ಕಾಂಗ್ರೆಸೇತರ ಜನತಾ ರಾಜಕಾರಣ

ವಿಶ್ವದಲ್ಲೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಸ್ವಾತಂತ್ಯ್ರಾ ನಂತರ ಭಾರತವು ರಾಷ್ಟ್ರೀಯ ಕಾಂಗ್ರೆಸ್‌ಪಕ್ಷದ ರಾಜಕಾರಣವನ್ನೇ ೧೯೭೭ರ ವರೆಗೆ ನಡೆಸಿತ್ತು. ೧೯೮೫ರ ಜೂನ್‌೧೨ ರಂದು ಅಲಹಬಾದ್‌ಹೈಕೋರ್ಟ್ ಇಂದಿರಾಗಾಂಧಿಯವರ ಲೋಕಸಭಾ ಚುನಾವಣೆ ಅಕ್ರಮವೆಂದು ಘೋಷಿಸಿದ್ದರೂ ಪ್ರಧಾನಿ ಇಂದಿರಾಗಾಂಧಿಯವರು ರಾಜಿನಾಮೆ ನೀಡದೆ ೧೯೭೫ರ ಜೂನ್‌೨೫ ರಂದು ತುರ್ತುಪರಿಸ್ಥಿತಿ ಹೇರಿದರು. ಇದೊಂದು ಕರಾಳದಿನವೆಂದು, ಎಲ್ಲೆಲ್ಲೂ ದೌರ್ಜನ್ಯ, ದಬ್ಬಾಳಿಕೆ ತಾಂಡವವಾಡತೊಡಗಿದ ದಿನವೆಂದು ಕರೆಯಲಾಯಿತು. ಬಾಂಗ್ಲಾಯುದ್ಧದ ನಂತರ ಇಂದಿರಾಗಾಂಧಿಯವರು ಸರ್ವಾಧಿಕಾರ ಮನೋಭಾವ ತೋರಿದ್ದರು. ಈ ಅವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟುಬಿದ್ದಿತ್ತು.

ಜಗಜೀವನರಾಮ್‌೧೯೭೭ರಲ್ಲಿ ತುರ್ತುಪರಿಸ್ಥಿತಿ ಕುರಿತಂತೆ ವಿಚಾರ ವಿಮರ್ಶೆ ನಡೆಸಿ ಅದನ್ನು ಮುಕ್ತಾಯಗೊಳಿಸಬೇಕೆಂದು ಪತ್ರವೊಂದನ್ನು ಇಂದಿರಾಜಿಗೆ ಬರೆದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಬಾಬೂಜಿ ೧೯೭೭ರ ಫೆಬ್ರವರಿ ೨ ರಂದು ಕೇಂದ್ರ ಸಚಿವ ಸಂಪುಟದಿಂದ, ಕಾಂಗ್ರೆಸ್‌ಕಾರ್ಯಕಾರಿ ಸದಸ್ಯತ್ವದಿಂದ ಪಕ್ಷದ ಅನೇಕ ಮಹತ್ವಪೂರ್ಣ ಸಮಿತಿಗಳಿಂದ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ರಾಜಿನಾಮೆ ಪತ್ರವನ್ನು ಕಾಂಗ್ರೆಸ್‌ಅಧ್ಯಕ್ಷ ಬರೂವ ಅವರಿಗೆ ಸಲ್ಲಿಸಿದರು. ದೇಶದ ಎಲ್ಲಾ ಪತ್ರಿಕೆಗಳು ಅವರ ಮುವತ್ತು ವರ್ಷಗಳ ಮಂತ್ರಿಸೇವೆ ಮಾಡಿದ್ದ ಹಾಗೂ ಹನ್ನೆರಡು ವರ್ಷಗಳ ಸಮಾಜಸೇವೆಯನ್ನು ಸಮರ್ಪಣಾ ಮನೋಭಾವದಿಂದ ಮಾಡಿದ ಕೆಲಸಗಳನ್ನು ಮುಕ್ತಕಂಠದಿಂದ ಹೊಗಳಿದವು. ಅವರ ಜೀವನ ಕುರಿತಂತೆ ಅನೇಕ ವಿಶೇಷ ಲೇಖನಗಳು ಪ್ರಕಟಗೊಂಡವು. ರಾಮ್‌ತಮ್ಮ ಕಾಂಗ್ರೆಸ್‌ಫಾರ್ ಡೆಮಾಕ್ರಸಿ(ಸಿ.ಎಫ್‌.ಡಿ) ಪಕ್ಷ ಸಂಘಟನೆ ‘ದೇಶದ ಬುದ್ಧಿಜೀವಿಗಳು ದಲಿತವರ್ಗದ ಜನಗಳು ಮುಂದೆ ಬಂದು ರಾಷ್ಟ್ರದ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಸಮಯ ಬಂದಿದೆ, ಎಲ್ಲರೂ ಬನ್ನಿ’ ಎಂದು ಕರೆನೀಡಿದರು. ಆ ದಿನ ಬಾಬೂಜಿ ನಿವಾಸದ ಮುಂದೆ ‘ಜಗಜೀವನ ರಾಮ್‌ಜಿಂದಾಬಾದ್‌’ ‘ದಲಿತರ ಜಗಜೀವನರಾಮ್’, ‘ಸೂರ್ಯಚಂದ್ರ ಇರುವವರೆಗೂ ಬಾಬೂಜಿಯವರ ಹೆಸರು ಇರುತ್ತದೆ’ ಮೊದಲಾದ ಘೋಷಣೆಗಳು ಮುಗಿಲು ಮುಟ್ಟಿವೆ. ಪತ್ರಕರ್ತರು ಬಾಬೂಜಿಯವರನ್ನು ೧೯ ತಿಂಗಳು ಸುಮ್ಮನೇಕೆ ಕುಳಿತಿದ್ದಿರಿ ಎಂದು ಪ್ರಶ್ನಿಸಿದಾಗ “ಎಲ್ಲಾ ಕೆಲಸಗಳೂ ಅವಶ್ಯಕತೆ ಇದ್ದಾಗ ಆಗುತ್ತವೆ. ಅವಶ್ಯಕತೆ ಇಲ್ಲದೆ ಯಾವ ಕೆಲಸ ಮಾಡುವುದು ಫಲಪ್ರದವಾಗುವುದಿಲ್ಲ. ಶಾಸನ ಪರಿವರ್ತನೆಗೆ ಸಕಾಲವೆಂದು ತಿಳಿದಿದ್ದೇನೆ. ಯಾವಾಗಲೂ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದು ನನ್ನ ಸ್ವಭಾವ” ಎಂದು ಪ್ರತಿಕ್ರಿಯಿಸಿದರು.

ಈ ವೇಳೆಗೆ, ಇದರಿಂದ ನೊಂದ, ಕಾಂಗ್ರೆಸ್‌ನಿಂದ ಈಗಾಗಲೇ ವಿಭಜನೆಗೊಂಡ ಜನತಾ ಪರಿವಾರದ ನಾಯಕರು ಇಂದಿರಾ ಧೋರಣೆಯನ್ನು ಕಟುವಾಗಿ ಟೀಕಿಸಿದರು. ಆ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರವರ ಮೇಲಿನ ಹಲ್ಲೆಯನ್ನು ಖಂಡಿಸಿದರು. ಆ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರವರ ಮೇಲಿನ ಹಲ್ಲೆಯನ್ನು ಖಂಡಿಸಿದರು. ಚಂದ್ರಶೇಖರ್, ನೆಹರೂ ಅವರ ಸೋದರಿ ವಿಜಯಲಕ್ಷ್ಮಿ ಪಂಡಿತ್‌ಜೆ.ಪಿ.ಯವರೊಂದಿಗೆ ಮಾತುಕತೆ ನಡೆಸಿ ವಿರೋಧಪಕ್ಷಗಳ ಸಂಘಟನೆ ನಡೆಸಿದರು. ಈ ವೇಳಗೆ ದಲಿತವರ್ಗಗಳ ನಾಯಕ ಜಗಜೀವನರಾಮ್‌ರು ಸಹ ಇಂದಿರಾ ಅವರ ವರ್ತನೆಯಿಂದ ಬೇಸತ್ತು ಹೊರಬಂದರು. ತಮ್ಮದೇ ಆದ ಪಕ್ಷವನ್ನು ಜಗಜೀವನರಾಮ್‌ಕಾಂಗ್ರೆಸ್‌ನ ಕಟ್ಟಿದರು. ೧೯೭೭ರ ಮಾರ್ಚ್ ೧ ರಂದು ಜಯಪ್ರಕಾಶ ನಾರಾಯಣ ಮತ್ತು ಆಚಾರ್ಯ ಕೃಪಾಲಾನಿ ಇವರ ನೇತೃತ್ವದಲ್ಲಿ ಅನೇಕ ಹಿರಿಯ ರಾಜಕೀಯ ಧುರೀಣರು ದೆಹಲಿಯಲ್ಲಿ ಸೇರಿದ್ದರು. ಲಕ್ಷ್ಯಾವಧಿ ಜನರ ಅಪಾರ ಜನಸಂದಣಿ ಅಂದು ಸೇರಿತ್ತು. ಸಂಸ್ಥಾ ಕಾಂಗ್ರೆಸ್‌, ಲೋಕದಳ, ಸಮಾಜವಾದಿಪಕ್ಷ, ಜನಸಂಘ, ಸ್ವತಂತ್ರಪಕ್ಷ, ಜಗಜೀವನರಾಮ್‌ಕಾಂಗ್ರೆಸ್‌ಇವೇ ಮೊದಲಾದ ಪಕ್ಷಗಳು ಈ ರಾಷ್ಟ್ರೀಯ ಸಮಾವೇಶದಲ್ಲಿ ಸೇರಿ ಜನತಾಪಕ್ಷವೆಂಬ ಹೊಸ ಪಕ್ಷವನ್ನು ಕಟ್ಟಿದವು. ತುರ್ತುಪರಿಸ್ಥಿತಿಯಲ್ಲಿ ಹುಟ್ಟಿದ ಜನತಾಪಕ್ಷ ಹಲವು ಪಕ್ಷಗಳ ಕೂಟವೆಂತಲೂ ಕಿಚಿಡಿಪಕ್ಷವೆಂತಲೂ ಜನರು ಹಾಸ್ಯಮಾಡಿದ್ದರು. ಈ ಸಂಘಟನೆಯ ಅಧ್ಯಕ್ಷರನ್ನಾಗಿ ಯಂಗ್‌ಟರ್ಕ್ ನಾಯಕ ಚಂದ್ರಶೇಖರರನ್ನು ಆಯ್ಕೆಮಾಡಲಾಯಿತು. ಅಲ್ಲಿ ಅತಿರಥ ಮಹಾರಥರ, ಪ್ರತಿಷ್ಠಿತರ ದಂಡೇ ಇತ್ತು. ಎ.ಬಿ. ವಾಜಪೇಯಿ, ಮುರಾರ್ಜಿದೇಸಾಯಿ, ರಾಜನಾರಾಯಣ, ಜಗಜೀವನರಾಮ್‌ಮೊದಲಾದವರು ಇದ್ದರು. ತುರ್ತುಪರಿಸ್ಥಿತಿಯಲ್ಲಾದ ದೌರ್ಜನ್ಯ, ಸಂವಿಧಾನದ ಸಂರಕ್ಷಕನಾದ ಸರ್ಕಾರ ತನ್ನ ಕಾಲ ಕೆಳಗೆ ಸಂವಿಧಾನವನ್ನು ತುಳಿದು ಹಾಕಿದ್ದು, ಅದನ್ನು ದುರಪಯೋಗ ಪಡಿಸಿಕೊಂಡಿದ್ದು ಭಾರತದ ರಾಜಕೀಯದಲ್ಲಿ ಭಾರತಿ ಬದಲಾವಣೆಗಳನ್ನು ತಂದಿತು. ಈ ಮೂಲಕ ಜಯಪ್ರಕಾಶ ನಾರಾಯಣರ ಸ್ಫೂರ್ತಿಯಿಂದ ಜನತಾಪಕ್ಷದ ಸ್ಥಾಪನೆಯಾಗಿ ೧೯೭೭ ರಲ್ಲಿ ಚುನಾವಣೆಗಳು ನಡೆದು ಆಡಳಿತ ಇಂದಿರಾ ಕಾಂಗ್ರೆಸ್‌ಸೋತು ಬಹುಮತವನ್ನು ಕಳೆದುಕೊಂಡಿತು. ಮೂವತ್ತು ವರ್ಷಗಳಲ್ಲಿ ಕಾಂಗ್ರೆಸ್‌ಪರಾಜಯ ಹೊಂದಿದ್ದು, ಅದೇ ಪ್ರಥಮ. ಉತ್ತರ ಭಾರತದಲ್ಲಿ ಇಂದಿರಾಪಕ್ಷದ ಧೂಳಿಪಟಕ್ಕೆ ಕಾರಣ ದಲಿತನಾಯಕ ಬಾಬೂ ಜಗಜೀವನರಾಮ್‌. ಜನತಾಪಕ್ಷ ಬಹುಮತವನ್ನು ಪಡೆದು ಸರಕಾರದ ರಚನೆಗೆ ಕಸರತ್ತುಗಳು ನಡೆದವು.

ಭಾರತದ ಪ್ರಧಾನಿಯಾಗಲು ಮುರಾರ್ಜಿ, ಚರಣ್‌ಮತ್ತು ಜಗಜೀವನರಾಮ್‌ಈ ಮೂವರಲ್ಲಿ ಅಧಿಕ ಸಂಖ್ಯೆಯ ಸಂಸದೀಯ ಬೆಂಬಲ ಬಾಬೂಜಿಯವರಿಗೆ ಇತ್ತು. ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಅಡಿಯಲ್ಲಿ ಸಂಸದೀಯ ಪಕ್ಷದ ನಾಯಕನ ಆಯ್ಕೆಗೆ ಚುನಾವಣೆ ನಡೆದಿದ್ದರೆ ಅವತ್ತಿನ ಎಲ್ಲಾ ಪ್ರಚಾರ ಮಾಧ್ಯಮಗಳ ವಿಶ್ಲೇಷಣೆಯಂತೆ ಬಾಬೂಜಿಯವರೇ ಗೆಲ್ಲಬೇಕಾಗಿತ್ತು. ಆದರೆ ಅಂತಿಮ ಗಳಿಗೆಯಲ್ಲಿ ರಾಜಕೀಯದ ಹಾವು ಏಣಿ ಆಟದಲ್ಲಿ ಪ್ರಧಾನಿ ಪಟ್ಟವನ್ನು ಮುರಾರ್ಜಿಗೆ ಕಟ್ಟಲಾಯಿತು. ಇದರ ಹಿಂದೆ ಜೆ.ಪಿ ಮತ್ತು ಕೃಪಾಲಾನಿಯವರ ಬುದ್ಧಿ-ಮನಸ್ಸುಗಳ ಕೆಲಸ ಮಾಡಿದ್ದವು ಎಂಬ ಸಂಗತಿಯು ದುಃಖ ತರುವಂತಹದ್ದು. ಬಾಬೂಜಿಯವರ ಆಂತರಿಕ ಸ್ವಭಾವ ಗುಣಲಕ್ಷಣಗಳಿಂದ ಅಳೆದರೂ ವಾಸ್ತವದಲ್ಲಿ ಬಾಬೂಜಿಯವರೇ ಪ್ರಧಾನಿಯಾಗಬೇಕಿತ್ತು. ಜನತಾಪಕ್ಷ, ಪಕ್ಷದ ವೈವಿಧ್ಯಮಯ ವ್ಯಕ್ತಿಗಳನ್ನು ಕಿತ್ತಾಡಬಲ್ಲ ವಿಚಿತ್ರಶಕ್ತಿಗಳನ್ನು ತಮ್ಮ ಹಾಸ್ಯ, ಬುದ್ಧಿ, ದಕ್ಷತೆಯಿಂದ ಹದ್ದುಬಸ್ತಿನಲ್ಲಿಡಬಲ್ಲ ಯೋಗ್ಯತೆ ಪಡೆದಿದ್ದ ಮನುಷ್ಯ ಬಾಬೂಜಿ. ಈ ನಾಡಿನ ಹೊಲಸು ಸಾಮಾಜಿಕ ವ್ಯವಸ್ಥೆಯ ಕಾಲಡಿ ತಳ್ಳಲ್ಪಟ್ಟಿದ್ದು ಮಾತ್ರ ದುರಂತ. ಕೊನೆಗೆ ಮುರಾರ್ಜಿಯವರ ನಾಯಕತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಜನತಾಪಕ್ಷದ ಮಂತ್ರಿಮಂಡಲದಲ್ಲಿ ಸೇರುವ ಕಿಂಚಿತ್ತು ಅಪೇಕ್ಷೆಯನ್ನೂ ಬಾಬೂಜಿ ತೋರಲಿಲ್ಲ. ಆದರೆ ಜೆ.ಪಿ. ಮತ್ತು ಕೃಪಾಲಾನಿಯವರ ಒತ್ತಡಕ್ಕೆ ಮಣಿದು ೧೯೭೯ರ ಜನವರಿ ತಿಂಗಳಲ್ಲಿ ಉಪಪ್ರಧಾನಿಗಳಾದರು. ಮತ್ತೊಮ್ಮೆ ಅವರಿಗೆ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಯಿತು. ಇದು ಮತ್ತೊಮ್ಮೆ ಅವರ ಅನುಭವದ ಮಾರ್ಗದರ್ಶನದಲ್ಲಿ ರಕ್ಷಣಾ ಇಲಾಖೆ ನವೀನ ಆಯಾಮ ಪಡೆಯಲು ಸಾಧ್ಯವಾಯಿತು.

ಈ ಸಮಯದಲ್ಲಿ ಬಾಬೂಜಿಯವರ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಪ್ರಸಂಗವೊಂದು ಜರುಗಿತು. ಪುರೋಹಿತಶಾಹಿಯ ಆರಾಧಕರ ಹುಚ್ಚು ಕುಣಿತಕ್ಕೆ ದಲಿತರ ಸ್ವಾಭಿಮಾನ ಅಪಮಾನಕ್ಕೆ ಈಡಾಯಿತು. ಇದು ಕೇವಲ ದಲಿತರ ಸ್ವಾಭಿಮಾನವಷ್ಟೆ ಅಲ್ಲ ಇಡೀ ದೇಶದ ಗೌರವ-ಘನತೆ ಹರಾಜಾದ ಪ್ರಸಂಗ. ಒಮ್ಮೆ ಬನಾರಸ್‌ಹಿಂದೂ ವಿಶ್ವವಿದ್ಯಾಲಯದಲ್ಲಿ, ವಿಶ್ವವಿದ್ಯಾಲಯದ ಪ್ರವರ್ತಕರಲ್ಲಿ ಒಬ್ಬರಾದ ಶ್ರೀ ಸಂಪೂರ್ಣಾನಂದ ಅವರ ಪುತ್ಥಳಿಯನ್ನು ಅನಾವರಣಗೊಳಿಸಲು ಉಪಪ್ರಧಾನಿ ಬಾಬೂಜಿಯವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಕಾರಣವೂ ಇತ್ತು. ಅದೆಂದರೆ ಬಾಬುಜಿ ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯು ಹಾಗೂ ಪ್ರಸ್ತುತ ಕಾಲದ ಪ್ರಮುಖ ಮುಖಂಡರು ಆಗಿದ್ದರು. ಪೂರ್ವನಿಶ್ಚಿತ ಕಾರ್ಯಕ್ರಮದಂತೆ ಬಾಬೂಜಿಯವರು ಸಂಪೂರ್ಣಾನಂದರ ಪುತ್ಥಳಿಯನ್ನು ಅಂದು ಅನಾವರಣಗೊಳಿಸಿದರು. ಆದರೆ ಇದನ್ನೆ ರಣಹದ್ದುಗಳಂತೆ ಕಾಯುತ್ತಿದ್ದ ಪುರೋಹಿತಶಾಹಿ ವಕ್ತಾರರು ಗಂಗಾನದಿಯಿಂದ ನೀರು ತಂದು ಆ ಪುತ್ಥಳಿಯನ್ನು ಶುದ್ಧೀಕರಿಸಿ ಪುನಃ ಅನಾವರಣ ಮಾಡಿಬಿಟ್ಟರು. ಇದಕ್ಕಿಂತ ಅಸ್ಪೃಶ್ಯತೆ ಆಚರಣೆಯ ಜೀವಂತ ಉದಾಹರಣೆ ಬೇಕೇ? ಇಂತಹ ಆವೈಚಾರಿಕ, ಅತಾರ್ಕಿಕ, ಹಾಗೂ ಅವೈಜ್ಞಾನಿಕ ಘಟನೆಗಳು ವಿಶ್ವದ ಯಾವ ಮೂಲೆಯಲ್ಲಿಯೂ ನಡೆದಿರಲಾರದು. ವೈದಿಕನೊಬ್ಬನ ಮಣ್ಣಿನಮೂರ್ತಿಯನ್ನು ಅಸ್ಪೃಶ್ಯನೊಬ್ಬ ಸ್ಪರ್ಶಿಸುವುದು ಅನರ್ಹವೆಂದಾದರೇ ಅದನ್ನು ಪೋಷಿಸುವ ಶಾಸ್ತ್ರಗಳು ಪಂಡಿತರು ಏಕೆ ಬೇಕು? ಈ ಜಾತಿಯತೆಯ ಹುಳವನ್ನು ಜನರ ತಲೆಯಿಂದ ತೆಗೆದು ಹಾಕದಿದ್ದರೆ ಈ ದೇಶಕ್ಕೆ ಭವಿಷ್ಯವೇ ಇಲ್ಲವೆಂದು ಬಾಬೂಜಿ ನಂಬಿದ್ದರು.

ಕಾಲಕ್ರಮೇಣ ಜನತಾಪಕ್ಷದಲ್ಲಿ ಜನಸಂಘಗಳ ಒಳಜಗಳ ತಾರಕಕ್ಕೇರಿತು. ಇಲ್ಲಿ ಜನಸಂಘಗಳ ದ್ವಿಸದಸ್ಯ ಉಲ್ಬಣಿಸಿತು. ಹೀಗಾಗಿ ರಾಜಕೀಯ ರಂಗ ಮಲೀನವಾಯಿತು. ಜನತಾಪಕ್ಷದಲ್ಲಿ ವಿಲೀನಗೊಂಡ ಘಟಕ ಪಕ್ಷಗಳು ತಮ್ಮ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳಿಗೆ ಅಂಟಿಕೊಂಡಿದ್ದವು. ಸರ್ಕಾರದಲ್ಲಿ ಮಿಳಿತವಾಗಿದ್ದು ಮೇಲ್ನೋಟಕ್ಕೆ ಮಾತ್ರ ಎಂಬುದು ಸಾಬೀತು ಆಗಿತ್ತು. ಜನತಾಪಕ್ಷ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ವಾತಾವರಣ ನಿರ್ಮಿಸಲು ಹೊಸ ಹೊಸ ತಂತ್ರಗಳನ್ನು ಚರಣ್‌ಸಿಂಗ್‌ಮತ್ತು ರಾಜನಾರಾಯಣರ ಚಟುವಟಿಕೆಗಳ ಮೂಲಕ ಹೊಸೆಯಲಾಗಿತ್ತು. ಅದಾಗಲೇ ಪಕ್ಷ ಮತ್ತು ಸರ್ಕಾರ ಎರಡೂ ಮುರಾರ್ಜಿಯವರ ನಿಯಂತ್ರಣದಿಂದ ಕೈಜಾರಿ ಹೋಗಿದ್ದವು. ಕಡೆಗೆ ಪ್ರಧಾನಮಂತ್ರಿ ಪದವಿಗೆ ಮುರಾರ್ಜಿದೇಸಾಯಿ ರಾಜಿನಾಮೆ ಸಲ್ಲಿಸಿದರು. ಆಗ ಜಗಜೀವನರಾಮ್‌ತಾವು ಜನತಾಪಕ್ಷದ ಬಹುಸಂಖ್ಯಾತ ಸಂಸದೀಯರ ಬೆಂಬಲ ಹೊಂದಿದ್ದು, ಅದನ್ನು ಸಾಬೀತು ಪಡಿಸುವುದಾಗಿ ತಮಗೆ ಮಂತ್ರಿಮಂಡಲ ರಚಿಸಲು ಅವಕಾಶ ನೀಡಬೇಕೆಂದು ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿಯವರಲ್ಲಿ ಮನವಿ ಮಾಡಿಕೊಂಡರು. ಆದರೆ ಸಂಜೀವರೆಡ್ಡಿಯವರು ತಮ್ಮ ಹಳೆಯ ರಾಜಕೀಯ ವೈಷಮ್ಯವನ್ನು (ರಾಷ್ಟ್ರಪತಿ ಚುನಾವಣೆ ವೇಳೆ ತಮ್ಮನ್ನು ಬೆಂಬಲಿಸದ ಕಾರಣ) ಬಾಬೂಜಿಯವರ ಮೇಲೆ ಈ ಸಂದರ್ಭದಲ್ಲಿ ತೀರಿಸಿಕೊಂಡರು. ಬಾಬೂಜಿಯವರ ಕೋರಿಕೆಗೆ ರಾಷ್ಟ್ರಪತಿಗಳಿಂದ ನಕಾರಾತ್ಮಕ ಉತ್ತರ ದೊರಕಿತು. ಅದಷ್ಟೇ ಅಲ್ಲದೆ ರಾಷ್ಟ್ರಪತಿಗಳು ಬಹುಸಂಖ್ಯಾತ ಸಂಸದರ ಬೆಂಬಲವಿಲ್ಲದ ಚರಣ್‌ಸಿಂಗ್‌ಅವರಿಗತೆ ಸರ್ಕಾರ ರಚಿಸಲು ಆಹ್ವಾನಿಸಿದರು. ಈ ನಿರ್ಣಾಯ ದೇಶಾದ್ಯಂತ ಮಾಧ್ಯಮಗಳಿಂದ ಟೀಕೆಗಳು ಪ್ರಕಟವಾದವು. ಇದೊಂದು ಸಂವಿಧಾನ ವಿರೋಧಿ ಮತ್ತು ಜನತಂತ್ರವಿರೋಧಿ ಎಂದು ಬಣ್ಣಿಸಲಾಯಿತು. ಇದೊಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿತ್ತು. ಸಂವಿಧಾನ ಸಂರಕ್ಷರಿಂದಲೇ ಸಂವಿಧಾನದ ಸಂಹಾರವಾಗಿತ್ತು. ಚರಣ್‌ಸಿಂಗ್‌ರು ಸಂಸತ್ತನ್ನೆ ಎದುರಿಸದ ಪ್ರಧಾನಮಂತ್ರಿ ಎಂಬ ಅಪವಾದಕ್ಕೆ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳುವ ದುರಂತ ತಲುಪಿದರು. ಕೊನೆಗೆ ರಾಜಕೀಯ ಅಸ್ಥಿರತೆ ಉಂಟಾಗಿ ಲೋಕಸಭೆ ವಿಸರ್ಜನೆ ಮತ್ತು ಸಾರ್ವತ್ರಿಕ ಚುನಾವಣೆ ಘೋಷಣೆಯೊಂದಿಗೆ ಸಮಾಪ್ತಿಯಾಯಿತು. ಈ ಮಧ್ಯೆ ಜನತಾಪಕ್ಷ ಹೋಳಾಯಿತು. ಜನಸಂಘ ಹೊರಬಂದು ಭಾರತೀಯ ಜನತಾಪಕ್ಷವಾಗಿ, ಚರಣ್‌ಸಿಂಗ್‌ಮತ್ತು ಅವರ ಹಿಂಬಾಲಕರು ಲೋಕದಳ ಪಕ್ಷವಾಗಿ ಸ್ಥಾಪಿಸಿಕೊಂಡರು. ಉಳಿದ ಘಟಕಗಳು ಚಂದ್ರಶೇಖರ್ ನಾಯಕತ್ವದಲ್ಲಿ ಜನತಾಪಕ್ಷದಲ್ಲಿ ಮುಂದುವರೆದವು. ಹಿಂದೆ ಎರಡು ಬಾರಿಯೂ ಪ್ರಧಾನಮಂತ್ರಿ ಪದವಿಯಿಂದ ಕುಟೀಲ ರಾಜಕಾರಣದ ಪ್ರತಿಫಲನಕ್ಕೆ ವಂಚಿತರಾದ ಜಗಜೀವನರಾಮ್‌ರವರನ್ನೆ ಮುಖಂಡರೆಂದು ಘೋಷಿಸಿಕೊಂಡು ಚಂದ್ರಶೇಖರ್ ರ ಜನತಾಪಕ್ಷ ಚುನಾವಣೆಗೆ ಧುಮುಕಿತು. ಆದರೆ ಜನ ಇದನ್ನು ನಂಬಲಿಲ್ಲ. ಇವರ ಅವಕಾಶವಾದಿತನವನ್ನು ಜನ ಬೆಂಬಲಿಸಲಿಲ್ಲ.

ಈ ನಡುವೆ ಬಾಬೂಜಿಯ ಅಂತಿಮ ಸಂವತ್ಸರಗಳ ರಾಜಕೀಯ ಬದುಕು ಸಂಕಷ್ಟದಿಂದ ಕೂಡಿದ್ದು, ಮುಳ್ಳಿನ ಹಾಸಿಗೆ ಆಗಿತ್ತು. ಅವರ ಜೀವನದಲ್ಲಿ ಸಂಭವಿಸಿದ ಘಟನಾವಳಿಗಳ ವಿಕೃತ ನೆಗೆತ, ಅಡರಿದ ದೈಹಿಕ ಮಾನಸಿಕ ಮುಪ್ಪು, ಮಗನ ವರ್ತನೆಗಳು ಅವರನ್ನು ಚಿಂತನೆಗೀಡುಮಾಡಿದ್ದವು. ತಾವೊಬ್ಬ ಮಹಾಮೇಧಾವಿ, ಅನುಭವಿ, ಬುದ್ಧಿವಂತ, ದಕ್ಷ, ಅರ್ಹ ದೇಶಭಕ್ತರಾಗಿದ್ದರೂ ಈ ದೇಶದ ಉನ್ನತ ಪದವಿಗೇರದ ಅರ್ಥಪೂರ್ಣ ನತದೃಷ್ಟ ನೋವು, ಸಂಕಟಗಳು ದೈಹಿಕವಾಗಿ ಕಡಿಯತೊಡಗಿದವು. ಆಜಾನುಬಾಹು ದೇಹದ ಎದೆಯ ಮೇಲೆ ಈ ಮೂಟೆಗಳ ಭಾರ ಅಧಿಕವಾಯಿತು. ಸ್ವತಂತ್ರ ಭಾರತದ ದಲಿತ ಸೂರ್ಯ, ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಶೋಷಿತರಧ್ವನಿಯಾದ ಜೀವ ಈ ವ್ಯವಸ್ಥೆಯ ಕರಾಳ ತಂತ್ರಗಾರಿಕೆಯ ಕುಣಿಕೆಗೆ ಸಿಲುಕಿ ೧೯೮೬ರ ಜುಲೈ ೬ ರಂದು ಅಸ್ತಂಗತವಾಯಿತು. ಜಗಜೀವನರಾಮ್‌ಸಾವು ದಲಿತರಿಗೆ ಅಪ್ಪಳಿಸಿದ ದೊಡ್ಡ ಬರಸಿಡಿಲು. ತಬ್ಬಲಿಗಳಾದ ದಲಿತರನ್ನು ತಮ್ಮ ಪ್ರೀತಿ ವಾತ್ಸಲ್ಯದ ಹೃದಯದಲ್ಲಿ ಬಚ್ಚಿಟ್ಟುಕೊಂಡು ಅತ್ಯಂತ ಶ್ರದ್ಧಪೂರ್ವಕವಾಗಿ ಪೋಷಿಸಿದ ಮಹಾಚೇತನ ದಲಿತರಿಂದ ದೂರವಾದದ್ದು ಹೇಳಲಾಗದ ಮತ್ತು ವರ್ಣಿಸಲಾರದ ದುಃಖದ ಹಾಗೂ ನೋವಿನ ಸಂಗತಿ.

ಬಾಬೂಜಿಯ ವೈಚಾರಿಕ ಚಿಂತನೆಗಳು

ಜಗಜೀವನರಾಮ್‌ರ ಚಿಂತನೆಗಳು ಸಾಮಾಜಿಕ, ಆರ್ಥಿಕ, ರಾಜಕೀಯ ವಿಚಾರಧಾರೆಗಳು ಹಾಗೂ ಕೋಮುವಾದ ಶೈಕ್ಷಣಿಕ ವಿಚಾರಗಳಲ್ಲಿ ಅತ್ಯಂತ ಪ್ರೌಢಿಮೆಯನ್ನು ಹೊಂದಿವೆ. ಸಮಾಜದ ಜಾತಿವ್ಯವಸ್ಥೆಯನ್ನು ಬಲವಾಗಿ ಖಂಡಿಸಿದವರು. ಬಾಬೂಜಿ ಜಾತಿಪದ್ಧತಿ ರೋಗದ ಅಪಾಯಗಳನ್ನು ಕಂಡುಕೊಂಡ ಜಗಜೀವನರಾಮ್‌, ಅದರ ಮೂಲ ಮತ್ತು ಪರಿಹಾರೋಪಾಯಗಳನ್ನು ಶೋಧಿಸಿದರು. ಕಾಲಗತಿಗೆ ಸಿಲುಕಿದ ವರ್ಣಾಶ್ರಮ ಜಾತಿ ಉಪಜಾತಿಗಳಾಗಿ ಮಾರ್ಪಡಾಯಿತು. ಅನುಲೋಮ ಪ್ರತಿಲೋಮ ವಿವಾಹಗಳು ಸರ್ವೇಸಾಮಾನ್ಯವಾಗುತ್ತಾ (ವರ್ಣಸಂಕರದಿಂದ) ಯಾವ ಜಾತಿಯ ರಕ್ತವೂ ಶುದ್ಧವಾಗಿಲ್ಲ ಎಂಬುದನ್ನು ಜಗಜೀವನರಾಮ್‌ಹೇಳಿದರು. ಅದಕ್ಕೆ ಮಹಾಭಾರತದ ಅಂತರಜಾತಿ ವಿವಾಹಗಳ ದೊಡ್ಡ ಪಟ್ಟಿಯನ್ನು ನೀಡಿರುವರು. ಹೀಗೆ ಜಾತಿಗಳ ಹೋಮವನ್ನು ಸ್ಪಷ್ಟವಾಗಿ ವಿವರಿಸಿರುವ ಆರ್ಯರ ಸಾಂಸ್ಕೃತಿಕ ಸಂಚುಗಳನ್ನು ಬಯಲಿಗೆಳೆದರು. ಹಿಂದೂ ಸಮಾಜವನ್ನು ಇಷ್ಟೊಂದು ಆಳವಾದ ಚಾರಿತ್ರಿಕ ಮತ್ತು ವೈಜ್ಞಾನಿಕ ಪಾತಳಿಯ ಮೇಲೆ ಅರಗಿಸಿಕೊಂಡಿದ್ದ ಜಗಜೀವನ್‌ರಾಮ್‌ರು ಹಿಂದೂಧರ್ಮದ ಆವರಣದಾಚೆ ತಮ್ಮ ಯಾವ ಕ್ಷೇತ್ರದ ಬದುಕನ್ನು ನಿರ್ವಹಿಸಲೂ ಯೋಚಿಸುತ್ತಿರಲಿಲ್ಲ. ಈ ಕಾರಣವೇ ಅವರು ಮತಾಂತರವನ್ನು ತಾತ್ವಿಕವಾಗಿ ವಿರೋಧಿಸುತ್ತಿದ್ದರು. ಅಲ್ಲದೆ ದಲಿತರ ಸಾಮಾಜಿಕ ಸ್ತರವಿನ್ಯಾಸ ಮತಾಂತರದಿಂದ ಬದಲಾಗದೆಂದು ಭಾವಿಸಿದರು. ಸಮಾನತೆಗೆ ದಲಿತರು ಆಳದ ಅರಿವು ಪಡೆಯುತ್ತ ಸಂಘಟಿತ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದರು. ತಲತಲಾಂತರದಿಂದ ತುಳಿಸಿಕೊಂಡಿರುವ ದಲಿತರ ಸ್ಫೋಟವನ್ನು ಯಾರೂ ತಪ್ಪಿಸರು. ಒಂದಲ್ಲ ಒಂದುದಿನ ದಲಿತರು ಸಾಮಾಜಿಕ ಸಮಾನತೆಯನ್ನು ಹೊಂದೇ ಹೊಂದುತ್ತಾರೆಂಬ ದೃಢ ಮನಸ್ಸು ಜಗಜೀವನ್‌ರದಾಗಿತ್ತು. ಜಾತಿಪದ್ಧತಿ ನಿರ್ಮೂಲನೆ, ಅಂತರಜಾತಿ ವಿವಾಹಗಳನ್ನು ಕಡ್ಡಾಯಗೊಳಿಸುವುದು ಹಾಗೂ ವಿವಾಹಿತರಿಗೆ ಆದ್ಯತೆಯಲ್ಲಿ ನೌಕರಿ ಕಲ್ಪಿಸುವುದು, ಸಾಮಾಜಿಕ ಸಮಾನತೆಗೆ ಇರುವ ಮಾರ್ಗಸೂಚಿಗಳೆಂದು ಬಾಬೂಜಿಯ ಅಭಿಪ್ರಾಯವಾಗಿತ್ತು. ಸಾಮರಸ್ಯ, ಸಮಾನತೆ, ಸೋದರತೆ ಮತ್ತು ಸ್ವಾತಂತ್ರ್ಯದ ಬೆಳೆಗಳು ಇಂತಹ ಸಮಾಜದ ಮಡಿಲಲ್ಲಿ ಸಂರಕ್ಷಿಸಲ್ಪಡುವುದು.

ಬಾಬೂಜಿ ಬಂಡವಾಳಶಾಹಿ ಮತ್ತು ಜಮೀನ್ದಾರಿ ಪದ್ಧತಿಗಳ ಕಡುವಿರೋಧಿಗಳಾಗಿದ್ದರು. ಅವರೊಬ್ಬ ಮೌನ ಮಾರ್ಕ್ಸ್‌ವಾದಿಗಳಾಗಿದ್ದರು. ಅವರ ಚಿಂತನೆಯಲ್ಲಿ ಗಾಂಧಿ ಮತ್ತು ಮಾರ್ಕ್ಸ್‌ರ ಸಿದ್ಧಾಂತಗಳ ಸಂಮಿಳಿತವಿತ್ತು. ಭೂಸುಧಾರಣೆಯಂತಹ ಕಾರ್ಯಕ್ರಮಗಳನ್ನು ಬಾಬೂಜಿ ಹಮ್ಮಿಕೊಂಡರು. ಉಳುವವನೆ ಭೂಮಿಯ ಒಡೆಯ, ಭೂಮಿಯನ್ನು ಪುನರ್ ವಿಂಗಡಿಸಬೇಕು ಎಂಬುದು ಅವರ ಅಭಿಮತವಾಗಿತ್ತು. ಗ್ರಾಮೀಣ ಆರ್ಥಿಕವ್ಯವಸ್ಥೆಯನ್ನು ಪುನರ್ ಸಂಘಟಿಸುವುದು, ಹಾಳುಬಿದ್ದ ಮತ್ತು ಬಂಜರು ಭೂಮಿಯ ಹಂಚಿಕೆಯ ಕಾರ್ಯಗಳು ನಿರ್ಧರಿತ ಪರಿಣಾಮ ಬೀರಲೆಂದು ಚಿಂತಿಸಿದರು. ಒಬ್ಬರಿಗೆ ಒಂದೇ ಮಾರ್ಗ ಮತ್ತು ಒಂದು ಕುಟುಂಬ ಒಂದು ಸಂಪನ್ಮೂಲ ಎನ್ನುವ ಆರ್ಥಿಕ ಸೂತ್ರಗಳನ್ನು ಜಗಜೀವನರಾಮ್‌ಹೊಸೆದರು. ಭೂ ಸುಧಾರಣೆಯ ಪರಿಣಾಮಕಾರಿ ಅನುಷ್ಟಾನಕ್ಕೆ ಈ ತತ್ವಗಳು ಸ್ವಾಗತರ್ಹ. ಆದಾಯ-ಸಂಪತ್ತಿನ ಕೇಂದ್ರೀಕರಣ ಮಾನಸಿಕ ಜಮೀನ್ದಾರಿ ಪದ್ಧತಿಗೆ ಇರುವ ಪ್ರೇರಕ ಶಕ್ತಿ, ಒಬ್ಬ ಅಥವಾ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಆರ್ಥಿಕ ಮೂಲಗಳು ಕೇಂದ್ರೀಕೃತವಾಗಿರುವುದು. ಸರ್ಕಾರಿ ಅಥವಾ ಖಾಸಗಿ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬ ಭೂಮಾಲೀಕನಾಗುವುದು ದೇಶದ ಅಭಿವೃದ್ಧೀಗೆ ತಗಲುವ ಅರ್ಬುದ ರೋಗವೆಂದು ಭಾವಿಸಿದರು.ಉತ್ಪಾದನೆ ಮತ್ತು ಹಂಚಿಕೆಯ ಪರಿಕರಗಳು ಸಮಾನವಾಗಿ ಎಲ್ಲರಿಗೂ ವಿತರಿಸಲ್ಪಡಬೇಕೆಂಬುದು. ಈಗಾಗಲೇ ಒಂದು ಆದಾಯ ಮೂಲಕ್ಕೆ ಒಡೆತನವಿರುವ ಯಾವುದೇ ಕುಟುಂಬ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಹಾಗೂ ಸರ್ಕಾರದ ಉದ್ಯೋಗಕ್ಕೆ ಅನರ್ಹವಾಗುವುದು ಉತ್ತಮವೆಂಬುದು ಬಾಬೂಜಿಯವರ ಸಲಹೆ. ಹೀಗಾಗಿ ಆದಾಯ, ಸಂಸತ್ತಿನ ಕೇಂದ್ರೀಕರಣವನ್ನು ವಿರೋಧಿಸಿದರು. ಸರ್ಕಾರಿ ಅಥವಾ ಖಾಸಗಿ ಉದ್ದಿಮೆಗಳ ಉತ್ಪಾದನೆ ಮತ್ತು ಹಂಚಿಕೆಯ ಪರಿಕರಗಳು ಎಲ್ಲರಿಗೂ ಸಮವಾಗಿ ವಿತರಿಸಲ್ಪಡಬೇಕು ಎಂಬುದು ಅವರ ಸಲಹೆಯಾಗಿತ್ತು. ಉತ್ಪಾದನೆ ಮತ್ತು ವಿತರಣೆ ಕುರಿತು ಅವುಗಳ ಹಿಡಿತವನ್ನು ಸಮಾಜದ ವಶಕ್ಕೆ ತರಬೇಕೆಂದು ಹೇಳಿರುವ ಮಾತು ಹೀಗಿದೆ: ‘ಉತ್ಪಾದನೆಯ ವಿಧಾನವು ವಿತರಣೆಯ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಅದರಿಂದ ಹೊಸ ಹೊಸ ಉತ್ಪಾದನಾ ವಿಧಾನವನ್ನು ಅಳವಡಿಸಬೇಕು’.

ಬಾಬೂಜಿಗೆ ಭಾರತದ ಸಂಸದೀಯ ಪ್ರಜಾಪ್ರಭುತ್ವ ಹೊಸದೇನಲ್ಲ ಅದು ಪ್ರಾಚೀನ ಕಾಲದಿಂದಲೂ ಪರಂಪರೆಯ ಭಾಗವಾಗಿ ಬಂದಿದೆ. ಆದರೆ ಭಾರತ ರಾಜಕೀಯ ವ್ಯವಸ್ಥೆಯ ವಿಕಾಸವು ವೈದಿಕಸಂಸ್ಕೃತಿಯ ಯಜಮಾನಿಕೆಯಿಂದ ಸೊರಗಿದೆ ಎಂದು ಭಾವಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಮಾನವ ಸರ್ವಾಂಗೀಣ ಬೆಳವಣಿಗೆಗೆ ಪೂರಕ. ಆದರೆ ಇದರ ಯಶಸ್ವಿಗೆ ಒಂದು ದೇಶದ ಸಮಸ್ತ ಜನವರ್ಗಗಳು ಭಾಗವಹಿಸಿದಲ್ಲಿ ಮಾತ್ರ ಆ ರಾಜಕೀಯ ವ್ಯವಸ್ಥೆ ಜನತಂತ್ರವ್ಯವಸ್ಥೆ ಎನ್ನಬಹುದು. ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಳುವ ಮತ್ತು ಅಧೀನ ಎಂಬ ಎರಡು ವರ್ಗಗಳ ಪ್ರತ್ಯೇಕತೆಯು ಜನತಂತ್ರಕ್ಕೆ ಮಾರಕವೆಂದು ಭಾವಿಸಿದ್ದರು. ಭಾರತದ ರಾಜಕೀಯ ವ್ಯವಸ್ಥೆ ಜನತಂತ್ರ ಸಮಾಜವಾದ ಮತ್ತು ಸರ್ವಧರ್ಮ ಸಮಾನ ಮನೋಭಾವದ ಸಂಗಮಗಳಾಗಬೇಕೆಂಬ ಅಭಿಲಾಷೆ ಬಾಬೂಜಿಯದು. ಇವು ಒಂದನ್ನೊಂದು ಬಿಟ್ಟಿರಲಾರವು.ಇವು ಸ್ವಯಂ ದಾರಿ ಮತ್ತು ಗುರಿಗಳು. ಆದ್ದರಿಂದ ‘ಸಮಾಜವಾದ ಇರದ ಜನತಾಂತ್ರಿಕ ಆಡಳಿತ ಕೇವಲ ಕುಲೀನರದು. ಕುಲೀನರಿಂದ ಕುಲೀನರಿಗಾಗಿ ನಡೆಸುವ ಆಡಳಿತ. ಹಾಗೆಯೇ ಜನತಂತ್ರ ಇರದ ಸಮಾಜವಾದ ಹುಚ್ಚು ಕುಣಿತ’ ಎಂಬುದು ಬಾಬೂಜಿಯ ಅಭಿಪ್ರಾಯ. ಪ್ರಜಾಪ್ರಭುತ್ವದ ಯಶಸ್ಸು ಅಸ್ತಿತ್ವದಲ್ಲಿರುವ ರಾಜಕೀಯಪಕ್ಷಗಳ ಸಿದ್ಧಾಂತ-ಕಾರ್ಯ ಚಟುವಟಿಕೆಗಳನ್ನು ಅವಲಂಬಿಸಿರುತ್ತದೆ. ಆಳುಪಕ್ಷದ ತಪ್ಪುಗಳನ್ನು ಖಂಡಿಸಲು ತಿದ್ದಲು ಸದೃಢ ವಿರೋಧ ಪಕ್ಷಗಳು ಅಗತ್ಯವೆಂದು ರಾಮ್‌ನಂಬಿದ್ದರು. ಅದಕ್ಕಾಗಿ ರಾಜಕೀಯ ಧೃಢೀಕರಣವನ್ನು ಪದೆ ಪದೆ ಅಪೇಕ್ಷಿಸುತ್ತಿದ್ದರು. ರಾಮ್‌ಒಬ್ಬ ಪ್ರಾಯೋಗಿಕ ರಾಜಕೀಯ ಚಿಂತಕರು.

ವಿಭಿನ್ನ ಧರ್ಮ ಮತಗಳ ನಡುವೆ ಪರಸ್ಪರ ನಂಬಿಕೆ ವಿಶ್ವಾಸ ಮೂಡಿಸುವುದು ಜನತಂತ್ರದ ಕರ್ತವ್ಯವಾಗಬೇಕು. ಇಲ್ಲಿ ಮಾನವೀಯುತೆ ಒಂದು ರಾಷ್ಟ್ರದ ಜೀವಧಾತು. ಎಲ್ಲಾ ಧರ್ಮಗಳಲ್ಲೂ ಮಾನವೀಯಗುಣಗಳಿಗೆ ಅವಕಾಶವಿರುತ್ತದೆ. ಅದಿಲ್ಲದಿದ್ದರೆ ಧರ್ಮ ಕೇವಲ ಭೂತ-ಪ್ರೇತಗಳ ಆರಾಧನೆ ತಂತ್ರ-ಮಂತ್ರಗಳ ದೊಂಬಿ ಎನಿಸುತ್ತದೆ ಎಂಬುದು ಬಾಬೂಜಿಯ ಚಿಂತನೆಯಾಗಿತ್ತು. ಬಾಬೂಜಿಯ ಧಾರ್ಮಿಕ ವ್ಯಕ್ತಿತ್ವ ಧರ್ಮಗಳ ಒಳ ತಿರುಳಿನ ಬಗ್ಗೆ ಅವರಿಗೆ ಅಪಾರ ನಂಬಿಕೆ ಇತ್ತು. ಅವರ ಮಾತುಗಳಲ್ಲಿ ಹೇಳುವುದಾದರೆ ‘ ಎಲ್ಲ ಧರ್ಮಗಳ ಸಾರಸಂಗ್ರಹ ಮೂಲಭೂತವಾಗಿ ಭಾವೈಕ್ಯತೆ, ಸೇವೆ,ಕರುಣೆ, ಅನುಕಂಪಗಳ ಸಮಚ್ಚಯ ಜನತಂತ್ರ ಮತ್ತು ಕೋಮುವಾಧ ಅಸಂಗತ ಭಾವಗಳು. ಬಾಬೂಜಿ ಕೋಮುವಾದ, ಅದರ ಅಪಾಯ, ಕಾರಣಗಳು ಮತ್ತು ಕೋಮುವಾದಿಗಳ ಗೋಮುಖವ್ಯಾಘ್ರ ಸ್ವಭಾವ ಗುಣಲಕ್ಷಣಗಳನ್ನು ಬಲ್ಲವರಾಗಿದ್ದರು. ವಿಸ್ತಾರವಾದ ಸಂವಿಧಾನದಲ್ಲಿ ಅಳವಡಿಸಿರುವ ಸೆಕ್ಯುಲರಿಸಂ ವಿಧಿಯು ಕೋಮುವಾದವನ್ನು ತಡೆಯುವ ಮದ್ದು ಎಂದು, ಧರ್ಮನಿರಪೇಕ್ಷತೆ ತತ್ವ ರಾಷ್ಟ್ರದ ಸಮಗ್ರ ಬದುಕಿಗೆ ಇರುವ ತಾತ್ವಿಕ ದರ್ಶನವೆಂದು ಭಾವಿಸಿದ್ದರು.

ಜಗಜೀವನರಾಮ್‌ರು ಶಿಕ್ಷಣವು ಮಾನವನ ಅಭಿವೃದ್ಧಿಗೆ ಅವಶ್ಯ ಎಂದರು. ಸಮಾನ ಶಿಕ್ಷಣವ್ಯವಸ್ಥೆ ಅವರ ಒಡಲಾಳದ ಗಟ್ಟಿಕೂಗು. ಶಿಕ್ಷಣವನ್ನು ವ್ಯಾಪಾರಿಕರಣದಿಂದ ಮುಕ್ತವಾಗಿಸಿ ಸಾರ್ವಜನಿಕಕ್ಷೇತ್ರಕ್ಕೆ ಅದರ ಜವಾಬ್ದಾರಿಯನ್ನು ನೀಡಬೇಕೆಂದು ಅವರ ಅಪೇಕ್ಷೆಯಾಗಿತ್ತು. ಶಿಕ್ಷಣ ಕೇವಲ ಅಕ್ಷರ ಕಲಿಕೆಯಲ್ಲ, ಅದೊಂದು ಮಾನವನ ನಡವಳಿಕೆಯನ್ನ ತಿದ್ದುವುದು; ಮೂಢನಂಬಿಕೆಗಳನ್ನು ನಿರಾಕರಿಸುವುದು; ವೈಜ್ಞಾನಿಕ, ತಾರ್ಕಿಕ ಚಿಂತನೆಗಳನ್ನು ಬೆಳೆಸುವುದು; ಮನುಷ್ಯ ಮನುಷ್ಯರ ನಡುವೆ ಪ್ರೀತಿ, ವಾತ್ಸಲ್ಯ, ತಾಳ್ಮೆ, ಸಂಯಮ ಮೊದಲಾದ ಮಾನವೀಯಗುಣಗಳನ್ನು ತುಂಬುವಂತಹದು ಎಂದು ಪ್ರತಿಪಾದಿಸಿದರು. ‘ಶಿಕ್ಷಣದ ಉದ್ದೇಶ ವ್ಯಕ್ತಿಯನ್ನು ವೃತ್ತಿನಿಯೋಜಿತ ಯಂತ್ರಮಾನವನನ್ನಾಗಿ ಮಾಡುವುದಲ್ಲ. ಅದಕ್ಕೆ ಬದಲು ಶಿಕ್ಷಣ ಒಬ್ಬ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳುವ ಒಂದು ಪರಿಸರವನ್ನು ನಿರ್ಮಿಸುವುದಾಗಿದೆ’ ಎಂದು ಬಾಬೂಜಿ ನುಡಿದರು. ಶಿಕ್ಷಣವನ್ನು ಸರ್ಕಾರಗಳು ಯಾವುದೇ ಲಿಂಗಭೇದ, ಜಾತಿ, ಧರ್ಮ, ಭಾಷೆ, ಪಂಗಡ, ಭೇದಗಳಿಗೆ ಅವಕಾಶವಿರದೆ ಮುಕ್ತವಾಗಿ ನೀಡಬೇಕೆಂಬ ಸಂದೇಶ ನೀಡಿದುದು ಬಾಬೂಜಿಯ ಹೆಗ್ಗಳಿಕೆ.