ಬಸವರಾಜ ರಾಜಗುರು ಎಂದಾಕ್ಷಣ ಸಂಗೀತದ ಗಂಧವಿರುವವರ ಕಿವಿಯಲ್ಲಿ ಇಂಚರ ಸಂಚರಿಸತೊಡಗುವುದು. ಅವರ ಗಾಯನದ ಮಾಧುರ್ಯ ಅಂತಹದು. ಭಾರತಾದ್ಯಂತ ಬಸವರಾಜ ರಾಜಗುರು ಮೋಡಿಗೆ ಒಳಗಾಗದವರಿಲ್ಲ. ಕೊನೆಯುಸಿರಿನವರೆಗೂ ಸಂಗೀತವನ್ನೆ ಉಸಿರಾಡಿದವರು ಅವರು. ತಮ್ಮ ಸಂಗೀತ ಸೌರಭವನ್ನು ಅಮೆರಿಕೆಯಲ್ಲಿ ಬೀರುವ ಸನ್ನಾಹದಲ್ಲಿ ವೀಸಾ ತೆಗೆಯಿಸಲು ಚೆನ್ನೈಗೆ ಹೋಗಿದ್ದವರು ಬೆಂಗಳೂರಿಗೆ ಜುಲೈ ೨೧, ೧೯೯೧ರಂದು ಬಂದಿಳಿದರು. ಅಲ್ಲಿಯೂ ಶಿಷ್ಯನೊಬ್ಬನಿಗೆ ಸಂಗೀತ ಪಾಠ. “ಈಗ ರಾತ್ರಿ ಇಷ್ಟೊತ್ತು. ಈ ಹೊತ್ತಿನಲ್ಲಿ ಇಂತಿಂಥ ರಾಗ ಹಾಡುತ್ತಾರೆ” ಎಂದು ವಿವರಿಸುತ್ತಿದ್ದರು. ಹಾಡುತ್ತ ಹಾಡುತ್ತ ಸ್ವರಲೋಕದಲ್ಲಿ ಲೀನವಾದರು. ಸಂಗೀತ ಪ್ರಪಂಚ ಬಡವಾಯಿತು.

ಎಲಿವಾಳ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕ ಗ್ರಾಮ. ಅಲ್ಲೊಂದು ಒಕ್ಕಲುತನದ ಮನೆತನ. ಈ ಮನೆತನ ಮೂಲತಃ ಕೆಳದಿ ರಾಜರ ಗುರುಗಳು. ಹಾಗಾಗಿ, ರಾಜಗುರು ಎಂಬ ಅಡ್ಡಹೆಸರು. ಕಾರಣಾಂತರಗಳಿಂಧ ಎಲಿವಾಳಕ್ಕೆ ಬಂದು ನೆಲೆಸಿದ್ದರು. ಬಸವರಾಜ ಆಗಸ್ಟ್‌ ೨೪, ೧೯೨೦ ರಂದು ಜನಿಸಿದ. ಮಹಾಂತಸ್ವಾಮಿ-ರಾಚವ್ವ ತಂದೆತಾಯಿ, ದೊಡ್ಡಪ್ಪ ಸಂಸ್ಕೃತ ವಿದ್ವಾಂಸರು, ಜ್ಯೋತಿಷಿಗಳು. ತಂದೆಗೆ ಸಂಗೀತವೆಂದರೆ ಪಂಚಪ್ರಾಣ. ತಂಜಾವೂರಿಗೆ ಹೋಗಿ ಕರ್ನಾಟಕ ಸಂಗೀತ ಕಲಿತು ಬಂದಿದ್ದರು. ಪಿಟೀಲುಕ ಚೆನ್ನಾಗಿ ನುಡಿಸುತ್ತಿದ್ದರು. ಚಿಕ್ಕಪ್ಪ ಚನ್ನಬಸವಸ್ವಾಮಿ ಬಯಲಾಟ ಪ್ರವ ಈಣ. ಬಯಲಾಟ ಪದಗಳನ್ನು ಇಂಪಾಗಿ ಹಾಡುತ್ತಿದ್ದುದಲ್ಲದೆ ಹಾಮೋನಿಯಂ ನುಡಿಸುತ್ತಿದ್ದರು. ಬಸವರಾಜನಿಗೆ ಬುದ್ದಿ ತಿಳಿದಾಗಿನಿಂದಲೂ ಸಂಗೀತದ್ದೇ ಹುಚ್ಚು.

ಬಸವರಾಜ ಆರು ವರ್ಷದವನಿದ್ದಾಗ ತಾಯಿ ತೀರಿಕೊಂಡಳು. ತಂದೆಯೆ ತಾಯಿಯೂ ಆದರು. ಏಳನೆಯ ವರ್ಷಕ್ಕೆ ತಂದೆಯಿಂದ ಸಂಗೀತಪಾಠ ಆರಂಭ. “ಲಂಬೋದರ ಲಕುಮಿಕರ’’ ಕೃತಿಯಿಂದ ಶ್ರೀಗಣೇಶ. ಸುಮಾರು ಎರಡು ವರ್ಷ ಸರಳೆ, ಜಂಟಿ,ವರ್ಣ, ಕೀರ್ತನೆ ಅಭ್ಯಾಸ ಮಾಡಿಸಿದರು.

ಆಗಿನ್ನೂ ಬಸವರಾಜನಿಗೆ ಒಂಬತ್ತು ವರ್ಷಋ. ಎಲಿವಾಳದಲ್ಲಿ ಶನಿಪ್ರಭಾವ ನಾಟಕ ಹಚ್ಚಿದ್ದರು. ನಾಟಕ ಕಲಿಸಲು ಪರ ಊರಿನ ಮಾಸ್ತರ ಬಂದಿದ್ದರು. ಹೊಡೆದುಬಡಿದು ಕಲಿಸಿದರೂ ಪಾತ್ರ ಮಾಡುವ ಹುಡುಗರಿಗೆ ಪದ ಹಾಡಲು ಬರುತ್ತಿರಲಿಲ್ಲ. ತಾಲೀಮು ಮನೆಯೊಳಗೆ ಬೇರೆ ಯಾರನ್ನೂ ಬಿಡುತ್ತಿರಲಿಲ್ಲ. ಬಸವರಾಜ ಜಾಲಿ ಬಡ್ಡೆಯ ಮೇಲೆ ಪೀಪಾಯಿ ಇಟ್ಟು ಅದರ ಮೇಲೆ ಹತ್ತಿ ಕಿಡಕಿಯಲ್ಲಿ ಇಣಿಕಿಕ್ಕಿ ಕೇಳುತ್ತ ಒಂದೆರಡು ದಿನಗಳಲ್ಲಿಯೆ ಅವೆಲ್ಲ ಪದಗಳನ್ಮು ಸರಾಗವಾಗಿ ಹಾಡಲು ಕಲಿತ. ಹಾರ್ಮೋನಿಯಂ ಜೊತೆಗೆ ಹಾಡುವಾಸೆ. ಇವನು ಕಿಡಕಿಯಲ್ಲಿ ಇಣುಕುವುದನ್ನು ಕಂಡು ನಾಟಕ ಮಾಸ್ತರರು ಕಿಡಕಿ ಮುಚ್ಚಿಸಿದರು. ಇದರಿಂದ ಬಸವರಾಜನ ಕೋಪ ಬುಸ್ಸೆಂದಿತು. ಒಂದು ದಿನ ಮಧ್ಯಾಹ್ನ ಎಲ್ಲರೂ ಮಲಗಿರುವಾಗ ಅದ್ಹೇಗೋ ಒಳಗೆ ಹೋಗಿ ಚಾಕುವಿನಿಂದ ತಬಲಾ, ಡಗ್ಗಾ ತೂತು ಕೊರೆದು ಹಾರ್ಮೋನಿಯಂ ಪಟ್ಟಿ ಕಿತ್ತೆಸೆದು ಓಟ ಕಿತ್ತುವುದರಲ್ಲಿದ್ದ. ಮಾಸ್ತರರಿಗೆ ಎಚ್ಚರವಾಯಿತು. ಹಿಡಿದು ಎರಡು ಬಾರಿಸಿದರು. ಅಭಿಮಾನಧನರಾದ ಬಸವರಾಜನ ತಂದೆಗೆ ನಖಶಿಖಾಂತ ಕೋಪ. “ಏ ಮಾಸ್ತರ, ನಿನಗೆ ಲುಕ್ಸಾನ ಆಗಿದ್ದರೆ ಹೊಸ ತಬಲಾ, ಡಗ್ಗಾ ಮಾಡಿಸಿಕೊಡುತ್ತಿದ್ದೆ. ನಮ್ಮ ಹುಡುಗನನ್ನು ಏಕೆ ಹೊಡೆದೆ”” ಎಂದು ಗದರಿಸಿದರು. ಮಾಸ್ತರರು ‘ನಿಮ್ಮ ದಮ್ಮಯ್ಯ, ತಪ್ಪಾಯಿತು, ಕ್ಷಮಿಸಿರಿ” ಎಂದು ಬೇಡಿಕೊಂಡರು.

ಮಹಾಂತಸ್ವಾಮಿ ಮಗನತ್ತ ಹೊರಳಿ “ನಿನಗೆ ಸಂಗೀತ ಕಲಿಯುವ ಹುಚ್ಚಿದ್ದರೆ ಇಂಥ ಕ್ಷುಲ್ಲಕ ನಾಟಕ ಮಾಸ್ತರರಲ್ಲಿ ಏಕೆ, ದೊಡ್ಡ ನಾಟಕ ಕಂಪನಿಯಲ್ಲಿಡುವೆ” ಎಂದರು. ಅದೇ ಸುಮಾರಿಗೆ ಅವರ ಬಾಲ್ಯಸ್ನೇಹಿತ ವಾಮನರಾವ ಮಾಸ್ತರರ ‘ವಿಶ್ವ ಗುಣಾದರ್ಶ ನಾಟಕ ಮಂಡಳಿ” ಹುಬ್ಬಳ್ಳಿಯಲ್ಲಿ ಕ್ಯಾಂಪ್‌ ಮಾಡಿತ್ತು. ಕರೆದುಕೊಂಡು ಹೋಗಿ ಮಗನನ್ನು ಸೇರಿಸಿಬಂದರು. ಬಸವರಾಜ ಬಾಲನಟನಾಗಿ ಬಾಲಕೃಷ್ಣ, ದಾಸಿ ಮುಂತಾದ ಪಾತ್ರಗಳಲ್ಲಿ ಮಿಂಚಿದ. ಕಂಚಿನ ಕಂಠ ಬೇರೆ. ಸ್ವತಃ ವಾಮನರಾವ ಮಾಸ್ತರರು ನಾಟಕದ ಹಾಡುಗಳನ್ನು ಅಭ್ಯಾಸ ಮಾಡಿಸುತ್ತಿದ್ದರು. ಹುಬ್ಬಳ್ಳಿ, ಧಾರವಡ, ಬೆಳಗಾವಿ, ಹೊಸಪೇಟೆ, ಬಳ್ಳಾರಿ, ಗದಗ, ಹರಿಹರ, ದಾವಣಗೆರೆ ಮುಂತಾದ ಊರುಗಳಿಗೆ ನಾಟಕ ಕಂಪನಿಯೊಂದಿಗೆ ಸುತ್ತಾಟ, ಒಮ್ಮೆ ಬಟ್ಟೆಗೆ ಸಾಬೂನು ಹಚ್ಚುತ್ತ “ಬಾಜಿರಾವ ಪೇಶ್ವೆ” ನಾಟಕದ “ಕೊಟ್ಟ ಕಾಲಕೆ ದೇವರು ನಿನಗೆ, ಕೆಟ್ಟು ಕೃತಿಯ ಮಾಡಲು ಬೇಡ” ಎಂಬ ಹಾಡು ಹೇಳುತ್ತಿದ್ದ. ವಾಮನರಾವ ಮಾಸ್ತರ ಹಿಂದೆ ಬಂದು ನಿಂತುದರ ಪರಿವೆಯೆಇಲ್ಲ. ಉಳಿದ ಹುಡುಗರು ತಿವಿದು ಎಚ್ಚರಿಸಿದಾಗಲೆ ತಿಳಿದದ್ದು. ಬಸವರಾಜನಿಗೆ ಗಾಬರಿ. ಆದರೆ, ಮಾಸ್ತರರು “ಇವನ ಹಾಂಗ ಹಯಾಡಿರಿ, ನೋಡೂಣು” ಎಂದು ಮೆಚ್ಚುಗೆ ಸೂಸಿ ಹೊರಟುಹೋದರು. ನಾಟಕ ಕಂಪನಿ ಸೇರಿ ಒಂದು ವರ್ಷವಾಗಿರಬಹುದು. ತಂದೆ ಮಹಾಂತಸ್ವಾಮಿ ಪ್ಲೇಗಿಗೆ ತುತ್ತಾದರು. ದಿಕ್ಕು ತೋಚದಾಯಿತು. ಆಗ ನೆರವಿತ್ತವರು ಕೆಳದಿ ಸಂಸ್ಥಾನ ಮಠಾಧಿಪತಿಗಳಾಗಿದ್ದ ಶ್ರೀ ರೇವಣಸಿದ್ಧ ಶಿವಾಚಾರ್ಯರು. ಅವರು ಬಸವರಾಜನ ದೊಡ್ಡಪ್ಪನ ಮಗ. ಮುಂದೆ ಬಸವರಾಜನನ್ನು ಮಠಕ್ಕೆ ಮರಿ ಮಾಡಿಕೊಳ್ಳುವಾಸೆ ಅವರಿಗದ್ದಂತಿತ್ತು. ಆದುದರಿಂದ, ನಾಟಕ ಕಂಪನಿ ಬಿಡಿಸಿ ಹುಬ್ಬಳ್ಳಿಯ ಮೂರುಸಾವಿರ ಮಠದ ಸಂಸ್ಕೃತ ಪಾಠಶಾಲೆ ಸೇರಿಸಿದರು. ಒಂದು ದಿನ ಬೇರೆ ಊರಿಗೆ ಹೊರಟಿದ್ದ ಪಂಚಾಕ್ಷರಿ ಗವಾಯಿಗಳು ಬಸ್‌ ತಪ್ಪಿ ಮೂರುಸಾವಿರ ಮಠಕ್ಕೆ ಬಂದರು. ಗುರುಸಿದ್ಧ ಸ್ವಾಮಿಗಳು “ಈ ಹುಡುಗ ಛಲೋ ಹಾಡತಾನ. ನಿಮ್ಮ ಸಂಗಡ ಕರಕೊಂಡು ಹೋಗಿರಿ” ಎಂದು ಶಿಫಾರಸ್ಸು ಮಾಡಿದರು. ಪಂಚಾಕ್ಷರಿ ಗವಾಯಿಗಳು “ಮಗೂ, ಒಂದು ಹಾಡ ಹೇಳಪಾ” ಅಂದರು. ಬಸವರಾಜ “ವೀರ ಅಭಿಮನ್ಯು” ನಾಟಕದ “ಭಕ್ತ ಜೀವನ ರಾಮಾ ಸುಜನ ಜೀವನ” ಎಂಬ ಪದ ಹಾಡಿದ. ಅಂಧರಾದ ಪಂಚಾಕ್ಷರಿ ಗವಾಯಿಗಳು ಮಸವರಾಜನನ್ನು ಕರೆದು ಮೈದಡವಿ “ಎಷ್ಟು ಛಂದ ಗಿರಡಿ ಹೊರಳಸತಿಯಲ್ಲೊ! ಎಲ್ಲಿ ನೋಡೋಣ, ಇನ್ನೊಂದು ಹಾಡು” ಎಂದರು. ಬಸವರಾಜ ಅದೇ ನಾಟಕದಕ “ಕರುಣ ಸಾಗರಾ ಪ್ರಭು ಪರಮಾತ್ಮಾ” ಹಾಡಿದ. ಪಂಚಾಕ್ಷರಿ ಗವಾಯಿಗಳು ಗುರುಸಿದ್ದ ಸ್ವಾಮಿಗಳನ್ನುದ್ದೇಶಿಸಿಕ “ಬುದ್ಧೀ, ನಮಗ ಹುಡುಗ ಒಪ್ಪಿಗೆ ಆಗ್ಯಾನ. ಇಂದೇ ಕರೆದೊಯ್ಯುವೆ” ಎಂದರು ಬಸವರಾಜನ ಅದೃಷ್ಟ ತೆರೆಯಿತು . ಇದು ನಡೆದದ್ದು ೧೯೩೦ ಜೂನ್‌ ತಿಂಗಳಲ್ಲಿ.

ಬಸವರಾಜನು ಪಂಚಾಕ್ಷರಿ ಗವಾಯಿಗಳ ಗಿಳಿವಿಂಡು ಸೇರಿದ. ಬೆಳಿಗ್ಗೆ ನಾಲ್ಕರಿಂದ ಎಂಟರವರೆಗೆ ಸಂಗೀತಪಾಠ. ಆಮೇಲೆ ಸ್ನಾನ, ಪೂಜನೆ, ಊಟ, ವಿಶ್ರಾಂತಿ. ಸಂಜೆ ನಾಲ್ಕರಿಂದ ಏಳರವರೆಗೆ ಪುನಃ ಸಂಗೀತಾಭ್ಯಾಸ. ಉಳಿದ ಸಮಯದಲ್ಲಿ ಕನ್ನಡ, ಸಂಸ್ಕೃತ ಕಾವ್ಯ, ಪುರಾಣಗಳ ಅಭ್ಯಾಸ. ದಣಿವರಿಯದ ಗುರು, ದಣಿವರಿಯದ ಶಿಷ್ಯ. ಕೆಲವು ವರ್ಷ ಶಿವಯೋಗಮಂದಿರದಲ್ಲಿ, ಆಮೇಲೆ ಸಂಚಾರಿ ಸಂಗೀತಶಾಲೆಯೊಂದಿಗೆ ಕರ್ನಾಟಕ ತುಂಬೆಲ್ಲ ಸುತ್ತಾಟ. ಬಸವರಾಜ ಏಕಪಾಠಿ. ಪಂಚಾಕ್ಷರಿ ಗವಾಯಿಗಳು ಅಬ್ದುಲ್‌ ಕರೀಂಖಾನ, ಅಖ್ತರಬಾಯಿ, ನಿಸ್ಸಾರ ಹುಸೇನಖಾನ, ಫೈಯಾಜಖಾನ ಮೊದಲಾದವರ ಗ್ರಾಮೊಫೋನ ಧ್ವನಿಮುದ್ರಿಕೆಗಳನ್ನು ತರಿಸುತ್ತಿದ್ದರು. ಅವುಗಳ ಉಸ್ತುವಾರಿಯನ್ನು ಬಸವರಾಜನಿಗೆ ಒಪ್ಪಿಸಿದ್ದರು. ಅವರೆಲ್ಲ ಬೇರೆ ಬೇರೆ ಶೈಲಿಯ ಗಾಯಕರಾಗಿದ್ದರೂ ಅವರ ಧ್ವನಿಮುದ್ರಿಕೆಕ ಕೇಳಿ ತದ್ರೂಪ ಹಾಡುತ್ತಿದ್ದ. ಅಂಥ ಗ್ರಹಣಶಕ್ತಿ ಬಸವರಾಜನದು. ಹನ್ನೊಂದುವರ್ಷ ಕರ್ನಾಟಕ ಹಿಂದುಸ್ತಾನಿ ಪದ್ಧತಿಗಳೆರಡರಲ್ಲೂ ಬಸವರಾಜ ಪಂಚಾಕ್ಷರಿ ಗವಾಯಿಗಳ ಗರಡಿಯಲ್ಲಿ ಪಳಗಿದ.

ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯನ ಸಾಧನೆ ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯ್ದಿದ್ದರು. ೧೯೩೬ರಲ್ಲಿ ಹಂಪೆಯಲ್ಲಿ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನೆಯ ಷಡಶತಮಾನೋತ್ಸವ. ಹದಿನೈದು ಸಾವಿರ ಶ್ರೋತೃಗಳು, ತಬಲಾ ಸಾಥ ಸ್ವತಃ ಪಂಚಾಕ್ಷರಿ ಗವಾಯಿಗಳವರದು. ಹಾರ್ಮೋನಿಯಂ ಸಾಥ ಪುಟ್ಟರಾಜ ಗವಾಯಿಗಳದು. ಅಂದಮೇಲೆ ಕೇಳಬೇಕೆ? ಕರ್ಣರಸಾಯನ. ಬಸವರಾಜ ರಾಜಗುರು ಬಾಗೇಶ್ರೀ ರಾಗ ಹಾಡಿದರು. ನಂತರ ನಿಜಗುಣ ಶಿವಯೋಗಿಗಳ “ನೋಡಲಾಗದೆ ದೇವಾ” ಹಾಡಿದರು. ಬೃಹತ್‌ ಶ್ರೋತೃಸಮೂಹ ಚಪ್ಪಾಳೆ ಸುರಿಸಿತು. ಸಂಘಟಕರು ಒಂದು ಬಂಗಾರದ ಉಂಗುರ, ಐದು ರೂಪಾಯಿ ನೀಡಿದರು. ಅಂದು ಅದು ದೊಡ್ಡ ಮೊತ್ತ. ಬಸವರಾಜರಿಗೆ ಆಗ ತಾನೆ ಹದಿನಾರು ವರ್ಷ. ಮೈಸೂರು ಆಸ್ಥಾನ ವಿದ್ವಾನ್‌ ಚಿಕ್ಕರಾಮರಾಯರು ವೇದಿಕೆಗೆ ಬಂದು ಬೆನ್ನು ಚಪ್ಪರಿಸಿ ‘ಗವಾಯಿಗಳೆ, ಒಳ್ಳೆಯ ಶಿಷ್ಯರತ್ನವನ್ನು ಸಂಪಾದಿಸಿದ್ದೀರಿ’ ಎಂದು ಹೊಗಳಿದರು.

೧೯೩೮ರಲ್ಲಿ ಮುಂಬಯಿ ಆಕಾಶವಾಣಿಯಲ್ಲಿ ಪ್ರಥಮ ಕಾರ್ಯಕ್ರಮ. ಹದಿನೈದು ನಿಮಿಷಕ್ಕೊಂದರಂತೆ ಎರಡು ರಾಗಗಳು, ಬೆಳಿಗ್ಗೆ ಬಿಲಾವಗಲ, ರಾತ್ರಿ ಗೌಡಮಲ್ಹಾರ. ಸುತ್ತೆಲ್ಲ ಖ್ಯಾತಿ ಪಸರಿಸಿತು. ೧೯೩೮-೪೧ರ ಮಧ್ಯೆ ಬಸವರಾಜ ರಾಜಗುರುಗಳ ಹಲವಾರು ಧ್ವನಿಮುದ್ರಿಕೆಗಳು ಹೊರಬಂದವು: ಶ್ಯಾಮ ಕಲ್ಯಾಣ, ದೇಸಿ, ಮಾಲಕಂಸ, ಮೇಘ, ಚಾಂದನಿ ಕೇದಾರ, ಹಂಸಧ್ವನಿ, ೧೨ ವಚನಗಳು: ಪರಚಿಂತೆ ಎಮಗೆ ಏಕೆ ಅಯ್ಯಾ, ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ವಚನದಲ್ಲಿ ನಾಮಾಮೃತ ತುಂಬಿ, ಜಗವ ಸುತ್ತಿಪ್ಪುದು ನಿನ್ನ ಮಾಯೆ, ಮಡಕೆಯ ಮಾಡುವರೆ ಮಣ್ಣೆ ಮೊದಲು, ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ ಇತ್ಯದಿ. ಅವು ಎಷ್ಟು ಜನಪ್ರಿಯವಾದವೆಂದರೆ ಹಳ್ಳಿಹಳ್ಳಿಯಲ್ಲಿ ಎಲ್ಲರ ನಾಲಗೆಯ ಮೇಲೆ ಅವುಗಳೇ. ವಚನಗಳನ್ನು ರಾಗಾಧಾರಿತ ಮಟ್ಟುಗಳಲ್ಲಿ ಮೊದಲು ಸಂಯೋಜಿಸಿದವರು ಗುರು ಪಂಚಾಕ್ಷರಿ ಗವಾಯಿಗಳು. ವಚನಗಳ ಮೊದಲ ಗಾನಮುದ್ರಿಕೆಗಳು ಹೊರಬಂದುದು ಬಸವರಾಜ ರಾಜಗುರು ಅವರವು. ವಚನಗಾಯನವನ್ನು ಜನಪ್ರಿಯಗೊಳಿಸುವಲ್ಲಿ ಬಸವರಾಜ ರಾಜಗುರು ಅವರ ಪಾತ್ರ ಮಹತ್ವದ್ದು.

ಬಸವರಾಜ ರಾಜಗುರು ಅವರಿಗೆ ಈಗ ಭಾರತದ್ಯಂತ ಸುತ್ತಬೇಕು. ಖ್ಯಾತಿ ಪಡೆಯಬೇಕೆಂಬ ಅದಮ್ಯ ಬಯಕೆ. ೧೯೪೧ರಲ್ಲಿ ಗುರು ಪಂಚಾಕ್ಷರಿ ಗವಾಯಿಗಳ ಆಶೀರ್ವಾದ ಪಡೆದು ಹೊರಟದ್ದೆ. ಹುಲಿ ಗವಿ ಬಿಟ್ಟು ವಿಶಾಲ ಅರಣ್ಯಕ್ಕೆ ಬಂದಂತಾಯಿತು. ಸೀದಾ ಮುಂಬಯಿಗೆಕ ಬಂದರು. ಕಾರ್ಯಕ್ರಮ ನೀಡುವುದು, ಇನ್ನೂ ಕಲಿಯುವುದು ಅವರ ವ್ರತ. ಎರಡು ವರ್ಷ ಇದೇ ದಿನಚರಿ. ಮುಂಬಯಿಯಲ್ಲಿ ಸವಾಯಿ ಗಂಧರ್ವರ ಸಾಹಚರ್ಯ. ಕೆಲಕಾಲ ಒಂದೇ ಕೋಣೆಯಲ್ಲಿ ವಾಸ. ಅವರಿಂದಲೂ ಕಲಿಕೆ. ಸವಾಯಿ ಗಂಧರ್ವರಿಗೆ ಅರ್ಧಾಂಗವಾಯು ಬಡಿದು ಮುಂಬಯಿ ಬಿಡುವಗ ಸುರೇಶಬಾಬು ಮಾನೆ ಅವರಲ್ಲಿ ಹೀಗೆ ಆಗ್ರಹ: “ಈ ಹುಡುಗನ ಮೇಲೆ ನಿಮ್ಮ ಸಂಪೂರ್ಣ ಲಕ್ಷ್ಯವಿರಲಿ”. ೧೯೪೩ರಲ್ಲಿ ಬಸವರಾಜ ರಾಜಗುರು ನಾಗಪುರದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಕಚೇರಿ ನೀಡಿದರು. ಅಲ್ಲಿಂದ ಅವರ ಸಂಗೀತ ಯಶೋಯಾತ್ರೆ ಆರಂಭಗೊಂಡಿತು. ರಾಜಗುರು ಹಾಡದ ಸಮ್ಮೇಳನಗಳಿಲ್ಲ, ಆಕಾಶವಾಣಿ ಕೇಂದ್ರಗಳಿಲ್ಲ, ಗುರುಗಳನ್ನರಸಿ ತಿರುಗಾಡದ ಊರುಗಳಿಲ್ಲ, ಅವರ ಸಂಗೀತ ಜ್ಞಾನದಾಹ ಅಂಥದು.

ಗುರುಗಳನ್ನರಸಿ ರಾಜಗುರು ಲಾಹೋರಿಗೆ ಬಂದರು.ಪಂಚಾಕ್ಷರಿ ಗವಾಯಿಗಳ ಗುರುಗಳೂ ಕಿರಾಣಾ ಘರಾಣೆಯ ಅಧ್ವರ್ಯುಗಳೂ ಆಗಿದ್ದ ಅಬ್ದುಲ್‌ ವಹೀದಖಾನರು “ಪಂಚಾಕ್ಷರಿ ಕಾ ಶಾಗಿರ್ದ ಹೈ” ಎಂದು ಸಂತಸಪಟ್ಟು ಎರಡೂವರೆ ವರ್ಷ ವಿದ್ಯಾದಾನ ಮಾಡಿದರು. ೧೯೪೪ರಲ್ಲಿ ರಾಜಗುರು ಲತೀಫಖಾನರಲ್ಲಿ ವಿದ್ಯೆ ಸಂಪಾದಿಸಲು ಕರಾಚಿಗೆ ಹೋಗಿ ಆರು ತಿಂಗಳು ಇದ್ದರು. ಭಾರತದಿಂದ ಪಾಕಿಸ್ತಾನ ವಿಭಜನೆಯ ಆಂದೋಲನ. ೧೯೪೬ರಷ್ಟೊತ್ತಿಗೆ ಹಿಂದೂ-ಮುಸ್ಲಿಮ ದ್ವೇಷದ ಕಾಳ್ಗಿಚ್ಚು ಹಬ್ಬಿತು. ಗುರು ಲತೀಫ ಖಾನರು “ಬೇಟಾ, ಅಬ್‌ ತುಮ್‌ ಚಲೆ ಜಾವೊ. ಯಂಹಾ ಖೈರಿಯತ್‌ ನಹೀಂ ಹೈ” ಎಂದು ಕಳಿಸಿಕೊಟ್ಟರು. ರಾಜಗುರು ಕೈಯಲ್ಲಿ ಜೀವ ಹಿಡಿದುಕೊಂಡು ರೈಲುಗಾಡಿಯೇರಿದರು. ನಿಷ್ಕಾರಣ, ನಿಷ್ಕರುಣ ಕೊಲೆಯನ್ನು ಕಣ್ಣಾರೆ ಕಂಡರು. ಭಾರತ-ಪಾಕ್‌ ನಡುವೆ ಅದೇ ಕೊನೆಯ ರೈಲಾಯಿತು.

ಬಸವರಾಜ ರಾಜಗುರು ತಮ್ಮ ಗಾಯನ ಪೌರುಷ ಮೆರೆದ ಪ್ರಸಂಗಗಳು ಹತ್ತು ಹಲವು. ಅವರಿಗೆ ತಮ್ಮ ಗಾಯನ ಸಾಮರ್ಥ್ಯದ ಬಗೆಗೆ ಅಳುಕಿಲ್ಲದ ಆತ್ಮವಿಶ್ವಾಸ. ಅವರೊಬ್ಬ ಜಿದ್ದಿ ಗಾಯಕ. ಸೋಲುವವರೆ ಅಲ್ಲ. ಹಿಂದೆ ಮುಂದೆ ಹಾಡುವವರಿದ್ದರೆ ಎಲ್ಲಿಲ್ಲದ ಉತ್ಸಾಹ. ಅವರನ್ನು ಮೀರುವಂತೆ ಹಾಡುತ್ತಿದ್ದರು. ೧೯೫೫. ದಿಲ್ಲಿಯ ನಗರಭವನ. ವಿಷ್ಣು ದಿಗಂಬರ ಪಲುಸ್ಕರರ ಪುಣ್ಯತಿಥಿ, ಭಾರತದ ಎಲ್ಲೆಡೆಗಳಿಂದ ಬಂದಿದ್ದ ಉದ್ದಾಮ ಸಂಗೀತಗಾರರ ಸಮಾವೇಶ. ಓಂಕಾರನಾಥ ಠಾಕೂರ ಭರ್ಜರಿ ಹಾಡಿದರು. ಆಮೇಲೆ ಹಾಡಲು ಗಾಯಕರು ನಾ ಒಲ್ಲೆ ನೀ ಒಲ್ಲೆ ಎನ್ನತೊಡಗಿದರು. ವಾದ್ಯ ಸಂಗೀತದ ಸಿದ್ಧತೆರ ನಡೆಯಿತು. ಅಷ್ಟರಲ್ಲಿ ಬಸವರಾಜ ರಾಜಗುರು “ನಾ ಹಾಡುವೆ” ಎಂದರು. ಸಭೆ ಮೂಕವಿಸ್ಮಯ. “ಆಯಿತು, ನಿಮ್ಮ ಸಾಧನೆ ಪ್ರದರ್ಶಿಸಿರಿ” ಎಂದು ಸಂಘಟಕರ ಕೊಂಕುನುಡಿ. ರಾಜಗುರು ನಾಯಕಿ ಕಾನಡಾ ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದರು. ಅದೆಂಥ ಎದೆಗಾರಿಕೆ. ಅದವರ ಪ್ರಥಮ ದಿಲ್ಲಿ ಬೈಠಕ್‌ ಬೇರೆ.

೧೯೫೫, ನಾಂದೇಡ ಸಂಗೀತ ಸಮ್ಮೇಳನ. ರಾಜಗುರು ರಾತ್ರಿ ಹಾಡಬೇಕಿತ್ತು. ಬೆಳಿಗ್ಗೆ ೮ ಗಂಟೆಗೆ ನಾಂದೇಡ ತಲುಪಿದ್ದರು. ಬೆಳಿಗ್ಗೆ ಹಾಡಬೇಕಿದ್ದ ಡಿ.ವಿ. ಪಲುಸ್ಕರ ಬಂದಿರಲಿಲ್ಲ. ಸಂಘಟಕರು ಬೆಳಿಗ್ಗೆಯೆ ಹಾಡುವಂತೆ ರಾಜಗುರು ಅವರನ್ನು ವಿನಂತಿಸಿಕೊಂಡರು. ಮುಖ ತೊಳೆದುಕೊಂಡು ಹಾಲು ಕುಡಿದು ವೇದಿಕೆಯೇರಿದರು. ಗಾಯನ ಮುಗಿಸಲು ಶ್ರೋತೃಗಲು ಬಿಡಲೊಲ್ಲರು. ಸಂಗೀತ ಬಲ್ಲ ಅಂದಿನ ಆಕಾಶವಾಣಿ ಮಂತ್ರಿ ಬಿ.ವಿ. ಕೇಸ್ಕರ ಪುಟ್ಟ ಭಾಷಣ ಮಾಡಿ “ಬಸವರಾಜ ರಾಜಗುರು ಡಿ.ವಿ. ಪಲುಸ್ಕರ ಬಾರದ ನಿರಾಸೆಯನ್ನು ನಿವಾರಿಸಿದರು. ಎಷ್ಟೊತ್ತಿನಲ್ಲಾದರೂ ಹಾಡಿಸಿರಿ. ಅವರ ಗಾಯನ ಎಂದೂ ಹುಸಿ ಹೋಗದು. ಬಸವರಾಜ ರಾಜಗುರು ಹುಕುಮಿ ಎಕ್ಕಾ ಇದ್ದಂತೆ” ಎಂದು ಕೊಂಡಾಡಿದರು.

ಬಸವರಾಜ ರಾಜಗುರು ಅವರದು ಅಪಾರ ವೈವಿಧ್ಯ ಬಹುಶ್ರುತತೆ: ಧ್ರುಪದ, ಧಮಾರ್, ಖ್ಯಾಲ, ಠುಮರಿ, ಗಝಲ್‌, ವಚನಗಳು, ಕನ್ನಡ ಮತ್ತು ಮರಾಠಿ ರಂಗಗೀತೆಗಳು, ಕನ್ನಡ ಮತ್ತು ಮರಾಠಿ ಭಾವಗೀತೆಗಳು, ದಾಸರ ಪದಗಳು, ಕೀರ್ತನೆಗಳು, ಬಯಲಾಟದ ಹಾಡುಗಳು. ಏನೇ ಹಾಡಿದರೂ ಇಂಚರ ಸಂಚಾರ.

ಬಸವರಾಜ ರಾಜಗುರು ಚೀಜುಗಳ ಭಂಡಾರವೇ ಆಗಿದ್ದರು. ಒಂದೊಂದು ರಾಗದಲ್ಲೂ ೪೦-೪೫ ಚೀಜುಗಳನ್ನು ಹಾಡಬಲ್ಲವರಾಗಿದ್ದರು. ಅವುಗಳಿಗೆ ಸ್ವರಪ್ರಸ್ತಾರ ಹಾಕಿ ಪ್ರಕಟಿಸಿದ್ದರೆ ಅಮೂಲ್ಯ ಗ್ರಂಥವಾಗಿರುತ್ತಿತ್ತು.

ಬಸವರಾಜ ರಾಜಗುರು ಗಾಯನವೆಂದರೆ ಕಿರಾಣಾ, ಗ್ವಾಲಿಯರ, ಪಟಿಯಾಲಾ ಘರಾಣೆಗಳ ತ್ರಿವೇಣಿ ಸಂಗಮ. ಅದು ಹನ್ನೊಂದು ಗುರುಗಳಲ್ಲಿ ಅಭ್ಯಸಿಸಿದ ಫಲ: ಪಂಚಾಕ್ಷರಿ ಗವಾಯಿಗಳು, ನೀಲಕಿಂಠಬುವಾ ಮಿರಜಕರ, ಸವಾಯಿ ಗಂಧರ್ವ, ಸುರೇಶಬಾಬು ಮಾನೆ, ಬಶೀರಖಾನ, ಮುಬಾರಕ ಆಲಿ, ಅಬ್ದುಲ್‌ ವಹೀದಖಾನ, ಲತೀಫಖಾನ, ಇನಾಯತುಲ್ಲಾಖಾನ, ರೋಶನ ಅಲಿ, ಗೋವಿಂದರಾವ ಟೇಂಬೆ. ಹೀಗಾಗಿ, ಅವರ ಗಾಯನದಲ್ಲಿ ಎಲ್ಲಿಲ್ಲದ ಸಾರಸಂಗ್ರಹ ಗುಣ. ಇವರೆಲ್ಲರ ಪ್ರಭಾವಗಳನ್ನು ತೇಪೆಯಾಗದಂತೆ ತಮ್ಮ ಪ್ರತಿಭೆಯ ಮೂಸೆಯಲ್ಲಿ ಎರಕ ಹೊಯ್ದುದು ರಾಜಗುರು ಅವರ ದೊಡ್ಡ ಸಾಧನೆ.

ಬಸವರಾಜ ರಾಜಗುರು ಅವರದು ದೈವದತ್ತ ಕಂಠ. ಆ ಎಂದರೆ ಸಾಖು, ಶ್ರೋತೃ ಮಂತ್ರಮುಗ್ಧ.ಧ್ವನಿ ಮೇಣದಂತೆ ಮಿದುವು. ಅತ್ಯಧಿಕ ಸ್ಥಿತಿಸ್ಥಾಪಕತೆ. ಶೃತಿಗೆ ಒಂದಿನಿತೂ ಚ್ಯುತಿಯಾಗದಂತೆ ಮೂರೂ ಸಪ್ತಕಗಳಲ್ಲಿ ಲೀಲಾಜಾಲ ಸಂಚಾರ. ತಾರಸಪ್ತಕದಲ್ಲಂತೂ ವಿಜೃಂಭಣೆ. ಗಝಲ್‌ ರಾಣಿ ಬೇಗಂ ಅಖ್ತರ್ “ರಾಜಗುರು ಆನೆ ಸೂಋ ಕಾ ಬಾದಶಾಹ” ಎಂದು ಉದ್ಗರಿಸಿದ್ದು ಸುಮ್ಮನೆ ಅಲ್ಲ.

ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹಿಂದುಸ್ತಾನಿ ಗಾಯನ ಮಧ್ಯದಲ್ಲಿ ಕರ್ನಾಟಕ ಸ್ವರಪ್ರಸ್ತಾರ ಚಿಮ್ಮಿ ಬರುತ್ತಿದ್ದುದಿದೆ. ಒಮ್ಮ ಅಹಿರಭೈರವ ಹಾಡಿದ ಮೇಲೆ ಸಮಾಂತರ ಕರ್ನಾಟಕ ರಾಗ ಚಕ್ರವಾಕಮ್‌ನಲ್ಲಿ ತ್ಯಾಗರಾಜ ಕೃತಿ ಹಾಡಿದ್ದುದಿದೆ. ಎರಡೂ ಪದ್ಧತಿಗಳಲ್ಲಿ ಪರಿಣತಿ.

ಬಸವರಾಜ ರಾಜಗುರು ಅವರ ತೀವ್ರಗತಿಯ ತಾನಗಳಲ್ಲಿ ಬಡೆ ಗುಲಾಮ ಅಲಿ ಖಾನರ ನಿರಾಯಾಸತೆ, ಸಂಕೀರ್ಣತೆ ಇವೆ. ತೀವ್ರಗತಿಯಲ್ಲೂ ಇಂಚರ ಅಬಾಧಿತ. ಕೆಲವು ಗಾಯಕರ ಧ್ವನಿಯಾದರೊ ತೀವ್ರಗತಿಯಲ್ಲಿ ಕೀರಲಾಗಿಬಿಡುತ್ತದೆ. ಸ್ವರಶುದ್ಧತೆಗೆ ಚ್ಯುತಿಬಾರದ ಸ್ಪಷ್ಟೋಚ್ಚಾರಣೆ ರಾಜಗುರು ಅವರ ಗಾಯನದಲ್ಲಿ. ವೃದ್ಧ ಶ್ರೋತೃಗಳು ರಾಜಗುರು ಗಾಯನ ಆಲಿಸುವಾಗ “ಇದು ದೀನಾನಾಥ ಅಂಥದು, ಇದು ನಾರಾಯಣಬುವಾ ಅವರ ಮುರ್ಕಿ, ಇದು ಕೇಶವರಾವ್‌ರ ಚಕ್ರಿತಾನ, ಇದು ಶಂಕರರಾವ್‌ರ ಸ್ವರ” ಇತ್ಯಾದಿಯಾಗಿ ಗುರುತಿಸುತ್ತಿದ್ದರು. ರಾಜಗುರು ಗಾಯನದಲ್ಲಿ ಘಸೀಟ್‌, ಮುರ್ಕಿ, ಗಮಕ್‌, ಮೀಂಡ್‌, ಸರಗಮ್‌, ಬೋಲ್‌ತಾನ್‌ ಏನೆಲ್ಲ ಮಸಾಲೆಗಳು! ಇವೆಲ್ಲಕ್ಕೆ ಉಪ್ಪಿನಕಾಯಿಯಂತೆ ಅದ್ಭುತ ಆಶುಚಮತ್ಕಾರ. ಅದೊಂದು ನಳಪಾಕ!!

ಬಸವರಾಜ ರಾಜಗುರು ಅವರಿಗೆ ಹಲವು ಬಿರುದು, ಪ್ರಶಸ್ತಿಗಳು ಸಂದಿವೆ. ಇದನ್ನು ಸರಕಾರ, ಸಂಗೀತ ಪ್ರೇಮಿಗಳು ಮತ್ತು ಸಂಸ್ಥೆಗಳು ಕೊಡಮಾಡಿವೆ. ಗಾನಕೋಕಿಲೆ, ಸಂಗೀತ ಸುಧಾಕರ, ಗಾನಗಂಧರ್ವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮುಂಬಯಿಯ ಸೂರಸಿಂಗಾರ್ ಸಂಸದ್‌ನ ಸ್ವರವಿಲಾಸ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಪದ್ಮಭೂಷಣ.

ಆದರೆ, ಇವೆಲ್ಲಕ್ಕೂ ಮಿಗಿಲಾದ ಪ್ರಶಸ್ತಿಯೆಂದರೆ ಬಸವರಾಜ ರಾಜಗುರು ಅವರು ಬಳುವಳಿಯಾಗಿ ಬಿಟ್ಟುಹೋಗಿರುವ ಶಿಷ್ಯವೃಂದ. ಸೋಮನಾಥ ಮರಡೂರ, ಷಣ್ಮುಖ ಗೊಜನೂರ, ಗಣಪತಿ ಭಟ್ಟ ಹಾಸಣಗಿ, ಪರಮೇಶ್ವರ ಹೆಗಡೆ, ಶ್ರೀಪಾದ ಹೆಗಡೆ, ಶಾಂತಾರಾಮ ಹೆಗಡೆ, ಪೂರ್ಣಿಮಾ ಭಟ್ಟ, ಸಂಗೀತಾ ಕಟ್ಟಿ, ರೋಹಿಣಿ ದೇಶಪಾಂಡೆ, ನಚಿಕೇತ ಶರ್ಮಾ ಮುಂತಾದವರು.ಇವರಲ್ಲನೇಕರು ಉತ್ತಮ ಗಾಯಕರಾಗಿದ್ದು ಗುರುಪರಂಪರೆಯನ್ನು ಮುಂದುವರಿಸಿದ್ದಾರೆ. ಇಷ್ಟೊಂದು ದೊಡ್ಡ ಶಿಷ್ಯಪರಿವಾರ ಹೊಂದಿದ್ದ ಸಂಗೀತಗಾರರು ಅಪರೂಪವೆಂದೇ ಹೇಳಬೇಕು.