Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಪ್ರಭಾಕರ ಜೋಷಿ

ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖ್ಯ ಸಾಧನೆಗೈದಿರುವ ಡಾ. ಪ್ರಭಾಕರ ಜೋಷಿ ಅವರು ಕರ್ನಾಟಕದ ಬಹುಶ್ರುತ ಏದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. ೧೯೪೬ರಲ್ಲಿ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ ಜನಿಸಿದ ಪ್ರಭಾಕರಜೋಷಿ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ-ಸಂಸ್ಕೃತಿ ಪ್ರೀತಿ. ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿಸಾಹಿತ್ಯ ರತ್ನ ಮತ್ತು ಯಕ್ಷಗಾನದಲ್ಲಿ ಪಿ.ಎಚ್.ಡಿ., ಮೂರು ದಶಕಗಳ ಕಾಲ ವಾಣಿಜ್ಯ ಪ್ರಾಧ್ಯಾಪಕರಾಗಿ ಸೇವೆ. ಪ್ರಾಂಶುಪಾಲರಾಗಿಯೂ ಅನುಭವ. ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ ಸೇರಿದಂತೆ ಬಹುಭಾಷಾ ಜ್ಞಾನಿ. ಬಹುಮುಖ್ಯವಾಗಿ ಯಕ್ಷಗಾನ ತಾಳಮದ್ದಳೆ ರಂಗದ ಸಮರ್ಥ ಅರ್ಥಧಾರಿ, ಭಾಷೆ-ಭಾವ–ವಿಚಾರಯುಕ್ತ ಅರ್ಥಗಾರಿಕೆಗೆ ಹೆಸರುವಾಸಿ. ಕಲಾವಿದನಾಗಿ ಹೆಗ್ಗುರುತು. ಹತ್ತಕ್ಕೂ ಹೆಚ್ಚು ಕೃತಿಗಳ ಲೇಖಕ, ಯಕ್ಷಗಾನ ಪ್ರಸಂಗಗಳ ವಿಮರ್ಶೆಯಲ್ಲಿ ಪ್ರಖರ ಹಿಡಿತ. ಸಂಶೋಧಕ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾಗಿಯೂ ನಿರಂತರ ಸೇವೆ. ಯಕ್ಷಗಾನ ಪಾರಿಭಾಷಿಕ ಕೋಶದ ನಿರ್ಮಾತೃ, ಉತ್ತಮ ಉಪನ್ಯಾಸಕಾರ, ಸಮನ್ವಯಕಾರರೂ ಕೂಡ. ನಾಲ್ಕು ದಶಕಗಳಿಂದಲೂ ಯಕ್ಷರಂಗದಲ್ಲಿ ತನ್ಮಯರಾಗಿರುವ ಡಾ. ಪ್ರಭಾಕರ ಜೋಷಿ ತಮಗೆ ದಕ್ಕಿದ ಹತ್ತಾರು ಪ್ರಶಸ್ತಿಗಳಿಗೂ ಮೀರಿದ ಮೇರು ಪ್ರತಿಭೆ.