ಹೋರಾಟಗಳು

ದಲಿತರ ದಾಸ್ಯವಿಮೋಚನೆ ಹಾಗೂ ರಾಷ್ಟ್ರದ ಸ್ವಾತಂತ್ರ್ಯ ಬೇರೆ ಬೇರೆಯಲ್ಲ. ಬದಲಿಗೆ ಎರಡೂ ಒಂದಕ್ಕೊಂದು ಬೆಸದುಕೊಂಡಿವೆ. ಈ ದೇಶದ ನತದೃಷ್ಟ ಸಾಮಾಜಿಕ ಪಿಡುಗಿಗೆ ನೇರವಾಗಿ ಬಲಿಯಾದವರೆಂದರೆ ಅಸ್ಪೃಶ್ಯರು. ೧೯೧೯ರ ನಂತರ ಭಾರತದಲ್ಲಿ ವಿರಳ ಪ್ರಮಾಣದಲ್ಲಿ ನಿಮ್ನ ವರ್ಗಗಳ ಸಂಘಟನೆಗಳು ತಮ್ಮ ಹಕ್ಕುಬಾಧ್ಯತೆಗಳಿಗಾಗಿ ಅಗ್ರಹಿಸುತ್ತಿದ್ದವು. ಈ ಹೊತ್ತಿಗಾಗಲೇ ಡಾ.ಬಿ.ಆರ್. ಅಂಬೇಡ್ಕರವರು ತಮ್ಮ ಮೊದಲ ಹಂತದ ಸಾಮಾಜಿಕ ಹೋರಾಟದ ಅಭಿಯಾಗದಲ್ಲಿ ಮೇಲುಗೈ ಸಾಧಿಸಿದ್ದರು. ಅವರ ಸಿದ್ಧಾಂತ, ಭಾಷಣ, ತರ್ಕಗಳೆಲ್ಲವೂ ಅನ್ಯಾಯದ ವಿರುದ್ಧ ಕಿಡಿಯನ್ನೇ ಕಾರಿದ್ದವು. ಕಾಲೇಜು ಶಿಕ್ಷಣದ ದಿನಗಳಲ್ಲೇ ಬಾಬುಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಿಸಿದ್ದರು. ಕಲ್ಕತ್ತದಲ್ಲಿದ್ದಾಗ ಎಲ್ಲಾ ಶೋಷಿತ ಹಾಗೂ ದುರ್ಬಲವರ್ಗಗಳ ಏಕೀಕರಣಕ್ಕಾಗಿ ದುಡಿಯತೊಡಗಿದರು. ೧೯೨೯ರ ಲಾಹೋರ್ ಕಾಂಗ್ರೆಸ್‌ಅಧಿವೇಶನಕ್ಕೆ ಹೋಗಿದ್ದಾಗ ಅನೇಕ ಕಾಂಗ್ರೆಸ್ಸಿನ ನಿಮ್ಮನವರ್ಗಗಳ ನಾಯಕರ ಪರಿಚಯವಾಯಿತು. ಅವರಲ್ಲಿ ಪ್ರಮುಖರೆಂದರೆ ಕಾನ್ಪುರದ ಭಗತ್‌ದಯಾಳದಾಸ್‌. ಇವರ ಮುಖಾಂತರ ರಾಮ್‌ರಿಗೆ ಮೋತಿಲಾಲರ ಪರಿಚಯವಾಯಿತು. ಲಾಹೋರಿನಿಂದ ಹಿಂತಿರುಗುವಾಗ ಉತ್ತರಭಾರತದ ಹಲವು ಕಡೆ ನಿಮ್ನವರ್ಗಗಳ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಅನೇಕ ಅಸಂಘಟಿತ ದಲಿತರನ್ನು ಸಂಘಟಿಸುವಲ್ಲಿ ಬಾಬೂಜಿ ಶ್ರಮಿಸಿದರು. ಇದೇ ರೀತಿ ದಕ್ಷಿಣದಲ್ಲಿ ಅಂಬೇಡ್ಕರರು ನಿಮ್ನವರ್ಗಗಳ ಸಂಘಟನೆಯಲ್ಲಿ ಯಶಸ್ವಿಯಾಗಿದ್ದರು.

ಹೀಗೆ ಕಾಂಗ್ರಸ್ಸಿನ ಅಧಿವೇಶನದಲ್ಲಿ ಭಾಗವಹಿಸುತ್ತಾ ಗಾಂಧಿ, ನೆಹರೂ, ಸುಭಾಷ ಮುಂತಾದ ಹಿರಿಯ ಮುಖಂಡರ ಭಾಷಣಗಳಿಂದ ಆಕರ್ಷಿತರಾದರು. ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು. ಸೆಣುಬು ಗಿರಿಣಿಗಳ ದಲಿತ ಕಾರ್ಮಿಕರ ಮತ್ತು ಇತರೆ ಕೂಲಿ ಕಾರ್ಮಿಕರ ಒಂದು ಬೃಹತ್‌ಸಮ್ಮೇಳನವನ್ನು ಏರ್ಪಡಿಸಿದರು. ಸುಮಾರು ಹದಿನೈದು ಸಾವಿರದಷ್ಟು ಜನ ಕಲ್ಕತ್ತ ನಗರದಲ್ಲಿ ಒಂದೇ ವೇದಿಕೆಯಡಿ ಸೇರಿದ್ದು ರಾಮ್‌ರ ಅತ್ಯಂತ ಪ್ರಮುಖ ದಲಿತ ಸಂಘಟನೆಯ ಚರಿತ್ರೆಯಲ್ಲಿಯೇ ಪ್ರಮುಖ ಘನಟೆ. ಬಂಗಾಳದ ಕಾರ್ಮಿಕರ ಆಂದೋಲನದ ಇತಿಹಾಸದಲ್ಲಿಯೇ ಇದು ಸ್ಪಷ್ಟ ಹೆಜ್ಜೆಯಾಗಿತ್ತು. ಈ ಸಮ್ಮೇಳನವನ್ನು ಮುನ್ನಡೆಸುವುದರ ಮೂಲಕ ಜಗಜೀವನ ರಾಮ್‌ರಲ್ಲಿ ಹುದುಗಿದ್ದ ಧೀಮಂತ ನಾಯಕತ್ವದ ಗುಣವನ್ನು ಹೊರಹೊಮ್ಮಿಸಿತು.

ಬಾಬುಜೀಯವರು ಕಾಲೇಜ್‌ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸುವಂತಹ ಹಾಗೂ ಅತಿರಥ ಮಹಾರಥರ ಭಾಷಣಗಳನ್ನು ಕೇಳುವಂತಹ, ಅದರಿಂಧ ಪುಳಕಿತಗೊಂಡು ಹೋರಾಟದ ಅವಕಾಶಗಳು ಸಿಗುವಂತಾಯಿತು. ಕಲ್ಕತ್ತದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಒಂದು ಘಟನೆ ಅವರ ಕಣ್ಮುಂದೆಯೇ ನಡೆಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ರಾಮ್‌ರು ವಾಯುವಿಹಾರಕ್ಕೆಂದು ಪ್ರೆಸಿಡೆನ್ಸಿ ಕಾಲೇಜ್‌ಕಡೆ ಹೋಗುತ್ತಿದ್ದರು. ಅದೇ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷ್‌ಪೋಲೀಸರು ಹಿಡಿದು ಮನಬಂದಂತೆ ಥಳಿಸುತ್ತಿದ್ದರು. ಅವರೆಲ್ಲಾ ಖಾದಿಧಾರಿಗಳು. ಅಪ್ಪಟ ಖಾದಿಧಾರಿಯಾಗಿದ್ದ ಬಾಬೂಜಿ ಘಟನೆಯ ಬಗ್ಗೆ ಕಿಂಚಿತ್ತು ವಿಚಲಿತರಾಗಲಿಲ್ಲ. ಆದರೂ ಪೋಲೀಸರ ಬೆತ್ತದ ರುಚಿ ನಿರಪರಾಧಿಯಾದ ಅವರಿಗೂ ಸಿಕ್ಕಿತು. ಅಂತಿಮವಾಗಿ ಬಾಬೂಜಿಯವರು ತಮ್ಮ ವ್ಯಾಸಂಗ ಮುಗಿಯುತ್ತಲೇ ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ದಲಿತರ ಪ್ರತ್ಯೇಕ ಚುನಾವಣೆ ಕ್ಷೇತ್ರದ ಬೇಡಿಕೆಗೆ ತಣ್ಣೀರೆರಚಿದ ಮತ್ತು ಆ ಮೂಲಕ ದಲಿತರಿಗೆ ಯಾವತ್ತು ಪರಿಣಾಮಕಾರಿ ಪ್ರಾತಿನಿಧ್ಯ ದೊರೆಯದಂತೆ ರೂಪಿಸಿದ ಪೂನಾ ಒಪ್ಪಂದ ಭಾರತದ ಚರಿತ್ರೆಯಲ್ಲಿ ದಲಿತರ ಮ್ಯಾಗ್ನಕಾರ್ಟ್ ಆಗಲು ಸಾಧ್ಯವಾಗದೇ ಹೋಗಿದ್ದು ಈ ದೇಶದ ದುರಂತವೇ ಸರಿ. ಎಲ್ಲಾ ಬಗೆಯ ದಲಿತರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಎದುರಾದ ಕಾರ್ಮೋಡವಾಗಿತ್ತು. ದಲಿತರ ಈ ಪ್ರಭಾವ ಶಾಲಿ ರಾಜಕೀಯ ಅಸ್ತ್ರವನ್ನು ರದ್ದುಗೊಳಿಸುವಂತೆ ಹಠ ಮಾಡಿ ಗಾಂಧೀಜಿ ನಡೆಸಿದ ಉಪವಾಸ ಸತ್ಯಾಗ್ರಹವನ್ನು ಖಂಡಿಸಿ ಜಗಜೀವನರಾಮ್‌ಒಂದು ಗಂಭೀರ ಪತ್ರವನ್ನು ಬರೆದರು. ಈ ಪತ್ರ ಗಾಂಧೀಜಿ ಮತ್ತು ಕಾಂಗ್ರೆಸ್ಸಿನ ಗಮನವನ್ನು ದಲಿತರ ಕಡೆಗೆ ಸೆಳೆಯುವಂತೆ ಮಾಡಿತು. ೧೯೩೨ ರಲ್ಲಿ ಸೆಪ್ಟೆಂಬರ್ ೩೦ ರಂದು ಅಸ್ಪೃಶ್ಯತಾ ನಿವಾರಣಾ ಲೀಗ್‌ನ್ನು ಬೊಂಬಾಯಿಯಲ್ಲಿ ಸ್ಥಾಪಿಸಲಾಯಿತು. ಅದರ ಅಧ್ಯಕ್ಷರಾಗಿ ಬಿರ್ಲಾರವರು ಪ್ರಥಮಬಾರಿಗೆ ವಹಿಸಿಕೊಂಡರು. ಕಾಲಕ್ರಮೇಣ ಇದೇ ಹರಿಜನ ಸೇವಾ ಸಂಘವಾಗಿ ಪರಿಣಮಿಸಿತು.

೧೯೩೩ರ ಹೊತ್ತಿಗೆ ಉನ್ನತಶಿಕ್ಷಣ ಮುಗಿಸಿದ ರಾಮ್‌ಕಲ್ಕತ್ತದಿಂದ ಬಿಹಾರಕ್ಕೆ ವಾಪಸ್ಸಾದರು. ಪಾಟ್ನದ ಇಸ್ಲಾಮಿಯ ಹಾಲಿನಲ್ಲಿ ೧೯೩೩ರ ಫೆಬ್ರವರಿ ಅಪ್ಪಟ ಗಾಂಧಿವಾದಿ ಸರ್ ರಾಜಾ ರಾಧಿಕರಾಮನ್‌ಪ್ರಸಾದ್‌ಸಿಂಗ್‌ಅವರು ಹರಿಜನ ಸಮಸ್ಯೆ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬಾಬೂಜಿಯವರು ಈ ಸಭೆಗೆ ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಸಭೆಯಲ್ಲಿ ಅವರು ಮನಮಿಡಿಯುವಂತೆ ಮಂಡಿಸಿದ ಹರಿಜನರ ಸಮಸ್ಯೆಗಳನ್ನು ಆಲಿಸಿದ ಹಿಂದೂ ನಾಯಕರಿಗೆ ನಿಜವಾದ ದರ್ಶನವಾಯಿತು. ಹಿಂದೂಧರ್ಮದ ದೇವತೆಗಳನ್ನೇ ಆರಾಧಿಸುವ, ಪೂಜಿಸುವ ಹಾಗೂ ಹಬ್ಬಗಳನ್ನು ಆಚರಿಸುವ ದಲಿತರು-ಹಿಂದುಳಿದವರು ಮತಾಂತರ ಹೊಂದದೆ ಹಿಂದೂಧರ್ಮದಲ್ಲಿ ಉಳಿದಾಗ ಮಾತ್ರ ದೇಶಕ್ಕೊಂದು ಶಕ್ತಿ ಬರುತ್ತದೆ ಎಂಬ ಅವರ ಅಭಿಮತಕ್ಕೆ ಎಲ್ಲರೂ ತಲೆದೂಗಿದರು. ಅದಕ್ಕಾಗಿ ನೀವು ಅವರನ್ನು ಸಮಾನಭಾವದಿಂದ ಕಾಣದೆ ಹೋದರೆ ದೇಶದ ಹಿತಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಿದರು. ನಂತರದಲ್ಲಿ ಹಿಂದೂ ನಾಯಕರೆಲ್ಲರೂ ಬಾಬೂಜಿಯ ವಿಚಾರಗಳನ್ನು ನೆನಪಿಸುತ್ತಾ ಅವರನ್ನು ಮೇರು ಮಟ್ಟದಲ್ಲಿಟ್ಟು ಪ್ರಶಂಸನೀಯ ಮಾತುಗಳನ್ನು ಆಡತೊಡಗಿದರು.

ಈ ಮಧ್ಯೆ ಜಗಜೀವನರಾಮ್‌ರ ಮೊದಲ ಪತ್ನಿ ೧೯೩೩ ರಲ್ಲಿ ಅಸುನೀಗಿದರು. ಪುನಃ ೧೯೩೫ರ ಜೂನ್‌೨ ರಂದು ಕಾನ್ಪುರದ ಖ್ಯಾತ ಸಮಾಜಸೇವಕರಾಗಿದ್ದ ಡಾ. ಬೀರಬಲ್‌ಅವರ ಮಗಳಾದ ಇಂದ್ರಾಣಿದೇವಿಯನ್ನು ಮದುವೆಯಾದರು. ಇಂದ್ರಾಣಿದೇವಿಯು ವಿವಾಹ ಪೂರ್ವದಲ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದರು. ಪುತ್ರ ಸುರೇಶ ಮತ್ತು ಮೀರಾ ಎಂಬ ಪುತ್ರಿಯನ್ನು ಪಡೆದು ನೆಮ್ಮದಿಯ ಸಾಂಸಾರಿಕ ಜೀವನ ನಡೆಸಿದರು.

ದಲಿತರ ಮತಾಂತರದ ವಿಷಯವು ಹಿಂದೂಗಳಲ್ಲಿ ನಡುಕ, ಆತಂಕ ಹುಟ್ಟಿಸಿತು. ಡಾ. ಬಿ.ಆರ್. ಅಂಬೇಡ್ಕರವರು ದಲಿತರಿಗೆ ಕರೆಕೊಟ್ಟ ಮತಾಂತರದ ಬಾಂಬ್‌ದೇಶದಾದ್ಯಂತ ಪರ-ವಿರೋಧಿ ಚರ್ಚೆಗಳು, ಸಭೆ ಸಮಾರಂಭಗಳಿಗೆ ಕಾರಣವಾಯಿತು. ವಿವಿಧ ರಾಜಕೀಯ ಮತ್ತು ಧಾರ್ಮಿಕ ಮುಖಂಡರುಗಳ ಬಿರುಸಿನ ಸಂವಾದಗಳು ದೇಶವ್ಯಾಪಿ ನಡೆದವು. ಮತಾಂತರದ ವಿಚಾರ ಗಂಭೀರ ಚರ್ಚೆಗೆ ಗ್ರಾಸವೆನಿಸಿತು. ೧೯೩೫ರ ಡಿಸೆಂಬರ್ ೨೯ ರಂದು ಪೂನಾದಲ್ಲಿ ಪಂಡಿತ ಮದನ್‌ಮೋಹನ್‌ಮಾಳವೀಯ ಇವರ ಅಧ್ಯಕ್ಷತೆಯಲ್ಲಿ ಸಭಾ ಹಿಂದೂಗಳ ಒಂದು ಬೃಹತ್‌ಸಮಾವೇಶ ವ್ಯವಸ್ಥೆಗೊಳಿಸಿತು. ಈ ಸಭೆಗೆ ಘಟಾನುಘಟಿಗಳ ದಂಡೆ ಬೀಡುಬಿಟ್ಟಿತ್ತು. ಪುರಿ ಶಂಕರಾಚಾರ್ಯರ, ಜಗಜೀವನರಾಮ್‌ಮುಂತಾದವರು ಸಭೆಗೆ ಆಹ್ವಾನಿತರು. ರಾಮ್‌ಸಭೆಯನ್ನುದ್ದೇಶಿಸಿ ಗಂಭೀರವಾದ ಧ್ವನಿಯಲ್ಲಿ ಈ ನಿರ್ಣಯಗಳನ್ನು ಮಂಡಿಸಿದರು:

೧. ಜಾತಿ ಮತ್ತು ಪಂಗಡಗಳ ಭೇದ ಇರದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ದೇವಾಲಯಗಳು, ಶಾಲೆ, ಛತ್ರ ಮತ್ತು ಹೋಟಲ್‌ಗಳಿಗೆ ದಲಿತರ ಮುಕ್ತಪ್ರವೇಶ ಇರಬೇಕು.

೨. ಕೆರೆ, ಬಾವಿ, ನದಿ ನೀರನ್ನು ದಲಿತರು ಮುಕ್ತವಾಗಿ ಉಪಯೋಗಿಸಬೇಕು. ಇದಕ್ಕೆ ಯಾರ (ಯಾವುದೇ ವ್ಯಕ್ತಿ ಸಂಸ್ಥೆ ಮತ್ತು ಸಮಾಜ) ಅಡ್ಡಿ ಆತಂಕಗಳು ಇರಬಾರದು.

೩. ಜಾತಿ ಆಧರಿತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶೋಷಣೆಯನ್ನು ತಕ್ಷಣ ನಿಲ್ಲಿಸಬೇಕು.

ಜಗಜೀವನರಾಮ್‌ರು ಮಂಡಿಸಿದ ನಿರ್ಣಯದ ಒಡಲಾಳ ದಲಿತರ ಸಮಗ್ರ ಬದುಕನ್ನು ಧ್ವನಿಸುತ್ತಿತ್ತು. ದಲಿತರ ಮತಾಂತರಕ್ಕೆ ಹಿಂದೂಧರ್ಮವೇ ಮೂಲ. ಅದರ ವಿಚಾರ ವಿಚಾರಗಳ ಆಮೂಲಾಗ್ರ ಬದಲಾವಣೆಗಳ ಹೊರತು ಧರ್ಮಾಂತರದಂತಹ ಪ್ರಮಾದಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬುದು ಇಡೀ ನಿರ್ಣಯದ ಆಶಯವಾಗಿತ್ತು. ದುರಾದೃಷ್ಟವಶತ್‌ಪುರಿ ಶಂಕರಾಚಾರ್ಯರು ನಿರ್ಣಯದಲ್ಲಿನ ದೇವಸ್ಥಾನ ಪ್ರವೇಶದ ದಲಿತರ ಮುಕ್ತ ಅವಕಾಶಗಳನ್ನು ವಿರೋಧಿಸಿದರು. ಇದನ್ನು ಖಂಡಿಸಿ ಜಗಜೀವನರಾಮ್‌ಮತ್ತು ಅವರ ಅನುಚರರು ತೀವ್ರವಾಗಿ ಪ್ರತಿಭಟಿಸಿದರು. ಈ ನಡುವೆ ಗಾಂಧೀಜಿ ೧೯೩೩ರ ಆಗಸ್ಟ್‌ನಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ನಂತರ ಅಸ್ಪೃಶ್ಯತಾ ವಿರೋಧಿ ಆಂದೋಲನದಲ್ಲಿ ನಿರತರಾಗಿದ್ದರು. ಅವರು ಮತಾಂತರವನ್ನು ವಿರೋಧಿಸುತ್ತಲೇ ಹಿಂದೂ ಸಾಕ್ಷಿಪ್ರಜ್ಞೆಯನ್ನು ಜಾಗೃತಗೊಳಿಸಲು ೨೧ ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಪೂರ್ಣಗೊಳಿಸಿದ್ದು ಆಗಿತ್ತು. ಅವರ ಭಾಷಣಗಳನ್ನು ಮೆಚ್ಚಿ ಜೈಕಾರ ಕೂಗುತ್ತಿದ್ದರೂ, ಕೆಲವರು ಅವರ ವಿರುದ್ಧ ಘೋಷಣೆ ಕೂಗುವುದು, ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದರೂ ಅವರ ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯನ್ನು ಕಾಣದೆ ಮನೆಗೆ ಹಿಂತಿರುಗುತ್ತಿದ್ದರು. ಧರ್ಮಾಂಧರು ಅನೇಕ ಕಡೆ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಗಾಂಧೀಜಿ ಒಮ್ಮೆ ಹರಿಜನರು ಗೋವುಗಳೆಂದು ಕರೆದಾಗ ಅದನ್ನು ಬಾಬೂಜಿ ವಿರೋಧಿಸಿ, ಅದೊಂದು ಪ್ರಾಣಿಗಳಿಗೆ ದಯೆ ಸೂಚಿಸುವ ಅನಪೇಕ್ಷಣೀಯ ಶಬ್ದವೆಂದು ಪತ್ರ ಬರೆದರು. ಗಾಂಧೀಜಿ ತಮ್ಮದೇ ಆದ ಧಾಟಿಯಲ್ಲಿ ‘ಗೋವು’ ಎಂದರೆ ಸಭ್ಯತೆಯ, ಶುಭ್ರತೆಯ, ನಿರುಪದ್ರವತೆಯ, ಸಂಕೇತ; ತಾಳ್ಮೆ, ಸಹಿಷ್ಣುತೆಗೆ ಪ್ರತೀಕ. ತಾವು ಈ ಶಬ್ದವನ್ನು ಯಾವುದೇ ದುರ್ಭಾವನೆಯಿಂದ ಬಳಸಿಲ್ಲ, ಆ ದುರುದ್ದೇಶವು ತಮ್ಮಲಿಲ್ಲವೆಂದು ಸ್ಪಷ್ಟಪಡಿಸಿದರು. ಒಳ್ಳೆಯ ಉದ್ದೇಶಕ್ಕಾಗಿಯೇ ಈ ಶಬ್ದವನ್ನು ಬಳಸಿರುವುದಾಗಿ ರಾಮ್‌ಗೆ ತಿಳಿಸಿದರು.

೧೯೩೪ರ ಮಾರ್ಚ್‌ನಲ್ಲಿ ಗಾಂಧೀಜಿ ಬಿಹಾರದಲ್ಲಿ ಸಂಭವಿಸಿದ ಭೀಕರ ಭೂಕಂಪ ಸಂತ್ರಸ್ತರ ಸಾಂತ್ವನಕ್ಕಾಗಿ ಪ್ರವಾಸ ಕೈಗೊಂಡರು. ಅವರೊಂದಿಗೆ ಬಾಬೂಜಿಯು ಇದ್ದರು. ಹೋದ ಕಡೆಯಲ್ಲೆಲ್ಲ ಗಾಂಧೀಜಿ ಜನರಿಗೆ ಉಪದೇಶ ನೀಡುತ್ತಾ, ಸಾಂತ್ವನದ ಮಾತುಗಳನ್ನಾಡುತ್ತಿದ್ದರು. ಅಲ್ಲಿಯೂ ಗಾಂಧೀ ವಿರೋಧಿಗಳು, ಪೂನಾ ಒಪ್ಪಂದದ ವಿರೋಧಿಗಳು ಗಾಂಧೀಜಿಯನ್ನು ವಿರೋಧಿಸಲು ಬನಾರಸ್‌ನಿಂದ ಕರೆತಂದಿದ್ದ ಪಂಡಿತ್‌ಲಾಲ್‌ಶಾಸ್ತ್ರಿಯನ್ನು ಅವರ ಮೇಲೆ ಛೂ ಬಿಟ್ಟರು. ಶಾಸ್ತ್ರಿಗಳು ಗಾಂಧೀಜಿ ಕಾರಿಗೆ ಎದುರಾಗಿ ಮುಂದೆ ಹೋಗಲಾರದಂತೆ ದೀರ್ಘವಾಗಿ ಮಲಗಿಕೊಂಡರು. ಇದರಿಂದ ವಿಚಲಿತರಾಗದ ಗಾಂಧೀಜಿ ಕಾರಿನಿಂದಿಳಿದು ನೇರವಾಗಿ ನಡೆದೇ ಬಿಟ್ಟರು. ಅವರನ್ನು ತಿರುಗಿಯೂ ನೋಡಲಿಲ್ಲ. ಅಲ್ಲಿಂದ ದೇವಗಡ ತಲುಪಿದಾಗ ಪರಿಸ್ಥಿತಿ ವಿಷಯವಾಗಿತ್ತು, ಬಿಗುವಿನಿಂದ ಕೂಡಿತ್ತು. ಒಪ್ಪಂದದ ಪರ ಮತ್ತು ವಿರೋಧದ ಎರಡೂ ಗುಂಪುಗಳಿದ್ದವು. ಪರಸ್ಪರರು ಮತ ಪ್ರದರ್ಶನಕಾರರು ಎರಡೂ ಗುಂಪುಗಳು ಸ್ಟೇಷನ್‌ನಲ್ಲಿ ಜಮಾಯಿಸಿದ್ದವು. ಪರಿಸ್ಥಿತಿಯು ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಹೋಯಿತು. ಒಂದು ಗುಂಪು ಗಾಂಧೀಜಿಯ ಕಾರಿನ ಕಿಟಕಿಯನ್ನೇ ಹೊಡೆದು ಹಾಕಿತು. ಗಾಂಧೀಜಿ ಆಗ ಶಾಂತಚಿತ್ತರಾಗಿ ಯಾವುದೇ ಉದ್ವೇಗಕ್ಕೊಳಗಾಗದೇ ಮೌನವಾಗಿದ್ದರು. ಈ ಘಟನೆಯಿಂದ ಅವರಿಗೆ ರಾತ್ರಿಯಿಡಿ ನಿದ್ದೆ ಬರಲಿಲ್ಲ. ಮರುದಿನ ಸಭೆಯನ್ನುದ್ದೇಶಿಸಿ ಭಾಷಣವನ್ನು ಮಾಡಬೇಕಾದ ಜಾಗಕ್ಕೆ ಅಲ್ಲಿನ ಪುರೋಹಿತರಾಗಿದ್ದ ವಿನೋದಾನಂದ ಜ್ಹಾ ಅವರು ಗಾಂಧೀಜಿಯನ್ನು ಬರಮಾಡಿಕೊಳ್ಳಬೇಕಾಗಿತ್ತು. ಆದರೆ ಗಾಂಧೀಜಿಯವರು ಸಭೆಯ ಸ್ಥಳಕ್ಕೆ ತಾವೇ ನೇರವಾಗಿ ನಡೆದು ಹೋಗುವುದಾಗಿ ತಿಳಿಸಿದರು. ಅವರೊಂದಿಗೆ ನಡೆದ ಬಾಬೂಜಿ ಶ್ರೀರಾಮನ ಬಳಿ ನಿಂತ ಹನುಮಂತನಂತೆ ಬೆಂಗಾವಲಿಗೆ ನಿಂತರು. ಇವರೊಂದಿಗೆ ಠಕ್ಕರ್ ಬಾಪ, ವಿನೋದಾ ನಂದ ಜ್ಹಾ ವೇದಿಕೆಯಡೆಗೆ ನಡೆದರು. ಪರಿಸ್ಥಿತಿಯ ಸೂಕ್ಷ್ಮತೆಯನ್ನರಿತ ಬಾಬುಜಿ ಅಂದು ದುಡುಕವಾಗಿರಲಿಲ್ಲ. ಬಾಬೂಜಿ ತಮ್ಮ ವಿದ್ವತ್‌ಪೂರ್ಣ ಭಾಷಣದಿಂದ ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ಕ್ಷಣಮಾತ್ರದಲ್ಲಿ ತಮ್ಮತ್ತ ಸೆಳೆದುಕೊಂಡರು. ಗಾಂಧೀಜಿ ಹಿಂದೂ ಧರ್ಮಕ್ಕೆ ಅಂಟಿದ್ದ ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ರಾಮ್‌ಸವಿಸ್ತಾರವಾಗಿ ತಿಳಿಸಿ ಮನವರಿಕೆ ಮಾಡಿಕೊಟ್ಟರು. ಅವರ ಕಾರ್ಯಸೂಚಿಗಳನ್ನು ನೆರದಿದ್ದ ಪ್ರತಿಭಟನಾಕಾರರಿಗೆ ಎಳೆಎಳೆಯಾಗಿ ರಾಮ್‌ಬಿಡಿಸಿ ಹೇಳುತ್ತಿದ್ದರೆ, ಗಾಂಧೀಜಿ ಮೂಕಪ್ರೇಕ್ಷರಾಗಿದ್ದರು. ಈ ಸಂಗತಿ ಅಲ್ಲಿ ಸಂಭವಿಸಬಹುದಾದ ದೊಡ್ಡ ಸಂಕಷ್ಟದಿಂದ ರಾಮ್‌, ಗಾಂಧೀಜಿಯನ್ನು ಪಾರುಮಾಡಿತ್ತು. ಕೋಮು ಸಂಘರ್ಷದಂತಹ ಘಟನೆಯನ್ನು ತಪ್ಪಿಸಲಾಗಿತ್ತು. ಈ ಘಟನೆಯಿಂದಾಗಿ ಬಾಬೂಜಿ ಗಾಂಧೀಜಿಯ ಹೃದಯದೊಳಗೆ ಖಾಯಂಸ್ಥಾನವನ್ನು ಪಡೆದುಕೊಂಡರು. ಶಾಲಾ ಕಾಲೇಜು ದಿನಗಳಲ್ಲಿ ಕಾಂಗ್ರೆಸ್‌ಅಭಿಮಾನಿಯಾಗಿದ್ದ ಬಾಬೂಜಿ ಸಹಜವಾಗಿ ನೈಜಸ್ವರೂಪದ ಗಾಂಧಿವಾದಿಯಾಗಿ ಪರಿವರ್ತನೆಗೊಂಡಿದ್ದು, ಅವರ ಸಮ್ಮುಖದಲ್ಲಿಯೇ ಎನ್ನುವುದು ವಾಸ್ತವವಾಗಿತ್ತು.

ಕಾಂಗ್ರೆಸ್ರಾಜಕಾರಣದ ಹೋರಾಟ

೧೯೩೫ರ ಬ್ರಿಟೀಷ್‌ಭಾರತೀಯ ಕಾನೂನಿನ ಪ್ರಕಾರ ೧೯೩೭ರಲ್ಲಿ ಪ್ರಾಂತೀಯ ಶಾಸನ ಸಭೆಗಳಿಗಾಗಿ ಚುನಾವಣೆಗಳನ್ನು ಘೋಷಿಸಲಾಯಿತು. ಈ ನಡುವೆ ರಾಷ್ಟ್ರೀಯ ಕಾಂಗ್ರೆಸ್‌ನಾಯಕರ ಗಮನವೆಲ್ಲ ಚುನಾವಣೆಯ ಕಡೆಗೆ ಹೊರಳಿತ್ತು. ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್‌ನಾಯಕರು ಪಕ್ಷದ ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಹೀಗಿರುತ್ತಲೇ ಬಿಹಾರಿನ ಪ್ರಮುಖ ನಾಯಕರಾಗಿ ಹೊರಹೊಮ್ಮಿದ ಜಗಜೀವನರಾಮ್‌ಕೂಡ ಹಿಂದೆ ಬೀಳಲಿಲ್ಲ. ಬಿಹಾರದಲ್ಲಿಯೂ ರಾಮ್‌ರ ಕಾಂಗ್ರೆಸ್‌ರಾಜಕಾರಣವು ಅಲ್ಪ ಬಹುಮತಗಳಿಸಿದ್ದ ಕಾಂಗ್ರೆಸ್‌ಗೆ ಸಹಾಯದ ಅವಶ್ಯಕತೆಯಿತ್ತು. ಬಾಬೂಜಿ ತಮ್ಮ ರಾಜಕಾರಣವನ್ನು ಕಾಂಗ್ರೆಸ್‌ಪಕ್ಷದಡಿ ಆರಂಭಿಸಿದ್ದ ಕಾರಣ ಅಂದಿನ ಕಾಂಗ್ರೆಸಿಗರೆಲ್ಲ ಅವರನ್ನು ಕಿರಿಯ ವಯಸ್ಸಿನ ಹಿರಿಯ ಮುತ್ಸುದ್ದಿಯೆಂದು ಗುರುತಿಸಿದ್ದರು. ಬಾಬೂಜಿ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಅಖಿಲ ಭಾರತ ನಿಮ್ನವರ್ಗಗಳ ಒಕ್ಕೂಟದಡಿ ಬಿಡುಗಡೆ ಮಾಡಿದರು. ಅವರು ಕೂಡ ಕಾಂಗ್ರೆಸ್‌ಪಕ್ಷದ ಪ್ರಚಾರಕ್ಕೆ ರಾಜ್ಯದ ತುಂಬೆಲ್ಲಾ ಬಿರುಸಿನ ಪ್ರಚಾರ ಮಾಡಿದರು. ಒಟ್ಟಾರೆಯಾಗಿ ಕಾಂಗ್ರೆಸ್‌ಅಧಿಕ ಬಹುಮತದಿಂದ ಜಯಗಳಿಸಿತು. ಇದೇ ವೇಳೆ ದಕ್ಷಿಣಭಾರತದಲ್ಲಿ ಕಾಂಗ್ರೆಸಿಗೆ ಎದುರಾಳಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ತಮ್ಮದೇ ಆದ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಕಟ್ಟಿಕೊಂಡರು. ಬಹುಶಃ ಬ್ರಿಟೀಷ್‌ಭಾರತದಲ್ಲಿ ದಕ್ಷಿಣದಿಂದ ಅಂಬೇಡ್ಕರ್, ಉತ್ತರದಿಂದ ಬಾಬೂಜಿ ಪ್ರತ್ಯೇಕವಾಗಿ ಚುನಾವಣೆಗಳನ್ನು ಎದುರಿಸಿರುವುದು ಚರಿತ್ರಾರ್ಹವಾದ ಮೈಲಿಗಲ್ಲು. ಈರ್ವರಲ್ಲೂ ಅಪಾರ ಆರ್ಥಿಕ ಸಂಕಷ್ಟಗಳಿದ್ದವು. ಅವರಿಬ್ಬರು ನಂಬಿದ್ದ ಜನರು ಹಾಗೂ ಸಿದ್ಧಾಂತಗಳೇ ಅವರಿಗೆ ವೈಯಕ್ತಿಕ ಬಲಗಳಾಗಿದ್ದವು.

ಹೀಗೆ ಬಾಬೂಜಿ ಬಿಹಾರ ರಾಜ್ಯಾದ್ಯಾಂತ ಬಿರುಸಿನ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಿದರು. ತಮ್ಮ ಪರವಾಗಿ ಎಲ್ಲಾ ಮೀಸಲು ಕ್ಷೇತ್ರಗಳಲ್ಲಿ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸ ಇದ್ದರು. ೧೫ ಸ್ಥಾನಗಳ ಪೈಕಿ ೧೪ ಜನ ಶಾಸಕರು ಆಯ್ಕೆಯಾದರು. ವಿಶೇಷವೆಂದರೆ ಸಾಮಾನ್ಯಕ್ಷೇತ್ರದಿಂದ ಅವರು ವಿಶೇಷವಾಗಿ ಆಯ್ಕೆಗೊಂಡರು. ಇನ್ನೊಂದಡೆ ಡಾ.ಬಿ.ಆರ್. ಅಂಬೇಡ್ಕರ್ ಸಹ ೧೭ ಸ್ಥಾನಗಳ ಪೈಕಿ ೧೫ ಸ್ಥಾನಗಳನ್ನು ಗೆದ್ದುಕೊಂಡರು. ಬಿಹಾರದಲ್ಲಿ ಕಾಂಗ್ರೆಸ್‌ಅಧಿಕ ಬಹುಮತದಿಂದ ಗೆದ್ದಿತು. ಕಾಂಗ್ರೆಸಿನಲ್ಲಿ ಆಗ ಸರ್ಕಾರ ರಚಿಸಲು ಮುಸುಕಿನ ಗುದ್ದಾಟವಿತ್ತು. ಕೃಷ್ಣ ಸಿನ್ಹಾರ ಮುಖಂಡತ್ವದಲ್ಲಿ ಬಿಹಾರನ ಮಂತ್ರಿಮಂಡಲ ರಚನೆಯಾಯಿತು. ಜಗಜೀವನರಾಮ್‌ರಿಗೆ ಕ್ಯಾಬಿನೆಟ್‌ಸಚಿವಸ್ಥಾನ ನೀಡಲು ರಾಜೇಂದ್ರ ಪ್ರಸಾದ್‌ಮತ್ತು ಸಿನ್ಹಾ ಅವರು ಒತ್ತಾಯಿಸಿದರು. ಆದರೆ ಮತ್ತೋರ್ವ ದಲಿತ ಶಾಸಕರಾಗಿದ್ದ ಜಗನ್‌ಲಾಲ್‌ಚೌಧರಿ ಎಂಬ ಹಿರಿಯರು ಬಾಬುಜಿ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗುವುದನ್ನು ವಿರೋಧಿಸಿ ರಾಜೇಂದ್ರಪ್ರಸಾದಗೆ ಪತ್ರ ಬರೆದರು. ಈ ಬೆಳವಣಿಗೆಯಿಂದಾಗಿ ಗಾಂಧೀಜಿ ಮತ್ತು ರಾಜೇಂದ್ರ ಪ್ರಸಾದರಿಗೆ ಕಿರಿಕಿರಿಯುಂಟಾಯಿತು. ಜಗಜೀವನರಾಮ್‌ತನಗಿಂತ ವಯಸ್ಸು ಹಾಗೂ ಅನುಭವದಲ್ಲಿ ಚಿಕ್ಕವರು; ಅವರಿಗೆ ಇನ್ನೂ ೨೯ ವರ್ಷ ಎಂದು ಆ ಪತ್ರದಲ್ಲಿ ಅಭಿಪ್ರಾಯಿಸಲಾಗಿತ್ತು. ಸಹಜವಾಗಿ ಶಾಂತ ವ್ಯಕ್ತಿತ್ವ ರೂಢಿಸಿಕೊಂಡ ಬಾಬೂಜಿಗೆ ಕಾಂಗ್ರೆಸ್‌ನ ಪತನವಾಗುವುದು ಬೇಕಿರಲಿಲ್ಲ. ಆ ಕಾರಣಕ್ಕಾಗಿ ಬಾಬೂಜಿ ತಮ್ಮ ಅಭ್ಯರ್ಥಿತನವನ್ನು ಹಿಂತೆಗೆದುಕೊಂಡರು. ಇದು ಕಾಂಗ್ರೆಸಿಗರ ದೃಷ್ಟಿಯಲ್ಲಿ ಬಾಬೂಜಿಯವರನ್ನು ಮೇರುನಾಯಕರಾಗಿ ಕಾಣುವಮತೆ ಮಾಡಿಬಿಟ್ಟಿತು. ಜಗಜೀವನರಾಮ್‌ಒಬ್ಬ ಅಪ್ಪಟ ಕಾಂಗ್ರೆಸಿಗರಾಗಿದ್ದರು. ಅಧಿಕಾರಕ್ಕಾಗಿ ಎಂದೂ ಆಸೆಪಟ್ಟವರಲ್ಲ. ಆಚಾರ್ಯ ಕೃಪಲಾನಿ ಅವರು ‘ಎರಡು ಪ್ರಧಾನಮಂತ್ರಿ ಸ್ಥಾನ ಇದ್ದರೆ ಜಗಜೀವನರಾಮ್‌ಗೆ ಖಂಡಿತ ಒಂದನ್ನು ಕೊಡುತ್ತಿದ್ದೆವು’, ಎಂದು ಹೇಳುತ್ತಿದ್ದರು. ರಾಮ್‌ಕುರ್ಚಿ ಬಿಟ್ಟರೂ ಅವರನ್ನು ಕುರ್ಚಿ ಬಿಡಲಿಲ್ಲ. ಶಾಸಕಾಂಗ ಕಾರ್ಯದರ್ಶಿ ಹುದ್ದೆ ಅವರನ್ನು ಹುಡುಕಿಕೊಂಡು ಬಂತು.ಕೊನೆಗೆ ಡಾ. ಮಹಮದ್‌ಅವರ ಅಧೀನದಲ್ಲಿ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾದರು. ಅವರಿಗೆ ನೀಡಿದ ಕೃಷಿ, ಗ್ರಾಮೀಣ ಅಭಿವೃದ್ಧಿ, ಸಹಕಾರ ಹಾಗೂ ಕೈಗಾರಿಕಾ ಇಲಾಖೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಭೂಕಂಪದಿಂದುಂಟಾದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಹುಡುಕಲು ಪ್ರಯತ್ನಪಟ್ಟರು. ಬಿಹಾರದಲ್ಲಿ ಹೊಸ ಆವರ್ತಕ ಯೋಜನೆಗಳನ್ನು ಪ್ರಥಮಬಾರಿಗೆ ಅಳವಡಿಸಿ ಜನರ ಅಪಾರ ಮೆಚ್ಚುಗೆಗಳಿಸಿದರು. ಅವರು ಇಲಾಖೆಗಳಲ್ಲಿ ನಿರ್ವಹಿಸುತ್ತಿದ್ದ ಕಾರ್ಯವೈಖರಿಗಳನ್ನು ಕಂಡ ದಲಿತೇತರ ಜನರೂ ನಿಬ್ಬೆರಗಾಗಿ ನೋಡುವಂತಾಯಿತು. ಬಾಬೂಜಿಯವರ ತ್ಯಾಗಫಲದಿಂದಾಗಿ ಜಗನ್‌ಲಾಲ್‌ಚೌಧರಿಯವರು ಮಂತ್ರಿಯಾಗಿದ್ದು. ಇದು ಬಾಬೂಜಿಯವರ ಸಭ್ಯ, ಪ್ರಾಮಾಣಿಕ, ವ್ಯಕ್ತಿತ್ವದ ನಡುವಳಿಕೆಗೆ ಉತ್ತಮ ನಿದರ್ಶನ.

ಈ ಸಂದರ್ಭದಲ್ಲಿ ಬ್ರಿಟಿಷ್‌ಸರ್ಕಾರ ಅಂಡಮಾನ್‌ದ್ವೀಪದಲ್ಲಿ ಬಂಧಿಸಿಟ್ಟಿದ್ದ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವ ವಿಚಾರದಲ್ಲಿ ಸಮಸ್ಯೆ ತಲೆದೋರಿತು. ಬಹುತೇಕ ಕಾಂಗ್ರಸಿಗರಲ್ಲಿ ಅಂದಿನ ದಿನಗಳಲ್ಲಿ ಅಧಿಕಾರಕ್ಕಿಂತ ಮೌಲ್ಯಾಧಾರಿತ ಕರ್ತವ್ಯಗಳೇ ಅತ್ಯಂತ ಮುಖ್ಯವಾಗಿದ್ದವು. ಇದಕ್ಕೆ ಬಿಹಾರ ಕಾಂಗ್ರೆಸ್‌ಕೂಡ ಹೊರತಾಗಿರಲಿಲ್ಲ. ಬ್ರಿಟಿಷ್‌ಆಡಳಿತ ನೀತಿ ವಿರೋಧಿಸಿ ಬಿಹಾರ ಸರ್ಕಾರದ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದರು. ಬಾಬೂಜಿ ಕೂಡಲೇ ಕಾರ್ಯ ಪ್ರವೃತ್ತರಾಗಿ ತಮ್ಮ ಬೆಂಬಲವನ್ನು ಸೂಚಿಸುವ ನಿಟ್ಟಿನಲ್ಲಿ ರಾಜಿನಾಮೆ ನೀಡಿಬಿಟ್ಟರು. ದೇಶದ ಸ್ವಾತಂತ್ರ್ಯ ಎಲ್ಲಕ್ಕಿಂತ ಮಿಗಿಲು ಎಂದು ಅರಿತಿದ್ದ ರಾಮ್‌ತಮ್ಮ ಪದವಿಗೆ ರಾಜಿನಾಮೆ ನೀಡಿ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಧುಮುಕಿದರು. ಗಾಂಧೀಜಿಯ ಕರೆಯಂತೆ ಕಾಂಗ್ರೆಸಿಗರಿಗೆ ವೈಯಕ್ತಿಕ ಸ್ವಾತಂತ್ರ್ಯ ಹೋರಾಟಗಳನ್ನು ಹಮ್ಮಿಕೊಳ್ಳಲು ಮುಕ್ತ ಅನುಮತಿ ದೊರಕಿತ್ತು. ಹೀಗಾಗಿ ಬಾಬೂಜಿ ಬಿಹಾರಕ್ಕೆ ಬಂದವರೇ ರಾಜ್ಯಾದ್ಯಾಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಬೃಹತ್‌ಪ್ರಮಾಣದ ಸಭೆ ಸಮಾವೇಶಗಳನ್ನು ಸಂಘಟಿಸಿದರು. ಈ ಸಭೆಗಳಲ್ಲಿ ಆಗಿನ ಬ್ರಿಟನ್‌ಮತ್ತು ಅದರ ಮಿತ್ರ ರಾಷ್ಟ್ರಗಳ ರಣನೀತಿಯನ್ನು ಕಟುವಾಗಿ ಖಂಡಿಸತೊಡಗಿದರು. ಬ್ರಿಟೀಷ್‌ಸರ್ಕಾರ ಬಾಬೂಜಿಯನ್ನು ಡಿಸೆಂಬರ್ ೧೦, ೧೯೪೦ ರಂದು ಷಹಬಾದ್‌ಜಿಲ್ಲೆಯ ಪಿರುವಿನಲ್ಲಿ ಬಂಧಿಸಿ, ಮರುದಿನ ಅರ್ಹಾ ಪಟ್ಟಣದಲ್ಲಿ ಸರ್ಕಾರ ಅವರನ್ನು ವಿಚಾರಣೆಗೊಳಪಡಿಸಿ ತಪ್ಪೊಪ್ಪಿಗೆಗೆ ಅಗ್ರಹಿಸಿತು. ಆದರೆ ನಿಷ್ಠಾವಂತ ಕಾಂಗ್ರೆಸಿಗರಾಗಿದ್ದ ಬಾಬೂಜಿ ತಮ್ಮ ಆಚಲ ನಿರ್ಧಾರವನ್ನು ಬದಲಿಸಲಿಲ್ಲ. ತತ್‌ಫಲವಾಗಿ ಅವರನ್ನು ೧೪ ತಿಂಗಳು ಕಾರಾಗೃಹ ಬಂಧನದಲ್ಲಿ ಇಡಲಾಯಿತು. ವಿಚಾರಣೆಯ ನಂತರ ಶಿಕ್ಷೆ ಖಾಯಂಗೊಂಡು ಒಂದುವರ್ಷದ ಅವಧಿಗೆ ಹಜಾರಿಬಾಗ್‌ಜೈಲಿನಲ್ಲಿ ಕೂಡಿಹಾಕಿದರು. ಈ ಸೆರೆಮನೆವಾಸ ಬಾಬೂಜಿಗೆ ಶಿಕ್ಷೆಯಾಗಿ ಪರಿಣಮಿಸಲಿಲ್ಲ. ಬದಲಿಗೆ ಅಲ್ಲಿ ಅವರಿಗೆ ಅನೇಕ ಕಾಂಗ್ರೆಸ್‌ನಾಯಕರುಗಳ ದರ್ಶನವಾಯಿತು. ಬದುಕಿಗೆ ಒಂದು ಹೊಸ ಪರ್ವ ತೆರೆಯಿತು. ಜೈಲಿನಲ್ಲಿ ದೊರೆಯುತ್ತಿದ್ದ ತತ್ವಶಾಸ್ತ್ರ ಗ್ರಂಥಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತವನ್ನು ಆಳವಾಗಿ ಅಭ್ಯಸಿಸಿದರು. ಅದರಲ್ಲೂ ಇತಿಹಾಸ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಿದರು. ಮಾರ್ಕ್ಸ್, ಲೆನಿನ್‌ಅವರ ಬರಹ ಭಾಷಣಗಳನ್ನು ಕಾತುರತೆಯಿಂದ ಓದಿ ಅರಗಿಸಿಕೊಳ್ಳಲು ಅನುಕೂಲವಾಯಿತು. ಜೈಲಿನಲ್ಲಿ ಅವರು ದಿನಾಲು ಬಾಬು ರಾಜೇಂದ್ರಪ್ರಸಾದ ಅವರೊಂದಿಗೆ ಮುಕ್ತವಾಗಿ ವಿಚಾರಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಯಿತು. ಹೀಗಿರುತ್ತಲೇ ಬಾಬೂಜಿಯ ಆರೋಗ್ಯ ಕ್ಷಿಣಿಸತೊಡಗಿತು. ಅವರನ್ನು ಪರಿಶೀಲಿಸಿದ ವೈದ್ಯರು ಜೈಲಿನಿಂದ ಬಿಡುಗಡೆಗೊಳಿಸಲು ಶಿಫಾರಸ್ಸು ಮಾಡಿದರು. ಅನಾರೋಗ್ಯ ಪೀಡಿತರಾಗಿ ಸೆರೆಮನೆಯಿಂದ ಬಿಡುಗಡೆಗೊಂಡರೂ ಬಾಬೂಜಿ ಮಾನಸಿಕ ಸ್ಥೈರ್ಯವನ್ನು ಮಾತ್ರ ಕಳೆದುಕೊಳ್ಳಲಿಲ್ಲ.

ಈ ನಡುವೆ ಸ್ವಾತಂತ್ರ್ಯ ಹೋರಾಟದ ಕಾವು ದೇಶವ್ಯಾಪಿ ಕಾಡ್ಗಿಚ್ಚಿನಂತೆ ಹಬ್ಬಿತು. ಜನ ಅಲ್ಲಲ್ಲಿ ಸಭೆಗಳನ್ನು ಸೇರಿ ಬ್ರಿಟೀಷ್‌ಸರ್ಕಾರ ಸೂಚಿಸಿದ ಕ್ರಿಪ್ಸ್‌ಸಂಧಾನವನ್ನು ವಿರೋಧಿಸಿದರು; ಬೀದಿ ಪ್ರತಿಭಟನೆಗೂ ಇಳಿದರು. ಬಾಬೂಜಿಯವರು ಜೈಲಿನಲ್ಲಿ ಪಡೆದ ಅನುಭವ, ಹೋರಾಟದ ಬಗ್ಗೆ ಗಟ್ಟಿತನಗಳು ಮೈಗೂಡಿದವು. ಬಾಂಬೆ ಕಾಂಗ್ರೆಸ್‌ಅಧಿವೇಶನದಲ್ಲಿ ಅಂಗೀಕರಿಸಿದ್ದ ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ನಿರ್ಣಯ ಇಡೀ ದೇಶದ ಆಂಗ್ಲರ ವಿರುದ್ಧ ಸೆಡ್ಡು ಹೊಡೆದು ನಿಲ್ಲುವಂತೆ ಮಾಡಿತು. ಚಳುವಳಿಯ ತೀವ್ರತೆ ಬ್ರಿಟೀಷ್‌ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್‌೯, ೧೯೪೨ ರಂದು ಮುಂಚೂಣಿ ನಾಯಕರನ್ನು ಬಂಧಿಸಿತು. ಅವರಲ್ಲಿ ಗಾಂಧೀಜಿ, ನೆಹರೂ, ಸರ್ದಾರ್ ಪಟೇಲ್‌, ಕಲಾಂ, ರಾಜೇಂದ್ರಪ್ರಸಾದ್‌, ಗೋವಿಂದ ವಲ್ಲಭ ಪಂಥ್‌ಪ್ರಮುಖರು. ಜಗಜೀವನರಾಮ್‌ತಮ್ಮ ಸಹಪಾಠಿ ಕಾಂಗ್ರೆಸಿಗರೊಂದಿಗೆ ಬಾಂಬೆಯ ಹೋಟಲ್‌ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಬಂಧಿತ ನಾಯಕರನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ ಅವರ ಸಂಪರ್ಕ ಸಿಗಲಿಲ್ಲ. ಕೊನೆಗೆ ಚಾಣಾಕ್ಷತನದಿಂದ ಕೇಂದ್ರ ಸಿ.ಐ.ಡಿ. ಇಲಾಖೆಯಿಂದ ಬಂಧಿಸಲು ಸಿದ್ಧಪಡಿಸಿದ ಪಟ್ಟಿಯನ್ನು ಪಡೆದುಕೊಂಡರು. ಆ ಪಟ್ಟಿಯಲ್ಲಿ ಜಗಜೀವನರಾಮ್‌ರ ಹೆಸರು ೧೪ನೇ ಕ್ರಮಾಂಕದಲ್ಲಿತ್ತು. ಆಗ ಜೆ.ಪಿ. ನಾರಾಯಣ ಮತ್ತು ಅವರ ಸ್ನೇಹಿತರು ಕ್ವಿಟ್‌ಇಂಡಿಯಾ ಚಳುವಳಿಯ ಸಂದೇಶಗಳನ್ನು ‘ಮಾಡು ಇಲ್ಲವೇ ಮಡಿ’ ಎಂದು ಮನೆ ಮನೆಗೂ ಅತ್ಯಂತ ಜಾಗುರೂಕತೆಯಿಂದ ರವಾನಿಸಲು ಅಜ್ಞಾತವಾಗಿ ಬಿಟ್ಟಿದ್ದರು.

ಬಾಬೂಜಿ ಬಾಂಬೆಯಿಂದ ನೇರವಾಗಿ ಕಲ್ಕತ್ತಾಕ್ಕೆ ಪ್ರಯಾಣಿಸುತ್ತಿದ್ದರು. ಅಲಾಹಬಾದ್‌ರೈಲುನಿಲ್ದಾಣದಲ್ಲಿ ಅವರ ಬಂಧನಕ್ಕೆ ಜಾಲ ಬೀಸಲಾಗಿತ್ತು. ರೈಲು ಮಧ್ಯಭಾರತ ಪ್ರವೇಶಿಸುತ್ತಿದ್ದಂತೆ ಕಮಲಾಪತಿ ತ್ರಿಪಾಠಿಯವರನ್ನು ಪೋಲೀಸರು ಬಂಧಿಸಿದರು. ಬಾಬೂಜಿ ಚಮತ್ಕಾರದಿಂದ ಅಲಾಹಾಬಾದ್‌ರೈಲು ನಿಲ್ದಾಣದಿಂದ ಪರಾರಿಯಾಗಿ ಪಾಟ್ನಕ್ಕೆ ಗುಪ್ತವಾಗಿ ತಲುಪಿದರು. ಕೆಲವರ ಸಲಹೆಯಂತೆ ಬಾಬೂಜಿ ನಾಯಕರ ಸಂಪರ್ಕ ಸಾಧಿಸಲು ಕೆಲವು ದಿನಗಳವರೆಗೆ ಅರೆಮನಸ್ಸಿನಿಂದ ಖಾದಿ ತೊಡದೆ ಪಾಟ್ನದ ಹಳ್ಳಿ ನಗರದ ತುಂಬಾ ಚಳುವಳಿ ತೀವ್ರಗೊಳಿಸಿದರು. ಕರಪತ್ರಗಳನ್ನು ವೈಯಕ್ತಿಕವಾಗಿ ತಯಾರಿಸಿ ಜನರಿಗೆ ಅವುಗಳನ್ನು ಮನೆಮನೆಗೆ ಹಂಚ ತೊಡಗಿದರು. ಇದು ಹೇಗೋ ಬ್ರಿಟೀಷರಿಗೆ ಗೊತ್ತಾಗಿ ಬಾಬೂಜಿಯವರ ಅಡಗು ತಾಣವನ್ನು ಪತ್ತೆಹಚ್ಚಿದರು. ಕೊನೆಗೆ ೧೯೪೨ ಆಗಸ್ಟ್‌೨೦ರಂದು ಬಾಬೂಜಿ ಬಂಧಿತರಾದರು. ಬಂಕಿಪುರ ಜೈಲಿನಲ್ಲಿ ಅವರನ್ನು ಇರಿಸಲಾಗಿತ್ತು. ಅಲ್ಲಿಂದ ಅವರನ್ನು ಸಪ್ಟೆಂಬರ್ ತಿಂಗಳಲ್ಲಿ ಹಜಾರಿಬಾಗ್‌ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿ ಅವರಿಗೆ ಜೆ.ಪಿ.ಯವರ ಒಡನಾಟವಾಯಿತು. ಕೆಲವು ದಿನಗಳ ನಂತರ ಜೆ.ಪಿ. ಯವರೊಂದಿಗೆ ಸೆರೆಮನೆಯಿಂದ ತಪ್ಪಿಸಿಕೊಂಡು ಹೋದರು.

ಅನಾರೋಗ್ಯದಿಂದ ಬಾಬೂಜಿ ಬಳಲುತ್ತಿದ್ದರು ಸ್ವಾತಂತ್ರ್ಯ ಚಳುವಳಿಯಲ್ಲಿ ದುಡಿಯಬೇಕೆಂಬ ಹಂಬಲ ಮತ್ತು ಕಾತರ ಅವರನ್ನು ಸುಮ್ಮನಿರಗೊಡಲಿಲ್ಲ. ಸಿಕ್ಕ ಸಮಯವನ್ನೆಲ್ಲಾ ಕಾಂಗ್ರೆಸ್‌ನಾಯಕರೊಂದಿಗೆ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಬಳಸಿಕೊಳ್ಳುತ್ತಿದ್ದರು. ಕೊನೆಗೆ ಅವರ ದೇಹಸ್ಥಿತಿ ನೋಡಿ ಕಾಂಗ್ರೆಸ್‌ನ ಹಿರಿಯ ನಾಯಕರೆಲ್ಲ ಸಭೆಗಳಲ್ಲಿ ಬಾಬೂಜಿ ಭಾಗವಹಿಸಿದಂತೆ ತಡೆಯತೊಡಗಿದರು. ಆದರೂ ಬಾಬೂಜಿ ಧೃತಿಗೆಡಲಿಲ್ಲ. ಅವರನ್ನು ಮಡದಿಯೊಂದಿಗೆ ಶಿಮ್ಲಾದಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಏರ್ಪಾಡು ಮಾಡಿದರು.ಅಲ್ಲಿಯೂ ಸುಮ್ಮನಿರದೆ ಬಾಬೂಜಿ ಕಾಶ್ಮೀರದ ಮುಸ್ಲಿಮ್‌ಲೀಗ್‌ನ ವಿದ್ಯಮಾನಗಳನ್ನು ಅಧ್ಯಯನ ಮಾಡತೊಡಗಿದರು. ಕೆಲವು ದಿನಗಳ ನಂತರ ಆರೋಗ್ಯ ಸುಧಾರಿಸಿಕೊಂಡ ಬಾಬೂಜಿ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಬಿಡುವಿಲ್ಲದೆ ಪ್ರವಾಸಗಳನ್ನು ಕೈಗೊಂಡರು. ನಾಗಪುರದಲ್ಲಿ ನಡೆದ ದಲಿತ ಸಂಘಟನೆಗಳ ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ ಬಾಬೂಜಿ, ಈ ಸಭೆಯ ಹರಿಜನರು ರಾಷ್ಟ್ರೀಯತೆಗಾಗಿ ಬೆಂಬಲಿಸುವರೆಂಬ ನಿರ್ಣಯವನ್ನು ಹೊರಗೆಡವಿದರು.

ಅಷ್ಟೊತ್ತಿಗೆ ಕಾನೂನು ಭಂಗ ಚಳುವಳಿ ಆರಂಭವಾಗಿತ್ತು. ಬ್ರಿಟೀಷರು ಕಾಂಗ್ರೆಸ್ಸನ್ನು ಬಗ್ಗುಬಡಿಯಲು ನಿರ್ದಾಕ್ಷಿಣ್ಯವಾಗಿ ಕಠಿಣಕ್ರಮಗಳನ್ನು ತೆಗೆದುಕೊಳ್ಳತೊಡಗಿದರು. ಗಾಂಧೀಯವರು ಯಾವುದಕ್ಕೂ ಲೆಕ್ಕಿಸದೇ, ಮರುಕಪಡದೆ ದೇಶದ ಮುಕ್ತಿಯೊಂದೇ ಗುರಿಯೆಂದು ಅವಿರತ ಹೋರಾಟಕ್ಕೆ ಮುಂದಾದರು. ಈ ನಡುವೆ ಕ್ಯಾಬಿನೆಟ್‌ಆಯೋಗವು ದೆಹಲಿಗೆ ಮಾರ್ಚ್ ೨೩, ೧೯೪೬ ರಂದು ಆಗಮಿಸಿತು. ಕಾಂಗ್ರೆಸ್‌(ನೆಹರೂ) ಮತ್ತು ಮುಸ್ಲಿಮ್‌ಲೀಗ್‌(ಜಿನ್ನ)ರ ನಡುವೆ ದೊಡ್ಡ ಕಂದವೇರ್ಪಟ್ಟಿತ್ತು. ಅವರಿಬ್ಬರ ದಾಯಾದಿ ಮತ್ಸರ ದೇಶ ವಿಭಜನೆಯ ಸ್ಪಷ್ಟ ಸಂದೇಶದೊಂದಿಗೆ ಗಗನಕ್ಕೇರಿತ್ತು. ಆಯೋಗವು ಮಧ್ಯಂತರ ಸರ್ಕಾರ ರಚನೆಗೆ ವಿವಿಧ ಪ್ರತಿನಿಧಿ ನಾಯಕರಿಂದ ಅಹವಾಲುಗಳನ್ನು ಕೇಳಿತು. ಜಗಜೀವನರಾಮ್‌ಕಾಂಗ್ರೆಸ್‌ಮೂಲಕ ಮಧ್ಯಂತರ ಸರ್ಕಾರದಲ್ಲಿ ಹರಿಜನರಿಗೆ ಪ್ರಾತಿನಿಧ್ಯ ಇರಬೇಕೆಂದು ಸಲಹೆ ಸೂಚಿಸಿದರು. ಕಾಂಗ್ರೆಸ್‌ನ ಈ ಧೋರಣೆಗೆ ಮುಸ್ಲಿಮ್‌ಲೀಗ್‌ವಿರೋಧಿಸಿ ಪ್ರತ್ಯೇಕತಾ ವಾದ ಮಂಡಿಸಿತು. ಜಗಜೀವನರಾಮ್‌ಕಾಂಗ್ರೆಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಮಧ್ಯಂತರ ಸರ್ಕಾರ ರಚನೆಗೆ ಹರಿಜನ ಪ್ರತಿನಿಧಿಗಳನ್ನು ಕಾಂಗ್ರೆಸಿನಿಂದ ನಿಲ್ಲಿಸುವ ಪ್ರಯತ್ನಕ್ಕೆ ಅವಕಾಶ ನೀಡಿದರು. ೧೮ ಮೇ ೧೯೪೭ ರಂದು ಕ್ಯಾಬಿನೆಟ್‌ಆಯೋಗ ತನ್ನ ಅಂತಿಮ ವರದಿಯ ಸಾರಾಂಶಗಳನ್ನು ಪ್ರಕಟಿಸಿತು. ಮುಸ್ಲಿಮ್‌ಲೀಗ್‌ಪ್ರತ್ಯೇಕ ರಾಷ್ಟ್ರ ನಿರ್ಮಾಣ ಬೇಡಿಕೆಯೊಂದಿಗೆ ಕಾಂಗ್ರೆಸ್‌ನಿಂದ ದೂರವೇ ಉಳಿಯಿತು. ಭಾರತದಲ್ಲಿ ಅಲ್ಪಸಂಖ್ಯಾತರ, ನಿಮ್ನವರ್ಗ ಹಾಗೂ ಇತರ ಕೋಮುಗಳ ಜೊತೆ ಆರ್ಥಿಕ ಸಂಚಿಕೆಯ ಸಿದ್ಧಾಂತವನ್ನು ಮುಂದಿಟ್ಟರು. ೧೯೪೬ರ ವೇಳೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಬಾಬೂಜಿ ನೇತೃತ್ವದ ಸಂಘಟನೆಯ ಎಲ್ಲಾ ೧೪ ಅಭ್ಯರ್ಥಿಗಳು ಗೆಲುವು ಪಡೆದಿದ್ದರು. ಅಂತಿಮವಾಗಿ ಅವರನ್ನು ಕಾಂಗ್ರೆಸ್‌ನೇರ ಪ್ರತಿನಿಧಿಗಳೆಂಬ ಸ್ಪಷ್ಟ ಘೋಷಣೆ ಮಾಡಿದರು. ವೈಸ್‌ರಾಯ ಮಂತ್ರಿಮಂಡಲಕ್ಕೆ ೧೪ ಅಭ್ಯರ್ಥಿಗಳನ್ನು ಸೇರ್ಪಡೆಗೊಳಿಸುವ ವಿಚಾರಗಳು ಪ್ರಸ್ತಾಪವಾದವು. ೧೪ನೇ ಜೂನ್‌೧೯೪೬ರಂದು ಸಮ್ಮಿಶ್ರ ಮಾದರಿಯ ಸರ್ಕಾರ ರಚಿಸಲು ಭಾರತಕ್ಕೆ ವೈಸ್‌ರಾಯ್‌ಆಹ್ವಾನಿಸಿದರು. ನೆಹರೂ ಸಲ್ಲಿಸಿದ ಪಟ್ಟಿಗಳಲ್ಲಿ ೧೨ ಜನರ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು:

೧. ಜವಾಹರಲಾಲ್‌ನೆಹರೂ ೨. ಸರ್ದಾರ್ ವಲ್ಲಭಭಾಯ್‌ಪಟೀಲ್‌
೩. ಡಾ. ಬಾಬು ರಾಜೇಂದ್ರಪ್ರಸಾದ್‌ ೪. ಆಸಿಫ್‌ಆಲಿ
೫. ಸಿ. ರಾಜಗೋಪಾಲಾಚಾರಿ ೬. ಶರತ್‌ಚಂದ್ರ
೭. ಜಾನ್‌ಮಥಾಯ್‌ ೮. ಸರ್ದಾರ್ ಬಲದೇವಸಿಂಗ್‌
೯. ಸರ್ ಷಹಫತ್‌ಅಹಮ್ಮದ್‌ಖಾನ್‌ ೧೦. ಬಾಬು ಜಗಜೀವನರಾಮ್‌
೧೧. ಸೈಯದ ಆಲಿ ಜಹೀರ್ ಖಾನ್‌ ೧೨. ಸಿ.ಎಚ್‌. ಬಾಬಾ.

ಆದರೆ ಪ್ರಸ್ತಾವದಲ್ಲಿ ರಾಷ್ಟ್ರೀಯವಾದಿ ಮುಸ್ಲಿಮರಿಲ್ಲ ಎಂಬ ಆರೋಪದೊಡನೆ ಇಬ್ಬರು ನಾಯಕರು ಸಿ. ರಾಜಗೋಪಾಲಾಚಾರಿ ಹಾಗೂ ಸರ್ದಾರ್ ಪಟೇಲ್‌ದೂರ ಉಳಿದರು. ವೈಸ್‌ರಾಯ್‌ಹಾಗೂ ನೆಹರೂ ಇಬ್ಬರು ಸಲ್ಲಿಸಿದ ಪಟ್ಟಿಗಳಲ್ಲಿ ಬಾಬೂಜಿಯವರ ಹೆಸರಿದ್ದುದು ವಿಶೇಷವಾಗಿತ್ತು. ಆದರೆ ಕಾಂಗ್ರೆಸ್‌ಡಾ.ಬಿ.ಆರ್. ಅಂಬೇಡ್ಕರವರನ್ನು ಎರಡನೇ ಬಾರಿಯ ಪ್ರವೇಶಕ್ಕೆ ಪರೋಕ್ಷವಾಗಿ ತಡೆಹಿಡಿಯಲಾಗಿತ್ತು.

೧೯೪೬ರ ಸೆಪ್ಟೆಂಬರ್ ೩ ರಂದು ನೆಹರೂ ನೇತೃತ್ವದ ಮಧ್ಯಕಾಲೀನ ಸರ್ಕಾರ ರಚನೆಯಾಯಿತು. ವೈಸ್‌ರಾಯ್‌ಯಿಂದ ಅಧಿಕಾರ ಗೌಪ್ಯತೆಯನ್ನು ಬಾಬೂಜಿ ಬೋಧಿಸಿಕೊಂಡರು. ಈ ಹಿಂದೆ ಅಂಬೇಡ್ಕರ್ ನಿರ್ವಹಿಸಿದ ಕಾರ್ಯಗಳ ಜವಾಬ್ದಾರಿಯನ್ನು ವಹಿಸಲಾಯಿತು. ಬಾಬೂಜಿಗೆ ಪ್ರಿಯವಾಗಿದ್ದ ಕಾರ್ಮಿಕಖಾತೆಯನ್ನು ನೀಡಲಾಯಿತು. ಇದಕ್ಕೆ ವಿರೋಧ ವ್ಯಕ್ತವಾದರೂ ಅವರ ಕಾರ್ಯದಕ್ಷತೆ, ಪ್ರಾಮಾಣಿಕತೆ ಮತ್ತು ಸಮಸ್ತ ವಿಚಾರಗಳನ್ನರಿತು ಕರಗತ ಮಾಡಿಕೊಳ್ಳುವ ಅವರ ಗುಣಗಳ ಮುಂದೆ ಎಲ್ಲವೂ ಗೌಣವಾದವು. ಕಾಂಗ್ರೆಸ್‌ಒಳಗೊಂಡಂತೆ ದೇಶದ ಎಲ್ಲಾ ಧರ್ಮಿಯರ, ಜನಾಂಗಗಳಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯವಿತ್ತು. ಈ ಮಂತ್ರಿಗಿರಿಯ ಅವಕಾಶದಿಂದಾಗಿ ಬಾಬೂಜಿ ತಮ್ಮ ರಾಜಕೀಯ ಜೀವನದ ಯಶೋಗಾಥೆ ಜೀವನದ ಕೊನೆಯ ಉಸಿರಿರುವರೆಗೂ ಬೆಳೆಯುತ್ತಾ ಸಾಗಿರುವುದನ್ನು ಇಲ್ಲಿ ಸ್ಮರಿಸಲೇಬೇಕು. ಬಾಬೂಜಿ ತಮ್ಮ ಮಂತ್ರಿಗಿರಿಯ ಕಾಲದಲ್ಲಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಅವುಗಳಿಗೆ ಪರಿಹಾರವನ್ನು ಸೂಚಿಸಿದರು. ಟಾಟಾ ಕಂಪನಿಯ ಸಮಸ್ಯೆ, ಕಾರ್ಮಿಕ ಸಮಸ್ಯೆಗಳು, ಅವರ ರಕ್ಷಣೆ, ಕ್ಷೇಮಾಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಕಾರ್ಮಿಕ ಮಾಲೀಕರ ಮಧ್ಯೆ ಸಾಮರಸ್ಯ ಮೂಡಿಸಲು ತ್ರಿಸದಸ್ಯ ಸಲಹಾಸಮಿತಿಯು ರಚನೆಗೊಂಡಿದ್ದು ಇವರ ಕಾಲದಲ್ಲಿಯೇ. ಕಾರ್ಮಿಕರಿಗೆ ಬೋನಸ್‌, ಕನಿಷ್ಠ ವೇತನ ನಿಗದಿ, ಕಾರ್ಮಿಕರ ಹಿತರಕ್ಷಿಸಲು ವಿಮಾನಿಧಿಯನ್ನು ಸ್ಥಾಪಿಸಿದ್ದು, ಬಾಬೂಜಿಯ ಕಾರ್ಮಿಕ ಮತ್ತು ದೇಶದ ಬಗ್ಗೆ ಇಟ್ಟುಕೊಂಡಿರುವ ಅಪಾರ ಕಾಳಜಿಯನ್ನು ತೋರಿಸುತ್ತದೆ. ಚಿಕ್ಕ, ಬೃಹತ್‌, ಉದ್ದಿಮೆದಾರರಿಗೆಲ್ಲಾ ಏಕರೂಪದ ಶಾಸನಗಳನ್ನು ರಚಿಸಿ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡೇ ಜಾರಿಗೊಳಿಸಿದರು. ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು, ಉದ್ಯಮಗಳಲ್ಲಿ ಮುಂದುವರೆಯುವ ಹಕ್ಕನ್ನು ಮೊಟಕುಗೊಳಿಸುವ ಇತ್ಯಾದಿ ಕಟ್ಟೆಚ್ಚರಿಕೆಯ ಮಾತುಗಳನ್ನು ಬಾಬೂಜಿ ಆಡಿದರು.

ಈ ಮೇರು ನಾಯಕನಿಗೆ ಒಮ್ಮೆ ನತದೃಷ್ಟ ಘಟನೆಯೊಂದು ಜರುಗಿತು. ೧೯೪೭ರ ಜೂನ್‌ತಿಂಗಳು ಜಿನೇವಾದ ಅಂತರಾಷ್ಟ್ರೀಯ ಕಾರ್ಮಿಕರ ಸಮ್ಮೇಳನದ ದಿನ ವಿಮಾನದಲ್ಲಿ ಹಿಂತಿರುಗಿ ಬರುವಾಗ ಬಾಶ್ರದ ಬಳಿ ಅಪಘಾತ ಸಂಭವಿಸಿತು. ಅದೃಷ್ಟವಶಾತ್‌ಪ್ರಾಣಪಾಯದಿಂದ ಪಾರಾದರು. ಒಂದು ತಿಂಗಳವರೆಗೆ ಸತತ ಚಿಕಿತ್ಸೆ ಪಡೆಯಬೇಕಾಗಿತ್ತು. ಈ ಅಪಘಾತದ ದುರಂತದಿಂದಾಗಿ ಆಗಸ್ಟ್‌೧೫ರ ಸ್ವಾತಂತ್ರ್ಯ ಅಧಿಕಾರ ಹಸ್ತಾಂತರದ ಭಾವಪರವಶಗೊಳಿಸುವ ಕ್ಷಣಗಳನ್ನು ನೋಡದಾದರು. ನಂತರ ಚೇತರಿಸಿಕೊಂಡ ರಾಮ್‌೧೯೪೭ ನವೆಂಬರ್ ತಿಂಗಳಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಏಷ್ಯಾ ಭಾಗದ ಸಮ್ಮೇಳನಾಧ್ಯಕ್ಷರಾಗಿ ಚುನಾಯಿತಗೊಂಡರು. ಇವರ ಅಂತರಂಗ ಸದಾ ಕಾರ್ಮಿಕರ ಬಗೆಗೆ ಚಿಂತನೆ, ಕಾಳಜಿ ಇರುವುದನ್ನು ಮೊದಲೇ ರಾಜೇಂದ್ರಪ್ರಸಾದ್‌ರು ಗ್ರಹಿಸಿದ್ದರು. ಅವರೇ ಹೇಳುವಂತೆ ‘ರಾಮ್‌ಕಾರ್ಮಿಕರ ಅಭಿವೃದ್ಧಿಯ ಪ್ರವರ್ತಕ, ಆತನ ಕರ್ತವ್ಯ ಅದ್ವಿತೀಯ. ಕಾಯ್ದೆ ಪುಸ್ತಕಗಳಲ್ಲಿ ಮುದ್ರಿಸಲು ಅಸಾಧ್ಯ. ಆ ವರ್ಗಗಳ ಸ್ಥಿತಿಗತಿಗಳಲ್ಲಿ ಯಾವುದೇ ಗುಣಾತ್ಮಕ ಸ್ಥಿತ್ಯಂತರ ಆಗಿದ್ದರೆ ಅದರ ಹಿಂದೆ ಜಗಜೀವನರಾಮ್‌ರ ಬುದ್ಧಿ ಮನಸ್ಸು ಇರುವುದು’. ಬ್ರಿಟೀಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರದ ಪೂರ್ಣಚಿತ್ರಣ ಒದಗಿತ್ತು. ಸ್ವಾತಂತ್ರ್ಯ ಭಾರತದ ಸಂವಿಧಾನ ರಚನಾ ಸಮಿತಿ ಮತ್ತು ಅದರ ವಿವಿಧ ಉಪಸಮಿತಿಗಳ ಜೀವನಾಡಿಗಳಾದ ನೆಹರೂ, ಅಂಬೇಡ್ಕರ್, ವಲ್ಲಭಬಾಯಿ ಪಟೇಲ್‌, ರಾಜೇಂದ್ರಪ್ರಸಾದ್‌ರಾಜಾಜೀ ಮುಂತಾದ ಹಿರಿಯರೆಲ್ಲರೊಡನೆ ಈ ಎಲ್ಲಾ ಸಮಿತಿಗಳಲ್ಲಿ ರಾಮ್‌ಪಾದರಸದಂತೆ ಓಡಾಡುತ್ತಿದ್ದರು.