ಅಧ್ಯಾಪಕರು, ಭಾಷಾಂತರಕಾರರು, ಕನ್ನಡಪರ ಚಿಂತಕರು ಡಾ. ಪ್ರಧಾನ್ ಗುರುದತ್ತ ಅವರು.
೧೯೩೮ ರಲ್ಲಿ ಜನಿಸಿದ ಡಾ. ಪ್ರಧಾನ್ ಗುರುದತ್ತ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. (ಕನ್ನಡ), ಎಂ.ಫಿಲ್., ಪಿಹೆಚ್.ಡಿ. ಪದವಿ, ಭಾರತೀಯ ವಿದ್ಯಾಭವನದ ಸಂಸ್ಕೃತ ಕೋವಿದ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಎಂ.ಎ.
ಪದವಿ ಗಳಿಸಿದರು.
ಮೂವತ್ತೊಂಬತ್ತು ವರ್ಷಗಳ ಕಾಲ ಸ್ನಾತಕ, ಸ್ನಾತಕೋತ್ತರ ಅಧ್ಯಾಪಕರಾಗಿ, ಯು.ಜಿ.ಸಿ. ಸಂಶೋಧಕ ಪ್ರಾಧ್ಯಾಪಕರಾಗಿ, ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳ, ಸಾಹಿತ್ಯಾಸಕ್ತರ ಮನ ಗೆದ್ದಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ, ತೆಲುಗು, ಮರಾಠಿ, ಇಂಗ್ಲಿಷ್, ಫ್ರೆಂಚ್ ಭಾಷೆಗಳ ಪರಿಚಯವುಳ್ಳ ಶ್ರೀಯುತರು ಕನ್ನಡದ ಹಲವಾರು ಕೃತಿಗಳನ್ನು ಹಿಂದಿಗೂ, ಇಂಗ್ಲಿಷ್ ಭಾಷಾಂತರಿಸಿದ್ದಾರೆ. ಮರಾಠಿ, ತಮಿಳು, ಇಂಗ್ಲಿಷ್‌ನಿಂದ ಕನ್ನಡಕ್ಕೂ ಭಾಷಾಂತರಿಸಿದ್ದಾರೆ. ಅಲ್ಲದೆ ಹಾಮಾನಾ ಒಂದು ಅಧ್ಯಯನ, ರತ್ನಾಕರವರ್ಣಿ, ಆಡಳಿತ ಭಾಷೆಯ ಕೆಲವು ವಿಚಾರಗಳು ಮೊದಲಾದ ಸುಮಾರು ೨೨ ಸ್ವತಂತ್ರ ಕೃತಿಗಳನ್ನು, ತಾಂತ್ರಿಕ ಪದಕೋಶಗಳನ್ನು ರಚಿಸಿರುವುದಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ೧೫೦ಕ್ಕೂ ಹೆಚ್ಚು ಪುಸ್ತಕಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಪ್ರಕಟವಾಗಿವೆ. ೫೦ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ‘ಕಲ್ಪಶ್ರೀ’ ಪ್ರಶಸ್ತಿ, ತೀ.ನಂ. ಶ್ರೀಕಂಠಯ್ಯ ಪ್ರಶಸ್ತಿ ಶ್ರೀಯುತರ ಪ್ರತಿಭೆಗೆ ಸಂದ ಪ್ರಶಸ್ತಿ ಪುರಸ್ಕಾರಗಳಲ್ಲಿ ಪ್ರಮುಖವಾದವು.
ಸಂಶೋಧನೆ, ವಿವಿಧ ಭಾಷಾ ಪಾಂಡಿತ್ಯ, ಆಳವಾದ ಅಧ್ಯಯನದಿಂದ ವಿದ್ವಾಂಸರ ಮೆಚ್ಚುಗೆ ಪಡೆದ ಪ್ರತಿಭಾನ್ವಿತ ಬರಹಗಾರರು ಡಾ. ಪ್ರಧಾನ್ ಗುರುದತ್ತ ಅವರು.
Categories
ಡಾ|| ಪ್ರಧಾನ್ ಗುರುದತ್ತ
