ವಸಾಹತುಶಾಹಿ ಆಳ್ವಿಕೆ ಇಡೀ ಭಾರತವನ್ನು ಆವರಿಸಿದ್ದ ಕಾಲ. ಇದರ ಕಬಂಧದಿಂದ ಮುಕ್ತಿಪಡೆದು ರಾಷ್ಟ್ರೀಯ ಹೋರಾಟಕ್ಕಾಗಿ ಸಜ್ಜುಗೊಳ್ಳುವುದು ಒಂದೆಡೆಯಾಗಿತ್ತು. ಮತ್ತೊಂದೆಡೆ ಆಂತರಿಕ ವೈರುಧ್ಯಗಳು ಭಾರತೀಯ ಸಮಾಜವನ್ನು ಕಾಡುತ್ತಿದ್ದವು. ಸ್ವಾತಂತ್ರ ಪೂರ್ವದ ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಮಾಜ ಸುಧಾರಕರಾಗಿ ಹಲವಾರು ಮಹನೀಯರು ಕಾಣಿಸಿಕೊಂಡರು. ಈ ರಾಷ್ಟ್ರವನ್ನು ಕಟ್ಟುವಲ್ಲಿ ನವಸಮಾಜವನ್ನು ನಿರ್ಮಾಣ ಮಾಡುವಲ್ಲಿ ಆಹರ್ನಿಶಿ ದುಡಿದುದು ಅವರ ಹೆಗ್ಗಳಿಕೆ. ಅಂತಹ ಮಹಾನ್‌ಚೇತನಗಳಲ್ಲಿ ಡಾ. ಬಾಬು ಜಗಜೀವನರಾಮ್‌ಅವರೂ ಒಬ್ಬರು. ಶ್ರೇಣೀಕೃತ ಹಿಂದೂ ಸಮಾಜ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಅಲಕ್ಷಿತ ಸಮುದಾಯಗಳನ್ನು ಹೊಸ ಮನ್ವಂತರದೆಡೆಗೆ ಕೊಂಡೊಯ್ದ ಗಣ್ಯವ್ಯಕ್ತಿ ಬಾಬೂಜಿ ಎಂದರೆ ತಪ್ಪಾಗಲಾರದು. ಭಾರತೀಯ ಸಮಾಜ ಸುಧಾರಣೆಯ ಮಹಾಚೇತನಗಳಾದ ಜ್ಯೋತಿಬಾಫುಲೆ, ಶ್ರೀ ನಾರಾಯಣಗುರು, ಪೆರಿಯಾರ್, ಸಂತ ರವಿದಾಸ್‌, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಡಾ. ಬಿ.ಆರ್. ಅಂಬೇಡ್ಕರ್, ಗಾಂಧೀಜಿ ಮುಂತಾದ ವರ ಮುಂದುವರೆದ ನೇತಾರರಾಗಿ ಡಾ.ಬಾಬು ಜಗಜೀವನರಾಮ್‌ಅವರನ್ನು ಗುರುತಿಸುವುದು ಸೂಕ್ತವಾಗಿರುತ್ತದೆ. ಅಸ್ಪೃಶ್ಯತೆ ಬಗೆಗೆ ಧ್ವನಿಯೆತ್ತುವ ಮೂಲಕ ಸರ್ವರು ಶಿಕ್ಷನ ಪಡೆಯಬೇಕೆಂದು, ಆ ಮೂಲಕ ಸಬಲೀಕರಣಗೊಂಡು ವಿಮೋಚನೆಗೊಳಪಡಬೇಕೆಂಬ ಹಂಬಲ ಹೊಂದಿದವರು. ವಸಾಹತುಶಾಹಿ ವಿರುದ್ಧದ ಹೋರಾಟದ ಜೊತೆಗೆ ರಾಷ್ಟ್ರೀಯ ಹೋರಾಟದ ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದು ಇವರ ವಿಶೇಷತೆ, ಸ್ವಾತಂತ್ರ್ಯ ನಂತರದ ಕೇಂದ್ರ ಸರಕಾರದ ಹಲವು ಉನ್ನತ ಸ್ಥಾನಗಳನ್ನು ಹೊಂದಿದ್ದರೂ ತಮ್ಮ ಹೋರಾಟದ ಮನೋಭಾವದಿಂದ ವಿಮುಕ್ತರಾದವರಲ್ಲ. ದಲಿತರ ಅಭಿವೃದ್ಧಿಗಾಗಿ ಹಲವಾರು ಕಾರ್ಯಯೋಜನೆಗಳನ್ನು ರೂಪಿಸಿದರು. ಅವುಗಳಲ್ಲಿ ಪ್ರಮುಖವಾಗಿ ಗುರುತಿಸುವಂತಹುದು ಭಾರತೀಯ ಸಮಾಜದ ವರ್ಣವ್ಯವಸ್ಥೆ. ಇದರ ಸುಧಾರಣೆಗಾಗಿ ಬಾಬೂಜಿ ಅವರ ಪ್ರಯತ್ನ ಚಿರಸ್ಮರಣೀಯವಾದುದು.

ವರ್ಣವ್ಯವಸ್ಥೆಯು ಭಾರತದಾದ್ಯಂತ ತನ್ನ ವ್ಯಾಪಕ ಬಾಹುಗಳನ್ನು ಚಾಚಿತು. ಅಲ್ಲದೇ ಆರಂಭದಲ್ಲಿ ವೃತ್ತಿಯನ್ನು ಅವಲಂಬಿಸಿ ರೂಪುಗೊಂಡ ಈ ವ್ಯವಸ್ಥೆಯು ಕ್ರಮೇಣ ಜಾತಿಯ ನೆಲೆಯಲ್ಲಿ ಸ್ಫೋಟಗೊಂಡದ್ದು ಹಲವಾರು ಸಾಮಾಜಿಕ-ಸಾಂಸ್ಕೃತಿಕ ಸಂಘರ್ಷಕ್ಕೆ ಎಡೆಮಾಡಿತು. ಈ ಸಾಂಸ್ಕೃತಿಕ ಸಂಘರ್ಷದಲ್ಲಿ ಪ್ರಬಲಗೊಂಡದ್ದು ವೈದಿಕ ಆಚರಣಾ ಮೂಲದ ಸಮುದಾಯವು ರಾಜಕೀಯ ವ್ಯವಸ್ಥೆಯಾಗಿ ಮುಖಾಮುಖಿಯಾದ ಸಂದರ್ಭದಲ್ಲಿಯೇ ಶೋಷಣೆಯ ಆರಂಭವಾಯಿತು. ಈ ವ್ಯವಸ್ಥೆಯಲ್ಲಿ ಶೋಷಿತರಾದವರನ್ನು ವ್ಯವಸ್ಥಿತವಾಗಿ ಯಜಮಾನನಂತೆ ಕಾರ್ಯ ನಿರ್ವಹಿಸುತ್ತಿದ್ದ ಆಡಳಿತವರ್ಗ ತನ್ನ ಸಾರ್ವಭೌಮತ್ವವನ್ನು ಕೆಳವರ್ಗ, ಜಾತಿಗಳೆಂಬ ಹೆಸರನ್ನು ನೀಡಿ ದುರ್ಬಲರ ಮೇಲೆ ಸರ್ವಾಧಿಕಾರವನ್ನು ಸ್ಥಾಪಿಸಿಕೊಂಡು ಅವರಿಗೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ನೆಲೆಯಲ್ಲಿ ಹಲವಾರು ಹುನ್ನಾರಗಳನ್ನು ರೂಪಿಸಿ ಮೂಢರನ್ನಾಗಿ ಮಾಡುವಲ್ಲಿ ಯಶಸ್ವಿಯಾಯಿತು. ಈ ಅವಧಿಯಲ್ಲಿ ಅಧಿಕಾರವನ್ನು ನಿಯಂತ್ರಿಸುವ ಶಕ್ತಿಯಿಲ್ಲದ ತಳವರ್ಗಗಳವರು ಅನಿವಾರ್ಯವಾಗಿಯೇ ಶೋಷಣೆಗೆ ಒಳಪಟ್ಟು ಆಳುವರ್ಗದ ನೆರಳಲ್ಲಿಯೇ ಬದುಕುವ ಸ್ಥಿತಿಯು ಒದಗಿಬಂದಿತು. ಶ್ರಮಮೂಲ ಸಂಸ್ಕೃತಿಯ ವಕ್ತಾರರಾಗಿ ತಳವರ್ಗದವರು ರಾಜ್ಯ ಸರ್ವತ್ರ ಅಭಿವೃದ್ಧಿಗೆ ಕಾರಣವಾಗಿದ್ದರೂ ಇವರ ಈ ಕಾರ್ಯ ಆಳುವರ್ಗ ಹಾಗೂ ಆಳುವವರನ್ನು ಪರೋಕ್ಷವಾಗಿ ನಿಯಂತ್ರಿಸುವ ಪುರೋಹಿತಶಾಹಿ ವರ್ಗದ ಗಮನಕ್ಕೆ ಬಾರದೇ, ತಮ್ಮ ಸರ್ವಾಧಿಕಾರಿ ನೆಲೆಯಲ್ಲಿಯೇ ಆಳಿಸಿಕೊಳ್ಳುವವರನ್ನು ದುರ್ಬಲಗೊಳಿಸಲಾಯಿತು. ಜಾತ್ಯತೀತ ರಾಜಕಾರಣ ಸ್ವಾತಂತ್ಯ್ರೋತ್ತರ ಭಾರತದಲ್ಲಿದ್ದರೂ ಅದರ ಅಪ್ರತ್ಯಕ್ಷರೂಪವಾಗಿ ಜಾತಿರಾಜಕಾರಣವೆಂಬುದು ಸಾಮಾಜಿಕ ಸಂಘರ್ಷಕ್ಕೆ ಎಡೆಮಾಡುತ್ತಿರುವುದು ಕಂಡುಬರುತ್ತಿದೆ.

ಈ ಹಿನ್ನೆಲೆಯ ಭಾರತದಲ್ಲಿ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಸ್ಪೃಶ್ಯ-ಅಸ್ಪೃಶ್ಯ ಎಂಬ ಮನೋಭಾವನೆಯನ್ನು ತೊಡೆದುಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಇತಿಹಾಸದುದ್ದಕ್ಕೂ ಅನೇಕ ಮಹನೀಯರನ್ನು ಹೆಸರಿಸಬಹುದು. ವಿಶಿಷ್ಟಾ ದ್ವೈತಮತಾಚಾರ್ಯರಾದ ಶ್ರೀ ರಾಮಾನುಜಾಚಾರ್ಯರು ಅಸ್ಪೃಶ್ಯರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ, ಅವರಿಗೆ ದೇವಾಲಯಗಳಲ್ಲಿ ಪ್ರವೇಶ ದೊರಕಿಸಿ ಅಸ್ಪೃಶ್ಯ ನಿವಾರಣೆಗೆ ನಾಂದಿ ಹಾಡಿದರು. ೧೨ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ತತ್ವವನ್ನು ನಿರೂಪಿಸಿದ ಬಸವಣ್ಣ, ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದನೆಲೆ ಯೆನೇನಾದರೂ ಬಲ್ಲಿರಾ? ಎಂದು ಎಚ್ಚರಿಸಿದ ಭಕ್ತ ಕನಕದಾಸ, ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಎಂದ ಕವಿ ಸರ್ವಜ್ಞ, ಮುಸ್ಲಿಂನಾಗಿ ಬದುಕಬೇಕಾಗಿದ್ದರೂ ರಾಮನಾಮವನ್ನು ಕೊಂಡಾಡಿದ ಕಬೀರದಾಸ, ಗೋವಿಂದಗುರುವಿನ ಪಾದ ಜಪಿಸಿದ ಶಿಶುನಾಳ ಶರೀಫ; ಚೈತನ್ಯ, ಸಂತ ತುಕಾರಾಮ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಮಹಾತ್ಮ ಜ್ಯೋತಿಬಾ ಫೂಲೆ, ಸಂತ ರವಿದಾಸ್‌, ಮಹಾತ್ಮಗಾಂಧಿ, ಡಾ. ಬಿ.ಆರ‍. ಅಂಬೇಡ್ಕರ್ ಹೀಗೆ ಅಸ್ಪೃಶ್ಯತೆ ವಿರುದ್ಧ ಧ್ವನಿಯೆತ್ತಿದವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಈ ಎಲ್ಲಾ ಮಹನೀಯರೊಂದಿಗೆ, ತಮ್ಮ ಜೀವನವಿಡೀ ಅಸ್ಪೃಶ್ಯತೆ ನಿವಾರಣೆ, ಅಸ್ಪೃಶರ ಏಳಿಗೆಗೆ ಹೋರಾಡಿ ಹೆಚ್ಚಿನ ಚಾಲನೆ ನೀಡಿ ಅದಕ್ಕೊಂದು ತಾತ್ವಿಕ ನೆಲೆಗಟ್ಟು ಹಾಗೂ ರೂಪ ಕೊಟ್ಟವರೆಂದರೆ ಅಂಬೇಡ್ಕರ್ ಹಾಗೂ ಜಗಜೀವನರಾಮ್‌ಪ್ರಮುಖರಾಗುತ್ತಾರೆ. ಈ ಇಬ್ಬರೂ ನಾಯಕರು ತಮ್ಮ ಹೋರಾಟವನ್ನು ಮಾಡಿದ್ದು ಭಾರತವು ಪರಕೀಯರ ದಾಸ್ಯದಲ್ಲಿದ್ದ ಸಂಕಷ್ಟ ಪರಿಸ್ಥಿತಿಯಲ್ಲಿ ಎಂಬುದನ್ನು ಗಮನಿಸಬೇಕು. ಅಸ್ಪೃಶ್ಯರ ಏಳಿಗೆಗೆ, ಅಸ್ಪೃಶ್ಯತೆ ನಿವಾರಣೆಗೆ ಹಾಗೂ ರಾಷ್ಟ್ರ ವಿಮೋಚನೆಗೆ ಹೋರಾಡಿದ ಮಹನೀಯರಲ್ಲಿ ಬಾಬು ಜಗಜೀವನರಾಮ್‌ಮೊದಲಿಗರು. ತಮಗಾದ ಅಪಮಾನ ಹಾಗೂ ಅನ್ಯಾಯಗಳು ತನ್ನ ಜನಾಂಗಕ್ಕೆ ಆಗಬಾರದೆಂದು ಅವುಗಳನ್ನೆಲ್ಲ ತಾಳ್ಮೆ, ಸಂಯಮದಿಂದ ಸಹಿಸಿಕೊಂಡು ಜೀವನಪೂರ್ತಿ ಹೋರಾಟವನ್ನೇ ನಡೆಸಿದವರು ಈ ಬಾಬುಜೀ. ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಸ್ವತಂತ್ರ ಭಾರತದ ಪ್ರಥಮ ಕೇಂದ್ರ ಕಾರ್ಮಿಕ ಮಂತ್ರಿಯಾಗಿ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಶ್ರಮಜೀವಿ ಜಗಜೀವನರಾಮ್‌ಎಂದರೆ ಅತಿಶಯೋಕ್ತಿಯಾಗಲಾರದು. ಉತ್ತಮ ಸಂಸದೀಯ ಪಟುಗಳು, ವಾಗ್ಮಿಗಳು ಆಗಿದ್ದ ಜಗಜೀವನರಾಮ್‌ರು ಸಂಸತ್ತಿನಲ್ಲಿ ಮಾತನಾಡಲು ಎದ್ದುನಿಂತರೆ ಇಡೀ ಸದನವೇ ಮೌನವಾಗಿ ಗಂಭೀರವಾದ ಅವರ ಭಾಷಣವನ್ನು ಆಲಿಸುತ್ತಿತ್ತು.

ಆಧುನಿಕ ಭಾರತದ ಇತಿಹಾಸದಲ್ಲಿ ಬಾಬು ಜಗಜೀವನರಾಮ್‌ಅವರದು ಅಚ್ಚಳಿಯದ ಹೆಸರು. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಕೋಟಿ ಕೋಟಿ ದಲಿತರ ಪ್ರತಿನಿಧಿಯಾಗಿ ಸಕ್ರಿಯ ಪಾತ್ರವಹಿಸಿ ಸ್ವತಂತ್ರ ಭಾರತದ ಪುನರ್ ನಿರ್ಮಾಣದ ಕಾರ್ಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದವರು. ಈ ಕಾರಣಕ್ಕಾಗಿಯೇ ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣರು ಬಾಬುಜೀ ಅವರನ್ನು ‘ವಿಶಿಷ್ಟ ಸಾಮಾಜಿಕ, ರಾಜಕೀಯ ವಿಚಾರಧಾರೆಯ ಪ್ರತೀಕ’ ಎಂದು ಕೊಂಡಾಡಿದ್ದರು. ಜಗಜೀವನರಾಮ್‌ರು ಬಾಬೂಜೀ ಎಂದೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಯ, ವಿನಯ, ತಾಳ್ಮೆ, ಮೃದು ಭಾಷಿಕತನ, ಎಂದೂ ಉದ್ವೇಗಕ್ಕೊಳಗಾಗದ ಅವರ ದೊಡ್ಡ ಗುಣ ಇವೆಲ್ಲ ಸೇರಿ ಬಾಬೂಜೀ ಆಗಿದ್ದರು.

 

ಬಾಬೂಜೀ ಬಾಲ್ಯ

ಬಿಹಾರರಾಜ್ಯವನ್ನು ‘ಪ್ರಾಚೀನಭಾರತದ ಜನ ತಾಂತ್ರಿಕ ವ್ಯವಸ್ಥೆಯ ತೊಟ್ಟಿಲು’ ಎಂದೇ ಕರೆಯಲಾಗುತ್ತಿದೆ. ಪ್ರಪ್ರಥಮವಾಗಿ ಸಮಾನತೆ, ಸೋದರತೆ ಮತ್ತು ಸ್ವಾತಂತ್ರ್ಯದ ಬೀಜಗಳನ್ನು ಚೆಲ್ಲಿದ ಬುದ್ಧನ ಜನ್ಮಭೂಮಿಯೂ ಹೌದು, ಪುಣ್ಯಭೂಮಿಯು ಹೌದು. ಆಂಗೂಲಿಮಾಲ, ಸುನೀತಾ, ಉಪಾಲ, ಜೀವಿಕ ಮುಂತಾದ ದಲಿತರ ಅಂಧಕಾರದ ವಲಯಗಳಿಗೆ ಬುದ್ಧನ ಕರುಣೆ, ಪ್ರೀತಿ-ವಾತ್ಸಲ್ಯದ ಹೊಂಗಿರಣಗಳು ಸೂಸಿದ ಜಾಗ. ಭಾರತದ ಸಾಂಸ್ಕೃತಿಕ ಏಕತೆ ಮತ್ತು ಸಮಗ್ರತೆಯನ್ನು ಸಾಧಿಸಿದ ಅಶೋಕನ ಸಾಮ್ರಾಜ್ಯ ಬಿಹಾರ. ಭಗವಾನ್‌ಮಹಾವೀರ, ಚಂದ್ರಗುಪ್ತ ಮೌರ್ಯ, ಕೌಟಿಲ್ಯ, ವಿಕ್ರಮಾದಿತ್ಯ, ಹರ್ಷವಧನ, ಜೆ.ಡಿ. ಟಾಟಾ, ಡಾ.ಬಾಬು ರಾಜೇಂದ್ರಪ್ರಸಾದ್‌, ಜಯಪ್ರಕಾಶನಾರಾಯಣ ಮುಂತಾದ ಅನೇಕ ಚಿಂತಕರನ್ನು, ಸಮಾಜ ಸುಧಾರಕರನ್ನು, ರಾಜಕೀಯ ದಾರ್ಶನಿಕರನ್ನು, ಮತ್ತು ಅತ್ಯುತ್ತಮ ಆಡಳಿತಗಾರರನ್ನು ನೀಡಿದ ನಾಡಲ್ಲಿ ಜನಿಸಿದ ಜಗಜೀವನರಾಮ್‌ಅವರೂ ಒಬ್ಬ ಮಹಾನ್‌ನಾಯಕ.

ಜಗಜೀವನರಾಮ್‌ಬಿಹಾರ ರಾಜ್ಯದ ಶಾಹಬಾದ್‌ಜಿಲ್ಲೆಯ ಚಂದ್ವಾ ಗ್ರಾಮದಲ್ಲಿದ್ದ ಚಮ್ಮಾರ ಕುಲದ ಶೋಭಿರಾಮ ಮತ್ತು ವಸಂತದೇವಿಯವರ ಐದನೇ ಮಗನಾಗಿ ಏಪ್ರಿಲ್‌೫, ೧೯೦೮ ರಂದು ಜನಿಸಿದರು. ತುಂಬಾ ಧಾರ್ಮಿಕ ಶ್ರದ್ಧೆಯುಳ್ಳವರಾದ ಶೋಭಿ ದಂಪತಿಗಳು ಶಿವನಾರಾಯಣ ಸಚೇತನಪಂಋದ ಅನುಯಾಯಯಿಗಳಾಗಿ ಆಧ್ಯಾತ್ಮಿಕತೆಯನ್ನು ಸಂಪಾದನೆ ಮಾಡಿಕೊಂಡಿದ್ದರು. ಶೋಭಿರಾಮ ಚಿಕ್ಕವರಿದ್ದಾಗ (ವಿವಾಹಕ್ಕೂ ಮುನ್ನ) ಪಂಜಾಬಿನ ಮಿಲಿಟರಿ ಸೇವೆಯಲ್ಲಿದ್ದ ಅವರ ಚಿಕ್ಕಪ್ಪನ ಸಹವಾಸದಿಂದ ಸ್ವಲ್ಪ ಇಂಗ್ಲೀಷ್‌ಭಾಷೆ ಕಲಿತಿದ್ದ. ಕ್ರಿಯಾಶೀಲನಾದ ಆತ ಸಿಪಾಯಿಗಳ ಆಸ್ಪತ್ರೆಯಲ್ಲಿ ಪರಿಚಾರಿಕೆ ಕೆಲಸ ಮಾಡುತ್ತಾ ಅಲ್ಲಿನ ಅಧಿಕಾರಿಗಳ ಸಂಪರ್ಕ ಬೆಳೆಸಿಕೊಂಡು ಇಂಗ್ಲೀಷ್‌ಶಿಕ್ಷಣ ಗಳಿಸಿದ. ಇದೇ ಸೈನ್ಯಕ್ಕೆ ಸೇರಲು ಬುನಾದಿ. ಕಾಲಾನಂತರದಲ್ಲಿ ಆತನಿಗೆ ದಿನಾಪುರಕ್ಕೆ ವರ್ಗವಾಯಿತು. ಅಲ್ಲಿಯೇ ವಸಂತದೇವಿಯ ಜೊತೆ ವಿವಾಹ ಜರುಗಿತು. ಸ್ವಂತ ಗಳಿಕೆಯಿಂದಲೇ ಕೌಟುಂಬಿಕ ಜೀವನ ಸಾಗಿಸಬೇಕೆಂಬ ಹಂಬಲ ಹೊಂದಿದ್ದರಿಂದ ಬರುವ ಅಲ್ಪ ಸಂಬಳದಲ್ಲಿ ಹಣ ಉಳಿಸಿ ಒಂದು ಸಣ್ಣ ಮನೆ ಕಟ್ಟಿಕೊಂಡ. ಶೋಭಿರಾಮ ಬದುಕನ್ನು ನಿರುಂಬಳವಾಗಿ ಸಾಗಿಸುತ್ತಿರುವಾಗ ಆಕಸ್ಮಿಕವಾಗಿ ನಡೆದ ಒಂದು ದುರ್ಘಟನೆ ಆತನ ನೌಕರಿಗೆ ಕಂಟಕಾರಿಯಾಯಿತು. ಮೇಲಾಧಿಕರಿಯವರು ಎಸಗಿದ ತಪ್ಪಿಗೆ ಕ್ಷಮೆಯಾಚಿಸುವ ಪ್ರಸಂಗ ನಡೆಯಿತು. ತಾನು ಮಾಡದ, ತನ್ನದಲ್ಲದ ತಪ್ಪಿಗೆ ತಲೆತಗ್ಗಿಸುವುದು ಅರ್ಥ ಹೀನವೆಂದು ಶೋಭಿರಾಮ ಭಾವಿಸಿದ. ಅತ್ಯಂತ ಸ್ವಾಭಿಮಾನಿಯಾದ ಶೋಭಿರಾಮ ಕ್ಷಮೆ ಬೇಡಲಿಲ್ಲ. ಈ ರೀತಿ ಸ್ವಾಭಿಮಾನಶೂನ್ಯರಾಗಿ ಕೆಲಸ ಮಾಡುವುದಕ್ಕಿಂತ ನೌಕರಿಯನ್ನು ಬಿಡುವುದೇ ಲೇಸೆಂದು ನೌಕರಿಯನ್ನು ತೊರೆದ. ಹೀಗೆ ಬದುಕಿನ ನಾನಾ ತಿರುವುಗಳಿಗೆ ಪರಿಪಕ್ವವಾಗಿದ್ದ ಶೋಭಿರಾಮ ಸಂಸಾರ ಸಮೇತ ಕಲ್ಕತ್ತಾಗೆ ಪ್ರಯಾಣ ಬೆಳೆಸಿದ. ಅಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ನೌಕರಿ ಪಡೆದ. ಈ ಎಲ್ಲಾ ಘಟನೆಗಳಿಂದಾಗಿ ಜರ್ಝರಿತನಾಗಿದ್ದ ಶೋಭಿರಾಮನ ಆರೋಗ್ಯ ಅದಾಗಲೇ ಕ್ಷೀಣಿಸತೊಡಗಿತ್ತು. ಅದರಿಂದ ಕಲ್ಕತ್ತೆಯ ಕೆಲಸ ತೊರೆದು ಚಂದ್ವಾ ಗ್ರಾಮಕ್ಕೆ ಬಂದ. ಜೀವನೋಪಾಯಕ್ಕಾಗಿ ಸ್ವಲ್ಪ ಭೂಮಿಯನ್ನು ಖರೀದಿಸಿ ಅಲ್ಲಿಯೇ ವಾಸಿಸತೊಡಗಿದ.

ಅಸ್ಪೃಶ್ಯರು ಎಂತಹ ದೊಡ್ಡ ಬಂಗಲೆ ಕಟ್ಟಿದರೂ, ಅವರೆಷ್ಟೇ ಆಧ್ಯಾತ್ಮಿಕ ಭಾವನೆ ಹೊಂದಿದ್ದರೂ ಶ್ರೇಷ್ಠತಮರೆನಿಸಿಕೊಳ್ಳುವುದಿಲ್ಲ. ಶೋಭಿರಾಮನ ಕುಟುಂಬ ಚಂದ್ವಾ ಗ್ರಾಮದ ಇತರೆ ಬಡವರಿಗಿಂತ ಸ್ವಲ್ಪ ಸುಧಾರಿಸಿತ್ತು. ವಿಭಿನ್ನ ಸ್ವಭಾವ ಹಾಗೂ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ ಶೋಭಿರಾಮ ಊರಿನ ಹಿರಿಯ ಕಿರಿಯರೆಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿದ್ದ. ಆಧ್ಯಾತ್ಮಿಕ ಸಂಬಂಧದ ಕಾರ್ಯಕಲಾಪಗಳಿಗೆ ಊರಿನ ಜನರು ಶೋಭಿರಾಮನನ್ನು ಔದಾರ್ಯದಿಂದ ಆಹ್ವಾನಿಸುತ್ತಿದ್ದರು. ಶೋಭಿರಾಮ ದಂಪತಿಗಳು ಸದಾ ಮಕ್ಕಳ ಏಳಿಗೆಯನ್ನು ಬಯಸುತ್ತಿದ್ದರು ಮತ್ತು ಅದಕ್ಕಾಗಿ ತವಕಿಸುತ್ತಿದ್ದರು. ಚಂದ್ವಾ ಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ಬ್ರಾಹ್ಮಣರು ಮತ್ತು ಚಮ್ಮಾರರು ವಾಸವಾಗಿದ್ದರು. ಈ ಸಮುದಾಯಗಳ ನಡುವೆ ಶೋಭಿರಾಮರ ಕುಟುಂಬ ಸಹಜ ಮೈತ್ರಿ ಹೊಂದಿದ್ದಿತು. ಸಾಮೂಹಿಕ ಭೋಜನವಿರುತ್ತಿರಲಿಲ್ಲ. ಗ್ರಾಮದ ದಲಿತರು ಪ್ರತಿದಿನ ನೀರಿಗಾಗಿ ಸವರ್ಣೀಯ ಕೇರಿಗಳ ಬಾವಿಯಿಂದ ನೀರನ್ನು ಬೇಡಿ ಪಡೆಯಬೇಕಾಗಿತ್ತು. ದಿನಗಟ್ಟಲೇ ನೀರಿಗಾಗಿ ಕಾದರೂ ನೀರು ಸಿಗುತ್ತಿರಲಿಲ್ಲ. ಸವರ್ಣೀಯರು ಏನೋ ಕೃಪೆ ತೋರುವವರಂತೆ ಆಗೊಮ್ಮೆ ಈಗೊಮ್ಮೆ ನೀರನ್ನು ಹಾಕುತ್ತಿದ್ದರು. ಇದನ್ನು ಕಂಡ ಶೋಭಿರಾಮನ ಮನಸ್ಸು ಮಮ್ಮಲ ಮರುಗಿತು. ತನ್ನ ಸ್ವಂತ ಖರ್ಚಿನಲ್ಲಿ ಕೇರಿಗೊಂದು ಕುಡಿಯುವ ಬಾವಿ ತೊಡಿಸಿಕೊಟ್ಟು ನೆನಪಿಡುವಂತಹ ಕೆಲಸವನ್ನು ಮಾಡಿದರು. ಶೋಭಿರಾಮ ಸದಾ ಊರಿನ ಮಕ್ಕಳನ್ನು ಆಟವಾಡಲು ಪ್ರೋತ್ಸಾಹಿಸುತ್ತಿದ್ದರು. ಹಾಗೆಯೇ ಅವರೂ ತಮ್ಮ ಮಕ್ಕಳಾದ ಹಿರಿಯ ಸಂತಲಾಲ (ಶಾಂತಲಾಲ ಎಂತಲೂ ಕರೆಯುತ್ತಿದ್ದರು), ಕಿರಿಯವ ಜಗಜೀವನರಾಮ್‌, ಹೆಣ್ಣುಮಕ್ಕಳಾದ ಬಾಲಕೇಶಿ, ರಾಮಕೇಶಿ ಹಾಗೂ ರಾಮದಾಸಿಯವರೊಂದಿಗೆ ಮಕ್ಕಳಂತೆ ಕುಣಿದು ಕುಪ್ಪಳಿಸುತ್ತಿದ್ದರು. ತನ್ನ ಮಕ್ಕಳೂ ಸಹ ಕ್ರೀಡಾ ಭಾವನೆಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವಂತೆ ಉಪದೇಶ ನೀಡುತ್ತಿದ್ದರು. ಬಾಲಕ ಜಗಜೀವನರಾಮ್‌ರಿಗೂ ಕೆಲವು ಆಟಗಳನ್ನು ಪರಿಚಯಿಸಿದರು. ಮಕ್ಕಳೆಲ್ಲ ವಿದ್ಯೆ ಕಲಿತು ದೊಡ್ಡ ಅಧಿಕಾರಿಗಳಾಗಬೇಕೆಂದು ಶೋಭಿರಾಮ್‌ಆಶಿಸಿದರು.

ಅದೊಂದು ದಿನ ವಸಂತದೇವಿ ತನ್ನ ಪುಟ್ಟ ಮಗ ಜಗಜೀವನರಾಮ್‌ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮನೆಯ ಮುಂದಿನ ಆವರಣದಲ್ಲಿ ಕುಳತಿದ್ದಳು. ಜಗಜೀವನರಾಮ್‌ಆಗಿನ್ನೂ ಕೇವಲ ಎಂಟುತಿಂಗಳ ಬಾಲಕ. ವಸಂತಿಯನ್ನು ನೋಡಲು ಅಕ್ಕಪಕ್ಕದ ಗೃಹಣಿಯರೆಲ್ಲ ಸಂಜೆಹೊತ್ತಿನಲ್ಲಿ ಅಲ್ಲಿಗೆ ಬಂದಿದ್ದರು.ಎಲ್ಲಿಂದಲೋ ಒಬ್ಬ ಕಾವಿ ವಸ್ತ್ರದಾರಿ ಅಲ್ಲಿಗೆ ಬಂದಿದ್ದ. ಆತನಲ್ಲಿ ತೇಜಸ್ವಿ ಗುಣವಿತ್ತು. ಶ್ವೇತಗಡ್ಡಧಾರಿಯಾಗಿದ್ದ ಆತ ಕೊರಳಲ್ಲಿ ಮಾಲೆಗಳನ್ನು ಹಾಕಿಕೊಂಡಿದ್ದ. ಒಂದು ಕೈಯಲ್ಲಿ ಕಮಂಡಲ ಇನ್ನೊಂದು ಕೈಗೆ ತ್ರಿಶೂಲ. ವಯಸ್ಸಾದ ಮುದುಕ ಸನ್ಯಾಸಿ ಎಂದೇ ಹೇಳಬಹುದು. ಆತ ಬಂದವನೇ ವಸಂತದೇವಿಯನ್ನೂ ಅವಳ ತೊಡೆಯ ಮೇಲೆ ಆಟವಾಡಿಕೊಂಡಿದ್ದ ಮಗು ಜಗಜೀವನರಾಮ್‌ನನ್ನೂ ನೋಡಿದ. ಆತನ ಮುಖ ಪ್ರಸನ್ನವಾಯಿತು. ಜಟಾಧಾರಿಯಾದ ಸನ್ಯಾಸಿಯು ತನ್ನ ಬಿಳಿಗಡ್ಡವನ್ನು ನೀವಿಕೊಳ್ಳುತ್ತಾ ವಸಂತದೇವಿಗೆ ‘ಅಮ್ಮ ನಿನ್ನ ಭಾಗ್ಯ ಏನೆಂದು ಹೇಳಲಿ? ನಿನ್ನ ಮಗ ಈ ದೇಶದ ಕೋಟ್ಯಾಂತರ ಜನರನ್ನು ಬಂಧನದಿಂದ ಮುಕ್ತಗೊಳಿಸುತ್ತಾನೆ. ಅಲೌಕಿಕ ಗುಣಗಳಿಂದ ಕೂಡಿದ ಈ ನಿನ್ನ ಮಗ ಜನೋಪಯೋಗಿ ಕಾರ್ಯಗಳನ್ನು ಮಾಡುವುದರ ಮೂಲಕ ಈ ದೇಶ ನಾಲ್ಕು ಕಡೆ ವಿಕಾಸಗೊಳ್ಳಲು ಕಾರಣನಾಗುತ್ತಾನೆ. ತುಂಬಾ ಕೀರ್ತಿವಂತನಾಗುತ್ತಾನೆ’ ಎಂದು ಹೇಳಿ ಹೋದವ ನಂತರ ತಿರುಗಿ ಬರಲಿಲ್ಲ. ಎಲ್ಲಿಗೆ ಹೋದನೆಂಬುದು ತಿಳಿಯಲಿಲ್ಲ. ಒಳಗೊಳಗೆ ಹಿಗ್ಗಿದ ವಸಂತದೇವಿ ಎಲ್ಲಿ ಮಗುವಿಗೆ ದೃಷ್ಟಿ ತಾಗುತ್ತದೆಂದು ಒಳಗೆ ಕರೆದುಕೊಂಡು ಹೋದಳು. ಸ್ವಲ್ಪ ಹೊತ್ತಿನಲ್ಲಿ ಭಾರಿ ಮಳೆ ಬಿದ್ದು, ಆಕಾಶವೆಲ್ಲ ಸ್ವಚ್ಛವಾಗಿತ್ತು.

 

ಶಿಕ್ಷಣ

ಜಗಜೀವನರಾಮ್‌ಚಂದ್ವಾ ಹಳ್ಳಿಯ ಶಾಲೆಯೊಂದನ್ನು ಸೇರಿ ವಿದ್ಯಾಭ್ಯಾಸಕ್ಕೆ ಮೊದಲು ಮಾಡಿದ. ಆಗ ಅವನಿಗೆ ಆರು ವರ್ಷ. ೧೯೧೪ನೇ ಜನವರಿಯ ವಸಂತ ಪಂಚಮಿ ದಿನದಂದು ಶೋಭಿರಾಮ ಮತ್ತು ವಸಂತದೇವಿ ಜೊತೆಗೂಡಿ ಕಪಿಲಮುನಿ ತ್ರಿಪಾಠಿ ಎಂಬ ಉಪಾಧ್ಯಾಯರಿದ್ದ ಶಾಲೆಗೆ ದಾಖಲೆ ಮಾಡಿದ. ಶುಭ ನಕ್ಷತ್ರದಲ್ಲಿ ಅವನಿಗೆ ಪ್ರವೇಶ ದೊರಕಿಸಲಾಗಿತ್ತು. ಅಂದು ಮನೆಯಲ್ಲಿ ಭಜನೆ, ಕೀರ್ತನೆಗಳು ನಡೆದವು. ಶಾಲೆಯು ತ್ರಿಪಾಠಿಯವರ ಅಂಗಳದಲ್ಲಿ ನಡೆಯುತ್ತಿತ್ತು. ಜಗಜೀವನರಾಮ್‌ರ ತಂದೆ ತಾಯಿಗಳು ತಮ್ಮ ಮಗ ಆಧ್ಯಾತ್ಮಿಕ ಸ್ವರೂಪಿಯಾಗಿ ಬೆಳೆಯಲೆಂಬ ಅಭಿಲಾಷೆಗಳಿಂದ ಕಿತ್ತಳೆಬಣ್ಣದ ಬಟ್ಟೆಗಳನ್ನು ಧರಿಸಿ ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಬಾಲಕ ಜಗಜೀವನರಾಮ್‌ಸಹಜವಾಗಿ ವಿದ್ಯಾಭ್ಯಾಸದತ್ತ ಲಕ್ಷ್ಯಕೊಟ್ಟು ಕಲಿಯತೊಡಗಿದ. ಬ್ರಾಹ್ಮಣರ ಮನೆ ವರಾಂಡ ಎಷ್ಟೋ ನಮೂನೆಗಳಲ್ಲಿ ತೆರೆದ ಪುಸ್ತಕವಾಗಿದ್ದರೂ ಅಲ್ಲಿಗೆ ಬರುತ್ತಿದ್ದ ಮಕ್ಕಳ ವರ್ತನೆ ಅವರವರ ಜಾತಿಪದ್ಧತಿಗಳಿಗೆ ಅನುಗುಣವಾಗಿಯೇ ಇರುತ್ತಿತ್ತು.

ಆರು ವರ್ಷದ ಬಾಲಕ ಜಗಜೀವನರಾಮ್‌ಶಾಲೆಗೆ ಸೇರಿದ ಐದನೇ ತಿಂಗಳಲ್ಲಿ ಮರೆಯಲಾಗದ ಘಟನೆಯೊಂದು ಜರುಗಿತು. ತಂದೆ ಶೋಭಿರಾಮ ಜ್ವರ ಬಂದು ಮಲಗಿದರು. ವಾರಗಟ್ಟಲೆ ಏನೂ ತಿನ್ನಲಿಲ್ಲ. ಔಷಧ ಸೇವನೆಯೂ ನಿಂತುಹೋಗಿತ್ತು. ರಾಮ್‌ದುಃಖಿತರಾದರು. ಒಂದು ದಿನ ಮಗನನ್ನು ಹತ್ತಿರ ಕರೆದು ‘ಮಗು ನಿನ್ನ ಅಣ್ಣನಿಗೆ ಇಂಗ್ಲೀಷ್‌ವಿದ್ಯಾಭ್ಯಾಸವನ್ನು ಕೊಡಿಸಿದೆ. ಒಳ್ಳೆ ನಾಗರಿಕನಾಗಿ ಬದುಕಲು ಬುನಾದಿ ಹಾಕಿಕೊಟ್ಟೆ. ನಿನಗೆ ಹಿಂದಿಯನ್ನು ಕಲಿಸಿಕೊಡಲೂ ನನ್ನಿಂದಾಗಲಿಲ್ಲ. ನಿನಗೆ ನನ್ನ ಆಶೀರ್ವಾದ ಇದೆ. ಚೆನ್ನಾಗಿ ಓದಿ ದೊಡ್ಡ ಪರೀಕ್ಷೆಗಳನ್ನು ಪಾಸುಮಾಡಿಕೊಂಡು ಅಧಿಕಾರ ಸಂಪಾದಿಸಿ ಕೀರ್ತಿವಂತನಾಗು’ ಎಂದು ಬಾಯಿತುಂಬ ಹರಸಿದರು. ದೀರ್ಘಕಾಲದ ಅಸ್ವಸ್ಥತೆಯ ಕಾರಣ ಜಗಜೀವನರಾಮ್‌ತಂದೆಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗಲಿಲ್ಲ. ಮನೆಯಲ್ಲಿ ಶಿವನಾರಯಾಣ ಸ್ತುತಿ ಆಗುತ್ತಿದ್ದಂತೆ ಶೋಭಿರಾಮ ಪರಲೋಕ ಯಾತ್ರೆ ಕೈಗೊಂಡರು. ಜಗಜೀವನರಾಮ್‌ರ ಮನಸ್ಸಿನಲ್ಲಿ ತಂದೆಯ ಸಾವು ಖಿನ್ನತೆಯನ್ನು ತಂದಿಟ್ಟಿತು. ತಂದೆ ಇಲ್ಲದ ತಬ್ಬಲಿಯಾದರು. ಸಂಪ್ರದಾಯದಂತೆ ಅಂತಿಮಕ್ರಿಯೆಗಳನ್ನು ಹಿರಿಯ ಮಗ ಮಾಡಬೇಕಿದ್ದರೂ, ಅವರ ಹೆಮ್ಮೆಯ ಕಿರಿಯಪುತ್ರನಾದ ಜಗಜೀವನರಾಮ್‌ಕೈಗಳಿಂದಲೇ ನೆರವೇರಿತು. ತಂದೆಯಿಂದ ಬಳುವಳಿಯಾಗಿ ಮಹಾಭಾರತ ಹಾಗೂ ರಾಮಾಯಣ ಪಾರಾಯಣ, ಅನೇಕ ಧಾರ್ಮಿಕ ಶ್ಲೋಕಗಳು ಹರಿದು ಬಂದಿದ್ದವು. ದಿನನಿತ್ಯದ ಸಂಧ್ಯಾವಂದನೆಯ ವೇಳೆಯಲ್ಲಿ ಅವುಗಳನ್ನು ಪಠಿಸುತ್ತಲೇ, ತಂದೆಯ ಸಾವಿನ ನೋವಿನಿಂದ ವಿಮೋಚನೆಗೊಂಡರು. ರಾಮ್‌ಚಂದ್ವಾ ಹಳ್ಳಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಐದನೇ ತರಗತಿಯವರೆಗೆ ಓದಿದರು. ಚುರುಕಿನ ಸ್ವಭಾವದ ರಾಮ್‌ನನ್ನು ಕಂಡರೆ ಕಪಿಲಮುನಿ ತ್ರಿಪಾಠಿ ಎಂಬ ಉಪಾಧ್ಯಾಯರಿಗೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ. ಅವನು ಚೆನ್ನಾಗಿ ವಿದ್ಯೆ ಕಲಿಯಲು ಉತ್ತೇಜಿಸಿದರು. ತ್ರಿಪಾಠಿಯವರ ಪ್ರಭಾವ ಜಗಜೀವನರಾಮ್‌ರ ಮೇಲೆ ಆಗಾಧವಾಗಿದ್ದು, ಮನೋಬಲ ಸಂಪಾದಿಸಿದ್ದರು. ಸ್ವತಃ ಪಂಡಿತರು ಬ್ರಾಹ್ಮಣರಾಗಿದ್ದರೂ ಅಸ್ಪೃಶ್ಯತೆಯ ಆಚರಣೆಯ ವಿಚಾರದಲ್ಲಿ ಉದಾರ ಮನೋಭಾವ ಹೊಂದಿದ್ದರು. ಅವರಿಗೆ ಉಚ್ಚ-ನೀಚ ಎಂಬ ಭೇದ-ಭಾವವಿರಲಿಲ್ಲ. ಇನ್ನೂ ಶಾಲೆಯಲ್ಲಿ ಓದುತ್ತಿದ್ದ ಸಮಯ. ಒಮ್ಮೆ ಭಾರಿ ಮಳೆಯಿಂದಾಗಿ ಗಂಗಾ ಮತ್ತು ಸೋನ್‌ನದಿಗಳಲ್ಲಿ ನೀರು ಉಕ್ಕಿ ಚಂದ್ವಾ ಗ್ರಾಮದ ತಗ್ಗು ಪ್ರದೇಶಗಳಿಗೆ ನುಗ್ಗಿದವು. ಅಲ್ಲಿನ ರಾಮ್‌ಕುಟುಂಬಗಳ ಮನೆಗಳೆಲ್ಲ ಜಲಾವೃತ್ತಗೊಂಡವು. ಪ್ರವಾಹದ ನೀರಲ್ಲಿ ಮನೆಗಳೆಲ್ಲ ಮುಳುಗಿಹೋದವು. ತ್ರಿಪಾಠಿಯವರು ಇದ್ದ ಮನೆ ತುಸು ಎತ್ತರದ ಪ್ರದೇಶದಲ್ಲಿತ್ತು. ಈ ಸಂದರ್ಭದಲ್ಲಿ ಅವರು ಜಗಜೀವನರಾಮ್‌ರ ಇಡೀ ಪರಿವಾರಕ್ಕೆ ತಮ್ಮ ಮನೆಯಲ್ಲಿ ರಕ್ಷಣೆ ಕೊಟ್ಟರು. ಸುಮಾರು ಆರುತಿಂಗಳ ಕಾಲ ವಾಸವಾಗಿದ್ದರು. ಹೀಗೆ ಜಗಜೀವನರಾಮ್‌ಹಾಗೂ ಅವರ ಗುರುಗಳಾದ ತ್ರಿಪಾಠಿಯವರ ಸಂಬಂಧ ಅನ್ಯೋನ್ಯವಾಗಿತ್ತು.

ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ಜಗಜೀವನರಾಮ್‌ಮಾಧ್ಯಮಿಕ ಶಾಲೆಯ ಶಿಕ್ಷಣಕ್ಕಾಗಿ ಪಕ್ಕದ ಅರ್ಹಾ ಪಟ್ಟಣದಲ್ಲಿದ್ದ ಅಗರವಾಲ ಇಂಗ್ಲೀಷ್‌ಶಾಲೆಗೆ ಜೂನ್‌೨, ೧೯೨೦ ರಂದು ಸೇರ್ಪಡೆಯಾದರು. ಈ ಶಾಲೆಗೆ ಶ್ರೀಮಂತರ ಮಕ್ಕಳೂ ಬಡವರ ಮಕ್ಕಳೂ ಬರುತ್ತಿದ್ದರು. ಇಂಗ್ಲೀಷ್‌ಮತ್ತು ವಿಜ್ಞಾನ ವಿಷಯಗಳಲ್ಲಿ ಜಗಜೀವನರಾಮ್‌ಅಪಾರ ಆಸಕ್ತಿ ಹೊಂದಿದ್ದರು. ಇಂಗ್ಲೀಷ್‌ಪಾಠ ಪ್ರವಚನಗಳಲ್ಲಿ ಸದಾ ದ್ವಿತೀಯ ಸ್ಥಾನ ಅವರಿಗಿರುತ್ತಿತ್ತು. ರಾಮ್‌ಅವರು ಇಂಗ್ಲೀಷ್‌ವ್ಯಾಕರಣ ಹಾಗೂ ಇತರೆ ಕೆಲವು ಪುಸ್ತಕಗಳನ್ನು ಖರೀದಿಸಿ ಹಗಲೂ ರಾತ್ರಿ ಕಷ್ಟಪಟ್ಟು ಓದಿ ಇಂಗ್ಲೀಷ್‌ನಲ್ಲಿ ಪ್ರಾವಿಣ್ಯತೆ ಪಡೆದರು. ಮೊದಲಿನಿಂದಲೂ ರಾಮ್‌ಸ್ವಾಭಿಮಾನಿ ಹಾಗೂ ಕರ್ತವ್ಯ ನಿಷ್ಠರು. ಹರಿಜನರಾದ್ದರಿಂದ ಶುಲ್ಕ ವಿನಾಯಿತಿ ಪಡೆಯಲು ಶಾಲೆಯ ಮುಖ್ಯೋಪಾಧ್ಯಾಯರು ರಾಮ್‌ನನ್ನು ಅರ್ಜಿ ಸಲ್ಲಿಸಲು ಸೂಚಿಸದರು. ಆದರೆ ಅವರು ಅರ್ಜಿಯನ್ನು ಸಲ್ಲಿಸಲಿಲ್ಲ. ಈ ಕುರಿತು ರಾಮ್‌ಮುಖ್ಯೋಪಾಧ್ಯಾಯರಲ್ಲಿ ವಿನಮ್ರತೆಯಿಂದ ‘ನನ್ನ ಬಳಿ ನೆಲಲ ಇದೆ. ಉತ್ತು ಬಿತ್ತು ಆಹಾರ ಬೆಳೆಯುತ್ತೇವೆ. ನನ್ನ ಅಣ್ಣ ಕಲ್ಕತ್ತದಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಅವರು ಮನೆಗೆ ನೆರವಾಗುತ್ತಿದ್ದಾರೆ. ನನಗೆ ಶುಲ್ಕ ವಿನಾಯತಿಯ ಅಗತ್ಯವಿಲ್ಲ. ನನ್ನ ಪಾಲಿನ ವಿನಾಯಿತಿಯನ್ನು ಯಾವುದಾದರೂ ಬಡ ಹುಡುಗನಿಗೆ ಕೊಟ್ಟು ಶುಲ್ಕವಿನಾಯಿತಿ ಮಾಡಿರಿ’ ಎಂದು ನಿರ್ಭೀತರಾಗಿ ನುಡಿದರು. ಎಷ್ಟುಮಂದಿಗೆ ಇಂತಹ ಮನೋಭಾವ ಇದೆ? ಅತ್ಯಂತ ಸ್ಥಿತಿವಂತರಾಗಿಯೂ, ಸಂಬಳ ಬರುತ್ತಿದ್ದರೂ ಕಡಿಮೆ ಸಂಬಳ ಬರುತ್ತಿದೆ ಎಂದು ಕುಟುಂಬ ನಿರ್ವಹಣೆ ಸಾಧ್ಯವಿಲ್ಲವೆಂದು ತಮ್ಮ ಮಕ್ಕಳಿಗೆ ಶುಲ್ಕವಿನಾಯಿತಿ ಕೇಳುವವರಿಗೆ ಕಡಿಮೆಯೇನಿಲ್ಲ. ಜಗಜೀವನರಾಮ್‌ರ ಮಾತು ಕೇಳಿ ಮುಖ್ಯೋಪಾಧ್ಯಾಯರು ನೀನೊಬ್ಬ ಆದರ್ಶ ವಿದ್ಯಾರ್ಥಿ ಎಂದು ಬಾಯಿತುಂಬಾ ಹೊಗಳಿದರು. ನಿನ್ನಂತಹವನಿಂದ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು. ಇವರ ಬುದ್ಧಿವಂತಿಕೆಯ ಅರ್ಹತೆಯ ಆಧಾರದ ಮೇಲೆ ಶುಲ್ಕವಿನಾಯತಿ ದೊರೆಯಿತು. ಜೊತೆಗೆ ವಿದ್ಯಾರ್ಥಿವೇತನವು ದೊರೆಯಿತು. ತಂದೆಯಿಂದ ರಾಮ್‌ಗೆ ಬಳುವಳಿಯಾಗಿ ಬಂದಿದ್ದ ಆತ್ಮಾಭಿಮಾನ ಹಾಗೂ ಸ್ವಾಭಿಮಾನಗಳು ಎಳೆಯ ಮನಸ್ಸಿನಲ್ಲಿಯೇ ಜೀವನದುದ್ದಕ್ಕೂ ಬಲಿಷ್ಠವಾಗಿ ಬೆಳೆದು ಕೊಂಡಿದ್ದವು.

ಮಾಧ್ಯಮಿಕ ಶಾಲೆ ಓದಿದ ಬಳಿಕ ರಾಮ್‌ಜೂನ್‌೨, ೧೯೨೨ ರಂದು ಅರ್ಹಾ ಪಟ್ಟಣದಲ್ಲಿದ್ದ ಆಂಗ್ಲ ಪ್ರೌಢಶಾಲೆಗೆ ಪ್ರವೇಶ ದೊರಕಿಸಿಕೊಂಡರು. ಗಣಿತ ಮತ್ತು ವಿಜ್ಞಾನಗಳಲ್ಲಿ ಮೊದಲಿನಿಂದಲೂ ನೂರಕ್ಕೆ ಅಂಕಗಳನ್ನು ಪಡೆಯುತ್ತಿದ್ದರು. ಬೇಸಿಗೆ ರಜೆ ಬಂದಾಗಲೆಲ್ಲ ರಾಮ್‌ಕಲ್ಕತ್ತದತ್ತ ಪ್ರಯಾಣಿಸುತ್ತಿದ್ದರು. ಕಲ್ಕತ್ತ ಆಗಿನ ಕಾಲಕ್ಕೆ ಕೈಗಾರಿಕೆ ಅಭಿವೃದ್ಧಿಯಲ್ಲಿ ಪ್ರಗತಿ ಹೊಂದಿದ್ದ ಮಹಾನಗರ. ಕಮ್ಯುನಿಷ್ಠರ ಪಾಳೆಯಗಳು ಆಗ ತಾನೇ ಅಲ್ಲಿ ನೆಲೆಯೂರಿದ್ದವು. ಬ್ರಿಟೀಷರ ನೇರ ಆಡಳಿತದಲ್ಲಿದ್ದರಿಂದ ಅಲ್ಲಿ ರೈಲು, ಬಸ್ಸು, ಪ್ರಾಣಿಸಂಗ್ರಹಾಲಯ, ವಿಕ್ಟೋರಿಯಾ ಸ್ಮಾರಕ, ಈಡನ್‌ಗಾರ್ಡ್‌ನ್‌ಗಳನ್ನು ಸ್ಥಾಪಿಸಲಾಗಿತ್ತು. ಅವುಗಳನ್ನು ನೋಡುತ್ತ ಬಾಲಕ ರಾಮ್‌ಮಾನಸಿಕವಾಗಿ ವಿಜ್ಞಾನ ವಿಷಯಗಳನ್ನು ಅಭ್ಯಾಸ ಮಾಡಲು ಮುಂದಾದ. ಸಾಮಾನ್ಯಜ್ಞಾನದಲ್ಲಿ ಅಭಿರುಚಿ ಬೆಳೆಸಿಕೊಂಡರು. ಪ್ರತಿನಿತ್ಯ ವೃತ್ತಪತ್ರಿಕೆಗಳನ್ನು ಓದಿ ದೇಶದ ಆಗು-ಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಇಲ್ಲಿಯೇ ರಾಮರಿಗೆ ಅಸ್ಪೃಶ್ಯತೆ ಕರಾಳ ಅನುಭವವಾಯಿತು. ಕಾರಣ ಆಗ ಜನಮಾನಸದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ಕುರಿತ ಭಾವನೆಗಳು.

ಸಮಾಜದಲ್ಲಿ ಅಸ್ಪೃಶ್ಯಜಾತಿಯೇ ಒಂದು ಪೀಡೆಯಾಗಿ ಕಾಡಿದ್ದು, ರಾಮ್‌ರ ಮನಸ್ಸನ್ನು ಚುಚ್ಚಿ ಘಾಸಿಗೊಳಿಸಿತ್ತು. ಅಸ್ಪೃಶ್ಯತಾ ಆಚರಣೆ ಅಮಾನವೀಯ, ಮನುಷ್ಯ ಮನುಷ್ಯನನ್ನು ಕಂಡು ಅಸಹ್ಯಪಡುವುದೇ? ಹೀಗೇಕೆ?ಎಂದು ಅನೇಕ ರಾತ್ರಿಗಳಲ್ಲಿ ಬಾಬೂಜೀ ನಿದ್ದೆ ಮಾಡದೇ ಒದ್ದಾಡುತ್ತಿದ್ದರು. ಅವರು ಓದುತ್ತಿದ್ದ ಟೌನ್‌ಶಾಲೆಯಲ್ಲಿ ಅಸ್ಪೃಶ್ಯತೆ ಕರಾಳ ಆಚರಣೆಯೊಂದು ನಡೆಯುತ್ತಿತ್ತು. ಅಲ್ಲಿ ಕುಡಿಯುವ ನೀರಿಗೆಂದು ಎರಡು ಮಡಕೆಗಳಲ್ಲಿ ನೀರು ತುಂಬಿಸಿಡುತ್ತಿದ್ದರು. ಒಂದು ಹಿಂದು ಮಡಕೆ ಇನ್ನೊಂದು ಮುಸ್ಲಿಮ್‌ಮಡಕೆ. ಒಂದು ದಿನ ರಾಮ್‌ಬಾಯರಿಕೆಯಿಂದ ಹಿಂದು ಮಡಕೆಯಲ್ಲಿದ್ದ ನೀರನ್ನು ತೆಗೆದುಕೊಂಡು ಕುಡಿಯತೊಡಗಿದ. ಇದನ್ನು ಕಂಡ ಮೇಲ್ಜಾತಿಯ ವಿದ್ಯಾರ್ಥಿಯೊಬ್ಬ ಓಡಿಹೋಗಿ ಮುಖ್ಯೋಪಾಧ್ಯಾಯರಿಗೆ ಸುದ್ದಿ ಮುಟ್ಟಿಸಿದ. ಸಿಟ್ಟಿಗೆದ್ದ ಮುಖ್ಯೋಪಾಧ್ಯಾಯರು ರಾಮ್‌ನನ್ನು ದುರುಗುಟ್ಟಿಕೊಂಡು ನೋಡಸುತ್ತಾ ‘ನೀನು ಹಿಂದುಗಳಿಗೆಂದು ಇರಿಸಿದ್ದ ಮಡಕೆಯಲ್ಲಿನ ನೀರು ತೆಗೆದುಕೊಂಡು ಕುಡಿದಿಯಂತೆ ನಿಜವೇ?’ ಎಂದು ಗದರಿದರು. ತಟ್ಟನೆ ರಾಮ್‌ಗಂಭೀರವಾಗಿ ಹೇಳಿದ ‘ಹೌದು ಕುಡಿದೆ, ಯಾಕೆ? ನಾನು ಹಿಂದು ಅಲ್ಲವೇನು?’ ಎಂದು ಪ್ರಶ್ನಿಸಿದರು. ಕಕ್ಕಾಬಿಕ್ಕಿಯಾದ ಮುಖ್ಯೋಪಾಧ್ಯಾಯರು ಸುಧಾರಿಸಿಕೊಳ್ಳುತ್ತಾ ‘ರಾಮ್ ನಾಳೆಯಿಂದ ನಿನಗೊಂದು ಹೊಸ ಮಡಕೆಯನ್ನು ಇರಿಸುತ್ತೇನೆ. ನೀನು ಆ ಮಡಕೆಯ ನೀರನ್ನು ಎತ್ತಿ ಕುಡುವಿಯಂತೆ’ ಎಂದರು.

ರಾಮ್‌ಒಪ್ಪಿದನಾದರೂ, ಅಸ್ಪೃಶ್ಯರಿಗಾಗಿಯೇ ಮೂರನೇ ಮಡಕೆ ಇಟ್ಟಿರುವುದು ಅಮಾನವೀಯ ಎಂದು ಅದನ್ನು ಬಲವಾಗಿ ವಿರೋಧಿಸಿದರು. ಆ ಮಡಕೆಯನ್ನು ಪ್ರತಿಭಟನಾರ್ಥವಾಗಿ ಒಡೆದುಹಾಕಿದರು. ಇದನ್ನು ಕಂಡ ವಿದ್ಯಾರ್ಥಿಗಳಿಗೂ, ಶಿಕ್ಷರಿಗೂ ಆಶ್ಚರ್ಯವಾಯಿತು. ಮುಖ್ಯೋಪಾಧ್ಯಾಯರು ಮತ್ತೊಂದು ಮಡಕೆಯನ್ನು ಇಟ್ಟರೂ ಅದನ್ನು ರಾಂ‌ಒಡೆದುಹಾಕಿದ. ಮುಖ್ಯೋಪಾಧ್ಯಾಯರು ತಮ್ಮ ಚಾಳಿಯನ್ನು ಬಿಡಲಿಲ್ಲ. ಪುನಃ ಮತ್ತೊಂದು ಮಡಕೆಯನ್ನು ಇಟ್ಟೇಬಿಟ್ಟರು. ಇದನ್ನು ನೋಡಿ ರಾಮ್‌ಕೆಂಡಮಂಡಲವಾದರು. ಅದಕ್ಕೂ ದೊಣ್ಣೆಸೇವೆ ಆಯಿತು. ಕೊನೆಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ರಾಮ್‌ಮಾಡುತ್ತಿರುವುದು ಮಾನವೀಯತೆಯ ದೃಷ್ಟಿಯಿಂದ ಸರಿಯೆಂದು ಮನವರಿಕೆಯಾಯಿತು. ಮುಖ್ಯೋಪಾಧ್ಯಾಯರು ಸೋತು ಹೋದರು. ಅಂದಿನಿಂದ ಶಾಲೆಯಲ್ಲಿ ಎಲ್ಲರಿಗೂ ಒಂದೇ ಮಡಕೆ ಎಂಬ ಆದೇಶ ಜಾರಿಯಾಯಿತು. ಅಸ್ಪೃಶ್ಯರು ಹಿಂದೂಗಳ ಮಡಕೆಯ ನೀರನ್ನು ಕುಡಿಯಬಹುದೆಂದು ಸೂಚನೆ ನೀಡಲಾಯಿತು. ಅಂದು ವರ್ಣಬೇಧನೀತಿಯ ವಿರುದ್ಧ ಹೋರಾಡಿದ ಜಗಜೀವನರಾಮ್‌ರಿಗೆ ಜಯ ದೊರಕಿತ್ತು. ಇದು ರಾಮ್‌ಜೀಯವರ ಹೋರಾಟದ ಪ್ರಥಮ ಗೆಲುವು ಹೌದು. ಅತ್ಯಂತ ಎಳೆವಯಸ್ಸಿನಲ್ಲಿ ಅಸ್ಪೃಶ್ಯತೆ ವಿರುದ್ಧ ರಾಮ್‌ತೋರಿದ ಈ ಪ್ರತಿಭಟನೆ ಅವರ ಸಾಮಾಜಿಕ, ಆರ್ಥಿಕ, ರಾಜಕೀಯ ಚಿಂತನೆಗಳಿಗೆ ಭದ್ರ ತಳಪಾಯವಾಯಿತು.

೧೯೨೫-೨೬ ರಾಮ್‌ರ ಬದುಕಿನ ತಿರುವಿನ ವರ್ಷಗಳು. ೧೯೨೫ ಮೇ ತಿಂಗಳಲ್ಲಿ ಬಿಹಾರ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ೧೮ನೇ ಅಧಿವೇಶನ ವಾರಣಾಸಿಯಲ್ಲಿ ನಡೆಯಿತು. ಸ್ವಾತಂತ್ರ್ಯ ಚಳುವಳಿಯ ಬಿಸಿಯೇರುತ್ತಿದ್ದ ಕಾಲ. ಇದು ಕಾಂಗ್ರೆಸಿನ ಮುಖಾಂತರ ಜನರನ್ನು ಒಗ್ಗೂಡಿಸಲು ಅನೇಕ ಪ್ರಯತ್ನಗಳನ್ನು ನಡೆಸಿತ್ತು. ಈ ವಿದ್ಯಾರ್ಥಿ ಸಮ್ಮೇಳನದಲ್ಲಿ ದೇಶದ ಪಂಡಿತ ಪಾಮರರೆಲ್ಲ ಭಾಗವಹಿಸುತ್ತಿದ್ದರು. ಅರ್ಹಾ ಪಟ್ಟಣದ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿನಾಯಕನಾಗಿ ಬನಾರಸ್‌ಹಿಂದೂ ವಿಶ್ವವಿದ್ಯಾಲಯದ ಆವರಣವನ್ನು ಬಾಲಕ ರಾಮ್‌ಪ್ರವೇಶಿಸಿದ್ದರು. ಅಲ್ಲಿ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ ಪ್ರಮುಖವಾಗಿತ್ತು. ರಾಮ್‌ಸರದಿಯಂತೆ ಸಹ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಅವರ ಬಾಯಿಂದ ಹೊರಡುತ್ತಿದ್ದ ಮಾಧುರ್ಯದ ಧ್ವನಿಗಳು ಹುಣಸೆಕೆಂಡದ ಮೇಲೆ ಬಿದ್ದು ಸಿಡಿಯುವ ಎಳ್ಳಿನಂತೆ ಚಟಗುಟ್ಟುತ್ತಿದ್ದವು. ನೆರದಿದ್ದವರೆಲ್ಲ ಭಾಷಣ ಕೇಳಿ ಮಂತ್ರಮುಗ್ಧರಾಗಿದ್ದರು. ಅಂದಿನ ಸಭೆಗೆ ಹಿಂದೂ ವಿಶ್ವವಿದ್ಯಾಲಯದ ಪಂಡಿತ ಮದನ್‌ಮೋಹನ್‌ಮಾಳವೀಯ ಅಗ್ರಮಾನ್ಯರಾಗಿದ್ದರು. ಅವರು ಬಾಲಕ ರಾಮ್‌ನ ಎಳೆಯ ಮನಸ್ಸಿನಲ್ಲಿದ್ದ ಸಾಮಾಜಿಕ ಕಳಕಳಿಯನ್ನು ಕಂಡು ತಲೆತೂಗಿದರು. ಹದ್ದಿನಕಣ್ಣಿನ ಪಂಡಿತರೆಂದೇ ಖ್ಯಾತಿ ಪಡೆದಿದ್ದ ಮಾಳವೀಯರು ಜಗಜೀವನರಾಮ್‌ರತ್ತ ಮಾನಸಿಕವಾಗಿ ನಡೆದು ಅಪ್ಪಿಕೊಂಡರು. ಈ ಬಂಧನ ಮುಂದೆ ರಾಮ್‌ರ ಜೀವನದುದ್ದಕ್ಕೂ ಹಿಂದು ಧರ್ಮದ ಅನುಯಾಯಿ ಆಗುವಂತೆ ಮಾಡಿಬಿಟ್ಟಿತ್ತು.

ಕಾಂಗ್ರೆಸ್‌ಮೊದಲ ಜಾಗತಿಕ ಯುದ್ಧವಾದ ನಂತರ ೧೯೨೬ರಲ್ಲಿ ಖಿಲಾಫತ್‌ಚಳುವಳಿ ಮುಖಾಂತರ ಹಿಂದೂ-ಮುಸ್ಲಿಮರನ್ನು ಒಂದೇ ವೇದಿಕೆಯಡಿ ತರಲು ನಿರ್ಧರಿಸಿತು. ಅದಾಗಲೇ ಗಾಂಧೀಜಿಯ ಯುಗ ಪ್ರಾರಂಭವಾಗಿತ್ತು. ಅವರು ರಾಷ್ಟ್ರೀಯ ಮುಂಚೂಣಿಯ ನಾಯಕರಾಗಿದ್ದರು. ೧೯೨೬, ಖಿಲಾಫತ್‌ಚಳುವಳಿಯ ಕಾವು ದೇಶದಲ್ಲೆಡೆ ಪಸರುತ್ತಿದ್ದಾಗ, ರಾಷ್ಟ್ರ ನಾಯಕರು ಜನರನ್ನು ಹುರಿದುಂಬಿಸಲು ಬಿರುಸಾಗಿ ತಿರುಗುತ್ತಿದ್ದರು. ಅರ್ಹಾ ನಗರದಲ್ಲಿ ಇಂತಹದೊಂದು ದೊಡ್ಡ ಸಭೆ ೧೯೨೬ ರಲ್ಲಿ ಜರುಗಿತ್ತು. ಪಂಡಿತ ಮಾಳವೀಯರು ಮತ್ತು ಮಹಮದ್‌ಅಲಿ ಜಿನ್ನರು ಸಭೆಯ ಪ್ರಮುಖ ಭಾಷಣಕಾರರು. ಅಲ್ಲಿನ ದಲಿತರು ತಮ್ಮ ಸಮಸ್ಯೆಗಳ ಕುರಿತು ಒಂದು ಬಿನ್ನವತ್ತಳೆ ಅರ್ಪಿಸಲು ನಿರ್ಧರಿಸಿದರು. ಅದನ್ನು ಸಿದ್ಧಪಡಿಸಿ ಸಭೆಯಲ್ಲಿ ಓದುವ ಹೊಣೆಗಾರಿಕೆ ರಾಮ್‌ಗೆ ವಹಿಸಿದ್ದರು. ೧೮ ವರ್ಷದ ರಾಮ್‌ಈ ಕಾರ್ಯವನ್ನು ಎಲ್ಲರ ಮನಮಿಡಿಯುವಂತೆ ಓದಿದರು. ಪಂಡಿತ ಮದನ್‌ಮೋಹನ ಮಾಳವೀಯ ರಾಮ್‌ನ ವಾಕ್ಚಾತುರ್ಯಕ್ಕೆ ಮಾರು ಹೋದರು. ತಾವು ತಂಗಿದ್ದ ಬಿಡಾರಕ್ಕೆ ಆತನನ್ನು ಕರೆದುಕೊಂಡು ಹೋಗಿ ಮುಂದಿನ ವಿದ್ಯಾಭ್ಯಾಸವನ್ನು ಬನಾರಸ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ನಡೆಸಲು ಆಹ್ವಾನಿಸಿದರು.

ಅದೇ ವರ್ಷದಲ್ಲಿ ಕಠಿಣ ಪರಿಶ್ರಮದ ವ್ಯಾಸಂಗದಿಮದ ೧೯೨೬ರಲ್ಲಿ ಮೆಟ್ರಿಕ್ಯುಲೇಷನ್‌ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮುಸ್ಲಿಮ್‌, ಹಿಂದೂ ನಾಯಕರುಗಳ ನೇರ ಪರಿಚಯವಾಯಿತು. ಪ್ರೌಢಶಿಕ್ಷಣ ಮುಗಿಸಿದಾಗ ಒಂದು ಚಾರಿತ್ರಿಕ ಘಟನೆ ಜರುಗಿತ್ತು. ರಾಮ್‌ಗಣಿತಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದರು. ಇಡೀ ಜಿಲ್ಲೆಗೆ ರಾಮ್‌ಪ್ರಥಮಸ್ಥಾನ ಪಡೆದಿದ್ದರು. ಈ ಫಲಿತಾಂಶ ಎಲ್ಲರ ಕಣ್ಣು ತೆರೆಸುವಂತಾಯಿತು. ಜಿಲ್ಲೆಯ ಎಲ್ಲಾ ಜಾತಿಯ ವಿದ್ಯಾರ್ಥಿಗಳನ್ನು ಹಿಂದಕ್ಕೆ ತಳ್ಳಿ ಪ್ರಥಮರೆನಿಸಿದ್ದರು. ಅವರ ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಕರ ಸಭೆ ಕರೆದು ವಿಚಾರಿಸಿದರು. ಮೇಲ್ಜಾತಿಯ ಜನರ ಮಕ್ಕಳೇಕೆ ಕಡಿಮೆ ಅಂಕಗಳಿಸಿದ್ದಾರೆ? ಇದಕ್ಕೆ ಏನು ಕಾರಣ? ಸಮಾಜಾಯಿಸಿ ಕೊಡಿ ಎಂದು ಆಡಳಿತ ಮಂಡಳಿಯು ಶಿಕ್ಷಕರನ್ನು ಕೇಳಿತು. ಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸಲು ಮುಂದಾಯಿತು. ಆಗ ಶಾಲಾ ಮುಖ್ಯೋಪಾಧ್ಯಾಯರು ಪ್ರತಿಕ್ರಿಯಿಸಿ ರಾಮ್‌ಇಡೀ ಜಿಲ್ಲೆಗೆ ಮೊದಲಿಗರಾಗಿ ಪಾಸಾಗಿದ್ದಾರೆ. ನೀವು ಶಿಸ್ತುಕ್ರಮವನ್ನು ಜಿಲ್ಲೆಯ ಎಲ್ಲಾ ಶಿಕ್ಷಕರ ಮೇಲೆ ಜರುಗಿಸಬೇಕಾಗುತ್ತದೆ ಎಂದಾಗ ಮಂಡಳಿಯವರು ಸುಮ್ಮನಾದರು. ಈಗಿನಂತೆ ವಿದ್ಯಾರ್ಥಿಗಳಿಗೆ ಅಂದಿನ ದಿನದಲ್ಲಿ ಶಾಲಾಪಾಠ, ಮನೆಪಾಠಗಳಿರಲಿಲ್ಲ. ಅದರಲ್ಲೂ ಅಸ್ಪೃಶ್ಯರಿಗೆ ಶಾಲೆಗಳೇ ಸಿಗದಿದ್ದ ಪರಿಸ್ಥಿತಿಯಲ್ಲಿ ಇಂತಹ ಸಾಧನೆ ಮಾಡಿದ್ದಾರೆಂದರೆ ಅದು ರಾಮ್‌ಅವರ ವ್ಯಾಸಂಗಪ್ರವೃತ್ತಿ, ಗ್ರಹಿಕಾ ಶಕ್ತಿ, ಪ್ರೌಢಿಮೆ ಹಾಗೂ ಸತತ ಶ್ರಮಗಳ ಬಗ್ಗೆ ಅವರ ಫಲಿತಾಂಶವೇ ಸಾಕ್ಷಿ ನೀಡಿದಂತಿತ್ತು.

೧೯೨೬ರ ಜುಲೈ ತಿಂಗಳು ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಮೊದಲವರ್ಷದ ಇಂಟರ್ ಮಿಡಿಯಟ್‌ವಿಜ್ಞಾನ ವ್ಯಾಸಂಗಕ್ಕೆ ಪ್ರವೇಶ ಪಡೆದರು. ಬಿರ್ಲಾ ವೇತನ ಸಹಾಯದಿಂದ ಅವರ ವ್ಯಾಸಂಗವನ್ನು ಮುಂದುವರೆಸಿದರು. ಅಸ್ಪೃಶ್ಯತೆಯ ಭೂತ ಮತ್ತೊಮ್ಮೆ ಇಲ್ಲಿ ರಾಮ್‌ರಿಗೆ ಕಾಡಿತು. ಬನಾರಸ ವಿಶ್ವವಿದ್ಯಾನಿಲಯವು ಹಿಂದೂ ಪಂಡಿತರ ಮಹಾಮನೆಯಂತಿದ್ದು, ಅಲ್ಲಿಯೂ ಅಸ್ಪೃಶ್ಯತೆ ಇತ್ತೆಂದರೆ ಇನ್ನುಳಿದ ಕಡೆ ಇರುವುದರ ಬಗ್ಗೆ ಆಶ್ಚರ್ಯ ಪಡಬೇಕಾಗಿಲ್ಲ. ವಿದ್ಯಾರ್ಥಿನಿಲಯದಲ್ಲಿನ ಕೆಲಸಗಾರರು ರಾಮ್‌ಅವರ ಊಟದ ತಟ್ಟೆಯನ್ನು ತೊಳೆಯಲು ನಿರಾಕರಿಸಿದರು. ಒಬ್ಬ ಅಸ್ಪೃಶ್ಯ ಚಮ್ಮಾರನ ಎಂಜಲು ಎತ್ತಿ, ಆತನ ತಟ್ಟೆಗಳನ್ನು ಶುಚಿಗೊಳಿಸಬೇಕಾಗಿತ್ತು. ತಮ್ಮ ಜಾತಿ ಘನತೆಗಳಿಗೆ, ಅಹಂಗೆ ಬಲವಾದ ಹೊಡೆತ ಬೀಳುವುದೆಂದು ಕಾರ್ಮಿಕರು ಭಾವಿಸಿ ತಟ್ಟೆಗಳನ್ನು ತೊಳೆಯಲು ನಿರಾಕರಿಸಿದರು. ರಾಮ್‌ಈ ಅವಮಾನ ಸಹಿಸದೆ ಹೋದ. ಪ್ರತಿಭಟನೆಗೆ ಮುಂದಾದ. ನೌಕರರು ವಿರೋಧಕ್ಕೆ ಮಣಿಯಲಿಲ್ಲ. ಕಡೆಗೆ ರಾಮ್‌, ಪ್ರಿನ್ಸಿಪಾಲ ಧೃವಾಜಿ ಸಹಾಯ ಪಡೆದುಕೊಂಡರು. ವಿದ್ಯಾರ್ಥಿನಿಲಯದಿಂದ ಹೊರಗಡೆ ವಾಸಿಸಲು ಅವಕಾಶ ಪಡೆದುಕೊಂಡರು. ಬನಾರಸ್‌ನಗರದ ಹೊರವಲಯದ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದು ತಾಯಿ ಬಸಂತಿದೇವಿ ಅವರೊಂದಿಗೆ ವಾಸಿಸತೊಡಗಿದರು. ಅಲ್ಲಿಗೆ ಸ್ವಲ್ಪ ದಿನಗಳಲ್ಲಿ ತಮ್ಮ ಎಂಟನೇ ವಯಸ್ಸನಲ್ಲಿ ಮದುವೆಯಾಗಿದ್ದ ಹೆಂಡತಿ ಬಂದು ಸೇರಿಕೊಂಡಳು.

ರಾಮ್‌ರವರಿಗೆ ಅಸ್ಪೃಶ್ಯತೆಯ ಕರಾಳ ಆಚರಣೆಗಳ ಅನಾವರಣ ಮೇಲಿಂದ ಮೇಲೆ ಅನುಭವಕ್ಕೆ ಬರತೊಡಗಿದವು. ಕ್ಷೌರಿಕನೊಬ್ಬ ಅವರ ಕೂದಲನ್ನು ತೆಗೆಯಲು ನಿರಾಕರಿಸಿದ. ಜಗಜೀವನರಾಮ್‌ಇದಕ್ಕೆ ಒಂದು ಸಾಮೂಹಿಕ ತಳಪಾಯ ತೋಡಿದರು. ಕ್ಷೌರಿಕನ ಉದ್ಧಟನ ತನವನ್ನು ಅಜ್ಞಾನದ ಫಲವೆಂದು ಪರಿಗಣಿಸಿದರು. ಅವರು ಸುತ್ತಮುತ್ತಲಿನ ಅಸ್ಪೃಶ್ಯರನ್ನು ಸಂಘಟಿಸಿ ಕ್ಷೌರಿಕರ ವಿರುದ್ಧ ಹೋರಾಟ ಆರಂಭಿಸಿದರು. ಅವರು ವ್ಯಕ್ತಿಗತ ದ್ವೇಷ ಸಾಧಿಸದೆ ದಲಿತವರ್ಗಗಳನ್ನು ಸಂಘಟಿಸಿ ಕ್ಷೌರಿಕನ ಮನೋಪ್ರವೃತ್ತಿ ವಿರುದ್ಧ ಪ್ರತಿಭಟಿಸಿದರು. ಸಾಮಾಜಿಕವಾಗಿ ಅವರಿಗೆ ಬಹಿಷ್ಕಾರ ಹಾಕುವಂತೆ ಆಗ್ರಹಿಸಿದರು. ಕ್ರಮೇಣವಾಗಿ ಕ್ಷೌರಿಕರಿಗೆ ತಮ್ಮಿಂದ ಸೃಷ್ಟಿಯಾದ ಸಮಸ್ಯೆ ಮೂಲ ಅರ್ಥವಾಯಿತು. ಕೊನೆಗೆ ಪರಿಶಿಷ್ಟ ಜನರಿಗೂ ಸೇವೆಮಾಡಲು ಮುಂದಾದರು. ಪಾಪ, ಆ ಕ್ಷೌರಿಕನಿಗೆ ಈ ನಾಡಿನ ಪುರೋಹಿತ ಸಿದ್ಧಾಂತ ತನ್ನ ಬದುಕನ್ನು ಬಲಿತೆಗೆದುಕೊಂಡಿರುವ ಚರಿತ್ರೆ ತಿಳಿಯಲು ಹೇಗೆ ಸಾಧ್ಯ ಎಂದು ಬಾಬೂಜಿ ಚಿಂತಿಸಿದರು.

ಜಗಜೀವನರಾಮ್‌ರು ಎರಡುವರ್ಷಗಳ ಇಂಟರ್ ಮಿಡಿಯಟ್‌ಮುಗಿಸಿದರು. ಬನಾರಸ ರಾಮ್‌ರ ರಾಜಕೀಯ, ಸಾಮಾಜಿಕ, ಬದುಕಿನ ಪ್ರಥಮ ಪ್ರಯೋಗ ಶಾಲೆಯಾಗಿತ್ತು. ಕಲ್ಕತ್ತ ವಿಶ್ವವಿದ್ಯಾನಿಲಯದ ವಿದ್ಯಾಸಾಗರ ವಿಜ್ಞಾನ ಕಾಲೇಜಿಗೆ ಪದವಿ ತರಗತಿ ವ್ಯಾಸಂಗಕ್ಕಾಗಿ ೧೯೨೮ರಲ್ಲಿ ಸೇರಿಕೊಂಡರು. ಅವರು ವಿಜ್ಞಾನದ ವಿದ್ಯಾರ್ಥಿಯಾಗಿ ಹಿಂದೂ ಸಮಾಜದ ನಾಡಿಮಿಡಿತ ಅರಿತವರು. ಕ್ರಾಂತಿಕಾರಿ ದೇವನಾರಾಯಣ ದೀಕ್ಷಿತರು ರಾಮ್‌ರ ಸಹಾಯಕ್ಕೆ ನಿಂತರು. ಕ್ಷೌರಿಕರ ವಿರುದ್ಧ ಹೋರಾಡಿದ ಹಾದಿಯು ರಾಮ್‌ಅವರ ಜೀವನದುದ್ದಕ್ಕೂ ಶೋಷಿತಜಾತಿಯ ದಲಿತ, ಹಿಂದುಳಿದ, ಆದಿವಾಸಿ ಹಾಗೂ ಅಲ್ಪಸಂಖ್ಯಾತರನ್ನು ಸಂಘಟಿಸಲು ಚಿಂತಿಸುವಂತೆ ಮಾಡಿತು. ಅದರಲ್ಲೂ ಕ್ರಾಂತಿಕಾರಕ ಸಂಘಟನೆಗಳು ಅವರನ್ನು ಕೈ ಬೀಸಿ ಕರೆಯತೊಡಗಿದವು. ಇಂತಹ ನೂರಾರರು ಸಂಕಷ್ಟಗಳ ನಡುವೆಯೂ ಮಧ್ಯಮ ವಿಜ್ಞಾನ ಕೋರ್ಸ್‌ನ್ನು ೧೯೨೮ರ ಜುಲೈ ತಿಂಗಳಲ್ಲಿ ಪೂರ್ಣಗೊಳಿಸಿದರು. ಸ್ವಾತಂತ್ರ್ಯ ಮತ್ತು ಅರಿವು ದಲಿತರ ವಿಮೋಚನೆಯ ದಾರಿದೀಪವೆಂದು ಭಾವಿಸಿದ ಜಗಜೀವನರಾಮ್‌ಸ್ವಾತಂತ್ರ್ಯ ಚಳುವಳಿ ಹಾಗೂ ಶಿಕ್ಷಣದ ಕಡೆಗೆ ಒಟ್ಟಿಗೆ ತೀವ್ರ ಗಮನ ಹರಿಸಿದರು. ೧೯೩೧ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಬಿ.ಎಸ್ಸಿ ಪದವಿಯನ್ನು ಪಡೆದರು.