದ್ಯ ಕೇಳಿ, ಕುಳಿತೇ ಕುಣಿಯುತ್ತಿದ್ದರು. ಗುರುಶಿಷ್ಯರ ಆ ಕಾರ್ಯಕ್ರಮ ನಾನಂದು ಕೇಳದಿದ್ದರೆ ಮುಂದೆ ಎಂದೂ ಅಂಥ ಅವಕಾಶ ಸಿಕ್ಕುತ್ತಿರಲಿಲ್ಲ. ಅದೆಂಥ ಸುಯೋಗ! ಕೊನೆಗೆ ಶ್ರೋತೃಗಳು ಪುಟ್ಟರಾಜರ ಬಳಿ ತಮ್ಮ ಆತ್ಯಾನಂದವನ್ನು ತಡೆಯದೆ ಧನ್ಯವಾದಗಳನ್ನರ್ಪಿಸಲು ಬಂದಾಗ ಅವರು “ಈಗ ನಾನು ನುಡಿಸಿದ್ದರಲ್ಲಿ ನನ್ನದೇನಿಲ್ಲ. ಇದೆಲ್ಲಾ ನಮ್ಮೆಲ್ಲರಿಗೆ ಪರಮಗುರುವಾಗಿರುವ ಶ್ರೀ ಪಂಚಾಕ್ಷರಿ ಗವಾಯಿಗಳವರ ಕೃಪೆ’ ಎಂದು ನಿರಂಹಕಾರದಿಂದ ಹೇಳಿದ ಸರ್ವಾರ್ಪಣ ಬುದ್ಧಿಯ ಉದ್ಗಾರವನ್ನು ಕೇಳಿ ಜನ ಬೆರಗಾದರು. ಪುಟ್ಟರಾಜರ ಗವಾಯಿಗಳವರಿಗೆ ಹಿಂದಿ ಭಾಷೆಯಲ್ಲಿ ಅತ್ಯದ್ಭುತ ಕವಿತಾ ಸಾಮರ್ಥ್ಯವಿತ್ತು. ಇವರು ಗದ್ಯ ಸಾಹಿತ್ಯವನ್ನು ಬರೆಯುವುದು ಮಾತ್ರವಲ್ಲದೇ ಹಿಂದಿಯಲ್ಲಿ ಅನೇಕ ಉತ್ತಮ ಚೀಜುಗಳನ್ನು ರಚಿಸಿ ಸಂಗೀತ ಪ್ರಪಂಚಕ್ಕೆ ಮಹೋನ್ನತೆ ಸೇವೆ ಸಲ್ಲಿಸುತ್ತಿದ್‌ದಾರೆ. ಇವರು ರಚಿಸಿದ ಅನೇಕ ಚೀಜುಗಳು ಬಳಕೆಯಲ್ಲಿರುವುದಲ್ಲದೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅವರ ಶಿಷ್ಯ-ಪ್ರಶಿಷ್ಯರಿಂದ ಪ್ರಸಾರವಾಗಿದೆ. ‘ಕಿಶೋರ’ ಎಂಬ ಅಂಕಿತದಲ್ಲಿ ಇವರು ಚೀಜುಗಳನ್ನು ರಚಿಸಿದ್ದಾರೆ. ಈ ರೀತಿ ಇವರು ಕೇವಲ ಸಂಗೀತ ವಿದ್ವಾಂಸರಾಗಿರದೆ ವಾಗ್ಗೇಯಕಾರರೂ ಆಗಿರುವುದು ತುಂಬಾ ಹೆಮ್ಮೆಯ ಮಾತಾಗಿದೆ.

ಆದರೆ ನಮ್ಮ ಜನ ಹಿತ್ತಲ ಗಿಡ ಮದ್ದಲ್ಲ ಎಂಬ ನಾಣ್ಣುಡಿಗೆ ಅನ್ವರ್ಥವಾಗಿದ್ದಾರೆ. ನಮ್ಮವರು ಎಷ್ಟೇ ದೊಡ್ಡವಾರಾಗಿರಲಿ, ಪ್ರತಿಭಾವಂತರಾಗಿರಲಿ, ಅವರಿಗೆ ಗೌರವ ತೋರಿಸಬೇಕೆಂದರೆ ಖಂಡಿತ ಮನಸ್ಸು ಬರುವುದಿಲ್ಲ. ಬೇರೆ ರಾಜ್ಯದವರ/ದೇಶದವರ ಸಾಹಿತ್ಯ ಕಲೆ ಇತ್ಯಾದಿಗಳು ಯಾವ ಮಟ್ಟದ್ದಲ್ಲಿದರೂ ಆ ಹಳಸಿದ ಅನ್ನವೇ ಅವರಿಗೆ ಅಮೃತ. ಆದರೆ ಪುಟ್ಟರಾಜರಿಗೆ ಯಾರ ಹೊಗಳಿಕೆ-ತೆಗಳಿಕೆಗಳೂ ಅನಗತ್ಯ. ಅವರು ಮಾಡುತ್ತಿರುವ ಕಲಾಸೇವೆಗೆ ಅವರಿಗೆ ಯಾವ ಪ್ರಶಸ್ತಿ-ಗೌರವ ಕೊಟ್ಟರೂ ಕಮ್ಮಿಯೇ ಸರಿ. ಅವರು ಮನಸ್ಸನ್ನು ಪ್ರತಿಯೊಂದರಲ್ಲೂ ಸಾಕ್ಷಿಯಾಗಿರಿಸಿಕೊಂಡು ಮನವೊಪ್ಪುವಂತೆ ಕಲಾಸೇವೆ ಮಾಡಿ ಇಹ-ಪರಗಳೆರಡಕ್ಕೂ ತಮ್ಮ ಜೀವನವನ್ನು ಜಗತ್ತಿಗೆ ಮಾದರಿಯಾಗುವಂತೆ ಕಲೆಯ ನೆಲೆಯೇ ಆತ್ಮದ ಅರಿವು ಎಂಬ ನಾಣ್ಣುಡಿಯನ್ನು ಸತ್ಯ ಮಾಡಿ ತೋರಿಸಿದ್ದಾರೆ.

ಒಮ್ಮೆ ಗವಾಯಿಗಳ ಶಾಲೆಯ ಮೊಕ್ಕಾಂ ಹೊಸಪೇಟೆಯಲ್ಲಿತ್ತು. ಆಗ ಅಲ್ಲಿನ ಶ್ರೀಮಂತರೊಬ್ಬರು ಪುಟ್ಟರಾಜ ಗವಾಯಿಗಳವರ ಗಾಯನವನ್ನೇರ್ಪಡಿಸಿದ್ದರು. ಕಾರ್ಯಕ್ರಮವು ಸಾರ್ವಜನಿಕರಿಗೆ ಸಂಬಂಧಿಸಿದ ವಿಶಾಲ ಕಟ್ಟಡ ಒಂದರಲ್ಲಿ ನಡೆಯಿತು. ಕಾರ್ಯಕ್ರಮ ಪ್ರಾರಂಭವಾಗುವ ಸ್ವಲ್ಪ ಮುಂಚೆ ಕಾರ್ಯಕ್ರಮವೇರ್ಪಡಿಸಿದ ಶ್ರೀಮಂತನನ್ನು ಕರೆದು ಗವಾಯಿಗಳು ನಿಮ್ಮ ತಾಯಿಯವರು ನಮ್ಮ ಕೀರ್ತನೆ, ಗಾಯನಗಳಿಗೆ ಎಂದೂ ಬರಲು ತಪ್ಪಿದವರಲ್ಲ, ಇಂದೇಕೆ ಬರಲಿಲ್ಲ ಎಂದು ವಿಚಾರಿಸಿದರು. ಆಗ ಶ್ರೀಮಂತನು “ಗುರುದೇವಾ, ನನ್ನ ತಾಯಿಗೆ ತುಂಬಾ ವಯಸ್ಸಾಯಿತು, ಎದ್ದು ಕೂಡುವುದೇ ಇಲ್ಲ. ಸಾಲುದದಕ್ಖೆ ತುಂಬಾ ಖಾಯಿಲೆಯಾಗಿ ಹಾಸಿಗೆ ಹಿಡಿದಿದ್ದಾಳೆ. ಈ ದಿನ ನಿಮ್ಮ ಕಾರ್ಯಕ್ರಮ ಕೇಳಿ ತಮ್ಮ ದಿವ್ಯ ದರ್ಶನಲಾಭ ಪಡೆಯಲಾಗದೆ ಇರುವುದಕ್ಕೆ ವ್ಯಥೆ ಪಟ್ಟಳು” ಎಂದು ಹೇಳಿದ. ಶ್ರೀಮಂತನ ಮಾತಿಗೆ ಗವಾಯಿಗಳು ನಕ್ಕು “ನೀನೇನು ಚಿಂತಿಸಬೇಡ! ಗುರುದೇವನು ಸರ್ವರ ಸತ್ಯಾಕಾಮನೆಗಳನ್ನೂ ಈಡೇರಿಸುವನು” ಎಂದು ಹೇಳಿ ಗಾಯನವನ್ನು ಪ್ರಾರಂಭಿಸಿ ಎಲ್ಲರನ್ನೂ ಸಂತೋಷಗೊಳಿಸಿದ ಮೇಲೆ ಮಂಗಲ ಹಾಡಿದರು. ಕೊನೆಯಲ್ಲಿ ಶ್ರೀಮಂತನ ಆತಿಥ್ಯ ತಾಂಬೂಲ ದಕ್ಷಿಣೆಯನ್ನು ಸ್ವೀಕರಿಸಿ ಅಲ್ಲಿಂದ ತಮ್ಮ ಬಿಡಾರದ ಕಡೆಗೆ ಶಿಷ್ಯರೊಡಗೂಡಿ ಹೊರಟರು. ಶ್ರೀಮಂತನು ಗುರುಗಳು ಹೊರಟುಹೋದನಂತರ ತನ್ನ ಮಿತ್ರರೊಡನೆ ಹರಟೆಹೊಡೆದು ಅಲ್ಲಲ್ಲಿ ಸುತ್ತಾಡಿ ಒಂದು ತಾಸಿನ ನಂತರ ಮನೆಗೆ ಬಂದಾಗ, ಪುಟ್ಟರಾಜರು ಕಾರ್ಯಕ್ರಮವನ್ನು ತೀರಿಸಿಕೊಂಡು, ನೇರವಾಗಿ ತನ್ನ ಮನೆಗೆ ಬಂದು ಒಂದು ಘಂಟೆ ಕಾಲ ಶ್ರೀಮಂತನ ತಾಯಿಗೆ ಸಂಗೀತ ಕೇಳಿಸಿ ಆಕೆಗೆ ಆರ್ಶೀವದಿಸಿ ಕೇವಲ ಒಂದು ನಿಮಿಷ ಮುಂಚೆ ಹೊರಟುಹೋದ ಸುದ್ದಿ ಕೇಳಿ ಅವಾಕ್ಕಾಗಿ, ಹತ್ತು ನಿಮಿಷ ಶಿಲೆಯಂತೆ ನಿಂತುಬಿಟ್ಟ.

ಶ್ರೀ ಪುಟ್ಟರಾಜ ಗವಾಯಿಗಳು ಅನೇಕ ವಾದ್ಯಗಳಲ್ಲಿ ಪಾಂಡಿತ್ಯ ಪಡೆದಿದ್ದಾರೆ. ಹಾಗೂ ಅನೇಕರನ್ನು ವಿವಿಧ ವಾದ್ಯಗಳಲ್ಲಿ ತಯಾರು ಮಾಡಿದ್ದಾರೆ. ಇವರಲ್ಲಿ ತಯಾರಾದ ಅನೇಕ ವಾದ್ಯವಾದನ ಪಟುಗಲು ಭಾರತದ ನಾನಾ ಮೂಲೆಗಳಲ್ಲಿ ಕೀರ್ತಿತವಂತರಾಗಿ ಜೀವನ ನಿರ್ವಹಣೆ ಮೂಡುತ್ತಿದ್ದಾರೆ. ತಬಲಾ, ಸಾರಂಗಿ,ಪಿಟೀಲು, ಹಾರ್ಮೋನಿಯಂ, ಶಹನಾಯಿ, ಸಿತಾರ್, ದಿಲ್‌ರುಬಾ, ಮೃದಂಗ, ಕೊಳಲು ಇತ್ಯಾದಿ ವಾದ್ಯಗಳಲ್ಲಿ ಪ್ರಾವೀಣ್ಯತೆ ಪಡೆದ ಇವರ ಶಿಷ್ಯರನ್ನು ನೋಡಿ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಕಣ್ಣಿಲ್ಲದವರೊಬ್ಬರು ಇಷ್ಟೆಲ್ಲಾ ವಿವಿಧ ವಾದ್ಯಗಳಲ್ಲಿ ಶಿಷ್ಯರನ್ನು ತಯಾರು ಮಾಡಿರುವುದರ ಬಗ್ಗೆ ಆಶ್ಚರ್ಯ ಪಟ್ಟು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಿಂದೆ ಭಾರತದ ಸುಪ್ರಸಿದ್ಧ ಶಹನಾಯಿ ವಾದಕರಾದ ಉಸ್ತಾದ್‌ ಬಿಸ್ಮಿಲ್ಲಾಖಾನ್‌ರ ಕಾರ್ಯಕ್ರಮವು ಗದಗಿನಲ್ಲಿ ಪುಟ್ಟರಾಜ ಗವಾಯಿಗಳವರ ಅಧ್ಯಕ್ಷತೆಯಲ್ಲಿ ನಡೆಯಿತು. ನಂತರ ಖಾನರನ್ನು ಗವಾಯಿಗಳವರು ತಮ್ಮ ಶಾಲೆಗೆ ಆಹ್ವಾನಿಸಿ ತಮ್ಮ ಶಿಷ್ಯ ಗಜೇಂದ್ರಗಡರವರಿಂದ ಶಹನಾಯಿ ವಾದನವನ್ನು ಖಾನರಿಗೆ ಕೇಳಿಸಿದರು. ಖಾನರು ಗಜೇಂದ್ರಗಡರವರ ಶಹನಾಯಿ ವಾದನವನ್ನು ಕೇಳಿ ಸಂತೋಷಭರಿತರಾಗಿ ಪುಟ್ಟರಾಜಗವಾಯಿಗಳನ್ನು ತುಂಬಾ ಹೊಗಳಿದರು. ಇಂತಹ ರಸ ನಿಮಿಷಗಳು ಗವಾಯಿಗಳ ಜೀವನದಲ್ಲಿ ಸಾವಿರಾರು. ಆದರೂ ಗವಾಯಿಗಳಿಗೆ ಮಾತ್ರ ಹೊಗಳಿದರೂ ಸಂತೋಷ. ಇಲ್ಲದಿದ್ದರೂ ಸಂತೋಷ, ಸೇವೆ ಮನುಷ್ಯನ ಧರ್ಮ. ನನ್ನ ಸಹಜ ಧರ್ಮವನ್ನು ನಾನು ಪಾಲಿಸಿದರೆ ಅದಕ್ಕೆ ಹೊಗಳಿಕೆ ಅಗತ್ಯವಿಲ್ಲವೆಂದೇ ಅವರ ದೃಢ ನಂಬಿಕೆ. ಅವರೊಬ್ಬ ಶಿವಾಂಶಸಂಭೂತರೆಂದರೆ ಅತಿಶಯೋಕ್ತಿಯಲ್ಲ.

ಶ್ರೀ ಪುಟ್ಟರಾಜ ಗವಾಯಿಗಳ ಶ್ರೀ ಬಸವೇಶ್ವರ ಪುರಾಣವನ್ನು ನೋಡಿ ಭಾರತದ ಅಂದಿನ ರಾಷ್ಟ್ರಪತಿಗಳಾಗಿದ್ದ ಬಾಬು ರಾಜೇಂದ್ರಪ್ರಸಾದರು ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿ ದೆಹಲಿಯ ತಮ್ಮ ರಾಷ್ಟ್ರ ಭವನದಲ್ಲಿ ಪುಟ್ಟರಾಜರನ್ನು ಸತ್ಕರಿಸಿದರೆಂದ ಮೇಲೆ ಅವರ ಆ ಮಹಾಕೃತಿ ಶ್ರೀ ಬಸವೇಶ್ವರ ಪುರಾಣದ ಬಗ್ಗೆ ಹೆಚ್ಚಿಗೆ ಹೇಳುವುದು ಅನಗತ್ಯ. ಇತ್ತೀಚಿನ ವರ್ಷಗಳಲ್ಲಿ ಪುಟ್ಟರಾಜ ಗವಾಯಿಗಳು ವಿದ್ಯಾಲಯದ ಗೌರವವನ್ನು ಸಾರುವ ಸದುದ್ವಿಶ್ಯದಿಂದ ಇಡೀ ಭಾರತದಲ್ಲಿ ಸಂಚರಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಿಂದೆ ಮೈಸೂರಿನ ಮಹಾರಾಜರಾದ ಶ್ರೀಮನ್ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ ಆಹ್ವಾನದ ಮೇರೆಗೆ ಅರಮನೆಯಲ್ಲಿ ಉಭಯ ಪದ್ಧತಿಯ ಸಂಗೀತವನ್ನು ನಡೆಸಿ ಮಹಾರಾಜರ ಕೃಪೆಗೆ ಪಾತ್ರರಾಗಿದ್ದಾರೆ. ೧೯೬೨ರಲ್ಲಿ ಆಗಿನ ಮೈಸೂರು ಸಂಗೀತ ನಾಟಕ ಅಕಾಡೆಮಿಯು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಬರೆದ ಅಕ್ಕಮಹಾದೇವಿ ಪುರಾಣದ ಬಗ್ಗೆ ಕರ್ನಾಟಕದ ಕವಿಪುಂಗವರಾದ ಬಳ್ಳಾರಿಯ ಪಂ. ವೈ. ನಾಗೇಶ ಶಾಸ್ತ್ರಿಗಳು “ಇವರು ಬರೆದ ಈ ಪುರಾಣದಲ್ಲಿ ಅಕ್ಕನವರ ಚಿತ್ರವು ಹೃದಯಂಗಮವಾಗಿ ಪ್ರಕಾಶಿಸುವುದು. ಕವಿಗಳು ಚರ್ಮಚಷುರಹಿತರಾಗಿದ್ದರೂ ಶ್ರೇಷ್ಟತಮವಾದ ಜ್ಞಾನ ಚಕ್ಷುವಿನಿಂದ ಬೆಳಗುತ್ತಿರುವರೆಂಬುದು ಇದರ ಪುರಾಣವನ್ನು ಓದುವಾಗ ಅವಶ್ಯಕವಾಗಿ ಬೋಧೆಯಾಗಿರುವದೆಂದು ಭಾವಿಸುವೆವು” ಎಂದು ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಸಹಾ ಇವರು ಮಾಡಿರುವ ಸೇವೆದಗೆ ಗೌರವ ಸೂಚಿಸುವ ಸಲುವಾಗಿ ಪರಿಷತ್ತಿನಲ್ಲಿ ಸನ್ಮಾನಿಸಿದ್ದಾರೆ.

ಒಮ್ಮೆ ಪುಟ್ಟರಾಜ ಗವಾಯಿಗಳು ಮೈಸೂರಿಗೆ ಆಸ್ಥಾನ ವಿದ್ವಾನ್‌ ಬಿ. ದೇವೇಂದ್ರಪ್ಪನವರು ನಡೆಸುವ ಶ್ರೀ ಹನುಮಜಯಂತಿಯ ಕಾರ್ಯಕ್ರಮಕ್ಕಾಗಿ ಆಹ್ವಾನಿತರಾಗಿದ್ದರು. ಅಂದು ನಾನು ಸಹ ಗವಾಯಿಗಳ ಕಾರ್ಯಕ್ರಮದಲ್ಲಿ ಕಿರಿದಾದ ಒಂದು ಸೇವೆ ಸಲ್ಲಿಸಲು ಅಲ್ಲಿಗೆ ಹೋಗಿದ್ದೆ. ಅಂಧು ಅವರ ವಿದ್ಯಾಪ್ರೌಢಿಮೆಯನ್ನು ಮನಗಾಣಲು ಮೈಸೂರು ಆಸ್ಥಾನ ವಿದ್ವಾಂಸರು, ಹಿರಿಯರು, ನಾಗರಿಕರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು. ಗವಾಯಿಗಳು ಅಂದಿನ ಶ್ರೀ ಹನುಮಜ್ಜಂಯತಿಯ ಅಂಗವಾಗಿ ಸಭೆಯಲ್ಲಿ ಕುಳಿತು ರಚಿಸಿ ಹಾಡಿದ ಸಂಸ್ಕೃತ ಪದ್ಯವೊಂದನ್ನು ಕೇಳಿ ಎಲ್ಲ ವಿದ್ವಾಂಸರು ತಲೆದೂಗಿದರು. ಇವರ ಸಂಗೀತ ಸಾಹಿತ್ಯ ಪ್ರೌಢಿಮೆ, ಆಚಾರ-ವಿಚಾರ-ನೇಮ ಇತ್ಯಾದಿಗಳನ್ನು ಮನಗಂಡ ಅನೇಕರು ಇವರ ದರ್ಶನವಾದದ್ದೇ ನಮಗೆ ಮಹದ್ಭಾಗ್ಯವೆಂದು ಹೊಗಳಿದರು. ಉತ್ತರ ಮತ್ತು ದಕ್ಷಿಣ ಸಂಗೀತಗಳ ತವರುಮನೆಯಾದ ಮೈಸೂರು ಶ್ರೀಮನ್ಮಹಾರಾಜರ ಅಧಿದೇವತೆಯಾದ ಶ್ರೀ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಕರ್ನಾಟಕ ರತ್ನ ಸಿಂಹಾಸನವನ್ನು ತಲೆಯಲ್ಲಿ ಹೊತ್ತು ನಿಂತು ಪ್ರಪಂಚಕ್ಕೆ ತನ್ನ ಹೆಸರನ್ನು ಮಾದರಿಯಾಗಿ ಮಾಡಿರುವ ಮೈಸೂರು ನಗರದಲ್ಲಿ ಗೌರವ ಮರ್ಯಾದೆಯನ್ನು ಸಂಪಾದಿಸಿದ ಪುಟ್ಟರಾಜ ಗವಾಯಿ ನಮ್ಮ ಕನ್ನಡನಾಡಿನವರೆಂದು ಹೇಳುವಾಗ ನಮಗಾಗುವ ಆನಂದ ವರ್ಣನಾತೀತ.

ಪರಮ ಪೂಜ್ಯ ಗುರುವರ್ಯ ಪುಟ್ಟರಾಜ ಗವಾಯಿಗಳವರಿಗೆ ಸುಮಾರು ೧೦೦೦ ತುಲಾಭಾರಗಳು ಈವರೆಗೆ ಸಂದಿವೆ. ಇದು ಯಾವ ಸಂಗೀತಗಾರರಿಗೂ ದೊರೆಯದ ಗೌರವ. ಡಾ. ಪುಟ್ಟರಾಜ ಗವಾಯಿಗಳು ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ ಇವರಲ್ಲಿ ಎಂ. ವೆಂಕಟೇಶಕುಮಾರ ಮತ್ತು ಡಿ. ಕುಮಾರದಾಸ ತುಂಬಾ ಪ್ರಸಿದ್ಧ ಗಾಯಕರಾಗಿರುವರು.

ಡಾ. ಪುಟ್ಟರಾಜ ಗವಾಯಿಗಳಿಗೆ ಸಂದ ಪ್ರಶಸ್ತಿಗಳು ಹತ್ತು ಹಲವು: ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್‌, ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಪಾಲ್‌ಹ್ಯಾರಿಸ್‌ ಪ್ರಶಸ್ತಿ, ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಗೌರವ ಫೆಲೊಶಿಪ್‌, ಕರ್ನಾಟಕ ಸರಕಾರ ಸಂಗೀತ ಸಾಧನೆಗೆ ನೀಡುವ ಪ್ರತಿಷ್ಠಿತ ಕನಕ-ಪುರುಂದರ ಪ್ರಶಸ್ತಿ, ಇವೆಲ್ಲಕ್ಕೆ ಕಳಸವಿಟ್ಟಂತೆ ಮೇ ೪, ೨೦೦೩ರಂದು ರಾಷ್ಟ್ರೀಯ ಬಸವ ಪುರಸ್ಕಾರ.

೧೯೯೪ರಲ್ಲಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಸ್ಥಾಪಿಸಿ ತನ್ಮೂಲಕ ಪ್ರತಿ ವರ್ಷ ಅಖಿಲ  ಭಾರತ ಮಟ್ಟದ ಸಂಗೀತಗಾರರೊಬ್ಬರಿಗೆ ಪುಟ್ಟರಾಜ ಸಮ್ಮಾನ ನೀಡಲಾಗುತ್ತಿದೆ. ೧೯೯೯ರಲ್ಲಿ ಗ್ವಾಲಿಯಾರ್ ಘರಾಣೆಯ ಲಕ್ಷ್ಮಣ ಪಂಡಿತರಿಗೆ,ಕ ೨೦೦೦ದಲ್ಲಿ ಪಂಚಾಕ್ಷರಿ ಗವಾಯಿಗಳ ಹಿರಿಯ ಶಿಷ್ಯರಾದ ಮೃತ್ಯಂಜಯಬುವಾ ಪುರಾಣಿಕ ಮಠರಿಗೆ, ೨೦೦೧ರಲ್ಲಿ ಆಗ್ರಾ ಘರಾಣೆಯ ದಿನಕರ ಕಾಯ್ಕಿಣಿ ೨೦೦೩ ರಲ್ಲಿ ಕರ್ನಾಟಕ ಗಾಯಕ ನಾದಬ್ರಹ್ಮ ಕುರುಡಿ ವೆಂಕಣ್ಣಾಚಾರ್ ಅವರಿಗೆ, ೨೦೦೨ ರಲ್ಲಿ ಜೈಪುರ ಘರಾಣೆಯ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರಿಗೆ ಪುಟ್ಟರಾಜ ಸಮ್ಮಾನ ನೀಡಲಾಗಿದೆ.