ಸ್ವತಂತ್ರ ಭಾರತದ ಬಾಬೂಜಿ ರಾಜಕಾರಣ

‘೧೯೫೨ರಲ್ಲಿ ದೇಶದ ಪ್ರಥಮ ಸಾರ್ವತ್ರಿಕ ಚುನಾವಣೆಗಳು ನಡೆದವು. ಸಹಜವಾಗಿ ಕಾಂಗ್ರೆಸ್‌ಗೆ ಅಧಿಕ ಬಹುಮತ ದೊರೆತು ದೇಶವನ್ನು ಮುನ್ನೆಡೆಸಲು ಸರ್ಕಾರ ರಚನೆಗೆ ಅವಕಾಶಗಳು ನಿಚ್ಚಳವಾಗಿದ್ದವು. ದೇಶವನ್ನು ಮುನ್ನೆಡೆಸಲು ಕಾಂಗ್ರೆಸ್‌ಸರ್ಕಾರ ರಚನೆಗೆ ಅವಕಾಶವಾಯಿತು. ರಾಮ್‌ಕೂಡ ಸುಲಭವಾಗಿ ಗೆದ್ದು ನೆಹರೂ ಮಂತ್ರಿಮಂಡಲದಲ್ಲಿ ಸಂಪರ್ಕ ಖಾತೆಯ ಸಚಿವರಾದರು. ದೇಶದ ಐಕ್ಯತೆ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಂಪರ್ಕ ಸಾಧನ ಅತಿ ಮುಖ್ಯವಾದುದು. ಇದರಿಂದ ಬಾಬೂಜಿ ಈ ಸಾಧಾನ ಸಾಮಾಗ್ರಿಗಳು ಸಾರ್ವತ್ರಿಕ ಒಡೆತನಕ್ಕೆ ಒಳಪಟ್ಟಿರಬೇಕೆಂಬ ಸೈದ್ಧಾಂತಿಕ ನಿಲುವು ಒಪ್ಪುವಂತಹದ್ದೆ. ಹೀಗಾಗಿ ಅವರು ಸಂಪರ್ಕ ಸಚಿವರಾದ ಕೂಡಲೇ ತಮ್ಮ ಸೈದ್ಧಾಂತಿಕ ನಿಲುವಿನ ಸಾಕಾರಕ್ಕೆ ಮುಂದಾದರು. ವೈಮಾನಿಕ ಸೇವೆಯ ರಾಷ್ಟ್ರೀಕರಣಗೊಳಿಸಿದರು. ಸಾರ್ವತ್ರಿಕ ಸ್ವಾಮ್ಯದ ಈ ಸಂಸ್ಥೆಗಳು ಜನರ ಒಳಿತಿಗಾಗಿಯೇ ಶ್ರಮಿಸುತ್ತವೆಂಬುದು ಬಾಬೂಜಿಯವರ ಚಿಂತನೆಯಾಗಿತ್ತು. ‘ಏರ್ ಇಂಡಿಯಾ’ ಹಾಗೂ ‘ಭಾರತೀಯ ಏರ್ ಲೈನ್ಸ್‌’ ಸಂಸ್ಥೆಗಳನ್ನು ಹುಟ್ಟುಹಾಕಿದರು. ಹಾಗೆಯೇ ಅಂಚೆ-ತಂತಿ ಮತ್ತು ದೂರವಾಣಿ ಕೇಂದ್ರಗಳನ್ನು ದೇಶದೆಲ್ಲೆಡೆ ಸ್ಥಾಪಿಸಿದರು.

ಕೇಂದ್ರ ರೈಲ್ವೆ ಹಾಗೂ ಸಾರಿಗೆ ಸಚಿವರು

೧೯೫೬ರಲ್ಲಿ ರಾಮ್‌ಕೇಂದ್ರ ಸಾರಿಗೆ ಮತ್ತು ರೈಲವೆ ಸಚಿವರ ಖಾತೆಯನ್ನು ತಮ್ಮದಾಗಿರಿಸಿಕೊಂಡರು. ಈ ಇಲಾಖೆಯಲ್ಲಿದ್ದ ಅನೇಕ ಪಟ್ಟಭದ್ರ ಹಿತಾಸಕ್ತಿಗಳನ್ನು ಹಾಗೂ ಗೊಡ್ಡು ಸಂಪ್ರದಾಯಗಳನ್ನು ಬುಡಸಮೇತ ಕಿತ್ತುಹಾಕಲು ಮುಂದಾದರು. ಕ್ರಾಂತಿಕಾರಕ ಪರಿವರ್ತನೆಗಳನ್ನು ರೈಲ್ವೆ ಇಲಾಖೆಯಲ್ಲಿ ತಂದರು. ಮೂರನೇ ದರ್ಜೆ ಬೋಗಿಗಳಿಗೆ ಅಧಿಕ ಸೌಕರ್ಯಗಳ ಆಧುನಿಕ ಸ್ಪರ್ಶ ನೀಡಿದರು. ಬ್ರಿಟೀಷರ ಕಾಲದಲ್ಲಿದ್ದ ಹಿಂದೂ ಪಾನಿ ಮತ್ತು ಮುಸ್ಲಿಮ್‌ಪಾನಿ ಪದ್ಧತಿಯನ್ನು ರದ್ದುಗೊಳಿಸಿ, ಸ್ವತಂತ್ರ ಭಾರತದಲ್ಲಿ ಪಂಡಿತ್‌ಪಾನಿ ಎಂಬ ಹೊಸಬಗೆಯ ನೀರು ಸರಬರಾಜು ವ್ಯವಸ್ಥೆ ಜಾರಿಯಲ್ಲಿತ್ತು. ಹೆಸರೇ ಹೇಳುವಂತೆ ನೀರು ಸರಬರಾಜಿನ ಏಕಸ್ವಾಮ್ಯತೆಯನ್ನು ಪಂಡಿತರೇ ನಿರ್ವಹಿಸುತ್ತಿದ್ದರು. ಅಂದರೆ ಮೇಲ್ಜಾತಿ ಪರಮಾಧಿಕಾರ ಶ್ರೇಷ್ಠತೆಯ ವರ್ತನೆಗೆ ರಾಮ್‌ಕೊಡಲಿಪೆಟ್ಟು ನೀಡಿದರು. ದಲಿತರು, ಹಿಂದುಳಿದವರು ನೀರುಣಿಸುವ ಹಕ್ಕಿನಿಂದ ವಂಚಿತರಾದವರು. ರೈಲ್ವೆಖಾತೆ ವಹಿಸಿಕೊಂಡವರೇ ರಾಮ್‌ಇದನ್ನು ಗಂಭೀರವಾಗಿ ಪರಿಗಣಿಸಿ ನೀರುಣಿಸುವ ಅಧಿಕಾರ ಎಲ್ಲಾ ಜಾತಿ, ಪಂಗಡ, ಧರ್ಮಿಯರಿಗೆ ಇರುವಂತೆ ವ್ಯವಸ್ಥೆಗೊಳಿಸಿದರು. ರೈಲ್ವೆಯ ಉಪಹಾರಗೃಹಗಳಲ್ಲಿ ಕಡ್ಡಾಯವಾಗಿ ದಲಿತ ಅಡುಗೆ ನೌಕರರನ್ನು ನೇಮಿಸಿಕೊಳ್ಳಲು ಆಜ್ಞೆ ಹೊರಡಿಸಿದ್ದೇ ರಾಮ್‌ಅವರ ಅವಧಿಯಲ್ಲಿ.

ರಾಜ್ಯಾಂಗ ದಲಿತರಿಗೆ ರಾಜಕೀಯ ಮೀಸಲಾತಿ ಮಾತ್ರ ಪ್ರಧಾನಿಸಿತ್ತು. ಆದರೆ ರಾಮ್‌ನೀತಿಯನ್ನು ಸರ್ಕಾರಿ ನೌಕರಿಗೂ ವಿಸ್ತರಿಸಿದರು. ಇದರಿಂದಾಗಿ ರೈಲ್ವೆ ಇಲಾಖೆ ಬಡ್ತಿಯಲ್ಲೂ ಮುಂದೆ ಅಂಚೆ ತಂತಿ ಇಲಾಖೆಯಲ್ಲಿಯೂ ಮೀಸಲಾತಿ ಸೌಲಭ್ಯಗಳ ನಿಯಮಾವಳಿಗಳು ವಿಸ್ತೃತಗೊಂಡವು. ಬಾಬೂಜಿಯವರ ಕಾರ್ಯವಧಿಯಲ್ಲಿ ಸಾಮಾನು ಸರಕುಗಳಿಗೆ ಹಾಗೂ ಪ್ರಯಾಣಿಕರಿಗೆ ರೈಲು ಮುಖ್ಯಸಾರಿಗೆ ಎಂದು ಮನಗಂಡಿದ್ದರು. ಪ್ರವಾಸ, ತೀರ್ಥಯಾತ್ರೆ, ದೃಶ್ಯನೋಟ ಎಲ್ಲಾ ರೀತಿಯ ಕೆಲಸಗಳಿಗೂ ಈ ಸಾರಿಗೆ ತುಂಬಾ ಪ್ರಿಯವೆನಿಸುತ್ತದೆ. ದೂರ ಪ್ರಯಾಣ ಮಾಡುವವರಿಗೆ ಅನುಕೂಲಕ್ಕಾಗಿ ಮೂರು ಹಾಸಿಗೆಗಳ ತ್ರಿಟಯಾರ್ ರೈಲು ಡಬ್ಬಿಗಳನ್ನು ಪ್ರಪ್ರಥಮ ಬಾರಿಗೆ ಬಾಬೂಜಿ ವ್ಯವಸ್ಥೆ ಮಾಡಿದರು. ಅಧಿಕವೇಗದ ಗೂಡ್ಸ್ ಗಾಡಿಗಳು, ಹವನಿಯಂತ್ರಿತ ಬೋಗಿಗಳು, ರಫ್ತುವಸ್ತುಗಳನ್ನು ಸಾಗಿಸಲು ಹೆಚ್ಚಿನ ಅನುಕೂಲ ಮೊದಲಾದ ಸುಧಾರಣ ಕಾರ್ಯಗಳನ್ನು ನಿಯೋಜಿಸಿ ಕಾರ್ಯಗತಗೊಳಿಸಿದರು. ರೈಲ್ವೆ ಡಿಸಲೀಕರಣ ಮತ್ತು ವಿದ್ಯುದೀಕರಣಕ್ಕೆ ವ್ಯಾಪಕ ಗಮನ ಹರಿಸಲಾಯಿತು. ಅವರ ಈ ಕಾರ್ಯವೈಖರಿಯಿಂದಾಗಿ ಎರಡುಬಾರಿ ರೈಲ್ವೆ ಮತ್ತು ಸಾರಿಗೆ ಸಂಪರ್ಕ ಸಚಿವರಾಗಿ ನಿಯೋಜನೆಗೊಂಡರು.

ಕೇಂದ್ರ ಕಾರ್ಮಿಕ ಸಚಿವರಾಗಿ

ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಯ ಕಾರ್ಯಕ್ರಮಗಳನ್ನು ಬಾಬೂಜೀ ಜಾರಿಗೊಳಿಸಿದರು. ಮಾಲೀಕರು ಮತ್ತು ಆಡಳಿತ ಮಂಡಳಿಗಳ ಮೇಲೆ ನಿಯಂತ್ರಣವಿಲ್ಲದೇ ಹೋದರೆ ಅದು ಆರ್ಥಿಕ ಏಕಸ್ವಾಮ್ಯತೆ ಹಾಗೂ ಕಾರ್ಮಿಕರ ಶೋಷಣೆಗೆ ದಾರಿ ಮಾಡಿಕೊಡುತ್ತದೆಂಬ ನಂಬಿಕೆಯನ್ನು ರಾಮ್‌ಹೊಂದಿದ್ದರು. ದುಡಿಯುವ ಕಾರ್ಮಿಕರು ಸದೃಢ ಆರೋಗ್ಯವಿದ್ದಾಗ ಮಾತ್ರ ಹೆಚ್ಚು ಉತ್ಪಾದನಾ ಸಾಮಥರ್ಯವನ್ನು, ಕ್ರಿಯಾಶೀಲತೆಯನ್ನು ಹೊಂದಿರುತ್ತಾರೆ. ಹೀಗಾಗಿ ಒಂದು ನಿರ್ದಿಷ್ಟ ಗುರಿಯ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಕಾರ್ಮಿಕ ಖಾತೆಯ ಸಚಿವರಾದ ಬಳಿಕ ರಾಮ್‌ಜಾರಿಗೊಳಿಸಲು ನಿಶ್ಚಯಿಸಿದರು. ಭಾರತದ ಜಾತಿವ್ಯವಸ್ಥೆಯಲ್ಲಿ ಭೂಮಾಲೀಕರು ಮತ್ತು ಕೃಷಿಕಾರ್ಮಿಕರ ಅಂತರ ಅಗಾಧವಾಗಿದ್ದು, ಇದನ್ನು ತೊಡೆದುಹಾಕಲು ಬಾಬೂಜಿ ಕಾರ್ಮಿಕ ಸಚಿವರಾಗಿ ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗಬೇಕೆಂಬ ಅಚಲ ನಿರ್ಧಾರವನ್ನು ಕನಿಷ್ಠಕೂಲಿ ಕಾಯಿದೆ ೧೯೪೫ನ್ನು ಜಾರಿಗೊಳಿಸುವ ಮೂಲಕ ಅದನ್ನು ಸಾದರಪಡಿಸಿದರು. ಕೃಷಿಕಾರ್ಮಿಕರ ದುಡಿಮೆಗೂ ಕೂಲಿ ನಿರ್ಧರಿಸುವ ಶಾಸನಬದ್ಧ ಹಕ್ಕಿದೆ ಎಂಬ ವೈಜ್ಞಾನಿಕ ಅರಿವನ್ನು ರಾಷ್ಟ್ರಕ್ಕೆ ತೋರಿಸಿದರು. ಶೋಷಣೆ ಕೇವಲ ಆರ್ಥಿಕರಂಗಕ್ಕೆ ಸೀಮಿತವಾಗಿಲ್ಲ. ಅದು ಸರ್ವವ್ಯಾಪಿಯಾದ ಗುಣಾಕ್ಷ ಹೊಂದಿದ್ದು, ತನ್ನ ಕಬಂಧಬಾಹುಗಳನ್ನು ಸಾಮಾಜಿಕ ಹಾಗೂ ರಾಜಕೀಯ ವಲಯಗಳಿಗೆ ವ್ಯಾಪಿಸಿಕೊಂಡಿದೆ. ಈ ಕ್ಷೇತ್ರಗಳಲ್ಲಿ ಮೊದಲು ಶೋಷಣೆ ತೊಲಗಿದರೆ, ಕಾರ್ಮಿಕ-ಮಾಲೀಕ ಸಂಬಂಧಗಳಲ್ಲಿ ಸೌರ್ಹದತೆ ಮತ್ತು ಪರಸ್ಪರ ಹೊಂದಾಣಿಕೆ ತರಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ಬಾಬೂಜಿ ಹೊಂದಿದ್ದರು.

ಉದ್ಯೋಗಗಳಲ್ಲಿ ಶ್ರಮಿಕರನ್ನು ಪಾಲುದಾರರಂಎ ಕಾಣಬೇಕೆಂಬ ಸಿದ್ಧಾಂತವನ್ನು ಪ್ರತಿಪಾದಿಸಿದರು. ದೇಶದ ಇತಿಹಾಸದಲ್ಲಿ ಮೊದಲಬಾರಿಗೆ ಕೃಷಿ ಮತ್ತು ತೋಟಗಳಲ್ಲಿನ ಕಾರ್ಮಿಕರ ಸಂಘಟನೆಯಾಯಿತು. ಇದಕ್ಕಾಗಿ ಬಾಬೂಜಿ ಟ್ರೇಡ್‌ಯೂನಿಯನ್‌ಹ್ಯಾಕ್ಟನ್ನು ರೂಪಿಸಿದರು. ತಮ್ಮ ಕಾರ್ಮಿಕ ಇಲಾಖೆಯಲ್ಲಿ ಬಾಬೂಜಿ ಮಾಡಿದ ಹಲವು ಮುಖ್ಯ ಕಾನೂನುಗಳೆಂದರೆ:

೧. ಇಂಡಸ್ಟ್ರೀಸ್‌ಎಂಪ್ಲಾಯಿಮೆಂಟ್‌ಹ್ಯಾಕ್ಟ್‌೧೯೪೬

೨. ಇಂಡಸ್ಟ್ರೀಯಲ್‌ಡಿಸ್‌ಪ್ಯೂಟ್‌ಹ್ಯಾಕ್ಟ್‌೧೯೪೭

೩. ಲೇಬರ್ ವೆಲ್‌ಫೇರ್ ಫಂಡ್‌ಹ್ಯಾಕ್ಟ್ ೧೯೪೭

೪. ಎಂಪ್ಲಾಯಿಸ್‌ಪ್ರಾವಿಡೆಂಟ್‌ಫಂಡ್‌ಹ್ಯಾಕ್ಟ್‌೧೯೫೨

೫. ಕೋಲ್‌ಮೈನ್ಸ್‌ಹ್ಯಾಕ್ಟ್‌೧೯೫೨.

ಬಂದರು ಪ್ರದೇಶದಲ್ಲಿ, ಹಡಗುಕಟ್ಟೆಗಳಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಿಸಲು ಬಾಬೂಜಿ ರೂಪಿಸಿದ ಅಧಿನಿಯಮವು ಸಾಮಾಜಿಕ ಸಿದ್ಧಾಂತವನ್ನು ಆಧರಿಸಿತ್ತು. ಇದೊಂದು ಕ್ರಾಂತಿಕಾರಿ ಪರಿವರ್ತನೆಯೇ ಆಗಿತ್ತು. ಕೆಲಸ ಕಾಯಂಗೊಳಿಸಲು ಅಗತ್ಯ ಮಾರ್ಪಡುಗಳನ್ನು ಜಾರಿಗೊಳಿಸಿದರು.

೧೯೬೬ರಲ್ಲಿ ಎರಡನೇ ಬಾರಿಗೆ ಬಾಬೂಜಿ ಕಾರ್ಮಿಕ ಇಲಾಖೆಯನ್ನು ಉಳಿಸಿಕೊಂಡರು. ಈ ಅವಧಿಯಲ್ಲಿ ಗುತ್ತಿಗೆ ಕಾರ್ಮಿಕ ಮಸೂದೆ ಮಂಡಿಸಿದರು. ಹಾಗೆಯೇ ಬಾಬೂಜಿ ಕಾರ್ಮಿಕರ ಕಲ್ಯಾಣಕ್ಕಾಗಿ ಗಜೇಂದ್ರಗಡಕರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಶ್ರಮ ಆಯೋಗ ರಚಿಸಿದರು. ಕಲ್ಲಿದ್ದಲು, ಗಣಿಗಾರಿಕೆಯಲ್ಲೂ ಕಾರ್ಮಿಕರಿಗಾಗಿ ಸಾಕಷ್ಟ ಸುಧಾರಣೆಗಳನ್ನು ತಂದರು. ಕಾರ್ಮಿಕ ಹಿತರಕ್ಷಣೆ ಮತ್ತು ಭದ್ರ ಭವಿಷ್ಯತ್ತಿಗೆ ಬಾಬೂಜಿ ಹಗಲಿರುಳು ದುಡಿದು ಚಿಂತಿಸಿದರು. ತೋಟಗಾರಿಕಾ ಕ್ಷೇತ್ರಗಳಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರಿಗೆ ನ್ಯಾಯಬದ್ಧ ಕೂಲಿ ಗಳಿಸುವ, ಸಾಮಾಜಿಕ ಭದ್ರತೆಯನ್ನು ಪಡೆಯುವ ಹಾಗೂ ಸಂಘಟಿತರಾಗುವ ಅವಕಾಶಗಳನ್ನು ನೀಡಿದರು. ಮಾಲೀಕ-ಕಾರ್ಮಿಕ ಇಬ್ಬರ ಪರಸ್ಪರ ಸಹಕಾರ ಶ್ರಮವಿಲ್ಲದಿದ್ದಲ್ಲಿ ಸರ್ಕಾರಗಳು ನಿಷ್ಫಲವಾಗುತ್ತವೆ ಎಂದು ಬಾಬೂಜಿ ಅಂದೇ ಗ್ರಹಿಸಿದ್ದರು. ಅಂದು ಬಾಬೂಜಿ ತಾಳಿದ ನಿಲುವುಗಳಿಂದ ಇಂದು ಕೋಟಿಗಟ್ಟಲೇ ಬಡಕಾರ್ಮಿಕರ ಜೀವನದಲ್ಲಿ ಒಮದು ಸಂತಸದ ಆಶಾಕಿರಣ ಮೂಡಿದಂತಾಗಿದೆ. ೧೯೬೬ರ ಜನವರಿ ೨೪ ರಂದು ಕಾರ್ಮಿಕ ಮಂತ್ರಿಗಳಾಗಿ ಎರಡನೇ ಬಾರಿ ಬಾಬೂಜಿ ಉದ್ಯೋಗ-ಪುನರ್ವಸತಿ ವಿಭಾಗವನ್ನು ವಹಿಸಿಕೊಂಡರು. ಅನೇಕ ಕಾರ್ಮಿಕರ ಸುಧಾರಣಾ ಕಾರ್ಯಗಳನ್ನು ಜಾರಿಗೊಳಿಸಿದರು.

ಆಹಾರ, ಕೃಷಿ ಮತ್ತು ಸಹಕಾರ ಸಚಿವರಾಗಿ

ಜಗಜೀವನರಾಮ್‌ಪ್ರಧಾನಿ ಇಂದಿರಾಗಾಂಧಿ ಅವರ ಸಚಿವಸಂಪುಟದಲ್ಲಿ ಆಹಾರ ಮಂತ್ರಿಗಳಾದಾಗ ಭಾರತದಲ್ಲಿ ಆಹಾರ ಸಮಸ್ಯೆ ಗಂಭೀರವಾಗಿದ್ದ ಕಾಲ. ಈ ದೇಶದ ಅತ್ಯುನ್ನತ ಪದವಿ ಪ್ರಧಾನಿ ಹುದ್ದೆಗೆ ತೀವ್ರ ಸ್ಪರ್ಧಿ ಎನಿಸಿದ್ದ ಬಾಬೂಜಿಯನ್ನು ಆಹಾರ ಖಾತೆಗೆ ನಿಯೋಜಿಸಿದಾಗ ಹಲವರು ವರಿಷ್ಟರು ಅವರ ರಾಜಕೀಯ ಖಾತೆ ಮುಗಿಯಿತೆಂದೇ ಭಾವಿಸಿದರು. ಏಕೆಂದರೆ ಭಾರತದ ಆಗಿನ ಪರಿಸ್ಥಿತಿ ತೀರ ಹದಗೆಟ್ಟಿತ್ತು. ೧೯೬೫-೬೬ ರಲ್ಲಿ ದೇಶದಲ್ಲಿ ಭೀಕರ ಬರಗಾಲ. ಕೃಷಿ ಉತ್ಪಾದನೆಗೆ ಬಾರಿ ಪ್ರತಿಕೂಲ ಪರಿಸ್ಥಿತಿ ಬಂದಿತ್ತು. ವಿಶ್ವದ ವಿವಿಧ ದೇಶಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಉಂಟಾಗಿತ್ತು. ಹಲವೆಡೆ ಮುಂಗಾರು ಮಳೆ ಕಡಿಮೆಯಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಜಗಜೀವನರಾಮ್‌ರು ದೇಶದ ಆಹಾರ, ಕೃಷಿ ಮತ್ತು ಸಹಕರ ಸಚಿವರಾಗಿ ನೇಮಕಗೊಂಡಿದ್ದು ಸವಾಲಿನ ಕೆಲಸವೇ ಸರಿ. ಸಮಸ್ಯೆಗಳ ಸರಮಾಲೆಯ ಸಂದರ್ಭದಲ್ಲಿ ಬಾಬೂಜಿ ಕೃಷಿ ಸಚಿವರಾಗಿ ಸಮರ್ಥವಾಗಿಯೇ ನಿಭಾಯಿಸಿದರು. ಕಾರ್ಮಿಕ, ರೈಲ್ವೆ ಹಾಗೂ ಸಂಪರ್ಕ ಸಚಿವರಾಗಿ ಜನತೆಗೆ ತಮ್ಮ ಕಾರ್ಯಸಾಮರ್ಥ್ಯವನ್ನು ತೋರಿದ ಬಾಬುಜಿಗೆ ಇದು ಕಷ್ಟವೆನಿಸಿರಲಿಲ್ಲ. ಯಾವುದೇ ಇಲಾಖೆಯಿರಲಿ ಅಲ್ಲಿ ಅವರ ಪ್ರತಿಭೆಯ ಪ್ರಭಾವ ಇರುತ್ತಿತ್ತು. ದೇಶದ ಕೋಟ್ಯಾಂತರ ಜನರು ಆಹಾರಖಾತೆಯನ್ನು ವಹಿಸಿಕೊಂಡ ಬಾಬೂಜಿಯನ್ನು ಅಭಿನಂದಿಸಿದರು. ಅದೇನು ಪುಣ್ಯವೋ ಬಾಬೂಜಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಂಜೆಯೇ ಮೋಡಗಳ ಕಟ್ಟೆ ಒಡೆದು ಭಾರಿ ಮಳೆಯೊಂದಿಗೆ ಅವರನ್ನು ಮನಸಾರೆ ಅಭಿನಂದಿಸಿದವು.

ದೇಶದಲ್ಲಿ ಉಂಟಾದ ಆಹಾರ ಸಮಸ್ಯೆ ಕುರಿತು ಗಂಭೀರವಾಗಿ ಚಿಂತಿಸಿದ ಬಾಬೂಜಿ ತಕ್ಷಣ ಕಾರ್ಯಪ್ರವೃತ್ತರಾದರು. ಏಪ್ರಿಲ್‌೧೯೬೭ ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಒಂದು ಸಭೆಯನ್ನು ಕರೆದು ಅವರೊಂದಿಗೆ ಸುಧೀರ್ಘವಾಗಿ ಚರ್ಚಿಸಿ ನಿರ್ಣಯಗಳನ್ನು ಮಂಡಿಸಿದರು. ಇದೊಂದು ರಾಷ್ಟ್ರೀಯ ಸಮಸ್ಯೆ. ನಾವೆಲ್ಲ ಹೆಗಲಿಗೆ ಹೆಗಲುಕೊಟ್ಟು ಈ ಸಮಸ್ಯೆಯನ್ನು ಹೋಗಲಾಡಿಸಲು ಶ್ರಮಿಸಬೇಕು. ಸಮೀಪದ ಭವಿಷ್ಯದಲ್ಲಿ ನಾವೆಲ್ಲಾ ಬೇರೆ ದೇಶದಿಂದ ಆಹಾರ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕೆಂಬುದು ಬಾಬೂಜಿಯ ವಿಚಾರಧಾರೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೇ ಅಧಿಕ ಆಹಾರವನ್ನು ಹೊಂದಿರುವ ರಾಜ್ಯಗಳು ಆಹಾರ ಕೊರತೆಯುಳ್ಳ ರಾಜ್ಯಗಳಿಗೆ ರವಾನಿಸುವುದರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಯಶಸ್ವಿಯಾದರು. ಆದರೆ ಇದು ಸಾಲದಾಯಿತು. ಇಂದಿರಾಜಿ ಭಾರತದಲ್ಲಿ ಧಾನ್ಯಗಳನ್ನು ಬಳಸುವಲ್ಲಿ ಕೆಲಮಟ್ಟಿಗೆ ತಗ್ಗಿಸಲು ಜನರಲ್ಲಿ ಮನವಿ ಮಾಡಿದರೂ ವಿದೇಶಗಳಿಂದ ಗೋಧಿ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಸಂಸತ್ತಿನಲ್ಲಿ ಸದಸ್ಯರೊಬ್ಬರು ಬಾಬೂಜಿಗೆ ಪ್ರಶ್ನೆ ಕೇಳಿದಾಗ ಅವರು ಆಹಾರ ಸಮಸ್ಯೆ ಕುರಿತು ಅವರು ಹೀಗೆ ಉತ್ತರಿಸಿದರು: ‘ನಮ್ಮ ದೇಶದ ರೈತರು ಸಂಪ್ರದಾಯ ವಾದಿಗಳು. ಅವರು ಸಾಧಾರಣ ಪದ್ಧತಿಯನ್ನು ಅನುಸರಿಸಿ ಕೃಷಿ ಮಾಡುತ್ತಿದ್ದಾರೆ. ಆಧುನಿಕ ಪದ್ಧತಿಗಳನ್ನು ಅವರು ಅಳವಡಿಸಿಕೊಳ್ಳಬೇಕು. ಬೀಜೋಪಚಾರ, ಅಧಿಕ ಇಳುವರಿ ನೀಡುವ ಬೀಜಗಳ ಬಳಕೆ, ಕೀಟನಾಶಕಗಳನ್ನು ಉಪಯೋಗಿಸುವುದು.ಇದನ್ನೆಲ್ಲಾ ಶೀಘ್ರ ತಿಳಿಯುವಂತಾಗಬೇಕು. ಈವರೆಗಿನ ನಮ್ಮ ಕೃಷಿ ಜೀವನ ರಚನೆಯ ಸಾಧನವಾಗಿದೆ. ಕೃಷಿಯ ಹೊಸ ಪದ್ಧತಿಗಳನ್ನು ಅನುಸರಿಸುವ, ವಿಜ್ಞಾನ ಮತ್ತು ತಂತ್ರಜ್ಞಾನ ಗಳಿಸಿ ಕೃಷಿಯನ್ನು ವೈಜ್ಞಾನಿಕವಾಗಿಸಿ, ಆ ನಿಟ್ಟಿನಲ್ಲಿ ನಿರಂತರ ಶೋಧ ನಡೆಸಿ ದೇಶದಲ್ಲಿ ಕೃಷಿಯಿಂದ ಲಾಭಗಳನ್ನು ಪಡೆಯುವಂತಾಗಬೇಕು. ಇದರಿಂದ ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗುತ್ತೇವೆ. ‘ಹೀಗೆ ಆಹಾರದ ಅಭಾವ ಎಲ್ಲೇ ಇರಲಿ ಅಲ್ಲಿ ಆಹಾರ ಒದಗಿಸುವ ಕುರಿತು ಹಾಗೂ ಆಧುನಿಕವಾದ ವಿಧಾನಗಳಿಂದ ಕೃಷಿ ಇಳುವರಿ ಹೆಚ್ಚಿಸುವಲ್ಲಿ ಜಗಜೀವನರಾಮ್‌ಯಶಸ್ವಿಯಾದರು. ಹಸಿರುಕ್ರಾಂತಿಯ ಪರಿಣಾಮವಾಗಿ ಗೋಧಿ ಉತ್ಪಾದನೆಯಲ್ಲಿ ಕ್ರಾಂತಿಯು ಆಯಿತು. ಆಹಾರ ಧಾನ್ಯಗಳ ಫಸಲು ಚೆನ್ನಾಗಿ ಬಂತು. ಇದರಿಂದ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿ ಸ್ವಾವಲಂಬನೆಯತ್ತ ಬಾಬೂಜಿ ದೇಶವನ್ನು ಕೊಂಡೊಯ್ದರು. ಅವರನ್ನು ಹಸಿರುಕ್ರಾಮತಿ ಹರಿಕಾರನೆಂದು ಜನರು ಬಣ್ಣಿಸಿದರು. ಬಾಬೂಜಿ ದೂರದೃಷ್ಟಿಯುಳ್ಳವರಾಗಿದ್ದರು.

ಈ ಬೆಳವಣಿಗೆಗಳ ನಡುವೆ ೧೮೮೫ರಿಂದಲೂ ಅಖಂಡವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್‌ಪ್ರಧಾನಿ ಇಂದಿರಗಾಂಧಿ ಧೋರಣೆಯಿಂದಾಗಿ ಎರಡು ಹೋಳಾಗಿ ಹೋಯಿತು. ಒಂದು ಸಂಸ್ಥಾ ಕಾಂಗ್ರೆಸ್‌, ಇನ್ನೊಂದು ಆಳುವ ಕಾಂಗ್ರೆಸ್‌. ಇಲ್ಲಿಂದಲೇ ರಾಜಕೀಯ ಅನೈತಿಕತೆ ಆರಂಭವಾಯಿತೆನ್ನಬಹುದು. ೧೯೬೯ ಜುಲೈ ೧೨ ರಂದು ರಾಷ್ಟ್ರಪತಿ ಚುನಾವಣೆಗಾಗಿ ಕಾಂಗ್ರೆಸ್‌ಕಾರ್ಯಕಾರಿ ಸಮಿತಿಯಲ್ಲಿ ಪರಸ್ಪರ ಭಿನ್ನ ಧೋರಣೆಗಳೊಂದಿಗೆ ನಿಜಲಿಂಗಪ್ಪನವರು ಸಂಜೀವ ರೆಡ್ಡಿಯವರನ್ನು ರಾಷ್ಟ್ರಪತಿ ಅಭ್ಯರ್ಥಿಯೆಂದು ಇಂದಿರಾ ಅವರು ಜಗಜೀವನರಾಮ್‌ಅಭ್ಯರ್ಥಿಯೆಂದು ಮತಹಾಕಿದರು. ಆಗ ಗಾಂಧಿ ಶತಮಾನೋತ್ಸವ ಸಂದರ್ಭ. ಹರಿಜನನೊಬ್ಬ ಭಾರತದ ರಾಷ್ಟ್ರಪತಿಯಾಗಿದ್ದಿದ್ದರೆ ಗಾಂಧೀಜಿಯ ಆಸೆ ಫಲಿಸುತಿತ್ತು ಎಂದವರು ಕೆಲವರು. ಆದರೆ ಜಾತಿವ್ಯವಸ್ಥೆಯ ವರ್ತುಲದಲ್ಲಿ ಬಾಬೂಜಿ ಕಡೆಗಣಿಸಲ್ಪಟ್ಟಿದ್ದು ದೇಶದ ದೊಡ್ಡ ದುರಂಥ. ಕೊನೆಗೆ ಒಮ್ಮತ ಕಾಣದ್ದರಿಂದ ಇಂದಿರಾಜಿಯ ವಿ.ವಿ. ಗಿರಿಯನ್ನು ನೀಲಂ ಸಂಜೀವರೆಡ್ಡಿಯವರಿಗೆ ವಿರುದ್ಧವಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ನಿಲ್ಲಿಸಿ ಮತ ಯಾಚಿಸಿದರು. ಈ ವೇಳೆಗೆ ಮುರಾರ್ಜಿಯವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿತ್ತು. ಚುನಾವಣೆಯಲ್ಲಿ ವಿ.ವಿ. ಗಿರಿಯವರೇ ಗೆದ್ದುಬಂದರು. ಆಗ ಕಾಂಗ್ರೆಸ್‌ಅನಿವಾರ್ಯವಾಗಿ ಒಡೆದು ಎರಡು ಗುಂಪಾಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ಬಗ್ಗೆ ಸಹಾನುಭೂತಿ ಹೊಂದಿದ್ದ ಬಾಬೂಜಿ ಇಂದಿರಾರವರ ಬೆಂಬಲಿಗರಾಗಿ ಗಟ್ಟಿಯಾಗಿ ನಿಂತರು. ೧೯೬೯ರ ನವೆಂಬರ್ ೨೨ ರಂದು ಕಾಂಗ್ರೆಸ್‌ಅಧಿವೇಶನದಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಅಂದೇ ಕಾಂಗ್ರೆಸ್‌ನ ಅಧ್ಯಕ್ಷ ಪದವಿಯಿಂದ ನಿಜಲಿಂಗಪ್ಪ ಮತ್ತು ಇತರ ಅವರ ಹನ್ನೊಂದು ಬೆಂಬಲಿಗರನ್ನು ಕಾರ್ಯಕಾರಿ ಸಮಿತಿಯಿಂದ ಹೊರಹಾಕಿದರು. ಇಂದಿರಾಗಾಂಧಿಯವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಉಳಿಸಿಕೊಳ್ಳಲಾಗಿತ್ತು. ೧೯೬೯ರ ಡಿಸೆಂಬರ್ ೨೬ ರಿಂದ ೨೦ರವರೆಗೆ ಮುಂಬೈನಲ್ಲಿ ಆಳುವ ಕಾಂಗ್ರೆಸ್‌ನ ಅಖಿಲ ಭಾರತದ ಅಧಿವೇಶನ ನಡೆಯಿತು. ಬಾಬು ಜಗಜೀವನರಾಮ್‌ಕಾಂಗ್ರೆಸ್‌ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌ನ ಅಧ್ಯಕ್ಷಪಟ್ಟ ಅಖಿಲ ಭಾರತ ವ್ಯಾಪ್ತಿಯನ್ನುವಿಶೇಷವಾಗಿ ತಂದುಕೊಟ್ಟಿತು. ಎರಡು ಬಣಗಳನ್ನು ಒಂದುಮಾಡಲು ಬಾಬೂಜಿಯವರು ಫಕ್ರೂದ್ಧಿನ್‌ಅಲಿ ಅಹಮ್ಮದ್‌ರೊಂದಿಗೆ ಸಮೀಪದ ಗೆಳೆಯ ಮುರಾರ್ಜಿದೇಸಾಯಿ ಅವರಿಗೆ, ಅಧ್ಯಕ್ಷ ನಿಜಲಿಂಗಪ್ಪನವರಿಗೆ ಪತ್ರ ಬರೆದರು. ಹೇಗಾದರು ಮಾಡಿ ಪಕ್ಷದ ಸಂಘಟನೆಗೆ ಯತ್ನಿಸಬೇಕೆಂದು, ಒಡೆದ ಪಕ್ಷ ಒಂದಾಗಬೇಕೆಂದು ಕರೆಯಿತ್ತರು. ಆದರೆ ದುರಾದೃಷ್ಟವಶಾತು ಒಡೆದ ಕಾಂಗ್ರೆಸ್‌ಒಂದಾಗಲೇ ಇಲ್ಲ. ಭಾರತದ ಬಹು ದೊಡ್ಡ ರಾಜನೀತಿಬದ್ಧ ಸಂಘಟನೆಯಾದ ಆಳುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ದಲಿತ ನಾಯಕನೊಬ್ಬ ಪದಗ್ರಹಣ ಮಾಡಿದಾಗ ಬಿದ್ದ ಹೂ ಹಾರಗಳಿಗೆ ಲೆಕ್ಕವಿಲ್ಲ. ಕೋಟ್ಯಾಂತರ ಶುಭಕಾಮನೆಗಳು ಅಭಿನಂದನೆಗಳು ಬಾಬೂಜಿಗೆ ಸಂದವು.

ಜಗಜೀವನರಾಮ್‌ಡಿಸೆಂಬರ್ ೨೮, ೧೯೬೯ ರಂದು ೭೩ನೇ ಬಾಂಬೆ ಅಧಿವೇಶನದಲ್ಲಿ ಮಾಡಿದ ಅಧ್ಯಕ್ಷೀಯ ಬಾಷಣ ತುಂಬಾ ಪ್ರಬುದ್ಧ ಹಾಗೂ ರೋಚಕವಾಗಿತ್ತು. ರಾಮ್‌ಹೀಗೆ ಹೇಳಿದರು: ‘ಈ ದೊಡ್ಡ ನಗರದ ಜೊತೆ ಭಾರತೀಯ ಕಾಂಗ್ರೆಸಿಗೆ ಬಹಳಷ್ಟು ಸಂಬಂಧವಿದೆ ಹಾಗೂ ಇದೊಂದು ಐತಿಹಾಸಿಕ ಸಂಬಂಧವಾಗಿದೆ. ೮೫ ವರ್ಷಗಳ ಹಿಂದೆ ಇಲ್ಲಿಯೇ ಕಾಂಗ್ರೆಸ್‌ಜನ್ಮ ತಳೆಯಿತು. ಇಲ್ಲಿಯೇ ಕಾಂಗ್ರೆಸ್‌ನೇತಾರರಾದ ಲೋಕಮಾನ್ಯ ತಿಲಕ್‌, ಸುರೇಂದ್ರನಾಥ ಬ್ಯಾನರ್ಜಿ ಮೊದಲಾದವರೊಂದಿಗೆ ಶ್ರೀಮತಿ ಹ್ಯಾನಿಬೆಸಂಟರು ‘ಹೋಂರೂಲ್‌ಲೀಗ್‌’ನ ಸ್ಥಾಪನೆ ಮಾಡಿದ್ದರು. ಇದೇ ನಗರದಲ್ಲಿಯೇ ರಾಷ್ಟ್ರೀಯ ಕಾಂಗ್ರೆಸಿನ ಸ್ವರ್ಣಮಹೋತ್ಸವ ಜರುಗಿ ಭಾರತರತ್ನ ರಾಜೇಂದ್ರಪ್ರಸಾದರು ೧೯೩೪ರಲ್ಲಿ ಇಲ್ಲಿ ನಡೆದ ಅಧಿವೇಶನದ ಅಧ್ಯಕ್ಷರಾಗಿದ್ದರು. ಮಹಾತ್ಮಾ ಗಾಂಧೀಜಿ ೧೯೪೨ರಲ್ಲಿ ಆಗಸ್ಟ್‌ನಲ್ಲಿ ಭಾರತ ಬಿಟ್ಟು ತೊಲಗಿ ಎಂದು ಬ್ರಿಟೀಷರಿಗೆ ಕೂಗಿ ಹೇಳಿದ್ದು ಇಲ್ಲಿಂದಲೇ.’

ಕಾಂಗ್ರೆಸ್‌ಇಬ್ಬಾಗವಾಗುವುದನ್ನು ತಡೆಯುವ ಕುರಿತು ಆಗ್ರಹಪಡಿಸುತ್ತಾ ಜಗಜೀವನರಾಮ್‌ರು, ‘ನಾವು ಕೆಸರನ್ನು ಕೆಸರಿನಿಂದ ಶುದ್ಧಗೊಳಿಸಲಾಗುವುದಿಲ್ಲ ಎಂಬುದನ್ನು ಮರೆಯಬಾರದು. ಆದುದರಿಂದ ನಾನು ನಿಂದೆಯಿಂದ ನಿಂದೆಗೂ, ಅಪಶ್ಯಬ್ದಗಳಿಂದ ಅಪಶ್ಯಬ್ದಗಳಿಗೂ ಉತ್ತರ ನೀಡಬಯಸುವುದಿಲ್ಲ. ನಾನೀಗ ಹಳೆಯ ಸ್ನೇಹಿತರಿಗೆ ಬುದ್ಧನು ‘ಬೈಗುಳ ಪ್ರವಾಹದ ಮುಂದೆ ಉಗುಳಿದರೆ ಅದು ನಮ್ಮ ಮೇಲೆ ಹಿಂತಿರುಗಿ ಬೀಳುತ್ತದೆ’ ಎಂದು ಹೇಳಿದುದನ್ನು ನೆನಪಿಸ ಬಯಸುತ್ತೇನೆ. ಇಷ್ಟೆಲ್ಲ ಆದರೂ ಒಂದಾಗುವ ಬಗ್ಗೆಯಷ್ಟೇ ಹೇಳುವುದಾಗಿದೆ. ಭವಿಷ್ಯ ಮತ್ತು ಲೋಕತಂತ್ರಕ್ಕಾಗಿ ನಾನಿದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್‌ಅಧ್ಯಕ್ಷನಾಗಿ ಆರಿಸಿ ಬಮದ ಈ ಅವಕಾಶದಲ್ಲಿ ನಾನು ಹೇಳುವುದಾದರೂ ಎಲ್ಲರೂ ಸೇರಿ ಒಂದಾಗಲು ಬಾಗಿಲು ತೆರೆದಿದೆ ಎಂದು. ಒಗ್ಗಟ್ಟೆ ಗುರಿ. ಬೇರಾಗುವುದಲ್ಲ. ಯಾವ ಜನತೆ ನಮ್ಮ ಆದರ್ಶ, ನೀತಿಗಳಿಗೆ ವಚನಬದ್ಧವಾಗಿದೆಯೊ ಆ ಜನರನ್ನು ನಾವು ನಮ್ಮೊಂದಿಗೆ ಕೂಡಿ ಇರಲು ಸ್ವಾಗತಿಸುತ್ತೇವೆ. ನಮಗೀಗ ಬೇರೆ ಯಾವ ಆಲೋಚನೆಯೂ ಇಲ್ಲ – ಇದು ಒಂದು ಕಾಂಗ್ರೆಸ್‌ಗಷ್ಟೆ ಅಲ್ಲ ಸಂಕಟ ಪರಿಸ್ಥಿತಿಯಲ್ಲಿರುವ ದೇಶದ ಅಭಿವೃದ್ಧಿಗಾಗಿಯೇ ಇದೆ. ಈ ಆಂತರಿಕ ಮತಭೇದ ಪ್ರಗತಿ ಶೀಲ ರಾಷ್ಟ್ರದ ಕಾರ್ಯಗಳು ಕುರಿತಂತೆ ಸಂಘರ್ಷಪೂರ್ಣ ಪ್ರವೃತ್ತಿಯ ಅಭಿವ್ಯಕ್ತಿ ಎನ್ನಬಹುದು. ಇದು ಲೋಕತಾಂತ್ರಿಕತೆಗೆ ಎಲ್ಲಿ ಭಂಗತರುವುದೋ ಎಂಬುದೇ ಚಿಂತೆಯಾಗಿದೆ. ಇದರಿಂದ ವಿಭಿನ್ನ ಸಮೂಹಗಳ ಲೋಕ ತಾಂತ್ರಿಕ ಕಾರ್ಯಕ್ರಮಗಳ ಹಾಗೂ ಸರ್ಕಾರದ ಸ್ಥಿರತೆಗೆ ಅಪಾಯ ಉಂಟಾಗಲಿಕ್ಕೆ ಸಾಧ್ಯ.

ರಕ್ಷಣಾ ಸಚಿವರಾಗಿ

ಜಗಜೀವನರಾಮ್‌ಜೂನ್‌೨೯, ೧೯೭೦ರಂದು ಇಂದಿರಾಜಿ ಅವರ ಸಂಪುಟದಲ್ಲಿ ರಕ್ಷಣಾ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಈ ಖಾತೆಯಲ್ಲಿ ಅವರು ನಾಲ್ಕು ವರ್ಷಗಳಿಗೂ ಹೆಚ್ಚುಕಾಲ ಸೇವೆಸಲ್ಲಿಸಿ ತಮ್ಮ ಸಾಮರ್ಥ್ಯವನ್ನು ಮೆರೆದರು. ದೇಶದ ಜನತೆ ಇವರನ್ನು ಬಹುವಾಗಿ ಕೊಂಡಾಡಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದಿರಾಜಿಯ ಜೊತೆ ಇವರ ಹೆಸರು ಖ್ಯಾತಿಯನ್ನು ಪಡೆಯಿತು. ೧೯೭೦ರ ಅಕ್ಟೋಬರ್ ನಲ್ಲಿ ಅಖಿಲ ಭಾರತ ಕಾಂಗ್ರೆಸ್‌ಸಮಿತಿಯ ಅಧಿವೇಶನ ಪಾಟ್ನಾದಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಎರಡು ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು:

೧. ನಿರುದ್ಯೋಗಿಗಳಿಗಾಗಿ ಐದುಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು.

೨. ಭಾರತದಾದ್ಯಂತ ಭೂಹೀನರಿಗೆ ಭೂಮಿಯನ್ನು ಜನವರಿ ೧೯೭೧ರ ಅಂತ್ಯದ ವೇಳೆಗೆ ಹಂಚುವುದು.

ಇದರಿಂದ ಕೇಂದ್ರ ಹಾಗೂ ರಾಜ್ಯಗಳಿಗೆ ಭೂಮಿ ಇಲ್ಲದವರಿಗೆ ದೊಡ್ಡ ಸಂಖ್ಯೆಯಲ್ಲಿ ಭೂಮಿಯನ್ನು ವಿತರಿಸಲಾಯಿತು. ಬಹುಸಂಖ್ಯಾತ ಹಳ್ಳಿಗಳಲ್ಲಿ ಕಾಂಗ್ರೆಸ್‌ವರ್ಚಸ್ಸನ್ನು ಹೆಚ್ಚಿತು. ಇಂದಿರಾಜಿಯ ಹೆಸರು ಎಲ್ಲರ ಬಾಯಲ್ಲಿಯೂ ಗುಣಗಾನವಾಯಿತು. ಆ ವೇಳೆಗೆ ೧೯೭೦ರ ಡಿಸೆಂಬರ್ ನಲ್ಲಿ ಕಾಂಗ್ರೆಸ್‌ಸಮಿತಿ ಬಾಬೂಜಿಯ ಅಧ್ಯಕ್ಷತೆಯಲ್ಲಿ ಸಭೆಸೇರಿತು. ಲೋಕಸಭೆಯನ್ನು ವಿಸರ್ಜಿಸಿ ಮಧ್ಯಾವಧಿಯ ಚುನಾವಣೆ ನಡೆಸಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಯಿತು.

ಅದರಂತೆ ಐದನೇ ಲೋಕಸಭೆಗೆ ೧೯೭೧ ರಲ್ಲಿ ಮಧ್ಯಂತರ ಚುನಾವಣೆಗಳು ನಡೆದವು. ಇಂದಿರಾ ಕಾಂಗ್ರೆಸ್‌ಹಾಗೂ ಸಂಸ್ಥಾ ಕಾಂಗ್ರೆಸ್‌ಎಂದು ಎರಡು ಹೋಳಾದ ಕಾಂಗ್ರೆಸ್‌ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದವು. ಇಂದಿರಾ ಕಾಂಗ್ರೆಸ್‌೩೫೦ ಸ್ಥಾನಗಳಲ್ಲಿ ಜಯಭೇರಿ ಬಾರಿಸುವುದರ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ನಿಜಲಿಂಗಪ್ಪನವರ ಸಂಸ್ಥಾ ಕಾಂಗ್ರೆಸ್‌ಕೇವಲ ೧೬ ಸ್ಥಾನಗಳನ್ನು ಗಳಿಸಿ ಹೀನಾಯ ಸೋಲು ಅನುಭವಿಸಿತು. ಮೇ ೧೩, ೧೯೭೧ರಂದು ಶ್ರೀಮತಿ ಇಂದಿರಾಗಾಂಧಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪುನಃ ಬಾಬೂಜಿಗೆ ರಕ್ಷಣಾ ಖಾತೆಯನ್ನು ನೀಡಿದರು. ನೆರೆಹೊರೆ ದೇಶಗಳೊಂದಿಗೆ ಮಧುರ ಸಂಬಂಧ ಹಾಗೂ ವಿಶ್ವದ ಅನೇಕ ದೇಶಗಳೊಂದಿಗೆ ಮೈತ್ರಿ, ಪರಸ್ಪರ ಸಹಕಾರ ಭಾವನೆ, ಈ ಭಾವನೆಗಳಿಗೊಂದು ಮೂರ್ತರೂಪಕೊಡುವುದು, ಭಾರತದ ಅಖಂಡತೆಯನ್ನು, ಸ್ವಾತಂತ್ರ್ಯವನ್ನು ರಕ್ಷಿಸಿ ಪರಕೀಯರ ಆಕ್ರಮಣದಿಂದ ದೇಶವನ್ನು ಸುರಕ್ಷತೆಯಲ್ಲಿಡುವುದು ರಕ್ಷಣಾ ಮಂತ್ರಿಗಳ ಪ್ರಮುಖ ಕರ್ತವ್ಯ. ಈ ಕೆಲಸವನ್ನು ಜಗಜೀವನರಾಮ್‌ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದು ಅವರ ಸಾಮರ್ಥ್ಯವನ್ನು ಒರೆಹಚ್ಚಿದ ಖಾತೆಯಾಗಿತ್ತು. ದೇಶದ ರಕ್ಷಣೆಗೆ ಬಾಬೂಜಿ ತೀವ್ರ ಕಳಕಳಿ ಹೊಂದಿದ್ದರು. ಸಮಾಜದಲ್ಲಿ ದುರ್ಬಲರ ಏಳಿಗೆಗೆ ಯಾವ ಆದ್ಯತೆ ಇದೆಯೋ ಅದೇ ಆದ್ಯತೆಯನ್ನು ರಾಷ್ಟ್ರದ ಸಂರಕ್ಷಣೆಗೂ ನೀಡಿದರು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಅವರು ರೈಲ್ವೆ ಇಲಾಖೆಯಲ್ಲಿದ್ದಾಗ ಪೂರ್ವ ಗಡಿಭಾಗದ ರಕ್ಷಣೆಗೆ ತಳೆದ ನಿಲುವು. ಅನೇಕ ವರ್ಷಗಳಿಂದ ನಾನಾ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದರು. ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರಭಾಗಗಳು ರೈಲ್ವೆ ಮಾರ್ಗಗಳ ಜೋಡಣೆಯಿಂದ ಬೆಸದು ಕೊಂಡವು. ರಾಷ್ಟ್ರದ ಪೂರ್ವ ಭಾರತದ ಸಂರಕ್ಷಣೆಗೆ ಇದು ಅಗತ್ಯವಾದ ಕಾರ್ಯವಾಗಿತ್ತು. ಇದು ಚೀನ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಹಾಗೂ ಅಧಿಕ ಪ್ರಮಾಣದ ಅನಾಹುತ ತಪ್ಪಿಸುವಲ್ಲಿ ಬಹಳಷ್ಟು ಸಹಕಾರಿಯಾಗಿತ್ತು.

ಬಾಬೂಜಿಗೆ ಇಂದಿರಾರವರು ರಕ್ಷಣಾ ಇಲಾಖೆ ವಹಿಸಿಕೊಡುತ್ತಾ ತಮ್ಮ ಆಪ್ತವಲಯದ ಸಲಹೆಗಾರರನ್ನಾಗಿ ಪರಿಗಣಿಸಿದರು. ದೇಶದ ರಕ್ಷಣೆಗೆ ರೈಲ್ವೆ ಸಚಿವರಾಗಿದ್ದಾಗಲೇ ಪ್ರತ್ಯಕ್ಷ-ಪರೋಕ್ಷ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ ಬಾಬೂಜಿಗೆ ಇನ್ನು ರಕ್ಷಣೆ ಇಲಾಖೆಯಲ್ಲಿ ಅವರು ನಿರ್ವಹಿಸಿದ ಕಾರ್ಯಗಳು ಅಪಾರ ದಾಖಲೆಗೆ ಅರ್ಹವಾದವು, ಚರಿತ್ರೆಯಲ್ಲಿ ದಾಖಲಾಗುವಂತವು. ಭಾರತೀಯ ಸೇನೆ, ನೌಕ ಹಾಗೂ ವಾಯುದಳ ಈ ಮೂರು ಪಡೆಗಳ ರಕ್ಷಣಾ ಸಿಬ್ಬಂದಿ ಮತ್ತು ಪರಿಕರಗಳನ್ನು ಆಧುನಿಕರಣಗೊಳಿಸಿದರು. ಉತ್ತಮ ಮತ್ತು ಅತ್ಯಾಧುನಿಕ ಯುದ್ಧ ಸಲಕರಣೆಗಳನ್ನು ಸೇನಾ ಪಡೆಗೆ ಸೇರಿಸಿದರು. ಈ ಇಲಾಖೆಯಲ್ಲಿದ್ದ ಹಳೆ ಸಂಪ್ರದಾಯಗಳನ್ನು ಕಿತ್ತೆಸೆದರು. ತಲತಲಾಂತರದಿಂದ ಬಂದ ಜಾತಿಪದ್ಧತಿಯ ಬೇರುಗಳನ್ನು ಮುರಿದುಹಾಕಲು ಶ್ರಮಿಸಿದರು. ಜಾತಿಯಿಂದ ಸೈನ್ಯ ಸೇರ್ಪಡೆಗೆ ಕ್ಷತ್ರಿಯರಿಗೆ ವಿಶೇಷ ಸೌಲತ್ತಿನ ವ್ಯವಸ್ಥೆಯನ್ನು ತೊಡೆದು, ದೇಶದ ಎಲ್ಲಾ ಜಾತಿ, ಧರ್ಮ, ವರ್ಗ, ಪಂಗಡ ಮತದವರಿಗೆ ಸೈನ್ಯದ ಬಾಗಿಲು ಮುಕ್ತವಾಗಿ ತೆರೆದರು. ನಾನಾ ಬಗೆಯ ಪರಿಸರದ ಪ್ರದೇಶದ ಜನರು ಸೇವೆಗೆ ಸೇರಿದ ತಕ್ಷಣ ನಮ್ಮ ಪಡೆಗಳು ಹೊಸ ಹುರುಪು, ಚೈತನ್ಯ ಪಡೆದವು. ದೇಶದ ಏಕತೆ, ಅಖಂಡತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಬಾಬೂಜಿಯ ಹೊಸ ಆಲೋಚನೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ಇಂದಿಗೂ ಇದನ್ನೆ ಪಾಲಿಸಲಾಗುತ್ತಿದೆ. ಅವರ ದಕ್ಷತೆ, ಜಾಣ್ಮೆ, ತಂತ್ರಗಾರಿಕೆ ಪ್ರಕಟವಾಗಿದ್ದು, ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಎಂಬುದನ್ನು ಜನರು ಬೇಗನೆ ಅರಿತುಕೊಂಡರು.

೧೯೭೧ರ ಡಿಸೆಂಬರ್ ೩ ಪಾಕಿಸ್ತಾನ ಭಾರತದ ಮೇಲೆ ದಾಳಿಮಾಡಿತು. ಆಗ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಯಿತು. ಈ ಯುದ್ಧ ಬಾಂಗ್ಲಾ ವಿಮೋಚನೆಗಾಗಿ ನಡೆದಿದ್ದು, ಹದಿನಾಲ್ಕು ದಿನಗಳ ದೊಡ್ಡ ಸಮರವೇ ಆಯಿತು. ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಆಕಾಶವಾಣಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ‘ಆಕ್ರಮಣಕ್ಕೆ ಜವಾಬು ಕೊಡಬೇಕಾಗಿದೆ’ ಎಂದು ಸಾರಿದರು. ಅಂತಿಮವಾಗಿ ಪಾಕಿಸ್ತಾನ ಭಾರತಕ್ಕೆ ಮಣಿಯಿತು. ೧೯೭೧ರ ಭಾರತ-ಪಾಕ್‌ಯುದ್ಧದಲ್ಲಿ ಭಾರತ ವಿಜಯಿಯಾಗುವಂತೆ ಮಾಡುವಲ್ಲಿ ಜಗಜೀವನರಾಮ್‌ಹಗಲು ರಾತ್ರಿ ಎನ್ನದೆ ಶ್ರಮಿಸಿದರು. ಈ ಯಶಸ್ವಿಗೆ ಮೂಲ ಕಾರಣರಾದರು. ಇಂದಿರಾಗಾಂಧಿಯವರು ದೃಢಸಂಕಲ್ಪ ಹಾಗೂ ರಾಜತಾಂತ್ರಿಕತ್ವದಿಂದ ರೂಪಿಸಿದ ತಂತ್ರಗಳು ಪರಿಣಾಮಕಾರಿಯಾಗಿದ್ದವು. ಭಾರತದ ಸಹಾಯದಿಂದ ಅಂದು ಪೂರ್ವಪಾಕಿಸ್ತಾನ ಎಂದು ಕರೆಯಲಾಗುತ್ತಿದ್ದ ಬಾಂಗ್ಲಾದೇಶ ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದಿತು. ಜಗಜೀವನರಾಮ್‌ರು ಯುದ್ಧದಲ್ಲಿ ಸಾವಿರಾರು ಭಾರತೀಯ ಸೈನಿಕರು ಆಹುತಿಯಾಗಿರುವುದನ್ನು ಕಣ್ಣಾರೆಕಂಡು ಅವರ ಕುಟುಂಬಗಳು ಭವಿಷ್ಯದಲ್ಲಿ ನೆಮ್ಮದಿಯ ಜೀವನ ನಡೆಸಲು ಅನೇಕ ಸುಧಾರಣೆಗಳನ್ನು ತಂದರು. ಮೃತ ಯೋಧರ ಕುಟುಂಬದವರಿಗೆ ವಿಧವಾ ವೇತನ, ಭಾಗಶಃ ಪೆನ್‌ಷನ್‌, ಸಾಧಾರಣ ಸೇವೆಗೆ ಅವಕಾಶ, ಸೇವಾವಧಿ ಮುಗಿದ ಬಳಿಕ ಪೂರ್ಣ ಪೆನ್‌ಷನ್‌, ಅವಿವಾಹಿತ ಸೈನಿಕರ ತಾಯಿ-ತಂದೆಯವರಿಗೆ ಪೆನ್‌ಷನ್‌ಸೌಲಭ್ಯವನ್ನು ಕಲ್ಪಿಸಿದರು. ಹಾಗೆಯೇ ವಿಕಲಾಂಗ ಯೋಧರಿಗೆ, ಅಧಿಕಾರಿಗಳಿಗೆ ಸರ್ಕಾರಿ ಸೇವೆಯಲ್ಲಿ ತೊಡಗಿಸದಿದ್ದ ಪಕ್ಷದಲ್ಲಿ ಅವರಿಗೆ ವಾರ್ ಇಂಜರಿ ಪೇ ಸೌಲಭ್ಯವನ್ನು ನೀಡಿದರು. ಯುದ್ಧದಲ್ಲಿ ಮಡಿದ ಸೈನಿಕರ ಪತ್ನಿಯರಿಗೆ ಪುಕ್ಕಟೆ ಜಮೀನು, ಹಾಗೂ ಜಮೀನಿನ ಮೇಲೆ ಮನೆಕಟ್ಟಲು ಅಥವಾ ನಿರ್ಮಿಸಿದ ಮನೆ ನವೀಕರಣಕ್ಕೆ ಅವಕಾಶ ಕಲ್ಪಿಸಿದರು. ಇಂತಹ ಹಲವು ಹತ್ತು ಸೌಲಭ್ಯಗಳನ್ನು ಸೃಷ್ಟಿಸಿದರು. ಯುದ್ಧ ಮುಗಿಯಿತೆಂದು ಬಾಬೂಜಿ ಯೋಧರನ್ನಾಗಲಿ, ಯೋಧರ ಕುಟುಂಬಗಳನ್ನಾಗಲಿ ಮರೆಯಲಿಲ್ಲ. ಇದು ಅವರ ದೂರದೃಷ್ಟಿ ಹಾಗೂ ಭವಿಷ್ಯದಲ್ಲಿ ದೇಶವನ್ನು ರಕ್ಷಿಸುವಲ್ಲಿ ಅವರಿಗಿದ್ದ ನಿಷ್ಠೆ, ಭಕ್ತಿಯನ್ನು ತೋರಿಸುತ್ತದೆ. ಹೀಗೆ ಜಗಜೀವನರಾಮ್‌ರು ಉತ್ತಮ ರಕ್ಷಣಾ ಮಂತ್ರಿಯಾಗಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರವನ್ನು ನೀಡಿದ್ದರು. ಅವರು ದೇಶದ ಇತಿಹಾಸವನ್ನಷ್ಟೇ ಬದಲಿಸಲಿಲ್ಲ, ವಿಶ್ವದ ಭೂಗೋಳವನ್ನೇ ಬದಲಾಯಿಸಿದರೆನ್ನಬೇಕು.